Wednesday, December 18, 2013

SHAAREERIKA DOSHAGALIRUVA TANAKA SAMASYE PARIHARAVAAGADU!





 ಶಾರೀರಿಕ ದೋಷಗಳಿರುವ  ತನಕ ಸಮಸ್ಯೆ ಪರಿಹಾರವಾಗದು!

ಶಾಂತಮ್ಮನ ಏಕಮಾತ್ರ ಪುತ್ರ ಗಣೇಶನಿಗೆ ಗಾಯತ್ರಿಯೊಂದಿಗೆ ವಿವಾಹವಾಗಿ ಎರಡು ವರ್ಷಗಳೇ ಸಂದಿದ್ದವು. ಇದೀಗ ತನ್ನ ಮಗನಿಗೆ ಸಂತಾನಪ್ರಾಪ್ತಿ ಆಗದೇ ಇರುವುದು ಶಾಂತಮ್ಮನ ಚಿಂತೆಗೆ ಕಾರಣವೆನಿಸಿತ್ತು. ಅತ್ತೆಯ ಕೊರಗಿಗೆ ತಾನೇ ಕಾರಣ ಎನ್ನುವ ಭ್ರಮೆಯಿಂದ, ಗಾಯತ್ರಿಯೂ ದಿನಗಳು ಉರುಳಿದಂತೆಯೇ ಸೊರಗಲಾರಂಭಿಸಿದ್ದಳು. ಸದಾ ತನ್ನ ವ್ಯಾಪಾರ ವಹಿವಾಟುಗಳಲ್ಲಿ ಮಗ್ನನಾಗಿದ್ದ ಗಣೇಶನು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. 

ತನ್ನ ಮಗನ ಸಂತಾನಹೀನತೆಗೆ ಜಾತಕದಲ್ಲಿನ ದೋಷಗಳು ಕಾರಣವಾಗಿರಬಹುದೇ ಎನ್ನುವ ಸಂದೇಹ ಶಾಂತಮ್ಮನನ್ನು ಸದಾ  ಕಾಡುತ್ತಿತ್ತು. ಅಂತಿಮವಾಗಿ ಈ ಸಂದೇಹವನ್ನು ನಿವಾರಿಸಿಕೊಳ್ಳಲು ತಮ್ಮ ಕುಟುಂಬದ ಜ್ಯೋತಿಷಿಗಳನ್ನು ಭೇಟಿಯಾಗಿ, ತನ್ನ ಮಗ ಮತ್ತು ಸೊಸೆಯರ ಜಾತಕಗಳನ್ನು ಕೂಲಂಕುಶವಾಗಿ ಪರಿಶೀಲಿಸುವಂತೆ ವಿನಂತಿಸಿದ್ದಳು.ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಇವೆರಡೂ ಜಾತಕಗಳನ್ನು ಪರಿಶೀಲಿಸಿದ ಜ್ಯೋತಿಷಿಗೆ, ಪೂರ್ವಜನ್ಮಕ್ಕೆ ಸಂಬಂಧಿಸಿದ ಒಂದೆರಡು ದೋಷಗಳು ಪತ್ತೆಯಾಗಿದ್ದವು. ಈ ದೋಷಗಳಿಗೆ ನಿರ್ದಿಷ್ಟ ಪರಿಹಾರಗಳೂ ಇವೆಯೆಂದ ಜ್ಯೋತಿಷಿಗಳು, ಇದನ್ನು ನೆರವೇರಿಸಬೇಕಾದ ವಿಧಿ ವಿಧಾನಗಳು ಮತ್ತು ಇದನ್ನು ಸಮರ್ಪಕವಾಗಿ ನಡೆಸಬಲ್ಲ ಪುರೋಹಿತರೊಬ್ಬರ ವಿವರಗಳನ್ನೂ ತಿಳಿಸಿದರು. ವಿಶೇಷವೆಂದರೆ ಗಣೇಶನ ಮದುವೆಗೆ ಮುನ್ನ ಇವೆರಡೂ ಜಾತಕಗಳನ್ನು ಪರಿಶೀಲಿಸಿದ್ದ ಇದೇ ಜ್ಯೋತಿಷಿಗೆ, ಅಂದು ಪೂರ್ವಜನ್ಮಕ್ಕೆ ಸಂಬಧಿಸಿದ ದೋಷಗಳು ಪತ್ತೆಯಾಗಲಿಲ್ಲವೇಕೆ?, ಎನ್ನುವ ವಿಚಾರ ಮುಗ್ದೆ ಶಾಂತಮ್ಮನ ಮನಸ್ಸಿಗೂ ಹೊಳೆದಿರಲಿಲ್ಲ!. 

ತಿಂಗಳೊಪ್ಪತ್ತಿನಲ್ಲಿ ಜ್ಯೋತಿಷಿ ಸೂಚಿಸಿದ್ದ ಪರಿಹಾರಗಳನ್ನು ಸಾಂಗವಾಗಿ ನೆರವೇರಿಸಿದ ಶಾಂತಮ್ಮನು ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟಿದ್ದಳು. ಮುಂದಿನ ಆರು ತಿಂಗಳುಗಳಲ್ಲಿ ಸೊಸೆಯಿಂದ ಶುಭವಾರ್ತೆ ದೊರೆಯುವುದೆನ್ನುವ ನಿರೀಕ್ಷೆಯಲ್ಲಿದ್ದ ಆಕೆಗೆ ನಿರಾಸೆಯಾಗಿತ್ತು. ಜ್ಯೋತಿಷಿಯ ಪರಿಹಾರ ಪರಿಣಾಮವನ್ನು ತೋರುವುದೆಂದು ನಂಬಿದ್ದ ಗಾಯತ್ರಿಗೂ, ಇದೀಗ ತಾನು ಬಂಜೆ ಎನ್ನುವ ಭಾವನೆ ಮೂಡಿತ್ತು.

ಅದೊಂದು ದಿನ ಅನಿರೀಕ್ಷಿತವಾಗಿ ಗಾಯತ್ರಿಯನ್ನು ಭೇಟಿಯಾಗಲು ಬಂದಿದ್ದ ಆಕೆಯ ಸಂಬಂಧಿಯೊಬ್ಬರು ಮುತ್ತೂರಿನಲ್ಲಿ ಸಂತತಿಹೀನರಿಗೆ ಚಿಕಿತ್ಸೆಯನ್ನು ನೀಡುವ "ವೈದ್ಯ" ರೊಬ್ಬರ ಬಗ್ಗೆ ಹೇಳಿದ್ದರು. ಈ ವ್ಯಕ್ತಿಯ ಚಿಕಿತ್ಸೆಯಿಂದ ಅನೇಕ ದಂಪತಿಗಳಿಗೆ ಸಂತಾನ ಭಾಗ್ಯ ಪ್ರಾಪ್ತಿಯಾದ ಘಟನೆಗಳನ್ನೂ ವಿಸ್ತಾರವಾಗಿ ವಿವರಿಸಿದ್ದರು. ಇದನ್ನು ಕೇಳಿದ ಶಾಂತಮ್ಮನಿಗೆ ಸ್ವರ್ಗಕ್ಕೆ ಮೂರೇ ಗೇಣು ಎನಿಸಿದ್ದು ಮಾತ್ರ ಸುಳ್ಳೇನಲ್ಲ. ಗಯಾತ್ರಿಯು ಈ ಚಿಕಿತ್ಸೆಯನ್ನು ಪಡೆಯಲು ಸಿದ್ಧಳಿದ್ದರೂ, ನಕಲಿವೈದ್ಯರ ಬಗ್ಗೆ ನಂಬಿಕೆಯಿಲ್ಲದ ಗಣೇಶನು ಇದಕ್ಕೆ ಒಪ್ಪಿಗೆ ನೀಡುವ ಸಾಧ್ಯತೆಗಳೇ ಇರಲಿಲ್ಲ. ಅದೃಷ್ಟವಶಾತ್ ಈ ವೈದ್ಯನ ಚಿಕಿತ್ಸೆಯನ್ನು ಪಡೆಯಲು ದಂಪತಿಗಳು ಆತನಲ್ಲಿಗೆ ಹೋಗಬೇಕಾದ ಅವಶ್ಯಕತೆಯೇ ಇರಲಿಲ್ಲ. ಕೇವಲ ಪತ್ನಿಯರನ್ನು ಪರೀಕ್ಷಿಸಿ ಔಷದವನ್ನು ನೀಡುವುದೇ ಆತನ ವಿಶೇಷತೆಯಾಗಿತ್ತು!. 

ಕೆಲವೇ ದಿನಗಳ ಬಳಿಕ ಗಾಯತ್ರಿಯನ್ನು ಒತ್ತಾಯಪೂರ್ವಕವಾಗಿ ಮುತ್ತೂರಿಗೆ ಕರೆದೊಯ್ದ ಶಾಂತಮ್ಮನಿಗೆ ಈ "ಚಿಕಿತ್ಸಕ" ನನ್ನು ಕಂಡು ತುಸು ಗಾಬರಿಯೂ ಆಗಿತ್ತು. ಒಂದೆರಡು ಪ್ರಶ್ನೆಗಳನ್ನು ಕೇಳಿದ ಬಳಿಕ ಗಾಯತ್ರಿಯನ್ನು ಒಳಗೆ ಕರೆದೊಯ್ದು ಪರೀಕ್ಷಿಸಿದ ವೈದ್ಯನು, ಚಿಕಿತ್ಸೆಯನ್ನು ನೀಡುವ ಹಾಗೂ ಗಾಯತ್ರಿಗೆ ಸಂತಾನ ಪ್ರಾಪ್ತಿಯಾಗುವ ಆಶ್ವಾಸನೆಯನ್ನು ನೀಡಿದ್ದನು. ಮೂರು ಬಾಟಲಿ ಕಷಾಯವನ್ನು ನೀಡಿದ ವೈದ್ಯನು, ಇದನ್ನು ಸೇವಿಸುವ ವಿಧಾನ ಮತ್ತು ಪರಿಪಾಲಿಸಬೇಕಾದ ಪಥ್ಯಗಳ ವಿವರಗಳನ್ನು ನೀಡಿದ್ದನು. ಜೊತೆಗೆ ಇವೆಲ್ಲವನ್ನೂ ಸಮರ್ಪಕವಾಗಿ ಪರಿಪಾಲಿಸದೇ ಇದ್ದಲ್ಲಿ ಚಿಕಿತ್ಸೆ ಫಲಕಾರಿಯಾಗದು ಎಂದು ಎಚ್ಚರಿಕೆಯನ್ನೂ ನೀಡಿದ್ದನು!. 

ಸುಮಾರು ಒಂದುವರ್ಷ ನಿರಂತರವಾಗಿ ಈ ಚಿಕಿತ್ಸೆಯನ್ನು ಶ್ರದ್ಧೆಯಿಂದ ಪಡೆದುಕೊಂಡರೂ, ಗಾಯತ್ರಿ ಮಾತ್ರ ಗರ್ಭ ಧರಿಸಲೇ ಇಲ್ಲ. ಸಾಯುವ ಮುನ್ನ ಮೊಮ್ಮಗನನ್ನು ಕಾಣಬೇಕೆಂಬ ತನ್ನ ಕನಸು ಇನ್ನು ನನಸಾಗದೆನ್ನುವ ದುಃಖದಿಂದ ಶಾಂತಮ್ಮನು ಪ್ರತಿನಿತ್ಯ ಮೌನವಾಗಿ ಕಣ್ಣೇರು ಸುರಿಸುತ್ತಿದ್ದಳು. ಅತ್ತೆಯ ವ್ಯಥೆಗೆ ತನ್ನ ಬಂಜೆತನವೇ ಕಾರಣವೆಂದು ನಂಬಿದ್ದ ಗಾಯತ್ರಿಯೂ ತನ್ನ ನೋವನ್ನು ನುಂಗಿಕೊಂಡು ಕೊರಗುತ್ತಿದ್ದಳು. 

ತನ್ಮಧ್ಯೆ ವಿದೇಶದಲ್ಲಿ ನೆಲೆಸಿದ್ದ ಶಾಂತಮ್ಮನ ಸೋದರ ಹಾಗೂ ಪ್ರಖ್ಯಾತ ವೈದ್ಯ ಸತೀಶನು ಅನೇಕ ವರ್ಷಗಳ ಬಳಿಕ ತನ್ನ ಹುಟ್ಟೂರಿಗೆ ಮರಳಿದ್ದನು. ಈ ಸಂದರ್ಭದಲ್ಲಿ ಅಕ್ಕನನ್ನು ಕಾಣಲು ಬಂದಿದ್ದ ಸತೀಶನಿಗೆ ಮನೆಯ ಬಾಗಿಲನ್ನು ತೆರೆದ ಗಾಯತ್ರಿಯ ಗುರುತೇ ಸಿಕ್ಕಿರಲಿಲ್ಲ. ಉತ್ಸಾಹದ ಚಿಲುಮೆಯಾಗಿದ್ದ, ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಿದ್ದ ಗಾಯತ್ರಿಯು ಸಾಕಷ್ಟು ಸೊರಗಿದ್ದು, ಮೌನಕ್ಕೆ ಶರಣಾಗಿದ್ದುದೇ ಇದಕ್ಕೆ ಕಾರಣವಾಗಿತ್ತು. 

ಉಭಯಕುಶಲೋಪರಿಗಳ ಬಳಿಕ ನೇರವಾಗಿ ಅಕ್ಕನ ಬಳಿ ಗಾಯತ್ರಿಯ ವಿಷಯವನ್ನು ಪ್ರಸ್ತಾಪಿಸಿದ ಆತನಿಗೆ, ಸಮಸ್ಯೆಯ ಮೂಲವನ್ನು ಅರಿತು ವಿಷಾದವಾಯಿತು. ಈ ವೈಜ್ಞಾನಿಕ ಯುಗದಲ್ಲೂ ಮೂಢನಂಬಿಕೆ ಮತ್ತು ಕಂದಾಚಾರಗಳಿಗೆ ಬಲಿಯಾಗಿ, ಮಾನಸಿಕ ನೆಮ್ಮದಿಯನ್ನೇ ಕಳೆದುಕೊಂಡಿರುವ ತನ್ನ ಅಕ್ಕ ಮತ್ತು ಸೊಸೆಯರ ಬಗ್ಗೆ ಅನುಕಂಪವೂ ಮೂಡಿತ್ತು. ಪೂರ್ವಜನ್ಮದಲ್ಲಿ ತಾವು ಮಾಡಿದ್ದ ಪಾಪಗಳಿಗೆ ಇದೀಗ ಶಿಕ್ಷೆಯನ್ನು ಅನುಭವಿಸುತ್ತಿರುವುದಾಗಿ ನಂಬಿ, ಪಾಪಪ್ರಜ್ಞೆಯಿಂದ ಪರಿತಪಿಸುತ್ತಿದ್ದ ಇವರಿಗೆ ವೈಜ್ಞಾನಿಕ ಪರಿಹಾರವನ್ನು ನೀಡಲು ಸತೀಶನು ನಿರ್ಧರಿಸಿದನು. 

ವಾರ ಕಳೆಯುತ್ತಲೇ ಗಣೇಶ ಮತ್ತು ಗಾಯತ್ರಿಯರನ್ನು ತನ್ನ ಪರಿಚಿತ ಸಂತತಿ ತಜ್ಞರ ಬಳಿಗೆ ಕರೆದೊಯ್ದು ಅವಶ್ಯಕ ಪರೀಕ್ಷೆಗಳನ್ನು ನಡೆಸುವಂತೆ ಕೋರಿದ್ದ ಸತೀಶನಿಗೆ, ಪರೀಕ್ಷೆಯ ಪರಿಣಾಮಗಳು ತಾನು ನಿರೀಕ್ಷಿಸಿದಂತೆಯೇ ಇದ್ದುದು ಆಶ್ಚರ್ಯವೆನಿಸಿರಲಿಲ್ಲ. ಇದರಂತೆ ಗಣೇಶನಲ್ಲಿ ವೀರ್ಯಾಣುಗಳ ಸಂಖ್ಯೆ ತುಸು ಕಡಿಮೆಯಿರುವುದು ಪತ್ತೆಯಾಗಿತ್ತು. ಅಂತೆಯೇ ಗಾಯತ್ರಿಯಲ್ಲಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಎನ್ನುವ ವಿಶಿಷ್ಟ ಸಮಸ್ಯೆಯಿಂದಾಗಿ, ಆಕೆಯ ಶರೀರದಲ್ಲಿ ಅಂಡಾಣುಗಳೇ ಉತ್ಪತ್ತಿಯಾಗುತ್ತಿರಲಿಲ್ಲ. ಇವೆರಡೂ ಕಾರಣಗಳಿಂದ ಗಾಯತ್ರಿಯು ಗರ್ಭಧರಿಸಿರಲಿಲ್ಲ. ಸತೀಶನ ಹೇಳಿಕೆಯಂತೆ ಈ ದಂಪತಿಗಳಲ್ಲಿರುವ ಶಾರೀರಿಕ ದೋಷಗಳನ್ನು ಪರಿಹರಿಸದೇ, ಯಾವುದೇ ಜ್ಯೋತಿಷಿ ಅಥವಾ ಪೂಜೆ ಪುನಸ್ಕಾರಗಳಿಂದ ಸಂತಾನಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆಗಳೇ ಇರಲಿಲ್ಲ!. 

ಅಂತಿಮವಾಗಿ ತಜ್ಞ ವೈದ್ಯರು ನೀಡಿದ ಚಿಕಿತ್ಸೆ ಫಲಪ್ರದವೆನಿಸಿ, ವರ್ಷ ಕಳೆಯುವಷ್ಟರಲ್ಲೇ ಗಾಯತ್ರಿ ಗರ್ಭಧರಿಸಿದ್ದಳು. ನವಮಾಸ ಕಳೆದು ಆರೋಗ್ಯವಂತ ಹೆಣ್ಣುಮಗುವನ್ನು ಹೆತ್ತ ಗಾಯತ್ರಿಗೂ ತಾನು ತಾಯಿಯಾಗಿರುವುದು ಹೆಮ್ಮೆಯೆನಿಸಿತ್ತು. ತನಗೆ ಮೊಮ್ಮಗಳನ್ನು ಕರುಣಿಸಲು ಕಾರಣಕರ್ತನೆನಿಸಿದ ತನ್ನ ತಮ್ಮ ಸತೀಶನಿಗೆ ಮನಸ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲು ಶಾಂತಮ್ಮ ಮರೆಯಲಿಲ್ಲ. 

ಈ ವಿಶಿಷ್ಟ ಅನುಭವದ ಬಳಿಕ ಸಂತತಿಹೀನರಿಗೆ ಜಾತಕಗಳಲ್ಲಿನ ದೋಷಗಳು ಮತ್ತು ನಕಲಿವೈದ್ಯರ ಚಿಕಿತ್ಸೆಗಳ ಗೊಡವೆಗೆ ಹೋಗದೇ,ಅನುಭವೀ ಹಾಗೂ ಯೋಗ್ಯ  ಸಂತತಿ ತಜ್ಞರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆದುಕೊಳ್ಳುವಂತೆ ಶಾಂತಮ್ಮನು "ಉಚಿತ ಸಲಹೆ" ಯನ್ನು ನೀಡುತ್ತಿರುವುದು ಸತ್ಯ!. 

ಸಾರಸ್ವತ ಜಾಗೃತಿ ಪತ್ರಿಕೆಯ ದಿ. ೧೬-೦೬- ೨೦೦೪ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ. 

No comments:

Post a Comment