Saturday, December 28, 2013

INDIA opposes ban on ENDOSULPHAN!



 ಎಂಡೋಸಲ್ಫಾನ್  ನಿಷೇಧಕ್ಕೆ ಭಾರತದ ಪ್ರತಿರೋಧವೇಕೆ?

ದಿನನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸ ನಿಮ್ಮಲ್ಲಿದ್ದಲ್ಲಿ, ಆಗಾಗ ಪ್ರಕಟವಾಗುವ "ಎಂಡೋಸಲ್ಪ್ಹಾನ್ ಗೆ ಮತ್ತೊಂದು ಬಲಿ" ಎನ್ನುವ ಸುದ್ದಿಯನ್ನು ನೀವೂ ಓದಿರಲೇಬೇಕು. ಈ ಮಾರಕ ಕೀಟನಾಶಕದ ಹಾವಳಿಗೆ ಈಗಾಗಲೇ ನೂರಾರು ಅಮಾಯಕರು ಬಲಿಯಾಗಿದ್ದರೂ, ನಿಷೇಧಿತ ಕೀಟನಾಶಕಗಳ ಪಟ್ಟಿಯಲ್ಲಿ ಇದನ್ನು ಸೇರಿಸಲು ಭಾರತವಿ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 
-----------            --------------               -----------                -------------                 ---------             

 ಬಹುರಾಷ್ಟ್ರೀಯ ಸಂಸ್ಥೆಗಳು ಭಾರತದಲ್ಲಿ ತಯಾರಿಸಿ ಮಾರಾತಮಾದುತ್ತಿದ್ದ ಲಘುಪಾನೀಯಗಳಲ್ಲಿ ಅಪಾಯಕಾರಿ ಕೀಟನಾಶಕಗಳ ಅಂಶ ಪತ್ತೆಯಾದ ವರದಿಗಳು ಪ್ರಕಟವಾದೊಡನೆ ಉದ್ಭವಿಸಿದ್ದ "ಕೋಲಾಹಲ" ವನ್ನು ನೀವೂ ಮರೆತಿರಲಾರಿರಿ. ಅದೇ ರೀತಿಯಲ್ಲಿ ಇದೇ ದಶಕದ ಆದಿಯಲ್ಲಿ ಕಾಸರಗೋಡು ಸಮೀಪದ ಪದ್ರೆಯ ಆಸುಪಾಸಿನ ನೂರಾರು ನಿವಾಸಿಗಳು ಎಂಡೋಸಲ್ಪ್ಹಾನ್ ಕೀಟನಾಶಕದ ವಿಷಕಾರಕ ಪರಿಣಾಮಗಳಿಗೆ ಬಲಿಯಾದ ಮತ್ತು ನೂರಾರು ನಿವಾಸಿಗಳು ಗಂಭೀರ ಹಾಗೂ ಅಸಾಮಾನ್ಯ ಆರೋಗ್ಯದ ಸಮಸ್ಯೆಗಳಿಂದ ಇಂದಿಗೂ ಬಳಲುತ್ತಿರುವ ವರದಿಗಳನ್ನೂ ಮರೆತಿರುವ ಸಾಧ್ಯತೆಗಳಿಲ್ಲ. ಏಕೆಂದರೆ "ಎಂಡೋಸಲ್ಪ್ಹಾನ್ ಗೆ ಮತ್ತೊಂದು ಬಲಿ' ಎನ್ನುವ ಶೀರ್ಷಿಕೆಯಡಿಯಲ್ಲಿ, ಅಮಾಯಕರು ಮೃತಪಟ್ಟ ವರದಿಗಳು ಇಂದಿಗೂ ಪ್ರಕಟವಾಗುತ್ತಲೇ ಇವೆ. ಇದೇ ರೀತಿಯ ಸಮಸ್ಯೆಗಳು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು ಮತ್ತು ಬಂಟ್ವಾಳ ತಾಲೂಕುಗಳ ಕೆಲ ಪ್ರದೇಶಗಳಲ್ಲೂ ಕಂಡುಬಂದಿವೆ. ಆದರೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಎಂಡೋಸಲ್ಪ್ಹಾನ್ ಕೀಟ ನಾಶಕವನ್ನು ನಿಷೆಧಿಸುವ ಪ್ರಸ್ತಾವನೆಗೆ ಭಾರತ ಮತ್ತೊಮ್ಮೆ ತನ್ನ ಪ್ರತಿರೋಧವನ್ನು ವ್ಯಕ್ತಪಡಿಸಿದೆ. ಇದರೊಂದಿಗೆ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು "ಎಂಡೋಸಲ್ಫಾನ್ ಸಿಂಪಡಿಕೆಯಿಂದ ಭಾರತೀಯರಿಗೆ ಯಾವುದೇ ರೀತಿಯ ತೊಂದರೆಗಳೇ ಸಂಭವಿಸಿಲ್ಲ" ಎಂದು ಘೋಷಿಸಿದೆ!. 

ಇವೆಲ್ಲಕ್ಕೂ ಮಿಗಿಲಾಗಿ ಎಂಡೋಸಲ್ಪ್ಹಾನ್ ನ ತಾಂಡವ ನೃತ್ಯದ ವರದಿಗಳು ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕವೂ, ಚಿಕ್ಕಮಗಳೂರಿನ ಆಸುಪಾಸಿನ ಕಾಫಿ ತೋಟಗಳಲ್ಲಿ ಹಾವಳಿ ಎಬ್ಬಿಸುತ್ತಿರುವ "ಬೋರರ್" ಕೀಟಗಳನ್ನು ನಾಶಪಡಿಸಲು ಎಂಡೋಸಲ್ಪ್ಹಾನ್ ಕೀತನಾಶಕವನ್ನು ಸಿಂಪಡಿಸುವಂತೆ ಕಾಫಿ ಬೋರ್ಡ್ ಸೂಚಿಸಿದೆ!. 

ಮಹಾದುರಂತ 

೧೯೯೦ ರ ದಶಕದಲ್ಲಿ ಕೇರಳದ ಕಾಸರಗೋಡು ತಾಲೂಕಿನ ಸ್ವರ್ಗ, ಪಡ್ರೆ, ಎನ್ಮಕಜೆ ಮತ್ತು ಕುಮ್ಬ್ದಾಜೆ ಪ್ರದೇಶಗಳ ನಿವಾಸಿಗಳಲ್ಲಿ ಅಸಾಮಾನ್ಯ ಹಾಗೂ ಮಾರಕ ಆರೋಗ್ಯದ ಸಮಸ್ಯೆಗಳು ಪತ್ತೆಯಾಗಿದ್ದವು. ಅನೇಕ ವಿಧದ ಕ್ಯಾನ್ಸರ್, ಆಸ್ತಮಾ, ಅಪಸ್ಮಾರ, ಜನ್ಮದತ್ತ ಅಂಗವೈಕಲ್ಯಗಳು, ಬುದ್ಧಿಮಾಂದ್ಯ, ಕೈಕಾಲುಗಳಲ್ಲಿ ಬಲಹೀನತೆ, ಬಂಜೆತನ, ನಪುಂಸಕತ್ವ, ವೈವಿಧ್ಯಮಯ ಚರ್ಮರೋಗಗಳು, ಕೇಂದ್ರ ನರಮಂಡಲಕ್ಕೆ ಸಂಬಂಧಿಸಿದ ಕಾಯಿಲೆಗಳು, ರಕ್ತಹೀನತೆ ಮತ್ತು ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗುವಂತಹ ಕಾಯಿಲೆಗಳು ಈ ಪ್ರದೇಶದ ನಿವಾಸಿಗಳನ್ನು ಕಾಡಲು ಆರಂಭಿಸಿದ್ದವು. ಇವರಲ್ಲಿ ಕೆಲವರು ಕ್ಯಾನ್ಸರ್ ನಂತಹ ಕಾಯಿಲೆಯಿಂದ ಮೃತಪಟ್ಟಲ್ಲಿ, ಇನ್ನು ಕೆಲವರು ತಮ್ಮನ್ನು ಪೀಡಿಸುತ್ತಿದ್ದ ವ್ಯಾಧಿಗಳ ಬಾಧೆಯನ್ನು ಸಹಿಸಲಾರದೇಆತ್ಮಹತ್ಯೆಗೆ ಶರಣಾಗಿದ್ದರು. ಇನ್ನೂ ಬದುಕಿ ಉಳಿದಿರುವ ಸಹಸ್ರಾರು ಜನರು ಇದೀಗ ಜೀವಂತ ಶವಗಳಂತೆ ಬದುಕನ್ನು ಸಾಗಿಸುತ್ತಿದ್ದಾರೆ. 

ಸರಿಸುಮಾರು ಇದೇ ಸಮಯದಲ್ಲಿ ದಕ್ಷಿನ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ, ಕೊಕ್ಕಡ, ನಿಡ್ಲೆ ಮತ್ತು ಪಟ್ರಮೆ ಪರಿಸರದ ನಿವಾಸಿಗಳಲ್ಲೂ ಇದೇ ರೀತಿಯ ಅಸಾಮಾನ್ಯ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಈ ರೀತಿಯಲ್ಲಿ ವಿಭಿನ್ನ ರಾಜ್ಯಗಳ ವಿಭಿನ್ನ ಪ್ರದೇಶಗಳ ನಿವಾಸಿಗಳನ್ನು ಬಾಧಿಸುತ್ತಿರುವ ಏಕರೀತಿಯ ಸಮಸ್ಯೆಗಳ ಮೂಲವನ್ನು ಪತ್ತೆ ಹಚ್ಚುವ ಪ್ರಯತ್ನವು ಕೊನೆಗೂ ಫಲಪ್ರದವೆನಿಸಿತ್ತು. ೧೯೭೦ ರ ದಶಕದಲ್ಲಿ ಇವೆರಡೂ ಪ್ರದೇಶಗಳಲ್ಲಿರುವ ಸಹಸ್ರಾರು ಎಕರೆ ಗೇರು ತೋಟಗಳಿಗೆ ಹೆಲಿಕಾಪ್ಟರ್ ಬಳಸಿ ಎಂಡೋಸಲ್ಪ್ಹಾನ್ ಕೀಟನಾಶಕವನ್ನು ವರ್ಷದಲ್ಲಿ ಎರಡು ಬಾರಿಯಂತೆ, ಸುಮಾರು ಎರಡು ದಶಕಗಳಿಗೂ ಅಧಿಕ ಕಾಲ ಸಿಂಪಡಿಸಿದ್ದುದೇ ಈ ಸಮಸ್ಯೆಗಳಿಗೆ ಕಾರಣವೆನಿಸಿತ್ತು. 

ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶಾನುಭಾಗರ ನೇತೃತ್ವದ ಕೆ. ಎಂ. ಸಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಮತ್ತು ದೆಹಲಿಯ ಸೆಂಟರ್ ಫಾರ್ ಸಯನ್ಸ್ ಎಂಡ್ ಎನ್ವೈರಾನ್ಮೆಂಟ್ ಸಂಸ್ಥೆಯ ವಿಜ್ಞಾನಿಗಳ ತಂಡಗಳು ಪಡ್ರೆ ಪರಿಸರದಲ್ಲಿ ನಡೆಸಿದ್ದ ಅಧ್ಯನದ ಫಲವಾಗಿ, ಎಂಡೋಸಲ್ಪ್ಹಾನ್ ಕೀಟನಾಶಕದ ದೀರ್ಘಕಾಲೀನ ದುಷ್ಪರಿಣಾಮಗಳೇ ಈ ಸಮಸ್ಯೆಗಳಿಗೆ ಕಾರಣವೆಂದು ಸಾಬೀತಾಗಿತ್ತು. 

ಈ ಅಧ್ಯಯನದ ವರದಿಗಳು ತರಂಗ ವಾರ ಪತ್ರಿಕೆ ಮತ್ತು ಡೌನ್ ಟು ಅರ್ತ್ ಆಂಗ್ಲ ಪಾಕ್ಷಿಕ ಮತ್ತು ಸ್ಟಾರ್ ಟಿ ವಿ ಮತ್ತಿತರ ಚಾನೆಲ್ ಗಳಲ್ಲಿ ಪ್ರಕಟವಾದ ಬಳಿಕವೂ, ಕೇರಳ ರಾಜ್ಯ ಸರಕಾರ ಮಾತ್ರ ಇವೆಲ್ಲಾ ಸಮಸ್ಯೆಗಳಿಗೆ ಎಂಡೋಸಲ್ಫಾನ ಸಿಂಪಡಿಕೆಯೇ ಕಾರಣವೆಂದು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಇವೆಲ್ಲಕ್ಕೂ ಮಿಗಿಲಾಗಿ ಅಂದಿನ ದಿನಗಳಲ್ಲಿ ೪೦೦೦ ಕೋಟಿಗೂ ಅಧಿಕ ಮೊತ್ತದ ವಹಿವಾಟು ನಡೆಸುತ್ತಿದ್ದ ಇಂತಹ ರಾಸಾಯನಿಕ ಕೀಟನಾಶಕಗಳ ತಯಾರಕರು, ಇವೆಲ್ಲಾ ವರದಿಗಳು ಸ್ಥಾಪಿತ ಹಿತಾಸಕ್ತಿಗಳು ತಮ್ಮ ವಿರುದ್ಧ ನಡೆಸಿರುವ ಫಿತೂರಿ ಎಂದು ದೂರಲು ಹಿಂಜರಿಯಲಿಲ್ಲ!. 

ಕೊನೆಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದ ಕೇರಳ ಸರಕಾರವು ಎಂಡೋಸಲ್ಪ್ಹಾನ್ ಸಿಂಪಡನೆಯನ್ನು ತಾತ್ಕಾಲಿಕವಾಗಿ ನಿಷೆಧಿಸಿದರೂ, ಪಡ್ರೆ ಪರಿಸರದ ಸಂತ್ರಸ್ತರಿಗೆ ಪರಿಹಾರವನ್ನು ನೀಡಿರಲಿಲ್ಲ. ಆದರೆ ಎಂಡೋಸಲ್ಪ್ಹಾನ್ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಅಚ್ಚುತಾನಂದನ್ ಮುಖ್ಯಮಂತ್ರಿಯಾದ ಬಳಿಕ ಈ ಸಂತ್ರಸ್ತರಿಗೆ ಕಿಂಚಿತ್ ಪರಿಹಾರವನ್ನು ಮಂಜೂರು ಮಾಡಿದ್ದರು. 

ಕರ್ನಾಟಕ ರಾಜ್ಯ ಸರಕಾರವೂ ಕೊಕ್ಕಡ, ಅರಸಿನಮಕ್ಕಿ, ಪಟ್ರಮೆ ಮತ್ತು ನಿಡ್ಲೆ ಪರಿಸರದ ನಿವಾಸಿಗಳನ್ನು ಪೀಡಿಸುತ್ತಿರುವ ಅನಾರೋಗ್ಯದ ಸಮಸ್ಯೆಗಳನ್ನು ಅಧ್ಯಯನ ಮಾಡಲು ತನಿಖಾ ತಂಡಗಳನ್ನು ನೇಮಕ ಮಾಡಿ ವರ್ಷಗಳೇ ಕಳೆದಿದ್ದರೂ, ಇಲ್ಲಿನ ಸಂತ್ರಸ್ತರಿಗೆ ಮಾತ್ರ ಸರಕಾರದಿಂದ ಇಂದಿನ ತನಕ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ. ಇತ್ತೀಚಿಗೆ ಸಂಸದರಾಗಿ ಆಯ್ಕೆಯಾಗಿರುವ ಡಿ. ವಿ. ಸದಾನಂದ ಗೌಡ ಮತ್ತು ನಳಿನ್ ಕುಮಾರ್ ಕಟೀಲು ಇವರು ಸೌತದ್ಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಎಂಡೋಸಲ್ಪ್ಹಾನ್ ಸಂತ್ರಸ್ತರ ಸಮಸ್ಯೆಗಳ ಅಧ್ಯಯನ ನಡೆಸಲು ಮತ್ತೊಂದು ತನಿಖಾ ತಂಡವನ್ನು ನೇಮಿಸುವ ಮತ್ತು ರಾಜ್ಯ ಸರಕಾರದಿಂದ ಪರಿಹಾರವನ್ನು ಕೊಡಿಸುವ ಪ್ರಯತ್ನಿಸುವ ಭರವಸೆಯನ್ನು ನೀಡಿದ್ದರು. ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿಗಳು ಇಲ್ಲಿಗೆ ಭೇಟಿಯನ್ನು ನೀಡಿದ್ದ ಸಂದರ್ಭದಲ್ಲಿ, ಜೀವಂತ ಶವಗಳಂತೆ ಬದುಕುತ್ತಿರುವ ಇಲ್ಲಿನ ಸಂತ್ರಸ್ತರಿಗೆ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಆದರೆ ನೂರಾರು ಅಮಾಯಕರ ಪ್ರಾಣಕ್ಕೆ ಎರವಾಗಿರುವ ಮತ್ತು ಗಂಭೀರ ಕಾಯಿಲೆಗಳಿಗೆ ಕಾರಣವೆನಿಸಿರುವ ಈ ಮಾರಕ ಕೀಟನಾಶಕವನ್ನು ನಿಷೇಧಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. 

ಎಂಡೋಸಲ್ಫಾನ್ ನಿಂದ ಗಂಡಾಂತರ 

೧೯೫೦ ರಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದ್ದ ಎಂಡೋಸಲ್ಪ್ಹಾನ್ ಕೀಟನಾಶಕವು ಸೈಕ್ಲೋಡೈನ್ ಗುಂಪಿಗೆ ಸೇರಿದೆ. ಕೇವಲ ಎರಡರಿಂದ ಮೂರು ದಶಕಗಳ ಬಳಕೆಯ ಬಳಿಕ ಈ ವಿಷಕಾರಕ ಕೀಟನಾಶಕವು ಮನುಷ್ಯರ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ಗಮನಿಸಿದ ಅನೇಕ ಪಾಶ್ಚಾತ್ಯ ದೇಶಗಳು  ೧೯೮೪ ರಲ್ಲೇ ಇದನ್ನು ನಿಷೇಧಿಸಿದ್ದವು. ತದನಂತರ ೯೦ ರ ದಶಕದಲ್ಲಿ ಇದರ ಮಾರಕತೆ ಮತ್ತು ರೋಗಕಾರಕ ದುಷ್ಪರಿಣಾಮಗಳನ್ನು ಹಲವಾರು ರಾಷ್ಟ್ರಗಳ ಅನೇಕ ವಿಜ್ಞಾನಿಗಳು ದಾಖಲಿಸಿದ್ದಾರೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಭಾರತ ಸರಕಾರವು ಇಂದಿನ ತನಕ ಇದನ್ನು ನಿಷೇಧಿಸಿಲ್ಲ. ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಅಮೇಕ ಭಾರತೀಯ ಕೃಷಿಕರು, ಈ ಕೀಟನಾಶಕದ ಬಳಕೆಯನ್ನೂ ನಿಲ್ಲಿಸಿಲ್ಲ. 

ಕಾಸರಗೋಡು ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಎಂಡೋಸಲ್ಪ್ಹಾನ್ ನ ತಾಂಡವ ನೃತ್ಯವನ್ನು ಕಂಡಿದ್ದರೂ, ದ. ಕ ಜಿಲ್ಲೆಯ ಅನೇಕ ಕೃಷಿಕರು, ಅಡಿಕೆ ಮರಗಳಿಗೆ ಸಿಂಪಡಿಸುವ "ಬೋರ್ಡೊ ದ್ರಾವಣ' ಕ್ಕೆ ಎಂಡೋಸಲ್ಪ್ಹಾನ್ ಬೆರೆಸಲು ಆರಂಭಿಸಿರುವುದು ಮಾತ್ರ ನಂಬಲು ಅಸಾಧ್ಯವೆನಿಸುತ್ತದೆ. 

ಭಾರತದ ಪ್ರತಿರೋಧ 

ಮಾರಕ ಎಂಡೋಸಲ್ಪ್ಹಾನ್ ಕೀಟನಾಶಕದ ಮಾರಾಟವನ್ನು ನಿರ್ಬಂಧಿಸುವ ಅಂತರ ರಾಷ್ಟ್ರೀಯ ಪ್ರಸ್ತಾವನೆಗೆ ಭಾರತವು ಮತ್ತೊಮ್ಮೆ ತನ್ನ ಪ್ರತಿರೋಧವನ್ನು ವ್ಯಕ್ತಪಡಿಸಿದೆ. ತನ್ಮೂಲಕ ವಿಶ್ವಾದ್ಯಂತ ಇನ್ನಷ್ಟು ಅಮಾಯಕರು ಇದಕ್ಕೆ ಬಲಿಯಾಗುವ ಅವಕಾಶವನ್ನು ಕಲ್ಪಿಸಿದೆ. 

ಸಂಯುಕ್ತ ರಾಷ್ಟ್ರಗಳ ರಾಸಾಯನಿಕ ಮಾಹಿತಿ ಒಡಂಬಡಿಕೆಯಂತೆ, ಈ ಕೀಟನಾಶಕವನ್ನು ನಿರ್ಯಾತ ಮಾಡುವ ರಾಷ್ಟ್ರಗಳು ಇದರ ಅಪಾಯಕಾರಿ ದುಷ್ಪರಿಣಾಮಗಳನ್ನು ಬಹಿರಂಗಪಡಿಸಬೇಕಾಗುತ್ತದೆ. ಜೊತೆಗೆ ಇದನ್ನು ಆಯಾತ ಮಾಡಿಕೊಳ್ಳುವ ರಾಷ್ಟ್ರಗಳ ಪೂರ್ವ ಸೂಚಿತ ಸಮ್ಮತಿ (Prior informed consent- PIC) ಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ. 

ರೋಮ್ ನಲ್ಲಿ ಇದೇ ವರ್ಷದ ಮಾರ್ಚ್ ೨೩ ರಿಂದ ೨೭ ರ ತನಕ ಜರಗಿದ PIC ರಾಸಾಯನಿಕ ಪುನರ್ ವಿಮರ್ಶಾ ಸಮಿತಿ (Chemical review committee- CRC) ಯ ಸಭೆಯಲ್ಲಿ ಭಾಗವಹಿಸಿದ್ದ ೨೯ ರಾಷ್ಟ್ರಗಳಲ್ಲಿ, ಭಾರತವನ್ನು ಹೊರತುಪಡಿಸಿ ಇತರ ಎಲ್ಲ ರಾಷ್ಟ್ರಗಳ ಪ್ರತಿನಿಧಿಗಳು ಎಂಡೋಸಲ್ಪ್ಹಾನ್ ಕೀಟನಾಶಕವನ್ನು ನಿರ್ಬಂಧಿತ ಕೀಟನಾಶಕಗಳ ಪಟ್ಟಿಯಲ್ಲಿ ಸೇರಿಸಲು ಒತ್ತಾಯಿಸಿದ್ದರು. ಆಫ್ರಿಕಾ ಖಂಡದ ಐದು ರಾಷ್ಟ್ರಗಳಲ್ಲಿ ಹತ್ತಿಯನ್ನು ಬೆಳೆಯುವ ಸಹಸ್ರಾರು ಕೃಷಿಕರು ಇದರ ದುಷ್ಪರಿಣಾಮಗಳಿಗೆ  ಬಲಿಯಾದ ಮತ್ತು ಅನಾರೋಗ್ಯ ಪೀಡಿತರಾಗಿರುವ ವರದಿಗಳೇ ಇದಕ್ಕೆ ಪ್ರಮುಖ ಕಾರಣವೆನಿಸಿತ್ತು. ಭಾರತದಲ್ಲೂ ತನ್ನ ಮಾರಕತೆಯನ್ನು ಮೆರೆದಿದ್ದ ಈ ಕೀಟನಾಶಕವನ್ನು ನಿರ್ಬಂಧಿಸಲು ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿದ ಭಾರತದ ಪ್ರತಿನಿಧಿಯು, ಎಂಡೋಸಲ್ಪ್ಹಾನ್ ನ ಮೇಲೆ ನಿರ್ಬಂಧವನ್ನು ಹೇರುವುದನ್ನು ತೀವ್ರವಾಗಿ ವಿರೋಧಿಸಿದ್ದರು. ಇದರೊಂದಿಗೆ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಎಂಡೋಸಲ್ಪ್ಹಾನ್ ನ ದುಷ್ಪರಿಣಾಮಗಳ ಬಗ್ಗೆ ಲಭ್ಯವಿರುವ ಅಧ್ಯಯನಗಳ ವರದಿಗಳು ಅಪೂರ್ನವಾಗಿವೆ ಎನ್ನುವ ನೆಪವನ್ನು ಮುಂದೊಡ್ಡಿದ್ದರು. 

ಭಾರತವನ್ನು ಪ್ರತಿನಿಧಿಸಿದ್ದ ಪರಿಸರ ಮಂತ್ರಾಲಯದ ಸಲಹೆಗಾರ ಜಿ. ಕೆ. ಪಾಂಡೆ ಯವರು, ಈ ಸಭೆಯಲ್ಲಿ "ಭಾರತ ದೇಶದಲ್ಲಿ ಈ ಕೀಟನಾಶಕದ ಸಿಂಪಡಿಕೆಯಿಂದ ಒಬ್ಬನೇ ಒಬ್ಬ ವ್ಯಕ್ತಿಯೂ ಪೀಡಿತನಾಗಿಲ್ಲ' ಎಂದು ಘೋಷಿಸಿದ್ದರು!. 

ಇದಕ್ಕೂ ಮುನ್ನ ಗತವರ್ಷದ ಅಕ್ಟೋಬರ್ ತಿಂಗಳಿನಲ್ಲಿ ನಡೆದಿದ್ದ ಸಭೆಯಲ್ಲಿ, ಎಂಡೋಸಲ್ಪ್ಹಾನ್ ಕೀಟನಾಶಕವನ್ನು PIC ಪಟ್ಟಿಯಲ್ಲಿ ಸೇರಿಸುವ ಪ್ರಸ್ತಾವನೆಯನ್ನು ಭಾರತವು ಪ್ರಬಲವಾಗಿ ವಿರೋಧಿಸಿತ್ತು. 

ಮನುಕುಲಕ್ಕೆ ಮಾರಕವೆನಿಸುತ್ತಿರುವ ಹಲವಾರು ಕೀಟನಾಶಕಗಳನ್ನು ನಿಷೇಧಿಸುವಂತೆ ಹೋರಾಡುತ್ತಿರುವ ಕಾರ್ಯಕರ್ತರೊಬ್ಬರ ಅಭಿಪ್ರಾಯದಂತೆ, CRC ಸಭೆಯಲ್ಲಿ ಈ ಕೀಟನಾಶಕವನ್ನು ನಿರ್ಬಂಧಿಸುವ ವಿಚಾರದಲ್ಲಿ ಸರ್ವಾನುಮತದ ಅನುಮೋದನೆ ದೊರೆಯದೇ ಇದ್ದಲ್ಲಿ, ಈ ಸಮಿತಿಯು ೨/೩ ಬಹುಮತದೊಂದಿಗೆ ಇದನ್ನು ಅಂಗೀಕರಿಸಬಹುದಾಗಿದೆ. ಮುಂದಿನ CRC ಸಭೆಯಲ್ಲಿ ಎಂಡೋಸಲ್ಪ್ಹಾನ್ ಕೀಟನಾಶಕವನ್ನು ಈ ಪಟ್ಟಿಯಲ್ಲಿ ಸೇರಿಸದೆ ಇದ್ದಲ್ಲಿ, ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳ ಸಹಸ್ರಾರು ಜನರು ಇದಕ್ಕೆ ಬಲಿಯಾಗುವುದರಲ್ಲಿ ಸಂದೇಹವಿಲ್ಲ. 

ಈ ಲೇಖನ ಅಚ್ಚಿಗೆ ಹೋಗುವ ಮುನ್ನ ತಿಳಿದುಬಂದಂತೆ ವಿಶ್ವದಲ್ಲೇ ಅತ್ಯಧಿಕ ಪ್ರಮಾಣದ ಎಂಡೋಸಲ್ಪ್ಹಾನ್ ತಯಾರಿಸುತ್ತಿರುವ " ಬಾಯರ್ ಎ ಜಿ ಸಂಸ್ಥೆ"ಯು ೨೦೧೦ ರಿಂದ ಇದರ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ಕೀಟನಾಶಕವನ್ನು ಅತ್ಯಂತ ಅಪಾಯಕಾರಿ ಎಂದು ಘೋಷಿಸಿದ್ದು, ಯುರೋಪಿಯನ್ ಒಕ್ಕೂಟದ ೨೭ ದೇಶಗಳು ಸೇರಿದಂತೆ ವಿಶ್ವದ ೬೨ ರಾಷ್ಟ್ರಗಳು ಇದನ್ನು ನಿಷೇಧಿಸಿವೆ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೭- ೦೮-೨೦೦೯ ರ ಸಂಚಿಕೆಯ ಬಳಕೆದಾರ; ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 


No comments:

Post a Comment