Friday, December 27, 2013

NIMMA MAKKALU AAROGYAPEYAVANNU SEVISUTTIRUVARE?



  ನಿಮ್ಮ ಮಕ್ಕಳು ಆರೋಗ್ಯಪೇಯಗಳನ್ನು ಸೇವಿಸುತ್ತಿರುವರೇ?

ತಮ್ಮ ಪುಟ್ಟ ಕಂದನು ಹೊಟ್ಟೆತುಂಬುವಷ್ಟು ಆಹಾರವನ್ನೇ ಸೇವಿಸುತ್ತಿಲ್ಲ ಎಂದು ದೂರದೇ ಇರುವ ತಾಯಂದಿರು ಭಾರತದಲ್ಲಿ ಇರಲಾರು ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಅದೇ ರೀತಿಯಲ್ಲಿ ವಯಸ್ಸಿಗೆ ತಕ್ಕಷ್ಟು ಎತ್ತರ ಹಾಗೂ ತೂಕವಿದ್ದು, ಆರೋಗ್ಯದಿಂದಿರುವ ತನ್ನ ಮಗು ದಷ್ಟಪುಷ್ಟವಾಗಿಲ್ಲ ಎಂದು ಕೊರಗುವ ಮಾತೆಯರ ಸಂಖ್ಯೆಯೂ ಕಡಿಮೆಯೇನಿಲ್ಲ. ಹಾಗೂ ಇದೇ ಕಾರಣದಿಂದಾಗಿ ತಮ್ಮ ಸಣ್ಣಪುಟ್ಟ ಮಕ್ಕಳಿಗೂ "ಆರೋಗ್ಯಪೇಯ" ((Health drink) ಗಳನ್ನು ನೀಡುವ ಕೆಟ್ಟ ಹವ್ಯಾಸ ಅನೇಕ ತಾಯಂದಿರಲ್ಲಿ ಇದೆ. ಏಕೆಂದರೆ ಇಂತಹ ಆರೋಗ್ಯಪೇಯಗಳನ್ನು ಕುಡಿಯುವ ಮಕ್ಕಳು ದಷ್ಟಪುಷ್ಟವಾಗಿ ಬೆಳೆಯುತ್ತಾರೆಂದು ಭಾರತೀಯ ನಾರಿಯರು ಧೃಢವಾಗಿ ನಂಬಿದ್ದಾರೆ!. 

ಆರೋಗ್ಯ- ಶಕ್ತಿವರ್ಧಕ ಪೇಯಗಳು 

ಪ್ರತಿನಿತ್ಯ ನೀವು ಸಿದ್ಧಪಡಿಸುವ ಆಹಾರವನ್ನು ಸೇವಿಸಲು ನಿರಾಕರಿಸುವ ಮಕ್ಕಳಿಗೆ ಪರಿಪೂರ್ಣ ಪೋಷಕಾಂಶಗಳನ್ನು ಒದಗಿಸುವ, ಶಾರೀರಿಕ ಹಾಗೂ ಮಾನಸಿಕ ಶಕ್ತಿಗಳೊಂದಿಗೆ ಶರೀರದ ಬೆಳವಣಿಗೆಯನ್ನು ವೃದ್ಧಿಸುವ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ನಿಮ್ಮ ಕಂದನ ಆರೋಗ್ಯವನ್ನು ಕಾಪಾಡಬಲ್ಲ ವೈವಿಧ್ಯಮಯ ಆರೋಗ್ಯಪೇಯಗಳ ಆಕರ್ಷಕ ಜಾಹೀರಾತುಗಳು ಪ್ರತಿನಿತ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತವೆ. ಮಕ್ಕಳ ಬೆಳವಣಿಗೆಗೆ ಅತ್ಯವಶ್ಯಕವೆನಿಸುವ ವಿಭಿನ್ನ ಪೋಷಕಾಂಶಗಳು, ಖನಿಜಗಳು,ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಇತರ ಜೀವಸತ್ವಗಳಿಂದ ಸಮೃದ್ಧವಾಗಿದೆ ಎಂದು ಇವುಗಳ ತಯಾರಕರು ಸ್ವಯಂ ಘೋಷಿಸುವ ಜಾಹೀರಾತುಗಳಲ್ಲಿ,ಚಿಕ್ಕ ಮಕ್ಕಳ ಪಾಲಿಗೆ "ಹೀರೋ" ಗಳೆನಿಸಿರುವ ಪ್ರಖ್ಯಾತ ಕ್ರೀಡಾಪಟುಗಳನ್ನು ಬಳಸಲಾಗುತ್ತದೆ. ದೇಶದ ಮಾರುಕಟ್ಟೆಯಲ್ಲಿ ಇಂದು ಲಭ್ಯವಿರುವ ಅನ್ಯ ಅಸಂಖ್ಯ ಗ್ರಾಹಕ ಉತ್ಪನ್ನಗಳಂತೆಯೇ, ಇಂತಹ ಆರೋಗ್ಯ- ಶಕ್ತಿವರ್ಧಕ ಪೇಯಗಳ ಬಿರುಸಿನ ಮಾರಟಕ್ಕೆ ಬೇಕಾಗುವ "ಶಕ್ತಿ"ಯನ್ನು ಇಂತಹ ಚಿತ್ತಾಕರ್ಷಕ ಜಾಹೀರಾತುಗಳು ಒದಗಿಸುತ್ತವೆ. ಈ ಜಾಹೀರಾತುಗಳ ಮೋಡಿಗೆ ಮರುಳಾಗುವ ಗ್ರಾಹಕರಿಂದಾಗಿ, ಆರೋಗ್ಯಪೇಯಗಳ ಮಾರಾಟವು ವರ್ಷಂಪ್ರತಿ ಹೆಚ್ಚುತ್ತಲೇ ಇದೆ!. ಬಹುರಾಷ್ಟ್ರೀಯ ಮತ್ತು ಭಾರತೀಯ ಸಂಸ್ಥೆಗಳು ಗತವರ್ಷದಲ್ಲಿ ೧೫೦೦ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಹಿವಾಟನ್ನು ನಡೆಸಿದ್ದು, ಇವುಗಳು ಉತ್ಪಾದಿಸಿ ಮಾರಾಟಮಾಡಿದ್ದ ಆರೋಗ್ಯಪೇಯಗಳ ಪ್ರಮಾಣವು ೬೫ ಸಾವಿರ ಟನ್ ಗಳಾಗಿತ್ತು. 

ದೆಹಲಿಯಲ್ಲಿರುವ ಪ್ರಖ್ಯಾತ ಗ್ರಾಹಕ ರಕ್ಷಣಾ ಸಂಸ್ಥೆಯೊಂದು ೧೫ ವರ್ಷಕ್ಕಿಂತ ಕೆಳಗಿನ ಮಕ್ಕಳನ್ನೇ ಗುರಿಯಾಗಿಸಿ ಮಾರಾಟವಾಗುವ ೧೦ ವಿಭಿನ್ನ ಆರೋಗ್ಯಪೇಯಗಳ ಬಗ್ಗೆ ಒಂದೆರಡು ವರ್ಷಗಳ ಹಿಂದೆ ಅಧ್ಯಯನ ಮತ್ತು ಸಮೀಕ್ಷೆಗಳನ್ನು ನಡೆಸಿತ್ತು. ತತ್ಪರಿಣಾಮವಾಗಿ ದೆಹಲಿಯ ಶೇ. ೯೫.೫ ರಷ್ಟು ಶಾಲಾ ವಿದ್ಯಾರ್ಥಿಗಳು ಪ್ರತಿನಿತ್ಯ ಇಂತಹ ಆರೋಗ್ಯಪೇಯವೊಂದನ್ನುಕುಡಿಯುತ್ತರುವುದು ತಿಳಿದುಬಂದಿತ್ತು. ಇದರಲ್ಲಿ ಶೇ. ೯೦ ರಷ್ಟು ಮಕ್ಕಳು ಆರೋಗ್ಯಪೇಯಗಳ ಹರಳು ಅಥವಾ ಹುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿದಲ್ಲಿ, ಇನ್ನುಳಿದವರು ಇದನ್ನು ನೇರವಾಗಿ ಬಾಯಿಗೆ ಹಾಕಿ ಚಪ್ಪರಿಸುತ್ತಿದ್ದರು. ಶೇ.೩೨ ರಷ್ಟು ಮಕ್ಕಳು ದಿನದಲ್ಲಿ ಒಂದುಬಾರಿ ಯಾವುದಾದರೊಂದು ಆರೋಗ್ಯಪೇಯವೊಂದನ್ನು ತಪ್ಪದೆ ಸೇವಿಸುತ್ತಿದ್ದರು. ವಿಶೇಷವೆಂದರೆ ಅಧಿಕತಮ ಮಕ್ಕಳೇ ಹೇಳುವಂತೆ ಆರೋಗ್ಯಪೇಯಗಳ ತಯಾರಕರು ತಮ್ಮ ಜಾಹೀರಾತುಗಳಲ್ಲಿ ಪ್ರಕಟಿಸುತ್ತಿದ್ದ ಆಶ್ವಾಸನೆಗಳು ( ಶಾರೀರಿಕ ಮತ್ತು ಮಾನಸಿಕ ಶಕ್ತಿ ಹಾಗೂ ಬೆಳವಣಿಗೆ ಹೆಚ್ಚುವ) ನಿಜವೆನಿಸಿದ್ದವು!. 

ಆರೋಗ್ಯಪೇಯಗಳಲ್ಲಿ  ಏನಿದೆ?

ಅಧಿಕತಮ ಆರೋಗ್ಯ- ಶಕ್ತಿವರ್ಧಕ ಪೇಯಗಳು ಮಾಲ್ಟ್ ಮೂಲದವುಗಳಾಗಿದ್ದು, ಇವುಗಳನ್ನು ಬಿಸಿಯಾದ ಅಥವಾ ಶೀತಲೀಕರಿಸಿದ ಹಾಲಿನಲ್ಲಿ ಬೆರೆಸಿ ಕುಡಿಯುವಂತೆ ಇವುಗಳ ತಯಾರಕರು ಸೂಚಿಸುತ್ತಾರೆ. ಆಶ್ಚರ್ಯವೆಂದರೆ ಹಾಲನ್ನು ಕಂಡೊಡನೆ ಮುಖವನ್ನು ಸಿನ್ದರಿಸುವ ಮಕ್ಕಳೂ, ಇಂತಹ ಸ್ವಾದಿಷ್ಟ ಪೇಯಗಳನ್ನು ಮನಸಾರೆ ಮೆಚ್ಚಿ ಗುಟುಕರಿಸುತ್ತಾರೆ!. 

ಆದ್ರೆ ಕೇವಲ ಇಂತಹ ಪೇಯಗಳನ್ನು ಮಾತ್ರ ಸೇವಿಸುವುದರಿಂದ ನಿಮ್ಮ ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಶಕ್ತಿ ಮತ್ತು ಶರೀರದ ಎತ್ತರ ಹೆಚ್ಚುವ ಸಾಧ್ಯತೆಗಳಿಲ್ಲ. ಅದೇ ರೀತಿಯಲ್ಲಿ ಪ್ರತಿನಿತ್ಯ ಇಂತಹ ಪೇಯಗಳನ್ನು ಕುಡಿದಲ್ಲಿ ಕಂದನ ಶರೀರಕ್ಕೆ ಅತ್ಯವಶ್ಯಕವೆನಿಸುವ ಪೌಷ್ಟಿಕಾಂಶಗಳು- ಜೀವಸತ್ವಗಳು ಲಭಿಸುವುದಿಲ್ಲ. ಜೊತೆಗೆ ಹನ್ನುಹಂಪಳುಗಳು- ತರಕಾರಿಗಳನ್ನೇ ಸೇವಿಸದ ಮಕ್ಕಳು ಈ ಪೇಯಗಳನ್ನು ಸೇವಿಸುವ ಮೂಲಕ ಆರೋಗ್ಯವಂತರಾಗಿ ಇರುವುದು ಅಸಾಧ್ಯವೂ ಹೌದು. ಬಹುತೇಕ ವಿದ್ಯಾವನ್ತರಿಗೂ ಈ ಬಗ್ಗೆ ನಿಖರವಾದ ಮಾಹಿತಿ ತಿಳಿದಿರದ ಕಾರಣದಿಂದಾಗಿ, ಆರೋಗ್ಯಪೆಯಗಳು ಅಧಿಕತಮ ಮಕ್ಕಳ ದೈನಂದಿನ "ಆಹಾರ"ವಾಗಿ ಪರಿಣಮಿಸಿವೆ. 

ನಿಜ ಹೇಳಬೇಕಿದ್ದಲ್ಲಿ ಆರೋಗ್ಯಪೇಯಗಳನ್ನು ತಯಾರಿಸಲು ನೀವು ಬಳಸುವ "ಹಾಲು" ನಿಜಕ್ಕೂ ಒಂದು ಪರಿಪೂರ್ಣ ಆಹಾರವಾಗಿದೆ. ಉದಾಹರಣೆಗೆ ನಾವಿಂದು ಸಾಮಾನ್ಯವಾಗಿ ಬಳಸುವ ಹಸುವಿನ ಹಾಲು, ಅದರ ಕರುವಿನ ತ್ವರಿತ ಬೆಳವಣಿಗೆಗೆ ಅತ್ಯಂತ ಉಪಯುಕ್ತವೆನಿಸುತ್ತದೆ. ಅಕೆಂದರೆ ಹಸುವಿನ ಹಾಲಿನಲ್ಲಿ ಅನೇಕ ವಿಧದ ಪೋಷಕಾಂಶಗಳು ಇರುವುದರಿಂದ, ಪುಟ್ಟ ಮಕ್ಕಳ ಬೆಳವಣಿಗೆಯಲ್ಲೂ ಪರಿಣಾಮಕಾರಿ ಎನಿಸುತ್ತದೆ. 

ಮಾಲ್ಟ್ ಮೂಲದ ಪೇಯಗಳ ತಯಾರಿಕೆಯಲ್ಲಿ ಕೋಕೋ ಮತ್ತು ಸಕ್ಕರೆಗಳನ್ನು ಬಳಸುವುದರಿಂದ ಇವು ಸ್ವಾಭಾವಿಕವಾಗಿಯೇ ಸ್ವಾದಿಷ್ಟವಾಗಿರುತ್ತವೆ. ಆದರೆ ಕೋಕೋ ಸೇವಿಸಿದ ಸ್ವಲ್ಪ ಸಮಯದಲ್ಲೇ ತುಸು ಶಕ್ತಿ (Energy) ಹೆಚ್ಚುವುದಾದರೂ, ಇದರಿಂದ ಪುಟ್ಟ ಮಕ್ಕಳ ಹಸಿವು ನಶಿಸುತ್ತದೆ. 

ಭಾರತದಲ್ಲಿ ಮಾರಾಟವಾಗುತ್ತಿರುವ ಆರೋಗ್ಯಪೇಯಗಳಲ್ಲಿ ಕನಿಷ್ಠ ೩೭ ರಿಂದ ಗರಿಷ್ಠ ೭ ರಷ್ಟು ಪ್ರಮಾಣದ "ಸಕ್ಕರೆ" ಬೆರೆತಿರುತ್ತದೆ. ಕಿಲೋ ಒಂದರ ಸುಮಾರು ೩೦೦ ರೂ. ಗಳಿಂದ ೪೫೦ ರ್ರ್. ಗಳಿಗೆ ಮಾರಾಟವಾಗುವ ಇಂತಹ ಉತ್ಪನ್ನಗಳಲ್ಲಿ ಬೆರೆತಿರುವ ಸಕ್ಕರೆಯ ಬೆಲೆಯು ಕಿಲೋ ಒಂದರ ಸುಮಾರು ೩೦ ರಿಂದ ೩೨ ರೂ.ಗಳಾಗಿದೆ!. 

ಪ್ರತಿಯೊಂದು ಆರೋಗ್ಯಪೆಯದಲ್ಲೂ ವೈವಿಧ್ಯಮಯ ಪೋಷಕಾಂಶಗಳು, ಖನಿಜಗಳು, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ನಾರಿನಂಶಗಳು ಇರುತ್ತವೆ. ಆದರೆ ಸಮತೋಲಿತ ಆಹಾರವನ್ನು ಸೇವಿಡುವ ಮಕ್ಕಳಿಗೆ, ಇದಕ್ಕಿಂತ ಅಧಿಕ ಪ್ರಮಾಣದ ಪೌಷ್ಟಿಕಾಂಶಗಳು ದೈನಂದಿನ ಆಹಾರದಲ್ಲೇ ಲಭಿಸುತ್ತವೆ. ಇದೇ ಕಾರಣದಿಂದಾಗಿ ಆರೋಗ್ಯಪೇಯಗಳು ಮಕ್ಕಳು ಪ್ರತಿನಿತ್ಯ ಸೇವಿಸುವ ಆಹಾರಕ್ಕೆ ಪರ್ಯಾಯ ಆಹಾರವೆನಿಸುವುದಿಲ್ಲ. 

ಬೆಳೆಯುವ ಮಕ್ಕಳಿಗೆ ಪ್ರತಿನಿತ್ಯ ಒಂದಿಷ್ಟು ಹಾಲು - ಮೊಸರು, ಸೊಪ್ಪು- ತರಕಾರಿಗಳು, ದವಸ ಧಾನ್ಯಗಳು, ಹಣ್ಣು ಹಂಪಲುಗಳು ಮತ್ತು ಮೊಟ್ಟೆ ಇತ್ಯಾದಿಗಳನ್ನೂ ಸೂಕ್ತ ಪ್ರಮಾಣದಲ್ಲಿ ನೀಡುವ ಹವ್ಯಾಸವನ್ನು ರೂಧಿಸಿಕೊಳ್ಳಿರಿ. ಜೊತೆಗೆ ಕ್ರೀಡೆ- ವ್ಯಾಯಾಮಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದಲ್ಲಿ, ನಿಮ್ಮ ಮಕ್ಕಳ ಶಾರೀರಿಕ- ಮಾನಸಿಕ ಶಕ್ತಿ ಮತ್ತು ಶಾರೀರಿಕ ಬೆಳವಣಿಗೆಗಳು ಹೆಚ್ಚುವುದರೊಂದಿಗೆ ಅವರ ಆರೋಗ್ಯದ ಮಟ್ಟವನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳಬಹುದಾಗಿದೆ ಎನ್ನುವುದನ್ನು ಮರೆಯದಿರಿ. 

ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರಯ್ಯಾ!

ಸುಪ್ರಸಿದ್ಧ ಆರೋಗ್ಯ- ಶಕ್ತಿವರ್ಧಕ ಪೇಯವೊಂದನ್ನು ತಯಾರಿಸುವ ಸಂಸ್ಥೆಯು ತನ್ನ ಉತ್ಪನ್ನವನ್ನು ಪ್ರತಿನಿತ್ಯ ಸೇವಿಸುವುದರಿಂದ ಮಕ್ಕಳ ಬೆಳವಣಿಗೆ, ಶಾರೀರಿಕ ಮತ್ತು ಮಾನಸಿಕ ಶಕ್ತಿಗಳು ವೃದ್ಧಿಸುತ್ತವೆ ಎನ್ನುವ ಜಾಹೀರಾತನ್ನು ನೀಡುತ್ತಿತ್ತು. ಈ ವಿಚಾರವನ್ನು ಸಮರ್ಥಿಸಲು ತಾನೇ ನಡೆಸಿದ್ದ ಅಧ್ಯಯನವೊಂದರ ವರದಿಯನ್ನು ಬಳಸಿಕೊಳ್ಳುತ್ತಿತ್ತು. ಈ ವರದಿಯಂತೆ ೮೭೯ ಮಕ್ಕಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿ, ಒಂದು ಗುಂಪಿನ ಮಕ್ಕಳಿಗೆ ಮಾತ್ರ ತನ್ನ ಆರೋಗ್ಯಪೇಯವನ್ನು ಪ್ರತಿನಿತ್ಯ ನೀಡಿತ್ತು. ಇದನ್ನು ಹೊರತುಪಡಿಸಿದಲ್ಲಿ ಎರಡೂ ಗುಂಪಿನ ಮಕ್ಕಳ ಆಹಾರ, ಚಟುವಟಿಕೆಗಳು ಮತ್ತು ವಿದ್ಯಾಭ್ಯಾಸ ಇತ್ಯಾದಿಗಳು ಏಕರೀತಿಯಲ್ಲಿ ಇದ್ದವು. ೧೪ ತಿಂಗಳುಗಳ ಬಳಿಕ ಇವೆರಡೂ ಗುಂಪಿನ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದಾಗ, ಪ್ರತಿನಿತ್ಯ ಆರೋಗ್ಯಪೇಯವನ್ನು ಸೇವಿಸುತ್ತಿದ್ದ ಮಕ್ಕಳ ಎತ್ತರ ಹಾಗೂ ಶಾರೀರಿಕ ಮತ್ತು ಮಾನಸಿಕ ಶಕ್ತಿಗಳು ಹೆಚ್ಚಿರುವುದು ಪತ್ತೆಯಾಗಿತ್ತು. ಹೈದರಾಬಾದ್ ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಶನ್ ಸಂಸ್ಥೆಯು ಈ ಅಧ್ಯಯನವನ್ನು ನಡೆಸಿತ್ತು ಎಂದು ಸಂಸ್ಥೆ ಹೇಳಿಕೊಂಡಿತ್ತು. ಭಾರತದ ಟಿ. ವಿ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿದ್ದ ಈ ಜಾಹೀರಾತನ್ನು, ನೇಪಾಲದ ಚಾನೆಲ್ ಒಂದು ಪ್ರಮಾದವಶಾತ್ ಇಂಗ್ಲೆಂಡ್ ನಲ್ಲೂ ಪ್ರಸಾರ ಮಾಡಿತ್ತು. ಈ ಜಾಹೀರಾತನ್ನು ಗಮನಿಸಿದ್ದ ಇಂಗ್ಲೆಂಡ್ ನ ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್, ಈ ಆರೋಗ್ಯಪೇಯವನ್ನು ತಯಾರಿಸುವ ಸಂಸ್ಥೆಗೆ ನೋಟೀಸು ಜಾರಿಗೊಳಿಸಿ, ಇಂತಹ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಆದೇಶಿಸಿತ್ತು. 

ವಿಶೇಷವೆಂದರೆ ಭಾರತದ ನೂರಾರು ಟಿ. ವಿ ಚಾನೆಲ್ ಗಳಲ್ಲಿ ಇದೇ ರೀತಿಯ ಅನೇಕ ಜಾಹೀರಾತುಗಳು ಇಂದಿಗೂ ಪ್ರಸಾರವಾಗುತ್ತಿವೆ. ಆದರೆ ಇಂತಹ ಜಾಹೀರಾತುಗಳನ್ನು ನೀಡುವ ಸಂಸ್ಥೆಗಳ ವಿರುದ್ಧ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿಲ್ಲ!. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ಡಿ. ೩೦-೦೩-೨೦೧೨ ರ ಮಹಿಳಾ ಸಂಪದ ಸಂಚಿಕೆಯಲ್ಲಿ ಪ್ರಕಟಿತ ಲೇಖನ. 


No comments:

Post a Comment