Saturday, December 7, 2013

Fake medicines


                          ಔಷದಂ ಜಾಹ್ನವೀ ತೋಯಂ..........?

ಅಮಾಯಕ ಜನರ ಅಕಾಲ ಮರಣಕ್ಕೂ ಕಾರಣವೆನಿಸಬಲ್ಲ "ನಕಲಿ ಮತ್ತು ಕಳಪೆ ಔಷದ" ಗಳ ತಯಾರಕರು ಮತ್ತು ಮಾರಾಟಗಾರರಿಗೆ, ಇದೀಗ ಕೇಂದ್ರ ಸರಕಾರವು ಜಾರಿಗೆ ತರಲಿರುವ ಮರಣ ದಂಡನೆಯಂತಹ ಉಗ್ರ ಶಿಕ್ಷೆಯು ನಿಸ್ಸಂದೇಹವಾಗಿ ಸಮಂಜಸವೆನಿಸುವುದು. ಆದರೆ ರಾಜಕಾರಣಿಗಳು ಮತ್ತು ಸರಕಾರೀ ಅಧಿಕಾರಿಗಳನ್ನು ಖರೀದಿಸಬಹುದಾದ ನಮ್ಮ ಭವ್ಯ ಭಾರತದಲ್ಲಿ, ಈ ಶಿಕ್ಷೆಯು ಅಪೇಕ್ಷಿತ ಪರಿಣಾಮವನ್ನು ನೀಡುವುದು ಸಂದೇಹಾಸ್ಪದ. 
------------                 --------------                 --------------                 ------------------                    -----------------                  ------------------

ಹದಿನೈದರ ಹರೆಯದ ಗಣೇಶನಿಗೆ ಐಸ್ ಕ್ರೀಮ್ಎಂದರೆ ಪಂಚಪ್ರಾಣ. ಆದರೆ ಪ್ರತಿಬಾರಿ ಐಸ್ ಕ್ರೀಮ್ ಸವಿದ ಮರುದಿನ ತೀವ್ರ ಜ್ವರದೊಂದಿಗೆ "ಟಾನ್ಸಿಲೈಟಿಸ್" ಬಾಧಿಸುತ್ತಿದ್ದುದರಿಂದ, ವೈದ್ಯರು ಆತನಿಗೆ ಐಸ್ ಕ್ರೀಮ್ ತಿನ್ನದಂತೆ ಕಟ್ಟಪ್ಪಣೆ ನೀಡಿದ್ದರು. 

ಶಾಲಾ ವಾರ್ಷಿಕೋತ್ಸವದಂದು ಸ್ನೇಹಿತರ ಒತ್ತಾಯಕ್ಕೆ ಮಣಿದು ಸಾಕಷ್ಟು ಐಸ್ ಕ್ರೀಮ್ ಸವಿದಿದ್ದ ಗಣೇಶನಿಗೆ ಮಾರನೆಯ ರಾತ್ರಿ ಹಳೆಯ ಸಮಸ್ಯೆ ಮರುಕಳಿಸಿತ್ತು. ವೈದ್ಯರ ಬಳಿಗೆ ತೆರಳಿದ ಆತನನ್ನು ಕೂಲಂಕುಶವಾಗಿ ಪರೀಕ್ಷಿಸಿದ ವೈದ್ಯರು, ಐದು ದಿನಗಳ ಕಾಲ ಸೇವಿಸಬೇಕಾದ ಔಷದಗಳನ್ನು ಬರೆದು ನೀಡಿದ್ದರು. ಈ ಔಷದಗಳನ್ನು ಖರೀದಿಸಲು ಹೋಗಿದ್ದ ಗಣೇಶನ ತಂದೆಗೆ ವೈದ್ಯರು ಸೂಚಿಸಿದ್ದ ಕಂಪೆನಿಯ ಔಷದಗಳಿಗೆ ಬದಲಾಗಿ ಬೇರೊಂದು ಕಂಪೆನಿಯ ಔಷದಗಳನ್ನು ನೀಡಿದ್ದ ವ್ಯಾಪಾರಿಯು, ಇವೆರಡೂ ಔಷದಗಳು ಒಂದೇ ಎಂದು ಆಶ್ವಾಸನೆಯನ್ನು ನೀಡಿದ್ದನು. 

ಸಾಮಾನ್ಯವಾಗಿ ಮೂರು ದಿನಗಳ ಔಷದಗಳನ್ನು ಸೇವಿಸಿದೊಡನೆ ಶಮನವಾಗುತ್ತಿದ್ದ ಗಣೇಶನ ಗಂಟಲು ನೋವು, ಈ ಬಾರಿ ಕಿಂಚಿತ್ ಕೂಡಾ ಕಡಿಮೆಯಾಗಲಿಲ್ಲ. ಮಾತ್ರವಲ್ಲ, ಇನ್ನಷ್ಟು ಉಲ್ಬಣಿಸಿದ ಪರಿಣಾಮವಾಗಿ ನಾಲ್ಕನೆಯ ರಾತ್ರಿ ಜ್ವರ ತಲೆಗೆ ಏರಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಮಗನ ಸ್ಥಿತಿಯನ್ನು ಕಂಡು ಗಾಬರಿಗೊಂಡ ಗಣೇಶನ ತಂದೆ, ತಕ್ಷಣ ಆತನನ್ನು ವೈದ್ಯರ ಬಳಿಗೆ ಕರೆದೊಯ್ದಿದ್ದರು. ಗಣೇಶನನ್ನು ಪರೀಕ್ಷಿಸಿದ ವೈದ್ಯರಿಗೆ ತಾನು ಸೂಕ್ತ ಔಷದಗಳನ್ನು ನೀಡಿದ್ದರೂ  ಟಾನ್ಸಿಲೈಟಿಸ್ ಉಲ್ಬಣಿಸಲು ಕಾರಣವೇನೆಂದು ಅರಿತುಕೊಳ್ಳಲು ಗಣೇಶನ ತಂದೆಯ ಒಂದಿಗೆ ಸಮಾಲೋಚಿಸಿದಾಗ, ಔಷದ ವ್ಯಾಪಾರಿಯು ನೀಡಿದ್ದ ಬೇರೊಂದು ಕಂಪೆನಿಯ ಔಷದದ ವಿಚಾರ ತಿಳಿಯಿತು. ಈ ಔಷದಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ವೈದ್ಯರಿಗೆ, ಇವು ನಕಲಿ ಔಷದಗಳೆಂದು ಖಾತರಿಯಾಗಿತ್ತು!. 

ಅರೆಪ್ರಜ್ಞಾವಸ್ಥೆಯಲ್ಲಿದ್ದ ಗಣೇಶನಿಗೆ ತುರ್ತು ಚಿಕಿತ್ಸೆಯನ್ನು ನೀಡಿದ್ದರಿಂದ ಆತನ ಪ್ರಾಣ ಉಳಿಯಿತು. ಈ ಘಟನೆಯ ಬಳಿಕ ಗಣೇಶನ ತಂದೆಯು ವೈದ್ಯರು ಸೂಚಿಸಿದ ಔಷದಗಳನ್ನು ಖರೀದಿಸಿದ ಬಳಿಕ, ಇವುಗಳನ್ನು ವೈದ್ಯರಿಗೆ ತೋರಿಸದೆ ಸೇವಿಸುವುದಿಲ್ಲ. 

ಇದೇ ರೀತಿಯಲ್ಲಿ ಕೆಲ ಗಂಭೀರ ಕಾಯಿಲೆಗಳಿಂದ ಬಳಲುವ ಅನೇಕ ರೋಗಿಗಳು ನಕಲಿ ಮಾತ್ರೆ, ಕ್ಯಾಪ್ಸೂಲ್, ಸಿರಪ್ ಹಾಗೂ ಇಂಜೆಕ್ಷನ್ ಗಳ ದುಷ್ಪರಿಣಾಮದಿಂದ ಸಂಕಷ್ಟಗಳಿಗೆ ಈಡಾದ ಹಾಗೂ ಮೃತಪಟ್ಟ ನೂರಾರು ಉದಾಹರಣೆಗಳಿವೆ. ಏಕೆಂದರೆ ನಕಲಿ ಔಷದವನ್ನು ಸೇವಿಸಿದ ಪ್ರತಿಯೊಬ್ಬರೂ ಗಣೇಶನಷ್ಟು ಅದೃಷ್ಟಶಾಲಿಯಾಗುವ ಸಾಧ್ಯತೆಗಳಿಲ್ಲ. 

ನಕಲಿ- ಕಳಪೆ ಔಷದಗಳೆಂದರೇನು?

ಯಾವುದೇ ಮಾತ್ರೆ, ಕ್ಯಾಪ್ಸೂಲ್, ಮುಲಾಮು, ಇಂಜೆಕ್ಷನ್ ಮತ್ತಿತರ ಉತ್ಪನ್ನಗಳಲ್ಲಿನ ಔಷದಗಳ ಪ್ರಮಾಣವನ್ನು ಇವುಗಳ ಹೊರಕವಚದ ಮೇಲೆ ನಮೂದಿಸಿರುತ್ತಾರೆ. ಉದಾಹರಣೆಗೆ ತಲೆನೋವು, ಮೈಕೈ ನೋವು ಮತ್ತು ಜ್ವರ ಶಮನವಾಗಲು ನೀವು ನುಂಗುವ ಮೆಟಾಸಿನ್ ಅಥವಾ ಕ್ರೋಸಿನ್ ನಂತಹ ಸಿದ್ಧ ಔಷದಗಳಲ್ಲಿ ೫೦೦ ಮಿಲಿ ಗ್ರಾಂ ಪಾರಾಸಿಟಮಾಲ್ ಎನ್ನುವ ಔಷದವಿದೆ. ಆದರೆ ನಕಲಿ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭಿಸುವ ಇಂತಹ ಉತ್ಪನ್ನಗಳಲ್ಲಿ ಮೂಲ ಔಷದವೇ ಇರುವುದಿಲ್ಲ. ಇದಕ್ಕೆ ಬದಲಾಗಿ ನಿಮ್ಮ ಆರೋಗ್ಯಕ್ಕೆ ಹಾನಿಕರ ಅಥವಾ ಹಾನಿಕಾರಕವಲ್ಲದ ಅನ್ಯ ದ್ರವ್ಯಗಳು ಇರುತ್ತವೆ. 

ನಕಲಿ ಪಾರಾಸಿಟಮಾಲ್ ಮಾತ್ರೆ ತಯಾರಿಸುವಾಗ ಬಳಸಿರಬಹುದಾದ ಸೀಮೆಸುಣ್ಣವು ಹೊಟ್ಟೆನೋವು- ಉರಿಯಂತಹ ತೊಂದರೆಗಳಿಗೆ ಕಾರಣವೆನಿಸುವುದು. ಜೊತೆಗೆ ಇದರ ಸೇವನೆಯಿಂದ ನಿಮ್ಮ ತಲೆನೋವು, ಮೈಕೈ ನೋವು ಮತ್ತು ಜ್ವರಗಳು ಶಮನಗೊಳ್ಳುವ ಸಾಧ್ಯತೆಗಳೇ ಇರುವುದಿಲ್ಲ. ಇದೇ ರೀತಿಯಲ್ಲಿ ನಕಲಿ ಕ್ಯಾಪ್ಸೂಲ್ ನಲ್ಲಿ ತುಂಬಿಸಿರಬಹುದಾದ ಅಕ್ಕಿ ಹುಡಿ, ಗೋಧಿ ಹುಡಿ ಅಥವಾ ಅರಶಿನದ ಹುಡಿಗಳು ಹಾನಿಕಾರಕವಲ್ಲದಿದ್ದರೂ, ನಿಮ್ಮ ಕಾಯಿಲೆಯನ್ನು ಗುಣಪಡಿಸಲು ವಿಫಲವಾಗುವುದರಿಂದ ತೀವ್ರಗೊಂಡು ಗಂಭೀರ ಹಾಗೂ ಮಾರಕ ಸಮಸ್ಯೆಗಳಿಗೆ ಕಾರಣವೆನಿಸುತ್ತವೆ. 

ವಿಶೇಷವೆಂದರೆ ಅಪರೂಪದಲ್ಲಿ ಕೆಲವೊಂದು ನಕಲಿ ಔಷದಗಳ ತಯಾರಕರು ತಮ್ಮ ಉತ್ಪನ್ನಗಳಲ್ಲಿ ಅಸಲಿ ಮೂಲ ಔಷದಗಳನ್ನು ನಿಗದಿತ ಪ್ರಮಾಣದಲ್ಲಿ ಬಳಸುವುದುಂಟು. ಖ್ಯಾತ ಔಷದ ತಯಾರಿಕಾ ಸಂಸ್ಥೆಯ ಉತ್ಪನ್ನಗಳ ಜನಪ್ರಿಯತೆಯ ಲಾಭವನ್ನು ಪಡೆಯುವ ಇಂತಹ "ಸಜ್ಜನ"ರು, ಅಸಲಿ ಔಷದಗಳನ್ನು ತಮ್ಮ ನಕಲಿ ಉತ್ಪನ್ನಗಳಲ್ಲಿ ಬಳಸುವುದು (ಶಿಕ್ಷಾರ್ಹ ಅಪರಾಧವಾದರೂ) ಜನರ ಆರೋಗ್ಯದ ದೃಷ್ಟಿಯಿಂದ ಹಿತಕರವೆನ್ನಬಹುದು. 

ಸಾಮಾನ್ಯವಾಗಿ ರೋಗಿಯ ವಯಸ್ಸು, ಶರೀರದ ತೂಕ ಮತ್ತು ಕಾಯಿಲೆಯ ತೀವ್ರತೆಗಳಿಗೆ ಅನುಗುಣವಾಗಿ ವೈದ್ಯರು ತಾವು ನೀಡಬೇಕಾದ ಔಷದಗಲ್ ಪ್ರಮಾಣವನ್ನು ನಿಗದಿಸುತ್ತಾರೆ. ಉದಾಹರಣೆಗೆ ಅಧಿಕ ರಕ್ತದೊತ್ತದವಿರುವ ರೋಗಿಗೆ ೨೫ ಮಿಲಿ ಗ್ರಾಂ ಅಟೇನೊಲಾಲ್ ಔಷದ ಸೇವನೆಯಿಂದ ರಕ್ತದೊತ್ತಡ ಹತೋಟಿಗೆ ಬರದೆ ಇದ್ದಲ್ಲಿ, ಔಷದದ ಪ್ರಮಾಣವನ್ನು ೫೦ ಮಿಲಿ ಗ್ರಾಂ ಗಳಿಗೆ ಹೆಚ್ಚಿಸುವುದು ಅಥವಾ ಅಟೇನೊಲಾಲ್ ನೊಂದಿಗೆ ಎಮ್ಲೋಡೆಪಿನ್ ಎನ್ನುವ ಔಷದವನ್ನು ಸೇರಿಸಿ ಸಿದ್ಧಪಡಿಸಿದ ಮಾತ್ರೆಯನ್ನು ನೀಡುವುದುಂಟು. ೨೫ ಮಿಲಿ ಗ್ರಾಂ ಅಸಲಿ ಔಷದ ಸೇವಿಸುತ್ತಿದ್ದ ರೋಗಿಯು ನಕಲಿ ಅಟೇನೊಲಾಲ್ ಮತ್ತು ಎಮ್ಲೋಡೆಪಿನ್ ಮಾತ್ರೆಯನ್ನು ಸೇವಿಸಿದಲ್ಲಿ ಆತನ ರಕ್ತದೊತ್ತದವು ಉಲ್ಬಣಿಸಿ ಪಕ್ಷವಾತದಂತಹ  ಗಂಭೀರ ಸಮಸ್ಯೆಗಳಿಗೆ ಅಥವಾ ಮರಣಕ್ಕೂ ಕಾರಣವೆನಿಸಬಹುದು. ಇದೇ ರೀತಿಯಲ್ಲಿ ನೀವು ಯಾವುದೇ ಸೋಂಕಿನಿಂದ ಬಳಲುತ್ತಿದ್ದಾಗ ನಕಲಿ ಅಥವಾ ಕಳಪೆ ದರ್ಜೆಯ ಎಂಟಿಬಯಾಟಿಕ್ ಔಷದಗಳ ಸೇವನೆಯಿಂದ ನಿಮ್ಮ ಸೋಂಕು ನಿಯಂತ್ರಣಕ್ಕೆ ಬರದೇ ಇರುವುದರಿಂದ ನಿಮ್ಮ ಸಮಸ್ಯೆ ಇನ್ನಷ್ಟು ಉಲ್ಬಣಿಸಿ ಇನ್ನಷ್ಟು ಸಮಸ್ಯೆಗಳಿಗೆ ಕಾರಣವೆನಿಸುವುದು. 

ವಿಶ್ವವ್ಯಾಪಿ ಸಮಸ್ಯೆ 

ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿರುವ ನಕಲಿ- ಕಳಪೆ ಔಷದಗಳು ವಿಶ್ವ ಆರೋಗ್ಯ ಸಂಸ್ಥೆಗೂ ತಲೆನೋವು ತಂದಿದೆ. ಎರಡು ವರ್ಷಗಳ ಹಿಂದೆ ಈ ಸಂಸ್ಥೆ ನಡೆಸಿದ್ದ ಸಮೀಕ್ಷೆಯ ವರದಿಯಂತೆ ಇಂತಹ ಔಷದಗಲ ತಯಾರಿಕೆ ಮತ್ತು ರಫ್ತಿನಲ್ಲಿ ಭಾರತಕ್ಕೆ (ಶೇ.೩೫ ) ಅಗ್ರಸ್ಥಾನ ಸಲ್ಲುತ್ತದೆ!. ದ್ವಿತೀಯ ಸ್ಥಾನ ನೈಜೀರಿಯ (ಶೇ. ೨೩ )  ದೇಶಕ್ಕೆ ಸಲ್ಲುತ್ತದೆ. 

ಪ್ರತಿನಿತ್ಯ ೧೦ ರಿಂದ ೧೫ ಕೋಟಿಗೂ ಅಧಿಕ ಮೊತ್ತದ ವ್ಯವಹಾರ ನಡೆಯುವ ನಕಲಿ ಔಷದಗಳ ಜಾಲವು ಉತ್ತರ- ಮಧ್ಯ ಭಾರತದಲ್ಲಿ ಬಲಿಷ್ಟವಾಗಿದ್ದು, ದಕ್ಷಿಣ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಈ ವ್ಯವಹಾರ ಅತ್ಯಂತ ವ್ಯವಸ್ಥಿತವಾಗಿ ನಡೆಯುವುದಕ್ಕೆ ದಕ್ಷಿಣ ಏಶಿಯಾದ ಅನೇಕ ದೇಶಗಳು, ರಷ್ಯಾ, ಉಜ್ಬೆಕಿಸ್ತಾನ, ದಕ್ಷಿಣ ಆಫ್ರಿಕ ಮತ್ತು ಅಮೆರಿಕದಂತಹ ದೇಶಗಳಿಗೂ ಭಾರತದಲ್ಲಿ ತಯಾರಾದ ನಕಲಿ ಔಷದಗಳು ರಫ್ತಾಗುತ್ತಿರುವುದೇ ಸಾಕ್ಷಿ. 

ಕೆಲವೇ ಲಕ್ಷ ರೂಪಾಯಿಗಳ ಬಂಡವಾಳದೊಂದಿಗೆ ನಿಮ್ಮ ಮನೆಯ ಹಿಂದಿನ ಹಟ್ಟಿ ಅಥವಾ ಕಾರ್ ಶೆಡ್ ನಲ್ಲಿ ಪ್ರಾರಮ್ಭಿಸಬಹುದಾದ ಈ ಧನ್ಧೆಗೆ ಯಾವುದೇ ಸರಕಾರೀ ಅಧಿಕಾರಿಗಳ, ಇಲಾಖೆಗಳ ಪರವಾನಿಗೆಯ ಅವಶ್ಯಕತೆಯೇ ಇಲ್ಲ. ತಯಾರಿಸಿದ ಉತ್ಪನ್ನಗಳನ್ನು ಮಾರುವ ಛಾತಿಯಿದ್ದರೆ ದಕ್ಕಿದ್ದೆಲ್ಲ ಲಾಭ. ಜೊತೆಗೆ ಸರಕಾರಕ್ಕೆ ಯಾವುದೇ ತೆರಿಗೆಯನ್ನು ನೀಡುವ ಅವಶ್ಯಕತೆಯೇ ಇಲ್ಲ!. 

ಈ ಸಮಸ್ಯೆಗೆ ಕಾರಣವೇನು?

ನಕಲಿ ಅಥವಾ ಕಳಪೆ ಔಷದಗಳ ಮೂಲವನ್ನು ಶೋಧಿಸಿದಾಗ ಈ ಸಮಸ್ಯೆಗೆ ರಾಜ್ಯ- ಕೇಂದ್ರ ಸರಕಾರಗಳೇ ಕಾರಣವೆನ್ನಬಹುದು. ಏಕೆಂದರೆ ಸರಕಾರೀ ಆಸ್ಪತ್ರೆಗಳಿಗೆ ಬೇಕಾಗುವ  ಔಷದಗಳನ್ನು ಖರೀದಿಸುವಾಗ ಟೆಂಡರುಗಳನ್ನು ಆಹ್ವಾನಿಸಿ, ಕನಿಷ್ಠ ದರ ಸೂಚಿಸಿದ ಸಂಸ್ಥೆಗೆ ಗುತ್ತಿಗೆಯನ್ನು ನೀಡುವ ಪದ್ಧತಿ ಇಂದಿಗೂ ಇದೆ. ಬೃಹತ್ ಪ್ರಮಾಣದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಔಷದಗಳನ್ನು ಪೂರೈಸುವಾಗ ಮಾರುಕಟ್ಟೆಯ ದರಕ್ಕಿಂತ ಸಾಕಷ್ಟು ಕಡಿಮೆ ದರದಲ್ಲಿ ಇವು ಲಭ್ಯವಾಗುತ್ತವೆ. ಆದರೆ ಅನೇಕ ಸಂದರ್ಭಗಳಲ್ಲಿ ಪೂರೈಕೆದಾರರು ಸೂಚಿಸುವ ದರವು "ಮೂಲ ಔಷದ"ದ ಬೆಲೆಗಿಂತಲೂ ಕಡಿಮೆ ಇರುವುದು ನಂಬಲಸಾಧ್ಯವೆನಿಸುತ್ತದೆ!. ಏಕೆಂದರೆ ಮೂಲ ಔಷದವನ್ನು ಖರೀದಿಸಿ, ಮಾತ್ರೆ- ಕ್ಯಾಪ್ಸೂಲ್ ಇತ್ಯಾದಿಗಳನ್ನು ತಯಾರಿಸಿದ ಬಳಿಕ ಇವುಗಳ ಪ್ಯಾಕಿಂಗ್, ಸಾಗಾಣಿಕೆ ಮತ್ತು ತನ್ನ ಲಾಭಾಂಶವನ್ನು ಸೇರಿಸಿದಾಗ, ಈ ಉತ್ಪನ್ನದ ಬೆಲೆಯೂ ಮೂಲ ಔಷದದ ಬೆಲೆಗಿಂತ ಹೆಚ್ಚಾಗಲೇಬೇಕಲ್ಲವೇ?. ಆರೋಗ್ಯ ಇಲಾಖೆಗೂ ಇದು ತಿಳಿದಿರಲೇ ಬೇಕು. 

ಇಂತಹ ಪೂರೈಕೆದಾರರಿಂದ ಸರಕಾರ ಖರೀದಿಸುವ ಔಷದಗಳಲ್ಲಿ ನಿಶ್ಚಿತವಾಗಿಯೂ ನಿಗದಿತ ಪ್ರಮಾಣದ ಮೂಲ ಔಷದಗಳಿರುವ ಸಾಧ್ಯತೆಗಳಿಲ್ಲ. ಅರ್ಥಾತ್ ಔಷದ ತಯಾರಕರು ತಮ್ಮ ಉತ್ಪನ್ನಗಳನ್ನು ಇಷ್ಟೊಂದು ಕಡಿಮೆ ಬೆಲೆಗೆ ನೀಡುವ ಸಲುವಾಗಿ, ಮೂಲ ಔಷದವನ್ನು ಒಂದಿಷ್ಟು ಕಡಿಮೆ ಪ್ರಮಾಣದಲ್ಲಿ ಬಳಸುವುದು ಅನಿವಾರ್ಯ. ಸಾಮಾನ್ಯ ಬುದ್ಧಿಶಕ್ತಿಯುಳ್ಳ ವ್ಯಕ್ತಿಗೂ ಇದು ಅರ್ಥವಾಗುವುದಾದರೂ, ಸರಕಾರಕ್ಕೆ ಇದು ಅರ್ಥವಾಗದಿರುವುದು ಅಸಾಧ್ಯವೂ ಹೌದು. ಆದರೂ ಸರಕಾರವು ಇಂದಿಗೂ ಇದೇ ಪದ್ಧತಿಯಲ್ಲಿ ಔಷದಗಳನ್ನು ಖರೀದಿಸುತ್ತಿರಲು ಕಾರಣವೇನೆಂದು ನಮಗಂತೂ ತಿಳಿದಿಲ್ಲ. 

ಪ್ರಖ್ಯಾತ ಔಷದ ತಯಾರಿಕಾ ಸಂಸ್ಥೆಗಳು ತಮ್ಮ ಹಲವಾರು ಉತ್ಪನ್ನಗಳನ್ನು ತಯಾರಿಸಲು, ಸಣ್ಣಪುಟ್ಟ ಸಂಸ್ಥೆಗಳಿಗೆ ಗುತ್ತಿಗೆ ನೀಡಿ ಸಿದ್ಧಪಡಿಸಿದ ಉತ್ಪನ್ನಗಳನ್ನು ತಮ್ಮ ಸಂಸ್ಥೆಯ ಹೆಸರಿನಲ್ಲಿ ಮಾರಾಟ ಮಾಡುತ್ತವೆ. ಇಂತಹ ಸಂದರ್ಭದಲ್ಲಿ ಸಣ್ಣಪುಟ್ಟ ಸಂಸ್ಥೆಗಳು ನಿರ್ದಿಷ್ಟ ಉತ್ಪನ್ನದಲ್ಲಿ ಬಳಸುವ ಮೂಲ ಔಷದದ ಪ್ರಮಾಣವನ್ನು ಒಂದಿಷ್ಟು ಕಡಿಮೆ ಮಾಡುವ ಮೂಲಕ ಮತಷ್ಟು ಲಾಭಗಳಿಸುವ ಸಾಧ್ಯತೆಗಳಿವೆ. ಈ  ರೀತಿಯಲ್ಲಿ ಖ್ಯಾತ ಸಂಸ್ಥೆಗಳೂ ಕಳಪೆ ದರ್ಜೆಯ ಔಷದಗಳನ್ನು ಹುಟ್ಟು ಹಾಕುವಲ್ಲಿ ಕಾರಣವೆನಿಸುತ್ತವೆ. 

ಔಷದ ಕಂಪೆನಿಗಳು ತಮ್ಮ ಪ್ರತಿನಿಧಿಗಳ ಮೂಲಕ ವೈದ್ಯರಿಗೆ ನೀಡುವ ಒಂದಿಷ್ಟು ಸ್ಯಾಂಪಲ್ ಗಳೊಂದಿಗೆ ಕೆಲವೊಂದು ಉಚಿತ ಉಡುಗೊರೆಗಳನ್ನು ನೀಡುವ ಪದ್ಧತಿ ಇಂದಿಗೂ ಇದೆ. ಅಂತೆಯೇ ತಮ್ಮ ಉತ್ಪನ್ನಗಳನ್ನು ಗಣನೀಯ ಪ್ರಮಾಣದಲ್ಲಿ ಸೂಚಿಸುವ ವೈದ್ಯರಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಕಾರು ಅಥವಾ ವಿದೇಶ ಯಾತ್ರೆಯ ಕೊಡುಗೆಗಳನ್ನು ನೀಡುತ್ತವೆ. ದುಬಾರಿ ಬೆಲೆಯ ಇಂತಹ ಕೊಡುಗೆಗಳನ್ನು ನೀಡಬೇಕಿದ್ದಲ್ಲಿ, ಈ ಸಂಸ್ಥೆಯ ಉತ್ಪನ್ನಗಳ ಗುಣಮಟ್ಟ ಕಳಪೆಯಾಗಿರಲೇಬೇಕು. ಅಥವಾ ಸಂಸ್ಥೆಯು ಹತ್ತಾರು ಪಟ್ಟು ಅಧಿಕ ಬೆಲೆಗೆ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರಲೇಬೇಕು. 

     
    ಅನೇಕ ಸಣ್ಣಪುಟ್ಟ ಔಷದ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ನಿಗದಿತ ಅವಧಿ ಮುಗಿಯುವ ಮುನ್ನ ಮಾರಾಟಮಾಡಲು ವಿಫಲರಾದಾಗ, ತಮ್ಮ ನಷ್ಟವನ್ನು ಸರಿ ಹೊಂದಿಸಲು ಇದೇ ಔಷದಗಳನ್ನು "ಹೊಸ ಹೊದಿಕೆ" ಯೊಂದಿಗೆ ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡುವುದು ರೋಗಿಗಳ ಪ್ರಾಣದೊಂದಿಗೆ ಆಡುವ ಚೆಲ್ಲಾಟವೇ ಹೊರತು ಬೇರೇನೂ ಅಲ್ಲ. ಈ ಅನಿಷ್ಠ ಪದ್ದತಿಯು ನಕಲಿ ಔಷದಗಳ ಮಾರಾಟದಷ್ಟೇ ಅಪಾಯಕಾರಿ ಎನ್ನುವುದರಲ್ಲಿ ಸಂದೇಹವಿಲ್ಲ. 

ಟಿ. ವಿ. ಜಾಹೀರಾತುಗಳಲ್ಲಿ ನಿಮ್ಮನ್ನು ಕಾಡುವ ಶೀತ, ತಲೆನೋವು, ಸೊಂಟನೋವು ಮತ್ತಿತರ ಆರೋಗ್ಯದ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ಪರಿಹರಿಸಬಲ್ಲದೆಂದು ಘೋಷಿಸುವ ಔಷದಗಳನ್ನು ಗಮನಿಸಿದ್ದೀರಾ?. ಈ ಔಷದಗಳು ನಕಲಿ ಔಷದ ತಯಾರಕರಿಗೆ ಅಚ್ಚುಮೆಚ್ಚು. ಏಕೆಂದರೆ ಈ ಇಂತಹ ಔಷದಗಳನ್ನು ವೈದ್ಯರ ಸೂಚನೆಯಿಲ್ಲದೆ ಖರೀದಿಸಬಹುದಾದುದರಿಂದ, ನಕಲಿ ಔಷದ ತಯಾರಕರು ಮಾರುಕಟ್ಟೆಗೆ ಬಿಡುಗಡೆ ಮಾಡುವ ನಕಲಿ ಉತ್ಪನ್ನಗಳ ಸೇವನೆಯಿಂದ ಉದ್ಭವಿಸಬಹುದಾದ ಸಮಸ್ಯೆಗಳಿಗೆ ಈ ಖದೀಮರು ಬಾಧ್ಯರಾಗುವ ಸಾಧ್ಯತೆಗಳೇ ಇಲ್ಲ. 

ಅವಿದ್ಯಾವಂತರೇ ಹೆಚ್ಚಿರುವ ಗ್ರಾಮೀಣ ಪ್ರದೇಶಗಳಲ್ಲಿ ಮಾರಾಟವಾಗುತ್ತಿರುವ ಔಷದಗಳಲ್ಲಿ ಶೇ. ೪೦ ಹಾಗೂ ನಗರ ಪ್ರದೇಶಗಳಲ್ಲಿ ಶೇ. ೨೦ ರಷ್ಟು ಇರುವ ನಕಲಿ ಔಷದಗಳು ಇದೀಗ ದುಬಾರಿ ಬೆಲೆಯ ಇಂಜೆಕ್ಷನ್ ಗಳ ರೂಪದಲ್ಲೂ ಪತ್ತೆಯಾಗುತ್ತಿರುವುದು ಆತಂಕದ ವಿಚಾರ. ತಜ್ಞ ವೈದ್ಯರಿಗೂ ಕಂಡು ಹಿಡಿಯಲು ಅಸಾಧ್ಯವಾದ ಇಂತಹ ಉತ್ಪನ್ನಗಳನ್ನು ರೋಗಿಗಳು ಗುರುತಿಸುವುದಾದರೂ ಹೇಗೆ?. 

ಈ ಸಮಸ್ಯೆಗೆ ಪರಿಹಾರವೇನು?

Drugs and cosmetics act 1940 ಯಂತೆ ಭಾರತದಲ್ಲಿ ನಕಲಿ ಔಷದ ತಯಾರಿಕೆಯು ಗಂಭೀರ ಅಪರಾಧವೆನಿಸಿರಲಿಲ್ಲ. ಎರಡರಿಂದ ಮೂರು ವರ್ಷಗಳ ಸಜೆ ಅಥವಾ ಐದು ಸಾವಿರ ರೂಪಾಯಿಗಳ ದಂಡ ತೆತ್ತು ಹೊರನಡೆವ ಅಪರಾಧಿಯು, ಮತ್ತೆ ಇದೇ ಧಂಧೆಯನ್ನು ಮುಂದುವರೆಸುತ್ತಿದ್ದುದು ಸ್ವಾಭಾವಿಕ. ಪ್ರಾಯಃ ಇದೇ ಕಾರಣದಿಂದಾಗಿ ೧೯೮೨ ರಲ್ಲಿ ಈ ಕಾಯಿದೆಗೆ ತಿದ್ದುಪಡಿ ಮಾಡಿ, ಇಂತಹ ಅಪರಾಧಿಗಳಿಗೆ ಅಜೀವ ಕಾರಾಗೃಹವಾಸ ಶಿಕ್ಷೆ ವಿಧಿಸಲು ಅವಕಾಶವನ್ನು ಅಲ್ಪಿಸಿದ್ದರೂ, ಇದುವರೆಗೆ ಒಬ್ಬನೇ ಒಬ್ಬ ನಕಲಿ ಔಷದ ತಯಾರಕನಿಗೆ ಈ ಶಿಕ್ಷೆ ವಿಧಿಸಿಲ್ಲ!. 

ಕೇಂದ್ರ ಸರಕಾರವು ೨೦೦೨ ರಲ್ಲಿ ಮಾಷೆಲ್ಕರ್ ಸಮಿತಿಯ ಮಧ್ಯಂತರ ವರದಿಯಂತೆ ಇದೀಗ ಇಂತಹ ಅಪರಾಧಿಗಳಿಗೆ ಮರಣ ದಂಡನೆಯಂತಹ ಉಗ್ರ ಶಿಕ್ಷೆಯನ್ನು ಜಾರಿಗೆ ತರಲು ಉದ್ದೇಶಿಸಿದೆ. ಆದರೆ ಇದನ್ನು ಅನುಷ್ಠಾನಗೊಳಿಸಲು ಔಷದ ನಿಯಂತ್ರಣ ಇಲಾಖೆಯಲ್ಲಿ ಸಾಕಷ್ಟು ಸಿಬಂದಿಗಳು ಮತ್ತು ಪ್ರಯೋಗಾಲಯಗಳಿಲ್ಲ. ೧೫ ರಾಜ್ಯಗಳಲ್ಲಿರುವ ಪ್ರಯೋಗಾಲಯಗಳಲ್ಲಿ ಸಮರ್ಪಕ ವ್ಯವಸ್ಥೆ- ಸಿಬಂದಿಗಲಿರುವುದು ಕೇವಲ ಏಳು ಪ್ರಯೋಗಾಲಯಗಳಲ್ಲಿ ಮಾತ್ರ!. 

ಭಾರತದಲ್ಲಿರುವ ಸಾವಿರಾರು ಔಷದ ತಯಾರಿಕಾ ಸಂಸ್ಥೆಗಳು ಉತ್ಪಾದಿಸುವ ಲಕ್ಷಾಂತರ ಉತ್ಪನ್ನಗಳನ್ನು ಕೇವಲ ಒಂದು ಬಾರಿ ಪರೀಕ್ಷಿಸುವುದಾದಲ್ಲಿ, ಈ ಏಳು ಪ್ರಯೋಗಾಲಯಗಳಿಗೆ ಹಲವಾರು ವರ್ಷಗಳೇ ಬೇಕಾಗುವುದು. ಔಷದ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಶಂಕಿತ ನಕಲಿ ಔಷದ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡ ಔಷದಗಳು ಪ್ರಯೋಗಾಲಯದಲ್ಲಿ ಪರೀಕ್ಷಿಸಲ್ಪಟ್ಟು ನಕಲಿ ಎಂದು ಪ್ರಮಾಣಿಸದೇ, ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡುವುದು ಅಸಾಧ್ಯ. ತದನಂತರವೂ ಈ ವ್ಯಾಜ್ಯಗಳು ವರ್ಷಗಟ್ಟಲೆ ಇತ್ಯರ್ಥವಾಗದೆ ಉಳಿಯುವ ಸಾಧ್ಯತೆಗಳಿವೆ. ನಿಜ ಸ್ಥಿತಿ ಹೀಗಿರುವಾಗ ಕೇಂದ್ರ ಸರಕಾರವು ನಿರ್ಧರಿಸಿದಂತೆ ಇಂತಹ ಪಾತಕಿಗಳಿಗೆ ಮರಣದಂಡನೆಯಂತಹ ಶಿಕ್ಷೆಯನ್ನು ನೀಡುವುದು ನಿರರ್ಥಕವೆನಿಸುವುದು. ಆದರೆ ಎಚ್ಚೆತ್ತ ಗ್ರಾಹಕರು ಮತ್ತು ಗ್ರಾಹಕ ವೇದಿಕೆಗಳು ಈ ಬಗ್ಗೆ ಜನಜಾಗೃತಿಯನ್ನು ಮೂಡಿಸುವಲ್ಲಿ ಸಫಲರಾದಲ್ಲಿ, ನಕಲಿ ಔಷದಗಳ ಸಮಸ್ಯೆಯನ್ನು ನಿಶ್ಚಿತವಾಗಿಯೂ ನಿಯಂತ್ರಿಸುವುದು ಸುಲಭ ಸಾಧ್ಯ. 

ಅಂತಿಮವಾಗಿ ಈ ಸಮಸ್ಯೆಯ ಪರಿಹಾರದಲ್ಲಿ ಕೇಂದ್ರ- ರಾಜ್ಯ ಸರಕಾರಗಳಿಗೆ ಇರುವಷ್ಟೇ ಹೊಣೆಗಾರಿಕೆ ಪ್ರತಿಯೊಂದು ಔಷದ ತಯಾರಿಕಾ ಸಂಸ್ಥೆಗಳಿಗೂ ಇರಲೇಬೇಕು. ತಮ್ಮ ಉತ್ಪನ್ನಗಳ ತಯಾರಿಕೆ, ವಿತರಣೆ ಮತ್ತು ಮಾರಾಟದ ಹಂತಗಳಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸುವುದರೊಂದಿಗೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ತಮ್ಮ ಉತ್ಪನ್ನಗಳನ್ನು ವಿಭಿನ್ನ ರಾಜ್ಯಗಳ ವಿವಿಧ ಔಷದ ಅಂಗಡಿಗಳಿಂದ ಖರೀದಿಸಿ ನಿಯಮಿತವಾಗಿ ಪರೀಕ್ಷೆಗಳಿಗೆ ಒಳಪಡಿಸಲೇಬೇಕು. ಇಂತಹ ಕ್ರಮಗಳಿಂದಾಗಿ ತಮ್ಮ ಉತ್ಪನ್ನಗಳು ನಕಲಿ ರೂಪದಲ್ಲಿ ಮಾರಾಟವಾಗುವುದು ಪತ್ತೆಯಾಗುವುದಲ್ಲದೇ, ಇಂತಹ ಮಾರಾಟಗಾರರ ಮತ್ತು ಇವರಿಗೆ ಔಷದಗಳನ್ನು ಪೂರೈಕೆ ಮಾಡಿದ ಸಂಸ್ಥೆ ಅಥವಾ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲು ಉಪಯುಕ್ತವೆನಿಸಿವುದು. ಇದರೊಂದಿಗೆ ಸಾರ್ವಜನಿಕರೂ ತಾವು ಖರೀದಿಸಿದ ಔಷದಗಳು ನಕಲಿ ಎಂದು ತಿಳಿದುಬಂದಾಗ, ಸಂಬಂಧಿತ ಔಷದ ನಿಯಂತ್ರಣ ಇಲಾಖೆಗೆ ಈ ಬಗ್ಗೆ ಪರಿಪೂರ್ಣ ಮಾಹಿತಿ ನೀಡುವುದು ಅತ್ಯವಶ್ಯಕವೂ ಹೌದು. 

ಔಷದಗಳ ಬಳಕೆದಾರರಿಗೆ ಕಿವಿಮಾತು 

ನಿಮ್ಮ ನಂಬಿಗಸ್ತ ಕುಟುಂಬ ವೈದ್ಯ ಅಥವಾ ತಜ್ಞವೈದ್ಯರ ಸಲಹೆ ಪಡೆಯದೇ ಯಾವುದೇ ಔಷದಗಳನ್ನು ಸೇವಿಸದಿರಿ. ವೈದ್ಯರು ಸೂಚಿಸಿದ ಔಷದಗಳನ್ನು ಹೊರತುಪಡಿಸಿ ಔಷದ ವ್ಯಾಪಾರಿ ನೀಡಬಹುದಾದ ಬದಲಿ ಔಷದಗಳನ್ನು ಖರೀದಿಸದಿರಿ. ಅನಿವಾರ್ಯ ಸಂದರ್ಭಗಳಲ್ಲಿ ವೈದ್ಯರು ಸೂಚಿಸಿದ ಲಭ್ಯವಿಲ್ಲದಿದ್ದಲ್ಲಿ, ನಿಮ್ಮ ವೈದ್ಯರ ಸಲಹೆ ಪಡೆದೇ ಬದಲಿ ಔಷದಗಳನ್ನು ಸೇವಿಸಿ. ಇದಕ್ಕೂ ಮಿಗಿಲಾಗಿ ನೀವು ಖರೀದಿಸಿದ ಔಷದಗಳನ್ನು ವೈದ್ಯರಿಗೆ ತೋರಿಸಿದ ಬಳಿಕ ಸೇವಿಸುವುದು ಹಿತಕರ. 

ಔಷದಗಳನ್ನು ಖರೀದಿಸುವಾಗ ತಪ್ಪದೆ ರಸೀತಿಯನ್ನು ಪಡೆಯಿರಿ. ಇದರಲ್ಲಿ ಔಷದ ತಯಾರಕರ ಹೆಸರು,ವಿಳಾಸಗಳೊಂದಿಗೆ ಬ್ಯಾಚ್ ಸಂಖ್ಯೆ, ತಯಾರಿಸಿದ ದಿನಾಂಕ, ಉಪಯೋಗಿಸಬಹುದಾದ ಅವಧಿಗಳನ್ನು ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳಿ. ವ್ಯಾಪಾರಿ ನೀಡಿದ ಔಷದ ಮೇಲ್ನೋಟಕ್ಕೆ ನೀವು ಹಿಂದೆ ಖರೀದಿಸಿದ್ದ ಔಷದಕ್ಕಿಂತ ಭಿನ್ನವಾಗಿ ಕಾಣುವುದೇ ಎಂದು ಪರಿಶೀಲಿಸಿ. ಈ ಬಗ್ಗೆ ಸಂದೇಹವಿದ್ದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ. 

ಔಷದಗಳನ್ನು ಸೇವಿಸುವಾಗ ಮಾತ್ರೆ- ಕ್ಯಾಪ್ಸೂಲ್- ಸಿರಪ್ ಗಳ ಬಣ್ಣ ಬದಲಾಗಿದ್ದಲ್ಲಿ, ಒಡೆದಿದ್ದಲ್ಲಿ ಅಥವಾ ಹುಡಿಯಾಗಿದ್ದಲ್ಲಿ ಮತ್ತು ಸಿರಪ್ ಗಳ ಬಣ್ಣ- ವಾಸನೆಗಳಲ್ಲಿ ಬದಲಾವಣೆ ಕಂಡುಬಂದಲ್ಲಿ ಸೇವಿಸದಿರಿ. ಇಂತಹ ದೋಷಗಳ ಬಗ್ಗೆ ಇವುಗಳ ಅಯಾರಕರಿಗೆ ತಿಳಿಸುವುದು ನಿಮ್ಮ ಹೊನೆಗಾರ್ಕೆಯೂ ಹೌದು. 

ಗ್ರಾಮೀಣ ಮತ್ತು ನಗರಗಳ ಹೊರವಲಯಗಳಲ್ಲಿ ವೃತ್ತಿಯನ್ನು ನಡೆಸುವ, ಕನಿಷ್ಠ ಮೊತ್ತದ ಹಣವನ್ನು ಅಪ್ಡೆದು ಗರಿಷ್ಟ ಪ್ರಮಾಣದ ಔಷದಗಳನ್ನು ನೀಡುವ "ನಕಲಿ ವೈದ್ಯರು" ನೀಡುವ ಔಷದಗಳು ಹೆಚ್ಚಾಗಿ ಕಳಪೆ ದರ್ಜೆಯದ್ದೇಆಗಿರುತ್ತವೆ. ಒಂದಿಷ್ಟು ಅಧಿಕ ಹಣವನ್ನು ವ್ಯಯಿಸಿದರೂ, ಪದವೀಧರ- ನೊಂದಾಯಿತ ವೈದ್ಯರ ಸಲಹೆ- ಚಿಕಿತ್ಸೆ ಪಡೆಯುವುದು ನಿಸ್ಸಂದೇಹವಾಗಿಯೂ ಆರೋಗ್ಯಕರ. 

ಜಾಹೀರಾತಿನ ಬಲದಿಂದಲೇ ಮಾರಾಟವಾಗುವ ಅದರಲ್ಲೂ ವಿಶೇಷವಾಗಿ "ಲೈಂಗಿಕ ಶಕ್ತಿವರ್ಧಕ" ಗಳು, ದುಬಾರಿ ಬೆಲೆಯ ನಕಲಿ ಔಷದಗಳಾಗಿರುವ ಸಾಧ್ಯತೆಗಳೇ ಹೆಚ್ಚು. ಅಂತೆಯೇ ಶಾಶ್ವತ ಪರಿಹಾರವಿಲ್ಲದ ಕಾಯಿಲೆಗಳನ್ನು ಗುಣಪಡಿಸುವುದಾಗಿ ಬೊಗಳೆ ಬಿಡುವ ನಕಲಿ ವೈದ್ಯರು ನೀಡುವ ಔಷದಗಳು ನಕಲಿಯೇ ಹೊರತು ಅಸಲಿಯಲ್ಲ . 

ನಿಮ್ಮ ಎತ್ತರವನ್ನು ಹೆಚ್ಚಿಸುವ, ತೂಕವನ್ನು ಹೆಚ್ಚಿಸುವ ಅಥವಾ ಇಳಿಸುವ, ಕೊಬ್ಬಿನಿಂದ ಉಬ್ಬಿದ ದೇಹವನ್ನು ತೆಳ್ಳಗಾಗಿಸುವ ಅದ್ಭುತ ಔಷದಗಳ ಜಾಹೀರಾತುಗಳನ್ನು ನಂಬಿ, ನಕಲಿ- ಕಳಪೆ ಔಷದ ತಯಾರಕರನ್ನು ಪರೋಕ್ಷವಾಗಿ ಪ್ರೋತ್ಸಾಹಿಸಬೇಡಿ. 

ಅಂತಿಮವಾಗಿ ಅನಾರೋಗ್ಯ ಪೀಡಿತ ಜನತೆಗೆ "ಜೀವರಕ್ಷಕ' ಎನಿಸಬೇಕಾದ ಔಷದಗಳು, ನಕಲಿ ಔಷದ ತಯಾರಕರ "ಕೈವಾಡ" ದಿಂದ "ಜೀವ ಭಕ್ಷಕ" ಎಣಿಸುತ್ತಿರುವುದು ಜನಸಾಮಾನ್ಯರಿಗೆ "ಔಷದಂ ಜಾಹ್ನವೀ ತೋಯಂ, ವೈದ್ಯೋ ನಾರಾಯಣೋ ಹರಿ" ಎನ್ನುವ ನಂಬಿಕೆಯನ್ನೇ ಸುಳ್ಳಾಗಿಸುತ್ತಿರುವುದು ನಿಜಕ್ಕೂ ವಿಷಾದನೀಯ. 

ಡಾ . ಸಿ . ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೬- ೧೦- ೨೦೦೩ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ . 


2 comments: