Tuesday, December 17, 2013

Manassannu nirmalagolisade samasye parihaaravagadu.




     ಮನಸ್ಸನ್ನು ನಿರ್ಮಲಗೊಳಿಸದೆ ಸಮಸ್ಯೆ ಪರಿಹಾರವಾಗದು 

ಮಾಧವರಾಯರ ಐವರು ಗಂಡುಮಕ್ಕಳು ತಮ್ಮ ಸಂಸಾರದೊಂದಿಗೆ ಒಂದೇ ಸೂರಿನಡಿಯಲ್ಲಿ ವಾಸವಾಗಿರಲು ಪರಸ್ಪರ ಪ್ರೀತಿ ವಾತ್ಸಲ್ಯಗಳೇ ಕಾರಣವಾಗಿರಲಿಲ್ಲ. ತಮ್ಮದೇ ಆದ ಕೆಲವೊಂದು ನಿರ್ದಿಷ್ಟ ಸಮಸ್ಯೆಗಳಿಂದಾಗಿ, ಇಪ್ಪತ್ತ ಒಂದು ಸದಸ್ಯರ ಈ ಕುಟುಂಬವು ಒಂದೇ ಮನೆಯಲ್ಲಿ ವಾಸಿಸಬೇಕಾದ ಅನಿವಾರ್ಯತೆ ಇತ್ತು. 

ರಾಯರ ನಿಧನಕ್ಕೆ ಮೊದಲು ಈ ಸಹೋದರರ ಅನ್ಯೋನ್ಯತೆ ಮತ್ತು ಬಾಂಧವ್ಯಗಳನ್ನು ಕಂಡವರೆಲ್ಲರೂ ಇವರನ್ನು ಪಂಚ ಪಾಂಡವರೆಂದು ಕರೆಯುತ್ತಿದ್ದುದರಲ್ಲಿ ಉತ್ಪ್ರೆಕ್ಷೆಯಿರಲಿಲ್ಲ. ಆದರೆ ಕಾಲಕ್ರಮೇಣ ಒಬ್ಬರ ಬಳಿಕ ಮತ್ತೊಬ್ಬರಂತೆ ಈ ಸಹೋದರರು ವಿವಾಹವಾದ ಬಳಿಕ, ಸೊಸೆಯಂದಿರ ನಡುವೆ ಪ್ರಾರಂಭವಾಗುತ್ತಿದ್ದ ಚಿಕ್ಕಪುಟ್ಟ ಜಗಳಗಳು ರಾಯರ ನಿಧನಾನಂತರ ಹೆಚ್ಚಿದ್ದವು. ಇದೇ ಕಾರಣದಿಂದಾಗಿ ಇವರ ಮನೆ- ಮನಗಳಲ್ಲಿ ಸುಖ- ಶಾಂತಿಗಳೇ ಇರಲಿಲ್ಲ. 

ಇತ್ತೀಚಿನ ಒಂದೆರಡು ವರ್ಷಗಳಲ್ಲಿ ಈ ಕುಟುಂಬದ ಸದಸ್ಯರಿಗೆ ವಿವಿಧ ರೀತಿಯ ತೊಂದರೆಗಳು, ಆರೋಗ್ಯದ ಸಮಸ್ಯೆಗಳು ಮತ್ತು ಅಪಶಕುನಗಳು ಬಾಧಿಸಲು ಆರಂಭಿಸಿದ್ದವು. ಒಮ್ಮೆ ಮನೆಯ ಹಿಂದಿನ ಬಾವಿಯಲ್ಲಿ ಬೆಕ್ಕು ಸತ್ತು ಬಿದ್ದರೆ, ಮತ್ತೊಮ್ಮೆ ಮನೆಯ ಮುಂದಿನ ತೆಂಗಿನ ಮರಕ್ಕೆ ಸಿಡಿಲು ಬಡಿದಿತ್ತು. ಎರಡೇ ತಿಂಗಳುಗಳ ಬಳಿಕ ಮೂರನೆಯ ಸೊಸೆಗೆ ಆಕಸ್ಮಿಕವಾಗಿ ಗರ್ಭಪಾತ ಸಂಭವಿಸಿದ ಬೆನ್ನಲ್ಲೇ ಹಿರಿಯ ಮಗ ನರಸಿಂಹನು ಜಾರಿ ಬಿದ್ದು ಕಾಲುಮುರಿದುಕೊಂಡಿದ್ದನು. ಇಷ್ಟೆಲ್ಲಾ ಸಾಲದೆನ್ನುವಂತೆ ರಾಯರ ಪತ್ನಿಗೆ ರಕ್ತದೊತ್ತಡ ಹೆಚ್ಚಿದ ಪರಿಣಾಮವಾಗಿ ಪಕ್ಷವಾತ ಬಂದೆರಗಿತ್ತು. ಇದರೊಂದಿಗೆ ಈ ಸೋದರರ ಹತ್ತಾರು ಮಕ್ಕಳಲ್ಲಿ ಒಂದಿಬ್ಬರಿಗಾದರೂ ಕಾಯಿಲೆ- ಕಸಾಲೆಗಳು ತಪ್ಪುತ್ತಿರಲಿಲ್ಲ. ಐವರು ಸೊಸೆಯಂದಿರ ನಡುವಿನ ಭಿನ್ನಾಭಿಪ್ರಾಯ ಹಾಗೂ ವೈಮನಸ್ಸಿನಿಂದಾಗಿ, ಈ ಮನೆಯಲ್ಲಿ ನಡೆಯುತ್ತಿದ್ದ ನಿತ್ಯಕಲಹಗಳಿಗೆ ಅಂತ್ಯವೂ ಇರಲಿಲ್ಲ. ಇಂತಹ ಸಂಕೀರ್ಣ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ಮನೆಮಂದಿಗೆಲ್ಲ ಮಾನಸಿಕ ನೆಮ್ಮದಿಯೇ ಇರಲಿಲ್ಲ. 

ತಮ್ಮ ಕುಟುಂಬದ ಸಮಸ್ಯೆಗಳಿಗೆ ಯಾವುದಾದರೂ ದೋಷಗಳೇ ಕಾರಣವಾಗಿರಬೇಕೆಂದು ನರಸಿಂಹನು ಧೃಢವಾಗಿ ನಂಬಿದ್ದನು. ಅಂತೆಯೇ ಇವುಗಳನ್ನು ಶಾಶ್ವತವಾಗಿ ಪರಿಹರಿಸಬೇಕೆನ್ನುವ ಉದ್ದೇಶದಿಂದ ತಮ್ಮ ಕುಟುಂಬದ ಜ್ಯೋತಿಷ್ಯರಲ್ಲಿಗೆ ತೆರಳಿದ್ದನು. ನರಸಿಮ್ಹನಿಂದ ಕುಟುಂಬದ ಸಮಸ್ಯೆಗಳನ್ನು ಅಮೂಲಾಗ್ರವಾಗಿ ಕೇಳಿ ತಿಳಿದುಕೊಂಡ ಜ್ಯೋತಿಷ್ಯರು ಆತನಿಗೆ ಅಭಯವನ್ನು ನೀಡಿದ್ದರು. ಅವರ ಅಭಿಪ್ರಾಯದಂತೆ ಈ ಅವಿಭಕ್ತ ಕುಟುಂಬವನ್ನು ಬಾಧಿಸುತ್ತಿರುವ ದೋಷಗಳನ್ನು ಪತ್ತೆಹಚ್ಚಲು ಸೂಕ್ತ ವಿಧಿವಿಧಾನಗಳೂ ಇದ್ದವು. ಆದರೆ ಇದಕ್ಕಾಗಿ ಇವರು ವಾಸಿಸುತ್ತಿದ್ದ ಮನೆಯಲ್ಲಿ ನಿರ್ದಿಷ್ಟ ಪೂಜೆ ಪುನಸ್ಕಾರಗಳನ್ನು ನಡೆಸಿದ ಬಳಿಕ "ಪ್ರಶ್ನೆ" ಇಡಬೇಕಾಗಿತ್ತು. ಮಾತ್ರವಲ್ಲ ಈ ಕಾರ್ಯಕ್ರಮದಲ್ಲಿ ಇವರ ಕುಟುಂಬದ ಇತರ ಸದಸ್ಯರ ಉಪಸ್ಥಿತಿಯ ಅವಶ್ಯಕತೆಯೂ ಇತ್ತು. 

ಶುಭದಿನದಂದು ಕುಟುಂಬಸ್ತರ ಉಪಸ್ಥಿತಿಯಲ್ಲಿ ಪುರೋಹಿತರಿಂದ ಶಾಸ್ತ್ರೋಕ್ತ ವಿಧಿವಿಧಾನಗಳಂತೆ ಪೂಜಾಕಾರ್ಯಗಳು ಸಾಂಗವಾಗಿ ನೆರವೇರಿದವು. ತದನಂತರ ಜ್ಯೋತಿಷ್ಯರು ತಮ್ಮ ಕವದೆಗಳನ್ನು ಹರಡಿ "ಪ್ರಶ್ನೆ" ಇದುವ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಇವರ ಪ್ರಾಥಮಿಕ ವಿಶ್ಲೇಷಣೆಯಂತೆ ಈ ಕುಟುಂಬದಲ್ಲಿ ಇದುವರೆಗೆ ಮೃತಪಟ್ಟಿರುವ ೨೯ ಹಿರಿಯರ ಆತ್ಮಗಳಿಗೆ ಸದ್ಗತಿ ಹಾಗೂ ಮೊಕ್ಷಗಳೇ ದೊರೆತಿರಲಿಲ್ಲ. ಇದೇ ಕಾರಣದಿಂದಾಗಿ ಇವೆಲ್ಲಾ ಆತ್ಮಗಳು ಇದೇ ಪರಿಸರದಲ್ಲಿ ಸುತ್ತಾದಿಕೊಂಡಿದ್ದು, ಇದೀಗ ತಾವು ಒಂದೊಂದೇ ಆತ್ಮಗಳನ್ನು ಸ್ಥಳಕ್ಕೆ ಆಹ್ವಾನಿಸುವುದಾಗಿ ಹೇಳಿದರು. ಜ್ಯೋತಿಷ್ಯರ ಮಾತುಗಳನ್ನು ಕೇಳಿ ಗರಬಡಿದವರಂತೆ ಕುಳಿತಿದ್ದ ಐವರು ಸಹೋದರರ ಪ್ರತಿಕ್ರಿಯೆಗೂ ಕಾಯದೆ ತಮ್ಮ ಕಾರ್ಯವನ್ನು ಮುಂದುವರೆಸಿದರು. ಪ್ರಥಮವಾಗಿ ಕುಟುಂಬದ ಎರಡು ತಲೆಮಾರಿನ ಹಿಂದಿನ ಹಿರಿಯರೊಬ್ಬರ ಹೆಸರನ್ನು ಗಟ್ಟಿಯಾಗಿ ಉಚ್ಚರಿಸುತ್ತಾ, ಅದೃಶ್ಯ ಶಕ್ತಿಯೊಂದನ್ನು ಆಹ್ವಾನಿಸಿ ಸಮೀಪದ ಮಣೆಯ ಮೇಲೆ ಆಸೀನರಾಗುವಂತೆ ಜ್ಯೋತಿಷ್ಯರು ಕೈಸನ್ನೆ ಮಾಡಿದರು. ಕ್ಷಣಮಾತ್ರದಲ್ಲಿ ಆಹ್ವಾನಿತ ಆತ್ಮವು ಅಲ್ಲಿ ಕುಳಿತಿರುವುದಾಗಿ ಘೋಷಿಸಿದರು!. 

ನರಸಿಂಹ ಮತ್ತು ಆತನ ಸಹೋದರರಿಗೆ ಈ ಘೋಷಣೆಯು ಸಿಡಿಲು ಬಡಿದಂತಾಗಿತ್ತು. ಭಯ ಭಕ್ತಿಮಿಶ್ರಿತ ಕುತೂಹಲಗಳಿಂದ ಮಣೆಯನ್ನೇ ದಿಟ್ಟಿಸುತ್ತಿದ್ದ ಕುಟುಂಬಸ್ಥರು, ತಕ್ಷಣ ಕೈಮುಗಿದು ಸಾಷ್ಟಾಂಗ ನಮಸ್ಕಾರ ಮಾಡಿದರು. ಒಂದಾದ ಬಳಿಕ ಮತ್ತೊಂದರಂತೆ ಆತ್ಮಗಳನ್ನು ಆಹ್ವಾನಿಸುವ ಪ್ರಕ್ರಿಯೆ ಅವ್ಯಾಹತವಾಗಿ ಸಾಗುತ್ತಿತ್ತು. ಆಶ್ಚರ್ಯವೆಂದರೆ ಈ ಆತ್ಮಗಳು ಜ್ಯೋತಿಷ್ಯರನ್ನು ಹೊರತುಪಡಿಸಿ ಇತರರಿಗೆ ಕಾಣಿಸುತ್ತಿರಲಿಲ್ಲ!. 

ಮಧ್ಯರಾತ್ರಿಯ ಹೊತ್ತಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುವ ಮೊದಲು, ಈ ಕುಟುಂಬವನ್ನು ಬಾಧಿಸುತ್ತಿರುವ ದೋಷಗಳು ಹಾಗೂ ಅವುಗಳ ನಿವಾರಣೆಯ ವಿಧಾನಗಳನ್ನು ಜ್ಯೋತಿಷ್ಯರು ವಿವರವಾಗಿ ಹೇಳಿದರು. ತಮ್ಮ ಸಮಸ್ಯೆಗಳು ಅತಿ ಶೀಘ್ರದಲ್ಲಿ ಅಂತ್ಯಗೊಳ್ಳಲಿವೆ ಎಂದು ನಂಬಿದ ಮನೆಮಂದಿ, ಅಂದು ರಾತ್ರಿ ನಿರಾಳವಾಗಿ ನಿದ್ರಿಸಿದ್ದರು. 

ತಿನಗಳು ಕಳೆಯುವಷ್ಟರಲ್ಲಿ ಜ್ಯೋತಿಷ್ಯರು ಸೂಚಿಸಿದ್ದ ನಿವೃತ್ತಿಗಳನ್ನು ಸಮರ್ಪಕವಾಗಿ ಈಡೇರಿಸಿದ್ದ ಈ ಕುಟುಂಬಕ್ಕೆ ತುಸು ಮಾನಸಿಕ ನೆಮ್ಮದಿ ದೊರಕಿತ್ತು. ಆದರೆ ದಿನಗಳು ಉರುಳಿದಂತೆಯೇಸೊಸೆಯಂದಿರ ನಿತ್ಯಕಲಹಗಳು ಮತ್ತೆ ಆರಂಭಗೊಂಡಿದ್ದವು. ಅತ್ಯಲ್ಪ ಸಮಯದಲ್ಲೇ ಮನೆಯ ಸ್ಥಿತಿಗತಿ ಹಾಗೂ ವಾತಾವರಣಗಳು ಮತ್ತೆ ಪೂರ್ವಸ್ಥಿತಿಗೆ ಮರಳಿದ್ದವು. ಹಿರಿಯರ ಆತ್ಮೋದ್ಧಾರದ ಕಾರ್ಯಕ್ರಮಗಳು ಸಾಂಗವಾಗಿ ನಡೆದು ಕುಟುಂಬದ ದೋಷಗಳು ಪರಿಹಾರಗೊಂದಿದ್ದರೂ, ಮನೆಮಂದಿಯ ಸಮಸ್ಯೆಗಳು ಮತ್ತೆ ಮರುಕಳಿಸಿದ್ದುದು ನರಸಿಂಹನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. 

ಮನಸ್ಸಿದ್ದಲ್ಲಿ ಮಾರ್ಗವಿದೆ 

ನಿಜಹೆಳಬೇಕಿದ್ದಲ್ಲಿ ನರಸಿಂಹನ ಕುಟುಂಬದ ಸಮಸ್ಯೆಗಳಿಗೆ ಪೂರ್ವಜನ್ಮದ ಅಥವಾ ಹಿರಿಯರ ದೋಷ ಹಾಗೂ ಶಾಪಗಳು ಕಾರಣವಾಗಿರಲೇ ಇಲ್ಲ. ಬಾವಿಯಲ್ಲಿ ಬೆಕ್ಕು ಬಿದ್ದು ಸಾಯುವುದು, ತೆಂಗಿನ ಮರಕ್ಕೆ ಸಿಡಿಲು ಬಡಿಯುವುದು ಪ್ರಕೃತಿ ಸಹಜ ಕ್ರಿಯೆಗಳೇ ಹೊರತು ದೋಷವಂತೂ ಅಲ್ಲ. ಅಂತೆಯೇ ಗರ್ಭಿನಿಗೆ ಕಾರಣಾಂತರಗಳಿಂದ ಗರ್ಭಪಾತವಾಗುವುದು, ಹಾಗೂ ಅಧಿಕ ರಕ್ತದೊತ್ತದವಿರುವ ರೋಗಿಗೆ ಪಕ್ಷವಾತ ಸಂಭವಿಸುವುದು ಮತ್ತು ಹಲವಾರು ಮಕ್ಕಳಿರುವಲ್ಲಿ ಶೀತ, ಕೆಮ್ಮು, ಗಂಟಲುನೋವು ಮತ್ತು ಜ್ವರ ಮತ್ತಿತರ ಕಾಯಿಲೆಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು ಸ್ವಾಭಾವಿಕ. ಸಾವಿಲ್ಲದ ಮನೆಯ ಸಾಸಿವೆಯನ್ನು ಅರಸಿಕೊಂಡು ಅಲೆದಂತೆ, ಇಂತಹ ಸಮಸ್ಯೆಗಳೇ ಇಲ್ಲದ ಕುಟುಂಬವನ್ನು ಅರಸುವುದು ಅಸಾಧ್ಯವೆನಿಸುವುದು. 

ಪರಸ್ಪರ ದ್ವೇಷ,ಅಸ್ಸೋಯೆಗಳನ್ನು ತೊರೆದು, ಪ್ರೀತಿ ವಾತ್ಸಲ್ಯಗಳಿಂದ ಒಂದಾಗಿ ಬಾಳಬೇಕೆಂಬ ಹಂಬಲವಿಲ್ಲದ ಈ ಸೋದರರಿಗೆ, ತಮ್ಮ ಪತ್ನಿಯರ ತಪ್ಪಿನ ಅರಿವಿದ್ದರೂ ಇದನ್ನು ಸರಿಪಡಿಸುವ ಮನೋಬಲವಿರಲಿಲ್ಲ. ಅದೇ ರೀತಿ ಒಂದೇ ಮನೆಯಲ್ಲಿ ವಾಸ್ತವ್ಯವಿರುವ ಸಂದರ್ಭದಲ್ಲಿ ಒಂದಿಷ್ಟು ಹೊಂದಾಣಿಕೆ, ಸಹನಶೀಲತೆ ಹಾಗೂ ತ್ಯಾಗಗಳು ಅನಿವಾರ್ಯ ಎನ್ನುವುದನ್ನು ಇವರ ಪತ್ನಿಯರೂ ಅರಿತುಕೊಂಡಿರಲಿಲ್ಲ. ಮಾತ್ರವಲ್ಲ, ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನೂ ಮಾಡಿರಲಿಲ್ಲ. ಇಂತಹ ಸಂಕುಚಿತ ಮನೋಭಾವಗಳಿಂದಾಗಿ, ದೋಷಗಳ ಪರಿಹಾರಗಳನ್ನು ನಡೆಸಿದ ಬಳಿಕವೂ ಈ ಕುಟುಂಬದ ಸಮಸ್ಯೆಗಳು ಅಂತ್ಯಗೊಂಡಿರಲಿಲ್ಲ!. 

ಅಂತಿಮವಾಗಿ ಈ ಕುಟುಂಬದ ಶ್ರೇಯೋಭಿಲಾಷಿ ಎನಿಸಿದ್ದ ವಯೋವೃದ್ಧ ಜನ್ನುಮಾಮರ ಸಲಹೆಯಂತೆ ಐವರು ಸೋದರರು ಒಂದಾಗಿ ಕುಳಿತು, ತಮ್ಮತಮ್ಮ ಸಮಸ್ಯೆಗಳ ಬಗ್ಗೆ ಮುಕ್ತ ಮನಸ್ಸಿನಿಂದ ಸಂವಾದ ನಡೆಸಿದರು. " ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಕುಟುಂಬಗಳಿಂದ ಬಂದ ಸೊಸೆಯಂದಿರು, ಪರಸ್ಪರ ತಿಳುವಳಿಕೆಯಿಂದ ಬಾಳುವುದು ಅಸಾಧ್ಯ" ಎನ್ನುವ ವಿಚಾರವನ್ನು ಒಪ್ಪಿಕೊಂಡರು. ಹಾಗೂ ಇದೇ ಕಾರಣದಿಂದಾಗಿ ಐವರು ಸಹೋದರರೂ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುವ ನಿರ್ಧಾರವನ್ನು ತಳೆದರು. ಜೊತೆಗೆ ಹಬ್ಬ ಹರಿದಿನಗಳಲ್ಲಿ ಎಲ್ಲ ಸೋದರರ ಕುಟುಂಬಗಳು ಒಂದಾಗಿ ಸೇರಿ ದೇವರ ಸೇವೆಯನ್ನು ಮಾಡಲು ನಿರ್ಧರಿಸಿದರು. 

ಅನ್ಯಥಾ ಶರಣಂ ನಾಸ್ತಿ,ತ್ವಮೇವ ಶರಣಂ ಮಮಃ, ಎಂದು ದೇವರಿಗೆ ಕೈಮುಗಿದು ಜ್ಯೋತಿಷ್ಯರ ನೆರವಿಲ್ಲದೆ ಮನಸ್ಸಿನ ಕೊಲೆಯನ್ನೆಲಾ ತೊಳೆದು ಅರ್ಥಪೂರ್ಣವಾಗಿ ಬಾಳುವ ನಿರ್ಧಾರಕ್ಕೆ ಬಂದಿದ್ದರು. ವರ್ಷ ಕಳೆಯುವುದರಲ್ಲಿ ಕಾರ್ಯಗತಗೊಂಡಿದ್ದ ಇವರ ನಿರ್ಧಾರದ ಪರಿಣಾಮವಾಗಿ, ಇದೀಗ ಈ ಸೋದರರ ಸಮಸ್ಯೆಗಳು ಹೇಳಹೆಸರಿಲ್ಲದಂತೆ ಮಾಯವಾಗಿರುವುದು ಸತ್ಯ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಸಾರಸ್ವತ ಜಾಗೃತಿ ಪತ್ರಿಕೆಯ ೦೧-೦೯- ೨೦೦೪ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ. 


No comments:

Post a Comment