Friday, December 27, 2013

MLA -MP's offices under RTI!


  ಸಂಸದರ- ಶಾಸಕರ ಕಛೇರಿಗಳು ಮಾಹಿತಿ ಹಕ್ಕಿನ ವ್ಯಾಪ್ತಿಗೆ!

ರಾಜ್ಯದ- ದೇಶದ ಪ್ರಜೆಗಳು ಚುನಾಯಿಸಿದ ಶಾಸಕರು ಮತ್ತು ಸಂಸದರ ಕಛೇರಿಗಳು ಮಾಹಿತಿ ಪಡೆಯುವ ಹಕ್ಕು ಕಾಯಿದೆ-೨೦೦೫ ರ ಕಲಂ (೧) (ಎ) ಮತ್ತು ೪ (ಬಿ) ಗಳನ್ವಯ, ಈ ಕಾಯಿದೆಯ ವ್ಯಾಪ್ತಿಗೆ ಒಳಪಡುತ್ತವೆಯೇ/, ಎನ್ನುವ ಪ್ರಶ್ನೆಗೆ ಉತ್ತರ ನೀಡಲು ರಾಜ್ಯ ಸರಕಾರದ ಇಲಾಖೆಯೊಂದು ೯ ತಿಂಗಳುಗಳ ಕಾಲಾವಧಿಯನ್ನು ಬಳಸಿದೆ. ಮಾಹಿತಿ ಹಕ್ಕು ಕಾಯಿದೆಯನ್ವಯ ಈ ಮಾಹಿತಿಯನ್ನು ಕೇಳಿದ್ದ ಪುತ್ತೂರಿನ ಬಳಕೆದಾರ ಹಿತರಕ್ಷಣಾ ವೇದಿಕೆಯ ದಿನೇಶ್ ಭಟ್ ಇವರು ಅಪೇಕ್ಷಿತ ಮಾಹಿತಿಯು ನಿಗದಿತ ಅವಧಿಯಲ್ಲಿ ದೊರೆತಿರದ ಕಾರಣದಿಂದಾಗಿ, ಕರ್ನಾಟಕ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಬೇಕಾಗಿ ಬಂದಿತ್ತು. 

ಸರಕಾರದ ಆಡಳಿತದಲ್ಲಿ ಪಾರದರ್ಶಕತೆಯನ್ನು ಜಾರಿಗೆ ತರುವ ಮೂಲಕ ದಕ್ಷತೆ ಮತ್ತು ಪ್ರಾಮಾನಿಕತೆಗಳನ್ನು ಹೆಚ್ಚಿಸುವ ಸಲುವಾಗಿ ಜಾರಿಗೊಂದಿದ್ದ ಮಾ. ಹ. ಕಾಯಿದೆಯು ಅಪೇಕ್ಷಿತ ಪರಿಣಾಮವನ್ನು ತೋರುವಲ್ಲಿ ವಿಫಲವಾಗಲು, ಸರಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಔದಾಸೀನ್ಯಗಳೇ ಕಾರನವೆನಿಸಿವೆ. ಅರ್ಜಿದಾರು ಅಪೇಕ್ಷಿಸಿರುವ ಮಾಹಿತಿಯನ್ನಿ ನೀಡದಿರುವುದು, ನೀಡಲು ವಿಳಂಬಿಸುವುದುಅಥವಾ ಯಾವುದೇ ಪ್ರತಿಕ್ರಿಯೆಯನ್ನೇ ತೋರದಿರುವ ಮೂಲಕ ವಿವಿಧ ಸಾರ್ವಜನಿಕ ಪ್ರಾಧಿಕಾರಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಈ ಕಾಯಿದೆಯ ಉದ್ದೇಶವನ್ನೇ ವಿಫಲಗೊಳಿಸುವ ಪ್ರಯತ್ನಗಳನ್ನು ಅನ್ದೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆದರೆ ಅನೇಕ ಸ್ವಯಂ ಸೇವಾ ಸಂಘಟನೆಗಳು ಮಾ. ಹ. ಅಧಿನಿಯಮದ ಬಗ್ಗೆ ಜನಸಾಮಾನ್ಯರಿಗೆ ಅವಶ್ಯಕ ಮಾಹಿತಿ, ಮಾರ್ಗದರ್ಶನ ಮತ್ತು ಬೆಮ್ಬಲಗಳನ್ನು ನೀಡುವ ಮೂಲಕ ಮತ್ತು ಅವಶ್ಯಕವೆನಿಸಿದಲ್ಲಿ ರಾಜ್ಯ ಅಥವಾ ಕೇಂದ್ರ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಲು ಸೂಚಿಸುವ ಮೂಲಕ, ಜನರು ಅಪೇಕ್ಷಿಸುವ ಮಾಹಿತಿಗಳನ್ನು ಪಡೆದುಕೊಳ್ಳಲು ಸಫಲರಾಗುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಇಂತಹ ಸಂಘಟನೆಗಳ ಕಾರ್ಯಕರ್ತರೂ ಅಪೇಕ್ಷಿತ ಮಾಹಿತಿಗಳನ್ನು ಪಡೆಯಲು ಹರಸಾಹಸವನ್ನೇ ನಡೆಸಬೇಕಾಗುತ್ತದೆ. ಇಂತಹ ಪ್ರಕರಣವೊಂದು ಇಂತಿದೆ. 

ನಮ್ಮನ್ನಾಳುವ ಶಾಸಕರು- ಸಂಸದರ ಕಛೇರಿಗಳು ಮಾ. ಹ. ಕಾಯಿದೆಯ ವ್ಯಾಪ್ತಿಗೆ ಒಳಪಡುತ್ತವೆಯೇ ಎಂದು ದಿನೇಶ್ ಭಟ್ ಇವರು ೨೦೦೮ ರ ಜುಲೈ ೨೮ ರಂದು ಸಾರ್ವಜನಿಕ ಮಾಹಿತಿ ಅಧಿಕಾರಿ, ಪ್ರಧಾನ ಕಾರ್ಯದರ್ಶಿಯವರ ಕಚೇರಿ, ಕರ್ನಾಟಕ ಸಿಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಮಾ. ಹ. ಕಾಯಿದೆಯನ್ವಯ ನಿಗದಿತ ಶುಲ್ಕವನ್ನು ಪಾವತಿಸಿ ಅರ್ಜ್ಯನ್ನು ಸಲ್ಲಿಸಿದ್ದರು. 

ಈ ಅರ್ಜಿಯಲ್ಲಿ ವಿಧಾನ ಸಭೆ ಮತ್ತು ಲೋಕ ಸಭೆಗಳ ಚುನಾಯಿತ ಜನ ಪ್ರತಿನಿಧಿಗಳಿಗೆ ರಾಜ್ಯ- ಕೇಂದ್ರ ಸರಕಾರಗಳ ವತಿಯಿಂದ ಕಚೇರಿ ಸೌಲಭ್ಯ, ಆಪ್ತ ಸಹಾಯಕರು, ದೂರವಾಣಿ, ವಾಹನಗಳು, ಕಚೇರಿಯ ನಿರ್ವಹಣಾ ವೆಚ್ಚ ಇತ್ಯಾದಿಗಳನ್ನು ಒದಗಿಸುವುದರಿಂದ , ಈ ಕಛೇರಿಗಳಿಗೆ ಮಾ. ಹ. ಕಾಯಿದೆ ಅನ್ವಯವಾಗುವುದೇ ಮತ್ತು ಅನ್ವಯವಾಗುವುದಾದಲ್ಲಿ ಅಪೇಕ್ಷಿತ ಮಾಹಿತಿಯನ್ನು ಪಡೆಯಲು ಅರ್ಜಿಯನ್ನು ಯಾರಿಗೆ ಹಾಗೂ ಯಾವರೀತಿಯಲ್ಲಿ ಸಲ್ಲಿಸಬೇಕು ಮತ್ತು ಶುಲ್ಕವನ್ನು ಯಾರ ಹೆಸರಿನಲ್ಲಿ ಪಾವತಿಸಬೇಕು ಎನ್ನುವ ಮಾಹಿತಿಗಳನ್ನು ನೀಡುವಂತೆ ಕೋರಿದ್ದರು. 

ಆದರೆ ನಿಗದಿತ ಅವಧಿಯಲ್ಲಿ ಸಂಬಂಧಿತ ಸಾರ್ವಜನಿಕ ಮಾಹಿತಿ ಅಧಿಕಾರಿಯು ಅಪೇಕ್ಷಿತ ಮಾಹಿತಿಯನ್ನು ನೀಡದೆ ಇದ್ದುದರಿಂದ, ೨೦೦೮ ರ ಸೆಪ್ಟೆಂಬರ್ ೬ ರಂದು ಕರ್ನಾಟಕ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಿದ್ದರು. ೨೦೦೮ ರ ಸೆಪ್ಟೆಂಬರ್ ೧೮ ರಂದು ಈ ದೂರನ್ನು ವಿಚಾರಣೆಗೆ ಎತ್ತಿಕೊಂಡಿದ್ದ ಆಯೋಗವು, ನಿಗದಿತ ಅವಧಿಯಲ್ಲಿ ಮಾಹಿತಿಯನ್ನು ನೀಡದ ಸಾ. ಮಾ. ಅಧಿಕಾರಿಗೆ ಏಕೆ ದಂಡವನ್ನು ವಿಧಿಸಬಾರದು ಎನ್ನುವ ಬಗ್ಗೆ ವಿವರಣೆ ನೀಡಲು ಮತ್ತು ೨೦೦೯ ರ ಜನವರಿ ೩೦ ರಂದು ಖುದ್ದಾಗಿ ಆಯೋಗದ ಮುಂದೆ ಹಾಜರಾಗುವಂತೆ ಮಧ್ಯಂತರ ಆದೇಶವನ್ನು ನೀಡಿತ್ತು. ಜೊತೆಗೆ ಈ ಮಾಹಿತಿಯನ್ನು ಬಹಿರಂಗಪಡಿಸಲು ಮಾ. ಹ. ಕಾಯಿದೆಯಲ್ಲಿ ವಿನಾಯಿತಿ ಹೊಂದಿಲ್ಲವಾದಲ್ಲಿ ಇದನ್ನು ತುರ್ತಾಗಿ ನೊಂದಾಯಿತ ಅಂಚೆಯ ಮೂಲಕ ದಿನೇಶ್ ಭಟ್ ಇವರಿಗೆ ಕಳುಹಿಸಿ, ಇದರ ಪ್ರತಿಯೊಂದನ್ನು ಕಡ್ಡಾಯವಾಗಿ ಆಯೋಗಕ್ಕೆ ಸಲ್ಲಿಸಲು ಆದೇಶಿಸಿತ್ತು. 

ಆದರೆ ಆಯೋಗದ ಆದೇಶಕ್ಕೆ ಮಾನ್ಯತೆಯನ್ನು ನೀಡದ ಸಾ. ಮಾ. ಅಧಿಕಾರಿಯು ೨೦೦೯ ರ ಜನವರಿ ೩೦ ರಂದು ಆಯೋಗದ ಮುಂದೆ ವಿಚಾರಣೆಗೂ ಹಾಜರಾಗಿರಲಿಲ್ಲ. ಈ ಅಧಿಕಾರಿಯ ನಿರ್ಲಕ್ಷ್ಯ ಮತ್ತು ಔದಾಸೀನ್ಯತೆಗಳನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು, ಈ ಅಧಿಕಾರಿಗೆ ಸೆಕ್ಷನ್ ೩೦ ಸಿ. ಪಿ. ಸಿ ಯನ್ವಯ ಸಮನ್ಸ್ ಜಾರಿ ಮಾಡಿ, ೩೦ ದಿನಗಳ ಒಳಗಾಗಿ ಅಪೇಕ್ಷಿತ ಮಾಹಿತಿಯನ್ನು ಅರ್ಜಿದಾರರಿಗೆ ಉಚಿತವಾಗಿ ನೊಂದಾಯಿತ ಅಂಚೆಯ ಮೂಲಕ ರವಾನಿಸಿ, ಇದರ ಪ್ರತಿಯೊಂದನ್ನು ಆಯೋಗಕ್ಕೆ ಸಲ್ಲಿಸುವಂತೆ ಸೂಚಿಸಿತ್ತು. ಈ ಬಗ್ಗೆ ಸೂಕ್ತ ನಿರ್ದೇಶನವನ್ನು ನೀಡುವಂತೆ ಇವರ ಮೇಲಧಿಕಾರಿಗೆ ಮಾ. ಹ. ಕಾಯಿದೆಯ ಕಲಂ ೧೯(೮) (ಎ೦ ಯಂತೆ ಆದೇಶಿಸಿತ್ತು. ಇದರೊಂದಿಗೆ ಮಾ. ಹ. ಕಾ. ಕಲಂ ೧೮ (೩) (ಎ)ಯನ್ವಯ ಅರ್ಜಿದಾರು ಕೋರಿರುವ ಮಾಹಿತಿಗೆ ಸಂಬಂಧಿಸಿದ ಕಡತಗಳೊಂದಿಗೆ ೨೦೦೯ ರ ಮೇ ೧೩ ರಂದು ಖುದ್ದಾಗಿ ಆಯೋಗದ ಮುಂದೆ ಹಾಜರಾಗುವಂತೆ ಆದೇಶಿಸಿತ್ತು. 

ಅಂತಿಮವಾಗಿ ತುಕ್ಕು ಹಿಡಿದಿದ್ದ ಸರಕಾರಿ ಯಂತ್ರವು ಮತ್ತೆ ಚಲಿಸಳು ಆರಂಭಿಸಿತ್ತು. ತತ್ಪರಿಣಾಮವಾಗಿ ಸರಕಾರದ ಪ್ರಧಾನ ಕಾರ್ಯದರ್ಶಿ, ಸಿ ಮತ್ತು ಆ. ಸು. ಇಲಾಖೆಯ್ ಇವರು ೨೦೦೯ ರ ಎಪ್ರಿಲ್ ೧೩ ರಂದು ದಿನೇಶ್ ಭಟ್ ಇವರು ಅಪೇಕ್ಷಿಸಿದ್ದ ಮಾಹಿತಿಯನ್ನು ನೀಡಿದ್ದರು!. ಈ ಅಧಿಕಾರಿ ನೀಡಿದ್ದ ಮಾಹಿತಿಯಂತೆ ಮಾ. ಹ. ಕಾ. ೨೦೦೫ ರ ಕಲಂ ೪ (೧) (ಎ) ಮತ್ತು ೪ (೧) (ಬಿ ) ಗಳನ್ವಯ ವಿಧಾನ ಸಭೆಯ ಮತ್ತು ಲೋಕ ಸಭೆಯ ಚುನಾಯಿತ ಪ್ರತಿನಿಧಿಗಳ ಕಛೇರಿಗಳು ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಗೆ ಒಳಪಡುತ್ತವೆ. ಅಪೇಕ್ಷಿತ ಮಾಹಿತಿಗಳನ್ನು ಪಡೆದುಕೊಳ್ಳಲು ಜಿಲ್ಲಾಧಿಕಾರಿಗಳು ಅವರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿಧಾನ ಸಭೆಯ ಮತ್ತು ಲೋಕ ಸಭೆಯ ಚುನಾಯಿತ ಜನಪ್ರತಿನಿಧಿಗಳಿಗೆ, ಕಚೇರಿ ಸೌಲಭ್ಯ, ಆಪ್ತ ಸಹಾಯಕರ ಸೌಲಭ್ಯ ಮುಂತಾದವುಗಳನ್ನು ಒದಗಿಸುವುದರಿಂದ, ಸಂಬಂಧಿತ ಜಿಲ್ಲಾಧಿಕಾರಿಗಳ ಕಛೇರಿಗಳಲ್ಲಿ ನಿಯೋಜಿತ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿಯನ್ನು ಕೋರಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದಕ್ಕಾಗಿ ನಿಗದಿತ ಶುಲ್ಕವನ್ನು ಇದೇ ಸಾ. ಮಾ. ಅಧಿಕಾರಿಗಳ ಹೆಸರಿನಲ್ಲಿ ಪಾವತಿಸಬೇಕಾಗುತ್ತದೆ. 

ಈ ರೀತಿಯಲ್ಲಿ ಸರಕಾರಕ್ಕೆ ತೆರಿಗೆಯನ್ನು ತೆರುವ ಪ್ರಜೆಗಳು ತಾವು ಚುನಾಯಿಸಿರುವ ಜನಪ್ರತಿನಿಧಿಗಳ ಕಾರ್ಯವೈಖರಿ, ಅಭಿವೃದ್ಧಿ ಕಾಮಗಾರಿಗಳ ವಿವರಗಳು ಮತ್ತು ಶಾಸಕರು ಮತ್ತು ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಗಳ ಬಗ್ಗೆ ಅವಶ್ಯಕ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. 

ಡಾ. ಸಿ.ನಿತ್ಯಾನಂದ ಪೈ
ಬಳಕೆದಾರ ಹಿತರಕ್ಷಣಾ ವೇದಿಕೆ 
ಪುತ್ತೂರು 

ಉದಯವಾಣಿ ಪತ್ರಿಕೆಯ ಡಿ. ೦೭- ೦೫- ೨೦೦೯ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ. 


1 comment: