Saturday, December 14, 2013

SONTANOVU GANTUBIDDEETU, JOKE!


                                            ಸೊಂಟನೋವು ಗಂಟುಬಿದ್ದೀತು ಜೋಕೆ!

ಯಾವುದೇ ಪೂರ್ವಸೂಚನೆಗಳಿಲ್ಲದೇ ಕ್ಷಣಮಾತ್ರದಲ್ಲಿ ಪ್ರಾರಂಭವಾಗಿ ತೀವ್ರಗೊಳ್ಳುವ ಸೊಂಟನೋವು, ನಿಮ್ಮನ್ನು ನಿಮಿಷಾರ್ಧದಲ್ಲಿ ಪರಾವಲಂಬಿಯನ್ನಾಗಿ ಪರಿವರ್ತಿಸುವಷ್ಟು ಪ್ರಬಲವಾಗಿರಲು "ಉಷ್ಣ" ಅಥವಾ "ವಾಯು" ಗಳಂತೂ ಖಂಡಿತವಾಗಿಯೂ ಕಾರಣವಲ್ಲ. ಹೆಚ್ಚಿನ ಜನರಲ್ಲಿ ಸಣ್ಣಪುಟ್ಟ ಕಾರಣಗಳಿಂದ ಪ್ರಾರಂಭವಾಗುವ ಈ ವಿಶಿಷ್ಟ ಸಮಸ್ಯೆಯು ಸ್ವಯಂ ಚಿಕಿತ್ಸೆ- ವಿಶ್ರಾಂತಿಗಳಿಂದಶಮನವಾಗದಿದ್ದಲ್ಲಿ ತಜ್ಞವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆಯುವುದು ಹಿತಕರ. 

ದೇವಿ ಹಲಸಿನ ಪೋಡಿ ಕಾರಣವೇ?

ಹೊಟ್ಟೆಪಾಡಿಗಾಗಿ ಪುಟ್ಟ ದಿನಸಿ ಅಂಗಡಿಯನ್ನು ನಡೆಸುತ್ತಿದ್ದ ನಾಗಪ್ಪನು ದಿನದಲ್ಲಿ ಹದಿನೈದು ಗಂಟೆಗಳ ಕಾಲ ದುಡಿಯುವದು ಅನಿವಾರ್ಯವಾಗಿತ್ತು. ಆದರೂ ದನಿವೆಂದರೆ ಏನೆಂದು ಅರಿಯದ ಆತನಿಗೆ ನಾಲ್ಕಾರು ತಿಂಗಳುಗಳಿಂದ ಆಗಾಗ ಸೊಂಟನೋವು ಬಾಧಿಸುತ್ತಿತ್ತು. ಅದೊಂದು ದಿನ ಹೆಂಡತಿ ತಯಾರಿಸಿದ "ದೇವಿ ಹಲಸಿನ ಪೋಡಿ" ಯನ್ನು ಪೊಗದಸ್ತಾಗಿ ತಿಂದಿದ್ದ ನಾಗಪ್ಪನಿಗೆ, ಅಂಗಡಿಯಲ್ಲಿ ಗಿರಾಕಿಯೊಬ್ಬರ ಚೀಲವನ್ನು ಎತ್ತಿಕೊಡುವಾಗ ಸೊಂಟದಲ್ಲಿ ಛಳಕುಹೊಡೆದಂತಾಯಿತು. ನೋವಿನ ತೀವ್ರತೆಗೆ ಕಣ್ಣು ಕತ್ತಲಾವರಿಸಿದಾಗ, ಸಾವರಿಸಿಕೊಂಡು ಸಮೀಪದಲ್ಲಿದ್ದ ಗೋಣಿಚೀಲದ ಮೇಲೆ ಪ್ರಯಾಸದಿಂದ ಕುಳಿತುಕೊಳ್ಳಬೇಕಾಯಿತು. ಆಕಸ್ಮಿಕವಾಗಿ ಉಲ್ಬಣಿಸಿದ್ದ ತನ್ನ ಸೊಂತನೋವಿಗೆ, ದೀವಿಹಲಸಿನ ಪೊಡಿಯ ಸೇವನೆಯೇ ಕಾರಣವಾಗಿರಬೇಕೆಂದು ನಾಗಪ್ಪನಿಗೆ ಸಂದೇಹ ಮೂಡಿತ್ತು. ಮುಂದಿನ ಮೂರು ದಿನಗಳ ಕಾಲ ಹೆಂಡತಿ ನೀಡಿದ ಜೀರಿಗೆ ಕಷಾಯ ಹಾಗೂ ದಿನಕ್ಕೆರಡು ಬಾರಿ ತಿಕ್ಕುತ್ತಿದ್ದ ನೋವಿನೆಣ್ಣೆಗಳ ಚಿಕಿತ್ಸೆಯಿಂದ ಆತನು ಸಂದೆಹಿಸಿದ್ದ ವಾಯುಬಾಧೆ ಶಮನವಾಗಲೇ ಇಲ್ಲ. 

ನಾಲ್ಕನೆಯ ದಿನ ಹಾಸಿಗೆಯಿಂದ ಏಳಲಾರದೇ ನರಳುತ್ತಿದ್ದ ಪತಿಯ ಅವಸ್ಥೆಯನ್ನು ಕಂಡು ಗಾಬರಿಗೊಂಡ ಆತನ ಪತ್ನಿಯು, ಸಮೀಪದಲ್ಲಿದ್ದ ವೈದ್ಯರನ್ನು ಮನೆಗೆ ಕರೆಸಿದ್ದಳು. ರೋಗಿಯನ್ನು ಪರೀಕ್ಷಿಸಿ ವೇದನಾ ಶಾಮಕ ಇಂಜೆಕ್ಷನ್ ನೀಡಿದ ವೈದ್ಯರು, ತಜ್ಞವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆಯುವಂತೆ ಸೂಚಿಸಿದ್ದರು. ಅದೇ ಸಂಜೆ ತಜ್ನವೈದ್ಯೆರಲ್ಲಿಗೆ ತೆರಳಿದ ನಾಗಪ್ಪನಿಗೆ ಅವಶ್ಯಕ ಪರೀಕ್ಷೆಗಳನ್ನು ನಡೆಸಿದ ವೈದ್ಯರಿಗೆ "ಸ್ಲಿಪ್ ಡಿಸ್ಕ್" ಬಾಧಿಸುತ್ತಿರುವುದು ಪತ್ತೆಯಾಗಿತ್ತು. ಸುಮಾರು ಮೂರು ವಾರಗಳ ಚಿಕಿತ್ಸೆ ಹಾಗೂ ವಿಶ್ರಾಂತಿಗಳಿಂದ ಸಮಸ್ಯೆ ಬಗೆಹರಿಯದ ಕಾರಣದಿಂದಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಕೆಲವೇ ದಿನಗಳಲ್ಲಿ ಸಂಪೂರ್ಣ ಗುಣಮುಖನಾದ ನಾಗಪ್ಪನು, ಇಂದಿಗೂ ಅಪ್ಪಿತಪ್ಪಿಯೂ ದೀವಿಹಲಸಿನ ಪೋಡಿಯನ್ನು ಮಾತ್ರ ತಿನ್ನುವುದೇ ಇಲ್ಲ!. 

ರೋಗಿಯ ನಿರ್ಲಕ್ಷ್ಯ- ಹೊಸ ವ್ಯಾಧಿ ಪ್ರತ್ಯಕ್ಷ!

ಬಾಲ್ಯದಿಂದಲೂ ಔಷದಗಳ ಬಗ್ಗೆ ವಿಪರೀತ ವ್ಯಾಮೊಹವಿದ್ದ ಸಂತೋಷನಿಗೆ ಔಷದ ಅಂಗಡಿಯ ಮಾಲೀಕ ಗಣೇಶನ ಪರಿಚಯವಾಗಿದ್ದು ವರದಾನವೆನಿಸಿತ್ತು. ದಿನದಲ್ಲಿ ಒಂದೆರಡು ಗಂಟೆಗಳ ಕಾಲ ಗಣೇಶನ ಅಂಗಡಿಯಲ್ಲಿ ಪಟ್ಟಾಂಗ ಹೊಡೆಯುತ್ತಿದ್ದ ಸಂತೋಷನಿಗೆ, ಕ್ರಮೇಣ ಕಳವಾರು ಔಷದಗಳ ಹೆಸರು ಮತ್ತು ಉಪಯೋಗಗಳನ್ನು ತಿಳಿದುಕೊಳ್ಳುವ ಅವಕಾಶವೂ ನಿರಾಯಾಸವಾಗಿ ದೊರೆತಿತ್ತು. 

ಖ್ಯಾತನಾಮ ವೈದ್ಯರ ರೋಗಿಗಳು ಇಲ್ಲಿ ಔಷದಗಳನ್ನು ಖರೀದಿಸುತ್ತಿದುದರಿಂದ ವಿವಿಧ ಕಾಯಿಲೆಗಳಿಗೆ ವಿಭಿನ್ನ ವೈದ್ಯರು ನೀಡುತ್ತಿದ್ದ ಚಿಕಿತ್ಸೆಗಳ ಬಗ್ಗೆ ಅರಿತುಕೊಳ್ಳುವ ಅವಕಾಶವೂ ಲಭಿಸಿತ್ತು. ಒಂದೆರಡು ವರ್ಷಗಳಲ್ಲಿ ಈ "ವಿದ್ಯೆ" ಯನ್ನು ಕರತಲಾಮಕ ಮಾಡಿಕೊಂಡಿದ್ದ ಸಂತೋಷನು ತನ್ನ ಪರಿಚಿತರ ಆರೋಗ್ಯದ ಸಮಸ್ಯೆಗಳಿಗೆ ಔಷದಗಳನ್ನು ನೀಡಲು ಆರಂಭಿಸಿದ್ದನು. ವೈದ್ಯರಿಗೆ ನೀಡಬೇಕಾದ ಶುಲ್ಕ ಉಳಿಯುವುದೆಂದು ಈತನ ಚಿಕಿತ್ಸೆಯನ್ನು ಪಡೆಯುತ್ತಿದ್ದ ವ್ಯಕ್ತಿಗಳಿಗೆ, ಮುಂದೆ ಸಂಭವಿಸಬಹುದಾದ ಅನಾಹುತಗಳ ಅರಿವೇ ಇರಲಿಲ್ಲ. 

ಸಂತೋಷನ ಖ್ಯಾತಿಯನ್ನು ಕೇಳಿದ್ದ ಆತನ ಮನೆಯ ಮಾಲೀಕ ಶಾಮಣ್ಣನವರು,ಒಂದೆರಡು ವರ್ಷಗಳಿಂದ ತಮ್ಮನ್ನು ಪೀಡಿಸುತ್ತಿದ್ದ ಸೊಂತನೋವಿನ ಚಿಕಿತ್ಸೆಗಾಗಿ ಆತನ ಸಲಹೆ ಪಡೆದಿದ್ದರು. ದಿನದಲ್ಲಿ ಮೂರುಬಾರಿ ಸೇವಿಸಬೇಕಾದ ಮೂರು ವಿಧದ ಮಾತ್ರೆಗಳು- ಕ್ಯಾಪ್ಸೂಲ್ ಗಳೊಂದಿಗೆ ಸೊಂಟಕ್ಕೆ ಹಚ್ಚಿಕೊಳ್ಳಲು ಜೆಲ್ ನೀಡಿದ ಸಂತೋಷನು, ನಾರ ಕಳೆಯುವಷ್ಟರಲ್ಲಿ ಸಮಸ್ಯೆ ಪರಿಹಾರವಾಗುವುದು ಎಂದು ಭರವಸೆಯನ್ನು ನೀಡಿದ್ದನು. 

ಆದರೆ ವಾರ ಕಳೆದರೂ ಸಮಸ್ಯೆ ಪರಿಹಾರಗೊಳ್ಳದ ಕಾರಣದಿಂದಾಗಿ ಸಂತೋಷನ ಚಿಕಿತ್ಸೆ ಮುಂದುವರೆದಿತ್ತು. ಮೂರು ವಾರಗಳ ಬಳಿಕ ಸೊಂಟನೋವು ಕಡಿಮೆಯಾಗದಿದ್ದರೂ, ಶಾಮಣ್ಣನವರಿಗೆ ಎದೆಯುರಿ ಮತ್ತು ಹೊಟ್ಟೆನೋವು ಆರಂಭವಾಗಿತ್ತು. ವಿಷಯವರಿತ ಸಂತೋಷನು ತನ್ನ ಚಿಕಿತ್ಸೆ ಮತ್ತು ಈ ಹೊಸ ಸಮಸ್ಯೆಗೆ ಏನೇನೂ ಸಂಬಂಧವಿಲ್ಲ ಎಂದು ಕೈಯ್ಯಾಡಿಸಿದ್ದನು. ಇದಾದ ಒಂದೆರಡು ದಿನಗಳ ಬಳಿಕ ಅಪರಾತ್ರಿಯಲ್ಲಿ ಶಾಮಣ್ಣನವರ ಹೊಟ್ಟೆನೋವು- ಎದೆಯುರಿಗಳು ತೀವ್ರವಾಗಿ ಉಲ್ಬಣಿಸಿದ ಪರಿಣಾಮವಾಗಿ ರಕ್ತ ಮಿಶ್ರಿತ ವಾಂತಿಯೂ ಆಗಿತ್ತು. ನೆರೆಕರೆಯವರ ಸಹಾಯದಿಂದ ಆಸ್ಪತ್ರೆಗೆ ಸೇರಿಸಲ್ಪಟ್ಟ ಶಾಮಣ್ಣನವರ ಜಠರದ ಹುಣ್ಣು ಉಳ್ಬನಿಸಿರುವುದು ವೈದ್ಯರಿಗೆ ಪತ್ತೆಯಾಗಿತ್ತು. ಹತ್ತಾರು ದಿನಗಳ ಆಸ್ಪತ್ರೆವಾಸದ ಬಳಿಕ ಮನೆಗೆ ಮರಳಿದ ಶಾಮಣ್ಣನವರು ಸಂತೋಷನ ಚಿಕಿತ್ಸೆಯಿಂದ ತಮ್ಮ ಆರೋಗ್ಯದೊಂದಿಗೆ ಸಹಸ್ರಾರು ರೂಪಾಯಿಗಳನ್ನು ಕಳೆದುಕೊಂಡಿದ್ದು ವಿಚಿತ್ರ ಆದರೂ ಸತ್ಯ!. 

ಬೆಂಬಿಡದ ಬೆನ್ನುನೋವು 

ವೈದ್ಯಕೀಯ ಪರಿಭಾಷೆಯಲ್ಲಿ "ಲೋ ಬ್ಯಾಕ್ ಪೈನ್" ಎಂದು ಕರೆಯಲ್ಪಡುವ ಈ ಸಮಸ್ಯೆಯು, ವಿಶ್ವದ ಶೇ. ೮೦ ರಷ್ಟು ಜನರ ಜೀವಿತಾವಧಿಯಲ್ಲಿ ಒಂದಲ್ಲ ಒಂದುಬಾರಿಯಾದರೂ ಬಾಧಿಸುತ್ತದೆ. ಜಗತ್ತಿನಾದ್ಯಂತ ವ್ಯಾಪಕವಾಗಿ ಕಂಡುಬರುವ ಶೀತ ಮತ್ತು ತಲೆನೋವುಗಳ ಅನಂತರ, ಮೂರನೆಯ ಸ್ಥಾನವು ಸೊಂಟನೋವಿಗೆಸಲ್ಲುತ್ತದೆ!. ಜನಸಾಮಾನ್ಯರ ದೈನಂದಿನ ಕೆಲಸಕಾರ್ಯಗಳಿಗೂ ತೊಡಕಾಗಬಲ್ಲ ಈ ಸೊಂಟನೋವು, ಆಕಸ್ಮಿಕವಾಗಿ ಉಲ್ಬಣಿಸಿದಲ್ಲಿ, ಎಂಟೆದೆಯ ಬಂಟರೂ ಹಾಸಿಗೆ ಹಿಡಿಯುವುದು ಅಪರೂಪವೇನಲ್ಲ. ಇತ್ತೀಚಿನ ಒಂದೆರಡು ದಶಕಗಳಲ್ಲಿ ಈ ಸಮಸ್ಯೆ ಹೆಚ್ಚುತ್ತಿರಲು ಆಧುನಿಕ- ಆರಾಮದಾಯಕ ಜೀವನ ಶೈಲಿಯೇ ಕಾರಣವೆನ್ನಬಹುದು. 

ಯೌವ್ವನ- ವೃದ್ಧಾಪ್ಯ, ಬಡವ- ಬಲ್ಲಿದ ಮತ್ತು ಸ್ತ್ರೀ- ಪುರುಷರೆನ್ನುವಭೇದವನ್ನೇ ತೋರದೇ, ಎಲ್ಲರನ್ನೂ ಬಾಧಿಸಬಲ್ಲ ಸೊಂಟನೋವಿನ ಬಗ್ಗೆ ಜನರ ಮನದಲ್ಲಿ ಸಾಕಷ್ಟು ತಪ್ಪುಕಲ್ಪನೆಗಳಿವೆ. ಬಹುತೇಕ ಜನರಲ್ಲಿ ಆಕಸ್ಮಿಕವಾಗಿ ಪ್ರಾರಂಭವಾಗಿ ತೀವ್ರಗೊಳ್ಳುವ ಸೊಂಟನೋವಿಗೆ"ವಾಯು, ಉಷ್ಣ ಮತ್ತು ಗ್ಯಾಸ್ಟ್ರಿಕ್" ತೊಂದರೆಗಳೇ ಕಾರಣವೆಂದು ನಂಬಿರುವವರಲ್ಲಿ ಹೆಚ್ಚಿನವರು ವಿದ್ಯಾವಂತರೇ ಎಂದಲ್ಲಿ ನೀವೂ ನಂಬಲಾರಿರಿ. ಅಧಿಕತಮ ಜನರು ಪ್ರಾರಂಭಿಕ ಹಂತದಲ್ಲಿ ಇದನ್ನು ನಿರ್ಲಕ್ಷಿಸುವುದು ಅಥವಾ ಸ್ವಯಂ ಚಿಕಿತ್ಸೆ ಪ್ರಯೋಗಿಸುವುದು ಅಪರೂಪವೇನಲ್ಲ. ಕುಳಿತರೆ ಏಳಲಾರದ, ಬಗ್ಗಿದಾಗ ಮತ್ತೆ ನೆಟ್ಟಗೆ ನಿಲ್ಲಲಾರದ ಅಥವಾ ಮಲಗಿದಲ್ಲಿಂದ ಎದ್ದೇಳಲಾರದ ಸ್ಥಿತಿಯನ್ನು ತಲುಪಿದ ಬಳಿಕವೇ ವೈದ್ಯರ ಸಲಹೆ- ಚಿಕಿತ್ಸೆಗಳಿಗೆ ಶರಣಾಗುವುದು ಭಾರತೀಯರ ವಿಶೇಷತೆ ಎನ್ನುವುದು ನಿಮಗೂ ತಿಳಿದಿರಲೇಬೇಕು!. 

ಕಾರಣಗಳೇನು?

ಸೊಂಟನೋವು ಪ್ರಾರಂಭವಾಗಲು ಹಾಗೂ ತೀವ್ರಗೊಳ್ಳಲು ನಿಮ್ಮ ಜೀವನ ಶೈಲಿ, ನಿಮ್ಮ ಉದ್ಯೋಗ, ಶಾರೀರಿಕ ಕ್ಷಮತೆಯ ಮಟ್ಟ ಮತ್ತು ದುರಭ್ಯಾಸಗಳೂ ಕಾರಣವೆನಿಸಬಲ್ಲವು. ಅಂತೆಯೇ ಸ್ತ್ರೀಯರಲ್ಲಿ ವಿವಿಧ ಶ್ರಮದಾಯಕ ಮನೆಗೆಲಸಗಳಿಂದ ಪ್ರಾರಂಭಿಸಿ, ಎತ್ತರದ ಹಿಮ್ಮಡಿಯ ಪಾದರಕ್ಷೆಯನ್ನು ಧರಿಸುವ "ಫ್ಯಾಶನ್" ಕೂಡಾ ಈ ಸಮಸ್ಯೆಗೆ ಮೂಲವೆನಿಸುವ ಸಾಧ್ಯತೆಗಳಿವೆ. 

ಆರಾಮದಾಯಕ ಜೀವನ ಶೈಲಿ, ದೈನಂದಿನ ವ್ಯಾಯಾಮ ಮತ್ತು ಶಾರೀರಿಕ ಕ್ಷಮತೆಯ ಅಭಾವ, ಅತಿಯಾದ ಶಾರೀರಿಕ ಶ್ರಮದ ಕೆಲಸಗಳು, ಅಸಮರ್ಪಕ ಶಾರೀರಿಕ ಭಂಗಿಗಳು, ಅತಿಭಾರ ಎತ್ತುವುದು ಹಾಗೂ ಹೊರುವುದು, ಎರಡಕ್ಕೂ ಹೆಚ್ಚುಬಾರಿ ಗರ್ಭಧಾರಣೆ ಮತ್ತು ಪ್ರಸವ, ಅತಿಬೊಜ್ಜು, ಅಧಿಕ ತೂಕ, ಅತಿ ಧೂಮಪಾನ , ಅತಿ ಮದ್ಯಪಾನ ಮತ್ತು ವೃತ್ತಿ ಸಂಬಂಧಿತ ಅಪಾಯಕಾರಿ ಅಂಶಗಳು ಸೊಂಟನೋವಿಗೆ ಪ್ರಮುಖ ಕಾರಣಗಳಾಗಿವೆ. 

ಬೆನ್ನು ಮೂಳೆಯೇ ಅಸಹಜತೆ,ಕೆಲ ವಿಧದ ಸೋಂಕುಗಳು, ಕಶೇರು ಅಸ್ಥಿಯ ಕುಸಿತ, ವಿಶಿಷ್ಟ ರೀತಿಯ ಮಾಂಸ ಪೇಶಿಗಳ ಕಾಯಿಲೆ, ಟಿ. ಬಿ , ಕೆಲವಿಧದ ಅರ್ಬುದ ( ಉದಾ- ಬೆನ್ನು ಮೂಳೆಯ ಕ್ಯಾನ್ಸರ್), ಸ್ತ್ರೀಯರ ಅಂಡಾಶಯಗಳ ಕ್ಯಾನ್ಸರ್ ಇತ್ಯಾದಿಗಳೂ ಈ ಸಮಸ್ಯೆಯನ್ನುಂಟು ಮಾಡಬಲ್ಲವು. ಅಂತೆಯೇ ಅಸ್ಥಿಸಂಧಿಗಳ ಉರಿಯೂತ, ಸ್ಪಾಂಡಿಲೈಟಿಸ್, ರುಮಾಟಾಯ್ದ್ ಆರ್ಥ್ರೈಟಿಸ್, ರುಮಾಟಿಕ್ ಜ್ವರ, ಮೂಲೆಗಳ ದೌರ್ಬಲ್ಯ ಹಾಗೂ ಸವೆತ, ಸ್ಥಾನಪಲ್ಲಟಗೊಂಡ ಅಥವಾ ಹೊರಚಾಚಿದ ಕಶೇರು ಅಸ್ಥಿ, ದೀರ್ಘಕಾಲೀನ ಮಾನಸಿಕ ಖಿನ್ನತೆ, ಅತಿಯಾದ ಕೆಮ್ಮು ಮತ್ತು ಸ್ಟೆರಾಯ್ಡ್ ಔಷದಗಳ ದೀರ್ಘಕಾಲೀನ ಸೇವನೆಗಳಿಂದಲೂ ಸೊಂಟನೋವು ಉದ್ಭವಿಸುವ ಹಾಗೂ ಉಲ್ಬಣಿಸುವ ಸಾಧ್ಯತೆಗಳಿವೆ. ಇದಲ್ಲದೆ ಕೆಲವಿಧದ ಮೂತ್ರಪಿಂಡಗಳ- ಗರ್ಭಕೋಶದ ಕಾಯಿಲೆಗಳು, ಮೂತ್ರಾಶಯದ ಸೋಂಕು, ರಿಕೆಟ್ಸ್ ಮತ್ತು ಆಸ್ಟಿಯೋಮಲೇಶಿಯಾ ಗಳಂತಹ ವ್ಯಾಧಿಗಳು ಬೆನ್ನು ನೋವಿನ ಸಮಸ್ಯೆಯನ್ನು ಹುಟ್ಟುಹಾಕುವುದುಂಟು. 

ಅಪಾಯಕಾರಿ ಸಂಕೇತಗಳು 

೧೮ ವರ್ಷಕ್ಕಿಂತ ಕೆಳಗಿನ ಮತ್ತು ೫೦ ವರ್ಷ ಮೀರಿದ ವ್ಯಕ್ತಿಗಳಲ್ಲಿ ಆಕಸ್ಮಿಕವಾಗಿ ಪ್ರಾರಂಭವಾಗಿ, ಕ್ಷಣಮಾತ್ರದಲ್ಲಿ ತೀವ್ರಗೊಂಡು ಅನೇಕ ದಿನಗಳ ಕಾಲ ಬಾಧಿಸುವ ಸೊಂಟನೋವು, ಕೈಕಾಲು ಮತ್ತು ತೊದೆಗಳಲ್ಲಿ ಬಲಹೀನತೆ ಅಥವಾ ಸ್ಪರ್ಶಜ್ಞಾನದ ಅಭಾವ, ಕೈಕಾಲುಗಳ ಮಾಂಸಪೇಶಿಗಳಲ್ಲಿ ಅಸಹಜ ದೌರ್ಬಲ್ಯ, ಸೊಂಟದ ಹಿಂಭಾಗದಿಂದ ಆರಂಭಿಸಿ ಕಾಲಿನ ಹಿಮ್ಮಡಿಯ ತನಕ ಅಥವಾ ಹೆಗಲಿನಿಂದ ಆರಂಭಿಸಿ ಕೈಬೆರಳುಗಳ ತನಕ ಛಳಕು ಹೊಡೆದಂತೆ ನೋವು, ಜ್ವರ, ಬೆನ್ನು ಅಥವಾ ಸೊಂಟದಲ್ಲಿ ಬಾವು ಮತ್ತು ಉರಿಯೂತ, ಸೊಂಟದ ಮಧ್ಯಭಾಗದಲ್ಲಿ ತೀವ್ರ ಉರಿ ಮತ್ತು ನೋವು, ಮಲ- ಮೂತ್ರ ವಿಸರ್ಜನೆಗಳು ರೋಗಿಗೆ ಅರಿವಿಲ್ಲದಂತೆ ಆಗುವುದು, ಮೂತ್ರ ವಿಸರ್ಜಿಸಲು ಕಷ್ಟಸಾಧ್ಯವೆನಿಸುವುದು, ಜನನಾಂಗದಲ್ಲಿ ಅಥವಾ ಸೊಂಟದಿಂದ ಪಾದಗಳ ತನಕ ತೀವ್ರ ನೋವು ಮತ್ತು ನಡೆಯುವಾಗ ನಿಯಂತ್ರಣ ಇಲ್ಲದಂತಾಗುವ ಸಮಸ್ಯೆಗಳು ರೋಗಿಯನ್ನು ಕಾಡುತ್ತಿದ್ದಲ್ಲಿ, ವಿಳಂಬಿಸದೆ ತಜ್ಞವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆಯುವುದರಿಂದ ಮುಂದೆ ಸಂಭವಿಸಬಹುದಾದ ಗಂಭೀರ ತೊಂದರೆಗಳನ್ನು ತಡೆಗಟ್ಟುವುದು ಸುಲಭಸಾಧ್ಯ. 

ಅವಶ್ಯಕ ಪರೀಕ್ಷೆಗಳು 

ಬಹುತೇಕ ಜನರಲ್ಲಿ ಅಪರೂಪದಲ್ಲಿ ಕಂಡುಬರುವ ಸೌಮ್ಯ ರೂಪದ ಸೊಂತನೋವಿಗೆ ದೈನಂದಿನ ಚಟುವಟಿಕೆಗಳು ಅಥವಾ ಆಘಾತಗಳು ಕಾರಣವಾಗಿರುತ್ತವೆ. ಅಲ್ಪಾವಧಿಯ ಚಿಕಿತ್ಸೆಯಿಂದ ಶಮನಗೊಳ್ಳುವ ಇಂತಹ ನೋವಿಗೆ ವಿಶೇಷ ಪರೀಕ್ಷೆಗಳನ್ನು ನಡೆಸುವ ಅವಶ್ಯಕತೆಯೇ ಇರದು. ಆದರೆ ರೋಗಿಯ ದೈನಂದಿನ ಚಟುವಟಿಕೆ- ಕೆಲಸಕಾರ್ಯಗಳಿಗೂ ಅಡ್ಡಿಯಾಗಬಲ್ಲ, ತೀವ್ರ ನೋವಿನಿಂದ ಹಾಸಿಗೆ ಹಿಡಿಸಬಲ್ಲ ಮತ್ತು ದೀರ್ಘಕಾಲೀನ ಬೆನ್ನು- ಸೊಂಟನೋವುಗಳಿಗೆನಿರ್ದಿಷ್ಟ ಕಾರಣಗಳನ್ನು ಅರಿತುಕೊಳ್ಳಲು ನಿಖರವಾದ ಪರೀಕ್ಷೆಗಳನ್ನು ನಡೆಸಬೇಕಾಗುವುದು. ಇವುಗಳಲ್ಲಿ ಕ್ಷ- ಕಿರಣ, ಸಿ. ಟಿ ಸ್ಕ್ಯಾನ್, ಎಂ. ಆರ್. ಐ ಇತ್ಯಾದಿ ಪರೀಕ್ಷೆಗಳು ಪ್ರಮುಖವಾಗಿವೆ. 

ಚಿಕಿತ್ಸೆ: ಎಂತು- ಏನು? 

ಬೆನ್ನು- ಸೊಂತನೋವಿನ ರೋಗ ನಿದಾನ (Diagnosis) ಮತ್ತು ಚಿಕಿತ್ಸೆಗಳಲ್ಲಿ ಕುಟುಂಬ ವೈದ್ಯರು, ವೈದ್ಯಕೀಯ ತಜ್ಞರು, ಮೂಳೆಗಳ ತಜ್ಞರು, ಮೆದುಳು- ನರರೋಗ ತಜ್ಞರು, ಶಾರೀರಿಕ ಚಿಕಿತ್ಸಕರು, ಅರಿವಳಿಕೆ ತಜ್ಞರು ಮತ್ತು ಕೆಲ ಸಂದರ್ಭಗಳಲ್ಲಿ ಮಾನಸಿಕ ತಜ್ಞರ ಪಾತ್ರ ಮಹತ್ವಪೂರ್ಣ ಹಾಗೂ ಅತ್ಯವಶ್ಯಕ ಎನಿಸುವುದು. ವೈವಿಧ್ಯಮಯ ಕಾರಣಗಳಿಂದ ತಲೆದೋರುವ ಈ ವಿಶಿಷ್ಟ ಸಮಸ್ಯೆಯಲ್ಲಿ ತೀವ್ರ ನೋವು ಬಾಧಿಸಿದಾಗ ಪರಿಪೂರ್ಣ ವಿಶ್ರಾಂತಿ ಪ್ರಾಥಮಿಕ ಅವಶ್ಯಕತೆಯಾಗಿದೆ. ಆದರೆ ಇತ್ತೀಚಿನ ಸಂಶೋಧನೆಗಳಂತೆ ವಿಶ್ರಾಂತಿ ಮತ್ತು ಔಷದಗಳಿಂದ ನೋವಿನ ತೀವ್ರತೆ ಕಡಿಮೆಯಾದಂತೆಯೇ , ಅಲ್ಪ ಪ್ರಮಾಣದ ಚಲನವಲನಗಳು ಮತ್ತು ಲಘು ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವುದು ಲಾಭದಾಯಕ ಎನಿಸುವುದು. 

ಅಂತೆಯೇ ಗಂಭೀರ ಸಮಸ್ಯೆಗಳು ಉದ್ಭವಿಸಿದಲ್ಲಿ ಔಷದ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಮಾನಸಿಕ ತಜ್ಞರ ಚಿಕಿತ್ಸೆ ಮತ್ತು ಶಾರೀರಿಕ ಚಿಕಿತ್ಸೆಗಳ ಸಂಯುಕ್ತ ಪ್ರಯೋಗವು ಅವಶ್ಯವೆನಿಸುವುದು. ಶಾರೀರಿಕ ಚಿಕಿತ್ಸೆಯ ಅಂಗವಾಗಿ ನಿಮ್ಮ ಬೆನ್ನು- ಸೊಂಟದ ಭಾಗಗಳಲ್ಲಿನ ಮಾಂಸಪೇಶಿಗಳು, ಅಸ್ಥಿಸಂಧಿಗಳು ಹಾಗೂ ಶಾರೀರಿಕ ಕ್ಷಮತೆಯ ಮಟ್ಟವನ್ನು ಹೆಚ್ಚಿಸಬಲ್ಲ ಲಘು ವ್ಯಾಯಾಮಗಳು ಖಚಿತವಾಗಿಯೂ ಅಪೇಕ್ಷಿತ ಪರಿಣಾಮವನ್ನು ನೀಡುತ್ತವೆ. ಇದಲ್ಲದೆ ಸಂದರ್ಭೋಚಿತವಾಗಿ ಶಾಖ, ಅಲ್ಟ್ರಾ ಸೌಂಡ್, ಡೈನಾವೇವ್, ಮಸಾಜ್ ಮತ್ತು ಬಿಸಿನೀರಿನ ಚೀಲ, ಇನ್ಫ್ರಾ ರೆಡ್ ದೀಪ ಹಾಗೂ ಶಾರ್ಟ್ ವೇವ್ ಡಯಾಥರ್ಮಿಗಳನ್ನೂ ಬಳಸುತ್ತಾರೆ. 

ರೋಗಿಯನ್ನು ಹಾಸಿಗೆಯಲ್ಲಿ ಮಲಗಿಸಿ "ಟ್ರಾಕ್ಶನ್" ನೀಡುವುದು, ಸೊಂಟಕ್ಕೆ ಆಧಾರವನ್ನು ನೀಡುವ ಲಂಬೋ ಸಾಕ್ರಲ್ ಬೆಲ್ಟ್ ಧರಿಸುವುದು, ಸೊಂಟದ ನಿರ್ದಿಷ್ಟ ಭಾಗದಲ್ಲಿ ಇಂಜೆಕ್ಷನ್ ನೀಡುವುದು, ಆಕ್ಯುಪಂಕ್ಚರ್, ಯೋಗ ಇತ್ಯಾದಿಗಳೂ ಈ ಸಮಸ್ಯೆಯ ಪರಿಹಾರದಲ್ಲಿ ಪರಿಣಾಮಕಾರಿ ಎನಿಸುತ್ತವೆ. ಆದರೆ ಗಂಭೀರ ಹಾಗೂ ಅಪಾಯಕಾರಿ ಸಂಕೇತಗಳು- ಲಕ್ಷಣಗಳು ಕಂಡುಬಂದಲ್ಲಿ ಶಸ್ತ್ರಚಿಕಿತ್ಸೆಯೇ ಏಕಮಾತ್ರ ಪರಿಹಾರವೆನಿಸುವುದು. 

ಕೊನೆಯದಾಗಿ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ಸೊಂಟ- ಬೆನ್ನು ನೋವು ನಿಮ್ಮನ್ನು ಪೀಡಿಸುತ್ತಿದ್ದಲ್ಲಿ, ಅವಶ್ಯವಾಗಿ ತಜ್ಞವೈದ್ಯರ ಸಲಹೆ ಪಡೆಯಿರಿ. ನಿಮ್ಮ ನೆರೆಕರೆಯ "ಸ್ವಯಂವೈದ್ಯ" ರು ಸೂಚಿಸುವ ಗುಳಿಗೆಗಳನ್ನು ಯಾವುದೇ ಕಾರಣಕ್ಕೂ ಸೇವಿಸದಿರಿ. ನಿಮಗೆ ವಯಸ್ಸಾದಂತೆಯೇ ಸವೆತಕ್ಕೊಳಗಾದ ನಿಮ್ಮ ಅಸ್ಥಿಸಂಧಿಗಳಲ್ಲಿ ಪ್ರಾರಂಭವಾಗುವ ನೋವು, ಕೇವಲ ಒಂದು ಇಂಜೆಕ್ಷನ್ ನಿಂದ ಶಾಶ್ವತವಾಗಿ ಗುಣವಾಗದೆಂದು ಅರಿತಿರಿ. ಅದೇ ರೀತಿಯಲ್ಲಿ ಮೂಳೆಗಳು ಕಾಲಕ್ರಮೇಣ ತಮ್ಮ ಧೃಢತೆಯನ್ನು ಕಳೆದುಕೊಳ್ಳುವುದರಿಂದಾಗಿ, ವಯಸ್ಸಾದವರಲ್ಲಿ ಮೂಳೆಗಳ ದೌರ್ಬಲ್ಯವೂ ಹೆಚ್ಚಾಗಿ ಕಂಡುಬರುವುದು. ಇದಕ್ಕಾಗಿ ನೋವು ನಿವಾರಕ ಎಣ್ಣೆಗಳನ್ನುತಿಕ್ಕುವುದರಿಂದ ನಿಮ್ಮ ಮೂಳೆಗಳು ತಮ್ಮ ಧೃಢತೆಯನ್ನು ಮತ್ತೆ ಗಳಿಸಿಕೊಳ್ಳುವುದು ಅಸಾಧ್ಯ ಎನ್ನುವುದನ್ನು ಮರೆಯದಿರಿ. 

ಆರೋಗ್ಯಕರ ಜೀವನಶೈಲಿ, ಶಿಸ್ತುಬದ್ಧ ಜೀವನ ಕ್ರಮ,ಸಮತೋಲಿತ ಆಹಾರ ಸೇವನೆ, ಪ್ರತಿನಿತ್ಯ ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಮಾನಸಿಕ ಒತ್ತಡಗಳನ್ನು ದೂರವಿರಿಸುವ ಮೂಲಕ ನಿಮ್ಮ ದೈಹಿಕ ಕ್ಷಮತೆ ಹಾಗೂ ಆರೋಗ್ಯಗಳನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳುವುದು ನಿಶ್ಚಿತವಾಗಿಯೂ ಸುಲಭಸಾಧ್ಯವೆನಿಸುವುದು. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೯-೦೯-೨೦೦೪ ರ ಸಂಚಿಕೆಯ ಬಳಕೆದಾರ; ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ 


Friday, December 13, 2013

Infrastructure development!

           ಅಭಿವೃದ್ಧಿ ಯೋಜನೆ: ತಜ್ಞರಿಗಿಲ್ಲ ಮುಂದಾಲೋಚನೆ!

ದೇಶದ ಪ್ರಜೆಗಳು ನೆಮ್ಮದಿಯಿಂದ ಜೀವಿಸಲು ಅತ್ಯವಶ್ಯಕವೆನಿಸುವ ಮೂಲ ಮತ್ತು ಇನ್ನಿತರ ಸೌಕರ್ಯಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳುತ್ತವೆ. ಕೋಟ್ಯಂತರ ರೂಪಾಯಿ ವೆಚ್ಚದ ಬೃಹತ್ ಯೋಜನೆಗಳ ಅನುಷ್ಠಾನಕ್ಕೆ ಮುನ್ನ ಮತ್ತು ಅನುಷ್ಠಾನದ ಸಂದರ್ಭದಲ್ಲಿ ಸಂಭವಿಸುವ ಲೋಪದೋಷಗಳಿಂದಾಗಿ, ಜನಸಾಮಾನ್ಯರಿಗೆ ಅಯಾಚಿತ ಕಷ್ಟಗಳು ಮತ್ತು ಸರಕಾರಕ್ಕೆ ಸಾಕಷ್ಟು ನಷ್ಟವೂ ಸಂಭವಿಸುತ್ತಿದೆ. ಆದರೆ ಇಂತಹ ಯೋಜನೆಗಳ ಸಾಧಕ- ಬಾಧಕಗಳ ಬಗ್ಗೆ ಸಮೀಕ್ಷೆಯನ್ನು ನಡೆಸುವ ಮತ್ತು ಇದರ ರೂಪುರೇಷೆಗಳನ್ನು ಸಿದ್ಧಪಡಿಸುವ ತಾಂತ್ರಿಕ ತಜ್ಞರು, ಇವೆಲ್ಲವನ್ನೂ ನಿರ್ಲಕ್ಷಿಸುತ್ತಿರುವುದು ನಂಬಲು ಅಸಾಧ್ಯವೆನಿಸುತ್ತಿದೆ. 

ಉದಾಹರಣೆಗೆ ಕರಾವಳಿ ಕರ್ನಾಟಕದ ಆಯ್ದ ಹತ್ತು ನಗರ- ಪಟ್ಟಣಗಳ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಹಮ್ಮಿಕೊಂಡಿದ್ದ ೧೦೫೬ ಕೋಟಿ ರೂ.ಗಳ ಕುದ್ಸೆಮ್ಪ್ ಯೋಜನೆಯ ಸಾಧಕ- ಬಾಧಕಗಳ ಬಗ್ಗೆ "ನೆಡೆಕೊ" ಎನ್ನುವ ವಿದೇಶಿ ಸಂಸ್ಥೆಯು ಸಮೀಕ್ಷೆಯನ್ನು ನಡೆಸಿತ್ತು. ಅಂತೆಯೇ ಈ ಯೋಜನೆಗೆ "ದಲಾಲ್ ಕನ್ಸಲ್ಟೆಟೆಂಟ್ಸ್" ಎನ್ನುವ ಸಂಸ್ಥೆಯನ್ನು ತಾಂತ್ರಿಕ ತಜ್ಞರನ್ನಾಗಿ ನೇಮಕ ಮಾಡಲಾಗಿತ್ತು. ೧೯೯೦ ರ ದಶಕದ ಅಂತ್ಯದಲ್ಲಿ ಈ ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸುವಾಗ, ಮುಂದಿನ ೨೫ ವರ್ಷಗಳಲ್ಲಿ ಈ ಹತ್ತು ನಗರ- ಪಟ್ಟಣಗಳಲ್ಲಿನ ಜನಸಂಖ್ಯೆ, ವಾಹನಗಳ ಸಂಖ್ಯೆ ಮತ್ತಿತರ ವಿವರಗಳನ್ನು ಪರಿಗಣಿಸಲಾಗಿತ್ತು. ಆದರೆ ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಅನೇಕ ಪ್ರಮುಖ ವಿಚಾರಗಳನ್ನು ಕಡೆಗಣಿಸಲಾಗಿತ್ತು. ತತ್ಪರಿಣಾಮವಾಗಿ ಇದೀಗ ಅನುಷ್ಠಾನಗೊಳ್ಳುತ್ತಿರುವ ಅನ್ಯ ಯೋಜನೆಗಳ ಕಾಮಗಾರಿಗಳಿಗೆ ಅಯಾಚಿತ ತೊಂದರೆಗಳು- ಅಡ್ಡಿ ಆತಂಕಗಳು ಬಾಧಿಸುತ್ತಿವೆ. ಇದಕ್ಕೊಂದು ಉತ್ತಮ ಉದಾಹರಣೆ ಇಲ್ಲಿದೆ. 

ಕುಡಿಯುವ ನೀರಿನ ಯೋಜನೆ 

ಕುಡ್ಸೆಂಪ್ ಯೋಜನೆಯನ್ವಯ ಪುತ್ತೂರಿನ ನಿವಾಸಿಗಳಿಗೆ ಪ್ರತಿನಿತ್ಯ ೧ ಕೋಟಿ ಲೀಟರ್ ಶುದ್ಧೀಕರಿಸಿದ ಕುಡಿಯುವ ನೀರಿನ ಪೂರೈಕೆಗಾಗಿ ಸುಮಾರು ೨೯ ಕೋಟಿ ರೂ.ಗಳನ್ನು ವ್ಯಯಿಸಲಾಗಿತ್ತು. ಉಪ್ಪಿನಂಗಡಿಯ ಸಮೀಪದಲ್ಲಿನ ನೆಕ್ಕಿಲಾಡಿ ಗ್ರಾಮದ ಸನಿಹದಲ್ಲಿ ಕುಮಾರಧಾರಾ ನದಿಗೆ ಅಡ್ಡವಾಗಿ ಕಿಂಡಿ ಅಣೆಕಟ್ಟನ್ನು ನಿರ್ಮಿಸಿ, ಇಲ್ಲಿ ಸಂಗ್ರಹಿತ ನೀರನ್ನು ಶುದ್ಧೀಕರಿಸಿದ ಬಳಿಕ, ಭೂಗತ ಕೊಳವೆಗಳ ಮೂಲಕ ಪುತ್ತೂರಿನ ಜಲಸಂಗ್ರಹಾಗಾರಕ್ಕೆ ರವಾನಿಸಬೇಕಿತ್ತು. ಈ ಭೂಗತ ಕೊಳವೆಗಳನ್ನು ಉಪ್ಪಿನಂಗಡಿ- ಪುತ್ತೂರು ರಸ್ತೆಯ ಅಂಚಿನಲ್ಲೇ ಅಳವಡಿಸಿದ್ದು, ಇದೀಗ ಕೆಪುಳು- ಪುತ್ತೂರು ಹೆದ್ದಾರಿಯ ರಸ್ತೆಯ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿ ಪರಿಣಮಿಸಿದೆ. ಕುಡ್ಸೆಂಪ್ ಯೋಜನೆಯ ತಾಂತ್ರಿಕ ಸಲಹೆಗಾರರು ಈ ಕುಡಿಯುವ ನೀರಿನ ಪೂರೈಕೆಯ ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸುವ ಸಂದರ್ಭದಲ್ಲಿ, ಮುಂದಿನ ೨೫ ವರ್ಷಗಳಲ್ಲಿ ಉಪ್ಪಿನಂಗಡಿ- ಪುತ್ತೂರು ರಸ್ತೆಯ ವಿಸ್ತರಣೆ- ಅಭಿವೃದ್ಧಿಗಳನ್ನು ಪರಿಗಣಿಸದೇ ಭೂಗತ ನೀರಿನ ಕೊಳವೆಗಳನ್ನು ಅಳವಡಿಸಿದ್ದುದು ಸಾಕಷ್ಟು ಸಮಸ್ಯೆಗಳಿಗೆ ಕಾರಣವೆನಿಸಿದೆ. ಇ ರಸ್ತೆಯ ಒಂದು ಬದಿಯಲ್ಲಿ ಕುಡ್ಸೆಂಪ್ ಯೋಜನೆಯ ಭೂಗತ ಕೊಳವೆಗಳು ಇದ್ದಲ್ಲಿ, ಮತ್ತೊಂದು ಬದಿಯಲ್ಲಿ ೮೦ ರ ದಶಕದಲ್ಲಿ ಅನುಷ್ಠಾನಗೊಂಡಿದ್ದ ಕುಡಿಯುವ ನೀರಿನ ಪೂರೈಕೆಯ ಭೂಗತ ಕೊಳವೆಗಳಿವೆ. ತತ್ಪರಿಣಾಮವಾಗಿ ರಸ್ತೆಗಳ ವಿಸ್ತರಣೆಗೆ ಅಡಚಣೆಯಾಗುತ್ತಿರುವ ಈ ಕೊಳವೆಗಳನ್ನು ಸ್ಥಳಾಂತರಿಸಲು ೭ ಕೋಟಿ ರೂ. ಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ್ದರೂ, ಆರ್ಥಿಕ ಅಡಚಣೆಗಳಿಂದಾಗಿ ೨ ಕೋಟಿ ರೂ. ಗಳನ್ನು ಮಂಜೂರು ಮಾಡಿ ಅತ್ಯವಶ್ಯಕ ಎನಿಸುವಲ್ಲಿ ಮಾತ್ರ ಭೂಗತ ಕೊಳವೆಗಳನ್ನು ಸ್ಥಳಾಂತರಿಸುವಂತೆ ಸೂಚಿಸಿದೆ. 

ಇಷ್ಟು ಮಾತ್ರವಲ್ಲ, ಪುತ್ತೂರು ನಗರದ ಅನೇಕ ರಸ್ತೆಗಳನ್ನು ಕುಡ್ಸೆಂಪ್ ಯೋಜನೆಯಲ್ಲಿ ವಿಸ್ತರಿಸಿ ಪುನರ್ನಿರ್ಮಿಸಿದ್ದು, ಜಲ ಸಂಗ್ರಹಾಗಾರದಿಂದ ನಗರಕ್ಕೆ ನೀರನ್ನು ಪೂರೈಸುವ ಭೂಗತ ಕೊಳವೆಗಳು ಇದೀಗ ಅಕ್ಷರಶಃ ವಿಸ್ತರಿತ ರಸ್ತೆಯ ಕೆಳಗಿವೆ!. ಈ ಕೊಳವೆಗಳು ಸೋರಲು ಆರಂಭಿಸಿದಲ್ಲಿ, ರಸ್ತೆಗಳನ್ನೇ ಅಗೆದು ದುರಸ್ಥಿ ಮಾಡಬೇಕಾಗುತ್ತದೆ. ಕೊಳವೆಗಳನ್ನು ದುರಸ್ಥಿಪಡಿಸಿದರೂ, ರಸ್ತೆಯ ಅಗೆದ ಭಾಗವನ್ನು ಪೂರ್ವಸ್ಥಿತಿಗೆ ಸರಿಯಾಗಿ ದುರಸ್ಥಿಪಡಿಸದೇ ಇರುವುದರಿಂದ ಈಗಾಗಲೇ ನಗರದ ಅನೇಕ ರಸ್ತೆಗಳು ಸಾಕಷ್ಟು ಹಾನಿಗೊಂಡಿವೆ. ಭೂಗತ ಕೊಳವೆಗಳ ಸೋರುವಿಕೆ ಇದೇ ರೀತಿಯಲ್ಲಿ ಮುಂದುವರೆದಲ್ಲಿ, ನಗರದ ಇತರ ರಸ್ತೆಗಳು ಮತ್ತು ಕಾಲುದಾರಿಗಳು ಸದ್ಯೋಭವಿಷ್ಯದಲ್ಲಿ ಅವಸಾನದ ಅಂಚನ್ನು ತಲುಪುವುದರಲ್ಲಿ ಸಂದೇಹವಿಲ್ಲ. 

ಇವೆಲ್ಲಕ್ಕೂ ಮಿಗಿಲಾಗಿ ಇದೇ ಕುಡ್ಸೆಂಪ್ ಯೋಜನೆಯಲ್ಲಿ "ಅನುಷ್ಠಾನ ಅಸಾಧ್ಯ"ವೆಂದು ಕೈಬಿಟ್ಟಿದ್ದ "ಒಳಚರಂಡಿ ಯೋಜನೆ" ಯನ್ನುಮತ್ತು ಕುಡಿಯುವ ನೀರಿನ ಪೂರೈಕೆಯ ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ರಾಜ್ಯ ಸರಕಾರವು ಅನುಕ್ರಮವಾಗಿ ೭೫ ಮತ್ತು ೧೫ ಕೋಟಿ ರೂ. ಗಳನ್ನು ಸಾಲದ ರೂಪದಲ್ಲಿ  ಮಂಜೂರು ಮಾಡಿದ್ದು, ಇದೀಗ ಇದನ್ನು ಅನುಷ್ಠಾನಗೊಳಿಸಲು ಸುಸ್ಥಿತಿಯಲ್ಲಿರುವ  ನಗರದ ರಸ್ತೆಗಳನ್ನು ಮತ್ತೊಮ್ಮೆ ಅಗೆಯಬೇಕಾಗುತ್ತದೆ. ಇವೆರಡೂ ಯೋಜನೆಗಳನ್ನು ಹಿಂದಿನ ಕುಡ್ಸೆಂಪ್ ಯೋಜನೆಯಲ್ಲೇ ಅನುಷ್ಠಾನಗೊಳಿಸಿದ ಬಳಿಕ ರಸ್ತೆಗಳ ಪುನರ್ ನವೀಕರಣವನ್ನು ನಡೆಸಿದ್ದಲ್ಲಿ ಇಂತಹ ಸಮಸ್ಯೆ ಉದ್ಭವಿಸುತ್ತಿರಲಿಲ್ಲ ಎನ್ನುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಅನುಷ್ಠಾನ ಅಸಾಧ್ಯವೆಂದ ಯೋಜನೆಯೊಂದು ಇದೀಗ ಸಾಧ್ಯವಾಗುವುದು ಹೇಗೆಂದು ನಮಗೂ ಅರ್ಥವಾಗುತ್ತಿಲ್ಲ!. 

ಅದೇನೇ ಇರಲಿ, ಜನಸಾಮಾನ್ಯರಿಗೂ ಅರ್ಥವಾಗುವ ಈ ಪ್ರಮುಖ ವಿಚಾರಗಳು ಇಂತಹ ಯೋಜನೆಗಳ ತಾಂತ್ರಿಕ ತಜ್ಞರಿಗೆ ಹೊಳೆಯುತ್ತಿಲ್ಲವೇಕೆ ?, ಎನ್ನುವ ಪ್ರಶ್ನೆಗೆ ಉತ್ತರವನ್ನು ನೀಡುವವರೇ ಇಲ್ಲ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಚಿತ್ರ - ಕುಡ್ಸೆಂಪ್ ಯೋಜನೆಯಲ್ಲಿ ಪುನರ್ ನವೀಕರಿಸಿದ್ದ ರಸ್ತೆಯನ್ನು ಸೋರುತ್ತಿರುವ ಭೂಗತ ಕೊಳವೆಯ ದುರಸ್ತಿಗಾಗಿ ಅಗೆದಿರುವುದು. 

Thursday, December 12, 2013

Cesarean Section



                                     
                ಸಿಸೇರಿಯನ್ ಹೆರಿಗೆಗಳು ಹೆಚ್ಚುತ್ತಿರುವುದೇಕೆ?

ಸುಮಾರು ಮೂರು ದಶಕಗಳ ಹಿಂದಿನ ತನಕ ನಮ್ಮ ದೇಶದಲ್ಲಿ ಸ್ವಾಭಾವಿಕ ಹೆರಿಗೆಗಳ ಸಂಖ್ಯೆಯೇ ಹೆಚ್ಚಾಗಿರುತಿತ್ತು. ಆದರೆ ಇಂದು ಸಿಸೇರಿಯನ್ ಸೆಕ್ಷನ್ ಶಸ್ತ್ರಚಿಕಿತ್ಸೆಯ ಮೂಲಕ ನಡೆಯುವ ಹೆರಿಗೆಗಳು ಗಣನೀಯವಾಗಿ ಹೆಚ್ಚುತ್ತಿವೆ. ಆದರೆ ಇದಕ್ಕೆ ಸೂಕ್ತ ಹಾಗೂ ಸಮರ್ಥನೀಯ ಕಾರಣಗಳೂ ಇವೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 
----------            ---------------             --------------                ----------------                ---------------            ---------------             --------------------

ಚೊಚ್ಚಲ ಹೆರಿಗೆಗಾಗಿ ತವರಿಗೆ ಬಂದಿದ್ದ ಸುಮತಿಯು ಮುತ್ತೂರಿನ ಖಾಸಗಿ ಆಸ್ಪತ್ರೆಯೊಂದನ್ನು ಆಯ್ಕೆ ಮಾಡಿ, ಅಲ್ಲಿನ ಪ್ರಸೂತಿ ತಜ್ಞರನ್ನು ಭೇಟಿಯಾಗಿದ್ದಳು. ಈ ಹಿಂದೆ ಆಕೆಯನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ವರದಿಯನ್ನು ಪರಿಶೀಲಿಸಿದ ಈ ವೈದ್ಯರು, ಸುಮತಿಯ ಶಾರೀರಿಕ ತಪಾಸಣೆಯನ್ನು ನಡೆಸಿದ್ದರು. ಬಳಿಕ ಆಕೆಯ ಹಾಗೂ ಗರ್ಭಸ್ಥ ಶಿಶುವಿನ ಆರೋಗ್ಯ ಉತ್ತಮವಾಗಿದ್ದು, ಯಾವುದೇ ಸಮಸ್ಯೆಗಳಿಲ್ಲದೇ ಸಾಮಾನ್ಯ ಹೆರಿಗೆಯಾಗುವ ಆಶ್ವಾಸನೆಯನ್ನು ನೀಡಿದ್ದರು. 

ನಿರಾಳವಾಗಿ ಮನೆಗೆ ಮರಳಿದ್ದ ಸುಮತಿಯು ಮೂರು ವಾರ ಕಳೆಯುವಷ್ಟರಲ್ಲಿ ಮಂಕಾಗಿ ಚಿಂತಾಕ್ರಾಂತಳಾಗಿದ್ದಳು. ಮಗಳ ಪರಿಸ್ಥಿತಿಯನ್ನು ಕಂಡ ಸೀತಮ್ಮನೂ ಚಿಂತಿತರಾಗಿದ್ದರು. ಇವರಿಬ್ಬರ ಚಿಂತೆಗೆ ನಿರ್ದಿಷ್ಟ ಕಾರಣಗಳೂ ಇದ್ದವು. 

ಸುಮತಿಯನ್ನು ಕಾಣಲು ಬರುತ್ತಿದ್ದ ಬಂಧುಮಿತ್ರರು ಆಕೆಯ ಮನದಲ್ಲಿ ಸಂದೇಹ ಹಾಗೂ ಗೊಂದಲ ಮೂಡುವಂತಹ ವರ್ಣರಂಜಿತ "ಸುದ್ದಿ" ಗಳನ್ನು ಹೇಳುತ್ತಿದ್ದುದೆ ತಾಯಿ ಮಗಳ ಚಿಂತೆಗೆ ಮೂಲಕಾರಣವೆನಿಸಿತ್ತು. ಈ ಬಂಧುಮಿತ್ರರ ಅಭಿಪ್ರಾಯದಂತೆ ಮುತ್ತೂರಿನ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದ "ಸಾಮಾನ್ಯ ಹೆರಿಗೆ" ಗಳ ಸಂಖ್ಯೆ ಬೆರಳೆಣಿಕೆಯಷ್ಟೇ ಇದ್ದಿತು. ಆದರೆ "ಸಿಸೇರಿಯನ್ ಸೆಕ್ಷನ್" ಶಸ್ತ್ರಚಿಕಿತ್ಸೆಯ ಮೂಲಕ ನಡೆಯುವ ಹೆರಿಗೆಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿತ್ತು!. ಇದಕ್ಕೂ ಮಿಗಿಲಾಗಿ ಪ್ರಾರಂಭಿಕ ಹಂತದಲ್ಲಿ "ನಾರ್ಮಲ್ ಡೆಲಿವರಿ' ಆಗುವುದೆಂದು ವೈದ್ಯರು ಭರವಸೆ ನೀಡಿದ್ದ ಬಹುತೇಕ ಗರ್ಭಿಣಿಯರಿಗೆ ಅಂತಿಮವಾಗಿ ಇಲ್ಲಸಲ್ಲದ ನೆಪಗಳನ್ನು ಒಡ್ಡಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸುವುದು ವಾಡಿಕೆಯಾಗಿತ್ತು. ಜನಸಾಮಾನ್ಯರು ಆಡಿಕೊಳ್ಳುವಂತೆ ಈ ವಿಶಿಷ್ಟ ಸಮಸ್ಯೆಗೆ ಖಾಸಗಿ ಆಸ್ಪತ್ರೆಗಳ ಮತ್ತು ತಜ್ಞವೈದ್ಯರ "ಧನದಾಹ" ವೇ ಪ್ರಮುಖ ಕಾರಣವಾಗಿತ್ತು. ಬಂಧುಮಿತ್ರರಿಂದ ಪದೇಪದೇಇಂತಹ ವರದಿಗಳನ್ನು ಕೇಳಿದ ಚೊಚ್ಚಲ ಬಸುರಿಯ ತಲೆ ಚಿಟ್ಟು ಹಿಡಿದಿತ್ತು. ತುಂಬು ಗರ್ಭಿಣಿಗೆಧೈರ್ಯ ತುಂಬುವ ಬದಲಾಗಿ ಆಕೆಯ ಸ್ಥೈರ್ಯವನ್ನೇ ಉಡುಗಿಸುವಂತಹ ಸುದ್ದಿಗಳನ್ನು ಬಿತ್ತರಿಸುತ್ತಿದ್ದ ಬಂದುಮಿತ್ರರ ವರ್ತನೆಗಳಿಂದಾಗಿಯೇ ಸುಮತಿ ಮಂಕಾಗಿದ್ದಳು. 

ಮಗಳ ಸ್ಥಿತಿಯನ್ನು ಕಂಡು ಗಾಬರಿಯಾದ ಸೀತಮ್ಮನು ಆಕೆಯನ್ನು ತಮ್ಮ ಕುಟುಂಬ ವೈದ್ಯರ ಬಳಿಗೆ ಕರೆದೊಯ್ದರು. ಸುಮತಿಯ ಸಂದೇಹಗಳನ್ನು ಕೇಳಿ ತಿಳಿದುಕೊಂಡ ವೈದ್ಯರು ಮುಗುಳುನಗೆ ಬೀರಿದ್ದರು. ಬಳಿಕ ಸುಮತಿಗೆ ಸಿಸೇರಿಯನ್ ಸೆಕ್ಷನ್ ಹೆರಿಗೆಯ ಬಗ್ಗೆ ವಿಶದವಾಗಿ ವಿವರಿಸಿ, ತಮ್ಮ ಅಜ್ಞಾನದಿಂದಾಗಿ ಈ ಬಗ್ಗೆ ಜನಸಾಮಾನ್ಯರು ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ನಿರ್ಲಕ್ಷಿಸಲು ಹೇಳಿದ್ದರು. ಜೊತೆಗೆ ತಜ್ನವೈದ್ಯರು ತಿಳಿಸಿದಂತೆ ಆಕೆಗೆ ನಿಶ್ಚಿತವಾಗಿಯೂ ನಾರ್ಮಲ್ ಡೆಲಿವರಿ ಆಗುವುದೆಂದು ಭರವಸೆಯನ್ನು ನೀಡಿ ಸಾಂತ್ವನಿಸಿದ್ದರು. ತನ್ನ ಚಿರಪರಿಚಿತ ಕುಟುಂಬ ವೈದ್ಯರ ಮಾತುಗಳನ್ನು ಆಲಿಸಿದ ಸುಮತಿಯು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಳು. 

ನಿಜ ಹೇಳಬೇಕಿದ್ದಲ್ಲಿ ಸುಮತಿಗೆ ಸಿಸೇರಿಯನ್ ಹೆರಿಗೆಯ ಬಗ್ಗೆ ಹೆದರಿಕೆಯೇನೂ ಇರಲಿಲ್ಲ. ಆದರೆ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ಪಿನ್ಚಿನಿ ಪಡೆಯುತ್ತಿದ್ದ ಆಕೆಯ ತಂದೆಗೆ ಹಾಗೂ ಪುಟ್ಟದೊಂದು ಗೂಡಂಗಡಿಯನ್ನು ನಡೆಸುತ್ತಿದ್ದ ಆಕೆಯ ಗಂಡನಿಗೆ ಸಿಸೇರಿಯನ್ ಹೆರಿಗೆಯ ಖರ್ಚು ವೆಚ್ಚಗಳನ್ನು ಭರಿಸುವಷ್ಟು ಆದಾಯವಿರಲಿಲ್ಲ. ತನ್ನ ಹೆರಿಗೆ, ಮಗುವಿನ ನಾಮಕರಣ ಮತ್ತು ಮುಂದಿನ ಮೂರು ತಿಂಗಳ ಕಾಲ ಬಾಣಂತಿ- ಮಗುವಿನ ಆರೈಕೆಗಳ ವೆಚ್ಚಗಲೇ ತನ್ನ ತಂದೆತಾಯಂದಿರಿಗೆ ಹೊರೆಯಾಗಬಹುದೆಂಬ ಭೀತಿಯೇ ಆಕೆಯ ಚಿಂತೆಗೆ ಕಾರಣವೆನಿಸಿತ್ತು. ಆದರೆ ಎರಡು ವಾರಗಳ ಬಳಿಕ ಸುಮತಿಯು ನಾರ್ಮಲ್ ಡೆಲಿವರಿಯ ಮೂಲಕ ಆರೋಗ್ಯವಂತ ಹೆಣ್ಣುಮಗುವನ್ನು ಹೆತ್ತು, ಮೂರು ದಿನಗಳ ಬಳಿಕ ಮನೆಗೆ ಮರಳಿದ್ದಳು. 

ಹೆರಿಗೆ: ಅಂದು- ಇಂದು 

ಹಲವಾರು ದಶಕಗಳ ಹಿಂದೆ ನಮ್ಮ ದೇಶದಲ್ಲಿ ಹೆಚ್ಚಿನ ಹೆರಿಗೆಗಳು ಮನೆಗಳಲ್ಲೇ ನಡೆಯುತ್ತಿದ್ದವು. ಅವಿಭಕ್ತ ಕುಟುಂಬಗಳಲ್ಲಿನ ಹಿರಿಯ ಹೆಂಗಸರು ಅಥವಾ ಸೂಲಗಿತ್ತಿಯರು ಮತ್ತು ಅಪರೂಪದಲ್ಲಿ ವೈದ್ಯರು ಕ್ಲಿಷ್ಟಕರ ಹೇರಿಗೆಗಳನ್ನೂ ಮನೆಯಲ್ಲೇ ಮಾಡಿಸುತ್ತಿದ್ದರು. ಸುಸಜ್ಜಿತ ಆಸ್ಪತ್ರೆಗಳು, ತಜ್ಞ ವೈದ್ಯರು ಹಾಗೂ ಅತ್ಯಾಧುನಿಕ ಉಪಕರಣಗಳೇಇಲ್ಲದಿದ್ದ ಆ ಕಾಲದಲ್ಲಿ, ಸುಸೂತ್ರವಾಗಿ ಹೆರಿಗೆಯಾಗಿ ಬಾಣಂತಿ ಬದುಕಿ ಉಳಿದಲ್ಲಿ ಪುನರ್ಜನ್ಮ ಪಡೆದಳೆಂದು ಮತ್ತು ಅಂಗು ಬದುಕಿದರೆ ಅದೃಷ್ಟ ಚೆನ್ನಾಗಿದೆ ಎಂದು ಪರಿಗಣಿಸಲಾಗುತ್ತಿತ್ತು!. 

ಅಂದಿನ ದಿನಗಳಲ್ಲಿ ಜನಸಾಮಾನ್ಯರ ಅಜ್ಞಾನ, ಸಾರಿಗೆ ಸೌಲಭ್ಯಗಳ ಹಾಗೂ ಆಸ್ಪತ್ರೆಗಳ ಅಭಾವ ಮತ್ತು ವೈದ್ಯರ ಕೊರತೆಗಳಿಂದಾಗಿ, ಗರ್ಭವತಿ ಮಹಿಳೆಯರು ಈಗಿನಂತೆ ನಿಗದಿತ ಅವಧಿಯಲ್ಲಿ ಶಾರೀರಿಕ ತಪಾಸಣೆ ಮಾಡಿಸಿಕೊಳ್ಳಲು ಆಗುತ್ತಿರಲಿಲ್ಲ. ಹಾಗೂ ಇದೇ ಕಾರಣದಿಂದಾಗಿ ಕೆಲವೊಂದು ನಿರ್ದಿಷ್ಟ ಸಮಸ್ಯೆಗಳನ್ನು ಹೆರಿಗೆಗೆ ಮುನ್ನ ಪತ್ತೆಹಚ್ಚಲೂ ಆಗುತ್ತಿರಲಿಲ್ಲ. ತತ್ಪರಿಣಾಮವಾಗಿ ಪ್ರಸವ ವೇದನೆ ಆರಂಭವಾದ ಬಳಿಕ ಗಂಭೀರ ತೊಂದರೆಗಳು ತಲೆದೋರಿದಲ್ಲಿ, ಇವುಗಳನ್ನು ಪರಿಹರಿಸಬಲ್ಲ ವೈದ್ಯರು ಅಥವಾ ಆಸ್ಪತ್ರೆಗಳೇ ಇಲ್ಲದಿದ್ದುದರಿಂದ ಬಾಣಂತಿ- ಮಗು ಮರಣಿಸುತ್ತಿದ್ದುದು ಅಪರೂಪವಾಗಿರಲಿಲ್ಲ. 

ಆದರೆ ಇಂದು ಅತ್ಯಾಧುನಿಕ ಉಪಕರಣಗಳು- ಪರೀಕ್ಷೆಗಳು, ಸುಸಜ್ಜಿತ  ಆಸ್ಪತ್ರೆಗಳು ಮತ್ತು ತಜ್ಞವೈದ್ಯರ ಸೇವೆ ಭಾರತದ ಮೂಲೆಮೂಲೆಗಳಲ್ಲಿ ಲಭ್ಯವಿದೆ. ಹಾಗೂ ಇದರಿಂದಾಗಿ ಹೆರಿಗೆಯ ಸಂದರ್ಭದಲ್ಲಿ ಅಥವಾ ಅನಂತರ ಸಂಭವಿಸುತ್ತಿದ್ದ ತಾಯಿ- ಮಗುವಿನ ಮರಣದ ಪ್ರಮಾಣಗಳು ಗಣನೀಯವಾಗಿ ಕಡಿಮೆಯಾಗಿವೆ. ಅಂತೆಯೇ ಸಿಸೇರಿಯನ್ ಸೆಕ್ಷನ್ ಶಸ್ತ್ರ ಚಿಕಿತ್ಸೆಯೂ ಇದಕ್ಕೊಂದು ಪ್ರಧಾನ ಕಾರಣವೆನಿಸಿದೆ!. 

ಏನಿದು ಸಿಸೇರಿಯನ್ ಸೆಕ್ಷನ್ 

ಗರ್ಭಿಣಿಯರ ಉದರ ಹಾಗೂ ಗರ್ಭಕೋಶವನ್ನು ಸೀಳಿ, ಗರ್ಭಸ್ಥ ಶಿಶುವನ್ನು ಸುರಕ್ಷಿತವಾಗಿ ಹೊರತೆಗೆಯುವ ಶಸ್ತ್ರಚಿಕಿತ್ಸೆಯನ್ನು ಸಿಸೇರಿಯನ್ ಸೆಕ್ಷನ್ ಎಂದು ಕರೆಯುತ್ತಾರೆ. ಸ್ವಾಭಾವಿಕ ರೀತಿಯಲ್ಲಿ ಹಾಗೂ ಸ್ವಾಭಾವಿಕ ಮಾರ್ಗದ ಮೂಲಕ ಹೆರಿಗೆಯಾಗಲು ಅಥವಾ ಗರ್ಭಸ್ಥ ಶಿಶುವಿಗೆ ಕಾರಣಾಂತರಗಳಿಂದ ಪ್ರಾಣಾ ಪಾಯದಂತಹ ತೊಂದರೆಗಳು ಬಾಧಿಸಿದಲ್ಲಿ, ಗರ್ಭಿಣಿಯ ಪ್ರಾಣಕ್ಕೆ ಅಪಾಯಗಳಿರುವ ಸ್ಥಿತಿಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆಯುಸುರಕ್ಷಿತ ಹಾಗೂ ಪ್ರಾನರಕ್ಷಕ ಎನಿಸುವುದು. ಆದರೆ ತಾಯಿ- ಮಗುವಿನ ಆಸ್ಪತ್ರೆ ವಾಸದ ಅವಧಿ ಮತ್ತು ಖರ್ಚು ವೆಚ್ಚಗಳನ್ನು ಹೆಚ್ಚಿಸುವ ಏಕಮಾತ್ರ ಕಾರಣದಿಂದಾಗಿ ಸಿಸೇರಿಯನ್ ಸೆಕ್ಷನ್ ಶಸ್ತ್ರಚಿಕಿತ್ಸೆಗೆ ಇಲ್ಲಸಲ್ಲದ ಅಪವಾದಗಳೂ ತಟ್ಟಿವೆ!. 

ಅಸಾಮಾನ್ಯ ಪರಿಸ್ಥಿತಿಯಿಂದಾಗಿ ಸ್ವಾಭಾವಿಕ ಹೆರಿಗೆಯಲ್ಲಿ ಗಂಭೀರ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿದ್ದಲ್ಲಿ, ಸ್ವಾಭಾವಿಕ ಜನನ ಮಾರ್ಗದ ಮೂಲಕ ಹೆರಿಗೆಗೆ ತೊಂದರೆಗಳು ಸಂಭವಿಸುವ ಸಾಧ್ಯತೆಗಳು ಇದ್ದಲ್ಲಿ, ತಾಯಿ- ಮಗುವಿನ ಪ್ರಾಣಕ್ಕೆ ಅಪಾಯ ಸಂಭವಿಸಬಲ್ಲದು. ಅದೇ ರೀತಿಯಲ್ಲಿ ಗರ್ಭಸ್ಥ ಶಿಶುವಿನ ಶಾರೀರಿಕ ಬೆಳವಣಿಗೆ ಅಧಿಕವಿದ್ದಲ್ಲಿ ಹಾಗೂ ಅವಳಿ- ತ್ರಿವಳಿ ಶಿಶುಗಲಿದ್ದ ಸಂದರ್ಭದಲ್ಲಿ, ಪ್ರಸವ ವೇದನೆ ಪ್ರಾರಂಭವಾಗಿ ಸಾಕಷ್ಟು ಸಮಯ ಕಳೆದ ಬಳಿಕವೂ ಸ್ವಾಭಾವಿಕ ಹೆರಿಗೆ ಆಗದಿದ್ದಲ್ಲಿ, ಮಧ್ಯ ವಯಸ್ಸಿನ ಹಾಗೂ ವಿವಾಹವಾಗಿ ಹಲವಾರು ವರ್ಷಗಳ ಬಳಿಕ ಗರ್ಭ ಧರಿಸಿದ ಮಹಿಳೆಯರಿಗೆ, ಇದಕ್ಕೂ ಮುನ್ನ ಸಿಸೇರಿಯನ್ ಹೆರಿಗೆ ಆಗಿದ್ದವರಲ್ಲಿ, ಕೆಲವೊಂದು ಸಂದರ್ಭಗಳಲ್ಲಿ ಸಿಸೇರಿಯನ್ ಹೆರಿಗೆ ನಡೆಸುವುದು ಅನಿವಾರ್ಯವೆನಿಸುವುದು. ಇದಲ್ಲದೆ ಕಷ್ಟಕರ ಅಥವಾ ತ್ರಾಸದಾಯಕ ಹೆರಿಗೆಯನ್ನು ಸಂದೆಹಿಸಿದಲ್ಲಿ, ಗರ್ಭಕೋಶದ ಆಕುಂಚನಗಳು ಕಡಿಮೆಯಾಗಿದ್ದಲ್ಲಿ, ಗರ್ಭಕೊಶದಲ್ಲಿನ ಮಗುವಿನ ಸ್ಥಾನದ ಅಸಾಮಾನ್ಯತೆಗಳು ಮತ್ತು ತಾಯಿ- ಮಗುವಿನ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಸಿಸೇರಿಯನ್ ಶಸ್ತ್ರ ಚಿಕಿತ್ಸೆಯನ್ನು ನಡೆಸಬೇಕಾಗುವುದು. ಇದಲ್ಲದೆ ಗರ್ಭಸ್ಥ ಶಿಶುವಿಗೆ ಅವಶ್ಯಕ ಪ್ರಮಾಣದ ಆಮ್ಲಜನಕ ದೊರೆಯದೇ ಉದ್ಭವಿಸುವ Foetal distresss ಎನ್ನುವ ಸ್ಥಿತಿಯಲ್ಲಿ, ಶಿಶುವಿನ ಮೆದುಳಿಗೆ ಸಂಭವಿಸಬಲ್ಲ ಹಾನಿಯನ್ನು ತಡೆಗಟ್ಟುವ ಸಲುವಾಗಿ ಕ್ಷಿಪ್ರಗತಿಯಲ್ಲಿ ಸಿಸೇರಿಯನ್ ಸೆಕ್ಷನ್ ನಡೆಸಬೇಕಾಗುತ್ತದೆ. ಅಂತೆಯೇ ಶಿಶುವಿಗೆ ಅಪಾಯಕಾರಿ ಎನಿಸಬಲ್ಲ "ಹೊಕ್ಕುಳ ಬಳ್ಳಿ" ಗೆ ಸಂಬಂಧಿಸಿದ ತೊಂದರೆಗಳು ಹಾಗೂ ಮಧುಮೇಹ- ಅಧಿಕ ರಕ್ತದೊತ್ತಡಗಳಂತಹ ಗಂಭೀರ ಕಾಯಿಲೆಗಳಿಂದ ಪೀಡಿತರಾಗಿರುವ ಗರ್ಭಿಣಿಯರಿಗೂ ಸಿ- ಸೆಕ್ಷನ್ ನಡೆಸಲೇ ಬೇಕಾಗುತ್ತದೆ. 

ತಜ್ಞ ವೈದ್ಯರು ಸೂಚಿಸದೇ ಸಿಸೇರಿಯನ್ ಹೆರಿಗೆಗಳು ನಡೆಯಲು ಜನಸಾಮಾನ್ಯರೇ ಕಾರಣವೆಂದಲ್ಲಿ ನೀವೂ ನಂಬಲಾರಿರಿ. ಜ್ಯೋತಿಷ್ಯದಲ್ಲಿ ಅಪರಿಮಿತ ವಿಶ್ವಾಸವಿರುವ ಅನೇಕ ಹಿಂದೂ ಹಾಗೂ ಅನ್ಯಧರ್ಮೀಯರು ಅಶುಭ ದಿನಗಳಲ್ಲಿ ಹೆರಿಗೆಯಾಗುವುದನ್ನು ತಪ್ಪಿಸಲು ಅಥವಾ ಶುಭ ಮುಹೂರ್ತದಲ್ಲೇ ತಮ್ಮ ವಂಶೋದ್ಧಾರಕರ ಜನನವಾಗಲು, ಜ್ಯೋತಿಷ್ಯರು ನಿರ್ಧರಿಸಿದ ದಿನ- ಸಮಯಗಳಲ್ಲಿ ಸಿಸೇರಿಯನ್ ನಡೆಸಲು ವೈದ್ಯರಲ್ಲಿ ವಿನಂತಿಸುವುದು ಅಪರೂಪವೇನಲ್ಲ!. ಸಾಮಾನ್ಯವಾಗಿ ಸ್ವಾಭಾವಿಕ ಹೆರಿಗೆಗಳ ಬಳಿಕ ಮಹಿಳೆಯರ ಯೋನಿಯು ಸಡಿಲಗೊಳ್ಳುವುದು. ಇದರಿಂದಾಗಿ ಸುರತ ಸುಖದಲ್ಲಿ ಕೊರತೆಯಾಗುವುದನ್ನು ತಡೆಗಟ್ಟಲು ಅನೇಕ ಶ್ರೀಮಂತ ಕುಟುಂಬಗಳ ಮಹಿಳೆಯರು ತಾವಾಗಿ ಸಿ- ಸೆಕ್ಷನ್ ಮಾಡಿಸಿಕೊಳ್ಳುತ್ತಾರೆ!. 

ಸುಮಾರು ೫೦ ವರ್ಷಗಳ ಹಿಂದೆ ಗರ್ಭಸ್ಥ ಶಿಶುವಿನ ಅಸಾಮಾನ್ಯ ಸ್ಥಿತಿ (Abnormal position of the baby) ಹಾಗೂ ಗರ್ಭಿಣಿಯರ ಸೊಂಟದ ಎಲುಬಿನ ನ್ಯೂನತೆ ( Bony passage defect) ಎನ್ನುವ ಸಮಸ್ಯೆಗಳಲ್ಲಿ ನಡೆಸಲಾಗುತ್ತಿದ್ದ ಸಿ- ಸೆಕ್ಷನ್ ಶಸ್ತ್ರ ಚಿಕಿತ್ಸೆಯನ್ನು ಇಂದು ಇತರ ಅನೇಕ ಸಮಸ್ಯೆಗಳ ಪರಿಹಾರದಲ್ಲೂ ಬಳಸಲಾಗುತ್ತಿದೆ. ಏಕೆಂದರೆ ಗರ್ಭಸ್ಥ ಶಿಶುವಿಗೆ ಪ್ರಾಣಾಪಾಯಕ್ಕೆ ಕಾರಣವೆನಿಸಬಲ್ಲ ತೊಂದರೆಗಳನ್ನು ನಿಖರವಾಗಿ ಪತ್ತೆಹಚ್ಚಬಲ್ಲ ಉಪಕರಣಗಳು ಇಂದು ಲಭ್ಯವಿದೆ. 

ಕೆಲವೇ ದಶಕಗಳ ಹಿಂದೆ ವೈದ್ಯರು ಸಾಮಾನ್ಯವಾಗಿ ಬಳಸುತ್ತಿದ್ದ ಸ್ಟೆಥೋಸ್ಕೋಪ್ ನ ಬದಲಾಗಿ ಅಲ್ಟ್ರಾ ಸೌಂಡ್ ಸೋನೋಗ್ರಾಂ, ಡಾಪ್ಲರ್ ಮತ್ತು ಎಲೆಕ್ಟ್ರೋ ಫೀಟಲ್ ಮಾನಿಟರಿಂಗ್ ಮೂಲಕ ಗರ್ಭಸ್ಥ ಶಿಶುವಿನ ಸ್ಥಿತಿಗತಿಗಳನ್ನು ಅರಿತುಕೊಳ್ಳಬಹುದಾಗಿದೆ. ಈ ರೀತಿಯ ಅತ್ಯಾಧುನಿಕ ಉಪಕರಣಗಳಿಂದಾಗಿ ಗರ್ಭಸ್ಥ ಶಿಶುವನ್ನು ಬಾಧಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಪತ್ತೆಹಚ್ಚುವ ಪ್ರಮಾಣ ಅಧಿಕವಾಗುತ್ತಿರುವುದರಿಂದ, ಇದಕ್ಕೆ ಅನುಗುಣವಾಗಿ ಸಿ- ಸೆಕ್ಷನ್ ಹೆರಿಗೆಗಳ ಪ್ರಮಾಣವೂ ಸ್ವಾಭಾವಿಕವಾಗಿಯೇ ಹೆಚ್ಚುತ್ತಿದೆ. 

ಅದೇ ರೀತಿಯಲ್ಲಿ ಕಷ್ಟಕರ ಸ್ವಾಭಾವಿಕ ಹೆರಿಗೆಗಳಲ್ಲಿ ಪ್ರಸೂತಿ ತಜ್ಞರು "ಫೋರ್ಸೆಪ್ಸ್" ಬಳಸುವಾಗ ಅಪರೂಪದಲ್ಲಿ ಶಿಶುವಿಗೆ ಕೆಲವೊಂದು ತೊಂದರೆಗಳು ಬಾಧಿಸುವ ಸಾಧ್ಯತೆಗಳಿವೆ. ಇದೀಗ ಇಂತಹ ಸಂದರ್ಭಗಳಲ್ಲಿ ಸಿ- ಸೆಕ್ಷನ್ ನಡೆಸುವುದರಿಂದ ಇಂತಹ ತೊಂದರೆಗಳನ್ನು ಸುಲಭದಲ್ಲೇ ನಿವಾರಿಸಬಹುದಾಗಿದೆ. ಇದೇ ಕಾರಣದಿಂದಾಗಿ ಬಹುತೇಕ ಪ್ರಸೂತಿ ತಜ್ಞರು ಕಷ್ಟಕರ ಸ್ವಾಭಾವಿಕ ಹೇರಿಗೆಗಳಿಗೆ ಬದಲಾಗಿ ಸಿ- ಸೆಕ್ಷನ್ ನಡೆಸುತ್ತಾರೆ. 

ಇವೆಲ್ಲಕ್ಕೂ ಮಿಗಿಲಾಗಿ ಅಲ್ಪತೂಕದ ಶಿಶುಗಳು ಸ್ವಾಭಾವಿಕ ಹೆರಿಗೆಯ ಸಂದರ್ಭದಲ್ಲಿ (ಯೋನಿ ಮಾರ್ಗದಲ್ಲಿ) ಸಂಭವಿಸಬಲ್ಲ ಆಘಾತಗಳಿಂದಾಗಿಬದುಕಿ ಉಳಿಯುವ ಸಾಧ್ಯತೆಗಳು ಕೆಲ ದಶಕಗಳ ಹಿಂದೆ ಕಡಿಮೆಯಾಗಿದ್ದವು. ಆದರೆ ಇಂದು ಸಿ- ಸೆಕ್ಷನ್ ನಡೆಸುವುದರಿಂದ ಒಂದು ಕಿ. ಗ್ರಾಂ ಗಿಂತಲೂ ಕಡಿಮೆ ತೂಕದ ಶಿಶುಗಳೂ ಬದುಕಿ ಉಳಿಯುತ್ತಿವೆ. ಈ ರೀತಿಯಲ್ಲಿ ಸಿ- ಸೆಕ್ಷನ್ ನಡೆಸಲೇ ಬೇಕಾಗುವಂತಹ ಹಲವಾರು ವೈದ್ಯಕೀಯ ಕಾರಣಗಳ ಬಗ್ಗೆ ಜನಸಾಮಾನ್ಯರಿಗೆ ಸೂಕ್ತ ಮಾಹಿತಿಗಳೇ ತಿಳಿದಿರುವುದಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ವೈದ್ಯರು ಸಾಕಷ್ಟು ಲಾಭಗಳಿಸುವ ಸಲುವಾಗಿಯೇ ಅನಾವಶ್ಯಕವಾಗಿ ಸಿ- ಸೆಕ್ಷನ್ ನಡೆಸುತ್ತಾರೆ ಎಂದು ಜನಸಾಮಾನ್ಯರು ದೂರುತ್ತಾರೆ. ಇದರರ್ಥ ವೈದ್ಯಕೀಯ ಕ್ಷೇತ್ರದಲ್ಲಿ "ಕಪ್ಪು ಕುರಿ" ಗಳು ಇಲ್ಲವೆಂದಲ್ಲ. ಇತರ ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ವೈದ್ಯಕೀಯ ಕ್ಷೇತ್ರದಲ್ಲೂ ಅಲ್ಲೊಂದು, ಇಲ್ಲೊಂದು ಕಪ್ಪು ಕುರಿಗಳು ನಿಶ್ಚಿತವಾಗಿಯೂ ಇವೆ. ಆದರೆ ಇದಕ್ಕಾಗಿ ಸಮಗ್ರ ವೈದ್ಯ ಸಮುದಾಯವನ್ನೇ ದೂರುವುದು ನಿಶ್ಚಿತವಾಗಿಯೂ ಸಮರ್ಥನೀಯವಲ್ಲ. 

ಅಂತಿಮವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಶೋಧನೆ- ಅಧ್ಯಯನಗಳು ಮತ್ತು ಅತ್ಯಾಧುನಿಕ ಉಪಕರಣಗಳು- ಚಿಕಿತ್ಸಾ ವಿಧಾನಗಳಿಂದಾಗಿ, ಇಂದು ಗರ್ಭಿಣಿಯರ- ಬಾಣಂತಿಯರ ಮತ್ತು ಗರ್ಭಸ್ಥ- ನವಜಾತ ಶಿಶುಗಳ ಮರಣಗಳ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ. ಅಂತೆಯೇ ಇದರಲ್ಲಿ ಸಿಸೇರಿಯನ್ ಶಸ್ತ್ರ ಚಿಕಿತ್ಸೆಯೂ ಮಹತ್ವಪೂರ್ಣ ಪಾತ್ರವನ್ನು ನಿರ್ವಹಿಸುತ್ತಿದೆ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ಡಿ. ೧೯-೦೭-೨೦೦೭ ರ ಸಂಚಿಕೆಯ ಬಳಕೆದಾರ :ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.


Saturday, December 7, 2013

Fake medicines


                          ಔಷದಂ ಜಾಹ್ನವೀ ತೋಯಂ..........?

ಅಮಾಯಕ ಜನರ ಅಕಾಲ ಮರಣಕ್ಕೂ ಕಾರಣವೆನಿಸಬಲ್ಲ "ನಕಲಿ ಮತ್ತು ಕಳಪೆ ಔಷದ" ಗಳ ತಯಾರಕರು ಮತ್ತು ಮಾರಾಟಗಾರರಿಗೆ, ಇದೀಗ ಕೇಂದ್ರ ಸರಕಾರವು ಜಾರಿಗೆ ತರಲಿರುವ ಮರಣ ದಂಡನೆಯಂತಹ ಉಗ್ರ ಶಿಕ್ಷೆಯು ನಿಸ್ಸಂದೇಹವಾಗಿ ಸಮಂಜಸವೆನಿಸುವುದು. ಆದರೆ ರಾಜಕಾರಣಿಗಳು ಮತ್ತು ಸರಕಾರೀ ಅಧಿಕಾರಿಗಳನ್ನು ಖರೀದಿಸಬಹುದಾದ ನಮ್ಮ ಭವ್ಯ ಭಾರತದಲ್ಲಿ, ಈ ಶಿಕ್ಷೆಯು ಅಪೇಕ್ಷಿತ ಪರಿಣಾಮವನ್ನು ನೀಡುವುದು ಸಂದೇಹಾಸ್ಪದ. 
------------                 --------------                 --------------                 ------------------                    -----------------                  ------------------

ಹದಿನೈದರ ಹರೆಯದ ಗಣೇಶನಿಗೆ ಐಸ್ ಕ್ರೀಮ್ಎಂದರೆ ಪಂಚಪ್ರಾಣ. ಆದರೆ ಪ್ರತಿಬಾರಿ ಐಸ್ ಕ್ರೀಮ್ ಸವಿದ ಮರುದಿನ ತೀವ್ರ ಜ್ವರದೊಂದಿಗೆ "ಟಾನ್ಸಿಲೈಟಿಸ್" ಬಾಧಿಸುತ್ತಿದ್ದುದರಿಂದ, ವೈದ್ಯರು ಆತನಿಗೆ ಐಸ್ ಕ್ರೀಮ್ ತಿನ್ನದಂತೆ ಕಟ್ಟಪ್ಪಣೆ ನೀಡಿದ್ದರು. 

ಶಾಲಾ ವಾರ್ಷಿಕೋತ್ಸವದಂದು ಸ್ನೇಹಿತರ ಒತ್ತಾಯಕ್ಕೆ ಮಣಿದು ಸಾಕಷ್ಟು ಐಸ್ ಕ್ರೀಮ್ ಸವಿದಿದ್ದ ಗಣೇಶನಿಗೆ ಮಾರನೆಯ ರಾತ್ರಿ ಹಳೆಯ ಸಮಸ್ಯೆ ಮರುಕಳಿಸಿತ್ತು. ವೈದ್ಯರ ಬಳಿಗೆ ತೆರಳಿದ ಆತನನ್ನು ಕೂಲಂಕುಶವಾಗಿ ಪರೀಕ್ಷಿಸಿದ ವೈದ್ಯರು, ಐದು ದಿನಗಳ ಕಾಲ ಸೇವಿಸಬೇಕಾದ ಔಷದಗಳನ್ನು ಬರೆದು ನೀಡಿದ್ದರು. ಈ ಔಷದಗಳನ್ನು ಖರೀದಿಸಲು ಹೋಗಿದ್ದ ಗಣೇಶನ ತಂದೆಗೆ ವೈದ್ಯರು ಸೂಚಿಸಿದ್ದ ಕಂಪೆನಿಯ ಔಷದಗಳಿಗೆ ಬದಲಾಗಿ ಬೇರೊಂದು ಕಂಪೆನಿಯ ಔಷದಗಳನ್ನು ನೀಡಿದ್ದ ವ್ಯಾಪಾರಿಯು, ಇವೆರಡೂ ಔಷದಗಳು ಒಂದೇ ಎಂದು ಆಶ್ವಾಸನೆಯನ್ನು ನೀಡಿದ್ದನು. 

ಸಾಮಾನ್ಯವಾಗಿ ಮೂರು ದಿನಗಳ ಔಷದಗಳನ್ನು ಸೇವಿಸಿದೊಡನೆ ಶಮನವಾಗುತ್ತಿದ್ದ ಗಣೇಶನ ಗಂಟಲು ನೋವು, ಈ ಬಾರಿ ಕಿಂಚಿತ್ ಕೂಡಾ ಕಡಿಮೆಯಾಗಲಿಲ್ಲ. ಮಾತ್ರವಲ್ಲ, ಇನ್ನಷ್ಟು ಉಲ್ಬಣಿಸಿದ ಪರಿಣಾಮವಾಗಿ ನಾಲ್ಕನೆಯ ರಾತ್ರಿ ಜ್ವರ ತಲೆಗೆ ಏರಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಮಗನ ಸ್ಥಿತಿಯನ್ನು ಕಂಡು ಗಾಬರಿಗೊಂಡ ಗಣೇಶನ ತಂದೆ, ತಕ್ಷಣ ಆತನನ್ನು ವೈದ್ಯರ ಬಳಿಗೆ ಕರೆದೊಯ್ದಿದ್ದರು. ಗಣೇಶನನ್ನು ಪರೀಕ್ಷಿಸಿದ ವೈದ್ಯರಿಗೆ ತಾನು ಸೂಕ್ತ ಔಷದಗಳನ್ನು ನೀಡಿದ್ದರೂ  ಟಾನ್ಸಿಲೈಟಿಸ್ ಉಲ್ಬಣಿಸಲು ಕಾರಣವೇನೆಂದು ಅರಿತುಕೊಳ್ಳಲು ಗಣೇಶನ ತಂದೆಯ ಒಂದಿಗೆ ಸಮಾಲೋಚಿಸಿದಾಗ, ಔಷದ ವ್ಯಾಪಾರಿಯು ನೀಡಿದ್ದ ಬೇರೊಂದು ಕಂಪೆನಿಯ ಔಷದದ ವಿಚಾರ ತಿಳಿಯಿತು. ಈ ಔಷದಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ವೈದ್ಯರಿಗೆ, ಇವು ನಕಲಿ ಔಷದಗಳೆಂದು ಖಾತರಿಯಾಗಿತ್ತು!. 

ಅರೆಪ್ರಜ್ಞಾವಸ್ಥೆಯಲ್ಲಿದ್ದ ಗಣೇಶನಿಗೆ ತುರ್ತು ಚಿಕಿತ್ಸೆಯನ್ನು ನೀಡಿದ್ದರಿಂದ ಆತನ ಪ್ರಾಣ ಉಳಿಯಿತು. ಈ ಘಟನೆಯ ಬಳಿಕ ಗಣೇಶನ ತಂದೆಯು ವೈದ್ಯರು ಸೂಚಿಸಿದ ಔಷದಗಳನ್ನು ಖರೀದಿಸಿದ ಬಳಿಕ, ಇವುಗಳನ್ನು ವೈದ್ಯರಿಗೆ ತೋರಿಸದೆ ಸೇವಿಸುವುದಿಲ್ಲ. 

ಇದೇ ರೀತಿಯಲ್ಲಿ ಕೆಲ ಗಂಭೀರ ಕಾಯಿಲೆಗಳಿಂದ ಬಳಲುವ ಅನೇಕ ರೋಗಿಗಳು ನಕಲಿ ಮಾತ್ರೆ, ಕ್ಯಾಪ್ಸೂಲ್, ಸಿರಪ್ ಹಾಗೂ ಇಂಜೆಕ್ಷನ್ ಗಳ ದುಷ್ಪರಿಣಾಮದಿಂದ ಸಂಕಷ್ಟಗಳಿಗೆ ಈಡಾದ ಹಾಗೂ ಮೃತಪಟ್ಟ ನೂರಾರು ಉದಾಹರಣೆಗಳಿವೆ. ಏಕೆಂದರೆ ನಕಲಿ ಔಷದವನ್ನು ಸೇವಿಸಿದ ಪ್ರತಿಯೊಬ್ಬರೂ ಗಣೇಶನಷ್ಟು ಅದೃಷ್ಟಶಾಲಿಯಾಗುವ ಸಾಧ್ಯತೆಗಳಿಲ್ಲ. 

ನಕಲಿ- ಕಳಪೆ ಔಷದಗಳೆಂದರೇನು?

ಯಾವುದೇ ಮಾತ್ರೆ, ಕ್ಯಾಪ್ಸೂಲ್, ಮುಲಾಮು, ಇಂಜೆಕ್ಷನ್ ಮತ್ತಿತರ ಉತ್ಪನ್ನಗಳಲ್ಲಿನ ಔಷದಗಳ ಪ್ರಮಾಣವನ್ನು ಇವುಗಳ ಹೊರಕವಚದ ಮೇಲೆ ನಮೂದಿಸಿರುತ್ತಾರೆ. ಉದಾಹರಣೆಗೆ ತಲೆನೋವು, ಮೈಕೈ ನೋವು ಮತ್ತು ಜ್ವರ ಶಮನವಾಗಲು ನೀವು ನುಂಗುವ ಮೆಟಾಸಿನ್ ಅಥವಾ ಕ್ರೋಸಿನ್ ನಂತಹ ಸಿದ್ಧ ಔಷದಗಳಲ್ಲಿ ೫೦೦ ಮಿಲಿ ಗ್ರಾಂ ಪಾರಾಸಿಟಮಾಲ್ ಎನ್ನುವ ಔಷದವಿದೆ. ಆದರೆ ನಕಲಿ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭಿಸುವ ಇಂತಹ ಉತ್ಪನ್ನಗಳಲ್ಲಿ ಮೂಲ ಔಷದವೇ ಇರುವುದಿಲ್ಲ. ಇದಕ್ಕೆ ಬದಲಾಗಿ ನಿಮ್ಮ ಆರೋಗ್ಯಕ್ಕೆ ಹಾನಿಕರ ಅಥವಾ ಹಾನಿಕಾರಕವಲ್ಲದ ಅನ್ಯ ದ್ರವ್ಯಗಳು ಇರುತ್ತವೆ. 

ನಕಲಿ ಪಾರಾಸಿಟಮಾಲ್ ಮಾತ್ರೆ ತಯಾರಿಸುವಾಗ ಬಳಸಿರಬಹುದಾದ ಸೀಮೆಸುಣ್ಣವು ಹೊಟ್ಟೆನೋವು- ಉರಿಯಂತಹ ತೊಂದರೆಗಳಿಗೆ ಕಾರಣವೆನಿಸುವುದು. ಜೊತೆಗೆ ಇದರ ಸೇವನೆಯಿಂದ ನಿಮ್ಮ ತಲೆನೋವು, ಮೈಕೈ ನೋವು ಮತ್ತು ಜ್ವರಗಳು ಶಮನಗೊಳ್ಳುವ ಸಾಧ್ಯತೆಗಳೇ ಇರುವುದಿಲ್ಲ. ಇದೇ ರೀತಿಯಲ್ಲಿ ನಕಲಿ ಕ್ಯಾಪ್ಸೂಲ್ ನಲ್ಲಿ ತುಂಬಿಸಿರಬಹುದಾದ ಅಕ್ಕಿ ಹುಡಿ, ಗೋಧಿ ಹುಡಿ ಅಥವಾ ಅರಶಿನದ ಹುಡಿಗಳು ಹಾನಿಕಾರಕವಲ್ಲದಿದ್ದರೂ, ನಿಮ್ಮ ಕಾಯಿಲೆಯನ್ನು ಗುಣಪಡಿಸಲು ವಿಫಲವಾಗುವುದರಿಂದ ತೀವ್ರಗೊಂಡು ಗಂಭೀರ ಹಾಗೂ ಮಾರಕ ಸಮಸ್ಯೆಗಳಿಗೆ ಕಾರಣವೆನಿಸುತ್ತವೆ. 

ವಿಶೇಷವೆಂದರೆ ಅಪರೂಪದಲ್ಲಿ ಕೆಲವೊಂದು ನಕಲಿ ಔಷದಗಳ ತಯಾರಕರು ತಮ್ಮ ಉತ್ಪನ್ನಗಳಲ್ಲಿ ಅಸಲಿ ಮೂಲ ಔಷದಗಳನ್ನು ನಿಗದಿತ ಪ್ರಮಾಣದಲ್ಲಿ ಬಳಸುವುದುಂಟು. ಖ್ಯಾತ ಔಷದ ತಯಾರಿಕಾ ಸಂಸ್ಥೆಯ ಉತ್ಪನ್ನಗಳ ಜನಪ್ರಿಯತೆಯ ಲಾಭವನ್ನು ಪಡೆಯುವ ಇಂತಹ "ಸಜ್ಜನ"ರು, ಅಸಲಿ ಔಷದಗಳನ್ನು ತಮ್ಮ ನಕಲಿ ಉತ್ಪನ್ನಗಳಲ್ಲಿ ಬಳಸುವುದು (ಶಿಕ್ಷಾರ್ಹ ಅಪರಾಧವಾದರೂ) ಜನರ ಆರೋಗ್ಯದ ದೃಷ್ಟಿಯಿಂದ ಹಿತಕರವೆನ್ನಬಹುದು. 

ಸಾಮಾನ್ಯವಾಗಿ ರೋಗಿಯ ವಯಸ್ಸು, ಶರೀರದ ತೂಕ ಮತ್ತು ಕಾಯಿಲೆಯ ತೀವ್ರತೆಗಳಿಗೆ ಅನುಗುಣವಾಗಿ ವೈದ್ಯರು ತಾವು ನೀಡಬೇಕಾದ ಔಷದಗಲ್ ಪ್ರಮಾಣವನ್ನು ನಿಗದಿಸುತ್ತಾರೆ. ಉದಾಹರಣೆಗೆ ಅಧಿಕ ರಕ್ತದೊತ್ತದವಿರುವ ರೋಗಿಗೆ ೨೫ ಮಿಲಿ ಗ್ರಾಂ ಅಟೇನೊಲಾಲ್ ಔಷದ ಸೇವನೆಯಿಂದ ರಕ್ತದೊತ್ತಡ ಹತೋಟಿಗೆ ಬರದೆ ಇದ್ದಲ್ಲಿ, ಔಷದದ ಪ್ರಮಾಣವನ್ನು ೫೦ ಮಿಲಿ ಗ್ರಾಂ ಗಳಿಗೆ ಹೆಚ್ಚಿಸುವುದು ಅಥವಾ ಅಟೇನೊಲಾಲ್ ನೊಂದಿಗೆ ಎಮ್ಲೋಡೆಪಿನ್ ಎನ್ನುವ ಔಷದವನ್ನು ಸೇರಿಸಿ ಸಿದ್ಧಪಡಿಸಿದ ಮಾತ್ರೆಯನ್ನು ನೀಡುವುದುಂಟು. ೨೫ ಮಿಲಿ ಗ್ರಾಂ ಅಸಲಿ ಔಷದ ಸೇವಿಸುತ್ತಿದ್ದ ರೋಗಿಯು ನಕಲಿ ಅಟೇನೊಲಾಲ್ ಮತ್ತು ಎಮ್ಲೋಡೆಪಿನ್ ಮಾತ್ರೆಯನ್ನು ಸೇವಿಸಿದಲ್ಲಿ ಆತನ ರಕ್ತದೊತ್ತದವು ಉಲ್ಬಣಿಸಿ ಪಕ್ಷವಾತದಂತಹ  ಗಂಭೀರ ಸಮಸ್ಯೆಗಳಿಗೆ ಅಥವಾ ಮರಣಕ್ಕೂ ಕಾರಣವೆನಿಸಬಹುದು. ಇದೇ ರೀತಿಯಲ್ಲಿ ನೀವು ಯಾವುದೇ ಸೋಂಕಿನಿಂದ ಬಳಲುತ್ತಿದ್ದಾಗ ನಕಲಿ ಅಥವಾ ಕಳಪೆ ದರ್ಜೆಯ ಎಂಟಿಬಯಾಟಿಕ್ ಔಷದಗಳ ಸೇವನೆಯಿಂದ ನಿಮ್ಮ ಸೋಂಕು ನಿಯಂತ್ರಣಕ್ಕೆ ಬರದೇ ಇರುವುದರಿಂದ ನಿಮ್ಮ ಸಮಸ್ಯೆ ಇನ್ನಷ್ಟು ಉಲ್ಬಣಿಸಿ ಇನ್ನಷ್ಟು ಸಮಸ್ಯೆಗಳಿಗೆ ಕಾರಣವೆನಿಸುವುದು. 

ವಿಶ್ವವ್ಯಾಪಿ ಸಮಸ್ಯೆ 

ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿರುವ ನಕಲಿ- ಕಳಪೆ ಔಷದಗಳು ವಿಶ್ವ ಆರೋಗ್ಯ ಸಂಸ್ಥೆಗೂ ತಲೆನೋವು ತಂದಿದೆ. ಎರಡು ವರ್ಷಗಳ ಹಿಂದೆ ಈ ಸಂಸ್ಥೆ ನಡೆಸಿದ್ದ ಸಮೀಕ್ಷೆಯ ವರದಿಯಂತೆ ಇಂತಹ ಔಷದಗಲ ತಯಾರಿಕೆ ಮತ್ತು ರಫ್ತಿನಲ್ಲಿ ಭಾರತಕ್ಕೆ (ಶೇ.೩೫ ) ಅಗ್ರಸ್ಥಾನ ಸಲ್ಲುತ್ತದೆ!. ದ್ವಿತೀಯ ಸ್ಥಾನ ನೈಜೀರಿಯ (ಶೇ. ೨೩ )  ದೇಶಕ್ಕೆ ಸಲ್ಲುತ್ತದೆ. 

ಪ್ರತಿನಿತ್ಯ ೧೦ ರಿಂದ ೧೫ ಕೋಟಿಗೂ ಅಧಿಕ ಮೊತ್ತದ ವ್ಯವಹಾರ ನಡೆಯುವ ನಕಲಿ ಔಷದಗಳ ಜಾಲವು ಉತ್ತರ- ಮಧ್ಯ ಭಾರತದಲ್ಲಿ ಬಲಿಷ್ಟವಾಗಿದ್ದು, ದಕ್ಷಿಣ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಈ ವ್ಯವಹಾರ ಅತ್ಯಂತ ವ್ಯವಸ್ಥಿತವಾಗಿ ನಡೆಯುವುದಕ್ಕೆ ದಕ್ಷಿಣ ಏಶಿಯಾದ ಅನೇಕ ದೇಶಗಳು, ರಷ್ಯಾ, ಉಜ್ಬೆಕಿಸ್ತಾನ, ದಕ್ಷಿಣ ಆಫ್ರಿಕ ಮತ್ತು ಅಮೆರಿಕದಂತಹ ದೇಶಗಳಿಗೂ ಭಾರತದಲ್ಲಿ ತಯಾರಾದ ನಕಲಿ ಔಷದಗಳು ರಫ್ತಾಗುತ್ತಿರುವುದೇ ಸಾಕ್ಷಿ. 

ಕೆಲವೇ ಲಕ್ಷ ರೂಪಾಯಿಗಳ ಬಂಡವಾಳದೊಂದಿಗೆ ನಿಮ್ಮ ಮನೆಯ ಹಿಂದಿನ ಹಟ್ಟಿ ಅಥವಾ ಕಾರ್ ಶೆಡ್ ನಲ್ಲಿ ಪ್ರಾರಮ್ಭಿಸಬಹುದಾದ ಈ ಧನ್ಧೆಗೆ ಯಾವುದೇ ಸರಕಾರೀ ಅಧಿಕಾರಿಗಳ, ಇಲಾಖೆಗಳ ಪರವಾನಿಗೆಯ ಅವಶ್ಯಕತೆಯೇ ಇಲ್ಲ. ತಯಾರಿಸಿದ ಉತ್ಪನ್ನಗಳನ್ನು ಮಾರುವ ಛಾತಿಯಿದ್ದರೆ ದಕ್ಕಿದ್ದೆಲ್ಲ ಲಾಭ. ಜೊತೆಗೆ ಸರಕಾರಕ್ಕೆ ಯಾವುದೇ ತೆರಿಗೆಯನ್ನು ನೀಡುವ ಅವಶ್ಯಕತೆಯೇ ಇಲ್ಲ!. 

ಈ ಸಮಸ್ಯೆಗೆ ಕಾರಣವೇನು?

ನಕಲಿ ಅಥವಾ ಕಳಪೆ ಔಷದಗಳ ಮೂಲವನ್ನು ಶೋಧಿಸಿದಾಗ ಈ ಸಮಸ್ಯೆಗೆ ರಾಜ್ಯ- ಕೇಂದ್ರ ಸರಕಾರಗಳೇ ಕಾರಣವೆನ್ನಬಹುದು. ಏಕೆಂದರೆ ಸರಕಾರೀ ಆಸ್ಪತ್ರೆಗಳಿಗೆ ಬೇಕಾಗುವ  ಔಷದಗಳನ್ನು ಖರೀದಿಸುವಾಗ ಟೆಂಡರುಗಳನ್ನು ಆಹ್ವಾನಿಸಿ, ಕನಿಷ್ಠ ದರ ಸೂಚಿಸಿದ ಸಂಸ್ಥೆಗೆ ಗುತ್ತಿಗೆಯನ್ನು ನೀಡುವ ಪದ್ಧತಿ ಇಂದಿಗೂ ಇದೆ. ಬೃಹತ್ ಪ್ರಮಾಣದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಔಷದಗಳನ್ನು ಪೂರೈಸುವಾಗ ಮಾರುಕಟ್ಟೆಯ ದರಕ್ಕಿಂತ ಸಾಕಷ್ಟು ಕಡಿಮೆ ದರದಲ್ಲಿ ಇವು ಲಭ್ಯವಾಗುತ್ತವೆ. ಆದರೆ ಅನೇಕ ಸಂದರ್ಭಗಳಲ್ಲಿ ಪೂರೈಕೆದಾರರು ಸೂಚಿಸುವ ದರವು "ಮೂಲ ಔಷದ"ದ ಬೆಲೆಗಿಂತಲೂ ಕಡಿಮೆ ಇರುವುದು ನಂಬಲಸಾಧ್ಯವೆನಿಸುತ್ತದೆ!. ಏಕೆಂದರೆ ಮೂಲ ಔಷದವನ್ನು ಖರೀದಿಸಿ, ಮಾತ್ರೆ- ಕ್ಯಾಪ್ಸೂಲ್ ಇತ್ಯಾದಿಗಳನ್ನು ತಯಾರಿಸಿದ ಬಳಿಕ ಇವುಗಳ ಪ್ಯಾಕಿಂಗ್, ಸಾಗಾಣಿಕೆ ಮತ್ತು ತನ್ನ ಲಾಭಾಂಶವನ್ನು ಸೇರಿಸಿದಾಗ, ಈ ಉತ್ಪನ್ನದ ಬೆಲೆಯೂ ಮೂಲ ಔಷದದ ಬೆಲೆಗಿಂತ ಹೆಚ್ಚಾಗಲೇಬೇಕಲ್ಲವೇ?. ಆರೋಗ್ಯ ಇಲಾಖೆಗೂ ಇದು ತಿಳಿದಿರಲೇ ಬೇಕು. 

ಇಂತಹ ಪೂರೈಕೆದಾರರಿಂದ ಸರಕಾರ ಖರೀದಿಸುವ ಔಷದಗಳಲ್ಲಿ ನಿಶ್ಚಿತವಾಗಿಯೂ ನಿಗದಿತ ಪ್ರಮಾಣದ ಮೂಲ ಔಷದಗಳಿರುವ ಸಾಧ್ಯತೆಗಳಿಲ್ಲ. ಅರ್ಥಾತ್ ಔಷದ ತಯಾರಕರು ತಮ್ಮ ಉತ್ಪನ್ನಗಳನ್ನು ಇಷ್ಟೊಂದು ಕಡಿಮೆ ಬೆಲೆಗೆ ನೀಡುವ ಸಲುವಾಗಿ, ಮೂಲ ಔಷದವನ್ನು ಒಂದಿಷ್ಟು ಕಡಿಮೆ ಪ್ರಮಾಣದಲ್ಲಿ ಬಳಸುವುದು ಅನಿವಾರ್ಯ. ಸಾಮಾನ್ಯ ಬುದ್ಧಿಶಕ್ತಿಯುಳ್ಳ ವ್ಯಕ್ತಿಗೂ ಇದು ಅರ್ಥವಾಗುವುದಾದರೂ, ಸರಕಾರಕ್ಕೆ ಇದು ಅರ್ಥವಾಗದಿರುವುದು ಅಸಾಧ್ಯವೂ ಹೌದು. ಆದರೂ ಸರಕಾರವು ಇಂದಿಗೂ ಇದೇ ಪದ್ಧತಿಯಲ್ಲಿ ಔಷದಗಳನ್ನು ಖರೀದಿಸುತ್ತಿರಲು ಕಾರಣವೇನೆಂದು ನಮಗಂತೂ ತಿಳಿದಿಲ್ಲ. 

ಪ್ರಖ್ಯಾತ ಔಷದ ತಯಾರಿಕಾ ಸಂಸ್ಥೆಗಳು ತಮ್ಮ ಹಲವಾರು ಉತ್ಪನ್ನಗಳನ್ನು ತಯಾರಿಸಲು, ಸಣ್ಣಪುಟ್ಟ ಸಂಸ್ಥೆಗಳಿಗೆ ಗುತ್ತಿಗೆ ನೀಡಿ ಸಿದ್ಧಪಡಿಸಿದ ಉತ್ಪನ್ನಗಳನ್ನು ತಮ್ಮ ಸಂಸ್ಥೆಯ ಹೆಸರಿನಲ್ಲಿ ಮಾರಾಟ ಮಾಡುತ್ತವೆ. ಇಂತಹ ಸಂದರ್ಭದಲ್ಲಿ ಸಣ್ಣಪುಟ್ಟ ಸಂಸ್ಥೆಗಳು ನಿರ್ದಿಷ್ಟ ಉತ್ಪನ್ನದಲ್ಲಿ ಬಳಸುವ ಮೂಲ ಔಷದದ ಪ್ರಮಾಣವನ್ನು ಒಂದಿಷ್ಟು ಕಡಿಮೆ ಮಾಡುವ ಮೂಲಕ ಮತಷ್ಟು ಲಾಭಗಳಿಸುವ ಸಾಧ್ಯತೆಗಳಿವೆ. ಈ  ರೀತಿಯಲ್ಲಿ ಖ್ಯಾತ ಸಂಸ್ಥೆಗಳೂ ಕಳಪೆ ದರ್ಜೆಯ ಔಷದಗಳನ್ನು ಹುಟ್ಟು ಹಾಕುವಲ್ಲಿ ಕಾರಣವೆನಿಸುತ್ತವೆ. 

ಔಷದ ಕಂಪೆನಿಗಳು ತಮ್ಮ ಪ್ರತಿನಿಧಿಗಳ ಮೂಲಕ ವೈದ್ಯರಿಗೆ ನೀಡುವ ಒಂದಿಷ್ಟು ಸ್ಯಾಂಪಲ್ ಗಳೊಂದಿಗೆ ಕೆಲವೊಂದು ಉಚಿತ ಉಡುಗೊರೆಗಳನ್ನು ನೀಡುವ ಪದ್ಧತಿ ಇಂದಿಗೂ ಇದೆ. ಅಂತೆಯೇ ತಮ್ಮ ಉತ್ಪನ್ನಗಳನ್ನು ಗಣನೀಯ ಪ್ರಮಾಣದಲ್ಲಿ ಸೂಚಿಸುವ ವೈದ್ಯರಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಕಾರು ಅಥವಾ ವಿದೇಶ ಯಾತ್ರೆಯ ಕೊಡುಗೆಗಳನ್ನು ನೀಡುತ್ತವೆ. ದುಬಾರಿ ಬೆಲೆಯ ಇಂತಹ ಕೊಡುಗೆಗಳನ್ನು ನೀಡಬೇಕಿದ್ದಲ್ಲಿ, ಈ ಸಂಸ್ಥೆಯ ಉತ್ಪನ್ನಗಳ ಗುಣಮಟ್ಟ ಕಳಪೆಯಾಗಿರಲೇಬೇಕು. ಅಥವಾ ಸಂಸ್ಥೆಯು ಹತ್ತಾರು ಪಟ್ಟು ಅಧಿಕ ಬೆಲೆಗೆ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರಲೇಬೇಕು. 

     
    ಅನೇಕ ಸಣ್ಣಪುಟ್ಟ ಔಷದ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ನಿಗದಿತ ಅವಧಿ ಮುಗಿಯುವ ಮುನ್ನ ಮಾರಾಟಮಾಡಲು ವಿಫಲರಾದಾಗ, ತಮ್ಮ ನಷ್ಟವನ್ನು ಸರಿ ಹೊಂದಿಸಲು ಇದೇ ಔಷದಗಳನ್ನು "ಹೊಸ ಹೊದಿಕೆ" ಯೊಂದಿಗೆ ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡುವುದು ರೋಗಿಗಳ ಪ್ರಾಣದೊಂದಿಗೆ ಆಡುವ ಚೆಲ್ಲಾಟವೇ ಹೊರತು ಬೇರೇನೂ ಅಲ್ಲ. ಈ ಅನಿಷ್ಠ ಪದ್ದತಿಯು ನಕಲಿ ಔಷದಗಳ ಮಾರಾಟದಷ್ಟೇ ಅಪಾಯಕಾರಿ ಎನ್ನುವುದರಲ್ಲಿ ಸಂದೇಹವಿಲ್ಲ. 

ಟಿ. ವಿ. ಜಾಹೀರಾತುಗಳಲ್ಲಿ ನಿಮ್ಮನ್ನು ಕಾಡುವ ಶೀತ, ತಲೆನೋವು, ಸೊಂಟನೋವು ಮತ್ತಿತರ ಆರೋಗ್ಯದ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ಪರಿಹರಿಸಬಲ್ಲದೆಂದು ಘೋಷಿಸುವ ಔಷದಗಳನ್ನು ಗಮನಿಸಿದ್ದೀರಾ?. ಈ ಔಷದಗಳು ನಕಲಿ ಔಷದ ತಯಾರಕರಿಗೆ ಅಚ್ಚುಮೆಚ್ಚು. ಏಕೆಂದರೆ ಈ ಇಂತಹ ಔಷದಗಳನ್ನು ವೈದ್ಯರ ಸೂಚನೆಯಿಲ್ಲದೆ ಖರೀದಿಸಬಹುದಾದುದರಿಂದ, ನಕಲಿ ಔಷದ ತಯಾರಕರು ಮಾರುಕಟ್ಟೆಗೆ ಬಿಡುಗಡೆ ಮಾಡುವ ನಕಲಿ ಉತ್ಪನ್ನಗಳ ಸೇವನೆಯಿಂದ ಉದ್ಭವಿಸಬಹುದಾದ ಸಮಸ್ಯೆಗಳಿಗೆ ಈ ಖದೀಮರು ಬಾಧ್ಯರಾಗುವ ಸಾಧ್ಯತೆಗಳೇ ಇಲ್ಲ. 

ಅವಿದ್ಯಾವಂತರೇ ಹೆಚ್ಚಿರುವ ಗ್ರಾಮೀಣ ಪ್ರದೇಶಗಳಲ್ಲಿ ಮಾರಾಟವಾಗುತ್ತಿರುವ ಔಷದಗಳಲ್ಲಿ ಶೇ. ೪೦ ಹಾಗೂ ನಗರ ಪ್ರದೇಶಗಳಲ್ಲಿ ಶೇ. ೨೦ ರಷ್ಟು ಇರುವ ನಕಲಿ ಔಷದಗಳು ಇದೀಗ ದುಬಾರಿ ಬೆಲೆಯ ಇಂಜೆಕ್ಷನ್ ಗಳ ರೂಪದಲ್ಲೂ ಪತ್ತೆಯಾಗುತ್ತಿರುವುದು ಆತಂಕದ ವಿಚಾರ. ತಜ್ಞ ವೈದ್ಯರಿಗೂ ಕಂಡು ಹಿಡಿಯಲು ಅಸಾಧ್ಯವಾದ ಇಂತಹ ಉತ್ಪನ್ನಗಳನ್ನು ರೋಗಿಗಳು ಗುರುತಿಸುವುದಾದರೂ ಹೇಗೆ?. 

ಈ ಸಮಸ್ಯೆಗೆ ಪರಿಹಾರವೇನು?

Drugs and cosmetics act 1940 ಯಂತೆ ಭಾರತದಲ್ಲಿ ನಕಲಿ ಔಷದ ತಯಾರಿಕೆಯು ಗಂಭೀರ ಅಪರಾಧವೆನಿಸಿರಲಿಲ್ಲ. ಎರಡರಿಂದ ಮೂರು ವರ್ಷಗಳ ಸಜೆ ಅಥವಾ ಐದು ಸಾವಿರ ರೂಪಾಯಿಗಳ ದಂಡ ತೆತ್ತು ಹೊರನಡೆವ ಅಪರಾಧಿಯು, ಮತ್ತೆ ಇದೇ ಧಂಧೆಯನ್ನು ಮುಂದುವರೆಸುತ್ತಿದ್ದುದು ಸ್ವಾಭಾವಿಕ. ಪ್ರಾಯಃ ಇದೇ ಕಾರಣದಿಂದಾಗಿ ೧೯೮೨ ರಲ್ಲಿ ಈ ಕಾಯಿದೆಗೆ ತಿದ್ದುಪಡಿ ಮಾಡಿ, ಇಂತಹ ಅಪರಾಧಿಗಳಿಗೆ ಅಜೀವ ಕಾರಾಗೃಹವಾಸ ಶಿಕ್ಷೆ ವಿಧಿಸಲು ಅವಕಾಶವನ್ನು ಅಲ್ಪಿಸಿದ್ದರೂ, ಇದುವರೆಗೆ ಒಬ್ಬನೇ ಒಬ್ಬ ನಕಲಿ ಔಷದ ತಯಾರಕನಿಗೆ ಈ ಶಿಕ್ಷೆ ವಿಧಿಸಿಲ್ಲ!. 

ಕೇಂದ್ರ ಸರಕಾರವು ೨೦೦೨ ರಲ್ಲಿ ಮಾಷೆಲ್ಕರ್ ಸಮಿತಿಯ ಮಧ್ಯಂತರ ವರದಿಯಂತೆ ಇದೀಗ ಇಂತಹ ಅಪರಾಧಿಗಳಿಗೆ ಮರಣ ದಂಡನೆಯಂತಹ ಉಗ್ರ ಶಿಕ್ಷೆಯನ್ನು ಜಾರಿಗೆ ತರಲು ಉದ್ದೇಶಿಸಿದೆ. ಆದರೆ ಇದನ್ನು ಅನುಷ್ಠಾನಗೊಳಿಸಲು ಔಷದ ನಿಯಂತ್ರಣ ಇಲಾಖೆಯಲ್ಲಿ ಸಾಕಷ್ಟು ಸಿಬಂದಿಗಳು ಮತ್ತು ಪ್ರಯೋಗಾಲಯಗಳಿಲ್ಲ. ೧೫ ರಾಜ್ಯಗಳಲ್ಲಿರುವ ಪ್ರಯೋಗಾಲಯಗಳಲ್ಲಿ ಸಮರ್ಪಕ ವ್ಯವಸ್ಥೆ- ಸಿಬಂದಿಗಲಿರುವುದು ಕೇವಲ ಏಳು ಪ್ರಯೋಗಾಲಯಗಳಲ್ಲಿ ಮಾತ್ರ!. 

ಭಾರತದಲ್ಲಿರುವ ಸಾವಿರಾರು ಔಷದ ತಯಾರಿಕಾ ಸಂಸ್ಥೆಗಳು ಉತ್ಪಾದಿಸುವ ಲಕ್ಷಾಂತರ ಉತ್ಪನ್ನಗಳನ್ನು ಕೇವಲ ಒಂದು ಬಾರಿ ಪರೀಕ್ಷಿಸುವುದಾದಲ್ಲಿ, ಈ ಏಳು ಪ್ರಯೋಗಾಲಯಗಳಿಗೆ ಹಲವಾರು ವರ್ಷಗಳೇ ಬೇಕಾಗುವುದು. ಔಷದ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಶಂಕಿತ ನಕಲಿ ಔಷದ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡ ಔಷದಗಳು ಪ್ರಯೋಗಾಲಯದಲ್ಲಿ ಪರೀಕ್ಷಿಸಲ್ಪಟ್ಟು ನಕಲಿ ಎಂದು ಪ್ರಮಾಣಿಸದೇ, ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡುವುದು ಅಸಾಧ್ಯ. ತದನಂತರವೂ ಈ ವ್ಯಾಜ್ಯಗಳು ವರ್ಷಗಟ್ಟಲೆ ಇತ್ಯರ್ಥವಾಗದೆ ಉಳಿಯುವ ಸಾಧ್ಯತೆಗಳಿವೆ. ನಿಜ ಸ್ಥಿತಿ ಹೀಗಿರುವಾಗ ಕೇಂದ್ರ ಸರಕಾರವು ನಿರ್ಧರಿಸಿದಂತೆ ಇಂತಹ ಪಾತಕಿಗಳಿಗೆ ಮರಣದಂಡನೆಯಂತಹ ಶಿಕ್ಷೆಯನ್ನು ನೀಡುವುದು ನಿರರ್ಥಕವೆನಿಸುವುದು. ಆದರೆ ಎಚ್ಚೆತ್ತ ಗ್ರಾಹಕರು ಮತ್ತು ಗ್ರಾಹಕ ವೇದಿಕೆಗಳು ಈ ಬಗ್ಗೆ ಜನಜಾಗೃತಿಯನ್ನು ಮೂಡಿಸುವಲ್ಲಿ ಸಫಲರಾದಲ್ಲಿ, ನಕಲಿ ಔಷದಗಳ ಸಮಸ್ಯೆಯನ್ನು ನಿಶ್ಚಿತವಾಗಿಯೂ ನಿಯಂತ್ರಿಸುವುದು ಸುಲಭ ಸಾಧ್ಯ. 

ಅಂತಿಮವಾಗಿ ಈ ಸಮಸ್ಯೆಯ ಪರಿಹಾರದಲ್ಲಿ ಕೇಂದ್ರ- ರಾಜ್ಯ ಸರಕಾರಗಳಿಗೆ ಇರುವಷ್ಟೇ ಹೊಣೆಗಾರಿಕೆ ಪ್ರತಿಯೊಂದು ಔಷದ ತಯಾರಿಕಾ ಸಂಸ್ಥೆಗಳಿಗೂ ಇರಲೇಬೇಕು. ತಮ್ಮ ಉತ್ಪನ್ನಗಳ ತಯಾರಿಕೆ, ವಿತರಣೆ ಮತ್ತು ಮಾರಾಟದ ಹಂತಗಳಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸುವುದರೊಂದಿಗೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ತಮ್ಮ ಉತ್ಪನ್ನಗಳನ್ನು ವಿಭಿನ್ನ ರಾಜ್ಯಗಳ ವಿವಿಧ ಔಷದ ಅಂಗಡಿಗಳಿಂದ ಖರೀದಿಸಿ ನಿಯಮಿತವಾಗಿ ಪರೀಕ್ಷೆಗಳಿಗೆ ಒಳಪಡಿಸಲೇಬೇಕು. ಇಂತಹ ಕ್ರಮಗಳಿಂದಾಗಿ ತಮ್ಮ ಉತ್ಪನ್ನಗಳು ನಕಲಿ ರೂಪದಲ್ಲಿ ಮಾರಾಟವಾಗುವುದು ಪತ್ತೆಯಾಗುವುದಲ್ಲದೇ, ಇಂತಹ ಮಾರಾಟಗಾರರ ಮತ್ತು ಇವರಿಗೆ ಔಷದಗಳನ್ನು ಪೂರೈಕೆ ಮಾಡಿದ ಸಂಸ್ಥೆ ಅಥವಾ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲು ಉಪಯುಕ್ತವೆನಿಸಿವುದು. ಇದರೊಂದಿಗೆ ಸಾರ್ವಜನಿಕರೂ ತಾವು ಖರೀದಿಸಿದ ಔಷದಗಳು ನಕಲಿ ಎಂದು ತಿಳಿದುಬಂದಾಗ, ಸಂಬಂಧಿತ ಔಷದ ನಿಯಂತ್ರಣ ಇಲಾಖೆಗೆ ಈ ಬಗ್ಗೆ ಪರಿಪೂರ್ಣ ಮಾಹಿತಿ ನೀಡುವುದು ಅತ್ಯವಶ್ಯಕವೂ ಹೌದು. 

ಔಷದಗಳ ಬಳಕೆದಾರರಿಗೆ ಕಿವಿಮಾತು 

ನಿಮ್ಮ ನಂಬಿಗಸ್ತ ಕುಟುಂಬ ವೈದ್ಯ ಅಥವಾ ತಜ್ಞವೈದ್ಯರ ಸಲಹೆ ಪಡೆಯದೇ ಯಾವುದೇ ಔಷದಗಳನ್ನು ಸೇವಿಸದಿರಿ. ವೈದ್ಯರು ಸೂಚಿಸಿದ ಔಷದಗಳನ್ನು ಹೊರತುಪಡಿಸಿ ಔಷದ ವ್ಯಾಪಾರಿ ನೀಡಬಹುದಾದ ಬದಲಿ ಔಷದಗಳನ್ನು ಖರೀದಿಸದಿರಿ. ಅನಿವಾರ್ಯ ಸಂದರ್ಭಗಳಲ್ಲಿ ವೈದ್ಯರು ಸೂಚಿಸಿದ ಲಭ್ಯವಿಲ್ಲದಿದ್ದಲ್ಲಿ, ನಿಮ್ಮ ವೈದ್ಯರ ಸಲಹೆ ಪಡೆದೇ ಬದಲಿ ಔಷದಗಳನ್ನು ಸೇವಿಸಿ. ಇದಕ್ಕೂ ಮಿಗಿಲಾಗಿ ನೀವು ಖರೀದಿಸಿದ ಔಷದಗಳನ್ನು ವೈದ್ಯರಿಗೆ ತೋರಿಸಿದ ಬಳಿಕ ಸೇವಿಸುವುದು ಹಿತಕರ. 

ಔಷದಗಳನ್ನು ಖರೀದಿಸುವಾಗ ತಪ್ಪದೆ ರಸೀತಿಯನ್ನು ಪಡೆಯಿರಿ. ಇದರಲ್ಲಿ ಔಷದ ತಯಾರಕರ ಹೆಸರು,ವಿಳಾಸಗಳೊಂದಿಗೆ ಬ್ಯಾಚ್ ಸಂಖ್ಯೆ, ತಯಾರಿಸಿದ ದಿನಾಂಕ, ಉಪಯೋಗಿಸಬಹುದಾದ ಅವಧಿಗಳನ್ನು ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳಿ. ವ್ಯಾಪಾರಿ ನೀಡಿದ ಔಷದ ಮೇಲ್ನೋಟಕ್ಕೆ ನೀವು ಹಿಂದೆ ಖರೀದಿಸಿದ್ದ ಔಷದಕ್ಕಿಂತ ಭಿನ್ನವಾಗಿ ಕಾಣುವುದೇ ಎಂದು ಪರಿಶೀಲಿಸಿ. ಈ ಬಗ್ಗೆ ಸಂದೇಹವಿದ್ದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ. 

ಔಷದಗಳನ್ನು ಸೇವಿಸುವಾಗ ಮಾತ್ರೆ- ಕ್ಯಾಪ್ಸೂಲ್- ಸಿರಪ್ ಗಳ ಬಣ್ಣ ಬದಲಾಗಿದ್ದಲ್ಲಿ, ಒಡೆದಿದ್ದಲ್ಲಿ ಅಥವಾ ಹುಡಿಯಾಗಿದ್ದಲ್ಲಿ ಮತ್ತು ಸಿರಪ್ ಗಳ ಬಣ್ಣ- ವಾಸನೆಗಳಲ್ಲಿ ಬದಲಾವಣೆ ಕಂಡುಬಂದಲ್ಲಿ ಸೇವಿಸದಿರಿ. ಇಂತಹ ದೋಷಗಳ ಬಗ್ಗೆ ಇವುಗಳ ಅಯಾರಕರಿಗೆ ತಿಳಿಸುವುದು ನಿಮ್ಮ ಹೊನೆಗಾರ್ಕೆಯೂ ಹೌದು. 

ಗ್ರಾಮೀಣ ಮತ್ತು ನಗರಗಳ ಹೊರವಲಯಗಳಲ್ಲಿ ವೃತ್ತಿಯನ್ನು ನಡೆಸುವ, ಕನಿಷ್ಠ ಮೊತ್ತದ ಹಣವನ್ನು ಅಪ್ಡೆದು ಗರಿಷ್ಟ ಪ್ರಮಾಣದ ಔಷದಗಳನ್ನು ನೀಡುವ "ನಕಲಿ ವೈದ್ಯರು" ನೀಡುವ ಔಷದಗಳು ಹೆಚ್ಚಾಗಿ ಕಳಪೆ ದರ್ಜೆಯದ್ದೇಆಗಿರುತ್ತವೆ. ಒಂದಿಷ್ಟು ಅಧಿಕ ಹಣವನ್ನು ವ್ಯಯಿಸಿದರೂ, ಪದವೀಧರ- ನೊಂದಾಯಿತ ವೈದ್ಯರ ಸಲಹೆ- ಚಿಕಿತ್ಸೆ ಪಡೆಯುವುದು ನಿಸ್ಸಂದೇಹವಾಗಿಯೂ ಆರೋಗ್ಯಕರ. 

ಜಾಹೀರಾತಿನ ಬಲದಿಂದಲೇ ಮಾರಾಟವಾಗುವ ಅದರಲ್ಲೂ ವಿಶೇಷವಾಗಿ "ಲೈಂಗಿಕ ಶಕ್ತಿವರ್ಧಕ" ಗಳು, ದುಬಾರಿ ಬೆಲೆಯ ನಕಲಿ ಔಷದಗಳಾಗಿರುವ ಸಾಧ್ಯತೆಗಳೇ ಹೆಚ್ಚು. ಅಂತೆಯೇ ಶಾಶ್ವತ ಪರಿಹಾರವಿಲ್ಲದ ಕಾಯಿಲೆಗಳನ್ನು ಗುಣಪಡಿಸುವುದಾಗಿ ಬೊಗಳೆ ಬಿಡುವ ನಕಲಿ ವೈದ್ಯರು ನೀಡುವ ಔಷದಗಳು ನಕಲಿಯೇ ಹೊರತು ಅಸಲಿಯಲ್ಲ . 

ನಿಮ್ಮ ಎತ್ತರವನ್ನು ಹೆಚ್ಚಿಸುವ, ತೂಕವನ್ನು ಹೆಚ್ಚಿಸುವ ಅಥವಾ ಇಳಿಸುವ, ಕೊಬ್ಬಿನಿಂದ ಉಬ್ಬಿದ ದೇಹವನ್ನು ತೆಳ್ಳಗಾಗಿಸುವ ಅದ್ಭುತ ಔಷದಗಳ ಜಾಹೀರಾತುಗಳನ್ನು ನಂಬಿ, ನಕಲಿ- ಕಳಪೆ ಔಷದ ತಯಾರಕರನ್ನು ಪರೋಕ್ಷವಾಗಿ ಪ್ರೋತ್ಸಾಹಿಸಬೇಡಿ. 

ಅಂತಿಮವಾಗಿ ಅನಾರೋಗ್ಯ ಪೀಡಿತ ಜನತೆಗೆ "ಜೀವರಕ್ಷಕ' ಎನಿಸಬೇಕಾದ ಔಷದಗಳು, ನಕಲಿ ಔಷದ ತಯಾರಕರ "ಕೈವಾಡ" ದಿಂದ "ಜೀವ ಭಕ್ಷಕ" ಎಣಿಸುತ್ತಿರುವುದು ಜನಸಾಮಾನ್ಯರಿಗೆ "ಔಷದಂ ಜಾಹ್ನವೀ ತೋಯಂ, ವೈದ್ಯೋ ನಾರಾಯಣೋ ಹರಿ" ಎನ್ನುವ ನಂಬಿಕೆಯನ್ನೇ ಸುಳ್ಳಾಗಿಸುತ್ತಿರುವುದು ನಿಜಕ್ಕೂ ವಿಷಾದನೀಯ. 

ಡಾ . ಸಿ . ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೬- ೧೦- ೨೦೦೩ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ . 


Thursday, December 5, 2013

CHICKEN POX




               ಕಷ್ಟ ಕೋಟಲೆಗಳಿಗೆ ಕಾರಣವೆನಿಸಬಲ್ಲ "ಕೋಟ್ಲೆ"

ಅನೇಕ ಭಾರತೀಯರ ಮನದಲ್ಲಿ ಭದ್ರವಾಗಿ ಬೇರೂರಿರುವ ಮೂಢನಂಬಿಕೆಗಳು ಮತ್ತು ತಪ್ಪುಕಲ್ಪನೆಗಳಿಗೆ ಕಾರಣವೆನಿಸಿರುವ ಕಾಯಿಲೆಗಳಲ್ಲಿ "ಸೀತಾಳೆ ಸಿಡುಬು" ಒಂದಾಗಿದೆ. ಅಮ್ಮ ಅಥವಾ ದೇವಿ ಎಂದು ಜನರು ಗುರುತಿಸಿರುವ ದೇವತೆಯೊಂದು ಮನುಷ್ಯನ ಶರೀರದಲ್ಲಿ ಪ್ರಕಟವಾಗುವುದೇ ಈ ವ್ಯಾಧಿಗೆ ಕಾರಣವೆಂದು ನಂಬುವ ಜನರು, ಈ ವೈಜ್ಞಾನಿಕ ಯುಗದಲ್ಲೂ ಇರುವುದು ನಂಬಲಸಾಧ್ಯವೆನಿಸುವುದು!. 
------------                 ------------                  ---------------                 ----------------                   ------

  ಸಾಮಾನ್ಯವಾಗಿ ಬೇಸಗೆಯ ದಿನಗಳಲ್ಲಿ ಅದರಲ್ಲೂ ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳ ಪರೀಕ್ಷೆಗಳ ಸಂದರ್ಭದಲ್ಲಿ ಪ್ರತ್ಯಕ್ಷವಾಗುವ ಕಾಯಿಲೆಗಳಲ್ಲಿ ಸೀತಾಳೆ ಸಿಡುಬು ಪ್ರಮುಖವಾಗಿದೆ. ಈ ವ್ಯಾಧಿಪೀಡಿತ ಮಕ್ಕಳಿಗೆ ಹಾಗೂ ಇವರ ಮಾತಾಪಿತರಿಗೆ ಸಾಕಷ್ಟು ಕಷ್ಟ ಕೋಟಲೆಗಳಿಗೆ ಕಾರಣವೆನಿಸುವುದರಿಂದಲೋ ಏನೋ, ದಕ್ಷಿಣ ಕನ್ನಡದ ಜನರು ಇದನ್ನು "ಕೋಟ್ಲೆ " ಎಂದೇ ಕರೆಯುತ್ತಾರೆ. 

ವೈದ್ಯಕೀಯ ಪರಿಭಾಷೆಯಲ್ಲಿ "ಚಿಕನ್ ಪಾಕ್ಸ್" ಎಂದು ಕರೆಯಲ್ಪಡುವ ಈ ಕಾಯಿಲೆಯು "ವೆರಿಸೆಲ್ಲಾ " ಎನ್ನುವ ವೈರಸ್ ಗಳಿಂದ ಉದ್ಭವಿಸಿ ಸಾಂಕ್ರಾಮಿಕವಾಗಿ ಹರದಬಲ್ಲದು. ಅಬಾಲ ವೃದ್ಧರನ್ನು ಪೀಡಿಸಬಲ್ಲ ಈ ವ್ಯಾಧಿಯು, ಸಾಮಾನ್ಯವಾಗಿ ಮಕ್ಕಳಲ್ಲಿ ಬಹಳ ಸೌಮ್ಯರೂಪದಲ್ಲಿ ಪ್ರಕಟವಾಗುವುದು. ಆದರೆ ವಯಸ್ಕರಲ್ಲಿ ಹಾಗೂ ಅಲ್ಪ ಪ್ರಮಾಣದ ಮಕ್ಕಳಲ್ಲಿ ತೀವ್ರ ರೂಪವನ್ನು ತಾಳಿ ಗಂಭೀರ ಸಮಸ್ಯೆಗಳೊಂದಿಗೆ, ಕೆಲವೊಮ್ಮೆ ಪ್ರಾಣಾಪಾಯಕ್ಕೂ ಕಾರಣವೆನಿಸುವುದು. 

ಆದರೆ ಇಂದಿಗೂ ಬಹುತೇಕ ಅವಿದ್ಯಾವಂತರೊಂದಿಗೆ ಕೆಲ ವಿದ್ಯಾವಂತರೂ ರೋಗಿಯ ಮೈಮೇಲೆ ದೇವಿ ಬಂದಿರುವಲೆಂದು ನಂಬಿ, ಮನೆಯಲ್ಲಿ ಮಧು-ಮಾಂಸಗಳ ಸೇವನೆಯನ್ನು ವರ್ಜಿಸಿ, ವೈದ್ಯರ ಚಿಕಿತ್ಸೆಯನ್ನು ಪಡೆದುಕೊಳ್ಳುವ ಗೋಜಿಗೆ ಹೋಗದಿರುವ ಪ್ರಾಚೀನ ಪದ್ದತಿಯು ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ. ಇದಕ್ಕೂ ಮಿಗಿಲಾಗಿ ಈ ವ್ಯಾಧಿಪೀಡಿತರಿಗೆ ನಾಲ್ಕಾರು ವಾರಗಳ ಕಾಲ ಆಹಾರ- ವಿಹಾರಗಳಲ್ಲಿ ಕಟ್ಟುನಿಟ್ಟಿನ ಪಥ್ಯವನ್ನು ವಿಧಿಸಿ, ಕದುಬೇಸಗೆಯ ದಿನಗಳಲ್ಲೂ ಸ್ನಾನವನ್ನು ಮಾಡಿಸದೆ ನರಕಯಾತನೆಗೆ ಗುರಿಪಡಿಸುವ ಮನೆಮಂದಿ, ಅನಾವಶ್ಯಕ ಸಮಸ್ಯೆಗಳಿಗೆ ಆಹ್ವಾನವನ್ನು ನೀಡುತ್ತಾರೆ. ರೋಗಿಯ ಪ್ರಾಣಕ್ಕೆ ಎರವಾಗಬಲ್ಲ ಇಂತಹ ಮೂಢನಂಬಿಕೆಗಳು ಹಾಗೂ ತಪ್ಪುಕಲ್ಪನೆಗಳನ್ನು ಸತ್ಯವೆಂದು ನಂಬುವ ಜನಸಾಮಾನ್ಯರು, ಈ ಕಾಯಿಲೆಯನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ ಹಾಗೂ ಗುಣಪಡಿಸಬಲ್ಲ ಔಷದಗಳಿವೆ ಎನ್ನುವುದನ್ನು ಮಾತ್ರ ನಂಬುವುದೇ ಇಲ್ಲ. ಅಂತೆಯೇ ಇಂತಹ ಅನಿಷ್ಠ ಪದ್ದತಿಗಳನ್ನು ತೊರೆಯಲೂ ಸಿದ್ಧರಿಲ್ಲ!. 

ಈ ವ್ಯಾಧಿ ಬಾಧಿಸುವುದೆಂತು?

ಸೀತಾಳೆ ಸಿಡುಬು ಪೀಡಿತ ವ್ಯಕ್ತಿಯ ನಾಸಿಕ ಸ್ರಾವ, ಜೊಲ್ಲು, ಶ್ವಾಸಾಂಗಗಳಲ್ಲಿನ ದ್ರವ- ಸ್ರಾವಗಳಿಂದ ಹಾಗೂ ರೋಗಿಯ ಚರ್ಮದ ಮೇಲೆ ಮೂಡುವ ಗುಳ್ಳೆಗಳಲ್ಲಿನ ದ್ರವದಿಂದ ವೆರಿಸೆಲ್ಲಾ ವೈರಸ್ ಗಳು ಮತ್ತೊಬ್ಬರಿಗೆ ಸುಲಭದಲ್ಲೇ ಹರಡುತ್ತವೆ. ಇದಲ್ಲದೇರೋಗಿಯೊಂದಿಗೆ ಸಂಪರ್ಕವಿರುವ ಮನೆಮಂದಿ, ಆಸ್ಪತ್ರೆಯ ಸಿಬಂದಿಗಳು ಮತ್ತು ರೋಗಿಯನ್ನು ಕಾಣಲು ಬಂದ ಸಂದರ್ಶಕರಿಂದ ಈ ವ್ಯಾಧಿ ಹರಡುತ್ತದೆ. 

ಆರೋಗ್ಯವಂತರ ಮೂಗು- ಬಾಯಿಗಳ ಮೂಲಕ ಶರೀರವನ್ನು ಪ್ರವೇಶಿಸುವ ಈ ವೈರಸ್ ಗಳು, ಹತ್ತರಿಂದ ಇಪ್ಪತ್ತೊಂದು ದಿನಗಳ ಅವಧಿಯಲ್ಲಿ ಸೀತಾಳೆ ಸಿಡುಬು ವ್ಯಾಧಿಯನ್ನು ಪ್ರಕಟಗೊಳಿಸುತ್ತವೆ. ಆದರೆ ಈ ವ್ಯಾಧಿ ಒಂದುಬಾರಿ ಬಾಧಿಸಿದ ಬಳಿಕ ರೋಗಿಯ ಶರೀರವು ಈ ವೈರಸ್ ಗಳಿಗೆ ಪ್ರತಿರೋಧಶಕ್ತಿಯನ್ನು ಗಳಿಸಿಕೊಳ್ಳುವುದರಿಂದ ಮತ್ತೊಮ್ಮೆ ಬಾಧಿಸದು. 

ರೋಗಲಕ್ಷಣಗಳು 

ಪುಟ್ಟ ಮಕ್ಕ್ಕಳಲ್ಲಿ ಸೀತಾಳೆ ಸಿಡುಬು ಉದ್ಭವಿಸುವ ಮುನ್ನ ವಿಶೇಷ ತೊಂದರೆಗಳು ಕಂಡುಬರುವುದಿಲ್ಲ. ಆದರೆ ಅಪರೂಪದಲ್ಲಿ ಕೆಲ ಮಕ್ಕಳಲ್ಲಿ ವಾಂತಿ, ವಿಪರೀತ ಜ್ವರ ಹಾಗೂ ಅಪಸ್ಮಾರದಂತಹ ಸೆಳೆತಗಳೊಂದಿಗೆ ಆರಂಭವಾಗಬಹುದು. ಇಂತಹ ಸಂದರ್ಭದಲ್ಲಿ ವ್ಯಾಧಿ ಯಾವುದೆಂದು ಅರಿಯದೇ ಚಿಕಿತ್ಸೆ ಪಡೆದುಕೊಂಡರೂ, ಒಂದೆರಡು ದಿನಗಳಲ್ಲಿ ಪ್ರತ್ಯಕ್ಷವಾಗುವ ಗುಳ್ಳೆಗಳು ಸೀತಾಳೆ ಸಿದುಬನ್ನು ಖಚಿತಪಡಿಸುತ್ತವೆ. 

ವಯಸ್ಕರಲ್ಲಿ ಹೆಚ್ಚಾಗಿ ಎರಡರಿಂದ ಮೂರುದಿನಗಳ ಕಾಲ ಮೈಕೈನೋವು, ತಲೆನೋವು ಮತ್ತು ಜ್ವರಗಳು ಬಾಧಿಸಿದ ಬಳಿಕವೇ ಗುಳ್ಳೆಗಳು ಮೂಡುತ್ತವೆ. ಸೀತಾಳೆ ಸಿಡುಬಿನ ಪ್ರಧಾನ ಲಕ್ಷಣವಾಗಿರುವ ಪುಟ್ಟ ಕೆಂಪು ಗುಳ್ಳೆಗಳು ಉದ್ಭವಿಸಿದ ಬಳಿಕ ತುಸು ದೊಡ್ಡದಾಗಿ ಪಾರದರ್ಶಕ ನೀರಿನ ಗುಳ್ಳೆಗಳಂತೆ ಕಾಣುತ್ತವೆ. "ಮಂಜಿನ ಹನಿ" ಗಳಂತೆ ಕಾಣುವ ಈ ಗುಳ್ಳೆಗಳಲ್ಲಿನ  ದ್ರವವು, ಮುಂದಿನ ಒಂದೆರಡು ದಿನಗಳಲ್ಲೇ ನಸುಹಳದಿ ಬಣ್ಣಕ್ಕೆ ಪರಿವರ್ತನೆಗೊಳ್ಳುತ್ತವೆ. ಈ ಗುಳ್ಳೆಗಳು ಹೆಚ್ಚಾಗಿ ತಲೆ, ಮುಖ, ಎದೆ ಹಾಗೂ ಬೆನ್ನಿನ ಮೇಲೆ ಮೂಡಿದ ಬಳಿಕ ಶರೀರದ ಇತರ ಭಾಗಗಳಿಗೂ ಹರಡುತ್ತವೆ. ಬಹುತೇಕ ರೋಗಿಗಳಲ್ಲಿ ಐದರಿಂದ ಏಳು ದಿನಗಳ ಕಾಲ ಹೊಸದಾಗಿ ಮೂಡುತ್ತಲೇ ಇರುವ ಗುಳ್ಳೆಗಳು, ತದನಂತರ ನಿಧಾನವಾಗಿ ಬಾಡಲು ಆರಂಭಿಸುತ್ತವೆ.

ಚಿಕ್ಕಮಕ್ಕಳ ಶರೀರದ ಮೇಲೆ ಕೇವಲ ಹತ್ತಾರು ಗುಳ್ಳೆಗಳಿಂದ ಆರಂಭಿಸಿ ಸಾವಿರಕ್ಕೂ ಅಧಿಕ ಗುಳ್ಳೆಗಳು ಮೂಡಬಹುದಾದರೂ, ಬಹುತೇಕ ರೋಗಿಗಳ ಶರೀರದಲ್ಲಿ ಸಾಮಾನ್ಯವಾಗಿ ಇನ್ನೂರರಿಂದ ನಾಲ್ಕುನೂರು ಗುಳ್ಳೆಗಳು ಮೂಡುತ್ತವೆ.  

ಸೀತಾಳೆ ಸಿಡುಬಿನ ಗುಳ್ಳೆಗಳಲ್ಲಿ ತಲೆದೋರುವ ತುರಿಕೆಯಿಂದಾಗಿ ರೋಗಿಗಳು ಇವುಗಳನ್ನು ತುರಿಸಿದಲ್ಲಿ ಒಡೆದು ಬ್ಯಾಕ್ಟೀರಿಯಾಗಳ ಸೋಂಕು ತಗಲಿ ಹುಣ್ಣಾಗುವ ಸಾಧ್ಯತೆಗಳಿವೆ. ಅದೇ ರೀತಿಯಲ್ಲಿ ಬೇಸಗೆಯ ದಿನಗಳಲ್ಲಿ ರೋಗಿಗೆ ಸ್ನಾನವನ್ನು ಮಾಡಿಸದೆ ಅಥವಾ ಒದ್ದೆ ಬಟ್ಟೆಯಿಂದ ಶರೀರವನ್ನು ಸ್ವಚ್ಚಗೊಳಿಸಿ ಟಾಲ್ಕಂ ಪೌಡರ್ ಚಿಮುಕಿಸದಿರುವುದೂ ಅಸಾಧ್ಯ ತುರಿಕೆಗೆ ಕಾರಣವೆನಿಸಬಹುದು. ರೋಗಿಯ ಶರೀರವನ್ನು ಶುಚಿಯಾಗಿ ಇರಿಸುವ ಮೂಲಕ ಈ ಸಮಸ್ಯೆಯನ್ನು ನಿಯಂತ್ರಿಸಬಹುದು. 

ಸಂಕೀರ್ಣ ಸಮಸ್ಯೆಗಳು 

ಸೀತಾಳೆ ಸಿದುಬನ್ನು ನಿರ್ಲಕ್ಷಿಸುವುದರಿಂದ, ಸಂದರ್ಭೋಚಿತ ಚಿಕಿತ್ಸೆಯನ್ನು ಪಡೆಯದೇ ಇರುವುದರಿಂದ, ರೋಗಿಯ ಶರೀರವನ್ನು "ತಂಪುಗೊಳಿಸುವ" ಉಪಕ್ರಮಗಳಿಂದ ಮತ್ತು ಇನ್ನಿತರ ಕೆಲ ಕಾರಣಗಳಿಂದ ರೋಗಿಗಳಲ್ಲಿ ಅನೇಕ ಸಂಕೀರ್ಣ ಸಮಸ್ಯೆಗಳು ಉದ್ಭವಿಸುತ್ತವೆ. ಅಂತೆಯೇ ಕೆಲರೋಗಿಗಳ ಪಾಲಿಗೆ ಪ್ರಾಣಾಂತಿಕವೆನಿಸುವ ಸಾಧ್ಯತೆಗಳಿವೆ. 

ರೋಗಿಯ ಶರೀರದ ಮೇಲಿನ ಗುಳ್ಳೆಗಳು ಒಡೆದು ಸ್ಟ್ರೆಪ್ಟೋಕಾಕಸ್ ಹಾಗೂ ಸ್ಟೆಫೈಲೋಕಾಕಸ್ ಎನ್ನುವ ಬ್ಯಾಕ್ಟೀರಿಯಾಗಳ ಸೋಂಕು ತಗಲಿ ಹುಣ್ಣುಗಳುಉದ್ಭವಿಸುವ ಸಾಧ್ಯತೆಗಳಿವೆ. ಕಣ್ಣಿನಲ್ಲಿ ಮೂಡಿದ ಗುಳ್ಳೆಗಳಿಗೆ ಸೋಂಕು ತಗಲಿದಲ್ಲಿ ದೃಷ್ಟಿದೋಷಕ್ಕೆ ಕಾರಣವೆನಿಸಬಹುದು. ವಯಸ್ಕರು ಮತ್ತು ಅಲ್ಪ ಪ್ರಮಾಣದ ಮಕ್ಕಳಲ್ಲಿ ನ್ಯುಮೋನಿಯಾ, ಶ್ವಾಸಕೋಶಗಳು- ಎಲುಬು ಮತ್ತು ಅಸ್ಥಿಸಂಧಿಗಳು- ವೃಷಣಗಳು- ಮೆದುಳು- ಮೇದೋಜೀರಕ ಗ್ರಂಥಿ ಹಾಗೂ ಯಕೃತ್ ನ ಉರಿಯೂತಗಳೂ ಸಂಭವಿಸಬಹುದು. 

ಚರ್ಮದ ಮೇಲಿನ ಗುಳ್ಳೆಗಳು ಹಾಗೂ ಇವುಗಳ ಸುತ್ತಲಿನ ಚರ್ಮದಲ್ಲಿ, ಮೂತ್ರದಲ್ಲಿ ಮತ್ತು ಕರುಳಿನಲ್ಲಿ ರಕ್ತಸ್ರಾವದಂತಹ ಗಂಭೀರ - ಮಾರಕ ತೊಂದರೆಗಳು ಕಂಡುಬರಬಹುದು. ಗರ್ಭಿಣಿಯರಿಗೆ ಈ ಕಾಯಿಲೆ ಕಾಣಿಸಿಕೊಳ್ಳುವ ಒಂದು ವಾರಕ್ಕೆ ಮುನ್ನ ಹೆರಿಗೆಯಾದಲ್ಲಿ, ನವಜಾತ ಶಿಶುವಿಗೆ ಈ ವ್ಯಾಧಿ ತೀವ್ರ ರೂಪದಲ್ಲಿ ಬಾಧಿಸುವುದು. ಮಗುವಿನ ಜನನದ ಬಳಿಕ ಬಾಧಿಸಿದಲ್ಲಿ ಪ್ರಾನಾಪಾಯಕ್ಕೆ ಕಾರಣವೆನಿಸಬಹುದು. 

ಗರ್ಭಸ್ಥ ಶಿಶುವಿಗೆ ಈ ಸೋಂಕು ತಗಲಿದಲ್ಲಿ ಮೆದುಳು ಮತ್ತು ನರಗಳಲ್ಲಿ ತೀವ್ರ ಹಾಗೂ ಗಂಭೀರ ಸಮಸ್ಯೆಗಳು ಉದ್ಭವಿಸಬಹುದು. ಆರರಿಂದ ಹದಿನೆರಡು ವಾರಗಳ ಗರ್ಭಕ್ಕೆ ವೆರಿಸೆಲ್ಲಾ ವೈರಸ್ ಗಳ ಸೋಂಕು ತಗಲಿದಲ್ಲಿ, ಹುಟ್ಟುವ ಮಗುವಿಗೆ ಕೈಕಾಲುಗಳ ಬೆಳವಣಿಗೆಗಳ ನ್ಯೂನತೆಗಳು ಹಾಗೂ ಇಪ್ಪತ್ತರಿಂದ ಇಪ್ಪತ್ತನಾಲ್ಕು ವಾರಗಳ ಗರ್ಭಕ್ಕೆ ಸೋಂಕು ತಗಲಿದಲ್ಲಿ , ಕಣ್ಣು ಮತ್ತು ಮೆದುಳಿನ ದೋಷಗಳು ಉದ್ಭವಿಸಬಹುದು. 

ಈ ವ್ಯಾಧಿಯಿಂದ ಉದ್ಭವಿಸಬಲ್ಲ ಪ್ರಾಣಾಪಾಯದ ಸಾಧ್ಯತೆಗಳ ಪ್ರಮಾಣ ಕೇವಲ ಶೇ. ೨ ರಷ್ಟೇ ಇದ್ದರೂ, ರೋಗನಿರೋಧಕ ಶಕ್ತಿಯ ಕೊರತೆಯಿಂದ ಬಳಲುವ ಮಕ್ಕಳಲ್ಲಿ ಶೇ. ೭ ರಿಂದ ೧೪ ರಷ್ಟಿದ್ದು, ಕೆಲವೊಮ್ಮೆ ಶೇ. ೫೦ ತಲುಪುವ ಸಾಧ್ಯತೆಗಳೂ ಇವೆ. 


  ತಡೆಗಟ್ಟುವುದೆಂತು?

ಸೀತಾಳೆ ಸಿಡುಬನ್ನು ತಡೆಗಟ್ಟುವ "ಲಸಿಕೆ" ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ವಿದೇಶದಿಂದ ಆಮದು ಮಾಡಬೇಕಾಗಿರುವುದರಿಂದ ತುಸು ದುಬಾರಿ ಎನಿಸುವುದಾದರೂ, ಈ ವ್ಯಾಧಿ ಬಾಧಿಸಿದಲ್ಲಿ ತಲೆದೋರಬಲ್ಲ ಗಂಭೀರ- ಮಾರಕ ಸಮಸ್ಯೆಗಳೊಂದಿಗೆ ತುಲನೆಮಾಡಿದಲ್ಲಿ ಈ ಲಸಿಕೆಯ ಚುಚ್ಚುಮದ್ದನ್ನು ಪಡೆದುಕೊಳ್ಳುವುದು ಹಿತಕರವೆನಿಸುವುದು. 

ಒಂದು ವರ್ಷ ಮೀರಿದ ಮಕ್ಕಳಿಗೆ ಒಂದು ಬಾರಿ ಹಾಗೂ ೧೨ ವರ್ಷ ಮೀರಿದವರಿಗೆ ಎರಡು ಬಾರಿ ನೀಡಬೇಕಾದ ಈ ಲಸಿಕೆಯು, ವೆರಿಸೆಲ್ಲಾ ವೈರಸ್ ಗಳ ವಿರುದ್ಧ ಶೇ.೯೫ ರಷ್ಟು ಜನರಿಗೆ ರಕ್ಷಣೆಯನ್ನು ನೀಡುತ್ತದೆ. ಇನ್ನುಳಿದ ಶೇ. ೫ ಜನರಲ್ಲಿ ಈ ವ್ಯಾಧಿ ಉದ್ಭವಿಸಿದರೂ, ಅತ್ಯಂತ ಸೌಮ್ಯರೂಪದಲ್ಲಿ ಪ್ರಕಟಗೊಳ್ಳುವುದರೊಂದಿಗೆ ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸುವುದಿಲ್ಲ. ಜೊತೆಗೆ ರೋಗಪೀಡಿತ ವ್ಯಕ್ತಿಯ ನೇರ ಸಂಪರ್ಕವಾದ ನಂತರದ ಮೂರು ದಿನಗಳಲ್ಲಿ ಈ ಲಸಿಕೆಯನ್ನು ಪಡೆದುಕೊಂಡರೂ ಅಪೇಕ್ಷಿತ ಪರಿಣಾಮ ದೊರೆಯುವುದು. 

ಬಾಲ್ಯದಲ್ಲೇ ಲಸಿಕೆ ಪಡೆದುಕೊಂಡ ಮಕ್ಕಳಿಗೆ ವೆರಿಸೆಲ್ಲಾ ವೈರಸ್ ಗಳಿಂದ ರಕ್ಷಣೆ ದೊರೆಯುವುದರಿಂದ, ಸೀತಾಳೆ ಸಿಡುಬಿನೊಂದಿಗೆ "ಸರ್ಪಸುತ್ತು" ಎಂದು ಕರೆಯಲ್ಪಡುವ ಭಯಾನಕ ವ್ಯಾಧಿಯೂ ಬಾಧಿಸುವ ಸಾಧ್ಯತೆಗಳಿರುವುದಿಲ್ಲ. ಸೀತಾಳೆ ಸಿಡುಬು ಪೀಡಿತ ವ್ಯಕ್ತಿಗಳೊಂದಿಗೆ ಸಂಪರ್ಕವಿರುವ ಗರ್ಭಿಣಿಯರು, ನವಜಾತ ಶಿಶುಗಳು ಮತ್ತು ರೋಗನಿರೋಧಕ ಶಕ್ತಿಯ ಕೊರತೆಯಿಂದ ಬಳಲುತ್ತಿರುವವರಿಗೆ ರಕ್ಷಣೆಯನ್ನು ನೀಡುವ ಸಲುವಾಗಿ VZIG ಎನ್ನುವ ಇಮ್ಯುನೋ ಗ್ಲೋಬುಲಿನ್ ಚುಚ್ಚುಮದ್ದನ್ನು ನೀಡಬೇಕಾಗುವುದು. ಸಾಮಾನ್ಯವಾಗಿ ಒಂದೇ ಮನೆಯಲ್ಲಿ ವಾಸವಾಗಿರುವ ವ್ಯಕ್ತಿಗಳಿಗೆ ಸೀತಾಳೆ ಸಿದುಬಿನಿಂದ ರಕ್ಷಣೆ ನೀಡುವಲ್ಲಿ ಇದು ಅತ್ಯಂತ ಉಪಯುಕ್ತವೆನಿಸುತ್ತದೆ. 

ಚಿಕಿತ್ಸೆ 

ವೆರಿಸೆಲ್ಲಾ ವೈರಸ್ ಗಳ ಹಾವಳಿಯನ್ನು ನಿಶ್ಚಿತವಾಗಿ ನಿಯಂತ್ರಿಸಬಲ್ಲ ಕೆಲ ಔಷದಗಳು ಅನೇಕ ವರ್ಷಗಳಿಂದ ನಮ್ಮ ದೇಶದಲ್ಲಿ ಲಭಿಸುತ್ತಿವೆ. ಎಸೈಕ್ಲೋವಿರ್, ಪಾಮ್ ಸೈಕ್ಲೋವಿರ್ ಹಾಗೂ ವಾಲಾ ಸೈಕ್ಲೋವಿರ್ ಎನ್ನುವ ಔಷದಗಳನ್ನು ರೋಗಿಯ ವಯಸ್ಸು, ವ್ಯಾಧಿಯ ತೀವ್ರತೆ ಹಾಗೂ ಇತರ ಸಮಸ್ಯೆಗಳನ್ನು ಪರಿಗಣಿಸಿ ನೀಡಬೇಕಾಗುತ್ತದೆ. ಇದೇ ಕಾರಣದಿಂದಾಗಿ ಈ ವ್ಯಾಧಿ ತಲೆದೋರಿದಲ್ಲಿ ವಿಳಂಬಿಸದೇ ನಿಮ್ಮ ಕುಟುಂಬ ವೈದ್ಯರು ಅಥವಾ ಅವರ ಸಲಹೆಯಂತೆ ತಜ್ಞವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆದಲ್ಲಿ, ಗಂಭೀರ ಸಮಸ್ಯೆಗಳು ಹಾಗೂ ಪ್ರಾಣಾಪಾಯದ ಸಾಧ್ಯತೆಗಳನ್ನು ಸುಲಭದಲ್ಲೇ ತಡೆಗಟ್ಟಬಹುದು. ಜೊತೆಗೆ ಅತ್ಯಲ್ಪ ಸಮಯದಲ್ಲೇ ರೋಗಮುಕ್ತರಾಗಬಹುದು. 

ಅನೇಕ ಹಳ್ಳಿ- ಪಟ್ಟಣಗಳ ನಿವಾಸಿಗಳು ಈ ವ್ಯಾಧಿಗೆ ಸೂಕ್ತ ಚಿಕಿತ್ಸೆ ಇಲ್ಲವೆಂದು ಅಥವಾ ಇದಕ್ಕೆ "ಇಂಗ್ಲಿಷ್ ಮದ್ದು" ಸೇವಿಸಬಾರದೆಂದು ಇಂದಿಗೂ ನಂಬಿದ್ದಾರೆ. ಮಂತ್ರ- ತಂತ್ರಗಳೊಂದಿಗೆ ಗಿಡಮೂಲಿಕೆಗಳ ಕಷಾಯ ಸೇವನೆಯೇ ಇದಕ್ಕೆ ದಿವ್ಯೌಷದವೆಂದು ನಂಬಿ, ಇದನ್ನು ಪ್ರಯೋಗಿಸಿದ ಬಳಿಕ ಸಂಕೀರ್ಣ ಸಮಸ್ಯೆಗಳು ಉದ್ಭವಿಸಿದ ಬಳಿಕ ವೈದ್ಯರಲ್ಲಿ ಧಾವಿಸುವುದು ಅಪರೂಪವೇನಲ್ಲ. ವಿಶೇಷವೆಂದರೆ ಪ್ರಾಣಾಪಾಯಕ್ಕೆ ಒಳಗಾದ ರೋಗಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿದರೂ ಫಲಕಾರಿಯಾಗದೇ ಮೃತಪಟ್ಟಲ್ಲ, ಈ ಮಂದಿ ಆಧುನಿಕ ಔಷದಗಳೇರೋಗಿಯ ಮರಣಕ್ಕೆ ಕಾರಣವೆಂದು ದೂರಲು ಹಿಂಜರಿಯುವುದಿಲ್ಲ!. 

ನಿಮಗಿದು ತಿಳಿದಿರಲಿ 

ಸೀತಾಳೆ ಸಿಡುಬಿನ ಪಿಡುಗಿಗೆ ಈಡಾಗಿದ್ದ ರೋಗಿಗಳು ನಿಗದಿತ ಅವಧಿಯಲ್ಲಿ ರೋಗಮುಕ್ತರಾದರೂ, ವೆರಿಸೆಲ್ಲಾ ವೈರಸ್ ಗಳು ಇವರ ಶರೀರದ ನರಗಳ ಗ್ಯಾಂಗ್ಲಿಯಾನ್ ಗಳಲ್ಲಿ "ಸುಪ್ತಾವಸ್ಥೆ' ಯಲ್ಲಿ ಉಳಿದುಕೊಳ್ಳುತ್ತವೆ. ಈ ಸ್ಥಿತಿಯಲ್ಲಿ ಹಲವಾರು ವರ್ಷಗಳ ಕಾಲ ಉಳಿದುಕೊಳ್ಳಬಲ್ಲ ಈ ವೈರಸ್ ಗಳು, ಇಂತಹ ವ್ಯಕ್ತಿಗಳ ಶರೀರದ ರೋಗನಿರೋಧಕ ಶಕ್ತಿ ಕುಂಠಿತವಾದ ಸಂದರ್ಭದಲ್ಲಿ ಮತ್ತೆ ಸಕ್ರಿಯಗೊಂಡು"ಸರ್ಪಸುತ್ತು" ಉದ್ಭವಿಸಲು ಕಾರಣೀಭೂತವಾಗುತ್ತವೆ. 

ಅನೇಕ ವಿದ್ಯಾವಂತರು ಧೃಢವಾಗಿ ನಂಬಿರುವಂತೆ "ಸರ್ಪಸುತ್ತು'  ನಮ್ಮ ಶರೀರವನ್ನು ಸುತ್ತುವರೆದು, ಇದರ ಹೆಡೆ ಮತ್ತು ಬಾಲಗಳು ಒಂದಾಗಿ ಸೇರಿದಲ್ಲಿ ನಿಶ್ಚಿತವಾಗಿಯೂ ರೋಗಿ ಮೃತಪಡುವನು ಎನ್ನುವುದು ಅಪ್ಪಟ ಸುಳ್ಳು!. 

ವೆರಿಸೆಲ್ಲಾ ವೈರಸ್ ನಿಂದ ಉದ್ಭವಿಸಬಲ್ಲ ಸೀತಾಳೆ ಸಿಡುಬು ಒಬ್ಬರಿಂದ ಮತ್ತೊಬ್ಬರಿಗೆ ಸುಲಭದಲ್ಲೇ ಹರಡಬಲ್ಲದು. ಆದರೆ ಇದೇ ವೈರಸ್ ನಿಂದ ಮುಂದೆ ಎಂದಾದರೂ ಉದ್ಭವಿಸಬಲ್ಲ ಸರ್ಪಸುತ್ತು ಮಾತ್ರ ನಿಶ್ಚಿತವಾಗಿಯೂ ರೋಗಿಯ ಸಮರ್ಕವಿದ್ದರೂ ಮತ್ತೊಬ್ಬರಿಗೆ ಹರಡದು. 

ಇವೆಲ್ಲಕ್ಕೂ ಮಿಗಿಲಾಗಿ ಈ ವ್ಯಾಧಿ ಪೀಡಿತರಿಗೆ ಮುಂದಿನ ಹಲವಾರು ವಾರಗಳ ಕಾಲ ಆಹಾರ ಸೇವನೆಯಲ್ಲಿ ಕಟ್ಟುನಿಟ್ಟಿನ ಪಥ್ಯವನ್ನು ಪರಿಪಾಲಿಸುವ ಅವಶ್ಯಕತೆಯೇ ಇರುವುದಿಲ್ಲ. ಸಾಮಾನ್ಯವಾಗಿ ಮನೆಮಂದಿ ಸೇವಿಸುವ ಅನ್ನಾಹಾರಗಳೊಂದಿಗೆ ಪೋಷಕಾಂಶಗಳು ಸಮೃದ್ಧವಾಗಿರುವ ಹಸಿ ತರಕಾರಿಗಳ ಸಲಾಡ್, ಹಣ್ಣು ಹಂಪಲುಗಳು, ಹಾಲು- ಮೊಸರು ಮತ್ತು ಶುದ್ಧವಾದ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಈ ರೋಗಿಗಳು ಪ್ರತಿನಿತ್ಯ ಸೇವಿಸಬೇಕು. 

ಪುಟ್ಟ ಕಂದನಿಂದ ವಯೋವೃದ್ಧರ ತನಕ ಎಲ್ಲರನ್ನೂ ಬಾಧಿಸಬಲ್ಲ ಸೀತಾಳೆ ಸಿಡುಬು ಮತ್ತು ಸರ್ಪಸುತ್ತು, ಇವೆರಡೂ ವ್ಯಾಧಿಗಳಿಗೆ ನೀಡುವ ಚಿಕಿತ್ಸೆ ಒಂದೇ ಆಗಿದ್ದರೂ, ಔಷದಗಳ ಪ್ರಮಾಣದಲ್ಲಿ ಮಾತ್ರ ಒಂದಿಷ್ಟು ವ್ಯತ್ಯಯವಾಗುವುದು. 

ವಯಸ್ಕರಲ್ಲಿ ತೀವ್ರ ಉಲ್ಬಣಿಸಿ ಸಂಕೀರ್ಣ ಸಮಸ್ಯೆಗಳಿಗೆ ಕಾರಣವೆನಿಸಬಲ್ಲ ಇವೆರಡೂ ವ್ಯಾಧಿಗಳು ಪ್ರತ್ಯಕ್ಷವಾದೊಡನೆ ಮಂತ್ರ- ತಂತ್ರಗಳನ್ನು ಪ್ರಯೋಗಿಸದೇ. ಸಮರ್ಪಕ ಚಿಕಿತ್ಸೆ ಪಡೆಯುವುದು ನಿಶ್ಚಿತವಾಗಿಯೂ ಹಿತಕರವೆನಿಸುವುದು. 

ಅಂತಿಮವಾಗಿ ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ ಎನ್ನುವ ಉಕ್ತಿಯಂತೆ, ವೆರಿಸೆಲ್ಲಾ ವೈರಸ್ ಗಳಿಂದ ಉದ್ಭವಿಸಬಹುದಾದ ವ್ಯಾಧಿಗಳನ್ನು ತಡೆಗಟ್ಟಬಲ್ಲ ಲಸಿಕೆಯನ್ನು ಪಡೆದುಕೊಳ್ಳುವುದು ಅತ್ಯಂತ ಉಪಯುಕ್ತವೆನಿಸುವುದು. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೦-೦೪-೨೦೦೬ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 


Tuesday, December 3, 2013

Article no-100. niddegedisuva nimirudourbalya (Erectile dysfunction)

                             ನಿದ್ದೆಗೆಡಿಸುವ ನಿಮಿರು ದೌರ್ಬಲ್ಯ 

     ಹದಿಹರೆಯದಿಂದ ಪ್ರಾರಂಭಿಸಿ ಇಳಿವಯಸ್ಸಿನ ತನಕ ಯಾವುದೇ ವಯಸ್ಸಿನಲ್ಲೂ ಪ್ರತ್ಯಕ್ಷವಾಗಬಲ್ಲ "ನಿಮಿರು ದೌರ್ಬಲ್ಯ" ಅರ್ಥಾತ್ ನಪುಂಸಕತ್ವವು, ಲಕ್ಷಾಂತರ ಪುರುಷರ ನಿದ್ದೆಗೆಡಿಸುತ್ತಿರುವುದು ಸತ್ಯ. ಆದರೆ ಈ ಸಮಸ್ಯೆಯಿಂದ ಬಳಲುತ್ತಿರುವ ಶೇ. ೧೦ ಮಂದಿ ಮಾತ್ರ ತಜ್ಞವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆಯುವುದು ಕೂಡಾ ಅಷ್ಟೇ ಸತ್ಯ. 
---------              --------         -----------               ------------             -----------       --------------             -----------            ------

  ಜನ್ಮದತ್ತವಾಗಿ ಮನುಷ್ಯನಲ್ಲಿರುವ ಅತ್ಯಂತ ಪ್ರಬಲವಾದ "ಬದುಕಿ ಉಳಿಯುವ ಇಚ್ಛೆ" ಯ ನಂತರದ ಸ್ಥಾನವು "ಕಾಮೇಚ್ಛೆ" ಗೆ ಸಲ್ಲುತ್ತದೆ ಎಂದಲ್ಲಿ ನೀವು ನಂಬಲಾರಿರಿ. ಈ ತೆರನ ಪ್ರಕೃತಿ ಸಹಜ ಹಾಗೂ ಪ್ರಬಲ ಇಚ್ಛೆಯೊಂದನ್ನು ಈಡೇರಿಸಲು ತೊಡಕಾಗಬಲ್ಲ ನಿಮಿರು ದೌರ್ಬಲ್ಯ ಅಥವಾ ನಪುಂಸಕತ್ವವು ಸಹಸ್ರಾರು ಪುರುಷರ ನಿದ್ದೆಗೆಡಿಸಲು ಕಾರಣವೆನಿಸಿದೆ. ವಿಶ್ವದ ಶೇ. ೧೦ ರಿಂದ ೧೫ ರಷ್ಟು ಪುರುಷರಲ್ಲಿ ಕಂಡುಬರುವ ಈ ಸಮಸ್ಯೆಯ ಬಗ್ಗೆ ನಿಮಗೊಂದಿಷ್ಟು ನೈಜ ಮಾಹಿತಿಯನ್ನು ನೀಡುವ ಪ್ರಯತ್ನವಿದು. 

ನಿಮಿರು ದೌರ್ಬಲ್ಯ ಎಂದರೇನು?

ಸ್ವಾಭಾವಿಕವಾಗಿ ರತಿಸುಖವನ್ನು ಸವಿಯಲು ಅವಶ್ಯಕವಾದ ಪುರುಷನ ಶಿಶ್ನದ ನಿಮಿರುವಿಕೆಯಿಂದ ಆರಂಭಿಸಿ, ಯಶಸ್ವಿಯಾಗಿ ಸಂಭೋಗ ಕ್ರಿಯೆಯನ್ನು ನಡೆಸಿದ ಬಳಿಕ ವೀರ್ಯ ಸ್ಖಲನವಾಗುವವರೆಗೆ, ಪ್ರತಿಯೊಂದು ಹಂತದಲ್ಲೂ ಶಿಶ್ನದ ಗಡಸುತನವನ್ನು ಕಾಪಾಡಿಕೊಳ್ಳಲಾಗದ ಹಾಗೂ ಸಂಭೋಗ ನಡೆಸಲು ಅಸಾಧ್ಯವಾದ ಸ್ಥಿತಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ನಪುಂಸಕತ್ವ ಅಥವಾ ನಿಮಿರು ದೌರ್ಬಲ್ಯ ಎಂದು ಕರೆಯುತ್ತಾರೆ. 

ಆರೋಗ್ಯವಂತ ಪುರುಷರಲ್ಲಿ ಶಿಶ್ನದ ನಿಮಿರುವಿಕೆಯು ಒಂದು ಸಂಕೀರ್ಣ ಶಾರೀರಿಕ ಪ್ರಕ್ರಿಯೆಯಾಗಿದ್ದು, ಇದಕ್ಕೆ ಅವಶ್ಯವಾದ ಪ್ರಚೋದನೆಯ ಕೇಂದ್ರಸ್ಥಾನವು ಮೆದುಳಿನಲ್ಲಿದೆ. ಅಂದರೆ ಮೆದುಳಿನಲ್ಲಿ ಉದ್ಭವಿಸುವ ಕಾಮೋತ್ತೇಜಕ ಪ್ರಚೋದನೆಗಳು ಸಂಬಂಧಿತ ನರಗಳ ಮೂಲಕ ಶಿಶ್ನಹಾಗೂ ಅದರಲ್ಲಿರುವ ರಕ್ತನಾಳಗಳಿಗೆ ರವಾನಿಸಲ್ಪಡುತ್ತದೆ. ತತ್ಪರಿಣಾಮವಾಗಿ ಆರೋಗ್ಯವಂತ ಪುರುಷರ ಶಿಶ್ನದಲ್ಲಿನ ನರಗಳು ಹಾಗೂ ಜೀವಕಣಗಳು ಬಿಡುಗಡೆಮಾಡುವ ನೈಟ್ರಿಕ್ ಆಕ್ಸೈಡ್, ಕೆಲವೊಂದು ಚೋದನಿಗಳನ್ನು ಸಕ್ರಿಯಗೊಳಿಸುತ್ತದೆ. ಇದರಿಂದಾಗಿ ಸೈಕ್ಲಿಕ್ ಗಾನೋಸಿನ್ ಮೊನೋಫೋಸ್ಫೆಟ್ ಗಳ ಉತ್ಪಾದನೆ ಹೆಚ್ಚುತ್ತದೆ. ಇದು ಶಿಶ್ನದಲ್ಲಿನರಕ್ತನಾಳಗಳ ಸುತ್ತಲಿನ ಟಿಶ್ಯೂ ಗಳನ್ನು ಸಡಿಲಗೊಳಿಸುವುದು. ಪರಿಣಾಮವಾಗಿ ಶಿಶ್ನದಲ್ಲಿನ ರಕ್ತನಾಳಗಳು ವಿಕಸಿತಗೊಂಡು, ಇವುಗಳಲ್ಲಿ ಒಂದಿಷ್ಟು ಅಧಿಕ ಪ್ರಮಾಣದ ರಕ್ತವು ತುಂಬಿಕೊಳ್ಳುವುದರಿಂದ ಶಿಶ್ನವು ನಿಮಿರುವುದು. ಪಿ ಡಿ ಇ -೫ ಎನ್ನುವ ಚೋದನಿಯು ಸಿ ಜಿ ಎಂ ಪಿ ಯನ್ನು ಪಚನಗೊಳಿಸುತ್ತದೆ. ಈ ಪ್ರಕ್ರಿಯೆಯು ತ್ವರಿತಗತಿಯಲ್ಲಿ ನಡೆದಾಗ ಶಿಶ್ನದ ನಿಮಿರುವಿಕೆಯು ಕ್ಷಿಪ್ರಗತಿಯಲ್ಲಿ ಕುಂಠಿತವಾಗುತ್ತದೆ. ಈ ವಿಶಿಷ್ಟವಾದ ಪ್ರಕ್ರಿಯೆಗಳಲ್ಲಿನ ಯಾವುದೇ ಹಂತದಲ್ಲಿ ಕಾರಣಾಂತರಗಳಿಂದ ಉದ್ಭವಿಸಬಹುದಾದ ಅಡಚಣೆಗಳಿಂದಾಗಿ ನಿಮಿರು ದೌರ್ಬಲ್ಯ ಸಂಭವಿಸುತ್ತದೆ. 

ನಿಜ ಹೇಳಬೇಕಿದ್ದಲ್ಲಿ ಪುರುಷರನ್ನು ಬಾಧಿಸುವ ನಿಮಿರು ದೌರ್ಬಲ್ಯ ಅಥವಾ ನಪುಂಸಕತೆಯು ಖಂಡಿತವಾಗಿಯೂ ನೀವು ಕಲ್ಪಿಸಿಕೊಂಡಷ್ಟು ಅಥವಾ ನಕಲಿ ವೈದ್ಯರು ಚಿತ್ರಿಸುವಷ್ಟು ಭಯಾನಕವಲ್ಲ. ಅಂತೆಯೇ ಇದು ಗುಣಪಡಿಸಲು ಅಸಾಧ್ಯವೆನಿಸುವ ಸಮಸ್ಯೆಯೂ ಅಲ್ಲ. ಬಹುಶಃ ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ ಒಂದು ಬಾರಿಯಾದರೂ "ತಾತ್ಕಾಲಿಕ ನಿಮಿರು ದೌರ್ಬಲ್ಯ" ದ ಅನುಭವ ಆಗದಿರುವ ಪುರುಷರು ಈ ಜಗತ್ತಿನಲ್ಲೇ ಇರಲಾರರು. ಆದರೆ ಈ ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧರಿರುವ ಪುರುಷರು ಮಾತ್ರ ಖಂಡಿತವಾಗಿಯೂ ಸಿಗಲಾರರು!. 

ನಪುಂಸಕತೆಯ ವೈವಿಧ್ಯಗಳು 

ನಪುಂಸಕತೆಯನ್ನು ಸ್ಥೂಲವಾಗಿ ಎರಡು ವಿಧಗಳಾಗಿ ವಿಂಗಡಿಸಬಹುದು. ಇವುಗಳಲ್ಲಿ ಮೊದಲನೆಯದಾಗಿರುವ ಪ್ರಾಥಮಿಕ ನಪುಂಸಕತೆಯು ಜನ್ಮದತ್ತವಾಗಿ ಬರುವುದಲ್ಲದೇ, ಶಾಪದಂತೆ ಶಾಶ್ವತವಾಗಿ ಕಾಡುವುದು. ದ್ವಿತೀಯ ವಿಧದ ನಪುಂಸಕತ್ವವು ಕೆಲವಾರು ವರ್ಷಗಳ ಅಥವಾ ತಿಂಗಳುಗಳ ಕಾಲ ಸ್ವಾಭಾವಿಕ ಸುರತಸುಖವನ್ನು ಅನುಭವಿಸಿದ ಬಳಿಕ ಆಕಸ್ಮಿಕವಾಗಿ ಅಥವಾ ನಿಧಾನವಾಗಿ ಪ್ರತ್ಯಕ್ಷವಾಗುವುದು. ಕೆಲವೊಮ್ಮೆ ಈ ಸಮಸ್ಯೆಯು ಯಾವುದಾದರೂ ವ್ಯಾಧಿಯ ಲಕ್ಷಣವೂ ಆಗಿರುವ ಸಾಧ್ಯತೆಗಳಿವೆ. 

ಅನೇಕ ಜನರಲ್ಲಿ ಮಧ್ಯವಯಸ್ಸಿನ ಬಳಿಕ ಅವರ ಆರೋಗ್ಯದ ಮತ್ತು ಶಾರೀರಿಕ ಕ್ಷಮತೆಯ ಮಟ್ಟ ಮತ್ತು ಅವರಲ್ಲಿರಬಹುದಾದ ದುಶ್ಚಟಗಳಿಗೆ ಅನುಗುಣವಾಗಿ ನಿಮಿರು ದೌರ್ಬಲ್ಯ ಬಾಧಿಸುವುದು ಸ್ವಾಭಾವಿಕವೂ ಹೌದು. ಸಾಮಾನ್ಯವಾಗಿ ೬೦ ವರ್ಷ ಮೀರಿದ ಪುರುಷರನ್ನು ಪೀಡಿಸುವ ನಿಮಿರು ದೌರ್ಬಲ್ಯದ ಪ್ರಮಾಣವು, ೪೦ ವರ್ಷ ಮೀರಿದವರಿಗಿಂತ ನಾಲ್ಕು ಪಟ್ಟು ಹೆಚ್ಚಿರುತ್ತದೆ. ಅಂತೆಯೇ ಈ ಸಮಸ್ಯೆಯ ಸಾಧ್ಯತೆಗಳು ಮತ್ತು ಪ್ರಮಾಣಗಳೂ ಹೆಚ್ಚುತ್ತಾ ಹೋಗುತ್ತವೆ. 

ಈ ಸಮಸ್ಯೆಗೆ ಕಾರಣಗಳೇನು?

ನಿಮಿರು ದೌರ್ಬಲ್ಯಕ್ಕೆ ಕಾರಣವೆನಿಸಬಲ್ಲ ಪ್ರಮುಖ ತೊಂದರೆಗಳನ್ನು ಈ ಕೆಳಗಿನಂತೆ ವಿಂಗಡಿಸಬಹುದು. 
೧. ಪುರುಷರ ಶಿಶ್ನಕ್ಕೆ ಶುದ್ಧ ರಕ್ತವನ್ನು ಪೂರೈಸುವ ರಕ್ತನಾಳಗಳಲ್ಲಿನ ತೊಂದರೆಗಳಿಂದಾಗಿ ಶಿಶ್ನದ ನಿಮಿರುವಿಕೆಗೆ ಅವಶ್ಯಕವೆನಿಸುವಷ್ಟು ಶುದ್ಧ ರಕ್ತದ ಪೂರೈಕೆ ಆಗದಿರುವುದು. 

 ೨.ಶಿಶ್ನದಿಂದ ಅಶುದ್ಧ ರಕ್ತವನ್ನು ಕೊಂಡೊಯ್ಯುವ ರಕ್ತನಾಳಗಳಲ್ಲಿನ ಸೋರುವಿಕೆಯಿಂದಾಗಿ, ಶಿಶ್ನದ ನಿಮಿರುವಿಕೆಯನ್ನು ಕಾಪಾಡಿಕೊಳ್ಳುವಷ್ಟು ಪ್ರಮಾಣದ ರಕ್ತ ಶಿಶ್ನದಲ್ಲಿ ಉಳಿದುಕೊಳ್ಳದಿರುವುದು. ೩. ನರಮಂಡಲದ ಸಮಸ್ಯೆಗಳು ೪. ಶರೀರದಲ್ಲಿ ಅವಶ್ಯಕ ಚೋದನಿಗಳ ಕೊರತೆ ೫. ಮಾನಸಿಕ ಕಾರಣಗಳು. ಈ ಐದು ಕಾರಣಗಳಲ್ಲಿ ಯಾವುದಾದರೂ ಒಂದು ಅಥವಾ ಅದಕ್ಕೂ ಹೆಚ್ಚು ಕಾರಣಗಳ ಸಂಯುಕ್ತ ಪರಿಣಾಮಗಳು ಪುರುಷರ ನಿಮಿರು ದೌರ್ಬಲ್ಯಕ್ಕೆ ಕಾರಣವೆನಿಸಬಹುದು. 

ಪುರುಷರ ಲಿಂಗ ನಿರ್ಧಾರಕ ವರ್ಣತಂತುವಿನ ಪುಟ್ಟ ತುಣುಕೊಂದು ನಷ್ಟವಾದಲ್ಲಿ ಜನ್ಮದತ್ತವಾದ ತೀವ್ರ ನಪುಂಸಕತೆ ಉದ್ಭವಿಸಬಹುದು. ಅತಿಯಾದ ಧೂಮಪಾನ, ಮದ್ಯಪಾನಗಳ ದೀರ್ಘಕಾಲೀನ ದುಷ್ಪರಿಣಾಮದ ಫಲವಾಗಿ ಅನೇಕ ಮಧ್ಯವಯಸ್ಸಿನ ಪುರುಷರು ನಿಮಿರು ದೌರ್ಬಲ್ಯದಿಂದ ಬಳಲುತ್ತಾರೆ. 

ಇತ್ತೀಚಿನ ಸಂಶೋಧನೆಗಳಿಂದ ತಿಳಿದುಬಂದಂತೆ ನಮ್ಮ ಪರಿಸರದಲ್ಲಿರುವ ಮಾನವ ನಿರ್ಮಿತವಾದ ೬೦ ಸಹಸ್ರಕ್ಕೂ ಹೆಚ್ಚು ವಿಧದ ರಾಸಾಯನಿಕ ದ್ರವ್ಯಗಳಿಂದಾಗಿಮನುಷ್ಯನಲ್ಲಿ ಮತ್ತು ಕಾಡು ಪ್ರಾಣಿಗಳಲ್ಲೂ ನಪುಂಸಕತೆ ಕಂಡು ಬರುತ್ತಿದೆ. ಮಾತ್ರವಲ್ಲ ಈ ವಿಷಕಾರಕವೆಂದು ಕರೆಯಬಹುದಾದ ರಾಸಾಯನಿಕಗಳ ದುಷ್ಪರಿಣಾಮದಿಂದಾಗಿ ಜಗತ್ತಿನ ಅನೇಕ ದೇಶಗಳ ಪುರುಷರ ವೀರ್ಯದಲ್ಲಿರುವ ವೀರ್ಯಾಣುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ೧೯೯೨ ರಲ್ಲೇ ವಾತಾವರಣದಲ್ಲಿರುವ ರಾಸಾಯನಿಕಗಳು ಮಾನವನ ಸಂತಾನೋತ್ಪತ್ತಿಗೆ ಆಪತ್ಕಾರಿಯಾಗಿ ಪರಿಣಮಿಸಲಿವೆ ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದರು. 

ಅತ್ಯಲ್ಪ ಪ್ರಮಾಣದ ಪುರುಷರಲ್ಲಿ ಕಾಮೇಚ್ಛೆಯ  ಕೊರತೆ, ಸುರತಕ್ರಿಯೆಯ ಬಗ್ಗೆ ನಿರಾಸಕ್ತಿ, ಸ್ತ್ರೀಯರ ಶರೀರದ ಬಗ್ಗೆ ಅಸಹ್ಯಕರ ಭಾವನೆಗಳು ಮತ್ತು ಜಿಗುಪ್ಸೆ, ಸಲಿಂಗ ಕಾಮದ ಬಗ್ಗೆ ಅತ್ಯಾಸಕ್ತಿಯೂ, ಸ್ತ್ರೀ ಸಂಗದ ಸಂದರ್ಭದಲ್ಲಿ ಈ ಸಮಸ್ಯೆಗೆ ಕಾರಣವೆನಿಸಬಲ್ಲದು. ಅಂತೆಯೇ ಅತಿ ಆಯಾಸ, ತೀವ್ರ ಮಾನಸಿಕ ಒತ್ತಡ, ಅತಿಯಾದ ಭಯ ಮತ್ತು ಆತಂಕ, ಪತಿ- ಪತ್ನಿಯರ (ಗೆಳೆಯ- ಗೆಳತಿಯರ) ಸಂಬಂಧಗಳಲ್ಲಿ ಕಾರಣಾಂತರಗಳಿಂದ ಉದ್ಭವಿಸಬಲ್ಲ ಸಮಸ್ಯೆಗಳು, ವೈವಿಧ್ಯವನ್ನು ಬಯಸುವ ಪುರುಷರಿಗೆ ಒಬ್ಬಳೇ ಸಂಗಾತಿಯ ಅಂಗಸಂಗದಿಂದ ಉಂಟಾಗುವ ಏಕತಾನತೆ, ಸಂಗಾತಿಯ ಅಸಹಕಾರಗಳೂ ಈ ಸಮಸ್ಯೆಯನ್ನು ಹುಟ್ಟುಹಾಕುವ ಸಾಧ್ಯತೆಗಳಿವೆ. ಇದಲ್ಲದೆ ಅನಿಯಂತ್ರಿತ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಪಕ್ಷವಾತ, ಪಾರ್ಕಿನ್ಸನ್ಸ್,ಅಲ್ಜೈಮರ್ಸ್, ಅಪಸ್ಮಾರಗಲಂತಹ ಕಾಯಿಲೆಗಳು, ಅತಿಯಾದ ಕೊಲೆಸ್ಟರಾಲ್, ಟೆಸ್ಟೋಸ್ಟೆರಾನ್ ಹಾರ್ಮೋನ್ ನ ಕೊರತೆ, ಪ್ರಜನಾನಂಗ ಮತ್ತು ಸೊಂಟದ ಮಾಂಸಪೇಶಿಗಳಿಗೆಸಂಭವಿಸಿದ ಆಘಾತಗಳು, ಪ್ರಾಸ್ಟೇಟ್ ಗ್ರಂಥಿಯ ತೊಂದರೆಗಳು, ಶಾಶ್ವತ ಪರಿಹಾರವಿಲ್ಲದ ಮಧುಮೇಹ, ಅಧಿಕ ರಕ್ತದೊತ್ತಡಗಳಂತಹ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇರಿಸಲು ಸೇವಿಸಲೇ ಬೇಕಾದ ಔಷದಗಳ ದೀರ್ಘಕಾಲೀನ ಸೇವನೆಯ ಅಡ್ಡ ಪರಿಣಾಮಗಳು ಹಾಗೂ ಮಾದಕ ದ್ರವ್ಯಗಳ ಸೇವನೆಯೂ ನಿಮಿರು ದೌರ್ಬಲ್ಯಕ್ಕೆ ಕಾರಣವೆನಿಸಬಹುದು. 

ತೀವ್ರ ಮಾನಸಿಕ ಒತ್ತಡ, ಖಿನ್ನತೆ, ಉದ್ವೇಗ, ಸಿಜೋಫ್ರೆನಿಯಾಗಳಂತಹ ಗಂಭೀರ ಮಾನಸಿಕ ವ್ಯಾಧಿಗಳು, ರತಿಕ್ರೀಡೆಯ ಸಂದರ್ಭದಲ್ಲಿ ಅನಪೇಕ್ಷಿತವಾಗಿ ಉದ್ಭವಿಸಬಲ್ಲ ಅಡಚಣೆಗಳು, ಸಂಭೋಗದ ಸಮಯದಲ್ಲಿ ತೀವ್ರ ನೋವು ಮತ್ತು ಉರಿ ಇತ್ಯಾದಿ ಕಾರಣಗಳೂ ನಪುಂಸಕತೆ ಅಥವಾ ನಿಮಿರು ದೌರ್ಬಲ್ಯಕ್ಕೆ ಮೂಲವೆನಿಸಬಹುದು. 

ಚಿಕಿತ್ಸೆ- ಎಂತು- ಏನು?

ವಿಭಿನ್ನ ವ್ಯಕ್ತಿಗಳಲ್ಲಿ ವಿಭಿನ್ನ ಕಾರಣಗಳಿಂದ ಉದ್ಭವಿಸುವ ನಿಮಿರುದೌರ್ಬಲ್ಯಕ್ಕೆ ಅತ್ಯಾಧುನಿಕ ಚಿಕಿತ್ಸೆ ಲಭ್ಯವಿದೆ. ಇವುಗಳಲ್ಲಿ ಕೆಲವಿಧದ ಇಂಜೆಕ್ಷನ್ ಗಳು, ವಯಾಗ್ರಾದಂತಹ ಮಾತ್ರೆಗಳು, ಶಿಶ್ನದಲ್ಲಿ ತುಂಬುವ ರಕ್ತದ ಪ್ರಮಾಣವನ್ನು ಹೆಚ್ಚಿಸುವ ಚಿಕಿತ್ಸೆ, ಶಿಶ್ನಕ್ಕೆ ನೀಡುವ ಇಂಜೆಕ್ಷನ್, ಶಿಶ್ನಕ್ಕೆ ಲೆಪಿಸಬೇಕಾದ ಮುಲಾಮುಗಳು- ಸ್ಪ್ರೇ ಗಳನ್ನು ನಿಮಿರುದೌರ್ಬಲ್ಯದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ನಿರ್ದಿಷ್ಟ ಕಾರಣವಿದ್ದು, ಅವಶ್ಯಕತೆಯಿದ್ದಲ್ಲಿ ಕೆಲವ್ಯಕ್ತಿಗಳಲ್ಲಿ ಶಸ್ತ್ರಚಿಕಿತ್ಸೆ ಅನಿವಾರ್ಯವೆನಿಸಬಹುದು. 

ಆದರೆ ನಕಲಿವೈದ್ಯರು ನೀಡುವ ಸಹಸ್ರಾರು ರೂಪಾಯಿ ಬೆಲೆಯ ಹಾಗೂ ಅಡ್ಡ ಪರಿನಾಮಗಲಿಲ್ಲದ ಮತ್ತು ಗಿಡಮೂಲಿಕೆಗಳಿಂದ ಸಿದ್ಧಪದಿಸಿರುವುದೆಂದು ಹೇಳಲಾಗುವ 'ಲೈಂಗಿಕ ಶಕ್ತಿವರ್ಧಕ' ಔಷದಗಳ ಸೇವನೆಯಿಂದ ನಿಮ್ಮ ಸಮಸ್ಯೆ ಪರಿಹಾರವಾಗದಿದ್ದರೂ, ನಿಮ್ಮ ಹಣದ ಥೈಲಿ ಹಗುರವಾಗುವುದರಲ್ಲಿ ಸಂದೇಹವಿಲ್ಲ!. 

ಜನ್ಮದತ್ತವಾಗಿ ಬಂದಿರುವ ಪ್ರಾಥಮಿಕ ನಪುಂಸಕತೆಯನ್ನು ಯಾವುದೇ ಚಿಕಿತ್ಸೆಯಿಂದ ಗುಣಪಡಿಸುವುದು ಅಸಾಧ್ಯ. ದ್ವಿತೀಯ ವಿಧದ ನಪುಂಸಕತೆಯಲ್ಲಿ ಆಯಾ ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಸ್ಥಿತಿಗತಿಗಳು, ಶಾರೀರಿಕ ಕ್ಷಮತೆಯ ಮಟ್, ಆತನಲ್ಲಿ ಇರಬಹುದಾದ ದುಶ್ಚಟಗಳು ಮತ್ತು ಇತರ ಗಂಭೀರ ಕಾಯಿಲೆಗಳ ತೀವ್ರತೆಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಬೇಕಾಗುವುದು. ಮಾನಸಿಕ ಸಮಸ್ಯೆಗಳಿದ್ದಲ್ಲಿ ಮಾನಸಿಕ ತಜ್ಞರಿಂದ ಚಿಕಿತ್ಸೆ ಮತ್ತು ಆಪ್ತ ಸಂವಾದಗಳೂ ಅನಿವಾರ್ಯವೆನಿಸಬಹುದು. ಅಂತಿಮವಾಗಿ ವಿವಾಹಿತರಲ್ಲಿ ಪತ್ನಿಯ ಹೃತ್ಪೂರ್ವಕ ಸಹಕಾರವೂ ಚಿಕಿತ್ಸೆ ಫಲಪ್ರದವೆನಿಸಲು ಅತ್ಯವಶ್ಯಕ ಎನಿಸುವುದು. 

ಆರೋಗ್ಯವಂತರನ್ನೂಕಾಡಬಲ್ಲ ಈ ವಿಶಿಷ್ಟ ಸಮಸ್ಯೆ ನಿಮ್ಮಲ್ಲೂ ಕಂಡುಬಂದಲ್ಲಿ ಅನಾವಶ್ಯಕವಾಗಿ ತಲೆಕೆಡಿಸಿಕೊಳ್ಳದೆ ತಜ್ಞವೈದ್ಯರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆದುಕೊಳ್ಳಿರಿ. ಯಾವುದೇ ಕಾರಣಕ್ಕೂ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡುವ ನಕಲಿ ಲೈಂಗಿಕ ತಜ್ಞರ ಜಾಲಕ್ಕೆ ಸಿಲುಕದಿರಿ. 

ನಿಮಗಿದು ತಿಳಿದಿರಲಿ

ಜಗತ್ತಿನ ಅನೇಕ ಪುರುಷರ ಗಮನ ಸೆಳೆದಿದ್ದ "ವಯಾಗ್ರ" ಗುಳಿಗೆಗಳು ಅತ್ಯಂತ ಪರಿಣಾಮಕಾರಿಯಾಗಿದ್ದರೂ, ಇದನ್ನು ಸುರತಕ್ರಿಯೆಯ ನಾಲ್ಕು ಗಂಟೆ ಮೊದಲೇ ಸೇವಿಸಬೇಕಾಗುವುದು. ಅದೇ ರೀತಿಯಲ್ಲಿ ಅಲ್ಪಾವಧಿಯಲ್ಲೇ ಇದರ ಪರಿಣಾಮವೂ ಅಂತ್ಯಗೊಳ್ಳುವುದು. ಆದರೆ ತದನಂತರ ಬಿಡುಗಡೆಯಾಗಿದ್ದ "ಸಿಯಾಲಿಸ್" ಎನ್ನುವ ಔಷದವನ್ನು ಸೇವಿಸಿದ ೧೬ ನಿಮಿಷಗಳಲ್ಲೇ ಶೇ. ೮೮ ಜನರಲ್ಲಿ ಉತ್ತಮ ಪರಿಣಾಮ ಕಂಡುಬಂದಿತ್ತು. ಈ ಔಷದವು ಸುಮಾರು ೩೬ ಗಂಟೆಗಳ ತನಕ ತನ್ನ ಪರಿಣಾಮವನ್ನು ತೋರಿತ್ತು. ಆದರೆ ಈ ಔಷದದ ೧೦ ಮಿಲಿಗ್ರಾಂ ಮಾತ್ರೆಯೊಂದಕ್ಕೆ ಕೇವಲ ೧೩,೦೦೦ ರೂ. ಬೆಲೆಯೂ ಇತ್ತು. 

ವಾರ್ಡೆನಾಫಿಲ್ಎನ್ನುವ ಮತ್ತೊಂದು ನೂತನ ಔಷದದ ಪರೀಕ್ಷಾರ್ಥ ಪ್ರಯೋಗದಲ್ಲಿ ಶೇ. ೮೫ ಪುರುಷರಲ್ಲಿ ಅತ್ಯುತ್ತಮ ಫಲಿತಾಂಶ ಕಂಡುಬಂದಿತ್ತು. ವಿಶೇಷವೆಂದರೆ ಇದರೊಂದಿಗೆ ಔಷದರಹಿತ ಪ್ಲಾಸಿಬೋ ಸೇವಿಸಿದ ಮತ್ತೊಂದು ಗುಂಪಿನ ಪುರುಷರಲ್ಲಿ ಶೇ. ೨೮ ಜನರಲ್ಲಿ ಅದ್ಭುತ ಪರಿಣಾಮ ದೊರೆತಿತ್ತು. ಅರ್ಥಾತ್ ಇವರಲ್ಲಿ ಕಂಡುಬಂದಿದ್ದ ನಿಮಿರುದೌರ್ಬಲ್ಯಕ್ಕೆ ಮಾನಸಿಕ ಕಾರಣಗಳೇ ಮೂಲವಾಗಿದ್ದವು. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೩೦- ೦೯- ೨೦೦೪ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ .



Sunday, December 1, 2013

Solid waste management


      ತ್ಯಾಜ್ಯ ಸಂಗ್ರಹ- ವಿಲೇವಾರಿಯ ವೈಫಲ್ಯ: ಸ್ಥಳೀಯ ಸಂಸ್ಥೆಗಳ ವಿರುದ್ಧ ದಾವೆ 

  ಭಾರತದ ಪ್ರತಿಯೊಂದು ತಾಜ್ಯಗಳ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ದೈನಂದಿನ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗಳ ಸಮಸ್ಯೆ ದಿನೇದಿನೇ ಉಲ್ಬಣಿಸುತ್ತಿದೆ. ಏಕೆಂದರೆ ನಿರಂತರವಾಗಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ, ನಾವಿಂದು ಅನಾವಶ್ಯಕವಾಗಿ ಉತ್ಪಾದಿಸುತ್ತಿರುವ ವೈವಿಧ್ಯಮಯ ತ್ಯಾಜ್ಯಗಳ ಪ್ರಮಾಣ ಮಿತಿಮೀರಿದೆ. ಇದರೊಂದಿಗೆ ತ್ಯಾಜ್ಯಗಳು ಉತ್ಪನ್ನವಾಗುವ ಮೂಲಗಳಿಂದಲೇ ಇವುಗಳನ್ನು ಪ್ರತ್ಯೇಕಿಸಿ ಸಂಗ್ರಹಿಸುವ ಅಥವಾ ಸಂಗ್ರಹಿಸಿದ ಬಳಿಕ ಪ್ರತ್ಯೇಕಿಸಿ ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡುವ ವ್ಯವಸ್ಥೆಯ ವೈಫಲ್ಯದಿಂದಾಗಿ, ಕಣ್ಣು ಹಾಯಿಸಿದಲ್ಲೆಲ್ಲಾ ತ್ಯಾಜ್ಯಗಳ ರಾಶಿಗಳು ರಾರಾಜಿಸುತ್ತಿವೆ!. 

ಇಷ್ಟೆಲ್ಲಾ ಸಾಲದೆನ್ನುವಂತೆ ಕಂಡಲ್ಲಿ ಕಸವನ್ನು ಎಸೆಯುವ ಜನರ ಕೆಟ್ಟ ಹವ್ಯಾಸ ಅನಿಯಂತ್ರಿತವಾಗಿ ವ್ರುದ್ಧಿಸುತ್ತಿರುವುದು, ತ್ಯಾಜ್ಯಗಳ ಮತ್ತು ಪರಿಸರ ಪ್ರದೂಷಣೆಗಳ ಪ್ರಮಾಣ ಇನ್ನಷ್ಟು ಹೆಚ್ಚಲು ಪ್ರಮುಖ ಕಾರಣವೆನಿಸಿದೆ. ಇದಲ್ಲದೇ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳೊಂದಿಗೆ ಸಹಕರಿಸದ ನಾಗರಿಕರಿಂದಾಗಿ, ದೇಶದ ಸರ್ವೋಚ್ಚ ನ್ಯಾಯಾಲಯದ ಆದೇಶವೇ ಅನುಷ್ಠಾನಗೊಳ್ಳದೆ ಇರಲು ಕಾರಣವೆನಿಸಿದೆ. 

ವ್ಯವಸ್ಥೆಯ ವೈಫಲ್ಯ 

ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ತ್ಯಾಜ್ಯಗಳು ಉತ್ಪನ್ನವಾಗುವ ವಸತಿ- ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯಗಳನ್ನು ಸಂಗ್ರಹಿಸಬೇಕಿದೆ. ಈ ತ್ಯಾಜ್ಯಗಳನ್ನು ಪ್ರತ್ಯೆಕಿಸಬೇಕಾದ ಹೊಣೆಗಾರಿಕೆಯು ಈ ಕಟ್ಟಡಗಳ ನಿವಾಸಿಗಳದ್ದೇಆಗಿದೆ. ತಾವು ಉತ್ಪಾದಿಸಿದ ಜೈವಿಕ, ಪುನರ್ ಆವರ್ತನಗೊಳಿಸಬಲ್ಲ ಮತ್ತು ಪುನರ್ ಆವರ್ತನಗೊಳಿಸಲಾಗದ ತ್ಯಾಜ್ಯಗಳನ್ನು ವಿಂಗಡಿಸಿ ನೀಡಲು ಸಿದ್ಧರಿಲ್ಲದ ಅನೇಕ ನಾಗರಿಕರಿಂದಾಗಿ, ಸಮಗ್ರ ವ್ಯವಸ್ಥೆಯೇ ನಿಗದಿತ ಉದ್ದೇಶವನ್ನು ಈಡೇರಿಸಲು ದಯನೀಯವಾಗಿ ವಿಫಲವೆನಿಸಿದೆ. ಏಕೆಂದರೆ ಸಹಸ್ರಾರು ವಸತಿ- ವಾಣಿಜ್ಯ ಕಟ್ಟಡಗಳಿಂದ ಪ್ರತ್ಯೆಕಿಸದೇ ಸಂಗ್ರಹಿಸಿದ ತ್ಯಾಜ್ಯಗಳನ್ನು ಇದಕ್ಕಾಗಿ ನಿಯೋಜಿತ ಸಿಬಂದಿಗಳು ಅಥವಾ ಪೌರ ಕಾರ್ಮಿಕರು ವಿಂಗಡಿಸುವುದು ಅಕ್ಷರಶಃ ಅಸಾಧ್ಯವೂ ಹೌದು. ಆದರೆ ಪ್ರತ್ಯೇಕಿಸಿ ನೀಡಿದ ಜೈವಿಕ ತ್ಯಾಜ್ಯಗಳನ್ನು ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ, ಪುನರ್ ಆವರ್ತನಗೊಳಿಸಬಹುದಾದ ತ್ಯಾಜ್ಯಗಳನ್ನು ತತ್ಸಂಬಂಧಿತ ಘಟಕಗಳಿಗೆ ರವಾನಿಸುವುದು ಮತ್ತು ಪುನರ್ ಆವರ್ತಿಸಲಾಗದ ತ್ಯಾಜ್ಯಗಳನ್ನು ತ್ಯಾಜ್ಯ ವಿಲೇವಾರಿ ಘಟಕದಲ್ಲಿನ "ಲ್ಯಾಂಡ್ ಫಿಲ್ ಸೈಟ್" ನಲ್ಲಿ ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡುವುದು ಸುಲಭಸಾಧ್ಯವೂ ಹೌದು. 

ಆದರೆ "ಎರಡು ಕೈಗಳು ಸೇರದೆ ಚಪ್ಪಾಳೆ ಆಗದು" ಎನ್ನುವ ಮಾತಿನಂತೆ, ಸ್ಥಳೀಯ ನಾಗರಿಕರು ಸ್ಥಳೀಯ ಸಂಸ್ಥೆಗಳ ಸಿಬಂದಿಗಳೊಂದಿಗೆ ಸಹಕರಿಸಿ ಕೈಜೋಡಿಸಿದಲ್ಲಿ, ರಾಜ್ಯದ ಪ್ರತಿಯೊಂದು ಹಳ್ಳಿ, ಪಟ್ಟಣ, ನಗರ ಮತ್ತು ಮಹಾನಗರಗಳು "ನಿರ್ಮಲ ಗ್ರಾಮ"ಗಳಾಗಿ ಪರಿವರ್ತನೆಗೊಳ್ಳುವುದರಲ್ಲಿ ಸಂದೇಹವಿಲ್ಲ. ವಿಶೇಷವೆಂದರೆ ತಮ್ಮ ವಸತಿ- ವಾಣಿಜ್ಯ ಕಟ್ಟಡಗಳು ಮತ್ತು ಆವರಣಗಳನ್ನು ಚೊಕ್ಕಟವಾಗಿ ಇರಿಸಿಕೊಳ್ಳುವ ನಾಗರಿಕರು, ತಮ್ಮ ಬೀದಿ, ತಮ್ಮ ಬಡಾವಣೆ ಮತ್ತು ತಮ್ಮ ಊರಿನ ಸ್ವಚ್ಚತೆ ಹಾಗೂ ನೈರ್ಮಲ್ಯಗಳ ಬಗ್ಗೆ ಕಿಂಚಿತ್ ಕಾಳಜಿಯನ್ನೂ ತೋರುವುದಿಲ್ಲ!. ಹಾಗೂ ಇದೇ ಕಾರಣದಿಂದಾಗಿ ರಾಜ್ಯದ ಯಾವುದೇ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲೂ, ತ್ಯಾಜ್ಯ ಸಂಗ್ರಹ ಮತ್ತು ವಿಲೆವಾರಿಗಳು ಸಮರ್ಪಕ ಹಾಗೂ ಯಶಸ್ವಿಯಾಗಿ ನಡೆಯುತ್ತಿಲ್ಲ. 
     

    ಸ್ಥಳೀಯ ಸಂಸ್ಥೆಗಳ ವಿರುದ್ಧ ಕ್ರಮ 

ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣ ಮಂಡಳಿಯು ಘನತ್ಯಾಜ್ಯ ಸಂಗ್ರಹ- ವಿಲೆವಾರಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸದ ಸ್ಥಳೀಯ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡುವ ಬಗ್ಗೆ ಚಿಂತನೆ ನಡೆಸಿದೆ ಎಂದು ಮಂಡಳಿಯ ಅದ್ಯಕ್ಷರು ಇತ್ತೀಚಿಗೆ ಬೆಂಗಳೂರಿನಲ್ಲಿ ಜರಗಿದ್ದ "ವೇಸ್ಟ್ ಮೇನೇಜ್ಮೆಂಟ್ ಸಮ್ಮಿಟ್-೨೦೧೩" ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದರು. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಈ ವಿಚಾರದಲ್ಲಿ ಸೇರ್ಪಡೆಗೊಳಿಸುವುದಿಲ್ಲ ಎಂದೂ ಹೇಳಿದ್ದರು. ಅಂಕಿ ಅಂಶಗಳೇ ಹೇಳುವಂತೆ ಕರ್ನಾಟಕದಲ್ಲಿ ಅತ್ಯಧಿಕ ಪ್ರಮಾಣದ ಘನ ತ್ಯಾಜ್ಯಗಳನ್ನು ಉತ್ಪಾದಿಸುವ ನಗರಗಳಲ್ಲಿ ಬೆಂಗಳೂರು ನಗರವು ನಿಜಕ್ಕೂ "ರಾಜಧಾನಿ" ಎನಿಸಿದೆ!. ಅಂತೆಯೇ ತ್ಯಾಜ್ಯಗಳ ವಿಂಗಡಣೆ, ಸಂಗ್ರಹಣೆ, ಸಾಗಾಟ ಮತ್ತು ವಿಲೆವಾರಿಗಳ ವೈಫಲ್ಯದಲ್ಲೂ ಅಗ್ರಸ್ಥಾನದಲ್ಲಿದೆ. ಆದರೂ ರಾಜ್ಯದ ಅನ್ಯ ಸ್ಥಳೀಯ ಸಂಸ್ಥೆಗಳಿಗೆ ಅನ್ವಯವಾಗಲಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾನೂನು ಕ್ರಮಗಳಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ವಿನಾಯಿತಿ ನೀಡಿರುವುದು ಸಮಂಜಸವಲ್ಲ. ಅದೇ ರೀತಿಯಲ್ಲಿ ಸ್ಥಳೀಯರ ಅಸಹಕಾರದಿಂದ ವಿಫಲವಾಗುತ್ತಿರುವ ಈ ವ್ಯವಸ್ಥೆಗಾಗಿ, ಸ್ಥಳೀಯ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮಗಳನ್ನು ಜರಗಿಸುವುದು ಸರ್ವಥಾ ಸಮರ್ಥನೀಯವಲ್ಲ. 

ಪರಿಹಾರವೇನು?

ಅಧಿಕತಮ ನಾಗರಿಕರು ಘನತ್ಯಾಜ್ಯ ನಿರ್ವಹಣೆಯ ವಿಚಾರದಲ್ಲಿ ಸ್ಥಳೀಯ ಸಂಸ್ಥೆಗಳೊಂದಿಗೆ ಸಹಕರಿಸದೆ ಇರಲು, ಇದಕ್ಕಾಗಿ ತೆರಬೇಕಾದ ಮಾಸಿಕ ಶುಲ್ಕವನ್ನು ತೆರಲು ಮತ್ತು ತ್ಯಾಜ್ಯಗಳನ್ನು ಪ್ರತ್ಯೇಕಿಸಲು ವ್ಯವಧಾನ ಇಲ್ಲದಿರುವುದೇ ಕಾರಣವೆನಿಸಿದೆ. ಜನಸಾಮಾನ್ಯರ ಈ ವಿಲಕ್ಷಣ ಮನೋಭಾವನೆಯನ್ನು ಬದಲಾಯಿಸುವ ವಿಧಾನಗಳೊಂದಿಗೆ,ಇದೊಂದು ಸಾಮಾಜಿಕ ಹೊಣೆಗಾರಿಕೆ ಹಾಗೂ ಅನಾರೋಗ್ಯದ ಸಮಸ್ಯೆಗಳು, ಪರಿಸರ ಮಾಲಿನ್ಯ ಮತ್ತು ಹವಾಮಾನದ ವೈಪರೀತ್ಯಗಳಂತಹಗಂಭೀರ ಸಮಸ್ಯೆಗಳನ್ನು ತಡೆಗಟ್ಟುವ ಏಕಮಾತ್ರ ವಿಧಾನ ಎನ್ನುವುದನ್ನು ಮನವರಿಕೆ ಮಾಡಬೇಕಾದ ಹೊಣೆಗಾರಿಕೆ ಸರಕಾರದ್ದೇ ಆಗಿದೆ. ಇವೆಲ್ಲಕ್ಕೂ ಮಿಗಿಲಾಗಿ ತ್ಯಾಜ್ಯ ಸಂಗ್ರಹ- ವಿಲೇವಾರಿ ವ್ಯವಸ್ಥೆಗಳಿಗೆ ಶುಲ್ಕವನ್ನು ನೀಡಲು ನಿರಾಕರಿಸುವ ನಾಗರಿಕರಿಂದಾಗಿ ಈ ವ್ಯವಸ್ಥೆ ವಿಫಲವಾಗದಿರಲು, ಸ್ವಯಂ ಘೋಷಿತ ಆಸ್ತಿ ತೆರಿಗೆಯೊಂದಿಗೆ ಈ ಶುಲ್ಕವನ್ನು ಕಡ್ಡಾಯವಾಗಿ ಸಂಗ್ರಹಿಸುವ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಲು ತತ್ಸಂಬಂಧಿತ ನಿಯಮಗಳಿಗೆ ತಿದ್ದುಪಡಿಯನ್ನು ಮಾಡಬೇಕಿದೆ. ಇವೆಲ್ಲವುಗಳ ಸಂಯುಕ್ತ ಪರಿಣಾಮಗಳಿಂದಾಗಿ ರಾಜ್ಯಾದ್ಯಂತ ಘನ ತ್ಯಾಜ್ಯ ಸಂಗ್ರಹ- ವಿಲೇವಾರಿ ವ್ಯವಸ್ಥೆ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. 


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು