Monday, December 23, 2013

HRUDAYA ROGAGALIGE VIDAYA?



                                  ಹೃದಯ ರೋಗಗಳಿಗೆ ವಿದಾಯ?

Have a heart man ಎಂದು ಆಂಗ್ಲ ಭಾಷೆಯಲ್ಲಿ, ಇನ್ನೊಬ್ಬರ ಬಗ್ಗೆ ಅನುಕಂಪವಿರಲಿ ಎಂಬರ್ಥದ ವಾಕ್ಯವನ್ನು ಉದ್ಧರಿಸುವುದನ್ನು ನೀವೂ ಕೇಳಿರಬಹುದು. ಆದರೆ ನಿಮ್ಮದೇ ಹೃದಯದ ಬಗ್ಗೆ ನಿಮಗೆ ಕಿಂಚಿತ್ ಅನುಕಂಪವೂ ಇಲ್ಲದಿದ್ದಲ್ಲಿ, ನಿಮ್ಮನ್ನು "ಹೃದಯ ಹೀನ" ರೆಂದು ಕರೆಯುವುದು ಅನ್ವರ್ಥವೆನಿಸುವುದರಲ್ಲಿ ಸಂದೇಹವಿಲ್ಲ!.
-------------                 --------------                ---------------                  -----------------              ---------------                   ------------------
  ಪ್ರಪಂಚದ ಪ್ರತಿಯೊಂದು ಮುಂದುವರಿದ ಅರ್ಥಾತ್ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಬಹುತೇಕ ಪ್ರಜೆಗಳನ್ನು ಬಾಧಿಸುತ್ತಿರುವ ಹೃದಯಾಘಾತಗಳ ಸಂಖ್ಯೆ ವರ್ಷಂಪ್ರತಿ ಹೆಚ್ಚುತ್ತಿದೆ. ಜತೆಗೆ ಇದರಿಂದಾಗಿ ಸಂಭವಿಸುತ್ತಿರುವ ಮರಣಗಳ ಪ್ರಮಾಣವೂ ಹೆಚ್ಚುತ್ತಿರುವುದು ಅನೇಕ ಅಧ್ಯಯನ ಮತ್ತು ಸಮೀಕ್ಷೆಗಳಿಂದ ಧೃಢಪಟ್ಟಿದೆ. "ಸುಖ- ಸಮೃದ್ಧಿ" ಗಳ ಕಾಯಿಲೆಯೆಂದು ಕರೆಯಬಹುದಾದ ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು ವೃದ್ಧಿಸಲು, ಸುಖ ಮತ್ತು ಸಂರುದ್ಧಿಗಳ ಫಲವಾದ ವಿಲಾಸೀ ಜೀವನಶೈಲಿಯೇ ಮೂಲಕಾರಣವೆನ್ನಬಹುದು.

ವಿವಿಧ ರೀತಿಯ ಹೃದ್ರೋಗಗಳ ಚಿಕಿತ್ಸೆಯಲ್ಲಿ ನಾವಿಂದು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದರೂ, ಇವುಗಳಿಂದಾಗಿ ಸಂಭವಿಸುವ ಮರಣಗಳ ಪ್ರಮಾಣ ಇಳಿಮುಖವಾಗದಿರುವುದು ಈ ಸಮಸ್ಯೆಯ ಗಂಭೀರತೆಯನ್ನು ಸೂಚಿಸುತ್ತದೆ.ಉದಾಹರಣೆಗೆ ಅಮೇರಿಕ ದೇಶದಲ್ಲಿ ೩೫ ರಿಂದ ೪೫ ವರ್ಷ ವಯಸ್ಸಿನವರ ಅಕಾಲ ಮರಣಕ್ಕೆ ಕಾರಣವೆನಿರುವ ಕಾಯಿಲೆಗಳಲ್ಲಿ ಕೊರೋನರಿ ಹೃದ್ರೋಗಗಳಿಗೆ ಅಗ್ರಸ್ಥಾನ ಸಲ್ಲುತ್ತದೆ. 

ಸುಖ-ಸಮೃದ್ಧಿಗಳ ಕಾಯಿಲೆ ಎನ್ನುವ ಅರ್ಥಪೂರ್ಣ ಪರ್ಯಾಯನಾಮವನ್ನು ಗಳಿಸಿರುವ ಹೃದಯದ ಕಾಯಿಲೆಗಳಿಗೆ ಆಧುನಿಕ ತಂತ್ರಜ್ಞಾನ, ಯಾಂತ್ರೀಕರಣ ಮತ್ತು ಆಧುನಿಕ ಸಂಶೋಧನೆಗಳ ಫಲವಾಗಿ ನಮ್ಮ ಜೀವನದ ಮಟ್ಟದಲ್ಲಿ ಹೆಚ್ಚುತ್ತಿರುವ ಸುಖಲೋಲುಪತೆಯೇಕಾರಣವೆನಿಸಿದೆ. ನಿಷ್ಕ್ರಿಯತೆಗೆ (Inactivity) ನೇರವಾಗಿ ಕಾರಣವೆನಿಸಿರುವ ಆಧುನಿಕ ಜೀವನಶೈಲಿಯ ದುಷ್ಪರಿಣಾಮಗಳನ್ನು ಪ್ರತಿನಿತ್ಯ ತೀವ್ರ ಶಾರೀರಿಕ ವ್ಯಾಯಾಮದಲ್ಲಿ(Intense physical exercise) ತೊಡಗಿಸಿಕೊಳ್ಳುವ ಮೂಲಕ ನಿವಾರಿಸಬಹುದಾಗಿದೆ. 

ಹೃದಯದ ಕಾಯಿಲೆಗಳು ಆಕಸ್ಮಿಕವಾಗಿ ಬರುವುದೆಂದು ನೀವು ನಂಬಿದ್ದಲ್ಲಿ ನಿಮ್ಮ ನಂಬಿಕೆ ನಿಜವಲ್ಲ. ನಿಮ್ಮ ಶರೀರದಲ್ಲಿ ನಿಧಾನವಾಗಿ ಪ್ರಾರಂಭವಾಗುವ ರೋಗಕಾರಕ ಪ್ರಕ್ರಿಯೆಗಳು ಕ್ರಮೇಣ ಹೆಚ್ಚುತ್ತಾ, ಮುಂದೊಂದು ದಿನ ಯಾವುದೇ ಮುನ್ಸೂಚನೆಯನ್ನು ನೀಡದೆ ಉಲ್ಬಣಿಸುತ್ತದೆ. "ತೀವ್ರ ಹೃದಯಾಘಾತ"ಕ್ಕೆ ಒಳಗಾದವರೂ ಹೇಳುವಂತೆ 'ನಿನ್ನೆಯ ತನಕ ನಾನು ಆರೋಗ್ಯವಾಗಿಯೇ ಇದ್ದೆ" ಎನ್ನುವುದು, ರೋಗಿಯೇ ನಿಜವೆಂದು ನಂಬಿದ್ದ ಅಪ್ಪಟ ಸುಳ್ಳು!. 

ಅಥೆರೋಸ್ಕ್ಲೆರೋಸಿಸ್, ಆರ್ಟೀರಿಯೋಸ್ಕ್ಲೆರೋಸಿಸ್, ಅಧಿಕ ರಕ್ತದೊತ್ತಡ, ಅನಿಯಂತ್ರಿತ ಮಧುಮೇಹ, ತೀವ್ರ ಮಾನಸಿಕ ಒತ್ತಡ, ರಕ್ತದಲ್ಲಿ ಹೆಚ್ಚಿರುವ ಕೊಲೆಸ್ಟರಾಲ್ ಮತ್ತು ಟ್ರೈ ಗ್ಲಿಸರೈಡ್, ಅತಿಬೊಜ್ಜು, ಸ್ಥೂಲಕಾಯ, ಅತಿ ಧೂಮ - ಮದ್ಯಪಾನ ಮತ್ತು ಅನುವಂಶೀಯತೆಗಳು ಹೃದಯರೋಗಗಳಿಗೆ ಕಾರಣೀಭೂತವಾಗಿವೆ. ಈ ಮೇಲಿನ ಕಾರಣಗಳು ಮತ್ತು ಸಮಸ್ಯೆಗಳ ಸಂಖ್ಯೆ ಹೆಚ್ಚಿದಂತೆಯೇ, ಹೃದ್ರೋಗಗಳ ಸಂಭಾವ್ಯತೆ ಮತ್ತು ಇವುಗಳ ಮಾರಕತೆಯ ಪ್ರಮಾಣವೂ ಹೆಚ್ಚುವುದು.ಅನೇಕ ಜನರಲ್ಲಿ ಅವರ ವಯಸ್ಸು, ಲಿಂಗ, ಜನಾಂಗ ಮತ್ತು ಅನುವಂಶೀಯತೆಗಳು ಹೃದ್ರೋಗಗಳಿಗೆ ಕಾರಣವಾಗಬಹುದು. ದೈವ ನಿಯಾಮಕವಾದ ಈ ಅಂಶಗಳನ್ನು ಹುಲುಮಾನವರಾದ ನಾವು ಬದಲಾಯಿಸುವುದು ಅಸಾಧ್ಯ. ಇವೆಲ್ಲಕ್ಕೂ ಕಳಶವಿಟ್ಟಂತೆ "ನಿಷ್ಕ್ರಿಯತೆ" ಯೂ ಸೇರಿಕೊಂಡಲ್ಲಿ, ಹೃದ್ರೋಗಗಳಿಗೆ ನಿಮ್ಮ ಶರೀರದಲ್ಲಿ ಮುಕ್ತಪ್ರವೇಶ ಖಂಡಿತ. 

ಅಥೆರೋಸ್ಕ್ಲೆರೋಸಿಸ್ 

ಸುಧೃಢವಾದ ಮಾಂಸಪೇಶಿಗಳಿಂದನಿರ್ಮಿತವಾದ ನಮ್ಮ ಹೃದಯವು ಪ್ರತಿದಿನ ಒಂದು ಲಕ್ಷಕ್ಕೂ ಅಧಿಕ ಬಾರಿ ಮಿಡಿಯುತ್ತಾ, ಸಹಸ್ರಾರು ಕಿಲೋಮೀಟರ್ ಗಳಷ್ಟು ಉದ್ದದ ರಕ್ತನಾಳಗಳ ಮೂಲಕ ಏಕಪ್ರಕಾರವಾಗಿ ಸಮಗ್ರ ಶರೀರಕ್ಕೆ ಅವಶ್ಯಕ ಪ್ರಮಾಣದ ರಕ್ತವನ್ನು ಪೂರೈಸುತ್ತದೆ. ನಿರಂತರವಾಗಿ ಶರೀರಕ್ಕೆ ರಕ್ತವನ್ನು ಪೂರೈಕೆ ಮಾಡುವ ಹೃದಯದ ಕಾರ್ಯಾಚರಣೆಗೆ ಅವಶ್ಯವಾದ ರಕ್ತವನ್ನು ಕೊರೋನರಿ ಆರ್ಟರಿಗಳು ಪೂರೈಸುತ್ತವೆ. 

ನಮ್ಮ ರಕ್ತದಲ್ಲಿ ಕೊಲೆಸ್ಟರಾಲ್ ಮತ್ತು ತತ್ಸಂಬಂಧಿ ಕೊಬ್ಬಿನ ಅಂಶಗಳ ಪ್ರಮಾಣ ಹೆಚ್ಚಿದಾಗ, ರಕ್ತನಾಳಗಳ ಒಳಭಾಗದಲ್ಲಿ ಶೇಖರವಾಗುತ್ತವೆ. ಇದರಿಂದಾಗಿ ರಕ್ತನಾಳಗಳು ಸಂಕುಚಿತಗೊಂಡು ಸಮರ್ಪಕ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗುವುದು. ಈ ಸ್ಥಿತಿಯನ್ನು ಅಥೆರೋಸ್ಕ್ಲೆರೋಸಿಸ್ ಎನ್ನುತ್ತಾರೆ. ಇದೇ ಕಾರಣದಿಂದಾಗಿ ಹಾಗೂ ವೃದ್ಧಾಪ್ಯದಿಂದಲೂ ರಕ್ತನಾಳಗಳು ಪೆಡಸಾಗುವಸ್ಥಿತಿಯನ್ನು ಆರ್ಟೀರಿಯೋ ಸ್ಕ್ಲೆರೋಸಿಸ್ ಎನ್ನುವರು. ಕೊರೋನರಿ ಆರ್ಟರಿಗಳಲ್ಲಿ ಇಂತಹ ಅಡಚಣೆಗಳು ಉದ್ಭವಿಸಿದಲ್ಲಿ ಹೃದಯಕ್ಕೆ ಪೂರೈಕೆಯಾಗುವ ರಕ್ತದ ಪ್ರಮಾಣವು ಕಡಿಮೆಯಾಗುವುದು. ಈ ಅಡಚಣೆ ತೀವ್ರಗೊಂಡಾಗ, ಜನಸಾಮಾನ್ಯರು ಹೇಳುವಂತೆ "ಹಾರ್ಟ್ ಅಟ್ಯಾಕ್' ಸಂಭವಿಸುವುದು. ವೈದ್ಯಕೀಯ ಪರಿಭಾಷೆಯಲ್ಲಿ "Myocardial infaarction" ಎಂದು ಕರೆಯುವ ಈ ಸಮಸ್ಯೆಯನ್ನು ಕನ್ನಡದಲ್ಲಿ ಹೃದಯಾಘಾತ ಎಂದು ಕರೆಯುವರು. ಹೃದಯಾಘಾತದ ಪರಿಣಾಮವಾಗಿ ಹೃದಯದ ಯಾವ ಭಾಗಕ್ಕೆ ರಕ್ತದ ಪೂರೈಕೆ ಸ್ಥಗಿತಗೊಂಡಿರುವುದೋ, ಆ ಭಾಗದ ಮಾಂಸಪೇಶಿಗಳು ಮೃತಪಡುತ್ತವೆ. ರಕ್ತದಲ್ಲಿನ ಕೊಲೆಸ್ಟರಾಲ್ ಅಂಶ ಹೆಚ್ಚುವುದರಿಂದ ಪ್ರಾರಂಭಗೊಳ್ಳುವ ಈ ಪ್ರಕ್ರಿಯೆಗಳು ಆಕಸ್ಮಿಕವಾಗಿ ಸಂಭವಿಸುವ ಸಾಧ್ಯತೆಗಳಿಲ್ಲ. ಕೆಲವಾರು ತಿಂಗಳುಗಳಿಂದ ಹಿಡಿದು ಹಲವಾರು ವರ್ಷಗಳನ್ನು ತೆಗೆದುಕೊಳ್ಳಬಹುದಾದ ಈ ಬದಲಾವಣೆಗಳೊಂದಿಗೆ, ಇತರ ಗಂಭೀರ ಕಾಯಿಲೆಗಳ ಇರುವು ಕ್ಷಿಪ್ರಗತಿಯಲ್ಲಿ ಮುಂದುವರೆದು ಹೃದಯಾಘಾತದಲ್ಲಿ ಪರ್ಯವಸಾನವಾಗುವುದು. 

ಕೆಲವೇ ವರ್ಷಗಳ ಹಿಂದೆ ಯುದ್ಧದಲ್ಲಿ ಮಡಿದ ಅಮೆರಿಕದ ಯೋಧರ ಶವಗಳ ಮರಣೋತ್ತರ ಪರೀಕ್ಷಾ ವರದಿಗಳನ್ನು ಪರಿಶೀಲಿಸಿದಾಗ ಆಶ್ಚರ್ಯಕರ ವಿಷಯಗಳು ವೈದ್ಯರ ಗಮನವನ್ನು ಸೆಳೆದಿದ್ದವು. ಸರಾಸರಿ ೨೨ ವರ್ಷ ವಯಸ್ಸಿನ ಯೋಧರಲ್ಲಿ ಶೇ. ೭೭ ರಷ್ಟು ಮಂದಿಗೆ ಕೊರೋನರಿ ರಕ್ತನಾಳಗಳಲ್ಲಿ ಆಂಶಿಕ ಅಥವಾ ಸಂಪೂರ್ಣ ಅಡಚಣೆಗಳು ಪತ್ತೆಯಾಗಿದ್ದವು. ಆದರೆ ಕೊರಿಯಾ ದೇಶದ ಯೋಧರಲ್ಲಿ ಇಂತಹ ಗಮನಾರ್ಹ ಮತ್ತು ಗಂಭೀರ ಬದಲಾವಣೆಗಳು ಕಂಡುಬಂದಿರಲಿಲ್ಲ. ಈ ವರದಿಯಿಂದಾಗಿ ಅಮೆರಿಕದ ಪ್ರಜೆಗಳ ಆಹಾರ ಸೇವನಾಕ್ರಮ ಮತ್ತು ಆಧುನಿಕ ಜೀವನಶೈಲಿಗಳು ತಾರುಣ್ಯದಲ್ಲೇ ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳ ಪ್ರಮಾಣ ಹೆಚ್ಚಲು ಕಾರಣವೆಂದು ತಿಳಿದುಬಂದಿತ್ತು. ಈ ಅಧ್ಯಯನದಿಂದ ಗಮನಿಸಬೇಕಾದ ಅಂಶವೇನೆಂದರೆ, ಅನೇಕರು ನಂಬಿರುವಂತೆ ವೃದ್ಧಾಪ್ಯದಲ್ಲಿ ಮಾತ್ರ ಹೃದ್ರೋಗದ ಸಾಧ್ಯತೆಗಳು ಹೆಚ್ಚು ಎನ್ನುವುದು ನಿಜವಲ್ಲ. ನಮ್ಮ ರಕ್ತದಲ್ಲಿ ಕೊಲೆಸ್ಟರಾಲ್ ಮತ್ತು ಕೊಬ್ಬಿನಂಶಗಳ ಸಂಗ್ರಹವು ಬಾಲ್ಯದಿಂದಲೇ ಪ್ರಾರಂಭವಾಗುವುದು. ಈ ಸಮಸ್ಯೆ ನಮ್ಮ ಮಕ್ಕಳನ್ನು ಪೀಡಿಸದಂತೆ ತಡೆಗಟ್ಟಲು ಅವರು ಸೇವಿಸುವ ಆಹಾರ ಮತ್ತು ದೈನಂದಿನ ವ್ಯಾಯಾಮಗಳ ಬಗ್ಗೆ ಒಂದಿಷ್ಟು ಕಾಳಜಿ ವಹಿಸಬೇಕಾಗುವುದು ನಮ್ಮ ಕರ್ತವ್ಯವೂ ಹೌದು. 

ಅನುವಂಶೀಯತೆ 

ಹೃದ್ರೋಗಗಳಿಗೆ ಸಾಮಾನ್ಯವಾಗಿ ಅನುವಂಶೀಯತೆಯ ನಂಟು ಇರುವುದುಂಟು. ನಿಮ್ಮ ತಂದೆತಾಯಂದಿರು, ಅಜ್ಜ ಮತ್ತು ಅಜ್ಜಿಯರಲ್ಲಿ ಹೃದ್ರೋಗವಿರುವುದು ಪತ್ತೆಯಾಗಿದ್ದಲ್ಲಿ ಅಥವಾ ಹ್ರುದ್ರೋಗಗಳಿಂದ ಮೃತಪಟ್ಟಿದ್ದಲ್ಲಿ ನೀವು ಸಾಕಷ್ಟು ಮುಂಜಾಗ್ರತೆ ವಹಿಸುವುದು ಪ್ರಾಣರಕ್ಷಕವೆನಿಸುವುದು. ತಾರುಣ್ಯದಲ್ಲಿ ಹೃದಯಾಘಾತಕ್ಕೆ ಒಳಗಾದ ರೋಗಿಗಳಲ್ಲಿ ಈ ಸಮಸ್ಯೆ ಅನುವಂಶಿಕವಾಗಿ ಬಂದಿರುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಹೃದ್ರೋಗಗಳ ಅನುವಮ್ಶಿಕತೆಯ ಬಗ್ಗೆ ಸ್ಪಷ್ಟ ಕಾರಣಗಳು ಲಭ್ಯವಾಗದಿರುವುದು ನಿಜ. ಆದರೆ ನಮಗೆಲ್ಲರಿಗೂ ತಿಳಿದಿರುವಂತೆ ಸ್ಥೂಲದೇಹಿ ಮಾತಾಪಿತರ ಮಕ್ಕಳು ಸ್ಥೂಳದೆಹಿಗಲಾಗಿರುವುದು, ಅಂತೆಯೇ ಉಗ್ರ ಸ್ವಭಾವದವರ, ಮಾನಸಿಕ ರೋಗಿಗಳ ಮತ್ತು ನಿಷ್ಕ್ರಿಯ ಜೀವನಶೈಲಿಯನ್ನು ಅನುಸರಿಸುವವರ ಮಕ್ಕಳು ತಮ್ಮ ತಂದೆತಾಯಿಯರ ಗುಣ- ಸ್ವಭಾವಗಳನ್ನು ಹೊಂದಿರುವುದು ಸಹಜ. ಇದೇ ರೀತಿ ಹ್ರುದ್ರೋಗದೊಂದಿಗೆ ಮಧುಮೇಹ, ಅಧಿಕ ರಕ್ತದೊತ್ತಡಗಳಂತಹ ಗಂಭೀರ ಕಾಯಿಲೆಗಳೂ ಅನುವಂಶಿಕವಾಗಿ ಬರುವ ಸಾಧ್ಯತೆಗಳಿವೆ. ಆದರೆ ಇವೆಲ್ಲವೂ ನಮ್ಮ ಜೀವನಶೈಲಿಯ ನೇರ ಪರಿಣಾಮದಿಂದಾಗಿ ತಾರುಣ್ಯದಲ್ಲೇ ಬಾಧಿಸುವ ಸಾಧ್ಯತೆಗಳು ಹೆಚ್ಚುತ್ತವೆ. 

ರಕ್ತದೊತ್ತಡ - ಕೊಲೆಸ್ಟರಾಲ್ 

ನಿಮ್ಮ ವೈದ್ಯರು ಯಾವುದೇ ಸಂದರ್ಭದಲ್ಲಿ ನಿಮ್ಮ ರಕ್ತದೊತ್ತಡವನ್ನು ಪರೀಕ್ಷಿಸಿದ ಬಳಿಕ ೧೨೦/೮೦  ಇದೇ ಅಂದು ಹೇಳಿರಬಹುದು. ಈ ಅಂಕೆಗಳಲ್ಲಿ ಮೇಲೆ ಬರೆದ ೧೨೦ ಸಿಸ್ಟಾಲಿಕ್ ಅರ್ಥಾತ್ ಹೃದಯವು ರಕ್ತವನ್ನು ಹೊರಸೂಸುವ ಕ್ಷಣದ ಒತ್ತಡವಾಗಿರುತ್ತದೆ. ಅಂತೆಯೇ ಕೆಳಗೆ ನಮೂದಿಸಿದ ೮೦ ಸಂಖ್ಯೆಯು ಡಯಾಸ್ಟಾಲಿಕ್ ಅರ್ಥಾತ್ ಹೃದಯಬದಿತಗಳ ನಡುವಿನ ವಿರಾಮದ ಸ್ಥಿತಿಯ ಒತ್ತಡವಾಗಿರುತ್ತದೆ. ಇವೆರಡೂ ಅಂಕೆಗಳು ನಮ್ಮ ಚಟುವಟಿಕೆ, ಶಾರೀರಿಕ ಹಾಗೂ ಮಾನಸಿಕ ಸ್ಥಿತಿಗಳನ್ನು ಅವಲಂಬಿಸಿ ಹೆಚ್ಚು ಅಥವಾ ಕಡಿಮೆಯಾಗುವುದು. ಸಾಮಾನ್ಯವಾಗಿ ತೀವ್ರ ಶಾರೀರಿಕ ವ್ಯಾಯಾಮದ ಸಂದರ್ಭದಲ್ಲಿ ರಕ್ತದೊತ್ತಡವು ಒಂದಿಷ್ಟು ಹೆಚ್ಚಾಗುವುದಾದರೂ, ವಿರಾಮದ ಬಳಿಕ ಸಹಜ ಸ್ಥಿತಿಗೆ ಮರಳುವುದು. ಆದರೆ ನೀವು ವಿರಮಿಸುತ್ತಿರುವಾಗಲೂ ನಿಮ್ಮ ರಕ್ತದೊತ್ತಡವು ೧೪೦/೯೦ ಕ್ಕಿಂತ ಅಧಿಕವಿದ್ದಲ್ಲಿ ,ನಿಮಗೆ ಅಧಿಕ ರಕ್ತದೊತ್ತಡವಿದೆ ಎಂದರ್ಥ. ಹೃದ್ರೋಗಗಳಿಗೆ ಮತ್ತು ಅಧಿಕ ರಕ್ತದೊತ್ತಡಕ್ಕೆ ಸಮೀಪದ ಸಂಬಂಧವಿದೆ. ಆಧುನಿಕ ಔಷದಗಳು ಹಾಗೂ ಜೀವನಶೈಲಿಯ ಬದಲಾವಣೆ ಮತ್ತು ಶಾರೀರಿಕ ವ್ಯಾಯಾಮಗಳಿಂದ ಇದನ್ನು ನಿಯಂತ್ರಿಸುವುದು ಸುಲಭಸಾಧ್ಯ. ಆದರೆ ಬಹುತೇಕ ಜನರಿಗೆ ವ್ಯಾಯಾಮದ ಮೂಲಕ ಇದನ್ನು ಹತೊತಿಯಲ್ಲಿರಿಸುವುದು ಹಾಗೂ ಇದರಿಂದಾಗಿ ತಾವು ಸೇವಿಸುವ ಔಷದಗಳ ಪ್ರಮಾಣವನ್ನು ಇಳಿಸಬಹುದೆನ್ನುವ ಮಹತ್ವಪೂರ್ಣ ಮಾಹಿತಿ ತಿಳಿದಿಲ್ಲ. 

ನಿಮ್ಮ ರಕ್ತದಲ್ಲಿ ಅವಶ್ಯಕತೆಗಿಂತಲೂ ಹೆಚ್ಚಿರುವ ಕೊಲೆಸ್ಟರಾಲ್ ಕೂಡಾ ಹೃದ್ರೋಗಕ್ಕೆ ಕಾರನವೆನಿಸುವ ಸಾಧ್ಯತೆಗಳಿವೆ. ಯಕೃತ್ತಿನಲ್ಲಿ ತಯಾರಾಗುವ ಕೊಲೆಸ್ಟರಾಲ್ ನಮ್ಮ ಶರೀರದ ಜೀವಕಣಗಳಿಗೆ ಹಾಗೂ ಅನೇಕ ಹಾರ್ಮೋನ್ ಗಳ ಉತ್ಪತ್ತಿಗೂ ಅವಶ್ಯವಾಗಿದೆ. ಆದರೆ ಕೊಲೆಸ್ಟರಾಲ್ ಮತ್ತು ಟ್ರೈ ಗ್ಲಿಸರೈಡ್ ಗಳ ಸಂಗ್ರಹ ಮಿತಿಮೀರಿದಾಗ ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತದಂತಹ ಗಂಭೀರ ಸಮಸ್ಯೆಗಳ ಅಪಾಯ ಹೆಚ್ಚುವುದು. 

೧೦೦ ಮಿ. ಲೀ ರಕ್ತದಲ್ಲಿ ೨೫೦ ಮಿ ಗ್ರಾಂ ಗಳಿಗಿಂತ ಹೆಚ್ಚು ಕೊಲೆಸ್ಟರಾಲ್ ಅಂಶವಿದ್ದಲ್ಲಿ ಅಪಾಯಕಾರಿ ಎನಿಸುವುದು. ಇಂತಹ ವ್ಯಕ್ತಿಗಳಲ್ಲಿ ೨೦೦ ಮಿ. ಗ್ರಾಂ ಗಿಂತ ಕಡಿಮೆ ಕೊಲೆಸ್ಟರಾಲ್ ಇರುವ ವ್ಯಕ್ತಿಗಳಿಗಿಂತ ಹೃದಯಾಘಾತದ ಸಾಧ್ಯತೆ ಮೂರು ಪಟ್ಟು ಹೆಚ್ಚಿರುತ್ತದೆ. ಪ್ರಾಣಿಜನ್ಯ ಕೊಬ್ಬು ಮತ್ತು ಇತರ ಅತ್ಯಧಿಕ ಕೊಬ್ಬಿನಂಶಗಲ್ರುವ ಆಹಾರ ಸೇವನೆಯೊಂದಿಗೆ, ನಿಷ್ಕ್ರಿಯತೆಯೂ ಇದಕ್ಕೆ ಮುಖ್ಯ ಕಾರಣವೆನಿಸಬಲ್ಲದು. ನಿಮ್ಮ ಶರೀರದಲ್ಲಿ ಕೊಲೆಸ್ಟರಾಲ್ ನ ಸಂಗ್ರಹ ತೀವ್ರವಾಗಿ ಹೆಚ್ಚಿದಲ್ಲಿ ಇದನ್ನು ಇಳಿಸಬಲ್ಲ ಔಷದಗಳ ಸೇವನೆ ಅನಿವಾರ್ಯ. ಆದರೆ ಅಲ್ಪ ಪ್ರಮಾಣದಲ್ಲಿ ಹೆಚ್ಚಿದಾಗ ಕೊಬ್ಬುರಹಿತ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮಗಳಿಂದ ಇದನ್ನು ಇಳಿಸುವುದು ಸಾಧ್ಯ.  

 

 ಮಧುಮೇಹ 

ಅನೇಕರಲ್ಲಿ ಅನುವಂಶಿಕವಾಗಿ ಕಂಡುಬರುವ ಮಧುಮೇಹ ವ್ಯಾಧಿಯು ಇತ್ತೀಚಿನ ಕೆಲವರ್ಷಗಳಿಂದ ಬಾಲ್ಯ ಅಥವಾ ತಾರುಣ್ಯದಲ್ಲೇ ಪತ್ತೆಯಾಗುತ್ತಿರುವುದು ಆತಂಕಕಾರಿಯಾಗಿದೆ. ಶಾಶ್ವತ ಪರಿಹಾರವಿಲ್ಲದ ಈ ವ್ಯಾಧಿಪೀಡಿತರಲ್ಲಿ ಅಥೆರೋಸ್ಕ್ಲೆರೋಸಿಸ್ ಹಾಗೂ ಅಧಿಕ ರಕ್ತದೊತ್ತಡಗಳೊಂದಿಗೆ, ಕೊರೋನರಿ ಹೃದ್ರೋಗ ಮತ್ತು ತತ್ಸಂಬಂಧಿತ ಸಮಸ್ಯೆಗಳ ಪರಿಣಾಮವಾಗಿ ಅಕಾಲಿಕ ಮರಣದ ಸಂಖ್ಯೆಯೂ ಹೆಚ್ಚುತ್ತಿದೆ. ಮಧುಮೇಹ ಹಾಗೂ ಹೃದ್ರೋಗಗಳಿಗೆ ನಿಮ್ಮ ರಕ್ತದಲ್ಲಿ ಹೆಚ್ಚಿರುವ ಕೊಬ್ಬಿನಂಶವೂ ಕಾರಣವೆನಿಸಬಲ್ಲದು. ಆಹಾರ ಸೇವನೆಯಲ್ಲಿ ಪಥ್ಯ ಮತ್ತು ದೈನಂದಿನ ವ್ಯಾಯಾಮಗಳಿಂದ ಇಂತಹ ಗಂಭೀರ ಸಮಸ್ಯೆಗಳನ್ನು ಖಚಿತವಾಗಿ ದೂರವಿರಿಸಬಹುದು. 

ಸ್ಥೂಲಕಾಯ- ಅತಿಬೊಜ್ಜು 

ಧಡೂತಿ ದೇಹದ ವ್ಯಕ್ತಿಗಳ ಆರೋಗ್ಯದ ಸಮಸ್ಯೆಗಳಿಗೆ ಅತಿಬೊಜ್ಜು ನೇರವಾಗಿ ಕಾರಣವೆನಿಸದಿದ್ದರೂ, ಹೃದ್ರೋಗಗಳಿಗೆ ಕಾರಣವೆನಿಸುವುದರಲ್ಲಿ ಸಂದೇಹವಿಲ್ಲ. ಉದಾಹರಣೆಗೆ ಅಧಿಕ ರಕ್ತದೊತ್ತಡವಿರುವ ಬಹಳಷ್ಟು ಜನರು ಸ್ಥೂಲಕಾಯರೇ ಆಗಿದ್ದು, ಇವರು ತೀವ್ರ ವ್ಯಾಯಾಮದಲ್ಲಿ ಭಾಗವಹಿಸುವ ಮೂಲಕ ತಮ್ಮ ತೂಕವನ್ನು ಇಳಿಸಿಕೊಳ್ಳಬಹುದು. ಆದರೆ ಅತಿಆಹಾರಸೇವನೆ, ಅತಿಯಾದ ಕೊಬ್ಬಿನಂಶವಿರುವ ಖಾದ್ಯಗಳ ಸೇವನೆ ಹಾಗೂ ಸಿಹಿತಿಂಡಿಗಳು ಮತ್ತು ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ, ಇವರ ರಕ್ತದಲ್ಲಿನ ಕೊಬ್ಬಿನ ಅಂಶವು ಅತಿಯಾಗಿರುತ್ತದೆ. ತತ್ಪರಿಣಾಮವಾಗಿ ಉದ್ಭವಿಸುವ ಅಥೆರೋಸ್ಕ್ಲೆರೋಸಿಸ್ ಮತ್ತು ಆರ್ಟೀರಿಯೋ ಸ್ಕ್ಲೆರೋಸಿಸ್ ಗಳು, ಕೊರೋನರಿ ಹೃದ್ರೋಗಗಳಿಗೆ ಆಹ್ವಾನವನ್ನು ನೀಡುವುದರಲ್ಲಿ ಸಂದೇಹವಿಲ್ಲ. 

ಸ್ಥೂಲದೇಹಿಗಳ ಶರೀರದಲ್ಲಿನ ಅತಿಯಾದ ಕೊಬ್ಬು, ತೀವ್ರ ವ್ಯಾಯಾಮದ ಸಂದರ್ಭದಲ್ಲಿ ಹೃದಯದ ಕಾರ್ಯಕ್ಷಮತೆಗೆ ಅಡ್ಡಿಪಡಿಸುವುದೇ ಒಂದು ಸಮಸ್ಯೆಯಾಗಿದೆ. ಇದೇ ಕಾರಣದಿಂದಾಗಿ ಸ್ಥೂಲದೇಹಿಗಳು ತಜ್ಞವೈದ್ಯರ ಸಲಹೆ ಪಡೆದು ತಮ್ಮ ತೂಕವನ್ನು ಇಳಿಸಿಕೊಳ್ಳುವುದು ಹಿತಕರವೆನಿಸುವುದು. 

ಧೂಮಪಾನ 

ಧೂಮಪಾನ, ನಶ್ಯ, ಪಾನ್ ಮತ್ತು ಪಾನ್ ಮಸಾಲಾಗಳಂತಹ ತಂಬಾಕಿನ ಉತ್ಪನ್ನಗಳು ಆರೋಗ್ಯಕ್ಕೆ ಅಪಾಯಕರ ಎನ್ನುವುದು ಸರ್ವವಿದಿತ. ಆದರೆ ವಿಶೇಷವಾಗಿ ಧೂಮಪಾನದ ದೀರ್ಘಕಾಲೀನ ದುಷ್ಪರಿಣಾಮಗಳಿಂದಾಗಿ ರಕ್ತನಾಳಗಳು ಪೆಡಸಾಗುವುದರಿಂದ, ಹೃದಯಾಘಾತದ ಸಾಧ್ಯತೆಗಳು ಹೆಚ್ಚುತ್ತವೆ. ಕ್ಯಾನ್ಸರ್ ನಂತಹ ಗಂಭೀರ ಹಾಗೂ ಮಾರಕ ಕಾಯಿಲೆಗೂ ಕಾರಣವೆನಿಸಬಲ್ಲ ತಂಬಾಕಿನ ಸೇವನೆ, ನಿಮ್ಮ ಆರೋಗ್ಯಕ್ಕೆ ಹಾನಿಕರ ಎನ್ನುವುದರ ಬಗ್ಗೆ ಸಂದೇಹವಿಲ್ಲ. 

ಮದ್ಯಪಾನ 

ದಿನನಿತ್ಯ ಅಲ್ಪಪ್ರಮಾಣದಲ್ಲಿ ಮದ್ಯ ಸೇವನೆಯಿಂದ ನಿಮ್ಮ ಹೃದಯದ "ಆರೋಗ್ಯ" ಉತ್ತಮವಾಗಿರುವುದೆಂದು ಅನೇಕ ಸಂಶೋಧನೆಗಳು ಸಾಬೀತುಪಡಿಸಿವೆ. ಆದರೆ ಈ ಬಗ್ಗೆ ಸಾಕಷ್ಟು ಭಿನ್ನಭಿಪ್ರಾಯಗಳೂ ಇವೆ. ಜೊತೆಗೆ ಒಂದಿಷ್ಟು ಹೆಚ್ಚು ಮದ್ಯ ಸೇವನೆಯಿಂದಾಗಿ ಅಧಿಕ ರಕ್ತದೊತ್ತಡ, ಜಠರದ ಹುಣ್ಣುಗಳು, ಮಧುಮೇಹ ಮತ್ತಿತರ ಸಮಸ್ಯೆಗಳು ಉಲ್ಬಣಿಸುವುದರೊಂದಿಗೆ, ನೀವು ಮದ್ಯವ್ಯಸನಿಗಳಾಗುವ ಸಾಧ್ಯತೆಯೂ ಇದೆ. ಇದೇ ಕಾರಣದಿಂದಾಗಿ ಮದ್ಯ ಸೇವಿಸಿ ಹೃದಯದ ಆರೋಗ್ಯವನ್ನು ಕಾಪಾದುವುದಕ್ಕಿಂತ, ದೈನಂದಿನ ವ್ಯಾಯಾಮದ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಳಿತು. 

ವರ್ತನೆಗಳು 

ನಮ್ಮ ದೈನಂದಿನ ಜೀವನದಲ್ಲಿ ನಮ್ಮ ವರ್ತನೆಗಳು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತವೆ. ನಮ್ಮ ಮಾನಸಿಕ ಹಾಗೂ ಭಾವನಾತ್ಮಕ ಪ್ರಕ್ರಿಯೆಗಳು ನಮ್ಮ ಆರೋಗ್ಯದ ಮೇಲೆ ಹಾಗೂ ಹೃದಯದ ಕಾರ್ಯಕ್ಷಮತೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಅರ್ಥಾತ್ ಸಂತೋಷದಿಂದ ಇರುವುದು ಆರೋಗ್ಯಕ್ಕೆ ಉತ್ತಮ. ಕೋಪ - ತಾಪ, ಧ್ವೇಷ - ಅಸೂಯೆಗಳು ನಿಮ್ಮ ಆರೋಗ್ಯಕ್ಕೆ ನಿಶ್ಚಿತವಾಗಿಯೂ  ಹಾನಿಕರವೆಂದು ಅರಿತಿರಿ. ಅಂತೆಯೇ ಇಂದಿನ ಯುವಜನತೆ 'ಕನಿಷ್ಠ ಸಮಯದಲ್ಲಿ ಗರಿಷ್ಠ ಸಾಧನೆ" ಮಾಡುವ ಹವ್ಯಾಸದಿಂದಾಗಿ ತೀವ್ರ ಶಾರೀರಿಕ ಮತ್ತು ಮಾನಸಿಕ ಒತ್ತಡಕ್ಕೆ ಗುರಿಯಾಗುವುದು ಸ್ವಾಭಾವಿಕ. ತತ್ಪರಿಣಾಮವಾಗಿ ಅಕಾಲದಲ್ಲಿ ಹೃದಯರೋಗಗಳಿಗೆ ಬಲಿಯಾಗುತ್ತಿರುವುದೂ ಅಷ್ಟೇ ಸ್ವಾಭಾವಿಕ. 

ನಿಷ್ಕ್ರಿಯತೆ 

ಈ ಬಗ್ಗೆ" ವ್ಯಾಯಾಮ ಮಾಡಿ, ಆರೋಗ್ಯವನ್ನು ಕಾಪಾಡಿ "ಲೇಖನದಲ್ಲಿ ಸಾಕಷ್ಟು ವಿವರಗಳನ್ನು ನೀಡಿರುವುದರಿಂದ  ಇದರ ಪುನರಾವರ್ತನೆಯ ಅವಶ್ಯಕತೆಯಿಲ್ಲ. 

ಅಂತಿಮವಾಗಿ ಅನುವಂಶಿಕತೆ, ಲಿಂಗ, ಜನಾಂಗ ಹಾಗೂ ವಯಸ್ಸುಗಳು ದೈವನಿಯಾಮಕವಾದುದರಿಂದ, ಈ ಬಗ್ಗೆ ನಾವೇನೂ ಮಾಡುವಂತಿಲ್ಲ. 

ಕೊರೋನರಿ ಹೃದ್ರೋಗಗಳು ಬಾರದಂತೆ ತಡೆಗಟ್ಟಲು ಯಾವುದೇ ರೋಗನಿರೋಧಕ ಔಷದಗಳು ಲಭ್ಯವಿಲ್ಲ ನಡು ನಿಮಗೂ ತಿಳಿದಿರಲೇಬೇಕು. ಸದ್ದು ಮಾಡದೆ ಪ್ರಾರಂಭವಾಗಿ, ನಿಧಾನವಾಗಿ ಬೆಳೆದು ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸಬಲ್ಲ ಹೃದ್ರೋಗಗಳು ಮಾರಕವೂ ಹೌದು. 

ಆದರೆ ಕೊಬ್ಬಿನಂಶ ಕಡಿಮೆ ಇರುವ ಆಹಾರ ಸೇವನೆ, ನಿಯಮಿತ ವ್ಯಾಯಾಮ, ದುಶ್ಚಟಗಳಿಂದ ದೂರವಿರುವುದು, ಸುಖಲೋಲುಪ ಜೀವನಶೈಲಿಯನ್ನು ಮತ್ತು ನಿಷ್ಕ್ರಿಯತೆಯನ್ನು ತ್ಯಜಿಸಬಲ್ಲ ಮನೋಬಲ ನಿಮ್ಮಲ್ಲಿದ್ದಲ್ಲಿ, ನೀವು ಖಚಿತವಾಗಿಯೂ ಹೃದಯ ರೋಗಗಳಿಗೆ ವಿದಾಯ ಹೇಳುವುದು ಸಾಧ್ಯ. ಇದರೊಂದಿಗೆ ನಿಮ್ಮ ಆಯುಷ್ಯಕ್ಕೆ ಒಂದಿಷ್ಟು ವರ್ಷಗಳನ್ನು ಮತ್ತು ನಿಮ್ಮ ಮನಸ್ಸಿಗೆ ಒಂದಿಷ್ಟು ಹರ್ಷವನ್ನೂ ಸೇರಿಸಿಕೊಳ್ಳುವುದು ಸುಲಭಸಾಧ್ಯ. 

ನಕಲಿವೈದ್ಯರ ತಂತ್ರ!

ಸಾಮಾನ್ಯವಾಗಿ ಯಾವುದೇ ವೈದ್ಯರಲ್ಲಿ ಸಲಹೆ- ಚಿಕಿತ್ಸೆಗಳಿಗಾಗಿ ತೆರಳಿದ ರೋಗಿಯು ಅಣ್ಣ ಸಮಸ್ಯೆಗಳು, ಪತ್ತೆಯಾಗಿರುವ ಕಾಯಿಲೆಗಳು ಮತ್ತು ಪಡೆದಿರುವ ಚಿಕಿತ್ಸೆಗಳ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ನೀಡುವುದು ಸಹಜ. "ಬೆರಳು ತೋರಿಸಿದರೆ ಹಸ್ತವನ್ನು ನುಂಗುವ" ನಕಲಿವೈದ್ಯರು ಈ ಮಾಹಿತಿಯನ್ನೇ ಬಂಡವಾಳವನ್ನಾಗಿಸಿಕೊಂಡು ತಮ ಜೇಬನ್ನು ತುಂಬಿಸಿಕೊಳ್ಳುವುದು ಸತ್ಯ. 

ಕೊರೋನರಿ ರಕ್ತನಾಳಗಳಲ್ಲಿ ಅಡಚಣೆ ಇರುವ ರೋಗಿಯೊಬ್ಬರು ಇಂತಹ ನಕಲಿವೈದ್ಯನಲ್ಲಿಗೆ ಚಿಕಿತ್ಸೆಗಾಗಿ ಹೋಗಿದ್ದರು. ರೋಗಿ ನೀಡಿದ ಮಾಹಿತಯಾಗಳನ್ನು ಕೇಳಿದ ಬಳಿಕ ಆತನ ನಾಡಿಯನ್ನು ಪರೀಕ್ಷಿಸಿದ ನಾಟಕವಾಡಿದ ವೈದ್ಯನು, ನಿಮ್ಮ ರಕ್ತದಲ್ಲಿ ಕೊಲೆಸ್ಟರಾಲ್ ತುಂಬಾ ಹೆಚ್ಚಿದೆ ಎಂದಿದ್ದನು!. ಬಳಿಕ ತೆಳ್ಳಗಿನ ರಟ್ಟನ್ನು ಕೊಳವೆಯಾಕಾರದಲ್ಲಿ ಸುರುಳಿ ಮಾಡಿ, ಒಂದು ತುದಿಯನ್ನು ರೋಗಿಯ ಹೃದಯದ ಭಾಗದಲ್ಲಿ ಇರಿಸಿ ಮತ್ತೊಂದು ತುದಿಗೆ ಕಿವಿ ನೀಡಿ, ಒಂದೆರಡು ನಿಮಿಷಗಳ ಕಾಲ ಹೃದಯ ಬಡಿತವನ್ನು ಆಲಿಸಿದ ನಂತರ ರೋಗಿಯ ಕೊರೋನರಿ ರಕ್ತನಾಳಗಳಲ್ಲಿ ತೀವ್ರ ಅಡಚಣೆ ಇದೆ ಎಂದು ಹೇಳಿದ್ದನು. ವಿಶೇಷವೆಂದರೆ ಈ ಮಾಹಿತಿಯನ್ನು ರೋಗಿಯೇ ಆತನಿಗೆ ನೀಡಿದ್ದನು!.

ಒಂದೆರಡು ವಾರಗಳ ಚಿಕಿತ್ಸೆಯ ಬಳಿಕ ಇದೇ ಪರೀಕ್ಷೆಗಳ ಪುನರಾವರ್ತನೆಯ ನಂತರ ರೋಗಿಗೆ ಆಶ್ಚರ್ಯ- ಸಂತೋಷಗಳು ಉಂಟಾಗುವ ರೀತಿಯಲ್ಲಿ, ಶೇ. ೫೦ ರಷ್ಟು ಅಡಚಣೆಗಳು ನಿವಾರಣೆಯಾಗಿದ್ದು, ಮುಂದಿನ ಕೆಲವೇ ವಾರಗಳ ಚಿಕಿತ್ಸೆಯ ಬಳಿಕ ಅಡಚಣೆಗಳನ್ನು ಸಂಪೂರ್ಣವಾಗಿ ನಿವಾರಿಸುವ ಭರವಸೆಯನ್ನು ಈ ನಕಲಿವೈದ್ಯನು ನೀಡಿದ್ದನು!. 

ಇಂತಹ ನಕಲಿವೈದ್ಯರ ಹೇಳಿಕೆಗಳನ್ನು ಅಥವಾ ಚಿಕಿತ್ಸೆಯನ್ನು ನಂಬಿ ಪ್ರಯೋಗಿಸಿದಲ್ಲಿ, ಸಾಕಷ್ಟು ಹಣವನ್ನು ಕಳೆದುಕೊಳ್ಳುವುದರೊಂದಿಗೆ ನಿಮ್ಮ ಮಕ್ಕಳು 'ಅನಾಥ" ರಾಗುವುದರಲ್ಲಿ ಸಂದೇಹವಿಲ್ಲ. ನಿಮ್ಮ ಆರೋಗ್ಯದ ಸಮಸ್ಯೆಗಳಿಗೆ ನಿಮ್ಮ ನಂಬಿಗಸ್ಥ ಕುಟುಂಬ ವೈದ್ಯರ ಸಲಹೆಯಂತೆ ಸೂಕ್ತ ತಜ್ಞರ ಸಲಹೆ- ಚಿಕಿತ್ಸೆಗಳನ್ನು ಪಡೆದುಕೊಳ್ಳುವುದು ಹಿತಕರ ಎನ್ನುವುದನ್ನು ಮರೆಯದಿರಿ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ಡಿ. ೧೫-೦೫- ೨೦೦೩ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 


No comments:

Post a Comment