Wednesday, October 15, 2014

COSMETICS : VEG or NONVEG ?



 

  

 ಸೌಂದರ್ಯ ಪ್ರಸಾದನಗಳಲ್ಲಿ ಏನಿದೆಯೆಂದು ಬಲ್ಲಿರಾ ?

ತಮ್ಮ ಶಾರೀರಿಕ ಸೌಂದರ್ಯದ ಬಗ್ಗೆ ಕಾಳಜಿ ಇರದ ಹಾಗೂ ತಾನು ಸುಂದರವಾಗಿ ಕಾಣಿಸಬೇಕೆಂದು ಬಯಸದ ಸ್ತ್ರೀ- ಪುರುಷರು ಈ ಜಗತ್ತಿನಲ್ಲೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಇದೇ ಕಾರಣದಿಂದಾಗಿ ತಮ್ಮ ಶಾರೀರಿಕ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಬಲ್ಲ ಸೌಂದರ್ಯ ಪ್ರಸಾದನಗಳನ್ನು ಪ್ರತಿನಿತ್ಯ ತಪ್ಪದೆ ಬಳಸುವ ಸ್ತ್ರೀ- ಪುರುಷರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಆದರೆ ವೈವಿಧ್ಯಮಯ ಮತ್ತು ದುಬಾರಿ ಬೆಲೆಯ ಸೌಂದರ್ಯ ಪ್ರಸಾದನಗಳನ್ನು ಬಳಸುವ ಬಹುತೇಕ ಜನರಿಗೆ, ತಾವು ಉಪಯೋಗಿಸುತ್ತಿರುವ ಪ್ರಸಾದನಗಳ ತಯಾರಿಕೆಯ ಮತ್ತು ಇವುಗಳಲ್ಲಿ ಬಳಸುವ ನೈಸರ್ಗಿಕ,   ಕೃತಕ ರಾಸಾಯನಿಕ ಹಾಗೂ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ದ್ರವ್ಯಗಳ ಬಗ್ಗೆ ಯಾವುದೇ ಮಾಹಿತಿಗಳ ಅರಿವಿರುವುದಿಲ್ಲ. ಏಕೆಂದರೆ ಇಂತಹ ಉತ್ಪನ್ನಗಳ ತಯಾರಕರು ತಮ್ಮ ಉತ್ಪನ್ನಗಳನ್ನು ತಯಾರಿಸುವಾಗ ಬಳಸುವ ದ್ರವ್ಯಗಳ ಬಗ್ಗೆ ಗ್ರಾಹಕರಿಗೆ ಯಾವುದೇ ಮಾಹಿತಿಯನ್ನೇ ನೀಡುವುದಿಲ್ಲ !. ವಿಶೇಷವೆಂದರೆ ೧೯೮೬ ರಲ್ಲೇ ದೇಶಾದ್ಯಂತ ಜಾರಿಗೊಂಡಿದ್ದ ಗ್ರಾಹಕ ರಕ್ಷಣಾ ಕಾಯಿದೆಯಂತೆ, ತಾವು ಖರೀದಿಸಿ ಬಳಸುವ ಪ್ರತಿಯೊಂದು ಉತ್ಪನ್ನಗಳಲ್ಲಿ ಏನಿದೆಯೆಂದು ಅರಿತುಕೊಳ್ಳುವ ಹಕ್ಕು ಗ್ರಾಹಕರಿಗೆ ಇದೆ. 

ಬಣ್ಣದ ಗುರುತು ಕಡ್ಡಾಯ 

ಪ್ರಸ್ತುತ ಕೇಂದ್ರ ಸರ್ಕಾರವು ಜನಸಾಮಾನ್ಯರು ದಿನನಿತ್ಯ ಬಳಸುವ ಸೌಂದರ್ಯ ಪ್ರಸಾದನಗಳ ಹೊರಕವಚಗಳ ಮೇಲೆ " ಸಸ್ಯಜನ್ಯ " ಅಥವಾ " ಪ್ರಾಣಿಜನ್ಯ " ದ್ರವ್ಯಗಳನ್ನು ಬಳಸಿರುವ ಬಗ್ಗೆ ಹಸಿರು ಹಾಗೂ ಕೆಂಪು ಅಥವಾ ಕಂದು ಬಣ್ಣದ " ಗುರುತು " ಹಾಕುವಂತೆ ಹೊರಡಿಸಿದ್ದ ಅಧಿಸೂಚನೆಯನ್ನು, ಇವುಗಳ ತಯಾರಕರು ಖಂಡತುಂಡವಾಗಿ ವಿರೋಧಿಸುತ್ತಿದ್ದಾರೆ. ಅಂತೆಯೇ ಈ ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.  

ಕೇಂದ್ರದಲ್ಲಿ ಅಧಿಕಾರದ ಗದ್ದುಗೆಯನ್ನು ಏರಿದ್ದ ನೂತನ ಸರ್ಕಾರವು ಕೇವಲ ಒಂದು ತಿಂಗಳಿನಲ್ಲೇ ಈ ಅಧಿಸೂಚನೆಯನ್ನು ಗ್ರಾಹಕ ವ್ಯವಹಾರಗಳ ಇಲಾಖೆಯ ಮೂಲಕ ಇದೆ ವರ್ಷದ ಜೂನ್ ೧೬ ರಂದು ಹೊರಡಿಸಿತ್ತು. ಈ ಅಧಿಸೂಚನೆಯಂತೆ ಗ್ರಾಹಕರು ಬಳಸುವ ಸೋಪ್, ಶಾಂಪೂ, ಮಹಿಳೆಯರು ಮತ್ತು ಪುರುಷರು ಬಳಸುವ ವಿವಿಧ ಸೌಂದರ್ಯ ಪ್ರಸಾದನಗಳು, ಟೂತ್ ಪೇಸ್ಟ್ ಮತ್ತಿತರ ಉತ್ಪನ್ನಗಳ ಹೊರಕವಚಗಳ ಮೇಲೆ ಸಸ್ಯಜನ್ಯ ದ್ರವ್ಯಗಳನ್ನು ಬಳಸಿದ್ದಲ್ಲಿ ಹಸಿರು ಮತ್ತು ಪ್ರಾಣಿಜನ್ಯ ದ್ರವ್ಯಗಳನ್ನು ಬಳಸಿದ್ದಲ್ಲಿ ಕೆಂಪು ಅಥವಾ ಕಂದು ಬಣ್ಣದ ಗುರುತನ್ನು ಸ್ಪಷ್ಟವಾಗಿ ಕಾಣಿಸುವಂತೆ ಮುದ್ರಿಸಬೇಕಾಗುತ್ತದೆ. ಲೀಗಲ್ ಮೆಟ್ರೋಲಜಿ ಕಾಯಿದೆ ೨೦೦೯ ಮತ್ತು ಲೀಗಲ್ ಮೆಟ್ರೋಲಜಿ ( ಪ್ಯಾಕೆಜ್ಡ್ ಕೊಮೊಡಿಟೀಸ್ ನಿಯಮ ೨೦೧೧ ) ಕಾಯಿದೆಯನ್ವಯ ಈ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಜುಲೈ ೧ ನೆ ತಾರೀಕಿನಿಂದ ಇದನ್ನು ಅನುಷ್ಠಾನಗೊಳಿಸಬೇಕಾಗಿತ್ತು. 

ಕೋಟ್ಯಂತರ ರೂಪಾಯಿಗಳ ವಹಿವಾಟು 

ಒಂದಾನೊಂದು ಕಾಲದಲ್ಲಿ ಭಾರತೀಯ  ನಾರಿಯರು ಬಳಸುತ್ತಿದ್ದ ಅರಶಿನ, ಚಂದನ, ಕುಂಕುಮ ಮತ್ತು ಕೆಲ ಮಹಿಳೆಯರು ಬಳಸುತ್ತಿದ್ದ ಸ್ನೋ ಮತ್ತು ಟಾಲ್ಕಂ ಪೌಡರ್ ಗಳ ಸ್ಥಾನವನ್ನು ಇಂದು ವೈವಿಧ್ಯಮಯ ಸೌಂದರ್ಯ ಪ್ರಸಾದನಗಳು ಆಕ್ರಮಿಸಿವೆ.ಇವುಗಳ ವೈವಿಧ್ಯ ಎಷ್ಟಿದೆಯೆಂದರೆ, " ನಖಶಿಖಾಂತ " ಬಳಸಬಹುದಾದ ನೂರಾರು ಪ್ರಸಾದನಗಳು ಇಂದು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಂತೆಯೇ ಇತ್ತೀಚಿನ ಕೆಲವರ್ಷಗಳಿಂದ ಪುರುಷರಿಗಾಗಿಯೇ ಇಂತಹ ಪ್ರತ್ಯೇಕ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವುಗಳ ಬೇಡಿಕೆ ಮತ್ತು ಮಾರಾಟಗಳೂ ಭರ್ಜರಿಯಾಗಿವೆ.

ಭಾರತದಲ್ಲಿ ಸೌಂದರ್ಯ ಪ್ರಸಾದನಗಳ ಉದ್ದಿಮೆಯ ವಾರ್ಷಿಕ ವ್ಯವಹಾರವು ಸುಮಾರು ೬೦,೦೦೦ ಕೋಟಿ ರೂ.ಗಳಾಗಿದ್ದು, ಇಂತಹ ಉತ್ಪನ್ನಗಳ ತಯಾರಕರ ಇಂಡಿಯನ್ ಬ್ಯೂಟಿ ಎಂಡ್ ಹೈಜೀನ್ ಅಸೋಸಿಯೇಶನ್( ಐ.ಬಿ.ಎಚ್. ಎ ) ಎನ್ನುವ ಸಂಘಟನೆಯು ನ್ಯಾಯಾಲಯದಲ್ಲಿ ಕೇಂದ್ರ ಸರ್ಕಾರದ ಅಧಿಸೂಚನೆಯ ವಿರುದ್ಧ ದಾವೆಯನ್ನು ಹೂಡಿದೆ. ಸೆಪ್ಟೆಂಬರ್ ೯ ರಂದು ಮುಂಬೈ ನ ಉಚ್ಛ ನ್ಯಾಯಾಲಯವು ಈ ಅಧಿಸೂಚನೆಯ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಿದ್ದು, ಸೌಂದರ್ಯ ಪ್ರಸಾದನಗಳ ತಯಾರಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ಸೂಚಿಸಿದೆ. ಜೊತೆಗೆ ಈ ಬಗ್ಗೆ ಕೇಂದ್ರ ಸರ್ಕಾರವು ೨ ವಾರಗಳಲ್ಲಿ  ಪ್ರತಿಕ್ರಿಯೆಯನ್ನು ನೀಡುವಂತೆ ಸೂಚಿಸಿದ್ದು, ಕೇಂದ್ರವು ಎರಡು ವಾರಗಳ ಹೆಚ್ಚುವರಿ ಅವಧಿಯನ್ನು ನೀಡುವಂತೆ ವಿನಂತಿಸಿದೆ. 

ತಯಾರಕರ ಆಕ್ಷೇಪ 

ಕೇಂದ್ರ ಸರ್ಕಾರವು ಉದ್ದಿಮೆಯ ಪ್ರತಿನಿಧಿಗಳೊಂದಿಗೆ ಸಮಾಲೋಚಿಸದೇ ಮತ್ತು ಈ ಅಧಿಸೂಚನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸದೇ, ಏಕಪಕ್ಷೀಯವಾಗಿ ಇದನ್ನು ಜಾರಿಗೆ ತಂದಿರುವ ಬಗ್ಗೆ ಉದ್ದಿಮೆಯು ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿದೆ. ಈ ಉದ್ದಿಮೆಯ ಪ್ರತಿನಿಧಿಗಳೇ ಹೇಳುವಂತೆ, ಸೌಂದರ್ಯ ಪ್ರಸಾದನಗಳ ತಯಾರಿಕೆಯಲ್ಲಿ ಸಸ್ಯಜನ್ಯ ಮತ್ತು ಪ್ರಾಣಿಜನ್ಯ ಕೊಬ್ಬು ಮತ್ತು ಎಣ್ಣೆ ಇತ್ಯಾದಿ ದ್ರವ್ಯಗಳನ್ನು ಬಳಸಲಾಗುತ್ತಿದೆ. ಆದರೆ ಇವುಗಳನ್ನು ಆಂತರಿಕ ಸೇವನೆಗಾಗಿ ಬಳಸದ ಕಾರಣದಿಂದಾಗಿ, ಈ ಉತ್ಪನ್ನಗಳ ಹೊರಕವಚಗಳ ಮೇಲೆ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ಎನ್ನುವ ಗುರುತನ್ನು ಹಾಕುವ ಅವಶ್ಯಕತೆಯೇ ಇಲ್ಲವೆಂದು ವಾದಿಸುತ್ತಿರುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ!. 

ನಿಜ ಹೇಳಬೇಕಿದ್ದಲ್ಲಿ ಸೌಂದರ್ಯ ಪ್ರಸಾದನಗಳ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಎಣ್ಣೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದ್ದು, ಪ್ರಾಣಿಗಳ ಚರ್ಮ, ಎಲುಬು ಮತ್ತಿತರ ಭಾಗಗಳನ್ನೂ ಉಪಯೋಗಿಸಲಾಗುತ್ತದೆ. ಇದೇ ಕಾರಣದಿಂದಾಗಿ ಇಂತಹ ಯಾವುದೇ ಉತ್ಪನ್ನಗಳನ್ನು ಆಂತರಿಕ ಅಥವಾ ಬಾಹ್ಯ ಉಪಯೋಗಕ್ಕಾಗಿ ಬಳಸುವ ಜನರಿಗೆ ಈ ಬಗ್ಗೆ ಸಮರ್ಪಕ ಮಾಹಿತಿಯನ್ನು ನೀಡಬೇಕಾದ ಹೊಣೆಗಾರಿಕೆ ಇವುಗಳ ತಯಾರಕರ ಮೇಲಿದೆ.( ಪಾಶ್ಚಾತ್ಯ ದೇಶಗಳಲ್ಲಿ ಇದು ಕಡ್ಡಾಯವಾಗಿದೆ.) ಅಂತೆಯೇ ಅನೇಕ ಭಾರತೀಯರು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ನಂಬಿಕೆಗಳಿಂದಾಗಿ, ಪ್ರಾಣಿಜನ್ಯ ಉತ್ಪನ್ನಗಳನ್ನು ಬಾಹ್ಯ ಅಥವಾ ಆಂತರಿಕ ಉಪಯೋಗಕ್ಕಾಗಿ ಬಳಸುವುದಿಲ್ಲ. ಇದಲ್ಲದೇ ಪ್ರಾಣಿಜನ್ಯ ದ್ರವ್ಯಗಳ ಬಳಕೆಯಿಂದ ಅನೇಕರಲ್ಲಿ " ಅಲರ್ಜಿ " ಯಂತಹ ಅಥವಾ ಅನ್ಯವಿಧದ  ಆರೋಗ್ಯದ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಅಂತೆಯೇ ಕೆಲ ಸಂದರ್ಭಗಳಲ್ಲಿ ಪ್ರಾಣಿಜನ್ಯ ದ್ರವ್ಯಗಳನ್ನು ಸಂಗ್ರಹಿಸುವಾಗ ಈ ಪ್ರಾಣಿಗಳಿಗೆ ಹಿಂಸೆಯಾಗುವಂತಹ ವಿಧಾನಗಳನ್ನು ಅನುಸರಿಸಲಾಗುತ್ತದೆ. ಪ್ರಾಣಿಹಿಂಸೆಯನ್ನು ವಿರೋಧಿಸುವ ವ್ಯಕ್ತಿಗಳಿಗೆ ಇದು ವರ್ಜ್ಯವೆನಿಸುತ್ತದೆ. ಇವೆಲ್ಲಾ ಕಾರಣಗಳಿಂದಾಗಿ ಸೌಂದರ್ಯ ಪ್ರಸಾದನಗಳ ಹೊರಕವಚಗಳ ಮೇಲೆ ಸರ್ಕಾರ ಆದೇಶಿಸಿರುವಂತೆ ನಿಗದಿತ ಬಣ್ಣದ ಗುರುತನ್ನು ಹಾಕಲೇಬೇಕಾಗುತ್ತದೆ.

ಲಾಭದತ್ತ ತಯಾರಕರ ಚಿತ್ತ 

ವಾರ್ಷಿಕ ೬೦,೦೦೦ ಸಾವಿರ ಕೋಟಿಗೂ ಅಧಿಕ ವ್ಯವಹಾರ ನಡೆಸುತ್ತಿರುವ ಈ ಲಾಭದಾಯಕ ಉದ್ದಿಮೆಯು, ವರ್ಷಂಪ್ರತಿ ಶೇ.೨೦ ರಷ್ಟು ಅಭಿವೃದ್ಧಿಯನ್ನು ತೋರುತ್ತಿದೆ. ಸುಮಾರು ಎರಡು ವರ್ಷಗಳ ಹಿಂದೆ ಅಗ್ರಸ್ಥಾನದಲ್ಲಿದ್ದ ವೈಯುಕ್ತಿಕ ಸೌಂದರ್ಯ ಪ್ರಸಾದನಗಳ ವಾರ್ಷಿಕ ವಹಿವಾಟು ೩೫,೦೦೦ ಕೋಟಿ ರೂ.ಗಳಾಗಿದ್ದು, ಇದರ ನಂತರದ ಸ್ಥಾನವು ೧೩, ೦೦೦ ಕೋಟಿ ರೂ.ಗಳ ಟಾಯ್ಲೆಟ್ ಸಾಬೂನುಗಳಿಗೆ ಸಲ್ಲುತ್ತದೆ.ಇದೇ ಸಂದರ್ಭದಲ್ಲಿ ದಂತಮಂಜನಗಳು ಮತ್ತು ಚರ್ಮದ ಆರೈಕೆಯ ಉತ್ಪನ್ನಗಳು ಮೂರನೆಯ ಸ್ಥಾನದಲ್ಲಿದ್ದವು. ಈ ರೀತಿಯಲ್ಲಿ ಕೋಟ್ಯಂತರ ರೂಪಾಯಿಗಳ ವ್ಯವಹಾರವನ್ನು ನಡೆಸುತ್ತಿರುವ ಇಂತಹ ಉದ್ದಿಮೆಗಳು, ತಮ್ಮ ಲಾಭದತ್ತ ಗಮನವನ್ನು ಕೆಂದ್ರೀಕರಿಸುತ್ತಿವೆಯೇ ಹೊರತು, ತಮ್ಮ ಉತ್ಪನ್ನಗಳನ್ನು ಖರೀದಿಸಿ ಬಳಸುವ ಗ್ರಾಹಕರ ಹಿತರಕ್ಷಣೆಯತ್ತ ಅಲ್ಲ ಎನ್ನುವುದರಲ್ಲಿ ಸಂದೇಹವಿಲ್ಲ. ಸರ್ಕಾರದ ಅಧಿಸೂಚನೆಯನ್ನು ಈ ಉದ್ದಿಮೆದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿರುವುದು ಇದನ್ನು ಸಮರ್ಥಿಸುತ್ತದೆ.  

ಗೌಪ್ಯತೆಯ ಮುಸುಕು 

ಪ್ರಸ್ತುತ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಧಿಸೂಚನೆಯನ್ನು ಪರಿಪಾಲಿಸಿದಲ್ಲಿ, ತಮ್ಮ ವ್ಯವಹಾರವು ಕೋಟ್ಯಂತರ ರೂಪಾಯಿಗಳ ನಷ್ಟಕ್ಕೆ ಗುರಿಯಾಗಬಹುದೆನ್ನುವ ಸಂದೇಹ ಉದ್ದಿಮೆಯನ್ನು ಕಾಡುತ್ತಿದೆ. ಹಾಗೂ ಇದೇ ಕಾರಣದಿಂದಾಗಿ ತಮ್ಮ ಉತ್ಪನ್ನಗಳನ್ನು ಗ್ರಾಹಕರು " ಸೇವಿಸುವುದಿಲ್ಲ " ಎನ್ನುವ ಕಾರಣದಿಂದಾಗಿ ತಮ್ಮ ಉತ್ಪನ್ನಗಳಲ್ಲಿ ಪ್ರಾಣಿಜನ್ಯ ದ್ರವ್ಯಗಳು ಇವೆಯೇ ಎನ್ನುವುದನ್ನು ತಾವು ಘೋಷಿಸುವ ಮತ್ತು ಗ್ರಾಹಕರು ಅರಿತುಕೊಳ್ಳುವ ಅವಶ್ಯಕತೆಯಿಲ್ಲ ಎನ್ನುವ ವಾದವನ್ನು ಮಂಡಿಸುತ್ತಿರುವ ಉದ್ದಿಮೆಯ ಪ್ರತಿನಿಧಿಗಳ ವಾದದಲ್ಲಿ ಹುರುಳಿಲ್ಲ. ಅದೇ ರೀತಿಯಲ್ಲಿ ಈ ಅಧಿಸೂಚನೆಯನ್ನು ಜಾರಿಗೊಳಿಸುವ ಮುನ್ನ ತಮ್ಮೊಂದಿಗೆ ಸರ್ಕಾರವು ಸಮಾಲೋಚನೆಯನ್ನೇ ನಡೆಸಿಲ್ಲ ಎನ್ನುವುದು, ಕೇವಲ ಒಂದು ನೆಪವೇ ಹೊರತು ಸಮರ್ಥನೀಯ ಕಾರಣವಲ್ಲ. 

ಸೌಂದರ್ಯ ಪ್ರಸಾದನಗಳ ತಯಾರಕರು ಶತಾಯಗತಾಯ ತಮ್ಮ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಿರುವ ದ್ರವ್ಯಗಳ ಮಾಹಿತಿಯನ್ನು ಗೌಪ್ಯತೆಯ ಮುಸುಕಿನಲ್ಲಿ ಅಡಗಿಸುವ ಪ್ರಯತ್ನವನ್ನು ಮಾಡುತ್ತಿರುವುದು ಇದೀಗ ಗುಟ್ಟಾಗಿ ಉಳಿದಿಲ್ಲ. ಅದೇ ರೀತಿಯಲ್ಲಿ ಇದು ಕೇವಲ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ದ್ರವ್ಯಗಳ ಬಳಕೆಯ ವಿಚಾರ ಮಾತ್ರವಲ್ಲ, ಈ ಉತ್ಪನ್ನಗಳನ್ನು ಬಳಸುವ ಗ್ರಾಹಕರ ಆರೋಗ್ಯಕ್ಕೆ ಸಂಬಂಧಿಸಿದ ಮತ್ತು ಗ್ರಾಹಕ ರಕ್ಷಣಾ ಕಾಯಿದೆಗಳಿಗೆ ಸಂಬಂಧಿಸಿದ ವಿಚಾರವೂ ಆಗಿದೆ. ಈ ದೃಷ್ಟಿಯಿಂದ ಸರ್ಕಾರದ ನಿರ್ಧಾರವು ನಿಶ್ಚಿತವಾಗಿಯೂ ಸಮಂಜಸವೆನಿಸಿದೆ. ಇದೀಗ ಸರ್ಕಾರವು ತನ್ನ ನಿರ್ಧಾರವನ್ನು ನ್ಯಾಯಾಲಯದ ಮುಂದೆ ಸಮರ್ಥಿಸಿಕೊಳ್ಳಬೇಕಿದೆ. ಇದಕ್ಕೆ ವ್ಯತಿರಿಕ್ತವಾಗಿ ಉದ್ದಿಮೆಗಳ ಒತ್ತಡಕ್ಕೆ ಮಣಿದು ತನ್ನ ನಿರ್ಧಾರದಿಂದ ಹಿಂದೆ ಸರಿದಲ್ಲಿ, ಈ ಅಧಿಸೂಚನೆಯನ್ನು ಮತ್ತು ಗ್ರಾಹಕ ರಕ್ಷಣಾ ಕಾಯಿದೆಯನ್ನು ಜಾರಿಗೆ ತಂದ ಉದ್ದೇಶವೇ ವಿಫಲವಾಗಲಿದೆ. ಇದಕ್ಕೂ ಮಿಗಿಲಾಗಿ ಅಮಾಯಕ ಗ್ರಾಹಕರ ರಕ್ಷಣೆಗೆ ಸರ್ಕಾರ ನೆರವಾಗುತ್ತಿಲ್ಲ ಎನ್ನುವ ಅಪವಾದಕ್ಕೆ ಗುರಿಯಾಗಲಿದೆ.  

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು  

  

Tuesday, October 14, 2014

HOLY RIVER - POLLUTED WATER !



 ಪವಿತ್ರ ನದಿಗಳಲ್ಲಿ ಹರಿಯುತ್ತಿದೆ - ಅಪವಿತ್ರ ನೀರು 

ಈ ಜನ್ಮದಲ್ಲಿ ತಾವು ಮಾಡಿರಬಹುದಾದ ಪಾಪಗಳನ್ನು ನಿವಾರಿಸಿಕೊಳ್ಳುವುದರೊಂದಿಗೆ, ಕಿಂಚಿತ್ ಪುಣ್ಯಪ್ರಾಪ್ತಿಗಾಗಿ ಸುಪ್ರಸಿದ್ಧ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವ ಹವ್ಯಾಸ ಭಾರತೀಯರಲ್ಲಿದೆ. ಈ ಸಂದರ್ಭದಲ್ಲಿ ಪುಣ್ಯಕ್ಷೇತ್ರಗಳ ಸಮೀಪದಲ್ಲಿ ಹರಿಯುವ ಪವಿತ್ರ ನದಿಗಳಲ್ಲಿ ತಪ್ಪದೆ " ಪುಣ್ಯ ಸ್ನಾನ " ಮಾಡುವ ಯಾತ್ರಿಕರಿಗೆ, ಈ ನದಿಗಳಲ್ಲಿ ಹರಿಯುತ್ತಿರುವ ನೀರು ಅಪವಿತ್ರ ಎನ್ನುವುದು ತಿಳಿದಿರುವುದಿಲ್ಲ!. 

ಗಂಗೇಚ ಯಮುನೇಚ .....

ಅನಾದಿಕಾಲದಿಂದಲೂ ಭಾರತದ ಹಿಂದೂ ಧರ್ಮೀಯರಿಗೆ ಗಂಗಾ ನದಿಯು ಪೂಜ್ಯವೆನಿಸಿದೆ. ಉತ್ತರ ಭಾರತದತ್ತ ತೀರ್ಥಯಾತ್ರೆಗೆ ತೆರಳುವ ಪ್ರತಿಯೊಬ್ಬ ಹಿಂದೂ ಬಾಂಧವರು, ಮರಳಿಬರುವಾಗ ಗಂಗೆಯ ನೀರನ್ನು ಮರೆಯದೇ ತರುವ ಸಂಪ್ರದಾಯ ಇಂದಿಗೂ ರೂಢಿಯಲ್ಲಿದೆ. ಮರಣಶಯ್ಯೆಯಲ್ಲಿರುವ ಕುಟುಂಬದ ಹಿರಿಯರ ಬಾಯಿಗೆ ಗಂಗೋದಕವನ್ನು ಬಿಡುವುದರಿಂದ, ಅವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎನ್ನುವ ಅಚಲ ವಿಶ್ವಾಸವೂ ಇದಕ್ಕೆ ಪ್ರಮುಖ ಕಾರಣವೆನಿಸಿದೆ. 

ಆದರೆ ಕಳೆದ ಕೆಲವರ್ಷಗಳಿಂದ ಗಂಗಾನದಿಯ ನೀರು ಅತ್ಯಂತ ಮಲಿನವಾಗಿರುವುದರಿಂದ, ಇದನ್ನು ಕುಡಿಯುವುದು ಬಿಡಿ, ಇದರಲ್ಲಿ ಸ್ನಾನವನ್ನು ಮಾಡುವುದೂ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಕಲುಷಿತ ಗಂಗಾ ನದಿಯ ನೀರನ್ನು ಶುದ್ಧೀಕರಿಸಲು ಕೇಂದ್ರ ಸರ್ಕಾರವು ಸಹಸ್ರಾರು ಕೋಟಿ ರೂಪಾಯಿಗಳ ಕ್ರಿಯಾಯೋಜನೆಯನ್ನು ಅನುಷ್ಠಾನಿಸಿದ್ದರೂ, ಗಂಗೆಯ ಜಲಮಾಲಿನ್ಯದ ಸಮಸ್ಯೆ ಕಿಂಚಿತ್ ಕೂಡಾ ಕಡಿಮೆಯಾಗಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ " ಪಾಪನಾಶಿನಿ " ಎಂದೇ ಪ್ರಖ್ಯಾತವೀಗಿರುವ ಗಂಗೆಯ ನೀರು, ಇದೀಗ " ಆರೋಗ್ಯ ನಾಶಿನಿ " ಯಾಗಿ ಪರಿವರ್ತನೆಗೊಂಡಿದೆ. 

ಡೆಹರಾಡೂನ್ ನ ಪೀಪಲ್ಸ್ ಸಯನ್ಸ್ ಇನ್ಸ್ಟಿಟ್ಯೂಟ್ ( ಪಿ ಎಸ್ ಐ ) ಸಂಸ್ಥೆಯ ಸಂಶೋಧಕರು ಇತ್ತೀಚಿಗೆ ನಡೆಸಿದ್ದ ಅಧ್ಯಯನದ ವರದಿಯಂತೆ ಹರಿದ್ವಾರದ ಸಮೀಪದಲ್ಲಿ ಹರಿಯುತ್ತಿರುವ ಗಂಗಾ ನದಿಯಲ್ಲಿ ಸ್ನಾನ ಮಾಡುವ ಜನರು ತಮ್ಮ ಪಾಪಗಳನ್ನು ಕಳೆದುಕೊಂಡರೂ, ಚರ್ಮರೋಗಗಳು, ಉದರದ ಸೋಂಕುಗಳೂ ಸೇರಿದಂತೆ ಹತ್ತುಹಲವು ಕಾಯಿಲೆಗಳನ್ನು ಗಳಿಸಿಕೊಳ್ಳುವ ಸಾಧ್ಯತೆಗಳಿವೆ. ಈ ಸಂಶೋಧಕರ ತಂಡವು ಹರಿದ್ವಾರದ ಸಮೀಪದಲ್ಲಿ ಹರಿಯುತ್ತಿರುವ ಗಂಗೆಯ ನೀರನ್ನು ಸಂಗ್ರಹಿಸಿ ಪರೀಕ್ಷಿಸಿದಾಗ, ಇದರಲ್ಲಿ ಮನುಷ್ಯನ ಮಲದಲ್ಲಿರುವ ಹಾಗೂ ಗಂಭೀರ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸಬಲ್ಲ ಬ್ಯಾಕ್ಟೀರಿಯಾಗಳು ಸಮೃದ್ಧವಾಗಿರುವುದು ಪತ್ತೆಯಾಗಿತ್ತು!. 

ಅತಿ ಹೆಚ್ಚು ಸಂಖ್ಯೆಯ ಭಕ್ತರು ಸ್ನಾನ ಮಾಡುವ ಹರ್ ಕೀ ಪೌರಿಯಲ್ಲಿನ ಗಂಗಾಜಲವು, ಕೇಂದ್ರ ಪರಿಸರ ಮಾಲಿನ್ಯ ಮಂಡಳಿಯು ನಿಗದಿಸಿರುವ ಮಾನದಂಡಗಳಿಗಿಂತ ಹೆಚ್ಚು ಪ್ರದೂಷಿತವಾಗಿತ್ತು. ಇದೇ ಕಾರಣದಿಂದಾಗಿ ಗಂಗೆಯಲ್ಲಿ ಸ್ನಾನವನ್ನು ಮಾಡುವುದರಿಂದ ಹಾಗೂ ಈ ನೀರನ್ನು ಕುಡಿಯುವುದರಿಂದ, ಸಾಂಕ್ರಾಮಿಕ ಮತ್ತು ಅನ್ಯ ಕೆಲವಿಧದ ಕಾಯಿಲೆಗಳು ಬಾಧಿಸುವ ಸಾಧ್ಯತೆಗಳು ಹೆಚ್ಚಾಗಿತ್ತು. ಮನುಷ್ಯನ ಮಲದಲ್ಲಿರುವ ಅಪಾಯಕಾರಿ ರೋಗಾಣುಗಳು ಹಲವಾರು ವಿಧದ ಜಲಜನ್ಯ ರೋಗಗಳಿಗೆ ಕಾರಣವೆನಿಸುವುದರೊಂದಿಗೆ, ಈ ನೀರಿನ ಬಳಕೆಯಿಂದ ಚರ್ಮರೋಗಗಳು, ಶ್ರವಣ ಇಂದ್ರಿಯಕ್ಕೆ ಸಂಬಂಧಿಸಿದ ಮತ್ತು ವಾಂತಿ- ಭೇದಿಗಳಂತಹ ಕಾಯಿಲೆಗಳು ಉದ್ಭವಿಸುತ್ತವೆ. 

ಜಗತ್ಪ್ರಸಿದ್ಧ ಕುಂಭಮೇಳಕ್ಕಿಂತ ಕೆಲವೇ ದಿನಗಳ ಮುನ್ನ ಹರಿದ್ವಾರದ ಸಮೀಪದಲ್ಲಿ ಗಂಗಾನದಿಗೆ ಕಲುಷಿತ ನೀರನ್ನು ವಿಸರ್ಜಿಸುವ ೧೦ ಬೃಹತ್ ಚರಂಡಿಗಳ ನೀರನ್ನು ಪಿ ಎಸ್ ಐ ನ ಸಂಶೋಧಕರು ಹಲವಾರು ಪರೀಕ್ಷೆಗಳಿಗೆ ಒಳಪಡಿಸಿದ್ದರು. ಈ ಸಂದರ್ಭದಲ್ಲಿ ಚರಂಡಿಗಳಿಗೆ ನೀರನ್ನು ವಿಸರ್ಜಿಸುವ ಮುನ್ನ ಬಳಸುತ್ತಿದ್ದ ಕೊಳಚೆ ನೀರು ಸಂಸ್ಕರಣಾ ಘಟಕಗಳು ಸಮರ್ಪಕವಾಗಿ ಕಾರ್ಯಾಚರಿಸದ ಕಾರಣದಿಂದಾಗಿ, ಮಲಿನ ಹಾಗೂ ತ್ಯಾಜ್ಯ ನೀರು ನೇರವಾಗಿ ಗಂಗಾನದಿಯನ್ನು ಸೇರುತ್ತಿದ್ದುದು ಪತ್ತೆಯಾಗಿತ್ತು. ಹಾಗೂ ಇದೇ ಕಾರಣದಿಂದಾಗಿ ಈ ಕೊಳಚೆ ನೀರಿನಲ್ಲಿ ಅತ್ಯಧಿಕ ಪ್ರಮಾಣದ ಅಪಾಯಕಾರಿ ರೋಗಾಣುಗಳು ಇರುವುದು ತಿಳಿದುಬಂದಿತ್ತು. 

ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳಂತೆ, ಯಾವುದೇ ನದಿಯ ನೀರನ್ನು ಪರೀಕ್ಷಿಸುವಾಗ ೧೦೦ ಮಿಲಿ ಲೀಟರ್ ನೀರಿನಲ್ಲಿರುವ ರೋಗಾಣುಗಳ ಪ್ರಮಾಣವು, ಗರಿಷ್ಟ ಸಂಭವನೀಯ ಸಂಖ್ಯೆಯಾಗಿರುವ ೫೦೦ ನ್ನು ಮೀರಬಾರದು. ಆದರೆ ಪಿ ಎಸ್ ಐ ನ ಸಂಶೋಧಕರು ಮೂರು ವಿಭಿನ್ನ ಸ್ಥಳಗಳಿಂದ ಸಂಗ್ರಹಿಸಿದ್ದ ಗಂಗಾಜಲದಲ್ಲಿನ ರೋಗಾಣುಗಳ ಪ್ರಮಾಣವು ೧೦೦೦, ೧೫೦೦ ಮತ್ತು ಜಗಜೀತ್ ಪುರದಲ್ಲಿ ಸಂಗ್ರಹಿಸಿದ್ದ ಮಾದರಿಯಲ್ಲಿ ೭.೫ ಲಕ್ಷದಷ್ಟಿತ್ತು!. 

ಗಂಗಾನದಿಗೆ ಹರಿದು ಬರುವ ಕೊಳಚೆ ನೀರಿನ ಪ್ರಮಾಣವು ಅಗಾಧವಾಗಿದ್ದು, ಇದನ್ನು ಶುದ್ಧೀಕರಿಸಲು ಅಳವಡಿಸಿರುವ ಜಲ ಸಂಸ್ಕರಣಾ ಘಟಕಗಳ ಸಾಮರ್ಥ್ಯಕ್ಕಿಂತಲೂ ಇದು ಸಾಕಷ್ಟು ಅಧಿಕವಾಗಿದೆ. ಇನ್ನು ಕೆಲ ಘಟಕಗಳು ಕಾರಣಾಂತರಗಳಿಂದ ಸಮರ್ಪಕವಾಗಿ ಕಾರ್ಯಾಚರಿಸದೇ ಇರುವುದರಿಂದಾಗಿ, ಗಂಗೆಯ ಜಲಮಾಲಿನ್ಯದ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತಿದೆ. ನಿಜ ಹೇಳಬೇಕಿದ್ದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹರಿಯುತ್ತಿರುವ ನದಿಗಳೂ ಇದಕ್ಕೆ ಅಪವಾದವೆನಿಸಿಲ್ಲ. ಆದರೆ ಈ ನದಿಗಳಲ್ಲಿನ ಜಲಪ್ರದೂಷಣೆಯ ಪ್ರಮಾಣವು ಗಂಗಾನದಿಯಷ್ಟು ತೀವ್ರವಾಗಿರುವ ಸಾಧ್ಯತೆಗಳಿಲ್ಲ. 

ಅದೇನೇ ಇರಲಿ, ಜನಸಾಮಾನ್ಯರ ಆರೋಗ್ಯಕ್ಕೆ ಮಾರಕವೆನಿಸಬಲ್ಲ ಈ ಗಂಭೀರ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಹಮ್ಮಿಕೊಂಡಿರುವ ಕ್ರಿಯಾಯೋಜನೆಗಳು ಯಶಸ್ವಿಯಾಗಬೇಕಿದ್ದಲ್ಲಿ, ದೇಶದ ಪ್ರಜೆಗಳ ಪರಿಪೂರ್ಣ ಸಹಕಾರವೂ ಅತ್ಯವಶ್ಯಕವೆನಿಸುತ್ತದೆ. ದೇಶಾದ್ಯಂತ ವ್ಯಾಪಕವಾಗಿ ಕಂಡುಬರುತ್ತಿರುವ ಈ ಸಮಸ್ಯೆಯನ್ನು ತ್ವರಿತಗತಿಯಲ್ಲಿ ಪರಿಹರಿಸದೆ ಇದ್ದಲ್ಲಿ, ದೇಶದ ಅಧಿಕತಮ " ಪಾಪನಾಶಿನಿ " ನದಿಗಳು " ರೋಗವಾಹಿನಿ " ಗಳಾಗಿ ಪರಿವರ್ತನೆಗೊಳ್ಳಲಿವೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೭-೦೩-೨೦೧೦ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ. ಸ್ವಚ್ಚ್ ಭಾರತ ಅಭಿಯಾನದ ಸಲುವಾಗಿ ಇದೀಗ ಬ್ಲಾಗ್ ನಲ್ಲಿ ಪ್ರಕಟಿಸಲಾಗಿದೆ. 

 

Monday, October 13, 2014

KANDALLI KASAVANNU ESEDAVARIGE DANDA- JAILUSHIKSHE !




 ಕಂಡಲ್ಲಿ ಕಸವನ್ನು ಎಸೆದವರಿಗೆ ದಂಡ - ಜೈಲುಶಿಕ್ಷೆ !

ಸ್ವಚ್ಛ ಭಾರತ ಅಭಿಯಾನ ಆರಂಭವಾಗುವುದಕ್ಕೆ ಮುನ್ನ, ಅನೇಕ ಜನರು ಕಂಡಕಂಡಲ್ಲಿ ತ್ಯಾಜ್ಯಗಳನ್ನು ಎಸೆಯುವವರಿಗೆ ಗಣನೀಯ ಪ್ರಮಾಣದ ದಂಡವನ್ನು ವಿಧಿಸಬೇಕೆಂದು ವಾದಿಸಿದ್ದರು. ಇನ್ನು ಕೆಲವರಂತೂ ಇಂತಹ ಹೇಯ ಕೃತ್ಯಗಳನ್ನು ಎಸಗುವವರಿಗೆ ಜೈಲು ಶಿಕ್ಷೆ ನೀಡಬೇಕೆನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಕರ್ನಾಟಕ ರಾಜ್ಯ ಸರ್ಕಾರವು ಈ ಬಗ್ಗೆ ೨೦೧೦ ರಲ್ಲೇ ತಳೆದಿದ್ದ ನಿಲುವಿನಂತೆ, ಕಂಡಲ್ಲಿ ತ್ಯಾಜ್ಯಗಳನ್ನು ಎಸೆಯುವವರಿಗೆ ಭಾರತೀಯ ದಂಡ ಸಂಹಿತೆಯಂತೆ ದಂಡ ಮತ್ತು ಜೈಲುಶಿಕ್ಷೆಗಳನ್ನು ವಿಧಿಸುವಂತೆ ಆದೇಶಿಸಿತ್ತು. ಬಹುತೇಕ ಪತ್ರಿಕೆಗಳ ಮುಖಪುಟದಲ್ಲಿ ಪ್ರತ್ಯಕ್ಷವಾಗಿದ್ದ ಈ ವರದಿಯು, ತದನಂತರ ಪತ್ರಿಕೆಗಳಿಗೆ ಗ್ರಾಸವೆನಿಸಿರಲೇ ಇಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಅಧಿಕತಮ ಕನ್ನಡಿಗರಿಗೆ ಇಂತಹ ಸರ್ಕಾರಿ ಆದೇಶದ ನೆನಪಿಲ್ಲ.

ಕಾನೂನುಗಳ ಅನುಷ್ಠಾನ 

ಕಾನೂನು ಒಂದು ಕತ್ತೆ ಎನ್ನುವ ಮಾತನ್ನು ನೀವೂ ಕೇಳಿರಲೇಬೇಕು. ಏಕೆಂದರೆ ದೇಶದ ಪ್ರಜೆಗಳು ನೆಮ್ಮದಿಯಿಂದ ಜೀವಿಸುವ ಸಲುವಾಗಿ ಸರ್ಕಾರವೇ ರೂಪಿಸಿರುವ ಕಾನೂನುಗಳು ಇರುವುದೇ ಮುರಿಯುವ ಸಲುವಾಗಿ ಎನ್ನುವುದನ್ನು ಸಮರ್ಥಿಸುವಂತಹ ಅನೇಕ ಘಟನೆಗಳನ್ನು ನೀವು ಕಂಡಿರಬೇಕು. ದೇಶದ ಉದ್ದಗಲಕ್ಕೂ ಪ್ರತಿನಿತ್ಯ ಕಾಣಸಿಗುವ ಇಂತಹ ಕಾನೂನು ಉಲ್ಲಂಘನೆಯ ಪ್ರಕರಣಗಳನ್ನು ಕಂಡೂ ಕಾಣದಂತೆ ವರ್ತಿಸುವ ಪ್ರಜೆಗಳು, ಸಂದರ್ಭೋಚಿತವಾಗಿ ತಾವೂ ಸಣ್ಣಪುಟ್ಟ ಕಾನೂನುಗಳನ್ನು ಉಲ್ಲಂಘಿಸಲು ಹಿಂಜರಿಯುವುದಿಲ್ಲ!. 

ನಮ್ಮ ರಾಜ್ಯದ ಪ್ರತಿಯೊಂದು ಸ್ಥಳೀಯ  ಸಂಸ್ಥೆಗಳ ಪಾಲಿಗೆ ಬಗೆಹರಿಸಲಾಗದ ಸಮಸ್ಯೆ ಎನಿಸುತ್ತಿರುವ ತ್ಯಾಜ್ಯ ಸಂಗ್ರಹ - ವಿಲೇವಾರಿಗಳ ಸಂದರ್ಭಗಳಲ್ಲಿ ಉದ್ಭವಿಸುತ್ತಿರುವ ತೊಂದರೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರವು ಕೆಲವೊಂದು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲು ೨೦೧೦ ರಲ್ಲಿ ಉದ್ದೇಶಿಸಿತ್ತು. ಏಕೆಂದರೆ ರಾಜ್ಯದ ಎಲ್ಲೆಡೆ ಕಾನೂನುಬಾಹಿರವಾಗಿ ಸಾಮಾನ್ಯ ಮತ್ತು ಅಪಾಯಕಾರಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವ ಹವ್ಯಾಸ ನಿಧಾನವಾಗಿ ಹೆಚ್ಚಲಾರಂಭಿಸಿತ್ತು. ಖಾಲಿ ಜಾಗಗಳು, ರಸ್ತೆ ಬದಿ- ಚರಂಡಿಗಳುಮತ್ತು  ಕೆರೆಕುಂಟೆಗಳಲ್ಲೂ ವಿಸರ್ಜಿಸುತ್ತಿದ್ದ ವೈವಿಧ್ಯಮಯ ತ್ಯಾಜ್ಯಗಳು, ಆರೋಗ್ಯದ ಮತ್ತಿತರ ಸಮಸ್ಯೆಗಳಿಗೆ ಕಾರಣವೆನಿಸಿತ್ತು.  

ರಾಜ್ಯದ ಅನೇಕ ನಗರ - ಪಟ್ಟಣಗಳಲ್ಲಿ ತ್ಯಾಜ್ಯಗಳು ಉತ್ಪನ್ನವಾಗುವ ಸ್ಥಳಗಳಿಂದಲೇ ಇವುಗಳನ್ನು ಪ್ರತ್ಯೇಕಿಸಿ ಸಂಗ್ರಹಿಸುವ ಯೋಜನೆ ಅದಾಗಲೇ ಆರಂಭಗೊಂಡಿದ್ದರೂ, ಸಾರ್ವಜನಿಕ ಸ್ಥಳಗಳಲ್ಲಿ ರಾಶಿಬೀಳುತ್ತಿದ್ದ ತ್ಯಾಜ್ಯಗಳ ಪ್ರಮಾಣ ಮಾತ್ರ ಒಂದಿಷ್ಟೂ ಕಡಿಮೆಯಾಗಿರಲಿಲ್ಲ. ಇದೇ ಕಾರಣದಿಂದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ಆಡಳಿತಾಧಿಕಾರಿಗಳಿಗೆ ಸುತ್ತೊಲೆಯೊಂದನ್ನು ಕಳಿಸಿದ್ದರು. ಇದರಂತೆ ಪುರಸಭಾ ಘನತ್ಯಾಜ್ಯ ಸಂಗ್ರಹ- ವಿಲೇವಾರಿ ನಿಯಮಗಳಂತೆ, ಸಂಗ್ರಹಿತ ತ್ಯಾಜ್ಯಗಳನ್ನು ಸುರಕ್ಷಿತ ಹಾಗೂ ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡುವಂತೆ ಆದೇಶಿಸಿದ್ದರು. ಅದೇ ರೀತಿಯಲ್ಲಿ ಜೈವಿಕ ಮತ್ತು ವೈದ್ಯಕೀಯ ತ್ಯಾಜ್ಯಗಳ ನಿಯಮ ೧೯೯೮  ರಂತೆ, ಎಲ್ಲಾ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಸೂಚಿಸಿದ್ದರು. 

ಕ್ರಿಮಿನಲ್ ಪ್ರಕರಣ  

ಮುಖ್ಯ ಕಾರ್ಯದರ್ಶಿಯವರು ಸಂಬಂಧಿತ ಅಧಿಕಾರಿಗಳಿಗೆ ಬರೆದಿದ್ದ ಪತ್ರದಲ್ಲಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೨೬೮, ೨೬೯, ೨೭೦, ೨೭೭, ೨೭೮, ಮತ್ತು ೨೮೪ ರನ್ವಯ ಸಾರ್ವಜನಿಕ ಆರೋಗ್ಯ, ಸುರಕ್ಷತೆ, ಸೌಲಭ್ಯ, ಸಭ್ಯತೆಮತ್ತು ನೈತಿಕತೆಗಳನ್ನು ಉಲ್ಲಂಘಿಸುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕೆಂದು ಸೂಚಿಸಿದ್ದರು. 

ಇಂತಹ ಪ್ರಕರಣಗಳಲ್ಲಿ ಕನಿಷ್ಠ ೫೦೦ ರೂ. ದಂಡದಿಂದ ಆರಂಭಿಸಿ, ೬ ತಿಂಗಳುಗಳ ಜೈಲುವಾಸದಂತಹ ಶಿಕ್ಷೆಯನ್ನು ವಿಧಿಸಲು ಅವಕಾಶವಿದೆ. ಈ ಕಾನೂನನ್ನು ಅನುಷ್ಠಾನಗೊಳಿಸುವ ಹೊಣೆಗಾರಿಕೆಯನ್ನು ಪರಿಸರ ಮತ್ತು ಅರಣ್ಯ ಇಲಾಖೆಗಳ ಅಧಿಕಾರಿಗಳಿಗೆ ವಹಿಸಲಾಗಿತ್ತು. ವಿಶೇಷವೆಂದರೆ ಕಳೆದ ಮೂರು ವರ್ಷಗಳಲ್ಲಿ ಈ ಕಾಯಿದೆಯಂತೆ ಯಾರೊಬ್ಬರಿಗೂ ದಂಡ ಅಥವಾ ಜೈಲು ಶಿಕ್ಷೆಗಳನ್ನು ನೀಡಿದ ವಿಚಾರವು ನಮ್ಮ ಗಮನಕ್ಕೆ ಬಂದಿಲ್ಲ. ಹಾಗೂ ಪ್ರಾಯಶಃ ಇಂತಹ ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ, ಕಂಡಲ್ಲಿ ತ್ಯಾಜ್ಯಗಳನ್ನು ಎಸೆಯುವ ಜನಸಾಮಾನ್ಯರ ಕೆಟ್ಟ ಹವ್ಯಾಸವು ಅಂತ್ಯಗೊಂಡಿಲ್ಲ!. 

ಕೊನೆಯ ಮಾತು 

ದೇಶದಲ್ಲಿ ಅಸ್ತಿತ್ವದಲ್ಲಿರುವ ಸಕಲ ಕಾನೂನುಗಳನ್ನು ಗೌರವಿಸಿ ಪರಿಪಾಲಿಸುವ ಮನೋಭಾವ ನಮ್ಮ ದೇಶದ ಪ್ರಜೆಗಳಲ್ಲೂ ಇದ್ದಿದ್ದಲ್ಲಿ, ಇಂದು " ಸ್ವಚ್ಚ ಭಾರತ ಅಭಿಯಾನ" ವನ್ನು ಕೈಗೊಳ್ಳಬೇಕಾದ ಪರಿಸ್ಥಿತಿ ಉದ್ಭವಿಸುತ್ತಲೇ ಇರಲಿಲ್ಲ ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಅಂತೆಯೇ ಜನಸಾಮಾನ್ಯರ ಆರೋಗ್ಯದ ಗುಣಮಟ್ಟಗಳು ಉನ್ನತಸ್ಥರದಲ್ಲಿ ಇರುತ್ತಿದ್ದುದರಲ್ಲಿ ಸಂದೇಹವಿಲ್ಲ.

ಡಾ. ಸಿ.ನಿತ್ಯಾನಂದ ಪೈ, ಪುತ್ತೂರು 


Sunday, October 12, 2014

PET Bottles- Are dangerous



 ಪ್ಲಾಸ್ಟಿಕ್ ಬಾಟಲಿಗಳು : ನಿಮಗಿದು ತಿಳಿದಿರಲಿ 

ನೀವು ಪ್ರತಿನಿತ್ಯ ಬಳಸುವ ಅನೇಕ ಗೃಹಬಳಕೆಯ ಉತ್ಪನ್ನಗಳೊಂದಿಗೆ ಉಚಿತವಾಗಿ ದೊರೆಯುವ, ಹತ್ತಿಯಂತೆ ಹಗುರವಾದ ಮತ್ತು ಕೆಳಗೆ ಬಿದ್ದರೂ ಒಡೆದುಹೋಗದ ಪ್ಲಾಸ್ಟಿಕ್ ಬಾಟಲಿಗಳು ಇವೇ ಕಾರಣಗಳಿಂದಾಗಿ ಜಗತ್ತಿನಾದ್ಯಂತ ಜನಪ್ರಿಯವೆನಿಸಿವೆ. ಆದರೆ ಇವುಗಳ ಬಳಕೆಯಿಂದ ಉದ್ಭವಿಸಬಲ್ಲ ಗಂಭೀರ ವ್ಯಾಧಿಗಳ ಬಗ್ಗೆ ತಮ್ಮ ಗಮನವನ್ನು ಹರಿಸದ ಅನೇಕ ರಾಷ್ಟ್ರಗಳು, ಇಂತಹ ಬಾಟಲಿಗಳ ಬಳಕೆಯನ್ನು ನಿಷೇಧಿಸಲು ಹಿಂಜರಿಯುತ್ತಿವೆ.

ಸರ್ವಾಂತರ್ಯಾಮಿ 

ಸಾವಿಲ್ಲದ ಮನೆಯಿಂದ ಸಾಸಿವೆಯನ್ನು ಅರಸಿ ತರಬಹುದಾದರೂ, ಪ್ಲಾಸ್ಟಿಕ್ ಬಾಟಲಿಗಳೇ ಇಲ್ಲದ ಮನೆಯೊಂದನ್ನು ಅರಸುವುದು ಅಸಾಧ್ಯವೂ ಹೌದು. ಬಡವ- ಶ್ರೀಮಂತರೆನ್ನುವ ಭೇದವಿಲ್ಲದೇ, ಅಬಾಲವೃದ್ಧರೆಲ್ಲರೂ ದಿನನಿತ್ಯ ಬಳಸುವ ಪ್ಲಾಸ್ಟಿಕ್ ಬಾಟಲಿಗಳು ಇದೀಗ ಸರ್ವಾಂತರ್ಯಾಮಿ ಎನಿಸಿರುವುದು ಮಾತ್ರ ಸುಳ್ಳೇನಲ್ಲ!. 

ಶುದ್ಧೀಕರಿಸಿದ ಕುಡಿಯುವ ನೀರನ್ನು ಬಳಸಿ ಎಸೆಯುವ ಬಾಟಲಿಗಳಲ್ಲಿ ತುಂಬಿಸಿ ಮಾರಾಟಮಾಡಲು ಆರಂಭಿಸಿದ ಬಳಿಕ, ಲಘು ಪಾನೀಯಗಳು, ಅನಾರೋಗ್ಯಪೀಡಿತರು ಸೇವಿಸುವ ಔಷದಗಳೂ ಸೇರಿದಂತೆ ಅಸಂಖ್ಯ ಗ್ರಾಹಕ ಉತ್ಪನ್ನಗಳು " ಪಾಲಿ ಇಥೈಲೀನ್ ಟೆರಪ್ತಲೇಟ್" (PET ) ಬಾಟಲಿಗಳಲ್ಲಿ ತುಂಬಿಸಿ ಮಾರಾಟಮಾಡುವ ಉದ್ದಿಮೆಗಳ ಸಂಖ್ಯೆಯು ಸ್ವಾಭಾವಿಕವಾಗಿಯೇ ಹೆಚ್ಚಿತ್ತು. ಅಂತೆಯೇ ಒಂದುಬಾರಿ ಬಳಸಿದ ಬಳಿಕ ಮರುಬಳಕೆ ಮಾಡಬಾರದಂತಹ ಪೆಟ್ ಬಾಟಲಿಗಳ ಮರುಬಳಕೆ ಮಾಡುವ ಹವ್ಯಾಸವು ಭಾರತದಲ್ಲಿ ನಿಧಾನವಾಗಿ ಆದರೆ ನಿಶ್ಚಿತವಾಗಿ ಹೆಚ್ಚಲಾರಂಭಿಸಿತ್ತು. ಇದೇ ಕಾರಣದಿಂದಾಗಿ ಅನೇಕ ವಿಧದ ಆರೋಗ್ಯದ ಸಮಸ್ಯೆಗಳಿಗೆ ಸುಲಭದಲ್ಲೇ ಈಡಾಗುತ್ತಿರುವ ಭಾರತೀಯರ ಸಂಖ್ಯೆಯು ದಿನೇದಿನೇ ಹೆಚ್ಚುತ್ತಿದೆ.

ಅಪಾಯಕಾರಿ ರಾಸಾಯನಿಕ 

ಮನುಷ್ಯನ ಆರೋಗ್ಯಕ್ಕೆ ಮತ್ತು ಸುತ್ತಮುತ್ತಲ ಪರಿಸರಕ್ಕೆ ಅಪಾಯಕಾರಿ ಎನಿಸುತ್ತಿರುವ ಸಮಸ್ಯೆಗಳ ಬಗ್ಗೆ ನಡೆಸಿರುವ ಅಧ್ಯಯನಗಳಿಂದ, ಪ್ಲಾಸ್ಟಿಕ್ ಬಾಟಲಿಗಳ ಬಳಕೆಯು ಮನುಷ್ಯನ ಆರೋಗ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳು ಒಂದರ ಹಿಂದೆ ಮತ್ತೊಂದರಂತೆ ಬಯಲಾಗುತ್ತಿವೆ. 

ಪ್ಲಾಸ್ಟಿಕ್ ಬಾಟಲಿಗಳ ತಯಾರಿಕೆಯಲ್ಲಿ ಬೈಸ್ಫೆನಾಲ್- ಎ( BPA ) ಎನ್ನುವ ರಾಸಾಯನಿಕವನ್ನು ಬಳಸಲಾಗುತ್ತದೆ. ಈ ರಾಸಾಯನಿಕವು ನಿಧಾನವಾಗಿ ಹಾಗೂ ಅಲ್ಪಪ್ರಮಾಣದಲ್ಲಿ ಸೋರಿಕೆಯಾಗುವುದರಿಂದ, ಈ ಬಾಟಲಿಗಳಲ್ಲಿ ತುಂಬಿಸಿರುವ ದ್ರವಗಳಲ್ಲಿ ಅನಾಯಾಸವಾಗಿ ಸೇರುತ್ತದೆ. ಅದರಲ್ಲೂ ಪುಟ್ಟ ಕಂದಮ್ಮಗಳಿಗೆ ಹಾಲೂಡಿಸುವ ಬಾಟಲಿಗಳಲ್ಲಿ ಬಿಸಿಯಾದ ಹಾಲನ್ನು ಹಾಕಿದಾಗ ಇದರ ಸೋರಿಕೆಯ ಪ್ರಮಾಣವೂ ಹೆಚ್ಚುತ್ತದೆ.ನಿಮ್ಮ ವಾಹನದಲ್ಲಿ ಇರಿಸಿದ್ದ ನೀರಿನ ಬಾಟಲಿಯು ವಾತಾವರಣದ ಉಷ್ಣತೆಯಿಂದ ಕೊಂಚ ಬಿಸಿಯಾದೊಡನೆ ಬಿ ಪಿ ಎ ರಾಸಾಯನಿಕವು ಸೋರಿ ನೀರಿನಲ್ಲಿ ಸೇರುತ್ತದೆ.  ಈ ರೀತಿಯಲ್ಲಿ ಬಾಟಲಿಗಳಲ್ಲಿ ತುಂಬಿಸಿದ ನೀರು ಅಥವಾ ಅನ್ಯ ದ್ರವಗಳಲ್ಲಿ ಸೇರುವ ಬಿ ಪಿ ಎ ರಾಸಾಯನಿಕವು, ಸುಲಭದಲ್ಲೇ ನಮ್ಮನಿಮ್ಮೆಲ್ಲರ ಉದರವನ್ನು ಸೇರುತ್ತದೆ!. 

ಅನಾರೋಗ್ಯಕರ ಪ್ಲಾಸ್ಟಿಕ್ ಬಾಟಲಿಗಳು 

ಪುಟ್ಟ ಮಕ್ಕಳಿಗೆ ಹಾಲೂಡಿಸಲು ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುವುದರಿಂದ ಇದರಲ್ಲಿರುವ ಬಿ ಪಿ ಎ ರಾಸಾಯನಿಕವು ಅನೇಕ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತದೆ. ಈ ಮಕ್ಕಳಲ್ಲಿ ಮುಂದೆ ಶುಕ್ಲಗ್ರಂಥಿಯ ಕಾಯಿಲೆಗಳು, ಸ್ತನಗಳ ಕ್ಯಾನ್ಸರ್, ಜನ್ಮದತ್ತ ಅಂಗವೈಕಲ್ಯಗಳು ಮತ್ತು ಸಂತಾನೋತ್ಪತ್ತಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವೆನಿಸಬಲ್ಲದು ಎಂದು ತಿಳಿದುಬಂದಿದೆ. ಕಳೆದ ಒಂದೆರಡು ದಶಕಗಳಲ್ಲಿ ನಡೆದಿದ್ದ ಅನೇಕ ಅಧ್ಯಯನಗಳ ವರದಿಗಳ ಆಧಾರದ ಮೇಲೆ, ಪುಟ್ಟ ಮಕ್ಕಳಿಗೆ ಹಾಲೂಡಿಸಲು ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುವುದು ಸುರಕ್ಷಿತವಲ್ಲ ಎಂದು ಖಚಿತವಾಗಿದೆ. ಇದೇ ಕಾರಣದಿಂದ ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧಿಸಿದ ಮಹಾನಗರಗಳಲ್ಲಿ ಶಿಕಾಗೋ ನಗರಕ್ಕೆ ಪ್ರಥಮ ಸ್ಥಾನ ಸಲ್ಲುತ್ತದೆ. 

ಬೈಸ್ಫೆನಾಲ್ - ಎ ರಾಸಾಯನಿಕವು ಗರ್ಭಿಣಿಯರ ಗರ್ಭದಲ್ಲಿರುವ ಹೆಣ್ಣು ಭ್ರೂಣದ ಮೇಲೆ ಬೀರುವ ದುಷ್ಪರಿಣಾಮದಿಂದಾಗಿ, ಈ ಶಿಶುವಿಗೆ ಮುಂದೆ ಶಾಶ್ವತವಾದ ಸಂತಾನೋತ್ಪತ್ತಿ ಸಂಬಂಧಿತ ಸಮಸ್ಯೆಗಳು ಬಾಧಿಸುವ ಸಾಧ್ಯತೆಗಳಿವೆ ಎಂದು ಇತ್ತೀಚಿಗೆ ತಿಳಿದುಬಂದಿದೆ. ಇದಲ್ಲದೇ ಈ ಅಪಾಯಕಾರಿ ರಾಸಾಯನಿಕವು ಮನುಷ್ಯನ ಶರೀರದಲ್ಲಿರುವ ರಕ್ತನಾಳಗಳ ಒಳಭಾಗದ ಪದರಕ್ಕೆ ಹಾನಿಯನ್ನು ಉಂಟುಮಾಡುವುದರೊಂದಿಗೆ, ರಕ್ತದಲ್ಲಿನ ಕೊಲೆಸ್ಟರಾಲ್ ನ ಪ್ರಮಾಣವನ್ನೂ ಹೆಚ್ಚಿಸುವುದೆಂದು ಇಂಗ್ಲೆಂಡ್ ನ ಸಂಶೋಧಕರು ಸಾಬೀತುಪಡಿಸಿದ್ದಾರೆ. ಬಿ ಪಿ ಎ ರಾಸಾಯನಿಕ ಮತ್ತು ಹೃದ್ರೋಗಗಳಿಗೆ  ಅವಿನಾಭಾವ ಸಂಬಂಧವಿರುವುದನ್ನು ೨೦೦೮ ರಲ್ಲೇ ಪತ್ತೆಹಚ್ಚಲಾಗಿತ್ತು. ೧,೫೦೦ ಕ್ಕೂ ಅಧಿಕ ಸ್ತ್ರೀ- ಪುರುಷರ ಆರೋಗ್ಯದ ದಾಖಲೆಗಳು ಮತ್ತು ಇತರ ಪರೀಕ್ಷಾ ವಿವರಗಳನ್ನು ಅಧ್ಯಯನ ಮಾಡಿದ್ದ ಸಂಶೋಧಕರು, ರೋಗಿಯ ಶರೀರದಲ್ಲಿರುವ ಬಿ ಪಿ ಎ ರಾಸಾಯನಿಕದ ಪ್ರಮಾಣ ಮತ್ತು ಹೃದ್ರೋಗಗಳಿಗೆ ನೇರವಾದ ಸಂಬಂಧವಿರುವುದನ್ನು ಖಚಿತಪಡಿಸಿದ್ದರು!.

ಆದರೆ ಇವೆಲ್ಲಕ್ಕೂ ಮಿಗಿಲಾಗಿ ಬಹುತೇಕ ಔಷದ ತಯಾರಿಕಾ ಸಂಸ್ಥೆಗಳು ಇತ್ತೀಚಿನ ಕೆಲವರ್ಷಗಳಿಂದ ತಮ್ಮ ಉತ್ಪನ್ನಗಳನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿ ಮಾರಾಟ ಮಾಡುತ್ತಿವೆ.ಮನುಷ್ಯನ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಎನಿಸುತ್ತಿರುವ ಪ್ಲಾಸ್ಟಿಕ್ ಬಾಟಲಿಗಳಲ್ಲಿ ವ್ಯಾಧಿಪೀಡಿತರ ಅನಾರೋಗ್ಯದ ಸಮಸ್ಯೆಗಳನ್ನು ಪರಿಹರಿಸಬಲ್ಲ ಔಷದಗಳನ್ನು ತುಂಬಿಸಿ ಮಾರಾಟ ಮಾಡುವುದು ನಿಶ್ಚಿತವಾಗಿಯೂ ಆರೋಗ್ಯಕರವಲ್ಲ. 

ಜನಸಾಮಾನ್ಯರ ಆರೋಗ್ಯ ರಕ್ಷಣೆಯ ಗುರುತರವಾದ ಹೊಣೆಗಾರಿಕೆ ಇರುವ ಔಷದ ತಯಾರಿಕಾ ಸಂಸ್ಥೆಗಳೇ ಇಂತಹ ಆನಾರೋಗ್ಯಕರ ಪ್ರವೃತ್ತಿಯನ್ನು ತೋರುವುದಾದಲ್ಲಿ, ಇತರ ಸಂಸ್ಥೆಗಳು ನೀರು, ಹಣ್ಣಿನ ರಸ, ಲಘುಪಾನೀಯಗಳೇ ಮುಂತಾದ ಆಹಾರಪದಾರ್ಥಗಳನ್ನು ಇವುಗಳಲ್ಲಿ ತುಂಬಿಸಿ ಮಾರಾಟ ಮಾಡುವುದರಲ್ಲಿ ಆಶ್ಚರ್ಯವೇನಿಲ್ಲ. 

ಅದೇನೇ ಇರಲಿ, ನಮ್ಮ ಸುತ್ತಮುತ್ತಲ ಪರಿಸರ ಮತ್ತು ನಮ್ಮ ಆರೋಗ್ಯಗಳ ಹಿತದೃಷ್ಟಿಯಿಂದ ಅನಾರೋಗ್ಯಕರ ಹಾಗೂ ಅಪಾಯಕಾರಿ ಎಣಿಸುತ್ತಿರುವ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ಇಂದಿನಿಂದಲೇ ನಿಲ್ಲಿಸುವುದು ಅತ್ಯವಶ್ಯಕವೂ ಹೌದು. ಇದರಿಂದಾಗಿ ನಾವು ಒಂದುಬಾರಿ ಬಳಸಿ ಎಸೆಯುವ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳ ಪ್ರಮಾಣವೂ ಕಡಿಮೆ ಆಗುವುದರಿಂದ, ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲೂ ಹಿತಕರವೆನಿಸೀತು. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ೧೭-೦೩- ೨೦೧೦ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ. ಸ್ವಚ್ಚ ಭಾರತ ಅಭಿಯಾನದ ಸಲುವಾಗಿ ಇದೀಗ ಬ್ಲಾಗ್ ನಲ್ಲಿ ಪ್ರಕಟಿಸಲಾಗಿದೆ. 



Saturday, October 11, 2014

DNA PROFILING




ಡಿ ಎನ್ ಎ ಪರೀಕ್ಷೆ : ಬಗೆಹರಿಸಬಹುದು ಸಮಸ್ಯೆ 

ಮಂಗಳೂರಿನಲ್ಲಿ ೨೦೧೦ ರಲ್ಲಿ ಸಂಭವಿಸಿದ್ದ ವಿಮಾನ ದುರಂತದಲ್ಲಿ ಮೃತಪಟ್ಟ ಅನೇಕ ಪ್ರಯಾಣಿಕರ ಮೃತದೇಹಗಳು ಗುರುತಿಸಲು ಆಗದಷ್ಟು ಸುಟ್ಟು ಹೋಗಿದ್ದವು. ಈ ಮೃತದೇಹಗಳ ಗುರುತನ್ನು ಪತ್ತೆಹಚ್ಚುವ ಸಲುವಾಗಿ ಡಿ ಎನ್ ಎ ಪರೀಕ್ಷೆಯನ್ನು ನಡೆಸಲಾಗಿತ್ತು. ವಿಶೇಷವೆಂದರೆ ಶೇ.೫೦ ರಷ್ಟು ಮೃತದೇಹಗಳನ್ನು ಈ ಪರೀಕ್ಷೆಯ ಮೂಲಕ ಗುರುತಿಸಿದ್ದರೂ, ಉಳಿದ ದೇಹಗಳ ಗುರುತನ್ನು ನಿಖರವಾಗಿ ಪತ್ತೆ ಹಚ್ಚಲು ಈ ಪರೀಕ್ಷೆ ವಿಫಲವಾಗಿತ್ತು.ಡಿ ಎನ್ ಎ ಪರೀಕ್ಷೆಯನ್ನು ನಡೆಸುವ ಮುನ್ನವೇ ಸುಟ್ಟು ಕರಕಲಾಗಿದ್ದ ದೇಹಗಳನ್ನು ನಿಖರವಾಗಿ ಗುರುತಿಸದೇ, ತಮ್ಮದೇ ಸಂಬಂಧಿಗಳ ದೇಹವೆಂದು ಭಾವಿಸಿ ಬೇರೊಬ್ಬರ ಮೃತದೇಹವನ್ನು ಅನೇಕರು ಕೊಂಡೊಯ್ದಿರುವುದೇ ಇದಕ್ಕೆ ಕಾರಣವಾಗಿರಬೇಕು. 

ಈ ರೀತಿಯಲ್ಲಿ ಜನಸಾಮಾನ್ಯರ ಮನಸ್ಸಿನಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿರುವ " ಡಿ ಎನ್ ಎ ಪರೀಕ್ಷೆ " ಯು, ಇದೇ ಕಾರಣದಿಂದ ಸಾಕಷ್ಟು ಪ್ರಚಾರವನ್ನೂ ಗಳಿಸಿದೆ.

ಡಿ ಎನ್ ಎ ಎಂದರೇನು?

ಡಿಆಕ್ಸಿರೈಬೋನ್ಯೂಕ್ಲಿಕ್ ಎಸಿಡ್ ಅರ್ಥಾತ್ ಡಿ ಎನ್ ಎ, ಮನುಷ್ಯರು ಮತ್ತು ಅನ್ಯ ಜೀವಿಗಳಲ್ಲಿರುವ ಅನುವಂಶಿಕ ದ್ರವ್ಯವಾಗಿದೆ. ಮನುಷ್ಯನ ಶರೀರದ ಬಹುತೇಕ ಜೀವಕೋಶಗಳಲ್ಲಿ ಡಿ ಎನ್ ಎ ಇದ್ದು, ಇವುಗಳಲ್ಲಿ ಅಧಿಕತಮ ಜೀವಕೋಶಗಳಲ್ಲಿನ ಡಿ ಎನ್ ಎ ಗಳು ಒಂದೇ ರೀತಿಯಾಗಿರುತ್ತವೆ. ಜೀವಕೋಶಗಳ ಕೋಶಕೇಂದ್ರಗಳಲ್ಲಿ ತುಸು ಅಧಿಕಪ್ರಮಾಣದ ಮತ್ತು ಉಳಿದ ಭಾಗಗಳಲ್ಲಿ ಅಲ್ಪಪ್ರಮಾಣದ ಡಿ ಎನ್ ಎ ಗಳು ಇರುತ್ತವೆ. 

ಪುರುಷರ ವೀರ್ಯ ಮತ್ತು ಸ್ತ್ರೀಯರಲ್ಲಿನ ಅಂಡಾಣುಗಳ ಮೂಲಕ ಈ ಡಿ ಎನ್ ಎ ಗಳು ಮುಂದಿನ ಸಂತತಿಗೆ ರವಾನೆಯಾಗುತ್ತವೆ. ಡಿ ಎನ್ ಎ ಗಳಲ್ಲಿ ಅಡಕವಾಗಿರುವ ಅನುವಂಶಿಕ ಮಾಹಿತಿಗಳು ಸಂಕೇತಗಳ ರೂಪದಲ್ಲಿ ಇರುತ್ತವೆ.  

ಸಮೀಪದ ಸಂಬಂಧಿಯೊಬ್ಬರ ರಕ್ತದ ಮಾದರಿಯನ್ನು ಸಂಗ್ರಹಿಸಿ, ಇವುಗಳಲ್ಲಿರುವ ಜೀವಕೋಶಗಳಿಂದ ಪ್ರತ್ಯೇಕಿಸಿದ ಡಿ ಎನ್ ಎ ಅಂಶಗಳನ್ನು ಮೃತ ವ್ಯಕ್ತಿಯ ಶರೀರದಿಂದ ಲಭಿಸಿದ ಮಾದರಿಗಳಲ್ಲಿರುವ ಡಿ ಎನ್ ಎ ಅಂಶಗಳೊಂದಿಗೆ ಹೋಲಿಸಿ ನೋಡುವ ಪರೀಕ್ಷಾ ವಿಧಾನವನ್ನು ಡಿ ಎನ್ ಎ ಬೆರಳಚ್ಚು ಪರೀಕ್ಷೆ ಎನ್ನುತ್ತಾರೆ. ಡಿ ಎನ್ ಎ ಫಿಂಗರ್ ಪ್ರಿಂಟಿಂಗ್ ಅಥವಾ ಪ್ರೊಫೈಲಿಂಗ್ ಎಂದು ಕರೆಯಲ್ಪಡುವ ಈ ವೈಜ್ಞಾನಿಕ ಪರೀಕ್ಷೆಯು ಬಹುತೇಕ ಸಂದರ್ಭಗಳಲ್ಲಿ ನಿಖರವಾದ ಫಲಿತಾಂಶವನ್ನು ನೀಡುವುದಾದರೂ, ಅಪರೂಪದಲ್ಲಿ ಹಾಗೂ ಅಲ್ಪಪ್ರಮಾಣದಲ್ಲಿ ವಿಫಲವಾಗುವ ಸಾಧ್ಯತೆಗಳೂ ಇವೆ. 

ಅನುವಂಶಿಕತೆ 

ನಿಮ್ಮ ಮನೆಯಲ್ಲಿ ಪುಟ್ಟ ಕಂದನೊಬ್ಬ ಜನಿಸಿದಾಗ ನೋಡಲು ಬಂದ ಬಂಧುಮಿತ್ರರು " ಮಗು ಥೇಟ್ ಅಪ್ಪನಂತೆ ಅಥವಾ ತಾಯಿಯ ಪಡಿಯಚ್ಚು " ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಸ್ವಾಭಾವಿಕ. ಈ ಕಂದನ ಕಣ್ಣು, ಕಿವಿ, ಬಾಯಿ, ಮೂಗು, ತುಟಿಗಳು, ತಲೆಗೂದಲು, ಶರೀರದ ಆಕಾರ, ಗಾತ್ರ, ಬಣ್ಣ ಮತ್ತಿತರ ಗುಣಲಕ್ಷಣಗಳು ತಂದೆತಾಯಂದಿರ ವಂಶವಾಹಿನಿಗಳ ಮೂಲಕ ಪೂರ್ವನಿರ್ಧಾರಿತವಾಗಿ ಬರುತ್ತವೆ. ಹಾಗೂ ಇವುಗಳಲ್ಲಿ ಡಿ ಎನ್ ಎ ಗಳು ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತವೆ. ಅದೇ ರೀತಿಯಲ್ಲಿ ಮಗುವಿನ ಶಾರೀರಿಕ ಮತ್ತು ಮಾನಸಿಕ ಆರೋಗ್ಯ, ಬೆಳವಣಿಗೆ, ಬುದ್ಧಿವಂತಿಕೆ ಇತ್ಯಾದಿಗಳು ಮಾತಾಪಿತರ ವಂಶವಾಹಿನಿಗಳಲ್ಲಿರುವ ಗುಣಾವಗುಣಗಳನ್ನು ಹೊಂದಿಕೊಂಡು ವ್ಯತ್ಯಯಗೊಳ್ಳುತ್ತವೆ. ಇದನ್ನು ಅನುವಂಶಿಕತೆ ಅಥವಾ ಅನುವಂಶೀಯತೆ ಎನ್ನುತ್ತಾರೆ. 

ಮನುಷ್ಯನ ಶರೀರದಲ್ಲಿರುವ ಜೀವಕಣಗಳಲ್ಲಿ ತಂದೆಯಿಂದ ಪಡೆದ ೨೩ ಹಾಗೂ ತಾಯಿಯಿಂದ ಪಡೆದ ೨೩ ಸೇರಿದಂತೆ ೪೬ ವರ್ಣತಂತುಗಳಿದ್ದು, ಇವುಗಳು ೨೩ ಜೊತೆಗಳಾಗಿ ಇರುತ್ತವೆ. ಇವುಗಳಲ್ಲಿ ಒಂದು ಜೊತೆ ಲಿಂಗ ನಿರ್ಧಾರಕ( sex chromosomes)ಗಳಾಗಿವೆ.ಇವುಗಳು ಪುರುಷರಲ್ಲಿ xy ಮತ್ತು ಸ್ತ್ರೀಯರಲ್ಲಿ xx ಎಂದು ಗುರುತಿಸಲ್ಪಟ್ಟಿವೆ. ಈ ಎರಡು ವರ್ಣತಂತುಗಳನ್ನೂ ಹೊರತುಪಡಿಸಿ, ಉಳಿದ ೨೨ ಜೊತೆ ವರ್ಣತಂತುಗಳನ್ನು ಅಟೋಸೋಮ್ಸ್(Autosomes) ಎನ್ನುವರು. 

ಪ್ರತಿ ವರ್ಣತಂತುವಿನಲ್ಲೂ ಸಾವಿರಕ್ಕೂ ಅಧಿಕ ವಂಶವಾಹಿನಿಗಳು (Genes ) ಇರುತ್ತವೆ. ಈ ವಂಶವಾಹಿನಿಗಳ ಮೂಟೆಯೇ ಡಿ ಎನ್ ಎ ಎಂದು ಗುರುತಿಸಲ್ಪಟ್ಟಿದೆ. ಈ ವಂಶವಾಹಿನಿಗಳು ಡಿಆಕ್ಸಿರೈಬೋನ್ಯೂಕ್ಲಿಕ್ ಎಸಿಡ್ ಅರ್ಥಾತ್ ಡಿ ಎನ್ ಎ ಗಳಿಂದ ನಿರ್ಮಿತವಾಗಿರುತ್ತವೆ. ಬಹುತೇಕ ಮನುಷ್ಯರಲ್ಲಿ ಇರುವ ಅಧಿಕತಮ ವಂಶವಾಹಿನಿಗಳು ಒಂದೇ ರೀತಿಯಲ್ಲಿದ್ದು, ಶೇ.೧ ಕ್ಕೂ ಕಡಿಮೆ ಪ್ರಮಾಣದ ವಂಶವಾಹಿನಿಗಳು ಮಾತ್ರ ವಿಭಿನ್ನವಾಗಿರುತ್ತವೆ. 

ಡಿ ಎನ್ ಎ ಪ್ರತಿ ಮನುಷ್ಯನ ಮತ್ತು ಅನ್ಯಜೀವಿಗಳಲ್ಲಿರುವ ಅನುವಂಶಿಕ ದ್ರವ್ಯವಾಗಿದೆ. ಮನುಷ್ಯನ ಡಿ ಎನ್ ಎ ಮೂರು ಬಿಲಿಯನ್ ಮೂಲ (Base ) ಗಳನ್ನು ಹೊಂದಿದ್ದು, ಶೇ.೯೯ ರಷ್ಟು ಮೂಲಗಳು ಎಲ್ಲರಲ್ಲೂ ಏಕರೀತಿಯದ್ದೇ ಆಗಿರುತ್ತವೆ. ಸಂದೇಹಾಸ್ಪದ ಸಂದರ್ಭಗಳು ಅಥವಾ ಪ್ರಕರಣಗಳಲ್ಲಿ ನಿರ್ದಿಷ್ಟ ವ್ಯಕ್ತಿಯ ಗುರುತನ್ನು ಪತ್ತೆಹಚ್ಚಲು ಉಳಿದ ಶೇ. ೧ ರಷ್ಟು ಡಿ ಎನ್ ಎ ಗಳನ್ನು ಪರೀಕ್ಷಿಸುವ ಅಥವಾ ತಾಳೆಹೊಂದಿಸುವ ವಿಧಾನವನ್ನು ಅನುಸರಿಸಲಾಗುತ್ತದೆ. 

೧೯೮೪-೮೫ ರಲ್ಲಿ ಸರ್ ಅಲೆಕ್ ಜೆಫ್ರೀಸ್ ಎನ್ನುವ ವಿಜ್ಞಾನಿಯೊಬ್ಬರು ಆವಿಷ್ಕರಿಸಿದ್ದ ಈ ಪರೀಕ್ಷೆಯು, ಇಂದು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿದೆ. 

ಡಿ ಎನ್ ಎ ಬೆರಳಚ್ಚು ವಿಧಾನದಲ್ಲಿ ಒಂದು ನಿರ್ದಿಷ್ಟ ವಿಧದ ಡಿ ಎನ್ ಎ ಅನುಕ್ರಮ (Sequence ) ವಿಧಾನವನ್ನು ಅನುಸರಿಸಲಾಗುತ್ತಿದ್ದು, ( ಇದನ್ನು micro satellite ಎನ್ನುತ್ತಾರೆ ) ತನ್ಮೂಲಕ ಇವುಗಳನ್ನು ಗುರುತಿಸುವುದು ಸುಲಭಸಾಧ್ಯವೆನಿಸುತ್ತದೆ. 

ಮನುಷ್ಯನ ಜೀವಕೋಶದಲ್ಲಿರುವ ಡಿ ಎನ್ ಎ ಗಳು ತಂದೆತಾಯಂದಿರಿಂದ ಅನುವಂಶಿಕವಾಗಿ ಬಂದಿರುವುದರಿಂದ, ಯಾವುದೇ ವ್ಯಕ್ತಿಯಲ್ಲೂ ತನ್ನ ತಂದೆತಾಯಂದಿರಲ್ಲಿ ಇರದಂತಹ ಡಿ ಎನ್ ಎ ಗಳು ಇರುವ ಸಾಧ್ಯತೆಗಳೇ ಇಲ್ಲ. ಇದರಿಂದಾಗಿ ಒಬ್ಬ ವ್ಯಕ್ತಿಯ ತಂದೆ, ತಾಯಿ, ಸಹೋದರ, ಸಹೋದರಿ ಹಾಗೂ ಮಕ್ಕಳಲ್ಲಿರುವ ಡಿ ಎನ್ ಎ ಗಳಲ್ಲಿ ಸಾಮ್ಯತೆಗಳಿರುವುದರಿಂದ, ಈ ವ್ಯಕ್ತಿಯ ಡಿ ಎನ್ ಎ ಗಳೊಂದಿಗೆ ಇವರೆಲ್ಲರ ಡಿ ಎನ್ ಎ ಗಳು ತಾಳೆಯಾಗಲೇಬೇಕು. ಇದರಿಂದಾಗಿ ತನ್ನ ಪತ್ನಿ ಹೆತ್ತಿರುವ ಮಗುವಿನ  ತಂದೆ ತಾನಲ್ಲ ಅಥವಾ ತಾನು ಇಂತಹ ವ್ಯಕ್ತಿಯೊಬ್ಬರ ಮಗನೆಂದು ನ್ಯಾಯಾಲಯದಲ್ಲಿ ಯಾರಾದರೂ ದಾವೆಯನ್ನು ಹೂಡಿದಾಗ, ಡಿ ಎನ್ ಎ ಪರೀಕ್ಷೆಯ ಮೂಲಕವೇ ಇಂತಹ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲಾಗುತ್ತದೆ. 

ಡಿ ಎನ್ ಎ ಪರೀಕ್ಷೆಯಲ್ಲಿ ಎರಡು ವಿಧಗಳಿದ್ದು, RFLP ವಿಧಾನದ ಪರೀಕ್ಷೆಗೆ ತುಸು ಅಧಿಕ ಪ್ರಮಾಣದ ಡಿ ಎನ್ ಎ ಗಳ ಅವಶ್ಯಕತೆ ಇರುತ್ತದೆ. ಆದರೆ PCR ಪರೀಕ್ಷಾ ವಿಧಾನದಲ್ಲಿ ಒಂದಿಷ್ಟು ತಪ್ಪುಗಳು ಸಂಭವಿಸುವ ಸಾಧ್ಯತೆಗಳು ಇದ್ದರೂ, ಕ್ಷಿಪ್ರಗತಿಯಲ್ಲಿ ಪರಿಣಾಮ ಲಭ್ಯವಾಗುವುದರಿಂದ ಇದು ವ್ಯಾಪಕವಾಗಿ ಬಳಸಲ್ಪಡುತ್ತಿದೆ. 

ಪರೀಕ್ಷೆಗೆ ಬಿಳಿ ರಕ್ತಕಣಗಳು 

ಮನುಷ್ಯನ ಶರೀರದಲ್ಲಿರುವ ರಕ್ತ, ಮಾಂಸಪೇಶಿಗಳು, ಮೆದುಳು, ಯಕೃತ್, ವೀರ್ಯಾಣು ಇತ್ಯಾದಿಗಳ ಜೀವಕೋಶಗಳಲ್ಲಿರುವ ಕೋಶಕೇಂದ್ರಗಳಲ್ಲಿ ಡಿ ಎನ್ ಎ ಗಳು ಸಮೃದ್ಧವಾಗಿ ಇರುತ್ತವೆ. ಆದರೆ ರಕ್ತದಲ್ಲಿರುವ ಕೆಂಪು ರಕ್ತಕಣಗಳಲ್ಲಿ ಕೋಶಕೇಂದ್ರಗಳು ಇಲ್ಲದಿರುವುದರಿಂದ, ಡಿ ಎನ್ ಎ ಪರೀಕ್ಷೆಗಾಗಿ ಬಿಳಿ ರಕ್ತಕಣಗಳನ್ನು ಬಳಸಲಾಗುತ್ತದೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು.

ದಿ. ೦೫-೦೬- ೨೦೧೦ ರ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿತ ಲೇಖನ. 


ನಗರಗಳ ನೈರ್ಮಲ್ಯ : ವ್ಯವಸ್ಥೆಯ ವೈಫಲ್ಯ



 ನಗರಗಳ ನೈರ್ಮಲ್ಯ : ವ್ಯವಸ್ಥೆಯ ವೈಫಲ್ಯ 

ಕೇಂದ್ರ ಸರ್ಕಾರವು ಇತ್ತೀಚೆಗೆ ದೇಶದ ಆಯ್ದ ೪೨೩ ನಗರಗಳಲ್ಲಿ ನಡೆಸಿದ್ದ ವಿಶೇಷ ಸಮೀಕ್ಷೆಯೊಂದರ ಫಲಿತಾಂಶಗಳು ಪ್ರಕಟಗೊಂಡಾಗ, ಕರ್ನಾಟಕದ ಉದ್ಯಾನ ನಗರಿ ಎಂದೇ ಪ್ರಖ್ಯಾತವಾಗಿರುವ ಮೈಸೂರು ನಗರವು ದ್ವಿತೀಯ ಸ್ಥಾನವನ್ನು ಗಳಿಸಿತ್ತು. ದೇಶದ ಪ್ರಮುಖ ನಗರಗಳಲ್ಲಿ ಅತ್ಯಂತ ಸ್ವಚ್ಛ ಮತ್ತು ಆರೋಗ್ಯಕರ ನಗರಗಳಲ್ಲಿ ಮೈಸೂರು ನಗರವು ದ್ವಿತೀಯ ಸ್ಥಾನವನ್ನು ಗಳಿಸಿರುವುದು ಹೆಮ್ಮೆಯ ವಿಚಾರವಾಗಿದ್ದರೂ, ಈ ಸಮೀಕ್ಷೆಯ ವರದಿಯ ಇತರ ಅಂಶಗಳು ನಿಜಕ್ಕೂ ಗಾಬರಿ ಹುಟ್ಟಿಸುವಂತಿವೆ. 

ದೇಶದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಚಂಡೀಘಡವನ್ನು" ಚೇತರಿಸುತ್ತಿರುವ ಆದರೆ ಇಂದಿಗೂ ರೋಗಪೀಡಿತ " ಎನ್ನುವ ವರ್ಗದಲ್ಲಿ ಸೇರಿಸಿರುವುದು ನಂಬಲು ಅಸಾಧ್ಯವೆನಿಸುತ್ತದೆ. ಆದರೆ ದೇಶದ ಪ್ರಮುಖ ನಗರಗಳು ಪ್ರತಿನಿತ್ಯ ಉತ್ಪಾದಿಸುತ್ತಿರುವ ಅಗಾಧ ಪ್ರಮಾಣದ ತ್ಯಾಜ್ಯಗಳಲ್ಲಿ ಮುಳುಗಿ ಹೋಗಿವೆ. ಸಾರ್ವಜನಿಕ ಸ್ಥಳಗಳನ್ನೇ ಶೌಚಾಲಯವನ್ನಾಗಿ ಬಳಸುವ, ಕೊಳಚೆ ನೀರನ್ನು ಸಂಸ್ಕರಿಸದ ಮತ್ತು ಘನತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ನಗರಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಕೇಂದ್ರ ಸರ್ಕಾರವು ಈ ಸಮೀಕ್ಷೆಯನ್ನು ನಡೆಸುವ ಮೂಲಕ ದೇಶದ ಪ್ರತಿಯೊಂದು ನಗರಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಮತ್ತು ಆರೋಗ್ಯಕರ ವಾತಾವರಣವನ್ನು ಸೃಷ್ಠಿಸಲು ಶ್ರಮಿಸುತ್ತಿರುವ ನಗರಗಳನ್ನು ಗುರುತಿಸಿ, ಇತರ ನಗರಗಳೂ ಇದೇ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಪ್ರೋತ್ಸಾಹಿಸಲು ಉದ್ದೇಶಿಸಿತ್ತು. 

ಈ ಸಮೀಕ್ಷೆಗಾಗಿ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ೪೨೩ ನಗರಗಳನ್ನು ಆಯ್ಕೆ ಮಾಡಿದ ಬಳಿಕ, ಪೂರ್ವನಿಗದಿತ ಮಾನದಂಡಗಳಂತೆ ಈ ನಗರಗಳಿಗೆ ಅಂಕಗಳನ್ನು ನೀಡಲಾಗಿತ್ತು. ಹಾಗೂ ಇದಕ್ಕಾಗಿ ಮೂರು ಖಾಸಗಿ ಸಂಸ್ಥೆಗಳನ್ನು ನಿಯೋಜಿಸಲಾಗಿತ್ತು. ಈ ಸಂಸ್ಥೆಗಳ ಕಾರ್ಯಕರ್ತರು ಆಯಾ ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸ್ಥಳೀಯ ನಿವಾಸಿಗಳನ್ನು ಸಂದರ್ಶಿಸಿ ಅವಶ್ಯಕ ಮಾಹಿತಿಗಳನ್ನು ಸಂಗ್ರಹಿಸಿದ್ದರು. ಸುಮಾರು ಒಂದು ವರ್ಷ ನಡೆದಿದ್ದ ಈ ಸಮೀಕ್ಷೆಗಾಗಿ ಆಯ್ಕೆಯಾಗಿದ್ದ ನಗರಗಳನ್ನು ಕೆಂಪು, ಕಪ್ಪು, ನೀಲಿ ಮತ್ತು ಹಸಿರು ಎನ್ನುವ ನಾಲ್ಕು ಗುಂಪುಗಳನ್ನಾಗಿ ವರ್ಗೀಕರಿಸಲಾಗಿತ್ತು. 

ಕೆಂಪು ವರ್ಗದಲ್ಲಿ ಸೇರಿಸಲ್ಪತ್ತಿದ್ದ ನಗರಗಳು ಈ ಪಟ್ಟಿಯ ತಳಭಾಗದಲ್ಲಿದ್ದು, ಈ ನಗರಗಳ ಸ್ವಚ್ಚತೆ ಮತ್ತು ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ. ಆಶ್ಚರ್ಯವೆಂದರೆ ಈ ೪೨೩ ನಗರಗಳಲ್ಲಿ ಶೇ.೪೫ ರಷ್ಟು ನಗರಗಳು ಕೆಂಪು ವರ್ಗದಲ್ಲಿ ಸೇರಿವೆ!. 

ಈ ೪೨೩ ನಗರಗಳಲ್ಲಿ ಯಾವುದೇ ನಗರಗಳು ಶೇ.೯೧ ರಿಂದ ೧೦೦ ಅಂಕಗಳನ್ನು ಗಳಿಸಲು ವಿಫಲಗೊಂಡಿದ್ದು, ಶೇ.೭೩.೪೮ ಅಂಕಗಳನ್ನು ಗಳಿಸಿದ್ದ ಚಂಡೀಘಡ ಮತ್ತು ಶೇ. ೭೦.೬೫ ಅಂಕಗಳನ್ನು ಗಳಿಸಿದ್ದ ಮೈಸೂರು ನಗರಗಳು ನೀಲಿ ವರ್ಗದಲ್ಲಿವೆ. ಅಂತೆಯೇ ೨೨೮ ನಗರಗಳು ಕಪ್ಪು ವರ್ಗದಲ್ಲಿ ಸೇರ್ಪಡೆಗೊಂಡಿದ್ದು, ಇವುಗಳಲ್ಲಿ ಶೇ. ೫೩.೬ ಅಂಕ ಗಳಿಸಿದ್ದ ಚೆನ್ನೈ ತುತ್ತತುದಿಯಲ್ಲಿದ್ದು, ಶೇ.೪೯.೮ ಅಂಕಗಳನ್ನು ಗಳಿಸಿದ್ದ ಹರಿದ್ವಾರವು ತಳಭಾಗದಲ್ಲಿದೆ. 

ತೀರಾ ನಿರಾಶಾದಾಯಕ ನಿರ್ವಹಣೆಯನ್ನು ತೋರುತ್ತಿರುವ ನಗರಗಳನ್ನು ಕೆಂಪು ವರ್ಗದಲ್ಲಿ ಸೇರಿಸಲಾಗಿದ್ದು, ಇವುಗಳಲ್ಲಿ ಶೇ.೨೨.೩ ಅಂಕಗಳನ್ನು ಗಳಿಸಿದ್ದ ಜಲಂಧರ್ ನಗರ ಅಗ್ರಸ್ಥಾನದಲ್ಲಿದ್ದು, ಕೇವಲ ೧೭.೨ ಅಂಕಗಳನ್ನು ಗಳಿಸಿದ್ದ ಶ್ರೀನಗರವು ಈ ಗುಂಪಿನ ಮತ್ತು ೪೨೩ ನಗರಗಳ ಯಾದಿಯಲ್ಲಿ ಅಂತಿಮ ಸ್ಥಾನದಲ್ಲಿದೆ.

೫೦ ಕ್ಕೂ ಅಧಿಕ ನಗರಗಳಲ್ಲಿ ಮನುಷ್ಯರ ಮಲವನ್ನು ಸುರಕ್ಷಿತ ವಿದಾನದಿಂದ ವಿಲೇವಾರಿ ಮಾಡುವ ಒಳಚರಂಡಿ ವ್ಯವಸ್ಥೆ ಇದ್ದರೂ, ಕೊಳಚೆ ನೀರನ್ನು ಸಂಸ್ಕರಿಸುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ೩೮೦ ನಗರಗಳ ವ್ಯಾಪ್ತಿಯಲ್ಲಿ ಉತ್ಪನ್ನವಾಗುತ್ತಿರುವ ದ್ರವತ್ಯಾಜ್ಯಗಳಲ್ಲಿ, ಕೇವಲ ಶೇ. ೪೦ ರಷ್ಟನ್ನು ಮಾತ್ರ ಸಂಸ್ಕರಿಸಿ ವಿಸರ್ಜಿಸಲಾಗುತ್ತಿದೆ. 

ದೇಶದ ಪಶ್ಚಿಮ ಭಾಗದಲ್ಲಿರುವ ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿನ ಅಧಿಕತಮ ನಗರಗಳು ಈ ಸಮೀಕ್ಷೆಯಲ್ಲಿ ಅತ್ಯಲ್ಪ ಅಂಕಗಳನ್ನು ಗಳಿಸಿವೆ. 

ಈ ಸಮೀಕ್ಷೆಯ ಫಲಿತಾಂಶಗಳು ಕಳೆದ ತಿಂಗಳಿನ ೧೧ ರಂದು ಪ್ರಕಟವಾದಂತೆಯೇ, ಬಹುತೇಕ ನಗರಗಳ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಮಗೆ ಇನ್ನಷ್ಟು ಅಂಕಗಳು ದೊರೆಯಬೇಕಾಗಿತ್ತು ಎಂದು ಈ ಸಮೀಕ್ಷೆಯನ್ನು ನಡೆಸಿದವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಆದರೆ ಅತ್ಯಂತ ಕಡಿಮೆ ಅಂಕಗಳನ್ನು ಗಳಿಸಿದ್ದ ಸ್ಥಳೀಯ ಸಂಸ್ಥೆಗಳ ಸರ್ವಾಂಗೀಣ ಅಭಿವೃದ್ಧಿಯತ್ತ ವಿಶೇಷ ಗಮನವನ್ನು ನೀಡುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದೆ ಎನ್ನುವುದನ್ನು ಅರಿತ ಬಳಿಕ ಈ ಅಧಿಕಾರಿಗಳು ತುಸು ಶಾಂತರಾಗಿದ್ದರು!. 

ಅದೇನೇ ಇರಲಿ, ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ, ದೇಶದ ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿ ಸ್ವಚ್ಚತೆಯನ್ನು ಕಾಪಾಡುವಲ್ಲಿ ಒಂದಿಷ್ಟು ಕಾಲ್ಜಯಾಯನ್ನು ವಹಿಸಲೇಬೇಕು. ಅದೇ ರೀತಿಯಲ್ಲಿ ಸ್ಥಳೀಯ ನಿವಾಸಿಗಳು ತಮ್ಮ ಸುತ್ತಮುತ್ತಲ ಪರಿಸರದ ನೈರ್ಮಲ್ಯವನ್ನು ಕಾಪಾಡಲು ಸಹಕರಿಸಬೇಕು. ಈ ರೀತಿಯಲ್ಲಿ ಸ್ಥಳೀಯ ಸಂಸ್ಥೆಗಳು ಮತ್ತು ಸ್ಥಳೀಯ ನಿವಾಸಿಗಳು ಒಂದಾಗಿ, ಈ ನಿಟ್ಟಿನಲ್ಲಿ ಕಾರ್ಯತತ್ಪರರಾದಲ್ಲಿ ದೇಶದ ಪ್ರತಿಯೊಂದು ನಗರ,ಪಟ್ಟಣ ಮತ್ತು ಹಳ್ಳಿಗಳು " ನಿರ್ಮಲ ಮತ್ತು ಆರೋಗ್ಯಕರ " ವಾಗಿ ಪರಿವರ್ತನೆಗೊಳ್ಳುವುದರಲ್ಲಿ ಸಂದೇಹವಿಲ್ಲ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ದಿ. ೨೩-೦೬-೨೦೧೦ ರ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿತ ಲೇಖನ.

ಪ್ರಸ್ತುತ ನಡೆಯುತ್ತಿರುವ " ಸ್ವಚ್ಚ ಭಾರತ ಅಭಿಯಾನ " ದ ಸಲುವಾಗಿ ಇದೀಗ ಈ ಲೇಖನವನ್ನು ಮತ್ತೆ ಪ್ರಕಟಿಸುತ್ತಿದ್ದೇನೆ.


Friday, October 3, 2014

SVACHH BHAARATH ABHIYAN and the POLITICIANS




ಸ್ವಚ್ಛ ಭಾರತ ಅಭಿಯಾನ: ನೇತಾರರಿಗೆ ಪ್ರಚಾರದ್ದೇ ಧ್ಯಾನ!

ದೇಶದ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಪ್ರತಿಯೊಬ್ಬ ಪ್ರಜೆಯೂ ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗಿಯಾಗುವಂತೆ ನೀಡಿದ್ದ ಕರೆಗೆ, ಜನಸಾಮಾನ್ಯರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಸಂಖ್ಯ ಜನರು ಗಾಂಧೀಜಿಯವರ ಜನ್ಮದಿನವಾಗಿರುವ ಅಕ್ಟೋಬರ್ ೨ ರಂದು ಸಾರ್ವಜನಿಕ ಸ್ಥಳಗಳಲ್ಲಿ ತುಂಬಿದ್ದ ವೈವಿಧ್ಯಮಯ ತ್ಯಾಜ್ಯಗಳನ್ನು ಸಂಗ್ರಹಿಸಿ, ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಇವುಗಳನ್ನು ವಿಲೇವಾರಿ ಮಾಡುವಲ್ಲಿ ಸಕ್ರಿಯವಾಗಿ ಭಾಗಿಗಳಾಗಿದ್ದರು. ಸಂಘ ಸಂಸ್ಥೆಗಳ ಸದಸ್ಯರು, ಶಾಲಾಕಾಲೇಜುಗಳ ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು, ರಾಜಕೀಯ ಪಕ್ಷಗಳ ಸದಸ್ಯರು ಮತ್ತು ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು ಈ ಅಭಿಯಾನದಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿದ್ದರು. ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ ಅಧಿಕತಮ ಜನರು, ಕೆಲವಾರು ಗಂಟೆಗಳ ಕಾಲ ತ್ಯಾಜ್ಯಗಳನ್ನು ಸಂಗ್ರಹಿಸುವ ಮತ್ತು ಸಾರ್ವಜನಿಕ ಸ್ಥಳಗಳನ್ನು ಚೊಕ್ಕಟಗೊಳಿಸಲು ಶ್ರಮಿಸಿದ್ದರು.

 ಮನಸ್ಪೂರ್ವಕವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸ್ವಯಂಸೇವಕರು ತಮ್ಮ ನಿಗದಿತ ಉದ್ದೇಶವನ್ನು ಈಡೇರಿಸುವ ವಿಚಾರವನ್ನು ಹೊರತುಪಡಿಸಿ, ಅನ್ಯ ವಿಚಾರಗಳ ಬಗ್ಗೆ ಗಮನವನ್ನೇ ಹರಿಸುತ್ತಿರಲಿಲ್ಲ. ತಮ್ಮ ಕಾರ್ಯವನ್ನು ಸಂಪೂರ್ಣವಾಗಿ ಮುಗಿಸಿದ ಬಳಿಕ ಸಂತೃಪ್ತರಾದ ಈ ಸ್ವಯಂಸೇವಕರು, ಮುಂದಿನ ದಿನಗಳಲ್ಲಿ ಈ ಅಭಿಯಾನವನ್ನು ಮುಂದುವರೆಸುವ ಬಗ್ಗೆ ಚರ್ಚಿಸುತ್ತಿದ್ದರು.

ನಮ್ಮ ಗಮನಕ್ಕೆ ಬಂದಂತೆ ಯಾವುದೇ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರದ ಅನೇಕ ಜನರು, ತಮ್ಮ ವಸತಿ - ವಾಣಿಜ್ಯ ಕಟ್ಟಡಗಳ ಸುತ್ತಮುತ್ತಲ ಪ್ರದೇಶಗಳನ್ನು ಸದ್ದುಗದ್ದಲವಿಲ್ಲದೆ ಸ್ವಚ್ಚಗೊಳಿಸುವ ಮೂಲಕ, ಅಭಿಯಾನದ ಯಶಸ್ಸಿಗಾಗಿ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿದ್ದರು. ಮತ್ತೆ ಕೆಲವರು ಸ್ವಚ್ಚತಾ ಅಭಿಯಾನದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಜೊತೆಗೆ ಈ ಸ್ವಚ್ಛತಾ ಅಭಿಯಾನದ ಸಾಧಕಗಳನ್ನು ಮತ್ತು ಅಸ್ವಚ್ಛತೆಯ ಬಾಧಕಗಳನ್ನು ಜನರಿಗೆ ಮನದಟ್ಟು ಮಾಡುವ ಮೂಲಕ, ಇದರಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದರು. ಈ ರೀತಿಯಲ್ಲಿ ಸ್ವಚ್ಛ ಭಾರತ ಅಭಿಯಾನದ ಯಶಸ್ಸಿಗಾಗಿ ಅಸಂಖ್ಯ ಜನರು ಶ್ರಮಿಸಿದ್ದರೂ, ಇವರೆಲ್ಲರೂ ಯಾವುದೇ ಪ್ರಚಾರವನ್ನು ಗಳಿಸಿಕೊಳ್ಳುವ ಸಲುವಾಗಿ ಇದರಲ್ಲಿ ಭಾಗವಹಿಸಿರಲಿಲ್ಲ.

ರಾಜಕಾರಣಿಗಳ ಪ್ರಹಸನ 

ಪ್ರಾಯಶಃ ತಮ್ಮ ಜೀವಿತಾವಧಿಯಲ್ಲೇ ಒಂದೇ ಒಂದುಬಾರಿ ಪೊರಕೆಯನ್ನು ಕೈಯಲ್ಲಿ ಹಿಡಿದು ಕಸವನ್ನು ಗುಡಿಸದೇ ಇದ್ದ ನಮ್ಮ ಕೆಲ ರಾಜಕೀಯ ನೇತಾರರು, ಕೇವಲ ಮಾಧ್ಯಮಗಳ ಕಣ್ಣಿಗೆ ಬೀಳುವ ಮೂಲಕ ಒಂದಿಷ್ಟು ಪುಕ್ಕಟೆ ಪ್ರಚಾರವನ್ನು ಪಡೆಯುವ ಸಲುವಾಗಿಯೇ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಕೆಲವರು ಕೈಗವುಸುಗಳನ್ನು ಧರಿಸಿದ್ದಲ್ಲಿ, ಇನ್ನು ಕೆಲವರು ಘೋಷಣೆಗಳನ್ನು ಮುದ್ರಿಸಿದ ಟೋಪಿಗಳನ್ನು ಮತ್ತು ಆಕರ್ಷಕವಾದ ಬ್ಯಾಜ್ ಗಳನ್ನು ಧರಿಸಿ ಪೊರಕೆಯನ್ನು ಹಿಡಿದಿದ್ದರು. ದೇಶದ ಪ್ರಧಾನಿ ಮೋದಿಯವರು ಕಸವನ್ನು ಗುಡಿಸಿದ್ದು ಮಾತ್ರವಲ್ಲ, ಅದನ್ನು ಬಕೆಟ್ ನಲ್ಲಿ ಬರಿಗೈಯ್ಯಿಂದಲೇ ತುಂಬಿಸಿದ್ದರು. 

ಆದರೆ ಕೇವಲ ಪುಕ್ಕಟೆ ಪ್ರಚಾರಕ್ಕಾಗಿ ಅಭಿಯಾನದಲ್ಲಿ ಭಾಗಿಯಾಗಿದ್ದ ನೇತಾರರು, ಕೆಲವೇ ನಿಮಿಷಗಳಲ್ಲಿ ಸ್ಥಳದಿಂದ ನಿರ್ಗಮಿಸಿದ್ದರು. ಟೆಲಿವಿಷನ್ ವಾಹಿನಿಗಳಲ್ಲಿ ಪ್ರಸಾರವಾಗಿದ್ದ ನಮ್ಮನ್ನಾಳುವವರ ಹಾವಭಾವಗಳನ್ನು ಕಂಡ ವೀಕ್ಷಕರು, ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು. ಏಕೆಂದರೆ ಮಾಧ್ಯಮಗಳು ಇವರು ಕಸವನ್ನು ಗುಡಿಸುವ ದೃಶ್ಯಗಳನ್ನು ಚಿತ್ರೀಕರಿಸುವ ಸಂದರ್ಭದಲ್ಲಿ, ಪೊರಕೆಯನ್ನು ಅತ್ತಿತ್ತ ಅಲ್ಲಾಡಿಸುತ್ತಿದ್ದ ನೇತಾರರಿಗೆ ಆ ಜಾಗ ಅತ್ಯಂತ ಸ್ವಚ್ಛವಾಗಿದ್ದುದೇ ಗಮನಕ್ಕೆ ಬಂದಿರಲಿಲ್ಲ. ಅಂತೆಯೇ ಈ ನೇತಾರರ ಅಕ್ಕಪಕ್ಕದಲ್ಲಿ ಹಾಜರಿದ್ದ ಹಲವಾರು ಮರಿಪುಡಾರಿಗಳು ತಮ್ಮ ದೃಷ್ಟಿಯನ್ನು ಕ್ಯಾಮರಾಗಳತ್ತ ಹರಿಸಿದ್ದುದರಿಂದ, ತಮ್ಮ ಕಾಲಬುಡದಲ್ಲಿ ಕಸವೇ ಇರದಿದ್ದುದು ಅವರ ಗಮನಕ್ಕೆ ಬಂದಿರಲೇ ಇಲ್ಲ!. ಪುಕ್ಕಟೆ ಪ್ರಚಾರದ ಸಲುವಾಗಿ ಮಾಧ್ಯಮಗಳ ಮುಂದೆ ರೂಪದರ್ಶಿಗಳಂತೆ " ಪೋಸ್ " ನೀಡಿದ್ದ ಈ ನೇತಾರರಿಗೆ, ಮಾಧ್ಯಮಗಳು ಈ ದೃಶ್ಯಗಳನ್ನು ಬಿತ್ತರಿಸುವಾಗ ಇವರ ಮಾನವನ್ನೇ ಹರಾಜು ಹಾಕಲಿರುವುದರ ಅರಿವೂ ಇರಲಿಲ್ಲ. 

ಹೇಳುವುದೊಂದು, ಮಾಡುವುದು ........... ? 

ಇವೆಲ್ಲಕ್ಕೂ ಮಿಗಿಲಾಗಿ ಬೆಂಗಳೂರಿನಲ್ಲಿ ಮಹಾತ್ಮಾ ಗಾಂಧಿಯವರ ಪ್ರತಿಮೆಯನ್ನು ಅನಾವರಣಗೊಳಿಸುವ ಸಮಾರಂಭದ ಸಂದರ್ಭದಲ್ಲಿ ಹಂಚಿದ್ದ ಸಿಹಿತಿಂಡಿ ಮತ್ತು ಕುಡಿಯುವ ನೀರಿನ ಬಾಟಲಿಗಳನ್ನು, ಈ ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಗಳು ಅಲ್ಲಲ್ಲಿ ಎಸೆದು ಹೋಗಿದ್ದುದು ನಂಬಲಸಾಧ್ಯ ಎನಿಸುತ್ತದೆ. ಸ್ವಚ್ಚತೆಯ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ್ದ ಗಾಂಧೀಜಿಯವರ ಪ್ರತಿಮೆಯ ಅನಾವರಣದ ಸಂದರ್ಭದಲ್ಲಿ ಹಾಗೂ ಅವರ ಜನ್ಮದಿನದಂದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆಯನ್ನು ನೀಡಿರುವುದರ ಬಗ್ಗೆ ಅರಿವಿದ್ದರೂ, ಅತಿಥಿಗಳು ಈ ರೀತಿಯಲ್ಲಿ ವರ್ತಿಸಿರುವುದು ಅಕ್ಷಮ್ಯ ಅಪರಾಧವೇ ಸರಿ.ಅದೇ ರೀತಿಯಲ್ಲಿ ಸ್ವಚ್ಚತಾ ಅಭಿಯಾನದ ಸಲುವಾಗಿ ಸಾಕಷ್ಟು ಶ್ರಮಿಸಿದ್ದ ರಾಜ್ಯ ಸರ್ಕಾರದ ಅಧಿಕಾರಿಗಳು, ಇಂದಿಗೂ ಸಭೆ- ಸಮಾರಂಭಗಳಲ್ಲಿ ಕುಡಿಯುವ ನೀರಿನ ಬಾಟಲಿಗಳನ್ನು ಅತಿಥಿಗಳಿಗೆ ನೀಡುವುದು ಏಕೆಂದು ನಮಗೂ ಅರ್ಥವಾಗುತ್ತಿಲ್ಲ. 

ಅದೇನೇ ಇರಲಿ, ಮಹಾತ್ಮಾ ಗಾಂಧೀಜಿಯವರ ೧೫೦ ನೇ ಜನ್ಮದಿನಕ್ಕೆ ಮುನ್ನ ಸಮಗ್ರ ಭಾರತವನ್ನು ತ್ಯಾಜ್ಯಮುಕ್ತ ಸ್ವಚ್ಚ್ ಭಾರತವನ್ನಾಗಿ ಪರಿವರ್ತಿಸಲು, ದೇಶದ ಜನತೆ ಪಣತೊಡಬೇಕಾಗಿದೆ. ತನ್ಮೂಲಕ " ಸ್ವಚ್ಛ ಭಾರತ: ಸ್ವಸ್ಥ ಹಾಗೂ ಸುಂದರ ಭಾರತ" ವನ್ನಾಗಿಸಲು ಇನ್ನಷ್ಟು ಶ್ರಮಿಸಬೇಕಿದೆ.

ಕೊನೆಯ ಮಾತು 

ಬೆಳಗಿನ ಜಾವ ಸುಮಾರು ಐದು ಕಿಲೋಮೀಟರ್ ನಡೆಯುವ ಹವ್ಯಾಸದೊಂದಿಗೆ, ರಸ್ತೆಯ ಅಕ್ಕಪಕ್ಕಗಳಲ್ಲಿ ಜನರು ಬಳಸಿ ಎಸೆದ ಕುಡಿಯುವ ನೀರು, ಲಘುಪಾನೀಯಗಳು ಮತ್ತು ಸಿದ್ಧ ಹಣ್ಣಿನ ರಸಗಳ ಖಾಲಿ ಬಾಟಲಿಗಳನ್ನು ಆಯ್ದು ತರುವುದು ನನ್ನ ಹವ್ಯಾಸಗಳಲ್ಲಿ ಒಂದಾಗಿದೆ. ಈ ರೀತಿಯಲ್ಲಿ ಹೆಕ್ಕಿ ತಂದಿರುವ ಖಾಲಿ ಬಾಟಲಿಗಳನ್ನು ಮನೆಮನೆಗಳಿಂದ ಕಸವನ್ನು ಸಂಗ್ರಹಿಸುವ ಸ್ವಸಹಾಯ ಗುಂಪುಗಳ ಕಾರ್ಯಕರ್ತರಿಗೆ ನೀಡಿ, ಗುಜರಿ ವರ್ತಕರಿಗೆ ಇದನ್ನು ಮಾರಿ ಸಿಗುವ ಹಣವನ್ನು ನೀವೇ ಬಳಸಿ ಎಂದು ಹೇಳಲು ಮಾತ್ರ ಮರೆಯುವುದಿಲ್ಲ. 

ಇದೀಗ ಸ್ವಚ್ಚತಾ ಅಭಿಯಾನ ಜರಗಿದ್ದ ಮರುದಿನ ಮುಂಜಾನೆ ನಿಶ್ಚಿತವಾಗಿಯೂ ಇಂದು ಖಾಲಿ ಬಾಟಲಿಗಳು ಸಿಗಲಿಕ್ಕಿಲ್ಲ ಎಂದು ಆಶಿಸಿದ್ದರೂ, ಒಂದೂವರೆ ಡಜನ್ ಬಾಟಲಿಗಳು ಸಿಕ್ಕಿದ್ದವು. ಅದರ ಮರುದಿನ ಸಂಗ್ರಹಿಸಿದ್ದ ಬಾಟಲಿಗಳ ಸಂಖ್ಯೆ ನೂತನ ದಾಖಲೆಯನ್ನು ಸೃಷ್ಠಿಸಿತ್ತು. ಏಕೆಂದರೆ ಕಳೆದ ಹಲವಾರು ತಿಂಗಳುಗಳಲ್ಲಿ ದಿನನಿತ್ಯ ಸಂಗ್ರಹವಾಗುತ್ತಿದ್ದ ಬಾಟಲಿಗಳ ಸರಾಸರಿ ಸಂಖ್ಯೆಯು ೧೫ ಆಗಿದ್ದಲ್ಲಿ, ಅಕ್ಟೋಬರ್ ೪ ರಂದು ಸಿಕ್ಕಿದ ಬಾಟಲಿಗಳ ಸಂಖ್ಯೆ ೩೧ ಆಗಿತ್ತು!. ಇದು ನಮ್ಮ ನಾಗರಿಕರಿಗೆ ಸ್ವಚ್ಛತೆ ಮತ್ತು ಪರಿಸರದ ಬಗ್ಗೆ ಇರುವ ನಿರ್ಲಕ್ಷ್ಯಕ್ಕೆ ಒಂದು ಉದಾಹರಣೆಯಾಗಿದೆ. ಈ ಮನೋಭಾವನೆಯನ್ನು ಬದಲಾಯಿಸಲು ನಾವೆಲ್ಲರೂ ಇನ್ನಷ್ಟು ಶ್ರಮಿಸಬೇಕಾಗಿದೆ.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು