Tuesday, October 15, 2013

Injections


                           ಚುಚ್ಚುಮದ್ದಿನ ಹುಚ್ಚು: ವಿದ್ಯಾವಂತರಲ್ಲೇ ಹೆಚ್ಚು!

    ಯಾವುದೇ ಕಾಯಿಲೆಗೆ ಚುಚ್ಚುಮದ್ದು ರಾಮಬಾಣದಂತೆ ಪರಿಣಾಮಕಾರಿ ಎಂದು ನಂಬಿ ಒತ್ತಾಯಪೂರ್ವಕವಾಗಿ ಪಡೆದುಕೊಳ್ಳುವವರು ಮತ್ತು ಚುಚ್ಚುಮದ್ದನ್ನು ಚುಚ್ಚಿಸಿಕೊಳ್ಳಲು ನಿರಾಕರಿಸುವವರು- ಈ ಎರಡೂ ವರ್ಗದ ಜನರು ನಮ್ಮಲ್ಲಿದ್ದಾರೆ. ಆದರೆ ಇವೆರಡೂ ಮನೋಭಾವಗಳು ಆರೋಗ್ಯಕರವಲ್ಲ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಮನುಷ್ಯನನ್ನು ಬಾಧಿಸುವ ವಿವಿಧ ವ್ಯಾಧಿಗಳು ಮತ್ತು ಚಿಕಿತ್ಸಾ ವಿಧಾನಗಳ ಬಗ್ಗೆ ಜನಸಾಮಾನ್ಯರಲ್ಲಿ ಅನೇಕ ತಪ್ಪುಕಲ್ಪನೆಗಳಿವೆ. ಇವುಗಳಲ್ಲಿ ಚುಚ್ಚುಮದ್ದಿನ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ ಎನ್ನುವುದು ಕೂಡಾ ಒಂದಾಗಿದೆ. ಎಂತಹ ಕಾಯಿಲೆಯನ್ನಾದರೂ ಕ್ಷಣಮಾತ್ರದಲ್ಲಿ ಗುಣಪಡಿಸಬಲ್ಲ ಸಾಮರ್ಥ್ಯವು, ಕೇವಲ ಒಂದು ಚುಚ್ಚುಮದ್ದಿನಲ್ಲಿದೆ ಎಂದು ಅನೇಕ ವಿದ್ಯಾವಂತರೂ ನಂಬುತ್ತಾರೆ. ಪ್ರಾಯಶಃ ಇದೇ ಕಾರಣದಿಂದಾಗಿ ಇಂಜೆಕ್ಷನ್ ನೀಡದ ವೈದ್ಯರನ್ನು ಹೆಚ್ಚಿನ ರೋಗಿಗಳು ದೂರವಿರಿಸುತ್ತಾರೆ!. 

ಚುಚ್ಚುಮದ್ದು ಎಂದರೇನು?

ಪರಿಶುದ್ಧವಾದ ದ್ರವರೂಪದ ಔಷದಗಳನ್ನು ಸೂಜಿಯ ಮೂಲಕ ಶರೀರಕ್ಕೆ ನೀಡುವ ವಿಧಾನವೇ ಚುಚ್ಚುಮದ್ದು ಅರ್ಥಾತ್ ಇಂಜೆಕ್ಷನ್. ಸಾಮಾನ್ಯವಾಗಿ ಚುಚ್ಚುಮದ್ದನ್ನು ಮಾಂಸಪೇಶಿಗಳಿಗೆ ನೀಡುವರಾದರೂ, ಚರ್ಮದ ಕೆಳಭಾಗಕ್ಕೆ ಹಾಗೂ ರಕ್ತನಾಳಗಳಿಗೆ ನೀಡುವುದೂ ವಾಡಿಕೆಯಲ್ಲಿದೆ. ಇದಲ್ಲದೇ ಅಸ್ಥಿಸಂದಿಗಳು, ಬೆನ್ನುಹುರಿ, ಹಲ್ಲಿನ ಒಸಡುಗಳು ಮತ್ತು ಸಂದರ್ಭೋಚಿತವಾಗಿ ಶರೀರದ ಇತರ ಕೆಲವು ಭಾಗಗಳಿಗೂ ನೀಡಲಾಗುತ್ತದೆ. ಚುಚ್ಚುಮದ್ದಿನಲ್ಲಿ ಬಳಸುವ ಮತ್ತು ಇವುಗಳನ್ನು ನೀಡುವ ಶರೀರದ ಭಾಗಗಳನ್ನು ಹೊಂದಿಕೊಂಡು, ಕೆಲವೇ ಕ್ಷಣಗಳಿಂದ ಆರಂಭಿಸಿ ಹಲವಾರು ತಾಸುಗಳಲ್ಲಿ ಇವುಗಳು ತಮ್ಮ ಪರಿಣಾಮವನ್ನು ತೋರುತ್ತವೆ. ಶಸ್ತ್ರಚಿಕಿತ್ಸೆಗೆ ಮುನ್ನ ನೀಡುವ ಅರಿವಳಿಕೆ ಹಾಗೂ ತುರ್ತುಪರಿಸ್ಥಿತಿಯಲ್ಲಿ ಬಳಸುವ ಕೆಲ ಔಷದಗಳು ಕ್ಷಣಮಾತ್ರದಲ್ಲಿ ತಮ್ಮ ಪರಿಣಾಮವನ್ನು ತೋರುತ್ತವೆ. ಆದರೆ ನಿರ್ದಿಷ್ಟ ವ್ಯಾಧಿಯೊಂದನ್ನು ತಡೆಗಟ್ಟಲು ನೀದುವಳಸಿಕೆಗಳು, ಈ ವ್ಯಾಧಿಗೆ ಪ್ರತಿರೋಧಕ ಶಕ್ತಿಯನ್ನು ತೋರಲು ಸಾಕಷ್ಟು ಸಮಯಾವಕಾಶ ಬೇಕಾಗುವುದು. 

ವಿಶೇಷವೆಂದರೆ ಅನಿವಾರ್ಯ ಪರಿಸ್ಥಿತಿಯಲ್ಲಿ ರೋಗಿಯ ಪ್ರತಿರೋಧವನ್ನು ಲೆಕ್ಕಿಸದೆ ವೈದ್ಯರು ಒತ್ತಾಯಪೂರ್ವಕವಾಗಿ ನೀಡುವ ಚುಚ್ಚುಮದ್ದು , ಅಪೇಕ್ಷಿತ ಪರಿಣಾಮವನ್ನು ನೀಡದಿರುವ ಸಾಧ್ಯತೆಗಳಿವೆ. ಅದೇ ರೀತಿಯಲ್ಲಿ ಅನಾವಶ್ಯಕವಾಗಿ ಹಾಗೂ ರೋಗಿಯೇ ಒತ್ತಾಯಪೂರ್ವಕವಾಗಿ ಕೇಳಿ ಪಡೆದುಕೊಂಡ ಚುಚ್ಚುಮದ್ದು, ನಿಶ್ಚಿತವಾಗಿಯೂ ರಾಮಬಾಣದಂತೆ ಪರಿಣಾಮಕಾರಿ ಎನಿಸಬಲ್ಲದು!.

ಸಾಮಾನ್ಯವಾಗಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಪ್ರಾಣಾಪಾಯದಿಂದ ಪಾರುಮಾಡಲು ವೈದ್ಯರು ಬಳಸುವ ಚುಚ್ಚುಮದ್ದು ಜೀವರಕ್ಷಕ ಎನಿಸಬಲ್ಲದು. ಅದೇ ರೀತಿಯಲ್ಲಿ ಚುಚ್ಚುಮದ್ದಿನ ರೂಪದಲ್ಲಿ ನೀಡುವ ಕೆಲ ಔಷದಗಳು- ಲಸಿಕೆಗಳು ರೋಗಿಯ ಶರೀರಕ್ಕೆ ಒಗ್ಗದಿರುವ ಕಾರಣದಿಂದಾಗಿ ಉದ್ಭವಿಸುವ "ಅನಾಫೈಲಾಕ್ಸಿಸ್ " ಎಂದು ಕರೆಯಲ್ಪಡುವ ತೀವ್ರಸ್ವರೂಪದ ಪ್ರತಿಕ್ರಿಯೆಯು, ರೋಗಿಯ ಪ್ರಾಣಹರಣಕ್ಕೂ ಕಾರಣವೆನಿಸುವುದುಂಟು. ಇಂತಹ ಸ್ಥಿತಿಯಲ್ಲಿ ರೋಗಿಯನ್ನು ಉಳಿಸಲು ಕೆಲ ಅನ್ಯ ವಿಧಾನಗಳೊಂದಿಗೆ, ತುರ್ತಾಗಿ ನೀಡಬೇಕಾದ ಔಷದಗಳನ್ನು ಮತ್ತೆ ಚುಚ್ಚುಮದ್ದಿನ ರೂಪದಲ್ಲೇ ನೀಡಬೇಕಾಗುವುದು!. ( ಪೆನಿಸಿಲಿನ್ ಇಜೆಕ್ಷನ್ ಇದಕ್ಕೊಂದು ಉತ್ತಮ ಉದಾಹರಣೆ ಎನಿಸುತ್ತದೆ.)

ಚುಚ್ಚುಮದ್ದಿನ ರೂಪದಲ್ಲಿ ನೀಡುವ ಔಷದ- ಲಸಿಕೆಗಳಿಂದ ಉದ್ಭವಿಸಬಲ್ಲ ತೀವ್ರ ಅಲರ್ಜಿ ಪ್ರತಿಕ್ರಿಯೆಗಳಲ್ಲಿ ಶರೀರದಾದ್ಯಂತ ದದ್ದುಗಳು ಎದ್ದು ಅಸಾಧ್ಯ ತುರಿಕೆ, ಅತಿಯಾಗಿ ಬೆವರುವುದು, ತಲೆ ಸುತ್ತಿದಂತೆ ಅಥವಾ ಕಣ್ಣು ಕತ್ತಲಾವರಿಸಿದಂತೆ ಆಗುವುದು, ಉಸಿರಾಟದ ತೊಂದರೆ, ವಾಕರಿಕೆ, ವಾಂತಿ ಮತ್ತು ಪ್ರಜ್ಞೆ ಕಳೆದುಕೊಳ್ಳುವುದೇ ಮುಂತಾದ ಲಕ್ಷಣಗಳು ಕಂಡುಬರಬಹುದು. ಆದರೆ ಈ ರೀತಿಯ ಪ್ರತಿಕ್ರಿಯೆಗಳು ಕೇವಲ ಇಂಜೆಕ್ಷನ್ ಗಳಿಗೆ ಮಾತ್ರ ಸೀಮಿತವಾಗಿರದೇ, ಇತರ ರೂಪಗಳಲ್ಲಿ ಬಳಸಿದ (ಮಾತ್ರೆ, ಮುಲಾಮು, ಸಿರಪ್ ಇತ್ಯಾದಿ) ಔಷದಗಳಿಂದಲೂ ತಲೆದೋರಬಹುದು. 

ಜೀವರಕ್ಷಕ ಚುಚ್ಚುಮದ್ದು 

ಹೃದಯಾಘಾತ, ಮೆದುಳಿನ ಆಘಾತ, ತೀವ್ರವಾಗಿ ಉಲ್ಬಣಿಸಿದ ಆಸ್ತಮಾ, ಅಪಸ್ಮಾರದ ಸೆಳೆತಗಳು, ತೀವ್ರ ಜ್ವರ- ನೋವು ಇತ್ಯಾದಿಗಳು ಬಾಧಿಸಿದ ಸಂದರ್ಭಗಳಲ್ಲಿ ಚುಚ್ಚುಮದ್ದಿನ ಬಳಕೆ ಅನಿವಾರ್ಯವೂ ಹೌದು. ಇದಲ್ಲದೇ ಬಾಯಿಯ ಮೂಲಕ ಔಷದವನ್ನು ಸೇವಿಸಲಾರದ ಅಥವಾ ನೀಡಲಾರದಂತಹ ಸಂದರ್ಭಗಳಲ್ಲಿ, ಅಪಾಯಕಾರಿ ಸೋಂಕು ಬಾಧಿಸಿದಾಗ, ತೀವ್ರ ವಾಂತಿ- ಭೆದಿಗಲಂತಹ ವ್ಯಾಧಿಪೀಡಿತರಿಗೆ, ಹಲ್ಲು ಕೀಳುವ ಮುನ್ನ ಅರಿವಳಿಕೆ ಔಷದವನ್ನು ನೀಡಲು ಚುಚ್ಚುಮದ್ದನ್ನು ಬಳಸಲೇ ಬೇಕಾಗುವುದು. ಅದೇ ರೀತಿಯಲ್ಲಿ ಕೇವಲ ಇಂಜೆಕ್ಷನ್ ರೂಪದಲ್ಲಿ ಮಾತ್ರ ಲಭ್ಯವಿರುವ ಕೆಲ ವಿಧದ ಔಷದಗಳು ಮತ್ತು ಲಸಿಕೆಗಳನ್ನು ಪಡೆದುಕೊಳ್ಳಲು ರೋಗಿಗಳು ನಿರಾಕರಿಸಿದರೂ, ವೈದ್ಯರು ಇವುಗಳನ್ನು ಒತ್ತಾಯಪೂರ್ವಕವಾಗಿ ನೀಡಬೇಕಾಗಬಹುದು. 

ಮಧುಮೇಹದಂತಹ ಗಂಭೀರ ಹಾಗೂ ಮಾರಕವೆನಿಸಬಲ್ಲ ವ್ಯಾಧಿಯನ್ನು ಸಮರ್ಪಕವಾಗಿ ನಿಯಂತ್ರಣದಲ್ಲಿ ಇರಿಸಬಲ್ಲ "ಇನ್ಸುಲಿನ್" ಚುಚ್ಚುಮದ್ದು , ಜಗತ್ತಿನಾದ್ಯಂತ ಅಸಂಖ್ಯ ಮಧುಮೇಹಿಗಳ ಪಾಲಿಗೆ ಸಾಕ್ಷಾತ್ ಸಂಜೀವಿನಿ ಎನಿಸಿದೆ. ಅಂತೆಯೇ, ಹುಚ್ಚುನಾಯಿ ಕಡಿತದಿಂದ ಉದ್ಭವಿಸುವ ಹಾಗೂ ಸೂಕ್ತ ಚಿಕಿತ್ಸೆಯೇ ಲಭ್ಯವಿಲ್ಲದ ಮಾರಕ "ರೇಬೀಸ್" ವ್ಯಾಧಿಯನ್ನು ತಡೆಗಟ್ಟಲು ಮತ್ತು ಪುಟ್ಟ ಕಂದಮ್ಮಗಳನ್ನು ಬಾಧಿಸಬಲ್ಲ ಡಿಪ್ತೀರಿಯಾ, ನಾಯಿಕೆಮ್ಮು, ಧನುರ್ವಾತ, ಹೆಪಟೈಟಿಸ್, ದಡಾರ, ಸೀತಾಳೆ ಸಿಡುಬು- ಸರ್ಪಸುತ್ತು ಇವೇ ಮುಂತಾದ ಕಾಯಿಲೆಗಳಿಂದ ರಕ್ಷಣೆಯನ್ನು ನೀಡಬಲ್ಲ ಲಸಿಕೆಗಳು ಕೇವಲ ಇಂಜೆಕ್ಷನ್ ರೂಪದಲ್ಲಿ ಮಾತ್ರ ಲಭ್ಯವಿದೆ. "ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ" ಎನ್ನುವ ಮಾತಿನಂತೆ, ಇಂತಹ ಲಸಿಕೆಗಳನ್ನು ಪಡೆದುಕೊಳ್ಳುವುದು ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಹಿತಕರ ಎನಿಸುವುದು. 

ಆದರೆ ವೈದ್ಯರು ಸೂಚಿಸದಿದ್ದಾಗ, ಅನಾವಶ್ಯಕವಾಗಿ ಮತ್ತು ಸಣ್ಣಪುಟ್ಟ ಕಾಯಿಲೆಗಳು ಬಾಧಿಸಿದ ಸಂದರ್ಭಗಳಲ್ಲಿ ರೋಗಿಗಳು ಒತ್ತಾಯಪೂರ್ವಕವಾಗಿ ಚುಚ್ಚುಮದ್ದನ್ನು ಕೇಳಿ ಪಡೆದುಕೊಳ್ಳುವುದು ನಿಷ್ಪ್ರಯೋಜಕ ಎನಿಸುವುದು. 

ಚುಚ್ಚುಮದ್ದು- ಚಿಕುನ್ ಗುನ್ಯಾ 

ಚುಚ್ಚುಮದ್ದಿನ ಪವಾಡ ಸದೃಶ ಪರಿಣಾಮಗಳ ಬಗ್ಗೆ ಜನಸಾಮಾನ್ಯರಲ್ಲಿ ಅಪಾರವಾದ ನಂಬಿಕೆ ಮತ್ತು ನಿರೀಕ್ಷೆಗಳನ್ನು ಹುಸಿಗೊಳಿಸಿದ ವಿಚಾರದಲ್ಲಿ, ದಕ್ಷಿಣ ಕನ್ನಡದ ಜನತೆಯನ್ನು ಕಳೆದ ವರ್ಷದಲ್ಲಿ ವ್ಯಾಪಕವಾಗಿ ಪೀಡಿಸಿದ್ದ ಚಿಕುನ್ ಗುನ್ಯಾ ವ್ಯಾಧಿಯು ಉತ್ತಮ ಉದಾಹರಣೆ ಎನಿಸುತ್ತದೆ. 

ತೀವ್ರ ಚಳಿಜ್ವರದೊಂದಿಗೆ ಶರೀರದ ಅಸ್ಥಿ ಸಂಧಿಗಳಲ್ಲಿ ವಿಪರೀತ ನೋವು ಮತ್ತಿತರ ಲಕ್ಷಣಗಳೊಂದಿಗೆ ಆಕಸ್ಮಿಕವಾಗಿ ಪ್ರತ್ಯಕ್ಷವಾಗುತ್ತಿದ್ದ ಈ ಕಾಯಿಲೆಯು, ಬಹುತೇಕ ರೋಗಿಗಳು ಹಲವಾರು ದಿನಗಳ ಕಾಲ ಹಾಸಿಗೆ ಹಿಡಿಯುವಂತೆ ಮಾಡಿತ್ತು. ಸೂಕ್ತ ಚಿಕಿತ್ಸೆಯೇ ಲಭ್ಯವಿಲ್ಲದ ಈ ಕಾಯಿಲೆಯ ಲಕ್ಷಣಗಳಿಗೆ ಅನುಗುಣವಾಗಿ ಔಷದಗಳನ್ನು ಸೇವಿಸುವುದರೊಂದಿಗೆ, ಸಂಪೂರ್ಣ ವಿಶ್ರಾಂತಿಯೇ ಇದಕ್ಕೆ ಏಕಮಾತ್ರ ಪರಿಹಾರವಾಗಿತ್ತು. ಆದರೆ ಈ ವ್ಯಾಧಿಯೊಂದಿಗೆ ಆರಂಭವಾಗುತ್ತಿದ್ದ ಆಸ್ತಿ ಸಂಧಿಗಳ ನೋವು ಮಾತ್ರ ಹಲವಾರು ತಿಂಗಳುಗಳ ಕಾಲ ಉಳಿದುಕೊಳ್ಳುತ್ತಿತ್ತು. 

ತೀವ್ರ ಚಳಿಜ್ವರ ಮತ್ತು ಅಸಹನೀಯ ನೋವಿನಿಂದ ಎದ್ದು ನಡೆದಾಡಲೂ ಆಗದ ರೋಗಿಗಳಿಗೆ, ವೇದನಾ ಶಾಮಕ ಮತ್ತು ಕೆಲವಿಧದ ಸ್ಟೆರಾಯ್ಡ್ ಗಳ ಚುಚ್ಚುಮದ್ದುಗಳು ತತ್ ಕ್ಷಣ ಪರಿಹಾರವನ್ನು ನೀಡುತ್ತಿದ್ದವು. ಈ ಚುಚ್ಚುಮದ್ದನ್ನು ಪಡೆದುಕೊಂಡ ರೋಗಿಗಳಿಗೆ ಸುಮಾರು ೩೦ ರಿಂದ ೬೦ ನಿಮಿಷಗಳ ಅವಧಿಯಲ್ಲಿ ಚಳಿಜ್ವರ ಮತ್ತು ಗಂಟು ನೋವುಗಳು (ತಾತ್ಕಾಲಿಕವಾಗಿ) ಮಾಯವಾಗುತ್ತಿದ್ದುದರಿಂದ, ತಾನು ಸಂಪೂರ್ಣವಾಗಿ ಗುನಮುಖನಾಗಿದ್ದೇನೆ ಎನ್ನುವ ಭಾವನೆಯನ್ನು ಮೂಡಿಸುತ್ತಿತ್ತು. ಆದರೆ ಕೆಲವೇ ತಾಸುಗಳ ಬಳಿಕ ಚುಚ್ಚುಮದ್ದಿನ ಪ್ರಭಾವವು ಕಡಿಮೆಯಾದಂತೆಯೇ, ಗಂಟುನೋವು ಮತ್ತು ಚಳಿಜ್ವರಗಳು ಮತ್ತೆ ಮರುಕಳಿಸುತ್ತಿದ್ದವು!. 

ಚಿಕುನ್ ಗುನ್ಯಾ ಕಾಯಿಲೆಯನ್ನು ಗುಣಪಡಿಸಲು ಚುಚ್ಚುಮದ್ದಿನ ಚಿಕಿತ್ಸೆ ನಿಷ್ಪ್ರಯೋಜಕವೆನಿಸಿದರೂ, ಅಸಂಖ್ಯ ರೋಗಿಗಳು ಈ ಚಿಕಿತ್ಸೆಗಾಗಿ ಸಹಸ್ರಾರು ರೂಪಾಯಿಗಳನ್ನು ವ್ಯಯಿಸಿದ್ದರು. ಇದಕ್ಕೂ ಮಿಗಿಲಾಗಿ ಹಲವಾರು ವಾರಗಳ ಕಾಲ ವೇದನಾ ಶಾಮಕ ಚುಚ್ಚುಮದ್ದು ಅಥವಾ ಮಾತ್ರೆಗಳ ಸೇವನೆಯಿಂದ ಜಠರದ ಉರಿಯೂತ ಮತ್ತಿತರ ಸಮಸ್ಯೆಗಳಿಂದ ಪೀಡಿತರಾಗಿ, ಇದರಿಂದ ಪಾರಾಗಲು ಮತ್ತಷ್ಟು ಔಷದಗಳು ಮತ್ತು ಹಣವನ್ನು ಕಳೆದುಕೊಂಡಿದ್ದರು. ಆದರೂ ಅನೇಕ ವೈದ್ಯರು ಈ ವ್ಯಾಧಿಯನ್ನು ಗುಣಪಡಿಸಬಲ್ಲ ಔಷದಗಳು ತಮ್ಮಲ್ಲಿ ಮಾತ್ರ ಲಭ್ಯವೆನ್ನುವ ಮೂಲಕ, ಅಮಾಯಕ ರೋಗಿಗಳನ್ನು ತಪ್ಪುದಾರಿಗೆ ಎಳೆದಿದ್ದರು!. ವಿಶೇಷವೆಂದರೆ "ಕೊಟ್ಟೋನು ಕೋಡಂಗಿ, ಈಸ್ಕೊಂಡೋನು ಈರಭದ್ರ" ಎನ್ನುವ ಮಾತಿನಂತೆ, ಇಂತಹ ಚಿಕಿತ್ಸೆಯನ್ನು ಪಡೆದುಕೊಂಡಿದ್ದ ರೋಗಿಗಳು ಕೋಡಂಗಿ ಹಾಗೂ ಚಿಕಿತ್ಸೆಯನ್ನು ನೀಡಿದ್ದ ವೈದ್ಯರು ಈರಭದ್ರ ರೆನಿಸಿಕೊಂಡಿದ್ದು ಮಾತ್ರ ಸುಳ್ಳೇನಲ್ಲ!.  

ಅಂತಿಮವಾಗಿ ಹೇಳುವುದಾದಲ್ಲಿ ಸಣ್ಣಪುಟ್ಟ ಕಾಯಿಲೆಗಳಿಗೆ ಮತ್ತು ಅನಾವಶ್ಯಕವಾಗಿ ಚುಚ್ಚುಮದ್ದನ್ನು ನೀಡುವಂತೆ ನಿಮ್ಮ ವೈದ್ಯರನ್ನು ಒತ್ತಾಯಿಸದಿರಿ. ಅಂತೆಯೇ ನಿಮ್ಮ ನಂಬಿಗಸ್ತ ವೈದ್ಯರು ಅನಿವಾರ್ಯ ಸಂದರ್ಭಗಳಲ್ಲಿ ಸೂಜಿಮದ್ದನ್ನು ಪಡೆದುಕೊಳ್ಳಲು ಸೂಚಿಸಿದಾಗ ನಿರಾಕರಿಸದಿರಿ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ೦೫-೦೨-೨೦೦೯ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 


Saturday, October 12, 2013

Mantrakke Maavinakaayi Uduruvude?




                             ಮಂತ್ರಕ್ಕೆ ಮಾವಿನಕಾಯಿ ಉದುರುವುದೇ?

ವಿವಿಧ ವ್ಯಾಧಿಗಳು ಬಾಧಿಸಿದ ಸಂದರ್ಭಗಳಲ್ಲಿ ವೈದ್ಯರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆಯದೇ, ಮಂತ್ರ-ತಂತ್ರ, ಬಲ್ಮೆ- ಜ್ಯೋತಿಷ್ಯ ಅಥವಾ ದೋಷಗಳ ಪರಿಹಾರಕ್ಕಾಗಿ ಪೂಜೆ- ಪುನಸ್ಕಾರ ಮತ್ತು ಹರಕೆ ಹೇಳಿಕೊಳ್ಳುವ ಸಂಪ್ರದಾಯವು ಭಾರತೀಯರಲ್ಲಿ ಇಂದಿಗೂ ಜೀವಂತವಾಗಿದೆ. ಅಜ್ಞಾನ, ತಪ್ಪುಕಲ್ಪನೆಗಳು ಮತ್ತು ಮೂಧನಂಬಿಕೆಗಳೇ ಇದಕ್ಕೆ ಮೂಲಕಾರಣಎನಿಸಿವೆ!. 
------------                ------------                               ------------------------------                           ------------------------      ------------

  ಕಾರಣಾಂತರಗಳಿಂದ ಉದ್ಭವಿಸಿ, ಕೆಲವೊಮ್ಮೆ ಉಲ್ಬಣಿಸಿ, ಅಪರೂಪದಲ್ಲಿ ರೋಗಿಯ ಮರಣಕ್ಕೆ ಕಾರಣವೆನಿಸಬಲ್ಲ ಕಾಯಿಲೆಗಳಿಗೆ ವೈದ್ಯರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆದುಕೊಳ್ಳುವುದು ಒಳಿತು ಎಂದು ನಿಮಗೂ ತಿಳಿದಿರಬೇಕು. ಆದರೆ ಈ ವೈಜ್ಞಾನಿಕ ಯುಗದಲ್ಲೂ ಅನೇಕರು, ಅದರಲ್ಲೂ ವಿಶೇಷವಾಗಿ ಅನಕ್ಷರಸ್ತ ಗ್ರಾಮೀಣ ಜನರು ತಮ್ಮನ್ನು ಬಾಧಿಸುವ ವ್ಯಾಧಿಗಳನ್ನು ಗುಣಪಡಿಸಿಕೊಳ್ಳಲು ಅನ್ಯ ವಿಧಿ ವಿಧಾನಗಳಿಗೆ ಶರಣಾಗುತ್ತಾರೆ. ತತ್ಪರಿಣಾಮವಾಗಿ ಸಾಕಷ್ಟು ಕಷ್ಟನಷ್ಟಗಳೊಂದಿಗೆ, ಕೆಲವೊಮ್ಮ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. 

ಸೆಂಥಿಲನ ಸೆಳೆತಗಳು 

ಪುಟ್ಟ ಸೆಂಥಿಲನ ಮೊದಲ ಹುಟ್ಟುಹಬ್ಬದಂದು ರಾತ್ರಿ ಆಕಸ್ಮಿಕವಾಗಿ ಆರಂಭವಾಗಿದ್ದ ಜ್ವರವು ಕೆಲವೇ ತಾಸುಅಗಲಲ್ಲಿ ಉಲ್ಬಣಿಸಿ, ಅಪಸ್ಮಾರದಂತಹ ಸೆಳೆತಗಳು ಕಾಣಿಸಿಕೊಂಡಿದ್ದವು. ಗಾಬರಿಗೊಂಡಿದ್ದ ಆತನ ಮಾತಾಪಿತರು ತಕ್ಷಣ ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆಯನ್ನು ಕೊಡಿಸಿದ್ದರು. ಬಳಿಕ ಚೇತರಿಸಿಕೊಂಡ ಮಗುವು ನಿರಾಳವಾಗಿ ನಿದ್ರಿಸಿತ್ತು. ವೈದ್ಯರ ಅಭಿಪ್ರಾಯದಂತೆ ಗಂಟಲಿನ ಸೋಂಕಿನಿಂದ ಬಳಲುತ್ತಿದ್ದ ಸೆಂಥಿಲನಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದ ಕಾರಣದಿಂದಾಗಿ ಜ್ವರದ ತಾಪವು ತಲೆಗೇರಿ, ಅಪಸ್ಮಾರದಂತಹ ಸೆಳೆತಗಳು ಪ್ರತ್ಯಕ್ಷವಾಗಿದ್ದವು. ಈ ರೀತಿಯ ಸಮಸ್ಯೆಗಳಿರುವ ಮಕ್ಕಳಿಗೆ ಜ್ವರ ಆರಂಭವಾಗುವ ಲಕ್ಷಣಗಳು ಕಾನಿಸಿದೊಡನೆ ಪಾರಾಸಿಟಮಾಲ್ ಔಷದವನ್ನು ಪ್ರತಿ ನಾಲ್ಕು ಗಂಟೆಗೆ ಒಂದುಬಾರಿಯಂತೆ ನೀಡುವುದರೊಂದಿಗೆ, ತಜ್ಞ ವೈದ್ಯರಿಂದ ಚಿಕಿತ್ಸೆಯನ್ನು ಕೊಡಿಸಬೇಕಾಗುವುದು. ಜೊತೆಗೆ ಮುಂದೆ ಎಂದಾದರೂ ಜ್ವರ ಬಾಧಿಸಿದ ಸಂದರ್ಭದಲ್ಲಿ ಸೆಳೆತಗಳು ಪ್ರತ್ಯಕ್ಷವಾದಲ್ಲಿ, ಇದನ್ನು ತಡೆಗಟ್ಟಬಲ್ಲ ಔಷದಗಳನ್ನು ಮುಂಜಾಗರೂಕತಾ ಕ್ರಮವಾಗಿ ನೀಡಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು. ಬಳಿಕ ಸೆಂಥಿಲನ ಗಂಟಲಿನ ಸೋಂಕನ್ನು ಗುಣಪಡಿಸಲು ಜೀವನಿರೋಧಕ ಔಷದ ಹಾಗೂ ಜ್ವರ ಮತ್ತು ಸೆಳೆತಗಳು ಬಾಧಿಸಿದಲ್ಲಿ ನೀಡಬೇಕಾದ ಔಷದಗಳನ್ನು ನೀಡಿದ್ದರು. 

ಮರುದಿನ ಬೆಳಿಗ್ಗೆ ಮೊಮ್ಮಗನ ಅನಾರೋಗ್ಯದ ವಿಚಾರವನ್ನು ಸೋಸೆಯಿಂದ ಅರಿತ ವೈದ್ಯನಾಥನ್, ತತ್ ಕ್ಷಣ ಮಗನ ಮನೆಗೆ ಧಾವಿಸಿದ್ದರು. ಜೊತೆಗೆ ಸೆಂಥಿಲನ ಸೆಳೆತಗಳಿಗೆ ಕಾಯಿಲೆ ಕಾರಣವಲ್ಲ ಎಂದು ತಾವಾಗಿ ನಿರ್ಧರಿಸಿದ್ದರು. ಈ ಸಮಸ್ಯೆಯ ಪರಿಹಾರಕ್ಕೆ ವೈದ್ಯರ ಚಿಕಿತ್ಸೆ ಸಲ್ಲದೆಂದು ಹೇಳಿ, ಮೊಮ್ಮಗನನ್ನು ಮಂತ್ರವಾದಿಯೊಬ್ಬನ ಬಳಿಗೆ ಕರೆದೊಯ್ದರು. 

ವೈದ್ಯನಾಥನ್ ರಿಂದ ಘಟನೆಯ ವಿವರಗಳನ್ನು ಅರಿತುಕೊಂಡ ಮಂತ್ರವಾದಿಯು ಕಣ್ಣುಮುಚ್ಚಿ ಸಾಕಷ್ಟು ಯೋಚಿಸಿದ ಬಳಿಕ, ಈ ಹಿಂದೆ ನಿಮ್ಮ ಕುಟುಂಬದಲ್ಲಿ ಅಪಮೃತ್ಯುವಿಗೆ ಈಡಾಗಿದ್ದ ಮಗುವಿನ ಪ್ರೆತಾತ್ಮದ ಪೀಡೆಯೇ ಸೆಂಥಿಲನ ಸೆಳೆತಗಳಿಗೆ ಕಾರಣವೆಂದಿದ್ದನು. ಬಳಿಕ ಸೆಂಥಿಲನ ಸೊಂಟಕ್ಕೊಂದು ತಾಯಿತ, ಕುತ್ತಿಗೆಗೆ ಮಂತ್ರಿಸಿದ ನೂಲೊಂದನ್ನು ಕಟ್ಟಿ, ಒಂದಿಷ್ಟು ಭಸ್ಮವನ್ನು ನೀಡಿ ಇದನ್ನು ಪ್ರತಿನಿತ್ಯ ಮಗುವಿನ ಹಣೆಗೆ ಹಚ್ಚಿದ ನಂತರ ಚಿಟಿಕೆಯಷ್ಟು ಭಸ್ಮವನ್ನು ಬಾಯಿಗೂ ಹಾಕುವಂತೆ ಹೇಳಿ ತನ್ನ ಶುಲ್ಕವನ್ನು ಪಡೆದುಕೊಂಡಿದ್ದನು. 

ಮಗುವಿನೊಂದಿಗೆ ಮನೆಗೆ ಮರಳಿದ ವೈದ್ಯನಾಥನ್, ಮಂತ್ರವಾದಿ ನೀಡಿದ್ದ ಭಸ್ಮವನ್ನು ತಪ್ಪದೆ ಬಳಸುವಂತೆ ಮತ್ತು ವೈದ್ಯರ ಚಿಕಿತ್ಸೆಯನ್ನು ನಿಲ್ಲಿಸುವಂತೆ ಸೊಸೆಗೆ ಆಜ್ಞಾಪಿಸಿದ್ದರು. ಆದರೆ ಅದೇ ರಾತ್ರಿ ಮತ್ತೆ ಮರುಕಳಿಸಿದ ಜ್ವರವು ಒಂದೆರಡು ತಾಸುಗಳಲ್ಲಿ ಉಳ್ಬನಿಸಿದರೂ, ವೈದ್ಯರು ನೀಡಿದ್ದ ಔಷದವನ್ನು ಕೊಡಲು ವೈದ್ಯನಾಥನ್ ಸುತರಾಂ ಒಪ್ಪಲಿಲ್ಲ. ಉಲ್ಬಣಿಸಿದ ಜ್ವರ ತಲೆಗೇರಿ ಆರಂಭವಾದ ಸೆಳೆತಗಳು ನಾಲ್ಕಾರು ನಿಮಿಷಗಳು ಕಳೆದರೂ ಕಡಿಮೆಯಾಗಲಿಲ್ಲ. ಸೆಳೆತಗಳ ಪರಿಣಾಮದಿಂದ ನಿಶ್ಚೇಷ್ಟಿತನಾಗಿದ್ದ ಕಂದನ ಸ್ಥಿತಿಯನ್ನು ಕಂಡು ಹೌಹಾರಿದ ಜಾನಕಿಯು, ಪಕ್ಕದ ಮನೆಯಲ್ಲಿನ ನಿವೃತ್ತ ನರ್ಸ್ ಶಾಂತಮ್ಮನನ್ನು ಕರೆದಿದ್ದಳು. ಮಗುವನ್ನು ಪರೀಕ್ಷಿಸಿದ ಶಾಂತಮ್ಮನು ತಕ್ಷಣ ತನ್ನ ಮನೆಯಿಂದ ಬರ್ಫದ ತುಂಡುಗಳನ್ನು ತಂದು ಮಗುವಿನ ತಲೆಯ ಮೇಲಿರಿಸಿದ ಕೆಲವೇ ಕ್ಷಣಗಳಲ್ಲಿ ಸೆಳೆತಗಳು ನಿಂತಿದ್ದವು. ಆದರೆ ವ್ಯಾಧಿಯ ತೀವ್ರತೆ ಮತ್ತು ಸೆಳೆತಗಳ ಬಾಧೆಯಿಂದಾಗಿ ಪ್ರಜ್ನಾಹೀನನಾಗಿದ್ದ ಸೆಂಥಿಲನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. 

ಮಗುವನ್ನು ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿ ತುರ್ತು ಚಿಕಿತ್ಸೆಯನ್ನು ನೀಡಿದ ಬಳಿಕ ತುಸು ಚೇತರಿಸಿಕೊಂಡರೂ, ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಬೇಕಾಗಿಬಂದಿತು. ಮರುದಿನ ಜಾನಕಿಯಿಂದ ಆಕೆಯ ಮಾವನ ಕಾರುಬಾರುಗಳನ್ನು ಕೇಳಿ ಕೆರಳಿದ ವೈದ್ಯರು, ವೈದ್ಯನಾಥನ್ ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಜೊತೆಗೆ ಇನ್ನುಮುಂದೆ ಎಂದಾದರೂ ಇಂತಹ ಮಂತ್ರತಂತ್ರಗಳ ಪ್ರಯೋಗಕ್ಕೆ ಮೊರೆಹೋದಲ್ಲಿ, ಮಗುವಿನ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆಯನ್ನು ನೀಡಿದ್ದರು. 

ಮಗುವಿನೊಂದಿಗೆ ಮನೆಗೆ ಮರಳಿದ ಜಾನಕಿಯು ಮುಂದೆ ಯಾವುದೇ ಕಾರಣಕ್ಕೂ ಮಾವನ ಮಾತುಗಳಿಗೆ ಕಿವಿಗೊಡದಿರಲು ನಿರ್ಧರಿಸಿದ್ದಳು. 

ಸಾಮಾನ್ಯವಾಗಿ ಪುಟ್ಟ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯ ಕೊರತೆ ಇರುವುದರಿಂದ, ಆಗಾಗ ಸಣ್ಣಪುಟ್ಟ ಕಾಯಿಲೆಗಳು ಬಾಧಿಸುತ್ತಲೇ ಇರುತ್ತವೆ. ಇದರೊಂದಿಗೆ ಮಕ್ಕಳು ಬೆಚ್ಚಿಬಿದ್ದು ಅಥವಾ ರಚ್ಚೆ ಹಿಡಿದಂತೆ ಅಳುವುದು ಕೂಡಾ ಅಪರೂಪವಲ್ಲ. ಆದರೆ ಇಂತಹ ಸಮಸ್ಯೆಗಳಿಗೆ ಯಾವುದಾದರೂ ದೋಷ, ಶಾಪ, ಪ್ರೇತಾತ್ಮಗಳೇ ಕಾರಣವೆಂದು ಹೇಳುವ ಮಂತ್ರವಾದಿಗಳು ಮತ್ತು ಇವರ ಮಾತುಗಳನ್ನು ನಂಬುವ ಅಮಾಯಕರು ನಮ್ಮ ದೇಶದಲ್ಲಿ ಇಂದಿಗೂ ಇದ್ದಾರೆ!. 

ಸಾವಿತ್ರಿಯ ಸಂತಾನಹೀನತೆ 

ತನ್ನ ಏಕೈಕ ಪುತ್ರಿಗೆ ವಿವಾಹವಾಗಿ ಎರಡು ವರ್ಷಗಳು ಕಳೆದಿದ್ದರೂ ಗರ್ಭವತಿಯಾಗದಿರುವುದು ಸರಸ್ವತಿಯ ಚಿಂತೆಗೆ ಕಾರಣವೆನಿಸಿತ್ತು. ಕಂಡಕಂಡ ದೇವರುಗಳಿಗೆ ಕೈಮುಗಿದು ಹರಕೆ ಹೇಳಿಕೊಂಡರೂ, ಮಗಳಿಗೆ ಸಂತಾನ ಪ್ರಾಪ್ತಿಯಾಗದಿರಲು ಯಾವುದಾದರೂ ದೇವರ ಶಾಪ ಅಥವಾ ದೋಷಗಳೇ ಕಾರಣವೆಂದು ಆಕೆ ಧೃಢವಾಗಿ ನಂಬಿದ್ದಳು. ಕೊನೆಗೆ ಮಗಳ ಸಂತಾನಹೀನತೆಯ ಕಾರಣವನ್ನು ಪತ್ತೆಹಚ್ಚಲು ಪಕ್ಕದ ಊರಿನ ಜೋಯಿಸರ ಬಳಿಗೆ ತೆರಳಿದ್ದಳು. ಕವಡೆಗಳ ರಾಶಿಯ ಮೇಲೆ ಕೈಯಾಡಿಸುತ್ತಾ ಸರಸ್ವತಿಯ ಸಂದೇಹಗಳಿಗೆ ಸಮಾಧಾನ ಹೇಳಲಾರಂಭಿಸಿದ ಜೋಯಿಸರ ಅಭಿಪ್ರಾಯದಂತೆ, ವಿವಾಹಕ್ಕೆ ಮುನ್ನ ಮನೆಯ ಸಮೀಪದ ಕೆರೆಗೆ ಬಟ್ಟೆ ಒಗೆಯಲು ಹೋಗುತ್ತಿದ್ದ ಸಾವಿತ್ರಿಯು ನೀರಿಗಿಳಿದಿದ್ದ ಸಂದರ್ಭದಲ್ಲಿ ದುಷ್ಟಶಕ್ತಿಯೊಂದು ಆಕೆಯ ಶರೀರವನ್ನು ಪ್ರವೇಶಿಸಿತ್ತು. ಈ ದುಷ್ಟಶಕ್ತಿಯ ಪ್ರಭಾವವೇ ಸಾವಿತ್ರಿ ಗರ್ಭಧರಿಸಲು ಅಡ್ಡಿಪಡಿಸುತ್ತಿತ್ತು!. ದುಷ್ಟಶಕ್ತಿಯನ್ನು ನಿಗ್ರಹಿಸುವ ವಿಧಾನವು ಜೋಯಿಸರಿಗೆ ತಿಳಿದಿದ್ದು, ಇದಕ್ಕಾಗಿ ಸುಮಾರು ಆರೇಳು ಸಾವಿರ ರೂಪಾಯಿಗಳು ವೆಚ್ಚವಾಗಬಹುದೆಂದು ಹೇಳಿದ್ದರು. 

ಮೊಮ್ಮಗುವನ್ನು ಕಾಣಲೇಬೇಕೆನ್ನುವ ಉತ್ಕಟ ಇಚ್ಛೆಯಿಂದ ಜೋಯಿಸರು ಸೂಚಿಸಿದ ಶುಭದಿನದಂದು, ಸಾವಿತ್ರಿಯ ಶರೀರದಿಂದ ದುಷ್ಟಶಕ್ತಿಯನ್ನು ಉಚ್ಚಾಟಿಸಲು ಮಂತ್ರ, ತಂತ್ರ ಮತ್ತಿತರ ಪೂಜೆ ಪುನಸ್ಕಾರಗಳನ್ನು ಸಾಂಗವಾಗಿ ನೆರವೇರಿಸಲಾಯಿತು. ಅಂತಿಮವಾಗಿ ಸರಸ್ವತಿ, ಆಕೆಯ ಮಗಳು ಮತ್ತು ಅಳಿಯನಿಗೆ ಪ್ರಸಾದವನ್ನಿತ್ತು ಹರಸಿದ ಜೋಯಿಸರು, ಪುಟ್ಟ ಕಾಗದದ ಚೀಟಿಯಲ್ಲಿ ಪುತ್ತೂರು ಪೇಟೆಯ ಖ್ಯಾತ ವೈದ್ಯರೊಬ್ಬರ ಹೆಸರು ಮತ್ತು ವಿಳಾಸಗಳನ್ನು ಬರೆದು, ಇದೇ ವೈದ್ಯರಿಂದ ಸಾವಿತ್ರಿಗೆ ಒಂದು ವರ್ಷದ ಅವಧಿಗೆ ಚಿಕಿತ್ಸೆಯನ್ನು ಕೊಡಿಸುವಂತೆ ಆದೇಶಿಸಿದ್ದರು!. 

ಕೆಲವು ದಿನಗಳ ಬಳಿಕ ಈ ವೈದ್ಯರನ್ನು ಭೇಟಿಯಾದ ಸರಸ್ವತಿಯು, ಇವೆಲ್ಲಾ ವಿವರಗಳನ್ನು ವೈದ್ಯರಿಗೆ ತಿಳಿಸಿ ತನ್ನ ಮಗಳಿಗೆ ಚಿಕಿತ್ಸೆಯನ್ನು ನೀಡುವಂತೆ ಅಂಗಲಾಚಿದ್ದಳು. ಸರಸ್ವತಿಯ ಮಾತುಗಳನ್ನು ಆಲಿಸಿದ ವೈದ್ಯರಿಗೆ ಆಶ್ಚರ್ಯವಾಗಿತ್ತು. ಏಕೆಂದರೆ ಈ ಜೋಯಿಸರ ಗುರುತು ಪರಿಚಯಗಳು ವೈದ್ಯರಿಗೂ ಇರಲಿಲ್ಲ. ಇದಕ್ಕೂ ಮಿಗಿಲಾಗಿ ಇವರು ಸಂತತಿ ತಜ್ಞರೂ ಆಗಿರಲಿಲ್ಲ. ಆದರೆ ಸರಸ್ವತಿಗೆ ತನ್ನ ಕೈಲಾದ ಸಹಾಯವನ್ನು ಮಾಡಲು ನಿರ್ಧರಿಸಿದ ವೈದ್ಯರು, ಆಕೆಯ ಮಗಳೊಂದಿಗೆ ಅಳಿಯನನ್ನೂ ತನ್ನ ಪರಿಚಯದ ಸಂತತಿ ತಜ್ಞರಲ್ಲಿಗೆ ಕರೆದೊಯ್ಯಲು ಸೂಚಿಸಿದ್ದರು. 

ಮರುದಿನ ಸಂಜೆ ಈ ವೈದ್ಯರನ್ನು ದೂರವಾಣಿಯ ಮೂಲಕ ಸಂಪರ್ಕಿಸಿದ ಸಂತತಿ ತಜ್ಞರು, ಸಾವಿತ್ರಿಯಲ್ಲಿ ಯಾವುದೇ ರೀತಿಯ ನ್ಯೂನತೆಗಳಿಲ್ಲದಿದ್ದರೂ, ಆಕೆಯ ಪತಿ ಜನ್ಮದತ್ತ ನಪುಮ್ಸಕತ್ವದಿಂದ ಬಳಳುತ್ತಿರುವುದೇ ಸಾವಿತ್ರಿ ಗರ್ಭಧರಿಸದಿರಲು ಕಾರಣವೆಂದು ತಿಳಿಸಿದ್ದರು. ಜೊತೆಗೆ ಐದನೆಯ ತರಗತಿಯಲ್ಲೇ ವಿದ್ಯಾಭ್ಯಾಸಕ್ಕೆ ವಿದಾಯಹೇಳಿದ್ದ ಸಾವಿತ್ರಿಗೆ, ಸ್ತ್ರೀಪುರುಷ ಸಮಾಗಮದ ಬಗ್ಗೆ ಏನೇನೂ ತಿಳಿದಿರಲಿಲ್ಲ. ಈ ಬಗ್ಗೆ ಆಕೆಯನ್ನು ನೇರವಾಗಿ ಪ್ರಶ್ನಿಸಿದಾಗ "ವಿವಾಹವಾದ ಬಳಿಕ ತನ್ನಿಂದ ತಾನೇ ಮಕ್ಕಳು ಹುಟ್ಟುತ್ತವೆ" ಎಂದು ಭಾವಿಸಿರುವುದಾಗಿ ಆಕೆ ಉತ್ತರಿಸಿದ್ದಳು. ಹಾಗೂ ಇದೇ ಕಾರಣದಿಂದಾಗಿ ತನ್ನ ಮಗಳು ಮತ್ತು ಅಳಿಯನ ನಡುವೆ ಶಾರೀರಿಕ ಸಂಬಂಧವೇ ಇಲ್ಲದಿರುವುದು ಸರಸ್ವತಿಗೂ ತಿಳಿದಿರಲಿಲ್ಲ. 

ತಜ್ಞ ವೈದ್ಯರ ಅಭಿಪ್ರಾಯದಂತೆ ಸಾವಿತ್ರಿಯು ಮಕ್ಕಳನ್ನು ಹದೆಯಬೇಕಿದ್ದಲ್ಲಿ ದಾನಿಗಳಿಂದ ಪಡೆದ ವೀರ್ಯವನ್ನು ಬಳಸಿ, ಕೃತಕ ಗರ್ಭಧಾರಣೆ ಮಾಡುವುದೇ ಏಕಮಾತ್ರ ಪರಿಹಾರವಾಗಿತ್ತು. ಆದರೆ ಈ ಸಲಹೆಯನ್ನು ಸರಸ್ವತಿ ತಿರಸ್ಕರಿಸಿದ್ದರಿಂದ, ಸಮೀಪದ ಸಂಬಂಧಿಗಳಿಂದ ಅಥವಾ ಅನಾಥಾಶ್ರಮದಿಂದ ಪುಟ್ಟ ಮಗುವೊಂದನ್ನು ದತ್ತು ಪಡೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ವೈದ್ಯರ ಸಲಹೆಯನ್ನು ಮನಸಾರೆ ಒಪ್ಪಿಕೊಂಡ ಸಾವಿತ್ರಿಯು ತನ್ನ ಸಂಬಂಧಿಯೊಬ್ಬರ ಮಗುವನ್ನು ದತ್ತು ಪಡೆದುಕೊಂಡಳು. ಈ ರೀತಿಯಲ್ಲಿ ಜೋಯಿಸರ ಮಂತ್ರ ತಂತ್ರಗಳು ವಿಫಲಗೊಂಡರೂ, ನಿರ್ದಿಷ್ಟ ವೈದ್ಯರನ್ನು ಭೇಟಿಯಾಗಲು ನೀಡಿದ್ದ ಸೂಚನೆಯು ಫಲಪ್ರದವೆನಿಸಿತ್ತು . 

ಸರಸ್ವತಿಯಂತೆ ಅನೇಕ ಅವಿದ್ಯಾವಂತರು ಮತ್ತು ಅಲ್ಪಪ್ರಮಾಣದ ವಿದ್ಯಾವಂತರೂ, ತಮ್ಮನ್ನು ಬಾಧಿಸುತ್ತಿರುವ ಆರೋಗ್ಯದ ಸಮಸ್ಯೆಗಳಿಗೆ ದೋಷ- ಶಾಪಗಳೇ ಕಾರಣವೆಂದು ಭ್ರಮಿಸಿ, ಇವುಗಳ ಪರಿಹಾರಕ್ಕಾಗಿ ಸಾಕಷ್ಟು ಹಣದೊಂದಿಗೆ, ತಮ್ಮ ಮಾನಸಿಕ ನೆಮ್ಮದಿಯನ್ನೂ ಕಳೆದುಕೊಳ್ಳುತ್ತಾರೆ. ಆದರೆ ಕೆಲಸಂದರ್ಭಗಳಲ್ಲಿ ಇಂತಹ ಪರಿಹಾರಗಳನ್ನು ನೆರವೇರಿಸುವವರೂ,ಸರಸ್ವತಿಯ ಜೋಯಿಸರಂತೆ ಯಾವುದಾದರೂ ವೈದ್ಯರ ಚಿಕಿತ್ಸೆಯನ್ನು ಪಡೆದುಕೊಳ್ಳುವಂತೆ ಸೂಚಿಸುತ್ತಾರೆ. ಆದರೆ ಬಹುತೇಕ ಜನರು ಅನ್ಯ ವಿಧಿವಿಧಾನಗಳನ್ನು ಪ್ರಯೋಗಿಸಿದ ಬಳಿಕ ತಮ್ಮ ಸಮಸ್ಯೆ ಪರಿಹಾರಗೊಳ್ಳದ ಕಾರಣದಿಂದ, ಅಂತಿಮವಾಗಿ ವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆದು ಗುಣಮುಖರಾಗುತ್ತಾರೆ . 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೪-೦೨-೨೦೧೦ ರ ಅಂಕಣದಲ್ಲಿ ಪ್ರಕಟಿತ ಲೇಖನ  

Cosmetics can cause diseases

s
To: drcnpai@yahoo.co.in


                 ಸೌಂದರ್ಯವರ್ಧಕಗಳ ಬಳಕೆ:ಅನಾರೋಗ್ಯಕರವೆನಿಸೀತು ಜೋಕೆ!

ತಮ್ಮ ಶಾರೀರಿಕ ಸೌಂದರ್ಯದ ಬಗ್ಗೆ ಕಾಳಜಿ ವಹಿಸದ ಸ್ತ್ರೀ-ಪುರುಷರು ಈ ಜಗತ್ತಿನಲ್ಲೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಪ್ರಾಯಶಃ ಇದೇ ಕಾರಣದಿಂದಾಗಿ ತಾವು ಇನ್ನಷ್ಟು ಆಕರ್ಷಕವಾಗಿ ಕಾಣಬೇಕೆನ್ನುವ ಉದ್ದೇಶದಿಂದ, ಅನೇಕರು ಕೃತಕ ಸೌಂದರ್ಯವರ್ಧಕಗಳನ್ನು ಧಾರಾಳವಾಗಿ ಬಳಸುತ್ತಾರೆ. ಆದರೆ ಇವುಗಳ ಬಳಕೆಯಿಂದ ಉದ್ಭವಿಸಬಲ್ಲ ದುಷ್ಪರಿಣಾಮಗಳನ್ನು ಅರಿತುಕೊಳ್ಳಲು ಮರೆತುಬಿಡುತ್ತಾರೆ!. 
------                              -----------                  ---------------------                               ---------------                              ---------------

ಭಾರತೀಯರು ತಮ್ಮ ಶಾರೀರಿಕ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಮತ್ತು ಕಾಪಾಡಿಕೊಳ್ಳುವ ವಿಧಾನಗಳನ್ನು ಸಹಸ್ರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು. ಆಯುರ್ವೇದ ಗ್ರಂಥಗಳಲ್ಲಿ ಸವಿಸ್ತಾರವಾಗಿ ವರ್ಣಿಸಿರುವ ಗಿಡಮೂಲಿಕೆಗಳು ಮತ್ತು ನೈಸರ್ಗಿಕ ವಸ್ತುಗಳಿಂದ ತಯಾರಿಸಬಹುದಾದ ಬಹುತೇಕ ಸೌಂದರ್ಯವರ್ಧಕಗಳ ಸ್ಥಾನವನ್ನು ಇದೀಗ ಕೃತಕ ರಾಸಾಯನಿಕಗಳಿಂದ ತಯಾರಿಸಿದ ವಾಣಿಜ್ಯ ಉತ್ಪನ್ನಗಳು ಆಕ್ರಮಿಸಿಕೊಂಡಿವೆ. ಆಧುನಿಕ ಜೀವನಶೈಲಿಯ ಅವಿಭಾಜ್ಯ ಅಂಗವೆನಿಸಿರುವ ಇಂತಹ ಉತ್ಪನ್ನಗಳ ಬಳಕೆಯು ಇತ್ತೀಚಿನ ಕೆಲವರ್ಷಗಳಿಂದ ಮಿತಿಮೀರಿದೆ. ಅದೇ ರೀತಿಯಲ್ಲಿ ಇವುಗಳಿಂದ ಉದ್ಭವಿಸಬಲ್ಲ ದುಷ್ಪರಿಣಾಮಗಳ ಪ್ರಮಾಣವು ಅನಿಯಂತ್ರಿತವಾಗಿ ಹೆಚ್ಚುತ್ತಿದೆ. 

ತಲೆಮರೆಸಿಕೊಂಡ ರಾಯರು 

ಮಧ್ಯವಯಸ್ಸಿನ ಮಾಧವರಾಯರಿಗೆ ತನ್ನ ತಲೆಗೂದಲುಗಳು ಬಿಳಿಯಾಗುತ್ತಿರುವುದು ಕೀಳರಿಮೆಗೆ ಕಾರಣವೆನಿಸಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಕೂದಲುಗಳಿಗೆ ಬಣ್ಣ ಬಳಿಯುವುದೇ ಏಕಮಾತ್ರ ಪರಿಹಾರವಾಗಿತ್ತು. ಆದರೆ ಕೆಲವರ್ಷಗಳ ಹಿಂದೆ ತಲೆಗೂದಲಿಗೆ ಬಣ್ಣವನ್ನು ಬಳಿದೊಡನೆ ತಲೆದೋರಿದ್ದ ಅಲರ್ಜಿಯಿಂದಾಗಿ ನಾಲ್ಕಾರು ದಿನಗಳ ಕಾಲ ತಲೆಮರೆಸಿಕೊಂಡಿದ್ದ ರಾಯರಿಗೆ, ಇದರ ಚಿಕಿತ್ಸೆಗಾಗಿ ಸಾಕಷ್ಟು ಹಣವೂ ಕೈಬಿಟ್ಟಿತ್ತು. ಇದೇ ಕಾರಣದಿಂದಾಗಿ ಇಂತಹ ಪ್ರಯೋಗಗಳನ್ನು ಪ್ರಯತ್ನಿಸದ ರಾಯರಿಗೆ, ಇದೀಗ ಸಂಪೂರ್ಣವಾಗಿ ಬಿಲಿಯಾಗಿದ್ದ ತಲೆಯೇ ಚಿಂತೆಗೆ ಕಾರಣವೆನಿಸಿತ್ತು. 

ಈ ವಿಚಾರವನ್ನು ಅರಿತಿದ್ದ ರಾಯರ ಆಪ್ತಸ್ನೇಹಿತ ಸಂತೋಷನು ವಿದೇಶದಿಂದ ಆಮದುಮಾಡಿದ್ದ ದುಬಾರಿ ಹೇರ್ ಡೈ ಒಂದನ್ನು ಬಳಸುವಂತೆ ರಾಯರನ್ನು ಒತ್ತಯಿಸಿದ್ದನು. ಜೊತೆಗೆ ಭಾರತೀಯ ಉತ್ಪನ್ನಗಲೈಗಿಂತ ವಿದೇಶೀ ಉತ್ಪನ್ನಗಳು ನಿಶ್ಚಿತವಾಗಿಯೂ ಅತ್ಯುತ್ತಮ ಹಾಗೂ ಸುರಕ್ಷಿತವೆಂದು ಆಶ್ವಾಸನೆಯನ್ನೂ ನೀಡಿದ್ದನು. 

ಸಂತೋಷನ ಒತ್ತಾಯಕ್ಕೆ ಮಣಿದ ರಾಯರು ಈ ವಿದೇಶೀ ಹೇರ್ ಡೈ ಖರೀದಿಸಿ ತಲೆಗೂದಲಿಗೆ ಬಳಿದಿದ್ದರು. ಬಣ್ಣ ಬಳಿದ ಒಂದೆರಡು ತಾಸುಗಳಲ್ಲಿ ಆರಂಭವಾಗಿದ್ದ ಅಸಾಧ್ಯ ತುರಿಕೆಯ ಪರಿಣಾಮವಾಗಿ ಸ್ವಲ್ಪ ಹೊತ್ತಿನ ಬಳಿಕ ರಾಯರ ಮುಖವು ಊದಿಕೊಂಡು ವಿಕಾರವಾಗಿತ್ತು. ಕನ್ನಡಿಯಲ್ಲಿ ತಮ್ಮ ಮುಖವನ್ನು ಕಂಡು ಗಾಬರಿಯಾದ ರಾಯರು, ತತ್ ಕ್ಷಣ ಪರಿಚಿತ ವೈದ್ಯರನ್ನು ಭೇಟಿಯಾಗಿ ತುರ್ತು ಚಿಕಿತ್ಸೆಯನ್ನು ಪಡೆದರೂ ಮತ್ತೆ ನಾಲ್ಕಾರು ದಿನಗಳ ಕಾಲ ತಲೆಮರೆಸಿಕೊಳ್ಳಬೇಕಾಗಿ ಬಂದಿತ್ತು!. 

ಹೇರ್ ಡೈ ಗಳ ತಯಾರಿಕೆಯಲ್ಲಿ ಬಳಸುವ ಪಾರಾಫಿನೈಲೀನ್ ಡೈ ಅಮೈನ್ , ಅಮೋನಿಯಂ ಪರ್ ಸಲ್ಫೇಟ್, ಕೆಥಾನ್ ಸಿ. ಜಿ, ಗ್ಲಿಸರಿಲ್ ಮೊನೋಥಯೋಗ್ಲೈಕೊಲೆಟ್, ಸಂರಕ್ಷಕಗಳು ಮತ್ತು ಪರಿಮಳಕಾರಕ ದ್ರವ್ಯಗಳು ಅನೇಕರಲ್ಲಿ ತೀವ್ರಸ್ವರೂಪದ ಅಲರ್ಜಿ ಪ್ರಕ್ರಿಯೆಗಳಿಗೆ ಕಾರಣವೆನಿಸುತ್ತವೆ. ಸಸ್ಯಗಳಿಂದ ತಯಾರಿಸಿದ (ಹರ್ಬಲ್) ಎಂದು ಇವುಗಳ ತಯಾರಕರು ಘೋಷಿಸುವ ಹೇರ್ ಡೈ ಗಳಲ್ಲೂ ಪಾರಾಫಿನೈಲೀನ್ ಡೈ ಅಮೈನ್ ಬಳಸಲಾಗುತ್ತಿದೆ. ಈ ರಾಸಾಯನಿಕವು ಕೂದಲುಗಳಿಗೆ ಕಪ್ಪು ಬಣ್ಣವನ್ನು ನೀಡಲು ಅನಿವಾರ್ಯವೆನಿಸುತ್ತದೆ. ಆದರೆ ಹೇರ್ ಡೈ ಗಳಲ್ಲಿ ಬಳಸುವ ಹಲವು ರಾಸಾಯನಿಕ ದ್ರವ್ಯಗಳು ಇಂತಹ ಅಲರ್ಜಿಗೆ ಕಾರಣವೆನಿಸುವ ಸಾಧ್ಯತೆಗಳಿರುವುದರಿಂದ, ಇವುಗಳ ತಯಾರಕರು ಹೇರ್ ಡೈ ಯನ್ನು ತಲೆಯ ಒಂದು ಪುಟ್ಟ ಭಾಗಕ್ಕೆ ಮಾತ್ರ ಬಳಿದು ಪರೀಕ್ಷಿಸಲು ಸೂಚಿಸುತ್ತಾರೆ. ಇದರಿಂದಾಗಿ ಅಲರ್ಜಿಯಂತಹ ತೊಂದರೆಗಳು ಕಂಡುಬಂದಲ್ಲಿ, ಈ ಉತ್ಪನ್ನವನ್ನು ಬಳಸದಂತೆ ಎಚ್ಚರಿಕೆಯನ್ನು ನೀಡುತ್ತಾರೆ. 

ಸೌಂದರ್ಯವರ್ಧಕಗಳು ಎಂದರೇನು?

ಮನುಷ್ಯನ ಶರೀರವನ್ನು ಸ್ವಚ್ಛಗೊಳಿಸಬಲ್ಲ, ಸುಂದರವಾಗಿಸಬಲ್ಲ ಹಾಗೂ ಶರೀರದ ಆಕಾರ ಮತ್ತು ಗಾತ್ರಗಳನ್ನು ಪರಿವರ್ತಿಸದೇ ನಿಮ್ಮ ರೂಪವನ್ನು ಆಕರ್ಷಕವನ್ನಾಗಿಸಬಲ್ಲ ದ್ರವ್ಯಗಳನ್ನು ಸೌಂದರ್ಯವರ್ಧಕ ಅಥವಾ ಕಾಂತಿವರ್ಧಕಗಳೆಂದು ಕರೆಯುತ್ತಾರೆ. ಮಹಿಳೆಯರು ಸಾಮಾನ್ಯವಾಗಿ ಬಳಸುವ ಮೇಕಪ್ ಪ್ರಸಾದನಗಳು, ಲೋಶನ್, ಪೌಡರ್, ಸುಗಂಧದ್ರವ್ಯಗಳು, ಚರ್ಮದ ಮೇಲೆ ಲೇಪಿಸುವ ಕ್ರೀಮ್ ಗಳು, ಸ್ಪ್ರೇ ಗಳು, ಉಗುರು ಹಾಗೂ ತಲೆಗೂದಲಿಗೆ ಹಚ್ಚುವ ಬಣ್ಣಗಳು ಹಾಗೂ ಜೆಲ್ ಮತ್ತು ಎಣ್ಣೆಗಳು, ದುರ್ಗಂಧ ನಿವಾರಕಗಳೇ ಮುಂತಾದ ಹತ್ತುಹಲವು ಉತ್ಪನ್ನಗಳು ಸೌಂದರ್ಯವರ್ಧಕಗಳ ಪಟ್ಟಿಯಲ್ಲಿ ಸೇರುತ್ತವೆ. ಒಂದೆರಡು ದಶಕಗಳ ಹಿಂದಿನ ತನಕ ಮಹಿಳೆಯರ ಬಳಕೆಗೆ ಸೀಮಿತವಾಗಿದ್ದ ಸೌಂದರ್ಯವರ್ಧಕಗಳನ್ನು, ಇಂದು ಪುರುಷರೂ ಬಳಸುತ್ತಿದ್ದಾರೆ. ವಿಶೇಷವೆಂದರೆ ಇಂತಹ ಉತ್ಪನ್ನಗಳ ತಯಾರಕರು ಇದೀಗ ಸ್ತ್ರೀಯರ ಹಾಗೂ ಪುರುಷರ ಸಲುವಾಗಿ ಪ್ರತ್ಯೇಕ ಉತ್ಪನ್ನಗಳನ್ನು ತಯಾರಿಸಿ ಮಾರುತ್ತಿದ್ದಾರೆ. 

ಒಂದಾನೊಂದು ಕಾಲದಲ್ಲಿ ಕೇವಲ ಕಾಡಿಗೆ, ಸ್ನೋ ಮತ್ತು ಟಾಲ್ಕಂ ಪೌಡರ್ ಗಳನ್ನು ಬಳಸುವ ಮೂಲಕ ತಮ್ಮ ವದನವನ್ನು ಅಂದಗೊಳಿಸುತ್ತಿದ್ದ ಭಾರತೀಯ ನಾರಿಯರು, ಇಂದು "ನಖಶಿಖಾಂತ" ಬಳಸುತ್ತಿರುವ ಸೌಂದರ್ಯವರ್ಧಕಗಳ ವೈವಿಧ್ಯಗಳು ಅಸಂಖ್ಯ. ತಮ್ಮ ಅವಶ್ಯಕತೆಗೆ ಅನುಗುಣವಾಗಿ ಲೇಪಿಸಿದ ಕೃತಕ ಸೌಂದರ್ಯವರ್ಧಕಗಳನ್ನು ತೆಗೆಯಲು ಮತ್ತೊಂದು ವಿಧದ ಕೃತಕ ರಾಸಾಯನಿಕವನ್ನು ಬಳಸುವ ನೀರೆಯರಿಗೆ, ಇವುಗಳ ಒಳಿತು- ಕೆಡುಕುಗಳ ಬಗ್ಗೆ ಚಿಂತಿಸುವ ವ್ಯವಧಾನವೂ ಇರುವುದಿಲ್ಲ. ಬಹುತೇಕ ಸೌಂದರ್ಯವರ್ಧಕಗಳು ಕೃತಕ ರಾಸಾಯನಿಕಗಳಿಂದಲೇ ತಯಾರಿಸಲ್ಪದುವುದರಿಂದ, ಇವುಗಳ ದೀರ್ಘಕಾಲೀನ ಅಥವಾ ಅತಿಬಳಕೆಗಳು ಗಂಭೀರ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುವುದೆಂದು ಅನೇಕ ವಿದ್ಯಾವಂತರಿಗೂ ತಿಳಿದಿಲ್ಲ. 

ಜಗತ್ತಿನಾದ್ಯಂತ ಸುಮಾರು ೩೦೦೦ ವಿಧದ ರಾಸಾಯನಿಕಗಳನ್ನು ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದ್ದು, ಇವುಗಳಲ್ಲಿ ನೂರಕ್ಕೂ ಅಧಿಕ ರಾಸಾಯನಿಕಗಳು ಕೆಲವರಲ್ಲಿ ತೀವ್ರ ಅಲರ್ಜಿಗೆ ಕಾರಣವೆನಿಸುತ್ತವೆ. ಆದರೆ ಅಮೇರಿಕನ್ ಫುಡ್ ಎಂಡ್ ಡ್ರಗ್ ಎಡ್ಮಿನಿಸ್ಟ್ರೆಶನ್ ಸಂಸ್ಥೆ ಹೇಳುವಂತೆ, ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಬಳಸುವ ಯಾವುದೇ ರಾಸಾಯನಿಕವು ಅಲರ್ಜಿಗೆ ಕಾರಣವೆನಿಸಲಾರದು ಎಂದು ಭರವಸೆ ನೀಡುವಂತಿಲ್ಲ. 

ಕಾಂತಿವರ್ಧಕಗಳಿಂದ ಕಾಯಿಲೆ?

ಕಾಂತಿವರ್ಧಕಗಳ ಬಳಕೆಯಿಂದ ನಿಮ್ಮ ಚರ್ಮ, ಉಗುರುಗಳು ಮತ್ತು ಕೂದಲುಗಳಿಗೆ ಸಂಬಂಧಿಸಿದ ಅಸಾಮಾನ್ಯತೆಗಳೊಂದಿಗೆ ಅನೇಕ ವಿಧದ ಕ್ಷುಲ್ಲಕ ಅಥವಾ ಗಂಭೀರ ಕಾಯಿಲೆಗಳು ಬಾಧಿಸುವ ಸಾಧ್ಯತೆಗಳಿವೆ. ಪರಿಸರ ಮತ್ತು ಜನಸಾಮಾನ್ಯರ ಆರೋಗ್ಯದ ಬಗ್ಗೆ ಹೋರಾಡುತ್ತಿರುವ ಅಂತರರಾಷ್ಟ್ರೀಯ ಸಂಘಟನೆಯೊಂದರ ಅಭಿಪ್ರಾಯದಂತೆ, ನೀವು ಸಾಮಾನ್ಯವಾಗಿ ಬಳಸುವ ಸುಗಂಧದ್ರವ್ಯಗಳಿಂದ ಆರಂಭಿಸಿ, ತಲೆಗೂದಲಿಗೆ ಹಚ್ಚುವ ಜೆಲ್ ಗಳಲ್ಲೂ ಇರುವ ರಾಸಾಯನಿಕಗಳು ನಿಮ್ಮ ಮುಂದಿನ ಸಂತತಿಯಲ್ಲಿ ಜನ್ಮದತ್ತ ವೈಕಲ್ಯಗಳಿಗೂ ಕಾರಣವೆನಿಸಬಲ್ಲವು. ಅದೇ ರೀತಿಯಲ್ಲಿ ಸ್ತ್ರೀ ಪುರುಷರು ಬಳಸುವ ಟಾಲ್ಕಂ ಪೌಡರ್ ಗಳ ದೀರ್ಘಕಾಲೀನ ಬಳಕೆಯಿಂದ, ಮಹಿಳೆಯರಲ್ಲಿ ಪ್ರಜನನಾಂಗಗಳ ಕ್ಯಾನ್ಸರ್ ಉದ್ಭವಿಸುವ ಸಾಧ್ಯತೆಗಳು ಇರುವುದನ್ನು ವೈದ್ಯಕೀಯ ಸಂಶೋಧಕರು ಅನೇಕ ವರ್ಷಗಳ ಹಿಂದೆಯೇ ಪತ್ತೆಹಚ್ಚಿದ್ದಾರೆ. ಈ ರೀತಿಯ ಸಮಸ್ಯೆಗಳಿಗೆ ಸ್ತ್ರೀಯರಿಗಿಂತಲೂ ಪುರುಷರು ಗುರಿಯಾಗುವ ಸಾಧ್ಯತೆಗಳು ಹೆಚ್ಚಿದ್ದು, ಚರ್ಮ, ಮೂಗು ಮತ್ತು ಕಲುಷಿತ ಆಹಾರಗಳ ಮೂಲಕ ಶರೀರವನ್ನು ಪ್ರವೇಶಿಸಿದ ಅಪಾಯಕಾರಿ ರಾಸಾಯನಿಕಗಳು, ವೃಷಣಗಳ ಕುಗ್ಗುವಿಕೆ ಹಾಗೂ ಶುಕ್ಲಗ್ರಂಥಿ,ವೀರ್ಯನಾಳಗಳು ಮತ್ತು ಶಿಶ್ನಗಳಿಗೆ ಹಾನಿ ಉಂಟುಮಾಡುವುದನ್ನು ಪ್ರಾಣಿಗಳ ಮೇಲೆ ನಡೆಸಿದ್ದ ಪ್ರಯೋಗಗಳು ಸಾಬೀತುಪಡಿಸಿವೆ. 

ಇತ್ತೀಚಿಗೆ ಲಂಡನ್ ನಲ್ಲಿ ನಡೆಸಿದ್ದ ಅಧ್ಯಯನವೊಂದರ ವರದಿಯಂತೆ ಪ್ರತಿನಿತ್ಯ ಲಿಪ್ ಸ್ಟಿಕ್, ಫೌಂಡೆಶನ್ , ಬಾಡಿಲೋಶನ್, ಮಾಸ್ಕಾರಾ ಗಳಂತಹ ಹಲವಾರು ಸೌಂದರ್ಯವರ್ಧಕಗಳನ್ನು ಬಳಸುವ ಮಹಿಳೆಯರು, ಸುಮಾರು ೫೧೫ ವಿಧದ ರಾಸಾಯನಿಕಗಳಿಗೆ ತಮ್ಮ ಶರೀರವನ್ನು ಒಡ್ಡಿಕೊಳ್ಳುತ್ತಾರೆ ಎಂದು ತಿಳಿದುಬಂದಿದೆ. ದುರ್ಗಂಧ ನಿವಾರಕಗಳನ್ನು ತಯಾರಿಸುವ ವಿಶ್ವವಿಖ್ಯಾತ ಸಂಸ್ಥೆಯೊಂದು ನಡೆಸಿದ್ದ ಈ ಅಧ್ಯಯನದಂತೆ, ಬಹುತೇಕ ಯುವತಿಯರು ಪ್ರತಿನಿತ್ಯ ಕನಿಷ್ಠ ೧೩ ವಿಧದ ಕಾಂತಿವರ್ಧಕಗಳನ್ನು ಬಳಸುತ್ತಿದ್ದು, ಇವುಗಳಲ್ಲಿ ಕನಿಷ್ಠ ೨೦ ವಿಧದ ರಾಸಾಯನಿಕಗಳು ಇರುತ್ತವೆ. 

ಕೆಲವು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ನೂರಾರು ವಿಧದ ರಾಸಾಯನಿಕಗಳ ಸಮ್ಮಿಶ್ರಣವಿದ್ದು, ಇವುಗಳಲ್ಲಿ ಪರಿಮಳಕಾರಕ ದ್ರವ್ಯಗಳು ಅಗ್ರಸ್ಥಾನದಲ್ಲಿವೆ. ಜಗತ್ಪ್ರಸಿದ್ಧ ಸುಗಂಧ ದ್ರವ್ಯವೊಂದರಲ್ಲಿ ಸುಮಾರು ೪೦೦ ವಿಧದ ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಅದೇ ರೀತಿಯಲ್ಲಿ ಲಿಪ್ ಸ್ಟಿಕ್ ಗಳ ತಯಾರಿಕೆಯಲ್ಲಿ ೩೩, ಬಾಡಿ ಲೋಶನ್ ಗಳಲ್ಲಿ ೩೨, ಕಣ್ಣಿನ ರೆಪ್ಪೆಗಳ ಮೇಲೆ ಬಳಿಯುವ ಮಾಸ್ಕಾರಾ ಗಳಲ್ಲಿ ೨೯, ಮುಖಕ್ಕೆ ಲೇಪಿಸುವ ಫೌಂಡೆಶನ್ ಗಳಲ್ಲಿ ೨೪, ಮಾಯ್ಶ್ಚರೈಸರ್ ಗಳಲ್ಲಿ ೧೧, ಮತ್ತು ನೈಲ್ ಪಾಲಿಶ್ ಗಳಲ್ಲಿ ೩೧ ವಿಧದ ರಾಸಾಯನಿಕಗಳನ್ನು ಬಳಸಲಾಗುತ್ತಿದೆ!. ಹಾಗೂ ಇವುಗಳಲ್ಲಿ ಯಾವುದನ್ನೂ ಸುರಕ್ಷಿತ ಎನ್ನುವಂತಿಲ್ಲ. 

ಅನುಭವಿ ಚರ್ಮರೋಗ ತಜ್ಞರ ಅಭಿಪ್ರಾಯದಂತೆ ಕಾಂತಿವರ್ಧಕಗಳನ್ನು ಬಳಸುವ ಶೇ. ೪ ರಿಂದ ೫ ರಷ್ಟು ಜನರಲ್ಲಿ ಅಲರ್ಜಿ ಮತ್ತಿತರ ಪ್ರತಿಕೂಲ ಪರಿಣಾಮಗಳು ಕಂಡುಬರುತ್ತವೆ. ಇವುಗಳಲ್ಲಿ ಅತ್ಯಧಿಕ ಸಂಖ್ಯೆಯ ಪ್ರಕರಣಗಳಿಗೆ, ಕೂದಲಿಗೆ ಬಳಿಯುವ ಬಣ್ಣಗಳು ಮತ್ತು ಹೇರ್ ಡೈ  ಗಳೇ ಕಾರಣವಾಗಿರುತ್ತವೆ. 

ಅನೇಕ ಜನರು ಸುರಕ್ಷಿತ ಹಾಗೂ ನಿರಪಾಯಕಾರಿ ಎಂದು ನಂಬಿರುವ ಕಾಂತಿವರ್ಧಕಗಳಲ್ಲಿರುವ ಕೆಲವು ರಾಸಾಯನಿಕಗಳು ನಿಮ್ಮ ಶರೀರಕ್ಕೆ ಒಗ್ಗದೇ ಇದ್ದಲ್ಲಿ, "ಅನಾಫೈಲಾಕ್ಸಿಸ್ " ಎನ್ನುವ ತೀವ್ರ ಸ್ವರೂಪದ ಪ್ರತಿಕ್ರಿಯೆ ಉದ್ಭವಿಸುವ ಸಾಧ್ಯತೆಗಳಿವೆ. ಅತ್ಯಂತ ಅಪರೂಪದಲ್ಲಿ ಕಂಡುಬರುವ ಇಂತಹ ಪ್ರಕರಣದಲ್ಲಿ ತಲೆಗೂದಲನ್ನು ಬ್ಲೀಚ್ ಮಾಡಲು ಬಳಸುವ ಅಮೋನಿಯಂ ಪರ್ ಸಲ್ಫೇಟ್ ಮತ್ತು ಶರೀರದ ಮೇಲೆ ತಾತ್ಕಾಲಿಕವಾಗಿ ಹಾಕುವ "ಹಚ್ಚೆ" ಗಳಲ್ಲಿ ಬಳಸುವ ಬಣ್ಣಗಳು ಮತ್ತು ಸಂರಕ್ಷಕ ದ್ರವ್ಯಗಳು ಕಾರಣವೆನಿಸುತ್ತವೆ. ಆದರೆ ಇಂತಹ ಅನಪೇಕ್ಷಿತ ಪ್ರತಿಕೂಲ ಪರಿಣಾಮಗಳನ್ನು ಪತ್ತೆ ಹಚ್ಚಲು "ಪ್ಯಾಚ್ ಟೆಸ್ಟ್' ಎನ್ನುವ ಪರೀಕ್ಷಾ ವಿಧಾನವು ಲಭ್ಯವಿದೆ. ಈ ಪರೀಕ್ಷೆಯ ಕಿಟ್ ಗಳು ಮತ್ತು ಇದೆ ರೀತಿಯ ಬೇರೊಂದು ಪರೀಕ್ಷೆಯಲ್ಲಿ ಬಳಸುವ ಕಾಸ್ಮೆಟಿಕ್ ಟ್ರೇ ಗಳು ಭಾರತದಲ್ಲೂ ಲಭ್ಯವಿದೆ. ಆದರೆ ಕೆಲವು ಉತ್ಪನ್ನಗಳಲ್ಲಿ ಒಂದಕ್ಕೂ ಹೆಚ್ಚುವಿಧದ ರಾಸಾಯನಿಕಗಳನ್ನು ಬಳಸುವುದರಿಂದ, ಇಂತಹ ಪರೀಕ್ಷೆಗಳನ್ನು ಪ್ರಯೋಗಿಸುವುದಕ್ಕೂ ಮುನ್ನ ಚರ್ಮರೋಗ ತಜ್ಞರ ಸಲಹೆ ಪಡೆಯುವುದು ಹಿತಕರ. ಇದಲ್ಲದೆ ಭಾರತದಲ್ಲಿ ಮಾರಾಟವಾಗುತ್ತಿರುವ ಅನೇಕ ಉತ್ಪನ್ನಗಳ ಹೊರಕವಚಗಳ ಮೇಲೆ ಇವುಗಳಲ್ಲಿರುವ ರಾಸಾಯನಿಕಗಳ ಸಂಪೂರ್ಣ ವಿವರಗಳನ್ನು ಮುದ್ರಿಸದೇ ಇರುವುದರಿಂದ ಹಾಗೂ ನಮ್ಮ ದೇಶದಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿರುವ ನಕಲಿ ಉತ್ಪನ್ನಗಳಿಂದಾಗಿ, ಕೆಲ ಸಂದರ್ಭಗಳಲ್ಲಿ ಪ್ಯಾಚ್ ಟೆಸ್ಟ್ ನಿಷ್ಪ್ರಯೋಜಕ ಎನಿಸಬಹುದು. 

ಅಂತಿಮವಾಗಿ ಹೇಳುವುದಾದಲ್ಲಿ ನಿಮ್ಮ ತಲೆಗೂದಲಿನಿಂದ ಆರಂಭಿಸಿ ಕಾಲಿನ ಉಗುರಿನ ತನಕ, ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಉಪಯೋಗಿಸುವ ಅಸಂಖ್ಯ ಉತ್ಪನ್ನಗಳನ್ನು ಖರೀದಿಸಿ ಬಳಸುವ ಮುನ್ನ, ಇವುಗಳಲ್ಲಿರುವ ರಾಸಾಯನಿಕಗಳ ಬಗ್ಗೆ ಮತ್ತು ಇವುಗಳ ಬಳಕೆಯಿಂದ ಉದ್ಭವಿಸಬಲ್ಲ ಆರೋಗ್ಯದ ಸಮಸ್ಯೆಗಳ ಬಗ್ಗೆ ಅರಿತುಕೊಳ್ಳುವುದು ಹಿತಕರವೆನಿಸೀತು. ಇದಕ್ಕೂ ಮಿಗಿಲಾಗಿ ಸೌಂದರ್ಯವರ್ಧಕಗಳ ಬಳಕೆಯನ್ನೇ ತ್ಯಜಿಸುವುದು ನಿಸ್ಸಂದೇಹವಾಗಿಯೂ ಆರೋಗ್ಯಕರವೆನಿಸೀತು!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 


ಉದಯವಾಣಿ ಪತ್ರಿಕೆಯ ೦೭-೦೧-೨೦೦೯ ರ ಅಂಕಣದಲ್ಲಿ ಪ್ರಕಟಿತ ಲೇಖನ 

Friday, October 11, 2013

Save oil campaign






  " ಇಂಧನವನ್ನು ಉಳಿಸಿ"  ಅಭಿಯಾನವನ್ನು ಬೆಂಬಲಿಸಿ 

  ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ವೀರಪ್ಪ ಮೊಯಿಲಿಯವರು ವಾರದಲ್ಲಿ ಒಂದು ದಿನ ತಮ್ಮ ಕಚೇರಿಗೆ ಹೋಗಿಬರಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವುದಾಗಿ ಇತ್ತೀಚಿಗೆ ಘೋಷಿಸಿದ್ದರು. ತಮ್ಮ ಸಚಿವಾಲಯದ ಅಧಿಕಾರಿ- ಸಿಬಂದಿಗಳೂ ಇದನ್ನು ಪರಿಪಾಲಿಸುವುದಾಗಿಯೂ ಹೇಳಿದ್ದರು. ಅಂತೆಯೇ ಬುಧವಾರದಂದು ಸಚಿವರು ದೆಹಲಿ ಮೆಟ್ರೋ ರೈಲಿನಲ್ಲಿ ಪಯಣಿಸಿದರೆ, ಇಬ್ಬರು ಹಿರಿಯ ಅಧಿಕಾರಿಗಳು ಸೈಕಲ್ ತುಳಿದು ತಮ್ಮ ಕಚೇರಿಗಳಿಗೆ ಆಗಮಿಸಿದ್ದರು. ಸಚಿವಾಲಯದ ೨೦೦ ಕ್ಕೂ ಅಧಿಕ ಸಿಬಂದಿಗಳು ಮೆಟ್ರೋ, ಬಸ್ ಮತ್ತು ಒಂದು ಕಾರಿನಲ್ಲಿ ಹಲವರು ಪ್ರಯಾಣಿಸುವ ಮೂಲಕ ಇಂಧನ ಉಳಿತಾಯದ ಅಭಿಯಾನಕ್ಕೆ ಬೆಂಬಲವನ್ನು ನೀಡಿದ್ದರು. ಸಚಿವರ ಹೇಳಿಕೆಯಂತೆ ಇದರಿಂದ ಸುಮಾರು ೬೦೦ ಲೀಟರ್ ಇಂಧನ ಉಳಿತಾಯವಾಗಲಿದೆ. ಭಾರತವು ಉತ್ಪಾದಿಸುತ್ತಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಇಂಧನವನ್ನು ಬಳಸುತ್ತಿರುವುದರಿಂದ, ಇದನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಹಾಗೂ ಇದಕ್ಕಾಗಿ ಸಾಕಷ್ಟು ವಿದೇಶಿ ವಿನಿಮಯ ವಿನಿಯೋಗವಾಗುತ್ತಿದೆ. ಈ ಮೊತ್ತದಲ್ಲಿ ಕನಿಷ್ಠ ಐದು ಬಿಲಿಯನ್ ಡಾಲರ್ ಗಳನ್ನು ಉಳಿಸುವ ನಿಟ್ಟಿನಲ್ಲಿ ಇಂಧನ ಸಚಿವರ ಉಪಕ್ರಮ ಯಶಸ್ವಿಯಾಗುವುದೇ ಎನ್ನುವುದನ್ನು ಕಾದು ನೋಡಬೇಕಷ್ಟೇ!. 

ಆದರೆ ಸಚಿವರ ಇಂಧನ ಉಳಿತಾಯದ ಉಪಕ್ರಮವು ಪರೋಕ್ಷವಾಗಿ ದೇಶದ ಜನತೆಯನ್ನು ಪೀಡಿಸುತ್ತಿರುವ ಪರಿಸರ ಪ್ರದೂಷಣೆ ಹಾಗೂ ತತ್ಪರಿಣಾಮವಾಗಿ ಸಂಭವಿಸುವ ವೈವಿಧ್ಯಮಯ ಆರೋಗ್ಯದ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಉಪಯುಕ್ತವೆನಿಸಲಿದೆ. ಇಂಧನ ಸಚಿವರ ಅಭಿಯಾನವನ್ನು ಕೇಂದ್ರ ಮತ್ತು ಎಲ್ಲ ರಾಜ್ಯ ಸರಕಾರಗಳು ಕಟ್ಟುನಿಟ್ಟಾಗಿ ಅನುಕರಿಸಿದಲ್ಲಿ, ದೇಶದ ಜನರ ಆರೋಗ್ಯದ ಮಟ್ಟ, ಉತ್ಪಾದನೆಯ ಪ್ರಮಾಣಗಳು ಹೆಚ್ಚುವುದರೊಂದಿಗೆ,ಸರಕಾರವು ಕಚ್ಚಾ ತೈಲವನ್ನು ಆಮದುಮಾಡಲು ವ್ಯಯಿಸುತ್ತಿರುವ ಅಮೂಲ್ಯವಾದ ವಿದೇಶಿ ವಿನಿಮಯವಲ್ಲದೇ ಪರಿಸರದ ಮೇಲೆ ವಾಹನಗಳ ಧೂಮವು ಬೀರುತ್ತಿರುವ ದುಷ್ಪರಿಣಾಮದ ಪ್ರಮಾಣವೂ ಕಡಿಮೆಯಾಗಲಿದೆ.

ವಾಯುಮಾಲಿನ್ಯ 

ಭಾರತದ ಮಹಾನಗರಗಳನ್ನು ಜ್ಞಾಪಿಸಿದೊಡನೆ ಕಿಕ್ಕಿರಿದ ಜನ- ವಾಹನಸಂದಣಿಗಳೊಂದಿಗೆ, ವಾಯುಮಾಲಿನ್ಯದ ನೆನಪಾಗುವುದು ಸ್ವಾಭಾವಿಕ. ಕೆಲವರ್ಷಗಳಿಂದ ಮಹಾನಗರಗಳಿಗೆ ಸೀಮಿತವಾಗಿದ್ದ ಈ ಸಮಸ್ಯೆಯು ಇದೀಗ ಸಾಂಕ್ರಾಮಿಕ ರೋಗಗಳಂತೆಯೇ, ದೇಶದ ಇತರ ನಗರ ಮತ್ತು ಪಟ್ಟಣಗಳಿಗೂ ಹರಡಲು ಆರಂಭಿಸಿದೆ. ತತ್ಪರಿಣಾಮವಾಗಿ ಈ ವಾಹನಗಳು ಉಗುಳುವ ಅಗಾಧಪ್ರಮಾಣದ ಹೊಗೆಯಿಂದಾಗಿ ಹೆಚ್ಚುತ್ತಿರುವ ವಾಯುಮಾಲಿನ್ಯದಿಂದಾಗಿ, ಅನೇಕ ವಿಧದ ಗಂಭೀರ- ಮಾರಕ ವ್ಯಾಧಿಗಳ ಸಂಭಾವ್ಯತೆಗಳೂ ಹೆಚ್ಚುತ್ತಿವೆ. 

ಮನುಷ್ಯನು ಆರೋಗ್ಯದಿಂದ ಬದುಕಲು ಅತ್ಯವಶ್ಯಕವೆನಿಸುವ ಶುದ್ಧವಾದ ಗಾಳಿಯನ್ನು ಉಸಿರಾಡಲು, ದೇಶದ ಮಹಾನಗರಗಳಲ್ಲಿ ಆಸ್ಪದವೇ ಇಲ್ಲದಂತಾಗಿದೆ. ನಿರಂತರವಾಗಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುತ್ತಲೇ ಇರುವ ವಾಹನಗಳ ಸಂಖ್ಯೆಯೇ ಇದಕ್ಕೆ ಪ್ರಮುಖ ಕಾರಣವೆನಿಸಿದೆ. ವಾಹನಗಳು ಉಗುಳುವ ಹೊಗೆಯಲ್ಲಿ ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೊನೊಕ್ಸೈಡ್, ಸಲ್ಫರ್ ಡೈ ಆಕ್ಸೈಡ್, ಆಕ್ಸೈಡ್ ಆಫ್ ನೈಟ್ರೋಜೆನ್ ಇತ್ಯಾದಿ ಹಸಿರುಮನೆ ಅನಿಲಗಳು ಗಣನೀಯ ಪ್ರಮಾಣದಲ್ಲಿ ಇರುತ್ತವೆ. 

ಅನಾರೋಗ್ಯಕ್ಕೆ ಮೂಲ 

ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಎನಿಸುವ ಈ ಹಸಿರುಮನೆ ಅನಿಲಗಳ ಸೇವನೆಯಿಂದ ಕಣ್ಣುಗಳಲ್ಲಿ ಉರಿ, ತಲೆನೋವು, ವಾಕರಿಕೆ, ಶ್ವಾಸಾಂಗಗಳ ಕಾಯಿಲೆಗಳು, ಶ್ವಾಸಕೋಶಗಳ ಉರಿಯೂತ, ಅಸ್ತಮಾ, ಅಲರ್ಜಿ, ಕೆಮ್ಮು, ಶೀತ, ಹೃದ್ರೋಗಗಳು ಉಲ್ಬಣಿಸುವುದು ಹಾಗೂ ಕೆಲವಿಧದ ಕ್ಯಾನ್ಸರ್ ಮತ್ತಿತರ ಕಾಯಿಲೆಗಳು ಸಾಧ್ಯತೆಗಳಿವೆ. ಅನಾರೋಗ್ಯಪೀಡಿತ ವ್ಯಕ್ತಿಗಳು ದುಡಿಯಲು ಆಗದಿರುವುದರಿಂದ ದೇಶದ ಉತ್ಪಾದನಾ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಜೊತೆಗೆ ತಮ್ಮ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪಡೆದುಕೊಳ್ಳುವ ಚಿಕಿತ್ಸೆಗಾಗಿ ಸಾಕಷ್ಟು ಹಣವನ್ನು ವಿನಿಯೋಗಿಸುವುದರಿಂದ, ಜನಸಾಮಾನ್ಯರಿಗೆ ಆರ್ಥಿಕ ಮುಗ್ಗಟ್ಟು ಬಾಧಿಸುವ ಸಾಧ್ಯತೆಗಳಿವೆ. ಈ ರೀತಿಯಲ್ಲಿ ದೇಶದ ಪ್ರಜೆಗಳಿಗೆ ಸಮಸ್ಯೆಗಳ ಸರಮಾಲೆಯೇ ಬಾಧಿಸುವುದರಿಂದ, ದೇಶದ ಅಭಿವೃದ್ಧಿಗೆ ಸ್ವಾಭಾವಿಕವಾಗಿಯೇ ತೊಡಕಾಗಿ ಪರಿಣಮಿಸಲಿದೆ. ಸರಕಾರಕ್ಕೆ ಈ ಸಮಸ್ಯೆಯನ್ನು ಪರಿಹರಿಸಬೇಕೆನ್ನುವ ಇಚ್ಛಾಶಕ್ತಿ ಇದ್ದಲ್ಲಿ ಹಾಗೂ ಜನಸಾಮಾನ್ಯರು ಇದಕ್ಕೆ ಕೈಜೋಡಿಸಿದಲ್ಲಿ, ಇದನ್ನು ಪರಿಹರಿಸುವುದು ಅಸಾಧ್ಯವೇನಲ್ಲ. 

ಪರಿಹಾರ 

 ದೇಶದ ಪ್ರತಿಯೊಬ್ಬ ಪ್ರಜೆಯ ಆರೋಗ್ಯಕ್ಕೆ ಅಪಾಯಕಾರಿಯಾಗಿ  ಪರಿಣಮಿಸುತ್ತಿರುವ ಈ ಸಮಸ್ಯೆಯನ್ನು ಪರಿಹರಿಸಲು,ಹೆಚ್ಚುತ್ತಿರುವ ದೇಶದ ಜನಸಂಖ್ಯೆಯೊಂದಿಗೆ ವಾಹನಗಳ ಸಂಖ್ಯೆಯನ್ನೂ ನಿಯಂತ್ರಿಸಲೇಬೇಕು. ಜೊತೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕು. ೧೫ ವರ್ಷಗಳಿಗೂ ಹಳೆಯ ಸಾರಿಗೆ ವಾಹನಗಳನ್ನು ಬಳಸದಂತೆ ಕಾನೂನನ್ನು ರೂಪಿಸಬೇಕು. ಸಾರಿಗೆ ವಾಹನಗಳಿಗೆ ಎಲ್. ಎನ್. ಜಿ ಮತ್ತು ಚತುಷ್ಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ಎಲ್. ಪಿ. ಜಿ ಅನಿಲಗಳನ್ನು ಬಳಸಲು ಅವಶ್ಯಕ ಕ್ರಮ ಕೈಗೊಳ್ಳಬೇಕು. ಜೊತೆಗೆ ಬ್ಯಾಟರಿ ಚಾಲಿತ ಪುಟ್ಟ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು, ಇವುಗಳ ಮೇಲೆ ವಿಧಿಸುವ ತೆರಿಗೆಗಳಲ್ಲಿ ಸಾಕಷ್ಟು ವಿನಾಯತಿ ನೀಡಬೇಕು. ಇವೆಲ್ಲಕ್ಕೂ ಮಿಗಿಲಾಗಿ ರಾಜಕಾರಣಿಗಳು ಮತ್ತು ಶ್ರೀಮಂತರು ಬಳಸುವ ದುಬಾರಿಬೆಲೆಯ ವಿಲಾಸಿ ಕಾರುಗಳ ತಯಾರಿಕೆ ಮತ್ತು ಮಾರಾಟಗಳನ್ನು ನಿಯಂತ್ರಿಸಲೇಬೇಕು. ಇಂತಹ ವಾಹನಗಳು ಸಾರ್ವಜನಿಕ ಸಾರಿಗೆ ವಾಹನಗಳಿಗೆ ನೀಡುವ ರಿಯಾಯತಿ ದರದ ಡೀಸೆಲ್ ಬಳಸದಂತೆ ಕಾನೂನನ್ನು ರೂಪಿಸಬೇಕು.ಇದರೊಂದಿಗೆ ಪಾದಚಾರಿಗಳು ನಿರಾತಂಕವಾಗಿ ನಡೆದಾಡಲು ಉತ್ತಮವಾದ ಕಾಲುದಾರಿಗಳನ್ನು ನಿರ್ಮಿಸಬೇಕು. ಜೊತೆಗೆ ಜನರು ಸೈಕಲ್ ಗಳನ್ನು ಬಳಸುವುದನ್ನು ಪ್ರೋತ್ಸಾಹಿಸಲು, ಪ್ರತಿಯೊಂದು ನಗರ- ಪಟ್ಟಣಗಳಲ್ಲಿ ಅತ್ಯಲ್ಪ ಶುಲ್ಕದಲ್ಲಿ ಸೈಕಲ್ ಒದಗಿಸುವ ಹಲವಾರು ಕೇಂದ್ರಗಳನ್ನು ಸ್ಥಾಪಿಸಬೇಕು. ಅಂತೆಯೇ ಸೈಕಲ್ ಸವಾರರಿಗಾಗಿ ರಸ್ತೆಯಲ್ಲಿ ಪ್ರತ್ಯೇಕ ಪಥವನ್ನು ಒದಗಿಸಬೇಕು. 

 ಈ ರೀತಿಯ ಉಪಯುಕ್ತ ಹಾಗೂ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ, ವಾಹನಗಳಿಂದ ಸಂಭವಿಸುತ್ತಿರುವ ವಾಯುಮಾಲಿನ್ಯ ಮತ್ತು ತತ್ಪರಿಣಾಮವಾಗಿ ಉದ್ಭವಿಸುತ್ತಿರುವ ಆರೋಗ್ಯದ ಸಮಸ್ಯೆಗಳು ನಿಶ್ಚಿತವಾಗಿಯೂ ದೇಶದ ಪ್ರಗತಿಗೆ ಕಂಟಕಪ್ರಾಯವಾಗಿ ಪರಿಣಮಿಸಲಿದೆ. 

ಪ್ರಸ್ತುತ ಕೇಂದ್ರದ ಇಂಧನ ಸಚಿವರು ಆರಂಭಿಸಿರುವ ಇಂಧನವನ್ನು ಉಳಿಸಿ ಅಭಿಯಾನದಲ್ಲಿ ಮೇಲೆ ನಮೂದಿಸಿದ ವಿಚಾರಗಳನ್ನು ಅಳವಡಿಸಿಕೊಂಡಲ್ಲಿ, ಇದು ಇನ್ನಷ್ಟು ಪರಿಣಾಮಕಾರಿಯಾಗುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು  


Wednesday, October 9, 2013

MLA-MP'S offices under RTI?




   ಶಾಸಕರ- ಸಂಸದರ ಕಚೇರಿಗಳು ಮಾಹಿತಿ ಹಕ್ಕಿನ ವ್ಯಾಪ್ತಿಗೆ?

  ತಾವೇ ಚುನಾಯಿಸಿ ಕಳುಹಿಸಿರುವ ಶಾಸಕರು- ಸಂಸದರಿಗೆ ತಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ದೂರು ನೀಡುವ ಪ್ರಜೆಗಳು, ಇದೀಗ ತಮ್ಮ ದೂರಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಹಾಗೆಯೇ ಶಾಸಕರ- ಸಂಸದರ ಸ್ತಳೀಯ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಯಾವ ಉದ್ದೇಶಗಳಿಗಾಗಿ ಹಾಗೂ ಎಲ್ಲಿ ಬಳಸಲಾಗಿದೆ ಇತ್ಯಾದಿ ಮಾಹಿತಿಗಳನ್ನು ಪಡೆದುಕೊಳ್ಳುವುದು ಸುಲಭವೂ ಹೌದು. 
------------              --------------                       -----------------                      ------------------                -------------------               -----

ರಾಜ್ಯದ- ದೇಶದ ಪ್ರಜೆಗಳು ಚುನಾಯಿಸಿದ ಶಾಸಕರು- ಸಂಸದರ ಕಚೇರಿಗಳು ಮಾಹಿತಿ ಪಡೆಯುವ ಹಕ್ಕು ಅಧಿನಿಯಮ ೨೦೦೫ ರ ಕಲಂ (೧) (ಎ)  ಮತ್ತು ೪ (೧) (ಬಿ ) ಗಳನ್ವಯ, ಈ ಕಾಯಿದೆಯ ವ್ಯಾಪ್ತಿಗೆ ಬರುತ್ತವೆಯೇ?, ಎನ್ನುವ ಪ್ರಶ್ನೆಗೆ ಉತ್ತರವನ್ನು ನೀಡಲು ರಾಜ್ಯ ಸರಕಾರದ ಇಲಾಖೆಯೊಂದು ೯ ತಿಂಗಳುಗಳ ಕಾಲಾವಧಿಯನ್ನು ಬಳಸಿದೆ. ಮಾಹಿತಿ ಹಕ್ಕು ಕಾಯಿದೆಯನ್ವಯ ಈ ನಿರ್ದಿಷ್ಟ ಮಾಹಿತಿಯನ್ನು ಕೋರಿದ್ದ ಪುತ್ತೂರಿನ ಬಳಕೆದಾರರ ಹಿತರಕ್ಷಣಾ ವೇದಿಕೆಯ ದಿನೇಶ್ ಭಟ್ ಇವರು, ಅಪೇಕ್ಷಿತ ಮಾಹಿತಿ ನಿಗದಿತ ಅವಧಿಯಲ್ಲಿ ದೊರೆಯದ ಕಾರಣದಿಂದಾಗಿ ಕರ್ನಾಟಕ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಬೇಕಾಗಿ ಬಂದಿತ್ತು. 

ಸರಕಾರದ ಆಡಳಿತದಲ್ಲಿ ಪಾರದರ್ಶಕತೆಯನ್ನು ಜಾರಿಗೆ ತರುವ ಮೂಲಕ ದಕ್ಷತೆ ಮತ್ತು ಪ್ರಾಮಾಣಿಕತೆಗಳನ್ನು ಹೆಚ್ಚಿಸುವ ಸಲುವಾಗಿ ಅನುಷ್ಠಾನಗೊಂಡಿದ್ದ ಮಾ. ಹ. ಅ ೨೦೦೫, ಅಪೇಕ್ಷಿತ ಪರಿಣಾಮವನ್ನು ತೋರಲು ವಿಫಲವಾಗಿರಲು ಸರಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಔದಾಸೀನ್ಯತೆಗಳೇ ಕಾರಣವಾಗಿವೆ. ಅರ್ಜಿದಾರರು ಅಪೇಕ್ಷಿಸಿದ ಮಾಹಿತಿಯನ್ನು ನೀಡದಿರುವುದು, ನೀಡಲು ವಿಲಮ್ಬಿಸುವುದು ಹಾಗೂ ಯಾವುದೇ ಪ್ರತಿಕ್ರಿಯೆಯನ್ನೇ ತೋರದಿರುವ ಮೂಲಕ, ವಿವಿಧ ಸಾರ್ವಜನಿಕ ಪ್ರಾಧಿಕಾರಗಳ ಅಧಿಕಾರಿಗಳು ಈ ಕಾಯಿದೆಯ ಉದ್ದೇಶವನ್ನೇ ವಿಫಲಗೊಳಿಸುವ ಪ್ರಯತ್ನ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆದರೆ ಅನೇಕ ಸ್ವಯಂ ಸೇವಾ ಸಂಘಟನೆಗಳು ಮಾ. ಹ. ಅಧಿನಿಯಮದ ಬಗ್ಗೆ ಜನಸಾಮಾನ್ಯರಿಗೆ ಅವಶ್ಯಕ ಮಾಹಿತಿ, ಮಾರ್ಗದರ್ಶನ ಮತ್ತು ಬೆಂಬಲ ನೀಡುವ ಮೂಲಕ ಮತ್ತು ಅವಶ್ಯವೆನಿಸಿದಲ್ಲಿ ರಾಜ್ಯ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸುವ ಮೂಲಕ, ಜನರು ಅಪೇಕ್ಷಿಸುವ ಮಾಹಿತಿಗಳನ್ನು ಪಡೆದುಕೊಳ್ಳಲು ಸಫಲರಾಗುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಇಂತಹ ಸಂಘಟನೆಗಳ ಕಾರ್ಯಕರ್ತರೂ, ಅಪೇಕ್ಷಿತ ಮಾಹಿತಿಯನ್ನು ಪಡೆದುಕೊಳ್ಳಲು ಹರಸಾಹಸವನ್ನೇ ನಡೆಸಬೇಕಾಗುತ್ತದೆ. ಇಂತಹ ಪ್ರಕರಣವೊಂದು ಇಂತಿದೆ. 

ನಮ್ಮನ್ನಾಳುವ ಶಾಸಕರು- ಸಂಸದರ ಕಚೇರಿಗಳು ಮಾ. ಹ. ಅ. ಕಾಯಿದೆಯ ವ್ಯಾಪ್ತಿಗೆ ಒಳಪಡುತ್ತವೆಯೇ ಎಂದು ದಿನೇಶ್ ಭಟ್ ಇವರು ೨೦೦೮ ರ ಜುಲೈ ೨೮ ರಂದು ಸಾರ್ವಜನಿಕ ಮಾಹಿತಿ ಅಧಿಕಾರಿ, ಪ್ರಧಾನ ಕಾರ್ಯದರ್ಶಿಯವರ ಕಚೇರಿ, ಕರ್ನಾಟಕ ಸಿಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಮಾ. ಹ. ಅ . ೨೦೦೫ ರಂತೆ ನಿಗದಿತ ಶುಲ್ಕದೊಂದಿಗೆ ಅರ್ಜಿಯನ್ನು ಸಲ್ಲಿಸಿದ್ದರು. 

ಈ ಅರ್ಜಿಯಲ್ಲಿ ವಿಧಾನ ಸಭೆ ಮತ್ತು ಲೋಕಸಭೆಯ ಚುನಾಯಿತ ಜನಪ್ರತಿನಿಧಿಗಳಿಗೆ, ರಾಜ್ಯ- ಕೇಂದ್ರ ಸರಕಾರಗಳಿಂದ ಕಚೇರಿ ಸೌಲಭ್ಯ, ಆಪ್ತ ಸಹಾಯಕರು, ದೂರವಾಣಿ, ವಾಹನಗಳು, ಕಚೇರಿಯ ನಿರ್ವಹಣಾ ವೆಚ್ಚ ಇತ್ಯಾದಿಗಳನ್ನು ಒದಗಿಸುವುದರಿಂದ, ಈ ಕಚೇರಿಗಳಿಗೆ ಮಾ. ಹ. ಕಾಯಿದೆ ಅನ್ವಯವಾಗುವುದೇ ಹಾಗೂ ಅನ್ವಯವಾಗುವುದಾದಲ್ಲಿ ಅಪೇಕ್ಷಿತ ಮಾಹಿತಿ ಪಡೆಯಲು ಅರ್ಜಿಯನ್ನು ಯಾರಿಗೆ ಹಾಗೂ ಯಾವರೀತಿಯಲ್ಲಿ ಸಲ್ಲಿಸಬೇಕು, ಮತ್ತು ನಿಗದಿತ ಶುಲ್ಕವನ್ನು ಯಾರ ಹೆಸರಿನಲ್ಲಿ ಪಾವತಿಸಬೇಕು (ನಮೂದಿಸಬೇಕು) ಎನ್ನುವ ಮಾಹಿತಿಗಳನ್ನು ನೀಡಬೇಕಾಗಿ ಕೋರಿದ್ದರು. 

ಆದರೆ ನಿಗದಿತ ೩೦ ದಿನಗಳ ಅವಧಿಯಲ್ಲಿ ಸಂಬಂಧಿತ ಸಾರ್ವಜನಿಕ ಮಾಹಿತಿ ಅಧಿಕಾರಿಯು ಅಪೇಕ್ಷಿತ ಮಾಹಿತಿಯನ್ನು ನೀಡದ್ದರಿಂದ, ೨೦೦೮ ರ ಸೆಪ್ಟೆಂಬರ್ ೬ ರಂದು ರಾಜ್ಯ ಮಾಹಿತಿ ಆಯೋಗಕ್ಕೆ ಈ ಬಗ್ಗೆ ದೂರನ್ನು ನೀಡಿದ್ದರು. ೨೦೦೮ ರ ಸೆಪ್ಟೆಂಬರ್ ೧೮ ರಂದು ಈ ದೂರನ್ನು ವಿಚಾರಣೆಗೆ ಎತ್ತಿಕೊಂಡ ಆಯೋಗವು, ನಿಗದಿತ ಅವಧಿಯಲ್ಲಿ ಮಾಹಿತಿಯನ್ನು ನೀಡದ ಸಾ. ಮಾ. ಅಧಿಕಾರಿಗೆ ಯಾಕೆ ದಂಡವನ್ನು ವಿಧಿಸಬಾರದು ಎನ್ನುವ ಬಗ್ಗೆ ವಿವರಣೆ ನೀಡಲು ಮತ್ತು ೨೦೦೯ ರ ಜನವರಿ ೩೦ ರಂದು ಆಯೋಗದ ಮುಂದೆ ಹಾಜರಾಗುವಂತೆ ಮಧ್ಯಂತರ ಆದೇಶವನ್ನು ನೀಡಿತ್ತು. ಜೊತೆಗೆ ಈ ಮಾಹಿತಿಯನ್ನು ಬಹಿರಂಗಪಡಿಸಲು ಮಾ. ಹ. ಕಾಯಿದೆಯಲ್ಲಿ ವಿನಾಯತಿ ಹೊಂದಿಲ್ಲದಿದ್ದಲ್ಲಿ ಇದನ್ನು ತುರ್ತಾಗಿ ದಿನೇಶ್ ಭಟ್ ಇವರಿಗೆ ನೊಂದಾಯಿತ ಅಂಚೆಯ ಮೂಲಕ ಕಳುಹಿಸಿ, ಇದರ ಪ್ರತಿಯನ್ನು ಕಡ್ಡಾಯವಾಗಿ ಆಯೋಗಕ್ಕೆ ಕಳುಹಿಸುವಂತೆ ಆದೇಶಿಸಿತ್ತು. 

ಆದರೆ ಆಯೋಗದ ಆದೇಶದಂತೆ ಈ ಮಾಹಿತಿಯನ್ನು ನೀಡದ ಸಾ. ಮಾ. ಅಧಿಕಾರಿಯು ೨೦೦೯ ರ ಜನವರಿ ೩೦ ರಂದು ಆಯೋಗದ ಮುಂದೆ ವಿಚಾರಣೆಗೂ ಹಾಜರಾಗಿರಲಿಲ್ಲ. ಈ ಅಧಿಕಾರಿಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಆಯೋಗವು, ಈ ಅಧಿಕಾರಿಗೆ ಸೆಕ್ಷನ್ ೩೦ ಸಿ. ಪಿ. ಸಿ ಅನ್ವಯ ಸಮನ್ಸ್ ಜಾರಿಮಾಡಿ ೩೦ ದಿನಗಳ ಒಳಗಾಗಿ ಮಾಹಿತಿಯನ್ನು ಅರ್ಜಿದಾರರಿಗೆ ಉಚಿತವಾಗಿ ನೊಂದಾಯಿತ ಅಂಚೆಯ ಮೂಲಕ ರವಾನಿಸಿ, ಇದರ ಪ್ರತಿಯೊಂದನ್ನು ಆಯೋಗಕ್ಕೆ ಸಲ್ಲಿಸುವಂತೆ ಸೂಚಿಸಿತ್ತು. ಈ ಬಗ್ಗೆ ಸೂಕ್ತ ನಿರ್ದೇಶನವನ್ನು ನೀಡುವಂತೆ ಇವರ ಮೇಲಧಿಕಾರಿಗೆ ಮಾ. ಹ. ಅ. ಕಲಂ ೧೯ (೮) (ಎ) ಯಂತೆ ಆದೇಶಿಸಿತ್ತು. ಇದರೊಂದಿಗೆ ಕಲಂ ೧೮ (೩) (ಎ) ಅನ್ವಯ ಅರ್ಜಿದಾರರು ಕೋರಿರುವ ಮಾಹಿತಿಗೆ ಸಂಬಂಧಿಸಿದ ಕಡತಗಳೊಂದಿಗೆ ೨೦೦೯ ರ ಮೇ ೧೩ ರಂದು ಆಯೋಗದ ಮುಂದೆ ಖುದ್ದಾಗಿ ಹಾಜರಾಗುವಂತೆ ಸಾ. ಮಾ. ಅಧಿಕಾರಿಗೆ ಆದೇಶಿಸಿತ್ತು. 

ಅಂತಿಮವಾಗಿ ತುಕ್ಕು ಹಿಡಿದಿದ್ದ ಸರಕಾರೀ ಯಂತ್ರವು ಮತ್ತೆ ಚಲಿಸಲು ಆರಂಭಿಸಿತ್ತು. ತತ್ಪರಿಣಾಮವಾಗಿ ಸರಕಾರದ ಪ್ರಧಾನ ಕಾರ್ಯದರ್ಶಿ, ಸಿಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇವರು, ೨೦೦೯ ರ ಎಪ್ರಿಲ್ ೧೩ ರಂದು ದಿನೇಶ್ ಭಟ್ ಇವರು ಕೋರಿದ್ದ ಮಾಹಿತಿಯನ್ನು ಕಳುಹಿಸಿದ್ದರು. 

ಈ ಅಧಿಕಾರಿ ನೀಡಿರುವ ಮಾಹಿತಿಯಂತೆ ಮಾ. ಹ. ಕಾಯಿದೆಯ ಕಲಂ ೪ (೧) (ಎ) ಮತ್ತು ೪ (೧) (ಬಿ) ಗಳನ್ವಯ ವಿಧಾನಸಭೆಯ ಮತ್ತು ಲೋಕಸಭೆಯ ಚುನಾಯಿತ ಜನ ಪ್ರತಿನಿಧಿಗಳ ಕಚೇರಿಗಳು ಮಾ. ಹ. ಕಾಯಿದೆಗೆ ಒಳಪಡುತ್ತವೆ. ಅಪೇಕ್ಷಿತ ಮಾಹಿತಿಯನ್ನು ಪಡೆಯಲು ಜಿಲ್ಲಾಧಿಕಾರಿಗಳು ಅವರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿಧಾನಸಭೆಯ ಮತ್ತು ಲೋಕಸಭೆಯ ಚುನಾಯಿತ ಜನ ಪ್ರತಿನಿಧಿಗಳಿಗೆ,ಕಚೇರಿ ಸೌಲಭ್ಯ, ಆಪ್ತ ಸಹಾಯಕರ ಸೌಲಭ್ಯ ಇತ್ಯಾದಿಗಳನ್ನು ಒದಗಿಸುವುದರಿಂದ, ಸಂಬಂಧಿಸಿದ ಜಿಲ್ಲಾಧಿಕಾರಿಗಳ ಕಛೇರಿಗಳಲ್ಲಿ ನೇಮಿಸಿರುವ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಅಪೇಕ್ಷಿತ ಮಾಹಿತಿಯನ್ನು ಕೋರಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದಕ್ಕಾಗಿ ನಿಗದಿಸಿರುವ ಶುಲ್ಕವನ್ನು ಸಾ. ಮಾ. ಅಧಿಕಾರಿಗಳ ಹೆಸರಿನಲ್ಲಿ ಸಲ್ಲಿಸಬೇಕಾಗುತ್ತದೆ. 

ನಿಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಅಥವಾ ಅನ್ಯ ವ್ಯವಸ್ಥೆಗಳಿಗಾಗಿ ಶಾಸಕರ- ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ನೀಡಿರುವ ಅನುದಾನದ ಮತ್ತು ಇತರ ಮಾಹಿತಿಗಳನ್ನು ಪಡೆದುಕೊಳ್ಳಲು, ನೀವು ಇದೀಗ ಮಾಹಿತಿ ಪಡೆಯುವ ಹಕ್ಕು ಅಧಿನಿಯಮವನ್ನು ಬಳಸಿಕೊಳ್ಳಬಹುದಾಗಿದೆ. ಸರಕಾರವೇ ನೀಡಿರುವ ಈ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲರಾದಲ್ಲಿ, ಕೋಟ್ಯಂತರ ರೂಪಾಯಿಗಳ ವೆಚ್ಚದಲ್ಲಿ ಅನುಷ್ಠಾನಗೊಳ್ಳುವ ಯೋಜನೆಗಳಲ್ಲಿ ಭ್ರಷ್ಟಾಚಾರದ ಪೆಡಂಭೂತ ನುಸುಳಲಿದೆ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ೦೭-೦೫-೨೦೦೯ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 

Monday, October 7, 2013

Vitiligo- naagadosha?


      ತೊನ್ನು ಎನ್ನುವ ವ್ಯಾಧಿಗೆ ದೋಷ- ಶಾಪಗಳು ಕಾರಣವಲ್ಲ! 

  ಭಾರತದಲ್ಲಿ "ತೊನ್ನು" ಎನ್ನುವ ಚರ್ಮರೋಗಕ್ಕೆ ಪೂರ್ವಜನ್ಮದ ಶಾಪಗಳು, ನಾಗದೋಷ ಅಥವಾ ದೇವರ ಶಾಪವೇ ಕಾರಣವೆಂದು ವಿದ್ಯಾವಂತರೂ ಸೇರಿದಂತೆ ಅನೇಕರು ನಂಬುತ್ತಾರೆ. ತೊನ್ನು ಪ್ರತ್ಯಕ್ಷವಾದೊಡನೆ ಜ್ಯೋತಿಷಿಗಳ ಬಳಿಗೆ ಧಾವಿಸಿ, ತಮ್ಮನ್ನು ಬಾಧಿಸುತ್ತಿರುವ ದೋಷಗಳನ್ನು ಪತ್ತೆಹಚ್ಚಿದ ಬಳಿಕ, ಇವುಗಳ ಪರಿಹಾರಕ್ಕಾಗಿ ಶಾಸ್ತ್ರೋಕ್ತ ಪೂಜೆ- ಪುನಸ್ಕಾರಗಳನ್ನು ತಪ್ಪದೆ ಮಾಡಿಸುತ್ತಾರೆ. ಈ ಪ್ರಾಯಶ್ಚಿತಗಳು ಫಲಪ್ರದ ಎನಿಸುತ್ತಿಲ್ಲವೆಂದು ಮನವರಿಕೆಯಾದ ಬಳಿಕವೇ ಚರ್ಮರೋಗ ತಜ್ಞರ ಚಿಕಿತ್ಸೆಯನ್ನು ಪ್ರಯೋಗಿಸುತ್ತಾರೆ. ಆದರೆ ತೊನ್ನು ಆರಂಭವಾಗಿ ಅದಾಗಲೇ ಒಂದೆರಡು ವರ್ಷಗಳು ಕಳೆದು, ಶರೀರದ ವಿವಿಧ ಭಾಗಗಳಲ್ಲಿ ಮೂಡಿರುವ ಬಿಳಿಯ ಕಲೆಗಳು ಸಾಕಷ್ಟು ಬೆಳೆದಿರುವುದರಿಂದಾಗಿ, ವೈದ್ಯರ ಚಿಕಿತ್ಸೆಯು ಅಲ್ಪಾವಧಿಯಲ್ಲಿ ಅಪೇಕ್ಷಿತ ಪರಿಣಾಮವನ್ನು ತೋರದಿದ್ದಲ್ಲಿ ವೈದ್ಯರ ಚಿಕಿತ್ಸೆಯನ್ನೇ ನಿಲ್ಲಿಸುತ್ತಾರೆ!. 

ಲ್ಯುಕೋಡರ್ಮ 

ಸಹಸ್ರಾರು   ವರ್ಷಗಳ ಹಿಂದೆ ಆಯುರ್ವೇದ ಶಾಸ್ತ್ರದ ಸಂಹಿತೆಗಳಲ್ಲಿ "ಶ್ವೇತ ಕುಷ್ಠ " ಎನ್ನುವ ನಾಮಧೇಯದಿಂದ ಗುರುತಿಸಿದ್ದ ಹಾಗೂ ಆಡುಭಾಷೆಯಲ್ಲಿ ತೊನ್ನು ಎಂದು ಕರೆಯಲ್ಪಡುವ ಚರ್ಮರೋಗವು ನಿಜಕ್ಕೂ ಕುಷ್ಠರೋಗದ ಪ್ರಭೇದವಲ್ಲ. ವೈದ್ಯಕೀಯ ಪರಿಭಾಷೆಯಲ್ಲಿ "ವಿಟಿಲಿಗೊ" ಎಂದು ಕರೆಯಲ್ಪಡುವ ಈ ವ್ಯಾಧಿಪೀಡಿತರ ಶರೀರದ ಕೆಲಭಾಗಗಳಲ್ಲಿನ ಚರ್ಮವು ಬಿಳಿಯ ಬಣ್ಣಕ್ಕೆ ಬದಲಾಗುವುದರಿಂದ ಲ್ಯುಕೋಡರ್ಮ(ಲ್ಯುಕೋ= ಬಿಳಿ, ಡರ್ಮ= ಚರ್ಮ) ಎಂದೂ ಕರೆಯುತ್ತಾರೆ. 

ಅಟೋ ಇಮ್ಯೂನ್ ಡಿಸಾರ್ಡರ್ ಎನ್ನುವ, ನಮ್ಮ ಶರೀರದ ಸ್ವಾಭಾವಿಕ ರೋಗಪ್ರತಿರೋಧಕ ಪ್ರಕ್ರಿಯೆಗಳಲ್ಲಿ ಸಂಭವಿಸಬಲ್ಲ ವ್ಯತ್ಯಯಗಳಿಂದಾಗಿ ಮತ್ತು ಕೆಲ ಬಾಹ್ಯ ಕಾರಣಗಳಿಂದಾಗಿ ಈ ಸಮಸ್ಯೆ ಉದ್ಭವಿಸಬಲ್ಲದು. ವಿಶೇಷವೆಂದರೆ ಅಟೋ ಇಮ್ಯೂನ್ ಡಿಸಾರ್ಡರ್ ವರ್ಗಕ್ಕೆ ಸೇರಿರದ ಚಿಕುನ್ ಗುನ್ಯಾ ವ್ಯಾಧಿಪೀಡಿತರಲ್ಲಿ ಅಲ್ಪಪ್ರಮಾಣದ ರೋಗಿಗಳಲ್ಲೂ ತೊನ್ನು ಪ್ರತ್ಯಕ್ಷವಾಗಿರುವುದು ತಿಳಿದುಬಂದಿದೆ. 

ನಮ್ಮ ಶರೀರದ ಮೇಲೆ ಬ್ಯಾಕ್ಟೀರಿಯ-ವೈರಸ್ ಗಳಂತಹ ರೋಗಾಣುಗಳು ದಾಳಿಮಾಡಿದಾಗ ಹಾಗೂ ಇತರ ಕೆಲ ಸಂದರ್ಭಗಳಲ್ಲಿ, ಇವುಗಳ ವಿರುದ್ಧ ಹೋರಾಡಲು ನಮ್ಮ ಶರೀರವು ಉತ್ಪಾದಿಸುವ "ಪ್ರತಿಕಾಯ" (ಎಂಟಿಬಾಡಿ) ಗಳು, ಪ್ರಮಾದವಶಾತ್ ನಮ್ಮದೇ ದೇಹದ ಜೀವಕೋಶಗಳನ್ನು ನಾಶಪಡಿಸುವ ಸ್ಥಿತಿಯನ್ನು "ಅಟೋ ಇಮ್ಯೂನ್ ಡಿಸಾರ್ಡರ್" ಎಂದು ಕರೆಯುತ್ತಾರೆ. ಈ ಕಾರಣದಿಂದ ಉದ್ಬಹ್ವಿಸಬಲ್ಲ ಇತರ ಕೆಲವು ವ್ಯಾಧಿಗಳಿಂದ ಪೀಡಿತರಾದ ವ್ಯಕ್ತಿಗಳಲ್ಲೂ, ಕೆಲವೊಂದು ಸಂದರ್ಭಗಳಲ್ಲಿ ತೊನ್ನು ಪ್ರತ್ಯಕ್ಷವಾಗುವ ಸಾಧ್ಯತೆಗಳಿವೆ. 

ಮನುಷ್ಯನ ಚರ್ಮಕ್ಕೆ ಸ್ವಾಭಾವಿಕ ಬಣ್ಣವನ್ನು ನೀಡುವ "ಮೆಲನಿನ್ "ಎನ್ನುವ ವರ್ಣಕಾರಕ ದ್ರವ್ಯ (ಪಿಗ್ಮೆಂಟ್) ವನ್ನು ಚರ್ಮದಲ್ಲಿರುವ ಮೆಲನೊಸೈಟ್  ಎನ್ನುವ ಜೀವಕಣಗಳು ಉತ್ಪಾದಿಸುತ್ತವೆ. ಕಾರಣಾಂತರಗಳಿಂದ ನಮ್ಮ ಶರೀರವು ಉತ್ಪಾದಿಸುವ ಪ್ರತಿಕಾಯಗಳು ಈ ಮೆಲನೊಸೈಟ್ ಗಳನ್ನು ನಾಶಪಡಿಸುವುದರಿಂದ, ಶರೀರದ ಈ ಭಾಗದ ಚರ್ಮವು ಬಿಳಿಯ ಬಣ್ಣಕ್ಕೆ ಪರಿವರ್ತನೆಗೊಳ್ಳುತ್ತದೆ. ಇದಲ್ಲದೆ ರಬ್ಬರ್ ಮತ್ತು ಪ್ಲಾಸ್ಟಿಕ್ ಉದ್ಯಮಗಳಲ್ಲಿ ಬಳಸುವ ಕೆಲ ವಿಷಕಾರಕ ರಾಸಾಯನಿಕಗಳೂ ಮೆಲನೊಸೈಟ್ ಗಳನ್ನು ನಾಶಪಡಿಸಬಲ್ಲವು. 

ಈ ರೀತಿಯಲ್ಲಿ ಮೆಲನೊಸೈಟ್  ನಾಶವಾಗಿರುವ ಭಾಗದ ಚರ್ಮವು ಬಿಳಿಯಾಗುವುದನ್ನು ಹೊರತುಪಡಿಸಿ, ಇತರ ಯಾವುದೇ ಲಕ್ಷಣಗಳು ಅಥವಾ ತೊಂದರೆಗಳು ಈ ವ್ಯಾಧಿಪೀಡಿತರಲ್ಲಿ ಕಾಣಿಸುವುದಿಲ್ಲ.ಸಾಮಾನ್ಯವಾಗಿ ೧೦ ರಿಂದ ೪೦ ವರ್ಷ ವಯಸ್ಸಿನವರನ್ನು ಹೆಚ್ಚಾಗಿ ಬಾಧಿಸುವ ಈ ವ್ಯಾಧಿಯು, ಕೆಲವೊಮ್ಮೆ ಯಾವುದೇ ವಯಸ್ಸಿನವರನ್ನು ಬಾಧಿಸುವ ಸಾಧ್ಯತೆಗಳಿವೆ. ಶೇ. ೨೫ ರಷ್ಟು ವ್ಯಾಧಿಪೀಡಿತರಲ್ಲಿ ಇದು ಅನುವಂಶಿಕವಾಗಿ ಬಂದಿರುತ್ತದೆ. 

ಶರೀರದ ದ್ವಾರಗಳ (ಕಿವಿ,ಬಾಯಿ, ಮೂಗು, ಮೂತ್ರ ಮತ್ತು ಮಲದ್ವಾರಗಳ ಬಳಿ, ಕಂಕುಳು,ತೊಡೆಸಂದಿ, ಬೆರಳುಗಳು ಹಾಗೂ ಶರೀರದ ಇತರ ಕೆಲಭಾಗಗಳಲ್ಲಿ ಮೂಡುವ ಬಿಳಿಯ ಕಲೆಗಳು ಚಿಕಿತ್ಸೆ ಪಡೆಯದೇ ಅಥವಾ ಚಿಕಿತ್ಸೆಗೆ ಮಣಿಯದೆ ಸುದೀರ್ಘಕಾಲ ಉಳಿದುಕೊಂಡಲ್ಲಿ, ಕಲೆಗಳಿರುವ ಭಾಗದಲ್ಲಿನ ಕೂದಲುಗಳೂ ಬಿಳಿಯ ಬಣ್ಣವನ್ನು ತಾಳುತ್ತವೆ. 

ಚಿಕಿತ್ಸೆ 

ಲ್ಯುಕೊಡರ್ಮ ವ್ಯಾಧಿಯನ್ನು ಗುಣಪಡಿಸಬಲ್ಲ ವಿನೂತನ ಮತ್ತು ಪರಿಣಾಮಕಾರಿ ಚಿಕಿತ್ಸೆಗಳು ಇಂದು ಲಭ್ಯವಿವೆ. ಆದರೆ ರೋಗಿಯ ವಯಸ್ಸು, ಕಲೆಗಳು ಮೂಡಿರುವ ಶರೀರದ ಭಾಗ, ವ್ಯಾಧಿಯ ಅವಧಿ ಮತ್ತು ರೋಗಿಯಲ್ಲಿ ಇರಬಹುದಾದ ಇತರ ಗಂಭೀರ ಕಾಯಿಲೆಗಳಿಗೆ ಅನುಗುಣವಾಗಿ, ಚಿಕಿತ್ಸೆಯು ಸಫಲ ಅಥವಾ ವಿಫಲವೆನಿಸುವ ಸಾಧ್ಯತೆಗಳೂ ಇವೆ. 

ಸಾಮಾನ್ಯವಾಗಿ ಎಳೆಯ ವಯಸ್ಸಿನವರಲ್ಲಿ, ಕೂದಲುಗಳು ಇರುವ ಭಾಗದಲ್ಲಿ ಕಲೆಗಳು ಮೂದಿದ್ದಲ್ಲಿ ಮತ್ತು ಕಲೆಗಳು ಪ್ರತ್ಯಕ್ಷವಾದ ಕೆಲವೇ ದಿನಗಳಲ್ಲಿ ಚಿಕಿತ್ಸೆಯನ್ನು ಆರಂಭಿಸಿದಲ್ಲಿ ಇದು ಸಫಲವಾಗುತ್ತದೆ. ಮಧ್ಯವಯಸ್ಸು ದಾಟಿದ ವ್ಯಕ್ತಿಗಳಲ್ಲಿ ಹಾಗೂ ತುಟಿ,ಅಂಗೈ,ಅಂಗಾಲುಗಳಲ್ಲಿ ಮೂಡಿರುವ ಕಲೆಗಳು ಮತ್ತು ಕಲೆಗಳು ಮೂಡಿ ವರುಷಗಳೇ ಕಳೆದ ಬಳಿಕ ಪಡೆದುಕೊಳ್ಳುವ ಚಿಕಿತ್ಸೆಯು ವಿಫಲವೆನಿಸಬಹುದು. ಆದರೆ ಇಂತಹ ಸಂದರ್ಭಗಳಲ್ಲಿ "ಚರ್ಮ ಕಸಿ" ಯಂತಹ ಶಸ್ತ್ರ ಚಿಕಿತ್ಸಾ ವಿಧಾನಗಳು ಉಪಯುಕ್ತವೆನಿಸಬಹುದು. 

ಲ್ಯುಕೊಡರ್ಮ ದ ಚಿಕಿತ್ಸೆಯನ್ನು ಕನಿಷ್ಠ ೬ ತಿಂಗಳುಗಳಿಂದ ಹಿಡಿದು ಒಂದೆರಡು ವರ್ಷಗಳ ಕಾಲ ಪಡೆದುಕೊಳ್ಳಬೇಕಾಗುವುದು. 

ತಪ್ಪುಕಲ್ಪನೆಗಳು- ಮೂಢ ನಂಬಿಕೆಗಳು 

ತೊನ್ನು ಬಾಧಿಸಲು ನಾಗದೋಷವೇ ಮೂಲಕಾರಣ ಎನ್ನುವ ಮೂಢನಂಬಿಕೆಯ ಜೊತೆಗೆ ಜನಸಾಮಾನ್ಯರಲ್ಲಿ ಸಾಕಷ್ಟು ತಪ್ಪುಕಲ್ಪನೆಗಳೂ ಇವೆ. ಈ ವ್ಯಾದಿಗೆ ಸೂಕ್ತ ಚಿಕಿತ್ಸೆ ಇಲ್ಲದಿರುವುದು, ಕುಟುಂಬದ ಹೆಚ್ಚಿನ ಸದಸ್ಯರನ್ನು ಅನುವಂಶಿಕವಾಗಿ ಬಾಧಿಸುವುದು, ವ್ಯಾಧಿಪೀಡಿತರ ಸಂಪರ್ಕದಿಂದ ಇತರರಿಗೆ ಹರಡುವುದು ಮತ್ತು ರೋಗಿಯ ಶರೀರ ಸಂಪೂರ್ಣ ಬಿಳಿಯಾಗುವುದು  ಎನ್ನುವ ವಿಚಾರಗಳು ಇವುಗಳಲ್ಲಿ ಪ್ರಮುಖವಾಗಿವೆ. 

ವಿಶೇಷವೆಂದರೆ ಈ ವೈಜ್ಞಾನಿಕ ಯುಗದಲ್ಲೂ ಅಧಿಕತಮ ತೊನ್ನು ಪೀಡಿತ ವ್ಯಕ್ತಿಗಳು ತಜ್ಞವೈದ್ಯರ ಚಿಕಿತ್ಸೆಯನ್ನು ಪಡೆದುಕೊಳ್ಳುವುದರೊಂದಿಗೆ , ತಮ್ಮನ್ನು ಬಾಧಿಸುತ್ತಿರುವ ದೋಷ,ಶಾಪ ಅಥವಾ ಪಾಪಗಳ ನಿವಾರಣೆಗಾಗಿ ಮಂತ್ರ-ತಂತ್ರ ಅಥವಾ ಪೂಜೆ-ಪುನಸ್ಕಾರಗಳ ಮೊರೆಹೋಗುತ್ತಾರೆ!. 

ಸಮಸ್ಯೆಗಳು 

ಕೆಲವೇ ದಶಕಗಳ ಹಿಂದಿನ ತನಕ ತೊನ್ನುಪೀಡಿತ ವ್ಯಕ್ತಿಗಳು "ಸಾಮಾಜಿಕ ಮುಜುಗರ' ಕ್ಕೆ ಒಳಗಾಗುವುದನ್ನು ತಪ್ಪಿಸಲು ಯಾವುದೇ ಸಭೆ- ಸಮಾರಂಭಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಜೊತೆಗೆ ಈ ವ್ಯಾಧಿಯ "ಕಳಂಕ" ದಿಂದಾಗಿ ಇವರಿಗೆ ಉದ್ಯೋಗ ದೊರೆಯದಿರುವುದು, ವಿವಾಹ ಆಗದಿರುವುದು ಮತ್ತು ಸಾಮಾಜಿಕ ಸ್ಥಾನಮಾನಗಳಿಂದ ವಂಚಿತರಾಗುವುದು ಸಾಮಾನ್ಯವಾಗಿತ್ತು. ಇಂತಹ ಸಮಸ್ಯೆಗಳನ್ನು ಎದುರಿಸಲಾಗದೇ ಕೊರಗುತ್ತಿದ್ದ ವ್ಯಕ್ತಿಗಳು, ಯಾರೊಂದಿಗೂ ಬೇರೆಯದೇ ಏಕಾಂತಕ್ಕೆ ಶರಣಾಗಿ ಖಿನ್ನತೆಯಂತಹ ಮಾನಸಿಕ ವ್ಯಾಧಿಗಳಿಗೂ ಒಳಗಾಗುತ್ತಿದ್ದರು. 

ಆದರೆ ಇಂದು ಬದಲಾದ ಪರಿಸ್ಥಿತಿಯಲ್ಲಿ ಈ ವ್ಯಾಧಿಪೀಡಿತರನ್ನು ಅಸ್ಪ್ರಶ್ಯರಂತೆ ಕಾಣುವ ಅಥವಾ ಅಘೋಷಿತ ಸಾಮಾಜಿಕ ಬಹಿಷ್ಕಾರಕ್ಕೆ ಗುರಿಯಾಗಿಸುವ ಮನೋಭಾವ ಜನಸಾಮಾನ್ಯರಲ್ಲಿ ಇಲ್ಲದಾಗಿದೆ. ಇದಕ್ಕೂ ಮಿಗಿಲಾಗಿ ಕ್ಷಿಪ್ರಗತಿಯಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ರೋಗಮುಕ್ತರಾಗುವ ಅವಕಾಶ ಇರುವುದರಿಂದ, ಜೀವನಪರ್ಯಂತ ಈ ವ್ಯಾಧಿಯೊಂದಿಗೆ ಬದುಕಬೇಕಾದ ಅನಿವಾರ್ಯತೆಯೂ ಇಲ್ಲ. 

ಅಂತಿಮವಾಗಿ ಹೇಳುವುದಾದಲ್ಲಿ ಚರ್ಮದ ಮೇಲೆ ಮೂಡುವ ಬಿಳಿಯ ಕಲೆಗಳೆಲ್ಲವೂ ತೊನ್ನು ಅಲ್ಲ ಎನ್ನುವುದು ನೆನಪಿರಲಿ. ಆದರೆ ಚರ್ಮದ  ಬದಲಾಗುತ್ತಿರುವ ಲಕ್ಷಣಗಳು ಕಂಡುಬಂದಲ್ಲಿ, ತಕ್ಷಣ ಚರ್ಮರೋಗ  ಭೇಟಿಯಾಗಿ ಸಲಹೆ- ಚಿಕಿತ್ಸೆಗಳನ್ನು ಪಡೆದುಕೊಳ್ಳಿರಿ. ಇವೆಲ್ಲಕ್ಕಿಂತ ಮಿಗಿಲಾಗಿ ಇತ್ತೀಚಿನ ಕೆಲ ತಿಂಗಳುಗಳಿಂದ ಕನ್ನಡ ದಿನಪತ್ರಿಕೆಗಳಲ್ಲೂ ಜಾಹೀರಾತುಗಳನ್ನು ನೀಡುತ್ತಿರುವ ನಕಲಿವೈದ್ಯರ ಚಿಕಿತ್ಸೆ ಪಡೆಯಲು ಹೋಗಿ, ಸಹಸ್ರಾರು ರೂಪಾಯಿಗಳೊಂದಿಗೆ ನಿಮ್ಮ ಮಾನಸಿಕ ನೆಮ್ಮದಿಯನ್ನೂ ಕಳೆದುಕೊಳ್ಳದಿರಿ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೬-೦೨-೨೦೦೯ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ    

Saturday, October 5, 2013

sexual problems are not secret!



                                                ಲೈಂಗಿಕ ಸಮಸ್ಯೆ ರಹಸ್ಯವಲ್ಲ!

ದಿನಪತ್ರಿಕೆಗಳಲ್ಲಿ ಯಥೇಚ್ಛವಾಗಿ ಪ್ರಕಟವಾಗುವ ವೈವಿಧ್ಯಮಯ ವೈದ್ಯಕೀಯ ಜಾಹೀರಾತುಗಳನ್ನು ಗಮನಿಸಿರುವಿರಾ?. ಮಾನವ ಸಹಜ ದೌರ್ಬಲ್ಯಗಳನ್ನು ಬಂಡವಾಳವನ್ನಾಗಿಸಿ ದಂಧೆ ನಡೆಸುವ ನಕಲಿವೈದ್ಯರು ಇಂತಹ ಜಾಹೀರಾತುಗಳ ಮೂಲಕ ವೈದ್ಯವೃತ್ತಿಗೆ ಅಪಚಾರವೆಸಗುತ್ತಿದ್ದಾರೆ. ಅಮಾಯಕರಿಗೆ "ಟೋಪಿ" ಹಾಕಿ ತಮ್ಮ ಜೇಬನ್ನು ತುಂಬುವುದೇ ಇವರ ಏಕಮಾತ್ರ ಗುರಿ. 
-----------          ----------------                -------------            ---------------                -----------------                    -----------------

ನಿಮ್ಮ ಆತ್ಮಸಾಕ್ಷಿಯಾಗಿ ನಿಜ ಹೇಳಿ, ಈ ಲೇಖನದ ತಲೆಬರಹವನ್ನು ಕಂಡೊಡನೆ ನೀವು ಕುತೂಹಲದಿಂದ ಇದನ್ನು ಓದಲು ಆರಂಭಿಸಿದ್ದು ನಿಜವಲ್ಲವೇ?. ಸ್ವಾಮೀ, ನಿಮ್ಮಲ್ಲೂ ಮಾನವ ಸಹಜ ದೌರ್ಬಲ್ಯಗಳು ಇರುವುದಕ್ಕೆ ಬೇರೆ ಸಾಕ್ಷಿ ಬೇಕೇ?. 

ಇದೊಂದು ಲೇಖನದ ತಲೆಬರಹ ಮಾತ್ರವಲ್ಲ, ದಿನಪತ್ರಿಕೆಗಳಲ್ಲಿ ನೀವು ಕಂಡಿರುವ ಅನೇಕ ಜಾಹೀರಾತುಗಳಲ್ಲೊಂದರ ತಲೆಬರಹವೂ ಹೌದು. ಇದೇ ರೀತಿಯ ದಾಂಪತ್ಯ ಸಮಸ್ಯೆಗಳಿಗೆ ಶೀಘ್ರ ಪರಿಹಾರ,ಸಂಪೂರ್ಣ ಪುರುಷತ್ವವನ್ನು ಪಡೆಯಿರಿ,ನವತಾರುಣ್ಯವನ್ನು ಮರಳಿ ಪಡೆಯಿರಿ, ವಿವಾಹಕ್ಕೆ ಮೊದಲು ಅಥವಾ ಅನಂತರ ಮತ್ತು ಲೈಂಗಿಕತೆಯೇ ನಮ್ಮ ಧರ್ಮ ಎನ್ನುವ ಆಕರ್ಷಕ ಶೀರ್ಷಿಕೆಯ ಜಾಹೀರಾತುಗಳು ದಿನಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗುತ್ತಲೇ ಇರುತ್ತವೆ. 

ಈ ಲೇಖನದಲ್ಲಿ ಇಂತಹ ಜಾಹೀರಾತುಗಳನ್ನು ನೀಡುವ,ಲೈಂಗಿಕ ತಜ್ಞರೆಂದು ಸ್ವಯಂ ಘೋಷಿಸಿಕೊಳ್ಳುವವವರ ಕಾರ್ಯವೈಖರಿ ಮತ್ತು ಇವರು ನೀಡುವ ಚಿಕಿತ್ಸೆಯ ಸಾಧಕ- ಬಾಧಕಗಳ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡುವ ಪ್ರಾಮಾಣಿಕ ಪ್ರಯತ್ನ ನಮ್ಮದು. 

ಪದವಿಹೀನನಾದರೂ "ತಜ್ಞ"!

ಲೈಂಗಿಕ ಸಮಸ್ಯೆಗಳ ಜಾಹೀರಾತುಗಳಲ್ಲಿ ವೈದ್ಯರ ನಾಮದ ಹಿಂದೆ "ಡಾ " ಎನ್ನುವ ವೃತ್ತಿ ಸೂಚಕ ಬಿರುದು ಇದ್ದರೂ, ಇವರ ಹೆಸರುಗಳ ಮುಂದೆ ನಮೂದಿಸಬೇಕಾದ ಶೈಕ್ಷಣಿಕ ಅರ್ಹತೆಗಳನ್ನು ಎಂದಾದರೂ ಕಡಿದ್ದೀರಾ?. ಅಂತೆಯೇ ಇವರ ನೋಂದಣಿ ಸಂಖ್ಯೆಯನ್ನು ನಮೂದಿಸಿರುವುದನ್ನು ಕಂಡಿದ್ದೀರಾ?. ನೀವು ಇದನ್ನು ಕಾಣಲು ಸಾಧ್ಯವೂ ಇಲ್ಲ. ಏಕೆಂದರೆ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯ ನೀಡಿದ ಪದವಿಯೇ ಇವರಲ್ಲಿಲ್ಲ. ವೈದ್ಯಕೀಯ ಶಿಕ್ಷಣವನ್ನೇ ಪಡೆಯದವರಿಗೆ ವೈದ್ಯಕೀಯ ಪದವಿ ದೊರೆಯುವುದೆಂತು?. 

ವಿವಿಧ ಪದ್ದತಿಗಳ ವೈದ್ಯಕೀಯ ಪದವೀಧರರು ತಮ್ಮ ವೃತ್ತಿಯನ್ನು ಆರಂಭಿಸುವ ಮುನ್ನ, ಸರಕಾರದಿಂದ ಅಂಗೀಕೃತ ವೈದ್ಯಕೀಯ ಮಂಡಳಿಗಳಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡುವುದು ಕಡ್ಡಾಯವಾಗಿದೆ. ತದನಂತರ ದೊರೆಯುವ ನೋಂದಣಿ ಸಂಖ್ಯೆಯನ್ನು ಅವಶ್ಯಕತೆ ಇರುವಲ್ಲಿ ನಮೂದಿಸಲೇಬೇಕು. ಅಸಲಿ ಪದವಿಯೇ ಇಲ್ಲದ ನಕಲಿ ವೈದ್ಯರು ನೋಂದಣಿ ಮಾಡುವುದಾದರೂ ಎಂತು?. ನಿಜಸ್ಥಿತಿ ಹೀಗಿದ್ದರೂ ಕೆಲವೊಮ್ಮೆ ಆರ್. ಎಂ. ಪಿ- ೧೨೩೪ ಎಂದು ನಮೂದಿಸುವ ಬುದ್ಧಿವಂತರೂ ಇಲ್ಲದಿಲ್ಲ. ಆರ್. ಎಂ. ಪಿ ಎಂದರೆ ರೆಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟಿಶನರ್ ಎಂದರ್ಥ. ವಿಶೇಷವೆಂದರೆ ಇದನ್ನೇ ಪದವಿಯಂತೆ ನಮೂದಿಸುವ ಹವ್ಯಾಸವೂ ಅನೇಕರಲ್ಲಿದೆ. 

ವೈದ್ಯಕೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದವರು, ಆಯಾ ವಿಷಯಗಳಲ್ಲಿ ತಜ್ಞರೆನಿಸಿಕೊಳ್ಳುತ್ತಾರೆ. ಆದರೆ ವೈದ್ಯಕೀಯ ಶಿಕ್ಷಣವೇ ಇಲ್ಲದ ನಕಲಿ ವೈದ್ಯರು, ತಮ್ಮನ್ನು ತಾವೇ "ಲೈಂಗಿಕ ತಜ್ಞ" ರೆಂದು ಘೋಷಿಸಿಕೊಳ್ಳುವುದು ಪವಾಡವೇ ಹೊರತು ಬೇರೇನೂ ಅಲ್ಲ!. 

ನಿಮ್ಮ ಕಣ್ಮನಗಳನ್ನು ಸೆಳೆಯುವ ಆಕರ್ಷಕ ತಲೆಬರಹಗಳ ಜಾಹೀರಾತುಗಳಲ್ಲಿ ಇವರು ಬಳಸುವ ಪದಪುಂಜಗಳನ್ನೊಮ್ಮೆ ಓದಿನೋಡಿ. ಹಸ್ತಮೈಥುನ, ನಿದ್ದೆಯಲ್ಲಿ- ಮೂತ್ರದಲ್ಲಿ(?) ವೀರ್ಯ ಹೋಗುವುದು, ಶಿಶ್ನ ಮುದುಡಿಕೊಂಡು ಚಿಕ್ಕದಾಗಿರುವುದು, ನಿಶ್ಶಕ್ತಿ,ಆಯಾಸ, ನರದೌರ್ಬಲ್ಯ, ಮಕ್ಕಳಾಗದಿರುವುದು, ಗುಪ್ತರೋಗಗಳು, ವಿವಾಹಕ್ಕೆ ಮೊದಲು ಅಥವಾ ನಂತರ ನಿಮಗೆ ತಿಳಿದು ಅಥವಾ ತಿಳಿಯದೇ ಮಾಡಿದ ತಪ್ಪಿನಿಂದ ಬಂದಿರಬಹುದಾದ  ಸಮಸ್ಯೆಗಳ,ಇತ್ಯಾದಿ ಇತ್ಯಾದಿ. ದಯಮಾಡಿ ನಗಬೇಡಿ ಸ್ವಾಮೀ, ಇವು ನನ್ನ ಸ್ವಂತದ ಶಬ್ದಗಳಂತೂ ಅಲ್ಲ!. 

ಇಂತಹ ಎಲ್ಲ ಸಮಸ್ಯೆಗಳಿಗೂ ಇವರಲ್ಲಿ ಅದ್ಭುತವಾದ ಅಥವಾ ವಂಶ ಪಾರಂಪರ್ಯವಾಗಿ ಬಂದ, ಕೆಲವೊಮ್ಮೆ ಇವರೇ ಸಂಶೋಧಿಸಿದ ಅಥವಾ ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ಔಷದಗಳಿವೆ. ಕೆಲ ಜಾಹೀರಾತುಗಳಲ್ಲಿ ಒಂದು ತಿಂಗಳಿನ ಔಷದಗಳಿಗೆ ಇಂತಿಷ್ಟು ಹಣವೆನ್ನುವ ಸ್ಪಷ್ಟ ಮಾಹಿತಿಯೂ ಇದೆ. 

ಪ್ರತಿಯೊಬ್ಬ ವೈದ್ಯರು ಪರಿಪಾಲಿಸಲೆಬೇಕಾದ "ನೀತಿ ಸಂಹಿತೆ" ಯಂತೆ, ಯಾವುದೇ ವೈದ್ಯರು ಇಂತಹ ಜಾಹೀರಾತುಗಳನ್ನು ನೀಡುವಂತಿಲ್ಲ. ಆದರೆ ವೈದ್ಯರೇ ಅಲ್ಲದ ನೀತಿಭ್ರಷ್ಟರಿಗೆ, "ನೀತಿ" ಎನ್ನುವ ವಿಚಾರದ ಅರಿವೇ ಇಲ್ಲ!. ಇದರೊಂದಿಗೆ ನಮ್ಮ ನಿಷ್ಕ್ರಿಯ ಸರಕಾರವೂ ಸುಮ್ಮನಿರುವುದನ್ನು ಕಂಡು "ಮೌನಂ ಸಮ್ಮತಿ ಲಕ್ಷಣಂ" ಎಂದು ನಂಬಿರುವ ನಕಲಿ ವೈದ್ಯರು, ರಾಜಾರೋಷವಾಗಿ ತಮ್ಮ ದಂಧೆಯನ್ನು ನಡೆಸುತ್ತಾರೆ. 

ಅಜ್ಞಾನವೇ ಮೂಲ 

ಜಗತ್ಪ್ರಸಿದ್ಧ "ಕಾಮಸೂತ್ರ" ದ ಲೇಖಕ ವಾತ್ಸಾಯನನ ತವರಾದ ಭಾರತದಲ್ಲಿ ಇಂದಿಗೂ ಅನೇಕ ಜನರಿಗೆ ಲೈಂಗಿಕ ವಿಷಯಗಳ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ. ಈ ವಿಷಯವನ್ನು ಮುಕ್ತವಾಗಿ ಚರ್ಚಿಸುವ ದಿಟ್ಟತನ ಮತ್ತು ಮನೋಭಾವಗಳೂ ಇಲ್ಲ. ಯಾವುದು ತಪ್ಪು- ಯಾವುದು ಸರಿ, ಯಾವ ಶಾರೀರಿಕ ಲಕ್ಷಣಗಳು ಸಹಜ- ಯಾವುದು ಅನಾರೋಗ್ಯದ ಅಥವಾ ಅಸಹಜ ಲಕ್ಷಣವೆಂದು ಅರಿಯದವರೂ ನಮ್ಮಲ್ಲಿದ್ದಾರೆ. 

ಪ್ರಕೃತಿ ನಿಯಮದಂತೆ ಪುಟ್ಟ ಕಂದ ಹುಟ್ಟಬೇಕಿದ್ದಲ್ಲಿ ಸ್ತ್ರೀ ಪುರುಷ ಸಮಾಗಮ ಅವಶ್ಯವೆಂದು ಅರಿಯದ ಅಮಾಯಕ ಯುವಜನರು, ಈ ಆಧುನಿಕ ಯುಗದಲ್ಲೂ ಇದ್ದಾರೆ ಎಂದಲ್ಲಿ ನೀವೂ ನಂಬಲಾರಿರಿ. ಇದೇ ಕಾರಣದಿಂದಾಗಿ ವಿಚ್ಛೇದನದಲ್ಲಿ ಅಂತ್ಯಗೊಂಡಿರುವ ವಿವಾಹಗಳು ಅಸಂಖ್ಯ. 

ಸುರೇಶನ ನರದೌರ್ಬಲ್ಯ 

ಸ್ಪುರದ್ರೂಪಿ ಸುರೇಶನಿಗೆ ವಿವಾಹವಾಗುವಾಗ ಮೂವತ್ತೆರಡು ವರ್ಷ ವಯಸ್ಸಾಗಿತ್ತು. ವರ್ಷ ಕಳೆಯುವಷ್ಟರಲ್ಲೇ ಸುಂದರ ಗಂಡು ಮಗುವಿನ ತಂದೆಯಾಗಿದ್ದ. ಮೂರು ಮಂದಿಯ ಈ ಪುಟ್ಟ ಕುಟುಂಬವು ಸುಖೀ ಸಂಸಾರಕ್ಕೆ ಮಾದರಿಯಾಗಿತ್ತು. 

ವಿವಾಹವಾಗಿ ಸುಮಾರು ಎಂಟು ವರ್ಷಗಳು ಕಳೆದ ಬಳಿಕ ಸುರೇಶನಿಗೆ ನಿಮಿರು ದೌರ್ಬಲ್ಯ ಆರಂಭವಾಗಿತ್ತು. ಪರಿಚಿತ ವೈದ್ಯರಲ್ಲಿ ತೆರಳಿದ ದಂಪತಿಗಳನ್ನು ಸಮಸ್ಯೆಯ ಬಗ್ಗೆ ಪ್ರಶ್ನಿಸಿದ್ದ ವೈದ್ಯರಿಗೆ, ಇವರಿಬ್ಬರೂ ತೀವ್ರ ಮಾನಸಿಕ ಒತ್ತಡದಿಂದ ಬಳಲುತ್ತಿರುವುದು ತಿಳಿದುಬಂದಿತ್ತು. ಇದಕ್ಕೆ ಸೂಕ್ತ ಕಾರಣವೂ ಇತ್ತು. ತನ್ನ ಕುಟುಂಬ ವೈದ್ಯರ ಬಳಿ ಈ ಸಮಸ್ಯೆಯ ಬಗ್ಗೆ ಹೇಳಲು ನಾಚಿದ ಸುರೇಶನು, ಸ್ವಯಂ ಘೋಷಿತ "ಲೈಂಗಿಕ ತಜ್ಞ" ನ ಜಾಹೀರಾತಿಗೆ ಮರುಳಾಗಿ ಆತನಲ್ಲಿಗೆ ತೆರಳಿದ್ದನು. ಈ ನಕಲಿ ತಜ್ಞನ ಹೇಳಿಕೆಯಂತೆ ಸುರೇಶನ ಪುರುಷತ್ವವೇ ವಿನಾಶದ ಅಂಚಿಗೆ ತಲುಪಿತ್ತು!. ಇದನ್ನು ಕೇಳಿದ ಸುರೇಶನು ಹತಾಶೆಯಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದನು. 

ಸುರೇಶನನ್ನು ಸಂತೈಸಿದ ವೈದ್ಯರಿಗೆ ಕೊನೆಗೂ ಆತನ ಸಮಸ್ಯೆಯ ಮೂಲವೇನೆಂದು ಪತ್ತೆಯಾಗಿತ್ತು. ಈ ದಂಪತಿಗಳು ಏಳು ವರ್ಷದ ಮಗನನ್ನು ತಮ್ಮೊಂದಿಗೆ ಮಲಗಿಸಿಕೊಳ್ಳುವುದು ವಾಡಿಕೆಯಾಗಿತ್ತು. ಮಗನು ನಿದ್ರಿಸಿದ ಬಳಿಕವೇ "ಸಮಾಗಮ" ನಡೆಯುತ್ತಿತ್ತು. ಆದರೆ ಸುಮಾರು ಮೂರು ತಿಂಗಳ ಹಿಂದೆ ಅಕಸ್ಮಾತ್ ನಿದ್ದೆಯಿಂದ ಎಚ್ಚೆತ್ತ ಮಗನಿಂದಾಗಿ ದಂಪತಿಗಳ ಮಿಲನ ಅರ್ಧದಲ್ಲೇ ಅಂತ್ಯಗೊಂಡಿತ್ತು. ಈ ಘಟನೆಯ ಬಳಿಕ ಪ್ರತೀಬಾರಿ ಸಮಾಗಮದ ಸಂದರ್ಭದಲ್ಲಿ ಮಗ ಎದ್ದೆಳುವನೋ ಎನ್ನುವ ಭಯವೇ ಸುರೇಶನ ನಿಮಿರು ದೌರ್ಬಲ್ಯಕ್ಕೆ ಕಾರಣವೆನಿಸಿತ್ತು!. ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಂಡಷ್ಟೂ, ಅದು ಇನ್ನಷ್ಟು ಉಲ್ಬಣಿಸುತ್ತಿತ್ತು. ಇದರಿಂದಾಗಿ ಆತನ ಆತ್ಮವಿಶ್ವಾಸ ನಶಿಸುವುದರೊಂದಿಗೆ ತನ್ನ ಪುರುಷತ್ವದ ಬಗ್ಗೆ ಸಂದೇಹ ಮೂಡಿತ್ತು. ಜೊತೆಗೆ ಲೈಂಗಿಕ ತಜ್ಞನು ಉರಿಯುವ ಬೆಂಕಿಗೆ ತುಪ್ಪ ಹಾಕಿ ಸುರೇಶನ ತಲೆ ಕೆಡಿಸುವಲ್ಲಿ ಯಶಸ್ವಿಯಾಗಿದ್ದನು. 

ಇದೀಗ ವೈದ್ಯರ "ಚಿಕಿತ್ಸೆ" ಯಶಸ್ವಿಯಾಗಲು ಈ ದಂಪತಿಗಳ ಸಹಕಾರದ ಅವಶ್ಯಕತೆಯಿತ್ತು. ದಂಪತಿಗಳು ಪರಿಪಾಲಿಸಬೇಕಾದ ನಿಯಮಗಳ ಬಗ್ಗೆ ಸಲಹೆ ನೀಡಿದ ವೈದ್ಯರ ಸೂಚನೆಯಂತೆ ಮಗನಿಗೆ ಪ್ರತ್ಯೇಕ ಕೊನೆಯ ವ್ಯವಸ್ಥೆಯಾಯಿತು. ಇದರೊಂದಿಗೆ ವೈದ್ಯರು ನೀಡಿದ ಔಷದವನ್ನು ನಿಯಮಿತವಾಗಿ ಸೇವಿಸುತ್ತಿದ್ದ ಸುರೇಶನು, ಎರಡು ವಾರಗಳ ಬಳಿಕ ನಡೆಸಿದ್ದ ಸಮಾಗಮ ಯಶಸ್ವಿಯಾಗಿತ್ತು. ಮುಂದಿನ ಕೆಲವೇ ದಿನಗಳಲ್ಲಿ ಸುರೇಶನ ಮುಖದಲ್ಲಿ ಮತ್ತೆ ಮಂದಹಾಸ ಮೂಡಿತ್ತು. 

ತನ್ನ ಸಮಸ್ಯೆಯನ್ನು ಪರಿಹರಿಸಿದ ವೈದ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಲು ಪತ್ನಿಯೊಂದಿಗೆ ತೆರಳಿದ್ದ ಸುರೇಶನು, ಔಷದ ಸೇವನೆಯನ್ನು ಮುಂದುವರಿಸುವುದರ ಬಗ್ಗೆ ಕೇಳಿದ್ದನು. ಮುಗುಳುನಕ್ಕ ವೈದ್ಯರು ಉಳಿದ ಮಾತ್ರೆಗಳನ್ನು ಎಸೆದುಬಿಡಲು ಹೇಳಿದಾಗ ಸುರೇಶನಿಗೆ ಅಚ್ಚರಿಯಾಗಿತ್ತು. ತಾವು ನೀಡಿದ್ದ ಔಷದ ರಹಿತ ಗುಳಿಗೆಗಳ ಬಗ್ಗೆ ನಿಜವನ್ನೇ ನುಡಿದ ವೈದ್ಯರು, ಸುರೇಶನಿಗೆ ಶಾರೀರಿಕ ರೋಗ ಅಥವಾ ಕೊರತೆಯಿಂದ ನಿಮಿರು ದೌರ್ಬಲ್ಯ ಬಂದಿರಲಿಲ್ಲವೆಂದರು. ಕೇವಲ ಮಾನಸಿಕ ಭಯ ಹಾಗೂ ಆತ್ಮವಿಶ್ವಾಸದ ಕೊರತೆಯಿಂದಾಗಿ ಉದ್ಭವಿಸಿದ ಸಮಸ್ಯೆಯು ನಕಲಿ ವೈದ್ಯನಿಂದಾಗಿ ಉಲ್ಬಣಿಸಿದ್ದರೂ, ಇದೀಗ ಸೂಕ್ತ "ಚಿಕಿತ್ಸೆ" ಯಿಂದ ಬಗೆಹರಿದಿತ್ತು. 

ಸುರೇಶನಲ್ಲಿ ಕಂದುಬಂದಂತಹ ಹಾಗೂ ಇದೇ ರೀತಿಯ ಅನೇಕ ಸಮಸ್ಯೆಗಳಲ್ಲಿ, ಔಷದ ಸೇವನೆಯ ಅವಶ್ಯಕತೆಯೇ ಇರುವುದಿಲ್ಲ. ಆದರೂ ರೋಗಿಯ ಮಾನಸಿಕ ಸಂತೃಪ್ತಿಗಾಗಿ ಔಷದ ರಹಿತ ಗುಳಿಗೆಗಳನ್ನು ನೀಡುವುದು ಅನಿವಾರ್ಯ. ಅಪರೂಪದಲ್ಲಿ ಪುರುಷರಲ್ಲಿ ಕಂಡುಬರಬಹುದಾದ ನಿಮಿರು ದೌರ್ಬಲ್ಯವು ನಿಜಕ್ಕೂ ಶಾಶ್ವತ ನಪುಂಸಕತ್ವದ ಸೂಚನೆಯಲ್ಲ ಎಂದು ನಿಮಗೆ ತಿಳಿದಿರಲಿ. ಯಾವುದೇ ವ್ಯಕ್ತಿಯಲ್ಲಿ ಕಂಡುಬರುವ ತಾತ್ಕಾಲಿಕ ನಿಮಿರು ದೌರ್ಬಲ್ಯವು ಶಾರೀರಿಕ ಅಥವಾ ಮಾನಸಿಕ ಕಾರಣಗಳಿಂದ ಉದ್ಭವಿಸಬಹುದು. ಯುವಕರಲ್ಲಿ ಮತ್ತು ಮಧ್ಯವಯಸ್ಕರಲ್ಲಿ ಮಾನಸಿಕ ಕಾರಣಗಳಿಂದ ಬರುವ ಸಾಧ್ಯತೆಗಳೇ ಅಧಿಕ. ಶಾರೀರಿಕ ಕಾರಣಗಳಲ್ಲಿ ಮಧುಮೇಹ,ಅಧಿಕ ರಕ್ತದೊತ್ತಡ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಅಪಸ್ಮಾರ ಮತ್ತು ಮಾನಸಿಕ ವ್ಯಾಧಿಗಳು ಪ್ರಮುಖವಾಗಿವೆ. ಜೀವನ ಪರ್ಯಂತ ಅಥವಾ ದೀರ್ಘಕಾಲೀನ ಚಿಕಿತ್ಸೆಯ ಅವಶ್ಯಕತೆಯಿರುವ ಇಂತಹ ಕೆಲ ವ್ಯಾಧಿಗಳಲ್ಲಿ ಈ ರೀತಿಯ ತೊಂದರೆಗಳು ಕಂಡುಬಂದಲ್ಲಿ, ಚಿಕಿತ್ಸೆ ಕಷ್ಟಸಾಧ್ಯ ಹಾಗೂ ಕೆಲವೊಮ್ಮೆ ಅಸಾಧ್ಯವೆನಿಸುವುದು. ಅಂತೆಯೇ ಜನ್ಮದತ್ತ ನಪುಂಸಕತ್ವದಲ್ಲಿ ಯಾವುದೇ ಚಿಕಿತ್ಸೆ ಫಲಕಾರಿಯಾಗದು. 

ಪತ್ನಿಯಿಂದ ಗುಪ್ತರೋಗ? 

ಹಳ್ಳಿಯ ಹುಡುಗಿಯಾದರೂ ಹರಿಣಾಕ್ಷಿ ಅಪ್ರತಿಮ ಸುಂದರಿ ಪೇಟೆಯ ಹುಡುಗ ಸುಧಾಕರನು ಈಕೆಯ ಚೆಲುವಿಗೆ ಮನಸೋತು, ಮದುವೆಯಾಗಿದ್ದನು. ಮದುವೆಯಾದಂತೆಯೇ ನೂತನ ದಂಪತಿಗಳು ಮಧುಚಂದ್ರಕ್ಕಾಗಿ ದಕ್ಷಿಣ ಭಾರತ ಪ್ರವಾಸಕ್ಕೆ ತೆರಳಿದ್ದರು.

ವಾರ ಕಳೆಯುವಷ್ಟರಲ್ಲಿ ಸುಧಾಕರನ ಮೂತ್ರ ವಿಸರ್ಜನಾಂಗದಲ್ಲಿ ಒಂದಿಷ್ಟು ತುರಿಕೆ ಮತ್ತು ನೋವು ಕಾಣಿಸಿಕೊಂಡು, ಮುಂದೊಗಲಿನಲ್ಲಿ ಸಣ್ಣ ಗಾಯಗಳು ಉದ್ಭವಿಸಿದ್ದವು. ಊರಿಗೆ ಮರಳಿದ ಬಳಿಕ ಪರಿಚಿತ ವೈದ್ಯರ ಸಲಹೆ ಪಡೆಯಲು ನಾಚಿದ ಸುಧಾಕರನು, ಲೈಂಗಿಕ ತಜ್ಞನೊಬ್ಬನಲ್ಲಿಗೆ ಹೋಗಿದ್ದನು. ಗಂಭೀರ ಮುಖಭಾವದೊಂದಿಗೆ ಆತನನ್ನು ಪರೀಕ್ಷಿಸಿದ ಈ ನಕಲಿ ವೈದ್ಯನ ಅಭಿಪ್ರಾಯದಂತೆ, ಸುಧಾಕರನಿಗೆ ವೇಶ್ಯಾಸಂಗದಿಂದ ಬರುವಂತಹ ಗುಪ್ತರೋಗ ಬಂದಿತ್ತು. ಇದನ್ನು ಕೇಳಿದ ಸುಧಾಕರನಿಗೆ ಆಕಾಶವೇ ತಲೆಯಮೇಲೆ ಬಿದ್ದಂತಾಯಿತು. ಏಕೆಂದರೆ ಆತನಿಗೆ ಪತ್ನಿ ಹರಿಣಾಕ್ಷಿಯನ್ನು ಹೊರತುಪಡಿಸಿ ಅನ್ಯ ಸ್ತ್ರೀಯರ ಸಂಪರ್ಕವೇ ಇರಲಿಲ್ಲ. ವೈದ್ಯನ ಮಾತನ್ನು ನಂಬಿದ ಸುಧಾಕರನಿಗೆ ಪತ್ನಿಯ ಶೀಲದ ಬಗ್ಗೆ ಸಂದೇಹ ಮೂಡಿತ್ತು!. 

ಒಂದೂವರೆ ಸಾವಿರ ರೂಪಾಯಿ ತೆತ್ತು ಔಷದಗಳನ್ನು ಪಡೆದುಕೊಂಡ ಸುಧಾಕರನು ಎಂದಿನಂತೆಯೇ ಪತ್ನಿಯೊಂದಿಗೆ ಸರಸವಾಡದೇ, ಕೋಣೆಗೆ ತೆರಳಿ ಮುಸುಕುಹಾಕಿ ಮಲಗಿದನು. ಪತಿಯ ವರ್ತನೆಯಿಂದ ಅಚ್ಚರಿಗೊಂಡ ಹರಿಣಾಕ್ಷಿ ಪರಿಪರಿಯಾಗಿ ಕೇಳಿದರೂ ಉತ್ತರವನ್ನೇ ನೀಡದಿದ್ದಾಗ ಕಣ್ಣೀರು ಸುರಿಸಿದ್ದಳು. ಮದುವೆಯ ಬಳಿಕ ಮೊದಲಬಾರಿ ಮನೆಯಲ್ಲಿ ಸ್ಮಶಾನ ಮೌನ ಆವರಿಸಿತ್ತು. ರಾತ್ರಿಯೂಟ ಇಟ್ಟಲ್ಲೇ ಹಳಸಿತ್ತು. 

ಮರುದಿನ ನಸುಕಿನಲ್ಲಿ ಕರೆಗಂಟೆಯ ಸದ್ದಿಗೆ ಎಚ್ಚೆತ್ತು ಬಾಗಿಲು ತೆಗೆದ ಸುಧಾಕರನಿಗೆ ಚಡ್ಡಿ ದೋಸ್ತಿ ಡಾ. ಪ್ರಸಾದನನ್ನು ಕಂಡಾಗ ಆಶ್ಚರ್ಯವಾಗಿತ್ತು. ವೈದ್ಯಕೀಯ ಸಮ್ಮೇಳನಕ್ಕಾಗಿ ಬಂದಿರುವುದಾಗಿ ಹೇಳಿದ ಸ್ನೇಹಿತನನ್ನು ಒಳಗೆ ಕರೆದೊಯ್ದು ಪತ್ನಿಯ ಪರಿಚಯ ಮಾಡಿ,ಉಪಾಹಾರದ ವ್ಯವಸ್ಥೆ ಮಾಡಲು ಹೇಳಿದ. 

ಉಪಾಹಾರ ಸೇವಿಸುತ್ತಿದ್ದಂತೆಯೇ ವೈದ್ಯನ ಚುರುಕು ಬುದ್ದಿ ಜಾಗೃತವಾಗಿತ್ತು. ದಂಪತಿಗಳ ನಡುವೆ ವಿರಸವಿರುವುದು ಪ್ರಸಾದನ ಗಮನಕ್ಕೆ ಬಂದಿತ್ತು. ರಾತ್ರಿಯೂಟದ ಸಮಯದಲ್ಲಿ ಮತ್ತೊಮ್ಮೆ ದಂಪತಿಗಳ ಮಾತು ಹಾಗೂ ಚರ್ಯೆಗಳನ್ನು ಗಮನಿಸಿದ ವೈದ್ಯನ ಸಂದೇಹ ಧೃಢವಾಯಿತು. ಊಟ ಮುಗಿಸಿದ ಬಳಿಕ ಚಾವಡಿಯಲ್ಲಿ ಕುಳಿತಾಗ ನೇರವಾಗಿ ಮಿತ್ರನ ಬಳಿ ನಿಮ್ಮಿಬ್ಬರ ವಿರಸಕ್ಕೆ ಕಾರಣವೇನೆಂದು ಕೇಳಿದ. ಬಾಡಿದ ಮುಖದೊಂದಿಗೆ ತನ್ನ ಸಮಸ್ಯೆಯ ಸಂಪೂರ್ಣ ವಿವರಗಳನ್ನು ಸ್ನೇಹಿತನಲ್ಲಿ ಹೇಳಿದ ಸುಧಾಕರ ನಿಟ್ಟುಸಿರು ಬಿಟ್ಟಿದ್ದನು. 

ಮಿತ್ರನನ್ನು ಪರೀಕ್ಷಿಸಿದ ವೈದ್ಯಮಿತ್ರನು ಗಹಗಹಿಸಿ ನಕ್ಕಿದ್ದನು. ಬಳಿಕ ಸುಧಾಕರನಿಗೆ ಯಾವುದೇ ಗುಪ್ತರೋಗ ಬಂದಿಲ್ಲವೆಂದು ಹೇಳಿ, ಒಂದುವಾರದಲ್ಲಿ ಪರಿಹಾರವಾಗುವ ಈ ಸಮಸ್ಯೆಗೆ ಸೂಕ್ತ ಔಷದಗಳನ್ನು ಸೂಚಿಸಿದ್ದನು. ತನಗೆ ಗುಪ್ತರೋಗವಿಲ್ಲವೆಂದು ತಿಳಿದಾಗ ಆನಂದವಾದರೂ, ನಿರ್ದೋಷಿ ಪತ್ನಿಯ ಶೀಲವನ್ನು ಶಂಕಿಸಿದ್ದಕ್ಕಾಗಿ ಸುಧಾಕರನಿಗೆ ಪಶ್ಚಾತ್ತಾಪವಾಗಿತ್ತು. ತಕ್ಷಣ ಪತ್ನಿಯನ್ನು ಕರೆದವನೇ ಸ್ನೇಹಿತನ ಇರುವಿಕೆಯನ್ನು ಮರೆತು, ಪತ್ನಿಯನ್ನು ತಬ್ಬಿ ಕಣ್ಣೀರುಗರೆದು ಕ್ಷಮೆ ಕೋರಿದನು. ನಕಲಿ ಲೈಂಗಿಕ ತಜ್ಞನ ತಪ್ಪಿನಿಂದ ಸಂಭವಿಸಲಿದ್ದ ಸಾಂಸಾರಿಕ ದುರಂತವೊಂದು ಡಾ. ಪ್ರಸಾದನ ಆಕಸ್ಮಿಕ ಆಗಮನದಿಂದ ತಪ್ಪಿತ್ತು. 

ಮಾಧವಿಗೆ ಮಗು ಹುಟ್ಟಿತೇ?

ಪದವೀಧರೆ ಮಾಧವಿಯು ತನ್ನ ತಂದೆಯ ಅಪೇಕ್ಷೆಯಂತೆ ಹಳ್ಳಿಯ ಕೃಷಿಕ ಭಾಸ್ಕರನನ್ನು ಮದುವೆಯಾಗಿದ್ದಳು. ಮದುವೆಯಾಗಿ ಮೂರು ವರ್ಷಗಳು ಕಳೆದರೂ ವಂಶೋದ್ಧಾರಕ ಹುಟ್ಟಿಲ್ಲವೆಂದು ಇವರಿಬ್ಬರ ಮಾತಾಪಿತರೂ ಕೊರಗುತ್ತಿದ್ದರು. 

ಸಮೀಪದ ಪೇಟೆಯಲ್ಲಿ ತಿಂಗಳಿಗೊಮ್ಮೆ ಭೇಟಿನೀಡುತ್ತಿದ್ದ ವೈದ್ಯರೊಬ್ಬರ ಚಿಕಿತ್ಸೆಯಿಂದ ಅನೇಕರಿಗೆ ಮಕ್ಕಳಾಗಿರುವುದೆಂದು ಭಾಸ್ಕರನ ತಂದೆ ಹೇಳಿದ್ದರು. ಹಾಗೂ ಅವರಲ್ಲಿ ಸಲಹೆ ಪಡೆಯಲು ಮಗ ಮತ್ತು ಸೊಸೆಯನ್ನು ಒತ್ತಾಯದಿಂದ ಕಳಿಸಿದ್ದರು. 

ದಂಪತಿಗಳನ್ನು ಪರೀಕ್ಷಿಸಿದ ಪಂಡಿತರ ಅಭಿಪ್ರಾಯದಂತೆ ಮಾಧವಿ ಗರ್ಭವತಿಯಾಗಲು ಆರು ತಿಂಗಳ ಔಷದಗಳೊಂದಿಗೆ ಒಂದಿಷ್ಟು ಪಥ್ಯಗಳನ್ನು ಪರಿಪಾಲಿಸಬೇಕಿತ್ತು. ಔಷದಗಳನ್ನು ಪಡೆದು ಊರಿಗೆ ಮರಳಿದ ಬಳಿಕ ದಿನನಿತ್ಯ ದೇವರಿಗೆ ಕೈಮುಗಿಯಲು ಮರೆತರೂ, ಮಾಧವಿಯು ಔಷದವನ್ನು ಸೇವಿಸಲು ಮರೆಯುತ್ತಲೇ ಇರಲಿಲ್ಲ. ಆದರೆ ಆರು ತಿಂಗಳುಗಳು ಕಳೆದರೂ ಆಕೆ ಗರ್ಭಧರಿಸಿರಲಿಲ್ಲ. ಇದೇ ಚಿಂತೆಯಿಂದ ಅನ್ನಾಹಾರಗಳನ್ನೇ ಸೇವಿಸುತ್ತಿರಲಿಲ್ಲ. 

ತನ್ಮಧ್ಯೆ ಆಕಸ್ಮಿಕವಾಗಿ ಹೊಟ್ಟೆನೋವಿನಿಂದ ಪೀಡಿತಳಾದ ಮಾಧವಿಗೆ ಸ್ಥಳೀಯ ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ, ಪೇಟೆಯ ಆಸ್ಪತ್ರೆಗೆ ದಾಖಲಿಸಿ ಅಪೆಂಡಿಸೈಟಿಸ್ ಗಾಗಿ ತುರ್ತು ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಂಡ ಮಾಧವಿಯನ್ನು ಪರೀಕ್ಷಿಸುತ್ತಿದ್ದ ವೈದ್ಯರು ಆಕೆಗೆ ಮಕ್ಕಳೆಷ್ಟು ಎಂದು ಕೇಳಿದ್ದರು. ತಲೆತಗ್ಗಿಸಿದ್ದ ಮಾಧವಿಯ ಚರ್ಯೆಯಿಂದಲೇ ವಿಷಯವನ್ನರಿತ ವೈದ್ಯರು, ಸಂತತಿ ತಜ್ಞರಿಂದ ದಂಪತಿಗಳ ತಪಾಸಣೆಯನ್ನು ಮಾಡಿಸಿದರು. ಫಲಿತಾಂಶಗಳು ಬಂದಾಗ ಭಾಸ್ಕರನ ವೀರ್ಯದಲ್ಲಿ ವೀರ್ಯಾಣುಗಳ ಸಂಖ್ಯೆ ಬಹಳಷ್ಟು ಕಡಿಮೆಯಿದ್ದು, ಮಾಧವಿಯಲ್ಲಿ ಯಾವ ದೋಷವೂ ಇರಲಿಲ್ಲ. 

ಭಾಸ್ಕರನಿಗೆ ವೀರ್ಯಾಣುವರ್ಧಕ ಚಿಕಿತ್ಸೆ ನೀಡುವುದರೊಂದಿಗೆ ಮಾಧವಿಗೆ ಒಂದಿಷ್ಟು ಆರೋಗ್ಯವರ್ಧಕ ಟಾನಿಕ್ ನೀಡಲಾಯಿತು. ವರ್ಷ ಕಳೆಯುತ್ತಲೇ ಗರ್ಭಧರಿಸಿದ್ದ ಮಾಧವಿಯು ನವಮಾಸ ಕಳೆದು ಮುದ್ದಾದ ಹೆಣ್ಣುಮಗುವಿಗೆ ಜನ್ಮನೀಡಿದ್ದಳು. 

ಲೈಂಗಿಕ ಸಮಸ್ಯಾ ಪೀಡಿತರಿಗೆ ಕಿವಿಮಾತು 

ನಕಲಿ ವೈದ್ಯರ ಅಥವಾ ಔಷದ ತಯಾರಿಕರ ಪೊಳ್ಳು ಘೋಷಣೆಗಳನ್ನು ನಂಬದಿರಿ. ವೈದ್ಯಕೀಯ ಪದವಿಗಳಿಲ್ಲದ ಸ್ವಯಂ ಘೋಷಿತ "ಲೈಂಗಿಕ ತಜ್ಞ" ರ ಚಿಕಿತ್ಸೆಯಿಂದ ಪುರುಷರ ಶಿಶ್ನದ ಗಾತ್ರ- ಆಕಾರಗಳನ್ನು ವೃದ್ಧಿಸುವುದು ಅಸಾಧ್ಯ. ಅಂತೆಯೇ ಲೈಂಗಿಕ ಸಾಮರ್ಥ್ಯವನ್ನು ಕೇವಲ ಔಷದಗಳ ಸೇವನೆಯಿಂದ ಹೆಚ್ಚಿಸುವುದು ಕೂಡ ಅಸಾಧ್ಯ. 

ವಯಾಗ್ರ ದಂತಹ ಮಾತ್ರೆಗಳ ಸೇವನೆಯಿಂದ ನಿಮಿರು ದೌರ್ಬಲ್ಯದ ಸಮಸ್ಯೆ ಪರಿಹಾರವಾಗುವುದಾದರೂ, ಲೈಂಗಿಕ ಸಾಮರ್ಥ್ಯದ ಹೆಚ್ಚಳ ಸಂಶಯಾಸ್ಪದ. ವಯಾಗ್ರ ದಂತಹ ಆಧುನಿಕ ಮತ್ತು ಸ್ವರ್ಣ- ರೌಪ್ಯ- ವಂಗ ಇತ್ಯಾದಿ ಭಸ್ಮಯುಕ್ತ ಆಯುರ್ವೇದ ಔಷದಗಳನ್ನು ತಜ್ಞ ವೈದ್ಯರ ಸಲಹೆ ಪಡೆಯದೇ ಸೇವಿಸುವುದು ಅಪಾಯಕಾರಿ. 

ನಿಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಮಟ್ಟ, ಸಂಗಾತಿಯ ಸಹಕಾರ ಮತ್ತು ವಾತಾವರಣಗಳಿಗೆ ಅನುಗುಣವಾಗಿ ಲೈಂಗಿಕ ಸಾಮರ್ಥ್ಯದಲ್ಲಿ ವ್ಯತ್ಯಯವಾಗುವುದು. ಮದ್ಯಪಾನ,ಅತಿ ಧೂಮಪಾನ, ಮಾದಕ ದ್ರವ್ಯಗಳ ಸೇವನೆಯ ಚಟ,ದೀರ್ಘಕಾಲೀನ ಕಾಯಿಲೆಗಳು ನಿಮಿರು ದೌರ್ಬಲ್ಯ ಹಾಗೂ ನಪುಂಸಕತೆಗಳಿಗೆ ಕಾರಣವೆನಿಸಬಹುದು. 

ಸಂತಾನಹೀನತೆಯ ಸಮಸ್ಯೆಯನ್ನು ಪರಿಹರಿಸಲು ದಂಪತಿಗಳನ್ನು ವೈಜ್ಞಾನಿಕ ಪರೀಕ್ಷೆಗಳಿಗೆ ಒಳಪಡಿಸದೇ, ಯಾರಲ್ಲಿ ದೋಷವಿದೆಯೆಂದು ತಿಳಿದುಕೊಳ್ಳದೆ ನೀಡುವ ಚಿಕಿತ್ಸೆ ಫಲಕಾರಿಯಾಗದು. 

ನಿಮ್ಮ ಆರೋಗ್ಯದ ಸಮಸ್ಯೆಗಳ ಬಗ್ಗೆ ನಿಮ್ಮ ಪರಿಚಿತ ಕುಟುಂಬ ವೈದ್ಯರಲ್ಲಿ ಮುಕ್ತವಾಗಿ ಚರ್ಚಿಸಿ. ಅವಶ್ಯಕತೆ ಇದ್ದಲ್ಲಿ ಅವರ ಸೂಚನೆಯಂತೆ ತಜ್ಞವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆದುಕೊಳ್ಳುವುದು, ನಿಮ್ಮ ಶಾರೀರಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯ ದೃಷ್ಟಿಯಿಂದ ಹಿತಕರವೆನಿಸುವುದು. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೩-೦೩-೨೦೦೩ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 

ಗಮನಿಸಿ- ಈ ಲೇಖನವನ್ನು ಬರೆದಿದ್ದ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಜಾಹೀರಾತುಗಳನ್ನು ಆಧರಿಸಿ ಲೇಖನವನ್ನು ಬರೆಯಲಾಗಿತ್ತು.