Friday, December 20, 2013

Exercise daily- Stay healthy





                 ವ್ಯಾಯಾಮ ಮಾಡಿ- ಆರೋಗ್ಯವನ್ನು ಕಾಪಾಡಿ 

ಯೌವ್ವನದಲ್ಲಿ ಸಾಕಷ್ಟು ಸಂಪಾದಿಸುತ್ತಿರುವಾಗಲೇ ಒಂದಿಷ್ಟು ಹಣವನ್ನು ಮುಂದೆ ವೃದ್ಧಾಪ್ಯದಲ್ಲಿ ಆಸರೆಯಾದೀತೆಂದು ಉಳಿತಾಯ ಮಾಡುವಂತೆಯೇ, ಬಾಲ್ಯದಿಂದಲೇ ಪ್ರತಿನಿತ್ಯ ಒಂದಿಷ್ಟು ಸಮಯವನ್ನು ವ್ಯಾಯಾಮ- ಕ್ರೀಡೆಗಳಿಗಾಗಿ ವಿನಿಯೋಗಿಸಿದಲ್ಲಿ ಮುಂದೆ ವೃದ್ಧಾಪ್ಯದಲ್ಲೂ ನಿಮ್ಮ ಆರೋಗ್ಯವನ್ನು ಉನ್ನತ ಸ್ತರದಲ್ಲಿ ಕಾಪಾಡಲು ಸಹಕಾರಿಯಾಗುವುದು. ಇದಕ್ಕೆ ತಪ್ಪಿದಲ್ಲಿ ನೀವು ಗಳಿಸಿ ಉಳಿಸಿದ ಹಣವನ್ನು,ಮುಂದೆ ನಿಮ್ಮನ್ನು ಕಾಡಬಹುದಾದ ಅನಾರೋಗ್ಯದ ಸಮಸ್ಯೆಗಳಿಗೆ ವಿನಿಯೋಗಿಸಬೇಕಾಗುವುದು ಎನ್ನುವುದನ್ನು ಮರೆಯದಿರಿ. 
-----------                ----------          -------------------             --------------           ----------              --------------                  ---------------        ---------

 ಪ್ರತಿನಿತ್ಯ ನಿಗದಿತ ಸಮಯದಲ್ಲಿ ನಿಯಮಿತವಾಗಿ ಶಾರೀರಿಕ ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ನಿರತರಾಗುವುದು, ನಿಸ್ಸಂದೆಹವಾಗಿ ಹಾಗೂ ನಿರಂತರವಾಗಿ ನಿಮ್ಮ ಆರೋಗ್ಯ ರಕ್ಷಣೆಯಲ್ಲಿ ಮಹತ್ವಪೂರ್ಣ ಪಾತ್ರವನ್ನು ವಹಿಸಬಲ್ಲದು. ಅತ್ಯಾಧುನಿಕ ಸಂಶೋಧನೆಗಳ ಫಲವಾಗಿ ನಮಗಿಂದು ಲಭ್ಯವಾಗಿರುವ ಅದ್ಭುತ ರೋಗನಿರೋಧಕ- ರೋಗ ನಿವಾರಕ ಔಷದಗಳಿಗಿಂತಲೂ, ದೈನಂದಿನ ಶಾರೀರಿಕ ವ್ಯಾಯಾಮವು ನಿಮ್ಮನ್ನು ರೋಗರಹಿತರನ್ನಾಗಿರಿಸಲು ಅತ್ಯಂತ ಪರಿಣಾಮಕಾರಿ ಎನಿಸಬಲ್ಲದು. 

ಪ್ರತಿನಿತ್ಯ ತಪ್ಪದೆ ಮಾಡುವ ಶಾರೀರಿಕ ವ್ಯಾಯಾಮದಿಂದ ಪರಿಪೂರ್ಣ "ದೈಹಿಕ ಕ್ಷಮತೆ" (Physical fitness) ಲಭಿಸುವುದರಲ್ಲಿ ಸಂದೇಹವಿಲ್ಲ. ಆದರೆ ಇದಕ್ಕಾಗಿ ಒಂದಿಷ್ಟು ಶಾರೀರಿಕ ಶ್ರಮದೊಂದಿಗೆ, ಸಾಕಷ್ಟು ಬೆವರಿಳಿಸಬೇಕಾಗುವುದು ಅನಿವಾರ್ಯ!. 

ದೈಹಿಕ ಕ್ಷಮತೆ ಎಂದರೇನು?

ಕಿಂಚಿತ್ ಶಾರೀರಿಕ ಶ್ರಮದ ಕೆಲಸ ಮಾಡಿದೊಡನೆ ಆಯಾಸವಾಗುವುದು, ಕ್ಷಿಪ್ರ ನದಿಗೆ ಅಥವಾ ಎತ್ತರವನ್ನು ಏರಿದಾಕ್ಷಣ ಎದುಸಿರು ಬಾಧಿಸುವುದು, ಅರ್ಧ ಗಂಟೆಯ ಶ್ರಮದ ಕೆಲಸ ಮಾಡಿದಲ್ಲಿ ಒಂದು ಗಂಟೆಯ ವಿಶ್ರಾಂತಿಯನ್ನು ಬಯಸುವುದು ಹಾಗೂ ಆಲಸ್ಯ ಮತ್ತು ಸೋಮಾರಿತನಗಳು ನಿಮ್ಮಲ್ಲಿದ್ದರೆ, ನಿಮ್ಮ ದೈಹಿಕ ಕ್ಷಮತೆಯು ಕನಿಷ್ಠ ಮಟ್ಟದಲ್ಲಿದೆ ಎಂದರ್ಥ. 

ನಿರಾಯಾಸವಾಗಿ ನಿಮ್ಮ ದೈನಂದಿನ ಕೆಲಸಗಳನ್ನು ಸಮರ್ಪಕವಾಗಿ ಮಾಡಿ ಮುಗಿಸಿದ ಬಳಿಕವೂ, ತುರ್ತು ಅಗತ್ಯಕ್ಕಾಗಿ ಒಂದಿಷ್ಟು "ಶಕ್ತಿ" (Energy) ಯನ್ನು ಉಳಿಸಿಕೊಳ್ಳಬಲ್ಲ ಸಾಮರ್ಥ್ಯ ನಿಮ್ಮಲ್ಲಿ ಇದ್ದಲ್ಲಿ, ನಿಮ್ಮ ದೈಹಿಕ ಕ್ಷಮತೆಯು ಉನ್ನತ ಮಟ್ಟದಲ್ಲಿ ಇದೆಯೆಂದು ತಿಳಿಯಿರಿ. 

ಪರಿಪೂರ್ಣ ದೈಹಿಕ ಕ್ಷಮತೆ ಲಭ್ಯವಾಗಬೇಕಿದ್ದಲ್ಲಿ, ನಿಮ್ಮ ಹೃದಯ, ರಕ್ತನಾಳಗಳು, ಶ್ವಾಸಕೋಶಗಳು ಮತ್ತು ಶರೀರದ ಮಾಂಸಪೇಶಿಗಳು ತಮ್ಮ ಕಾರ್ಯಕ್ಷಮತೆಯ ಉತ್ತುಂಗದಲ್ಲಿರುವುದು ಅವಶ್ಯ. ದೀರ್ಘಕಾಲೀನ ತೀವ್ರ ಶಾರೀರಿಕ ವ್ಯಾಯಾಮದಿಂದ ಮಾತ್ರ ನೀವು ಈ ಸ್ಥಿತಿಯನ್ನು ತಲುಪಲು ಸಾಧ್ಯ. 

ಜನಸಾಮಾನ್ಯರು ನಂಬಿರುವಂತೆ ತಮ್ಮ ದೈನಂದಿನ ಕೆಲಸಕಾರ್ಯಗಳಲ್ಲಿ ಮಹಡಿ ಏರುವುದು- ಇಳಿಯುವುದು, ಸಾಕಷ್ಟು ದೂರ ನಡೆದುಕೊಂಡು ಹೋಗುವುದು, ಬಾವಿಯಿಂದ ನೀರೆಳೆಯುವುದು, ಬಟ್ಟೆ ಒಗೆಯುವುದು ಇತ್ಯಾದಿ ಕೆಲಸಗಳನ್ನು ಶಾರೀರಿಕ ವ್ಯಾಯಾಮದ ವ್ಯಾಪ್ತಿಯಲ್ಲಿ ಸೇರಿಸಲಾಗದು. ಏಕೆಂದರೆ ಇಂತಹ ಶ್ರಮದಿಂದ ಏಕಪ್ರಕಾರವಾಗಿ ನಮ್ಮ ಹೃದಯ- ರಕ್ತನಾಳಗಳು, ಶ್ವಾಸಕೋಶಗಳು ಹಾಗೂ ಮಾಂಸಪೇಶಿಗಳು ತಮ್ಮ ಕಾರ್ಯಕ್ಷಮತೆಯ ಉತ್ತುಂಗ ಸ್ಥಿತಿಯನ್ನು ತಲುಪಲು ಸಾಧ್ಯವಾಗುವುದಿಲ್ಲ. 

ದೈಹಿಕ ಕ್ಷಮತೆ ಅವಶ್ಯಕವೇ?

ಇತ್ತೀಚಿನ ಕೆಲ ವರ್ಷಗಳಿಂದ ಅನೇಕ ವಿಧದ ಗಂಭೀರ- ಮಾರಕ ಕಾಯಿಲೆಗಳು ೨೦ ರಿಂದ ೩೦ ವರ್ಷ ವಯಸ್ಸಿನವರನ್ನು ಕಾಡುತ್ತಿರಲು, "ನಿಷ್ಕ್ರಿಯತೆ " (Inactivity) ಯೇ ಕಾರಣವೆಂದು ವೈದ್ಯಕೀಯ ಅಧ್ಯನಗಳಿಂದ ತಿಳಿದುಬಂದಿದೆ. ಏಕೆಂದರೆ ಈ ಹಿಂದೆ ಸಾಕಷ್ಟು ಶಾರೀರಿಕ ಶ್ರಮಕ್ಕೆ ಅವಕಾಶವಿದ್ದಂತಹ ಕೆಲಸಗಳನ್ನಿಂದು ಸ್ವಯಂಚಾಲಿತ ಯಂತ್ರಗಳನ್ನು ಬಳಸಿ ಮಾಡಲಾಗುತ್ತಿದೆ. ಆದರೆ ಈ ಐಶಾರಾಮಿ ಜೀವನಶೈಲಿಯಿಂದಾಗಿ ನಮ್ಮ ಸಂಪೂರ್ಣ ಆಯುಷ್ಯವನ್ನು ರೋಗರಹಿತರಾಗಿ ಆಸ್ವಾದಿಸಲು ನಾವಿಂದು ವಿಫಲರಾಗಿರುವುದು ನಿಜ. ಸುಖ ಸೌಲಭ್ಯದ ಮಟ್ಟವನ್ನು ಇನ್ನಷ್ಟು ಹೆಚ್ಚಿಸುವ ಸಂಶೋಧನೆಗಳಿಗಾಗಿ ಚೆಲ್ಲುತ್ತಿರುವ ಹಣದ ನೂರು ಪಟ್ಟು ಹಣವನ್ನು, ಇಂತಹ ಸಾಧನಗಳ ಬಳಕೆಯಿಂದ ನಮ್ಮನ್ನು ಕಾಡುತ್ತಿರುವ ಕಾಯಿಲೆಗಳ ಚಿಕಿತ್ಸೆಗಾಗಿ ವ್ಯಯಿಸುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿಇದರೊಂದಿಗೆ "ಮೂರ್ಖರ ಪೆಟ್ಟಿಗೆ" ಎಂದು ಕರೆಯಲ್ಪಡುವ ಟೆಲಿವಿಷನ್ ಎನ್ನುವ ಮನೋರಂಜನಾ ಸಾಧನವು ತನ್ನ ಜನಪ್ರಿಯತೆಯೊಂದಿಗೆ, ನಮ್ಮಲ್ಲಿ ನಿಷ್ಕ್ರಿಯತೆಯ ಭೂತವನ್ನು ಶಾಶ್ವತವಾಗಿ ನೆಲೆಯೂರಿಸಿದೆ. ಈ ನಿಷ್ಕ್ರಿಯತೆ ಹಾಗೂ ಐಶಾರಾಮಿ ಜೀವನಶೈಲಿಯಿಂದಾಗಿ ನಮ್ಮ "ರೋಗನಿರೋಧಕ ಶಕ್ತಿ" ವಿನಾಶದ ಅಂಚನ್ನು ತಲುಪಿರುವುದು ಅಷ್ಟೇ ಸತ್ಯ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಶಾರೀರಿಕ ಕ್ಷಮತೆ ಹಾಗೂ ಆರೋಗ್ಯದ ರಕ್ಷಣೆಗಾಗಿ ದಿನದಿನ ವ್ಯಾಯಾಮ ಅನಿವಾರ್ಯವೂ ಹೌದು. 

ಜೀವನಶೈಲಿ: ಅಂದು- ಇಂದು 

ಸೂರ್ಯೋದಯದಿಂದ ಸೂರ್ಯಾಸ್ತದ ತನಕ ತನ್ನ ಮನೆ, ಹೊಲ, ದನಕರುಗಳ ಪಾಲನೆಯೊಂದಿಗೆ ವ್ಯಾಪಾರ ಮತ್ತಿತರ ವೃತ್ತಿಗಳನ್ನು ಪ್ರಾಮಾಣಿಕವಾಗಿ ನಡೆಸುತ್ತಿದ್ದ, ದಿನವಿಡೀ ತನ್ನ ಆಳುಗಳೊಂದಿಗೆ ಹೆಗಲಿಗೆ ಹೆಗಲುಕೊಟ್ಟು ದುಡಿಯುತ್ತಿದ್ದ ಮನೆಯೊಡೆಯರು ಆರೋಗ್ಯವಂತರಾಗಿದ್ದರು. ಹತ್ತು ಮಕ್ಕಳನ್ನು ಹೊತ್ತು, ಹೆತ್ತು, ಸಾಕಿ ಸಲಹಿದ ಹಾಗೂ ದಿನವಿಡೀ ತನ್ನ ಸಂಸಾರಕ್ಕಾಗಿ ಗಾಣಕ್ಕೆ ಕಟ್ಟಿದ ಎತ್ತಿನಂತೆ ದುಡಿಯುತ್ತಿದ್ದ ಮಾತೆಯರು ರೋಗರಹಿತರಾಗಿದ್ದರು. ಮೈಲುಗಟ್ಟಲೆ ದೂರದಲ್ಲಿರುವ ಶಾಲೆಗೆ ಬುತ್ತಿ ಹೊತ್ತು ನಡೆದುಕೊಂಡೇ ಹೋಗಿಬರುತ್ತಿದ್ದ ಮಕ್ಕಳು ದಷ್ಟಪುಷ್ಟರಾಗಿದ್ದರು. ನಮ್ಮ ಹಿರಿಯರು ಯಥೇಚ್ಚವಾಗಿ ಹಾಲು, ಮೊಸರು, ಬೆಣ್ಣೆ ಮತ್ತು ತುಪ್ಪಗಳನ್ನು ಮೆದ್ದರೂ, ಸಾಕಷ್ಟು ಶ್ರಮಪಟ್ಟು ತಿಂದದ್ದನ್ನು ಕರಗಿಸುವ ಕಲೆಯೂ ಇವರಿಗೆ ಕರತಲಾಮಲಕವಾಗಿತ್ತು!. 

ಹಿಂದೆ ತಮ್ಮ ಮಡದಿ- ಮಕ್ಕಳು, ಚಿನ್ನ- ಬೆಳ್ಳಿ, ಆಸ್ತಿ- ಪಾಸ್ತಿಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವುದು ವಾಡಿಕೆಯಾಗಿತ್ತು. ಆದರೆ ನಾವಿಂದು ನಮ್ಮ ಬಿ. ಪಿ, ಡಯಾಬೆಟೆಸ್, ಹಾರ್ಟ್ ಅಟ್ಟಾಕ್, ಆರ್ಥ್ರೈಟಿಸ್, ಸ್ಪಾಂಡಿಲೈಟಿಸ್ ಇತ್ಯಾದಿ ಕಾಯಿಲೆಗಳನ್ನೇ ಬಿರುದು ಬಾವಲಿಗಳಂತೆ ಹೇಳಿಕೊಳ್ಳುವುದು ನಿಜವಲ್ಲವೇ?. 

ಆಹಾರ ಮತ್ತು ಸ್ಥೂಲಕಾಯ 

ನಮಗೆಲ್ಲರಿಗೂ ಒಂದೇ ರೀತಿಯ ಪೋಷಕಾಂಶಗಳು ಅವಶ್ಯವಾದರೂ, ವಯಸ್ಸಿಗನುಗುಣವಾಗಿ ಇವುಗಳ ಪ್ರಮಾಣ ವ್ಯತ್ಯಯವಾಗುವುದು. ತಾರುಣ್ಯದಲ್ಲಿ ಶಾರೀರಿಕ ಬೆಳವಣಿಗೆ ಹಾಗೂ ಹೆಚ್ಚು ಶಕ್ತಿಗಾಗಿ ಅಧಿಕ ಆಹಾರ ಬೇಕಾಗುವುದು. ಅಂತೆಯೇ ಮಹಿಳೆಯರಿಗಿಂತಲೂ ಪುರುಷರು ಹಾಗೂ ಕುಬ್ಜರಿಗಿಂತ ದೈತ್ಯರು ಅಧಿಕ ಆಹಾರವನ್ನು ಸೇವಿಸುವುದು ಸ್ವಾಭಾವಿಕ. ಆದರೆ ನಮ್ಮ ದೈನಂದಿನ ಚಟುವಟಿಕೆಗಳಿಗೆ ಅವಶ್ಯವಿರುವುದಕ್ಕಿನತ ಹೆಚ್ಚು ಕ್ಯಾಲರಿಗಳಿರುವ ಮತ್ತು ಅತಿ ಆಹಾರ ಸೇವನೆಯಿಂದ ಶರೀರದ ತೂಕವು ಹೆಚ್ಚುವುದು. 

ಬಹುತೇಕ ಸ್ಥೂಲ ದೇಹಿಗಳು ನಂಬಿರುವಂತೆ ಅವರ ಶಾರೀರಿಕ ಪ್ರಕ್ರಿಯೆಗಳಲ್ಲಿನ ದೋಷವೇ ಅವರಲ್ಲಿ ಬೊಜ್ಜು ಸಂಗ್ರಹವಾಗಳು ಕಾರಣ ಎನ್ನುವುದು ನಿಜವಲ್ಲ. ಅಮ್ನುಶ್ಯನ ಶರೀರದಲ್ಲಿರುವ ಬೊಜ್ಜಿನ ಕಣಗಳು ಯೌವ್ವನದಲ್ಲಿ ಕ್ಷಿಪ್ರವಾಗಿ ವೃದ್ಧಿಸುತ್ತವೆ. ಈ ಪ್ರಕ್ರಿಯೆ ಇದೇ ರೀತಿಯಲ್ಲಿ ಮುಂದುವರೆದಲ್ಲಿ, ಶಾಶ್ವತವೆನಿಸುವ ಸಂಭವವಿದೆ. ನೀವೆಲ್ಲರೂ ನಂಬಿರುವಂತೆ "ದಷ್ಟಪುಷ್ಟ ಮಗು ಎಂದರೆ ಆರೋಗ್ಯವಂತ ಮಗು" ಎನ್ನುವುದು ಮಿಥ್ಯೆ. 

ಸ್ಥೂಲ ದೇಹಿಗಳಲ್ಲಿ ಬೊಜ್ಜು ದ್ವಿಗುಣಿಸುವ ವೇಗವನ್ನು ತಡೆಯುವ ಏಕಮಾತ್ರ ಸೂತ್ರವೇ, ಆಹಾರ ಸೇವನೆಯಲ್ಲಿ ನಿಯಂತ್ರಣ ಮತ್ತು ದಿನದಿನ ವ್ಯಾಯಾಮ ಆಟವಾ ಕ್ರೀಡೆ. 

ಕೊಬ್ಬನ್ನು ಕರಗಿಸುವುದೆಂತು? 

ಮಾನವ ಶರೀರದಲ್ಲಿರುವ ಸುಮಾರು ಅರ್ಧ ಕಿಲೋ ಕೊಬ್ಬನ್ನು ಕರಗಿಸಲು ಕನಿಷ್ಠ ೩೫೦೦ ಕ್ಯಾಲರಿಗಳನ್ನು ವಿನಿಯೋಗಿಸಬೇಕಾಗುವುದು. ಪ್ರತಿದಿನ ೩೦ ನಿಮಿಷಗಳ ಕಾಲ ತೀವ್ರ ವ್ಯಾಯಾಮ ಮಾಡಿದಲ್ಲಿ, ಗರಿಷ್ಠ ೫೦೦ ಕ್ಯಾಲರಿಗಳನ್ನು ಕರಗಿಸುವುದು ಸಾಧ್ಯ. ಅರ್ಥಾತ್ ಒಂದು ವಾರದಲ್ಲಿ ದಿನನಿತ್ಯ ೩೦ ನಿಮಿಷಗಳ ಕಾಲ ವ್ಯಾಯಾಮ ಮಾಡಿದಲ್ಲಿ, ಅತಿ ಹೆಚ್ಚೆಂದರೆ ಅರ್ಧ ಕಿಲೋಗ್ರಾಂ ಕೊಬ್ಬು ಕರಗುತ್ತದೆ. ಆದರೆ ಇದರೊಂದಿಗೆ ನೀವು ಸೇವಿಸುವ ದೈನಂದಿನ ಆಹಾರದಲ್ಲಿ ನಿಮ್ಮ ದಿನನಿತ್ಯದ ಚಟುವಟಿಕೆಗಳಿಗೆ ಅವಶ್ಯವಿರುವಷ್ಟೇ ಪ್ರಮಾಣದ ಕ್ಯಾಲರಿಗಳನ್ನು ಸೇವಿಸುವುದು ಅತೀ ಅವಶ್ಯ. 

ತೀವ್ರ ವ್ಯಾಯಾಮದಿಂದ ಒಂದು ನಿಮಿಷಕ್ಕೆ ನೀವು ವಿನಿಯೋಗಿಸಬಹುದಾದ ಕ್ಯಾಲರಿಗಳಿಗೆ ಒಂದಿಷ್ಟು ಉದಾಹರಣೆಗಳು ಇಂತಿವೆ. ಕ್ಷಿಪ್ರ ನಡಿಗೆ- ಸುಮಾರು ೧೨ ನಿಮಿಷಗಳಲ್ಲಿ ಒಂದು ಕಿ. ಮೀ : ೩.೮ ಕ್ಯಾಲರಿ. ಸೈಕಲ್ ಸವಾರಿ- ೩ ನಿಮಿಷದಲ್ಲಿ ಒಂದು ಕಿ. ಮೀ: ೧೦ ಕ್ಯಾಲರಿ. ಈಜು- ಒಂದು ನಿಮಿಷದಲ್ಲಿ ೨೫ ಮೀ : ೯.೧ ಕ್ಯಾಲರಿ. ಜಾಗಿಂಗ್-೬ ನಿಮಿಷದಲ್ಲಿ ಒಂದು ಕಿ. ಮೀ: ೧೦ ಕ್ಯಾಲರಿ. ಓಟ- ೩ ನಿಮಿಷದಲ್ಲಿ ೧ ಕಿ. ಮೀ: ೧೬ ಕ್ಯಾಲರಿ. ಇದೇ ರೀತಿಯಲ್ಲಿ ವಿವಿಧ ವ್ಯಾಯಾಮ ಮತ್ತು ಕ್ರೀಡೆಗಳಿಗೆ ಅನುಗುಣವಾಗಿ ನೀವು ವ್ಯಯಿಸುವ ಕ್ಯಾಲರಿಗಳ ಪ್ರಮಾಣವು ವ್ಯತ್ಯಯವಾಗುವುದು. 

ಆದರೆ ವ್ಯಾಯಾಮದ ಬಳಿಕ "ಯೇ ದಿಲ್ ಮಾಂಗೆ ಮೋರ್" ಎಂದು ಒಂದು ಬಾಟಲಿ ತಂಪು ಪಾನೀಯವೊಂದನ್ನು ಗುತುಕರಿಸಿದಲ್ಲಿ, ಸುಮಾರು ೧೫೦ ಕ್ಯಾಲರಿಗಳು ನಿಮ್ಮ ಉದರವನ್ನು ಸೇರುವುದು ಖಂಡಿತ ಎನ್ನುವುದನ್ನು ಮರೆಯದಿರಿ. 

ಬಹುತೇಕ ಸ್ಥೂಲ ದೇಹಿಗಳು ಹೇಳುವಂತೆ ವ್ಯಾಯಾಮ ಮಾಡುವುದರಿಂದ ಹಸಿವು ಹೆಚ್ಚಾಗಿ, ತಾವು ಸೇವಿಸುವ ಆಹಾರದ ಪ್ರಮಾಣವು ಅಧಿಕವಾಗುವುದು ಎನ್ನುವ ವಿಚಾರ ಸರಿಯಲ್ಲ. ಸದಾ ಚಟುವಟಿಕೆಯಿಂದ ಇರುವ ಸಕ್ರಿಯ ವ್ಯಕ್ತಿಗಳಲ್ಲಿ , ಹಸಿವೆಯು ಶರೀರಕ್ಕೆ ಅವಶ್ಯವಾದ "ಶಕ್ತಿ' ಯಾ ಪ್ರಮಾಣವನ್ನು ಸೂಚಿಸುತ್ತದೆ. ಆದರೆ ನಿಷ್ಕ್ರಿಯ ಮತ್ತು ಆಲಸಿ ವ್ಯಕ್ತಿಗಳಲ್ಲಿ ಹಸಿವು ಇದರ ಸೂಚನೆಯಲ್ಲ. ಇದೇ ಕಾರಣದಿಂದಾಗಿ ನಿಷ್ಕ್ರಿಯತೆಯ ಪರಿಣಾಮವಾಗಿ ನಿಮ್ಮ ಹಸಿವೆ ಹಾಗೂ ಸೇವಿಸುವ ಆಹಾರದ ಪ್ರಮಾಣ ಕಡಿಮೆಯಾಗುವುದೆನ್ನುವುದು ನಿಜವಲ್ಲ. 

ವ್ಯಾಯಾಮ ಅವಶ್ಯಕವೇ?

ಬಹುತೇಕ ಜನರು ತಮ್ಮ ವಿದ್ಯಾರ್ಥಿ ಜೀವದಲ್ಲಿ ಯಾವುದಾದರೊಂದು ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದರೂ, ವೃತ್ತಿ ಜೀವನ ಪ್ರಾರಂಭವಾದೊಡನೆ ಇದಕ್ಕೆ ವಿದಾಯ ಹೇಳುವುದು ಸ್ವಾಭಾವಿಕ. ಪ್ರಬುದ್ಧ ಪ್ರೌಢ ವಯಸ್ಸಿನಲ್ಲಿ ಪರಿಪೂರ್ಣ ಶಾರೀರಿಕ ಬೆಳವಣಿಗೆಯ ಫಲವಾಗಿ ತಮ್ಮ ಆರೋಗ್ಯ ಉತ್ತಮವಾಗಿದೆ ಎಂದು ಅನೇಕರು ಭ್ರಮಿಸುತ್ತಾರೆ. ಆದರೆ ಕೆಲವೇ ವರ್ಷಗಳಲ್ಲಿ ತಮ್ಮಲ್ಲಿ ಕಂಡುಬರುವ ಶಾರೀರಿಕ ಬದಲಾವಣೆಗಳು ಆಕಸ್ಮಿಕವಾಗಿ ಗಮನಕ್ಕೆ ಬಂದಾಗ ಇಂತಹ ವ್ಯಕ್ತಿಗಳಿಗೆ "ಶಾಕ್" ಹೊಡೆದಂತಾಗುವುದು ಸತ್ಯ. ಇದಲ್ಲದೆ ಗಂಭೀರ- ಮಾರಕ ಕಾಯಿಲೆಗಳು ಪತ್ತೆಯಾದಲ್ಲಿ ಶಾರೀರಿಕ ಸಮಸ್ಯೆಗಳೊಂದಿಗೆ ಮಾನಸಿಕ ನೆಮ್ಮದಿಗೂ ಸಂಚಕಾರ ಬರುವುದರಲ್ಲಿ ಸಂದೇಹವಿಲ್ಲ. 

ಈ ರೀತಿಯ ಸಮಸ್ಯೆಗಳು ಬಂದೆರಗಿದ ಬಳಿಕ ಎಚ್ಚೆತ್ತು ತಮ್ಮ ಆರೋಗ್ಯವನ್ನು ಕಾಪಾಡುವ ಬಗ್ಗೆ ಚಿಂತಿಸುವುದಕ್ಕಿಂತ, ಪ್ರಾರಂಭದಿಂದಲೇ ವ್ಯಾಯಾಮ- ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯವನ್ನು ನಿರಂತರವಾಗಿ ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳುವುದು ಕ್ಷೇಮಕರ. 

ವ್ಯಾಯಾಮದ ಪರಿಣಾಮಗಳು 

ಕ್ರಮಬದ್ಧವಾಗಿ ನೀವು ವ್ಯಾಯಾಮವನ್ನು ಮಾಡಲು ಆರಂಭಿಸಿದಂತೆಯೇ ನಿಮ್ಮ ಶ್ವಾಸೋಚ್ಚ್ವಾಸ ಮತ್ತು ಹೃದಯದ ಬಡಿತದ ಗತಿಗಳು ಹೆಚ್ಚುತ್ತಾ ಹೋಗುತ್ತವೆ. ಈ ಗತಿಯ ವೇಗವು ನೀವು ಮಾಡುತ್ತಿರುವ ವ್ಯಾಯಾಮದ ತೀವ್ರತೆಗೆ ಅನುಗುಣವಾಗಿ ಹೆಚ್ಚುತ್ತದೆ. ತೀವ್ರ ವ್ಯಾಯಾಮದ ಸಂದರ್ಭದಲ್ಲಿ ಶರೀರದ ವಿವಿಧ ಅಂಗಾಂಗಗಳ ಮತ್ತು ಮಾಂಸಪೇಶಿಗಳ ಆಮ್ಲಜನಕದ ಬೇಡಿಕೆಯೂ ಹೆಚ್ಚುವುದು. ಇದರೊಂದಿಗೆ ಶರೀರದಲ್ಲಿ ಉತ್ಪನ್ನವಾಗುವ ತ್ಯಾಜ್ಯ ವಸ್ತುಗಳ ಪ್ರಮಾಣವು ರಕ್ತದಲ್ಲಿ ಸಂಗ್ರಹವಾಗುವ ಪ್ರಮಾಣವೂ ಏರುವುದು. ಈ ಸಂದರ್ಭದಲ್ಲಿ ತ್ಯಾಜ್ಯ ವಸ್ತುಗಳ ವಿಸರ್ಜನೆಯೊಂದಿಗೆ ಜೀವಕಣಗಳಿಗೆ "ಶಕ್ತಿ" ಯನ್ನು ಒದಗಿಸಲು ಅವಶ್ಯವಾದ ಆಮ್ಲಜನಕವನ್ನು ಪೂರೈಸುವ ಕ್ರಿಯೆಯು ನಮ್ಮ ಶ್ವಾಸಕೋಶಗಳು ಮತ್ತು ಹೃದಯದ ಸಂಯುಕ್ತ ಕಾರ್ಯಾಚರಣೆಯಿಂದ ಸಾಧ್ಯವಾಗುತ್ತದೆ. 

ನಾವು ವಿರಮಿಸುತ್ತಿರುವಾಗ ಪ್ರತಿ ನಿಮಿಷದಲ್ಲಿ ೬ ರಿಂದ ೮ ಲೀಟರ್ ಗಳಷ್ಟು ಗಾಳಿಯನ್ನು ಸೇವಿಸುವುದು ಸಹಜ. ಆದರೆ ಕ್ಷಿಪ್ರ ಓಟದಂತಹ ತೀವ್ರ ಶಾರೀರಿಕ ಕ್ರಿಯೆಯ ಸಂದರ್ಭದಲ್ಲಿ ಈ ಪ್ರಮಾಣವು ಪ್ರತಿ ನಿಮಿಷಕ್ಕೆ ೧೦೦ ಲೀಟರ್ ಗಳಿಗೆ ತಲುಪುವುದುಂಟು. ನಮ್ಮ ಹೃದಯದ ಮೂಲಕ ಶ್ವಾಸಕೋಶಕ್ಕೆ ಹರಿದು ಬರುವ ಕಲುಷಿತ ರಕ್ತದಲ್ಲಿನ ತ್ಯಾಜ್ಯಗಳನ್ನು ಹೊರಸೂಸಿ, ಆಮ್ಲಜನಕವನ್ನು ಹೀರಿ ಸಮೃದ್ಧವಾಗಿ ಮತ್ತೆ ಹೃದಯದ ಮೂಲಕ ಸಂಪೂರ್ಣ ಶರೀರಕ್ಕೆ ಸರಬರಾಜಾಗುವುದು. 

ಅವಿರತವಾಗಿ ಮಿಡಿಯುತ್ತಲೇ ಇರುವ ನಮ್ಮ ಹಿಡಿಗಾತ್ರದ ಹೃದಯವು ಸಾಮಾನ್ಯವಾಗಿ ಪ್ರತಿ ನಿಮಿಷದಲ್ಲಿ ೭೦ ರಿಂದ ೮೦ ಬಾರಿ, ಅಂದರೆ ದಿನದಲ್ಲಿ ಲಕ್ಷಕ್ಕೂ ಅಧಿಕ ಬಾರಿ ಬಡಿಯುತ್ತದೆ. ತೀವ್ರ ಶಾರೀರಿಕ ವ್ಯಾಯಾಮದ ಸಂದರ್ಭದಲ್ಲಿ ಈ ಬಡಿತದ ಗತಿ ಏರುವುದರೊಂದಿಗೆ, ಪ್ರತಿ ಬಡಿತದೊಂದಿಗೆ ಹೊರಸೂಸುವ ರಕ್ತದ ಪ್ರಮಾಣವೂ ಹೆಚ್ಚುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡುತ್ತಿರುವುದರಿಂದ ಹೃದಯದ ರಕ್ತನಾಳಗಳ ಕಾರ್ಯಕ್ಷಮತೆಯ ಮಟ್ಟವು( ವ್ಯಾಯಾಮವನ್ನೇ ಮಾಡದವರಿಗಿಂತ ) ಇತರರಿಗಿಂತ ಅತ್ಯುತ್ತಮವಿರುತ್ತದೆ. 

ಇದಲ್ಲದೆ ಕೊಬ್ಬು ತುಂಬಿ ಉಬ್ಬಿರುವ ನಿಮ್ಮ ಹೊಟ್ಟೆ, ನಿತಂಬ, ಸ್ತನಗಳು ಮತ್ತು ಜೋತು ಬಿದ್ದಿರುವ ಮಾಂಸಖಂಡಗಳು ಕ್ರಮೇಣ ಕಠಿಣವಾಗುತ್ತಾ ಬರುವುದರೊಂದಿಗೆ, ನಿಮ್ಮ ಶಕ್ತಿಯ ಪ್ರಮಾಣವೂ ಹೆಚ್ಚುವುದು. ಸ್ವಲ್ಪ ಸಮಯದ ಬಳಿಕ ನಿಮ್ಮ ಆಲಸ್ಯ- ಸೋಮಾರಿತನಗಳು ದೂರವಾಗಿ, ಶಾರೀರಿಕ- ಮಾನಸಿಕ ಉಲ್ಲಾಸ, ಉತ್ಸಾಹ ಮತ್ತು ಚಿತನ್ಯಗಳು ವೃದ್ಧಿಸುತ್ತವೆ. ತತ್ಪರಿಣಾಮವಾಗಿ ದಿನವಿಡೀ ದುಡಿದ ಬಳಿಕವೂ,ನೀವು ಅನಾಯಾಸವಾಗಿ ಇನ್ನಷ್ಟು ಕೆಲಸ ಮಾಡುವ ಸಾಮರ್ಥ್ಯವನ್ನು ಗಳಿಸಿವಿರಿ. ಜತೆಗೆ ನಿಮ್ಮ ಶರೀರದಲ್ಲಿ ಸಂಗ್ರಹವಾಗಿರುವ ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರೈಡ್ ಗಳ ಪ್ರಮಾಣ ಕಡಿಮೆಯಾಗುವುದರಿಂದ, ಹೃದಯ- ರಕ್ತನಾಳಗಳ ಕಾಯಿಲೆಗಳು ಬಾಧಿಸುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಅಂಶವು ನಿಯಂತ್ರಣದಲ್ಲಿರುವುದರೊಂದಿಗೆ, ಸಾಮಾನ್ಯ ಆರೋಗ್ಯದ ಮಟ್ಟವು ಉತ್ತಮಗೊಳ್ಳುವುದು. ಸಾಕಷ್ಟು ಶ್ರಮಪದುವುದರಿಂದಾಗಿ, ಸುಖನಿದ್ರೆಯೂ ಅನಾಯಾಸವಾಗಿ ಬರುವುದು. 

ವ್ಯಾಯಾಮದ ಮೂರು ಹಂತಗಳು 

ಪ್ರಾರಂಭಿಕ ಹಂತ- Warm up- ಯಾವುದೇ ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ತೊಡಗುವ ಮೊದಲು ಶರೀರದ ಮಾಂಸಪೇಶಿಗಳು, ಅವಯವಗಳು ಮತ್ತು ಅಸ್ಥಿಸಂಧಿಗಳು ತುಸು ಸಡಿಲವಾಗಿ, ಶರೀರದ ರಕ್ತಸಂಚಾರ ಹಾಗೂ ಉಷ್ಣತೆಗಳನ್ನು ಹೆಚ್ಚಿಸುವುದರೊಂದಿಗೆ, ಒಂದಿಷ್ಟು ಬೆವರು ಬರಿಸುವ ಈ ಹಂತವನ್ನು ಪರಿಪಾಲಿಸಿವಿಡಿ ಅತ್ಯವಶ್ಯಕವೂ ಹೌದು. 

ಮುಖ್ಯ ಹಂತ - Main event - ನೀವು ಆರಿಸಿಕೊಂಡ ವ್ಯಾಯಾಮ ಅಥವಾ ಕ್ರೀಡೆಯನ್ನು ಕ್ರಮಬದ್ಧವಾಗಿ ಪಾಲಿಸುವ ಹಂತ. 

ಮುಕ್ತಾಯದ ಹಂತ - Cooling down - ಈ ಹಂತದಲ್ಲಿ ತೀವ್ರ ಗತಿಯಲ್ಲಿರುವ ನಿಮ್ಮ ಶ್ವಾಸೋಚ್ಚ್ವಾಸ ಮತ್ತು ಹೃದಯದ ಬಡಿತವನ್ನು ಮತ್ತೆ ಸಾಮಾನ್ಯ ಸ್ಥಿತಿಗೆ ತರುವ ಹಂತ. 

ಯಾವುದೇ ಕ್ರೀಡೆ ಅಥವಾ ವ್ಯಾಯಾಮಗಳಲ್ಲಿ ತೊಡಗುವಾಗ ಈ ಮೂರು ಹಂತಗಳನ್ನು ಕಡ್ಡಾಯವಾಗಿ ಪರಿಪಾಲಿಸುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಹಿತಕರವೆನಿಸುವುದು. ಇದರೊಂದಿಗೆ ತಜ್ಞರ ಮಾರ್ಗದರ್ಶನ ಮತ್ತು ಅವಶ್ಯಕತೆಯಿದ್ದಲ್ಲಿ ವೈದ್ಯರ ಸಲಹೆಯನ್ನು ಪಡೆಯುವುದು ಅನಾವಶ್ಯಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಉಪಯುಕ್ತವೆನಿಸುವುದು. 

ಹೊಸಬರಿಗೆ ಕಿವಿಮಾತು 

ನೀವು ಇದುವರೆಗೆ ಯಾವುದೇ ರೀತಿಯ ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ಭಾಗವಹಿಸಿದ ಅನುಭವ ಇಲ್ಲದಿದ್ದಲ್ಲಿ, ನಿಮ್ಮ ವಯಸ್ಸು ೩೦ ವರ್ಷ ಮೀರಿದಲ್ಲಿ, ನಿಮ್ಮ ತಂದೆ, ತಾಯಿ ಅಥವಾ ನಿಮಗೆ ಅಧಿಕ ರಕ್ತದೊತ್ತಡ, ಹೃದಯ- ರಕ್ತನಾಳಗಳ ಕಾಯಿಲೆಗಳು, ಮಧುಮೇಹ, ಅಪಸ್ಮಾರ, ಆಸ್ತಮಾ ಹಾಗೂ ತಾವ್ರ ರಕ್ತಹೀನತೆಯಂತಹ ಕಾಯಿಲೆಗಳು ಇದ್ದಲ್ಲಿ, ನೀವು ವ್ಯಾಯಾಮ- ಕ್ರೀಡೆಗಳಲ್ಲಿ ಭಾಗವಹಿಸುವ ಮುನ್ನ ವೈದ್ಯರಿಂದ ಶಾರೀರಿಕ ತಪಾಸಣೆಯನ್ನು ಮಾಡಿಸಿಕೊಳ್ಳಿ. 

ಉದಾಹರಣೆಗೆ ಮಧುಮೇಹ ರೋಗಿಗಳಲ್ಲಿ ತೀವ್ರ ವ್ಯಾಯಾಮದ ಪರಿಣಾಮವಾಗಿ ರಕ್ತದಲ್ಲಿನ ಸಕ್ಕರೆಯ ಅಂಶವು ಹಠಾತ್ ಕುಸಿಯುವ ಸಾಧ್ಯತೆಗಳಿವೆ. ಅಂತೆಯೇ ಆಸ್ತಮಾ ರೋಗಿಗಳು ಚಳಿಗಾಲದಲ್ಲಿ ಬೆಳಗಿನ ಜಾವ ತೀವ್ರ ನಡಿಗೆಯಂತಹ ವ್ಯಾಯಾಮ ಮಾಡುವುದರಿಂದ ಆಸ್ತಮಾ ಉಲ್ಬಣಿಸುವ ಸಾಧ್ಯತೆಗಳಿವೆ. ಇಂತಹ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ತಜ್ಞ ವೈದ್ಯರ ಸಲಹೆ ಪಡೆಯುವುದು ಹಿತಕರವೆನಿಸುವುದು. 

ದಿನಪತ್ರಿಕೆಗಳಲ್ಲಿ ಮತ್ತು ಟಿ ವಿ ಚಾನಲ್ ಗಳಲ್ಲಿ ಪ್ರಕಟವಾಗುವ "ತೂಕ ಇಳಿಸುವ" ಅದ್ಭುತ ಔಷದಗಳ  ಜಾಹೀರಾತುಗಳನ್ನು ನಂಬಿ, ದುಬಾರಿ ಹಣವನ್ನು ತೆತ್ತು ಇವುಗಳನ್ನು ಖರೀದಿಸಿ ಸೇವಿಸಿದಲ್ಲಿ ನಿಮ್ಮ ಶರೀರದ ತೂಕ ಕ್ಷಿಪ್ರಗತಿಯಲ್ಲಿ ಇಳಿಯುವುದು ಅಸಾಧ್ಯ. ಆದರೆ ನಿಮ್ಮ ಹಣದ ಚೀಲದ ತೂಕವು ಕ್ಷಣ ಮಾತ್ರದಲ್ಲಿ ಇಳಿಯುವುದು ಸತ್ಯ. 

ಪಾಶ್ಚಾತ್ಯ ದೇಶಗಳ ಆಧುನಿಕ ಸಂಶೋಧನೆಗಳ ಫಲವೆಂದು ಘೋಷಿಸುವ, ನಿಮ್ಮ ಹೊಟ್ಟೆ,ತೊಡೆ, ನಿತಂಬಗಳು ಮತ್ತು ಸ್ಥನಗಳಮೇಲೆ ಹಚ್ಚಬಹುದಾದ ಮುಲಾಮುಗಳಿಂದ ನಿಮ್ಮ ಶರೀರದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುವುದು ಸುಲಭಸಾಧ್ಯ ಎನ್ನುವುದು ಅಪ್ಪಟ ಸುಳ್ಳು. ಸಾಕಷ್ಟು ಬೆವರನ್ನು ಸುರಿಸದೇ, ಅರ್ಥಾತ್ ಶ್ರಮಪಡದೇ, ಯಾವುದೇ ಪದ್ದತಿಯ ಗುಳಿಗೆ, ಚೂರ್ಣ, ಕ್ಯಾಪ್ಸೂಲ್ ಇತ್ಯಾದಿಗಳನ್ನು ಸೇವಿಸಿ ನಿಮ್ಮ ತೂಕವನ್ನು ಅನಾಯಾಸವಾಗಿ ಇಳಿಸಿಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿ, ನಿಮ್ಮ ಹಣದ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ಕಳೆದುಕೊಳ್ಳದಿರಿ. 

ಶಾರೀರಿಕ ಶ್ರಮವಿಲ್ಲದೇ ಕೃತಕ ವಿಧಾನಗಳಿಂದ ನಿಮ್ಮ ಶರೀರದಿಂದ ಸಾಕಷ್ಟು ಬೆವರಿಳಿಸಿದಾಗ ನಿಮ್ಮ ತೂಕ ಕಡಿಮೆಯಾಗುವುದು ನಿಜ. ಆದರೆ ಈ ಪ್ರಯೋಗದ ಬಳಿಕ ನೀವು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದೊಡನೆ, ಕಡಿಮೆಯಾಗಿರುವುದೆಂದು ನೀವು ನಂಬಿರುವ "ತೂಕ" ವು ಮತ್ತೆ ಹೆಚ್ಚುವುದು ಕೂಡಾ ಅಷ್ಟೇ ನಿಜ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ  ಪತ್ರಿಕೆಯ ೧೭-೦೭-೨೦೦೩ ರ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ 
ಅಂಕಣದಲ್ಲಿ ಪ್ರಕಟಿತ ಲೇಖನ. 

No comments:

Post a Comment