Friday, December 13, 2013

Infrastructure development!

           ಅಭಿವೃದ್ಧಿ ಯೋಜನೆ: ತಜ್ಞರಿಗಿಲ್ಲ ಮುಂದಾಲೋಚನೆ!

ದೇಶದ ಪ್ರಜೆಗಳು ನೆಮ್ಮದಿಯಿಂದ ಜೀವಿಸಲು ಅತ್ಯವಶ್ಯಕವೆನಿಸುವ ಮೂಲ ಮತ್ತು ಇನ್ನಿತರ ಸೌಕರ್ಯಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳುತ್ತವೆ. ಕೋಟ್ಯಂತರ ರೂಪಾಯಿ ವೆಚ್ಚದ ಬೃಹತ್ ಯೋಜನೆಗಳ ಅನುಷ್ಠಾನಕ್ಕೆ ಮುನ್ನ ಮತ್ತು ಅನುಷ್ಠಾನದ ಸಂದರ್ಭದಲ್ಲಿ ಸಂಭವಿಸುವ ಲೋಪದೋಷಗಳಿಂದಾಗಿ, ಜನಸಾಮಾನ್ಯರಿಗೆ ಅಯಾಚಿತ ಕಷ್ಟಗಳು ಮತ್ತು ಸರಕಾರಕ್ಕೆ ಸಾಕಷ್ಟು ನಷ್ಟವೂ ಸಂಭವಿಸುತ್ತಿದೆ. ಆದರೆ ಇಂತಹ ಯೋಜನೆಗಳ ಸಾಧಕ- ಬಾಧಕಗಳ ಬಗ್ಗೆ ಸಮೀಕ್ಷೆಯನ್ನು ನಡೆಸುವ ಮತ್ತು ಇದರ ರೂಪುರೇಷೆಗಳನ್ನು ಸಿದ್ಧಪಡಿಸುವ ತಾಂತ್ರಿಕ ತಜ್ಞರು, ಇವೆಲ್ಲವನ್ನೂ ನಿರ್ಲಕ್ಷಿಸುತ್ತಿರುವುದು ನಂಬಲು ಅಸಾಧ್ಯವೆನಿಸುತ್ತಿದೆ. 

ಉದಾಹರಣೆಗೆ ಕರಾವಳಿ ಕರ್ನಾಟಕದ ಆಯ್ದ ಹತ್ತು ನಗರ- ಪಟ್ಟಣಗಳ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಹಮ್ಮಿಕೊಂಡಿದ್ದ ೧೦೫೬ ಕೋಟಿ ರೂ.ಗಳ ಕುದ್ಸೆಮ್ಪ್ ಯೋಜನೆಯ ಸಾಧಕ- ಬಾಧಕಗಳ ಬಗ್ಗೆ "ನೆಡೆಕೊ" ಎನ್ನುವ ವಿದೇಶಿ ಸಂಸ್ಥೆಯು ಸಮೀಕ್ಷೆಯನ್ನು ನಡೆಸಿತ್ತು. ಅಂತೆಯೇ ಈ ಯೋಜನೆಗೆ "ದಲಾಲ್ ಕನ್ಸಲ್ಟೆಟೆಂಟ್ಸ್" ಎನ್ನುವ ಸಂಸ್ಥೆಯನ್ನು ತಾಂತ್ರಿಕ ತಜ್ಞರನ್ನಾಗಿ ನೇಮಕ ಮಾಡಲಾಗಿತ್ತು. ೧೯೯೦ ರ ದಶಕದ ಅಂತ್ಯದಲ್ಲಿ ಈ ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸುವಾಗ, ಮುಂದಿನ ೨೫ ವರ್ಷಗಳಲ್ಲಿ ಈ ಹತ್ತು ನಗರ- ಪಟ್ಟಣಗಳಲ್ಲಿನ ಜನಸಂಖ್ಯೆ, ವಾಹನಗಳ ಸಂಖ್ಯೆ ಮತ್ತಿತರ ವಿವರಗಳನ್ನು ಪರಿಗಣಿಸಲಾಗಿತ್ತು. ಆದರೆ ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಅನೇಕ ಪ್ರಮುಖ ವಿಚಾರಗಳನ್ನು ಕಡೆಗಣಿಸಲಾಗಿತ್ತು. ತತ್ಪರಿಣಾಮವಾಗಿ ಇದೀಗ ಅನುಷ್ಠಾನಗೊಳ್ಳುತ್ತಿರುವ ಅನ್ಯ ಯೋಜನೆಗಳ ಕಾಮಗಾರಿಗಳಿಗೆ ಅಯಾಚಿತ ತೊಂದರೆಗಳು- ಅಡ್ಡಿ ಆತಂಕಗಳು ಬಾಧಿಸುತ್ತಿವೆ. ಇದಕ್ಕೊಂದು ಉತ್ತಮ ಉದಾಹರಣೆ ಇಲ್ಲಿದೆ. 

ಕುಡಿಯುವ ನೀರಿನ ಯೋಜನೆ 

ಕುಡ್ಸೆಂಪ್ ಯೋಜನೆಯನ್ವಯ ಪುತ್ತೂರಿನ ನಿವಾಸಿಗಳಿಗೆ ಪ್ರತಿನಿತ್ಯ ೧ ಕೋಟಿ ಲೀಟರ್ ಶುದ್ಧೀಕರಿಸಿದ ಕುಡಿಯುವ ನೀರಿನ ಪೂರೈಕೆಗಾಗಿ ಸುಮಾರು ೨೯ ಕೋಟಿ ರೂ.ಗಳನ್ನು ವ್ಯಯಿಸಲಾಗಿತ್ತು. ಉಪ್ಪಿನಂಗಡಿಯ ಸಮೀಪದಲ್ಲಿನ ನೆಕ್ಕಿಲಾಡಿ ಗ್ರಾಮದ ಸನಿಹದಲ್ಲಿ ಕುಮಾರಧಾರಾ ನದಿಗೆ ಅಡ್ಡವಾಗಿ ಕಿಂಡಿ ಅಣೆಕಟ್ಟನ್ನು ನಿರ್ಮಿಸಿ, ಇಲ್ಲಿ ಸಂಗ್ರಹಿತ ನೀರನ್ನು ಶುದ್ಧೀಕರಿಸಿದ ಬಳಿಕ, ಭೂಗತ ಕೊಳವೆಗಳ ಮೂಲಕ ಪುತ್ತೂರಿನ ಜಲಸಂಗ್ರಹಾಗಾರಕ್ಕೆ ರವಾನಿಸಬೇಕಿತ್ತು. ಈ ಭೂಗತ ಕೊಳವೆಗಳನ್ನು ಉಪ್ಪಿನಂಗಡಿ- ಪುತ್ತೂರು ರಸ್ತೆಯ ಅಂಚಿನಲ್ಲೇ ಅಳವಡಿಸಿದ್ದು, ಇದೀಗ ಕೆಪುಳು- ಪುತ್ತೂರು ಹೆದ್ದಾರಿಯ ರಸ್ತೆಯ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿ ಪರಿಣಮಿಸಿದೆ. ಕುಡ್ಸೆಂಪ್ ಯೋಜನೆಯ ತಾಂತ್ರಿಕ ಸಲಹೆಗಾರರು ಈ ಕುಡಿಯುವ ನೀರಿನ ಪೂರೈಕೆಯ ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸುವ ಸಂದರ್ಭದಲ್ಲಿ, ಮುಂದಿನ ೨೫ ವರ್ಷಗಳಲ್ಲಿ ಉಪ್ಪಿನಂಗಡಿ- ಪುತ್ತೂರು ರಸ್ತೆಯ ವಿಸ್ತರಣೆ- ಅಭಿವೃದ್ಧಿಗಳನ್ನು ಪರಿಗಣಿಸದೇ ಭೂಗತ ನೀರಿನ ಕೊಳವೆಗಳನ್ನು ಅಳವಡಿಸಿದ್ದುದು ಸಾಕಷ್ಟು ಸಮಸ್ಯೆಗಳಿಗೆ ಕಾರಣವೆನಿಸಿದೆ. ಇ ರಸ್ತೆಯ ಒಂದು ಬದಿಯಲ್ಲಿ ಕುಡ್ಸೆಂಪ್ ಯೋಜನೆಯ ಭೂಗತ ಕೊಳವೆಗಳು ಇದ್ದಲ್ಲಿ, ಮತ್ತೊಂದು ಬದಿಯಲ್ಲಿ ೮೦ ರ ದಶಕದಲ್ಲಿ ಅನುಷ್ಠಾನಗೊಂಡಿದ್ದ ಕುಡಿಯುವ ನೀರಿನ ಪೂರೈಕೆಯ ಭೂಗತ ಕೊಳವೆಗಳಿವೆ. ತತ್ಪರಿಣಾಮವಾಗಿ ರಸ್ತೆಗಳ ವಿಸ್ತರಣೆಗೆ ಅಡಚಣೆಯಾಗುತ್ತಿರುವ ಈ ಕೊಳವೆಗಳನ್ನು ಸ್ಥಳಾಂತರಿಸಲು ೭ ಕೋಟಿ ರೂ. ಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ್ದರೂ, ಆರ್ಥಿಕ ಅಡಚಣೆಗಳಿಂದಾಗಿ ೨ ಕೋಟಿ ರೂ. ಗಳನ್ನು ಮಂಜೂರು ಮಾಡಿ ಅತ್ಯವಶ್ಯಕ ಎನಿಸುವಲ್ಲಿ ಮಾತ್ರ ಭೂಗತ ಕೊಳವೆಗಳನ್ನು ಸ್ಥಳಾಂತರಿಸುವಂತೆ ಸೂಚಿಸಿದೆ. 

ಇಷ್ಟು ಮಾತ್ರವಲ್ಲ, ಪುತ್ತೂರು ನಗರದ ಅನೇಕ ರಸ್ತೆಗಳನ್ನು ಕುಡ್ಸೆಂಪ್ ಯೋಜನೆಯಲ್ಲಿ ವಿಸ್ತರಿಸಿ ಪುನರ್ನಿರ್ಮಿಸಿದ್ದು, ಜಲ ಸಂಗ್ರಹಾಗಾರದಿಂದ ನಗರಕ್ಕೆ ನೀರನ್ನು ಪೂರೈಸುವ ಭೂಗತ ಕೊಳವೆಗಳು ಇದೀಗ ಅಕ್ಷರಶಃ ವಿಸ್ತರಿತ ರಸ್ತೆಯ ಕೆಳಗಿವೆ!. ಈ ಕೊಳವೆಗಳು ಸೋರಲು ಆರಂಭಿಸಿದಲ್ಲಿ, ರಸ್ತೆಗಳನ್ನೇ ಅಗೆದು ದುರಸ್ಥಿ ಮಾಡಬೇಕಾಗುತ್ತದೆ. ಕೊಳವೆಗಳನ್ನು ದುರಸ್ಥಿಪಡಿಸಿದರೂ, ರಸ್ತೆಯ ಅಗೆದ ಭಾಗವನ್ನು ಪೂರ್ವಸ್ಥಿತಿಗೆ ಸರಿಯಾಗಿ ದುರಸ್ಥಿಪಡಿಸದೇ ಇರುವುದರಿಂದ ಈಗಾಗಲೇ ನಗರದ ಅನೇಕ ರಸ್ತೆಗಳು ಸಾಕಷ್ಟು ಹಾನಿಗೊಂಡಿವೆ. ಭೂಗತ ಕೊಳವೆಗಳ ಸೋರುವಿಕೆ ಇದೇ ರೀತಿಯಲ್ಲಿ ಮುಂದುವರೆದಲ್ಲಿ, ನಗರದ ಇತರ ರಸ್ತೆಗಳು ಮತ್ತು ಕಾಲುದಾರಿಗಳು ಸದ್ಯೋಭವಿಷ್ಯದಲ್ಲಿ ಅವಸಾನದ ಅಂಚನ್ನು ತಲುಪುವುದರಲ್ಲಿ ಸಂದೇಹವಿಲ್ಲ. 

ಇವೆಲ್ಲಕ್ಕೂ ಮಿಗಿಲಾಗಿ ಇದೇ ಕುಡ್ಸೆಂಪ್ ಯೋಜನೆಯಲ್ಲಿ "ಅನುಷ್ಠಾನ ಅಸಾಧ್ಯ"ವೆಂದು ಕೈಬಿಟ್ಟಿದ್ದ "ಒಳಚರಂಡಿ ಯೋಜನೆ" ಯನ್ನುಮತ್ತು ಕುಡಿಯುವ ನೀರಿನ ಪೂರೈಕೆಯ ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ರಾಜ್ಯ ಸರಕಾರವು ಅನುಕ್ರಮವಾಗಿ ೭೫ ಮತ್ತು ೧೫ ಕೋಟಿ ರೂ. ಗಳನ್ನು ಸಾಲದ ರೂಪದಲ್ಲಿ  ಮಂಜೂರು ಮಾಡಿದ್ದು, ಇದೀಗ ಇದನ್ನು ಅನುಷ್ಠಾನಗೊಳಿಸಲು ಸುಸ್ಥಿತಿಯಲ್ಲಿರುವ  ನಗರದ ರಸ್ತೆಗಳನ್ನು ಮತ್ತೊಮ್ಮೆ ಅಗೆಯಬೇಕಾಗುತ್ತದೆ. ಇವೆರಡೂ ಯೋಜನೆಗಳನ್ನು ಹಿಂದಿನ ಕುಡ್ಸೆಂಪ್ ಯೋಜನೆಯಲ್ಲೇ ಅನುಷ್ಠಾನಗೊಳಿಸಿದ ಬಳಿಕ ರಸ್ತೆಗಳ ಪುನರ್ ನವೀಕರಣವನ್ನು ನಡೆಸಿದ್ದಲ್ಲಿ ಇಂತಹ ಸಮಸ್ಯೆ ಉದ್ಭವಿಸುತ್ತಿರಲಿಲ್ಲ ಎನ್ನುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಅನುಷ್ಠಾನ ಅಸಾಧ್ಯವೆಂದ ಯೋಜನೆಯೊಂದು ಇದೀಗ ಸಾಧ್ಯವಾಗುವುದು ಹೇಗೆಂದು ನಮಗೂ ಅರ್ಥವಾಗುತ್ತಿಲ್ಲ!. 

ಅದೇನೇ ಇರಲಿ, ಜನಸಾಮಾನ್ಯರಿಗೂ ಅರ್ಥವಾಗುವ ಈ ಪ್ರಮುಖ ವಿಚಾರಗಳು ಇಂತಹ ಯೋಜನೆಗಳ ತಾಂತ್ರಿಕ ತಜ್ಞರಿಗೆ ಹೊಳೆಯುತ್ತಿಲ್ಲವೇಕೆ ?, ಎನ್ನುವ ಪ್ರಶ್ನೆಗೆ ಉತ್ತರವನ್ನು ನೀಡುವವರೇ ಇಲ್ಲ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಚಿತ್ರ - ಕುಡ್ಸೆಂಪ್ ಯೋಜನೆಯಲ್ಲಿ ಪುನರ್ ನವೀಕರಿಸಿದ್ದ ರಸ್ತೆಯನ್ನು ಸೋರುತ್ತಿರುವ ಭೂಗತ ಕೊಳವೆಯ ದುರಸ್ತಿಗಾಗಿ ಅಗೆದಿರುವುದು. 

No comments:

Post a Comment