Thursday, December 5, 2013

CHICKEN POX




               ಕಷ್ಟ ಕೋಟಲೆಗಳಿಗೆ ಕಾರಣವೆನಿಸಬಲ್ಲ "ಕೋಟ್ಲೆ"

ಅನೇಕ ಭಾರತೀಯರ ಮನದಲ್ಲಿ ಭದ್ರವಾಗಿ ಬೇರೂರಿರುವ ಮೂಢನಂಬಿಕೆಗಳು ಮತ್ತು ತಪ್ಪುಕಲ್ಪನೆಗಳಿಗೆ ಕಾರಣವೆನಿಸಿರುವ ಕಾಯಿಲೆಗಳಲ್ಲಿ "ಸೀತಾಳೆ ಸಿಡುಬು" ಒಂದಾಗಿದೆ. ಅಮ್ಮ ಅಥವಾ ದೇವಿ ಎಂದು ಜನರು ಗುರುತಿಸಿರುವ ದೇವತೆಯೊಂದು ಮನುಷ್ಯನ ಶರೀರದಲ್ಲಿ ಪ್ರಕಟವಾಗುವುದೇ ಈ ವ್ಯಾಧಿಗೆ ಕಾರಣವೆಂದು ನಂಬುವ ಜನರು, ಈ ವೈಜ್ಞಾನಿಕ ಯುಗದಲ್ಲೂ ಇರುವುದು ನಂಬಲಸಾಧ್ಯವೆನಿಸುವುದು!. 
------------                 ------------                  ---------------                 ----------------                   ------

  ಸಾಮಾನ್ಯವಾಗಿ ಬೇಸಗೆಯ ದಿನಗಳಲ್ಲಿ ಅದರಲ್ಲೂ ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳ ಪರೀಕ್ಷೆಗಳ ಸಂದರ್ಭದಲ್ಲಿ ಪ್ರತ್ಯಕ್ಷವಾಗುವ ಕಾಯಿಲೆಗಳಲ್ಲಿ ಸೀತಾಳೆ ಸಿಡುಬು ಪ್ರಮುಖವಾಗಿದೆ. ಈ ವ್ಯಾಧಿಪೀಡಿತ ಮಕ್ಕಳಿಗೆ ಹಾಗೂ ಇವರ ಮಾತಾಪಿತರಿಗೆ ಸಾಕಷ್ಟು ಕಷ್ಟ ಕೋಟಲೆಗಳಿಗೆ ಕಾರಣವೆನಿಸುವುದರಿಂದಲೋ ಏನೋ, ದಕ್ಷಿಣ ಕನ್ನಡದ ಜನರು ಇದನ್ನು "ಕೋಟ್ಲೆ " ಎಂದೇ ಕರೆಯುತ್ತಾರೆ. 

ವೈದ್ಯಕೀಯ ಪರಿಭಾಷೆಯಲ್ಲಿ "ಚಿಕನ್ ಪಾಕ್ಸ್" ಎಂದು ಕರೆಯಲ್ಪಡುವ ಈ ಕಾಯಿಲೆಯು "ವೆರಿಸೆಲ್ಲಾ " ಎನ್ನುವ ವೈರಸ್ ಗಳಿಂದ ಉದ್ಭವಿಸಿ ಸಾಂಕ್ರಾಮಿಕವಾಗಿ ಹರದಬಲ್ಲದು. ಅಬಾಲ ವೃದ್ಧರನ್ನು ಪೀಡಿಸಬಲ್ಲ ಈ ವ್ಯಾಧಿಯು, ಸಾಮಾನ್ಯವಾಗಿ ಮಕ್ಕಳಲ್ಲಿ ಬಹಳ ಸೌಮ್ಯರೂಪದಲ್ಲಿ ಪ್ರಕಟವಾಗುವುದು. ಆದರೆ ವಯಸ್ಕರಲ್ಲಿ ಹಾಗೂ ಅಲ್ಪ ಪ್ರಮಾಣದ ಮಕ್ಕಳಲ್ಲಿ ತೀವ್ರ ರೂಪವನ್ನು ತಾಳಿ ಗಂಭೀರ ಸಮಸ್ಯೆಗಳೊಂದಿಗೆ, ಕೆಲವೊಮ್ಮೆ ಪ್ರಾಣಾಪಾಯಕ್ಕೂ ಕಾರಣವೆನಿಸುವುದು. 

ಆದರೆ ಇಂದಿಗೂ ಬಹುತೇಕ ಅವಿದ್ಯಾವಂತರೊಂದಿಗೆ ಕೆಲ ವಿದ್ಯಾವಂತರೂ ರೋಗಿಯ ಮೈಮೇಲೆ ದೇವಿ ಬಂದಿರುವಲೆಂದು ನಂಬಿ, ಮನೆಯಲ್ಲಿ ಮಧು-ಮಾಂಸಗಳ ಸೇವನೆಯನ್ನು ವರ್ಜಿಸಿ, ವೈದ್ಯರ ಚಿಕಿತ್ಸೆಯನ್ನು ಪಡೆದುಕೊಳ್ಳುವ ಗೋಜಿಗೆ ಹೋಗದಿರುವ ಪ್ರಾಚೀನ ಪದ್ದತಿಯು ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ. ಇದಕ್ಕೂ ಮಿಗಿಲಾಗಿ ಈ ವ್ಯಾಧಿಪೀಡಿತರಿಗೆ ನಾಲ್ಕಾರು ವಾರಗಳ ಕಾಲ ಆಹಾರ- ವಿಹಾರಗಳಲ್ಲಿ ಕಟ್ಟುನಿಟ್ಟಿನ ಪಥ್ಯವನ್ನು ವಿಧಿಸಿ, ಕದುಬೇಸಗೆಯ ದಿನಗಳಲ್ಲೂ ಸ್ನಾನವನ್ನು ಮಾಡಿಸದೆ ನರಕಯಾತನೆಗೆ ಗುರಿಪಡಿಸುವ ಮನೆಮಂದಿ, ಅನಾವಶ್ಯಕ ಸಮಸ್ಯೆಗಳಿಗೆ ಆಹ್ವಾನವನ್ನು ನೀಡುತ್ತಾರೆ. ರೋಗಿಯ ಪ್ರಾಣಕ್ಕೆ ಎರವಾಗಬಲ್ಲ ಇಂತಹ ಮೂಢನಂಬಿಕೆಗಳು ಹಾಗೂ ತಪ್ಪುಕಲ್ಪನೆಗಳನ್ನು ಸತ್ಯವೆಂದು ನಂಬುವ ಜನಸಾಮಾನ್ಯರು, ಈ ಕಾಯಿಲೆಯನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ ಹಾಗೂ ಗುಣಪಡಿಸಬಲ್ಲ ಔಷದಗಳಿವೆ ಎನ್ನುವುದನ್ನು ಮಾತ್ರ ನಂಬುವುದೇ ಇಲ್ಲ. ಅಂತೆಯೇ ಇಂತಹ ಅನಿಷ್ಠ ಪದ್ದತಿಗಳನ್ನು ತೊರೆಯಲೂ ಸಿದ್ಧರಿಲ್ಲ!. 

ಈ ವ್ಯಾಧಿ ಬಾಧಿಸುವುದೆಂತು?

ಸೀತಾಳೆ ಸಿಡುಬು ಪೀಡಿತ ವ್ಯಕ್ತಿಯ ನಾಸಿಕ ಸ್ರಾವ, ಜೊಲ್ಲು, ಶ್ವಾಸಾಂಗಗಳಲ್ಲಿನ ದ್ರವ- ಸ್ರಾವಗಳಿಂದ ಹಾಗೂ ರೋಗಿಯ ಚರ್ಮದ ಮೇಲೆ ಮೂಡುವ ಗುಳ್ಳೆಗಳಲ್ಲಿನ ದ್ರವದಿಂದ ವೆರಿಸೆಲ್ಲಾ ವೈರಸ್ ಗಳು ಮತ್ತೊಬ್ಬರಿಗೆ ಸುಲಭದಲ್ಲೇ ಹರಡುತ್ತವೆ. ಇದಲ್ಲದೇರೋಗಿಯೊಂದಿಗೆ ಸಂಪರ್ಕವಿರುವ ಮನೆಮಂದಿ, ಆಸ್ಪತ್ರೆಯ ಸಿಬಂದಿಗಳು ಮತ್ತು ರೋಗಿಯನ್ನು ಕಾಣಲು ಬಂದ ಸಂದರ್ಶಕರಿಂದ ಈ ವ್ಯಾಧಿ ಹರಡುತ್ತದೆ. 

ಆರೋಗ್ಯವಂತರ ಮೂಗು- ಬಾಯಿಗಳ ಮೂಲಕ ಶರೀರವನ್ನು ಪ್ರವೇಶಿಸುವ ಈ ವೈರಸ್ ಗಳು, ಹತ್ತರಿಂದ ಇಪ್ಪತ್ತೊಂದು ದಿನಗಳ ಅವಧಿಯಲ್ಲಿ ಸೀತಾಳೆ ಸಿಡುಬು ವ್ಯಾಧಿಯನ್ನು ಪ್ರಕಟಗೊಳಿಸುತ್ತವೆ. ಆದರೆ ಈ ವ್ಯಾಧಿ ಒಂದುಬಾರಿ ಬಾಧಿಸಿದ ಬಳಿಕ ರೋಗಿಯ ಶರೀರವು ಈ ವೈರಸ್ ಗಳಿಗೆ ಪ್ರತಿರೋಧಶಕ್ತಿಯನ್ನು ಗಳಿಸಿಕೊಳ್ಳುವುದರಿಂದ ಮತ್ತೊಮ್ಮೆ ಬಾಧಿಸದು. 

ರೋಗಲಕ್ಷಣಗಳು 

ಪುಟ್ಟ ಮಕ್ಕ್ಕಳಲ್ಲಿ ಸೀತಾಳೆ ಸಿಡುಬು ಉದ್ಭವಿಸುವ ಮುನ್ನ ವಿಶೇಷ ತೊಂದರೆಗಳು ಕಂಡುಬರುವುದಿಲ್ಲ. ಆದರೆ ಅಪರೂಪದಲ್ಲಿ ಕೆಲ ಮಕ್ಕಳಲ್ಲಿ ವಾಂತಿ, ವಿಪರೀತ ಜ್ವರ ಹಾಗೂ ಅಪಸ್ಮಾರದಂತಹ ಸೆಳೆತಗಳೊಂದಿಗೆ ಆರಂಭವಾಗಬಹುದು. ಇಂತಹ ಸಂದರ್ಭದಲ್ಲಿ ವ್ಯಾಧಿ ಯಾವುದೆಂದು ಅರಿಯದೇ ಚಿಕಿತ್ಸೆ ಪಡೆದುಕೊಂಡರೂ, ಒಂದೆರಡು ದಿನಗಳಲ್ಲಿ ಪ್ರತ್ಯಕ್ಷವಾಗುವ ಗುಳ್ಳೆಗಳು ಸೀತಾಳೆ ಸಿದುಬನ್ನು ಖಚಿತಪಡಿಸುತ್ತವೆ. 

ವಯಸ್ಕರಲ್ಲಿ ಹೆಚ್ಚಾಗಿ ಎರಡರಿಂದ ಮೂರುದಿನಗಳ ಕಾಲ ಮೈಕೈನೋವು, ತಲೆನೋವು ಮತ್ತು ಜ್ವರಗಳು ಬಾಧಿಸಿದ ಬಳಿಕವೇ ಗುಳ್ಳೆಗಳು ಮೂಡುತ್ತವೆ. ಸೀತಾಳೆ ಸಿಡುಬಿನ ಪ್ರಧಾನ ಲಕ್ಷಣವಾಗಿರುವ ಪುಟ್ಟ ಕೆಂಪು ಗುಳ್ಳೆಗಳು ಉದ್ಭವಿಸಿದ ಬಳಿಕ ತುಸು ದೊಡ್ಡದಾಗಿ ಪಾರದರ್ಶಕ ನೀರಿನ ಗುಳ್ಳೆಗಳಂತೆ ಕಾಣುತ್ತವೆ. "ಮಂಜಿನ ಹನಿ" ಗಳಂತೆ ಕಾಣುವ ಈ ಗುಳ್ಳೆಗಳಲ್ಲಿನ  ದ್ರವವು, ಮುಂದಿನ ಒಂದೆರಡು ದಿನಗಳಲ್ಲೇ ನಸುಹಳದಿ ಬಣ್ಣಕ್ಕೆ ಪರಿವರ್ತನೆಗೊಳ್ಳುತ್ತವೆ. ಈ ಗುಳ್ಳೆಗಳು ಹೆಚ್ಚಾಗಿ ತಲೆ, ಮುಖ, ಎದೆ ಹಾಗೂ ಬೆನ್ನಿನ ಮೇಲೆ ಮೂಡಿದ ಬಳಿಕ ಶರೀರದ ಇತರ ಭಾಗಗಳಿಗೂ ಹರಡುತ್ತವೆ. ಬಹುತೇಕ ರೋಗಿಗಳಲ್ಲಿ ಐದರಿಂದ ಏಳು ದಿನಗಳ ಕಾಲ ಹೊಸದಾಗಿ ಮೂಡುತ್ತಲೇ ಇರುವ ಗುಳ್ಳೆಗಳು, ತದನಂತರ ನಿಧಾನವಾಗಿ ಬಾಡಲು ಆರಂಭಿಸುತ್ತವೆ.

ಚಿಕ್ಕಮಕ್ಕಳ ಶರೀರದ ಮೇಲೆ ಕೇವಲ ಹತ್ತಾರು ಗುಳ್ಳೆಗಳಿಂದ ಆರಂಭಿಸಿ ಸಾವಿರಕ್ಕೂ ಅಧಿಕ ಗುಳ್ಳೆಗಳು ಮೂಡಬಹುದಾದರೂ, ಬಹುತೇಕ ರೋಗಿಗಳ ಶರೀರದಲ್ಲಿ ಸಾಮಾನ್ಯವಾಗಿ ಇನ್ನೂರರಿಂದ ನಾಲ್ಕುನೂರು ಗುಳ್ಳೆಗಳು ಮೂಡುತ್ತವೆ.  

ಸೀತಾಳೆ ಸಿಡುಬಿನ ಗುಳ್ಳೆಗಳಲ್ಲಿ ತಲೆದೋರುವ ತುರಿಕೆಯಿಂದಾಗಿ ರೋಗಿಗಳು ಇವುಗಳನ್ನು ತುರಿಸಿದಲ್ಲಿ ಒಡೆದು ಬ್ಯಾಕ್ಟೀರಿಯಾಗಳ ಸೋಂಕು ತಗಲಿ ಹುಣ್ಣಾಗುವ ಸಾಧ್ಯತೆಗಳಿವೆ. ಅದೇ ರೀತಿಯಲ್ಲಿ ಬೇಸಗೆಯ ದಿನಗಳಲ್ಲಿ ರೋಗಿಗೆ ಸ್ನಾನವನ್ನು ಮಾಡಿಸದೆ ಅಥವಾ ಒದ್ದೆ ಬಟ್ಟೆಯಿಂದ ಶರೀರವನ್ನು ಸ್ವಚ್ಚಗೊಳಿಸಿ ಟಾಲ್ಕಂ ಪೌಡರ್ ಚಿಮುಕಿಸದಿರುವುದೂ ಅಸಾಧ್ಯ ತುರಿಕೆಗೆ ಕಾರಣವೆನಿಸಬಹುದು. ರೋಗಿಯ ಶರೀರವನ್ನು ಶುಚಿಯಾಗಿ ಇರಿಸುವ ಮೂಲಕ ಈ ಸಮಸ್ಯೆಯನ್ನು ನಿಯಂತ್ರಿಸಬಹುದು. 

ಸಂಕೀರ್ಣ ಸಮಸ್ಯೆಗಳು 

ಸೀತಾಳೆ ಸಿದುಬನ್ನು ನಿರ್ಲಕ್ಷಿಸುವುದರಿಂದ, ಸಂದರ್ಭೋಚಿತ ಚಿಕಿತ್ಸೆಯನ್ನು ಪಡೆಯದೇ ಇರುವುದರಿಂದ, ರೋಗಿಯ ಶರೀರವನ್ನು "ತಂಪುಗೊಳಿಸುವ" ಉಪಕ್ರಮಗಳಿಂದ ಮತ್ತು ಇನ್ನಿತರ ಕೆಲ ಕಾರಣಗಳಿಂದ ರೋಗಿಗಳಲ್ಲಿ ಅನೇಕ ಸಂಕೀರ್ಣ ಸಮಸ್ಯೆಗಳು ಉದ್ಭವಿಸುತ್ತವೆ. ಅಂತೆಯೇ ಕೆಲರೋಗಿಗಳ ಪಾಲಿಗೆ ಪ್ರಾಣಾಂತಿಕವೆನಿಸುವ ಸಾಧ್ಯತೆಗಳಿವೆ. 

ರೋಗಿಯ ಶರೀರದ ಮೇಲಿನ ಗುಳ್ಳೆಗಳು ಒಡೆದು ಸ್ಟ್ರೆಪ್ಟೋಕಾಕಸ್ ಹಾಗೂ ಸ್ಟೆಫೈಲೋಕಾಕಸ್ ಎನ್ನುವ ಬ್ಯಾಕ್ಟೀರಿಯಾಗಳ ಸೋಂಕು ತಗಲಿ ಹುಣ್ಣುಗಳುಉದ್ಭವಿಸುವ ಸಾಧ್ಯತೆಗಳಿವೆ. ಕಣ್ಣಿನಲ್ಲಿ ಮೂಡಿದ ಗುಳ್ಳೆಗಳಿಗೆ ಸೋಂಕು ತಗಲಿದಲ್ಲಿ ದೃಷ್ಟಿದೋಷಕ್ಕೆ ಕಾರಣವೆನಿಸಬಹುದು. ವಯಸ್ಕರು ಮತ್ತು ಅಲ್ಪ ಪ್ರಮಾಣದ ಮಕ್ಕಳಲ್ಲಿ ನ್ಯುಮೋನಿಯಾ, ಶ್ವಾಸಕೋಶಗಳು- ಎಲುಬು ಮತ್ತು ಅಸ್ಥಿಸಂಧಿಗಳು- ವೃಷಣಗಳು- ಮೆದುಳು- ಮೇದೋಜೀರಕ ಗ್ರಂಥಿ ಹಾಗೂ ಯಕೃತ್ ನ ಉರಿಯೂತಗಳೂ ಸಂಭವಿಸಬಹುದು. 

ಚರ್ಮದ ಮೇಲಿನ ಗುಳ್ಳೆಗಳು ಹಾಗೂ ಇವುಗಳ ಸುತ್ತಲಿನ ಚರ್ಮದಲ್ಲಿ, ಮೂತ್ರದಲ್ಲಿ ಮತ್ತು ಕರುಳಿನಲ್ಲಿ ರಕ್ತಸ್ರಾವದಂತಹ ಗಂಭೀರ - ಮಾರಕ ತೊಂದರೆಗಳು ಕಂಡುಬರಬಹುದು. ಗರ್ಭಿಣಿಯರಿಗೆ ಈ ಕಾಯಿಲೆ ಕಾಣಿಸಿಕೊಳ್ಳುವ ಒಂದು ವಾರಕ್ಕೆ ಮುನ್ನ ಹೆರಿಗೆಯಾದಲ್ಲಿ, ನವಜಾತ ಶಿಶುವಿಗೆ ಈ ವ್ಯಾಧಿ ತೀವ್ರ ರೂಪದಲ್ಲಿ ಬಾಧಿಸುವುದು. ಮಗುವಿನ ಜನನದ ಬಳಿಕ ಬಾಧಿಸಿದಲ್ಲಿ ಪ್ರಾನಾಪಾಯಕ್ಕೆ ಕಾರಣವೆನಿಸಬಹುದು. 

ಗರ್ಭಸ್ಥ ಶಿಶುವಿಗೆ ಈ ಸೋಂಕು ತಗಲಿದಲ್ಲಿ ಮೆದುಳು ಮತ್ತು ನರಗಳಲ್ಲಿ ತೀವ್ರ ಹಾಗೂ ಗಂಭೀರ ಸಮಸ್ಯೆಗಳು ಉದ್ಭವಿಸಬಹುದು. ಆರರಿಂದ ಹದಿನೆರಡು ವಾರಗಳ ಗರ್ಭಕ್ಕೆ ವೆರಿಸೆಲ್ಲಾ ವೈರಸ್ ಗಳ ಸೋಂಕು ತಗಲಿದಲ್ಲಿ, ಹುಟ್ಟುವ ಮಗುವಿಗೆ ಕೈಕಾಲುಗಳ ಬೆಳವಣಿಗೆಗಳ ನ್ಯೂನತೆಗಳು ಹಾಗೂ ಇಪ್ಪತ್ತರಿಂದ ಇಪ್ಪತ್ತನಾಲ್ಕು ವಾರಗಳ ಗರ್ಭಕ್ಕೆ ಸೋಂಕು ತಗಲಿದಲ್ಲಿ , ಕಣ್ಣು ಮತ್ತು ಮೆದುಳಿನ ದೋಷಗಳು ಉದ್ಭವಿಸಬಹುದು. 

ಈ ವ್ಯಾಧಿಯಿಂದ ಉದ್ಭವಿಸಬಲ್ಲ ಪ್ರಾಣಾಪಾಯದ ಸಾಧ್ಯತೆಗಳ ಪ್ರಮಾಣ ಕೇವಲ ಶೇ. ೨ ರಷ್ಟೇ ಇದ್ದರೂ, ರೋಗನಿರೋಧಕ ಶಕ್ತಿಯ ಕೊರತೆಯಿಂದ ಬಳಲುವ ಮಕ್ಕಳಲ್ಲಿ ಶೇ. ೭ ರಿಂದ ೧೪ ರಷ್ಟಿದ್ದು, ಕೆಲವೊಮ್ಮೆ ಶೇ. ೫೦ ತಲುಪುವ ಸಾಧ್ಯತೆಗಳೂ ಇವೆ. 


  ತಡೆಗಟ್ಟುವುದೆಂತು?

ಸೀತಾಳೆ ಸಿಡುಬನ್ನು ತಡೆಗಟ್ಟುವ "ಲಸಿಕೆ" ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ವಿದೇಶದಿಂದ ಆಮದು ಮಾಡಬೇಕಾಗಿರುವುದರಿಂದ ತುಸು ದುಬಾರಿ ಎನಿಸುವುದಾದರೂ, ಈ ವ್ಯಾಧಿ ಬಾಧಿಸಿದಲ್ಲಿ ತಲೆದೋರಬಲ್ಲ ಗಂಭೀರ- ಮಾರಕ ಸಮಸ್ಯೆಗಳೊಂದಿಗೆ ತುಲನೆಮಾಡಿದಲ್ಲಿ ಈ ಲಸಿಕೆಯ ಚುಚ್ಚುಮದ್ದನ್ನು ಪಡೆದುಕೊಳ್ಳುವುದು ಹಿತಕರವೆನಿಸುವುದು. 

ಒಂದು ವರ್ಷ ಮೀರಿದ ಮಕ್ಕಳಿಗೆ ಒಂದು ಬಾರಿ ಹಾಗೂ ೧೨ ವರ್ಷ ಮೀರಿದವರಿಗೆ ಎರಡು ಬಾರಿ ನೀಡಬೇಕಾದ ಈ ಲಸಿಕೆಯು, ವೆರಿಸೆಲ್ಲಾ ವೈರಸ್ ಗಳ ವಿರುದ್ಧ ಶೇ.೯೫ ರಷ್ಟು ಜನರಿಗೆ ರಕ್ಷಣೆಯನ್ನು ನೀಡುತ್ತದೆ. ಇನ್ನುಳಿದ ಶೇ. ೫ ಜನರಲ್ಲಿ ಈ ವ್ಯಾಧಿ ಉದ್ಭವಿಸಿದರೂ, ಅತ್ಯಂತ ಸೌಮ್ಯರೂಪದಲ್ಲಿ ಪ್ರಕಟಗೊಳ್ಳುವುದರೊಂದಿಗೆ ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸುವುದಿಲ್ಲ. ಜೊತೆಗೆ ರೋಗಪೀಡಿತ ವ್ಯಕ್ತಿಯ ನೇರ ಸಂಪರ್ಕವಾದ ನಂತರದ ಮೂರು ದಿನಗಳಲ್ಲಿ ಈ ಲಸಿಕೆಯನ್ನು ಪಡೆದುಕೊಂಡರೂ ಅಪೇಕ್ಷಿತ ಪರಿಣಾಮ ದೊರೆಯುವುದು. 

ಬಾಲ್ಯದಲ್ಲೇ ಲಸಿಕೆ ಪಡೆದುಕೊಂಡ ಮಕ್ಕಳಿಗೆ ವೆರಿಸೆಲ್ಲಾ ವೈರಸ್ ಗಳಿಂದ ರಕ್ಷಣೆ ದೊರೆಯುವುದರಿಂದ, ಸೀತಾಳೆ ಸಿಡುಬಿನೊಂದಿಗೆ "ಸರ್ಪಸುತ್ತು" ಎಂದು ಕರೆಯಲ್ಪಡುವ ಭಯಾನಕ ವ್ಯಾಧಿಯೂ ಬಾಧಿಸುವ ಸಾಧ್ಯತೆಗಳಿರುವುದಿಲ್ಲ. ಸೀತಾಳೆ ಸಿಡುಬು ಪೀಡಿತ ವ್ಯಕ್ತಿಗಳೊಂದಿಗೆ ಸಂಪರ್ಕವಿರುವ ಗರ್ಭಿಣಿಯರು, ನವಜಾತ ಶಿಶುಗಳು ಮತ್ತು ರೋಗನಿರೋಧಕ ಶಕ್ತಿಯ ಕೊರತೆಯಿಂದ ಬಳಲುತ್ತಿರುವವರಿಗೆ ರಕ್ಷಣೆಯನ್ನು ನೀಡುವ ಸಲುವಾಗಿ VZIG ಎನ್ನುವ ಇಮ್ಯುನೋ ಗ್ಲೋಬುಲಿನ್ ಚುಚ್ಚುಮದ್ದನ್ನು ನೀಡಬೇಕಾಗುವುದು. ಸಾಮಾನ್ಯವಾಗಿ ಒಂದೇ ಮನೆಯಲ್ಲಿ ವಾಸವಾಗಿರುವ ವ್ಯಕ್ತಿಗಳಿಗೆ ಸೀತಾಳೆ ಸಿದುಬಿನಿಂದ ರಕ್ಷಣೆ ನೀಡುವಲ್ಲಿ ಇದು ಅತ್ಯಂತ ಉಪಯುಕ್ತವೆನಿಸುತ್ತದೆ. 

ಚಿಕಿತ್ಸೆ 

ವೆರಿಸೆಲ್ಲಾ ವೈರಸ್ ಗಳ ಹಾವಳಿಯನ್ನು ನಿಶ್ಚಿತವಾಗಿ ನಿಯಂತ್ರಿಸಬಲ್ಲ ಕೆಲ ಔಷದಗಳು ಅನೇಕ ವರ್ಷಗಳಿಂದ ನಮ್ಮ ದೇಶದಲ್ಲಿ ಲಭಿಸುತ್ತಿವೆ. ಎಸೈಕ್ಲೋವಿರ್, ಪಾಮ್ ಸೈಕ್ಲೋವಿರ್ ಹಾಗೂ ವಾಲಾ ಸೈಕ್ಲೋವಿರ್ ಎನ್ನುವ ಔಷದಗಳನ್ನು ರೋಗಿಯ ವಯಸ್ಸು, ವ್ಯಾಧಿಯ ತೀವ್ರತೆ ಹಾಗೂ ಇತರ ಸಮಸ್ಯೆಗಳನ್ನು ಪರಿಗಣಿಸಿ ನೀಡಬೇಕಾಗುತ್ತದೆ. ಇದೇ ಕಾರಣದಿಂದಾಗಿ ಈ ವ್ಯಾಧಿ ತಲೆದೋರಿದಲ್ಲಿ ವಿಳಂಬಿಸದೇ ನಿಮ್ಮ ಕುಟುಂಬ ವೈದ್ಯರು ಅಥವಾ ಅವರ ಸಲಹೆಯಂತೆ ತಜ್ಞವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆದಲ್ಲಿ, ಗಂಭೀರ ಸಮಸ್ಯೆಗಳು ಹಾಗೂ ಪ್ರಾಣಾಪಾಯದ ಸಾಧ್ಯತೆಗಳನ್ನು ಸುಲಭದಲ್ಲೇ ತಡೆಗಟ್ಟಬಹುದು. ಜೊತೆಗೆ ಅತ್ಯಲ್ಪ ಸಮಯದಲ್ಲೇ ರೋಗಮುಕ್ತರಾಗಬಹುದು. 

ಅನೇಕ ಹಳ್ಳಿ- ಪಟ್ಟಣಗಳ ನಿವಾಸಿಗಳು ಈ ವ್ಯಾಧಿಗೆ ಸೂಕ್ತ ಚಿಕಿತ್ಸೆ ಇಲ್ಲವೆಂದು ಅಥವಾ ಇದಕ್ಕೆ "ಇಂಗ್ಲಿಷ್ ಮದ್ದು" ಸೇವಿಸಬಾರದೆಂದು ಇಂದಿಗೂ ನಂಬಿದ್ದಾರೆ. ಮಂತ್ರ- ತಂತ್ರಗಳೊಂದಿಗೆ ಗಿಡಮೂಲಿಕೆಗಳ ಕಷಾಯ ಸೇವನೆಯೇ ಇದಕ್ಕೆ ದಿವ್ಯೌಷದವೆಂದು ನಂಬಿ, ಇದನ್ನು ಪ್ರಯೋಗಿಸಿದ ಬಳಿಕ ಸಂಕೀರ್ಣ ಸಮಸ್ಯೆಗಳು ಉದ್ಭವಿಸಿದ ಬಳಿಕ ವೈದ್ಯರಲ್ಲಿ ಧಾವಿಸುವುದು ಅಪರೂಪವೇನಲ್ಲ. ವಿಶೇಷವೆಂದರೆ ಪ್ರಾಣಾಪಾಯಕ್ಕೆ ಒಳಗಾದ ರೋಗಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿದರೂ ಫಲಕಾರಿಯಾಗದೇ ಮೃತಪಟ್ಟಲ್ಲ, ಈ ಮಂದಿ ಆಧುನಿಕ ಔಷದಗಳೇರೋಗಿಯ ಮರಣಕ್ಕೆ ಕಾರಣವೆಂದು ದೂರಲು ಹಿಂಜರಿಯುವುದಿಲ್ಲ!. 

ನಿಮಗಿದು ತಿಳಿದಿರಲಿ 

ಸೀತಾಳೆ ಸಿಡುಬಿನ ಪಿಡುಗಿಗೆ ಈಡಾಗಿದ್ದ ರೋಗಿಗಳು ನಿಗದಿತ ಅವಧಿಯಲ್ಲಿ ರೋಗಮುಕ್ತರಾದರೂ, ವೆರಿಸೆಲ್ಲಾ ವೈರಸ್ ಗಳು ಇವರ ಶರೀರದ ನರಗಳ ಗ್ಯಾಂಗ್ಲಿಯಾನ್ ಗಳಲ್ಲಿ "ಸುಪ್ತಾವಸ್ಥೆ' ಯಲ್ಲಿ ಉಳಿದುಕೊಳ್ಳುತ್ತವೆ. ಈ ಸ್ಥಿತಿಯಲ್ಲಿ ಹಲವಾರು ವರ್ಷಗಳ ಕಾಲ ಉಳಿದುಕೊಳ್ಳಬಲ್ಲ ಈ ವೈರಸ್ ಗಳು, ಇಂತಹ ವ್ಯಕ್ತಿಗಳ ಶರೀರದ ರೋಗನಿರೋಧಕ ಶಕ್ತಿ ಕುಂಠಿತವಾದ ಸಂದರ್ಭದಲ್ಲಿ ಮತ್ತೆ ಸಕ್ರಿಯಗೊಂಡು"ಸರ್ಪಸುತ್ತು" ಉದ್ಭವಿಸಲು ಕಾರಣೀಭೂತವಾಗುತ್ತವೆ. 

ಅನೇಕ ವಿದ್ಯಾವಂತರು ಧೃಢವಾಗಿ ನಂಬಿರುವಂತೆ "ಸರ್ಪಸುತ್ತು'  ನಮ್ಮ ಶರೀರವನ್ನು ಸುತ್ತುವರೆದು, ಇದರ ಹೆಡೆ ಮತ್ತು ಬಾಲಗಳು ಒಂದಾಗಿ ಸೇರಿದಲ್ಲಿ ನಿಶ್ಚಿತವಾಗಿಯೂ ರೋಗಿ ಮೃತಪಡುವನು ಎನ್ನುವುದು ಅಪ್ಪಟ ಸುಳ್ಳು!. 

ವೆರಿಸೆಲ್ಲಾ ವೈರಸ್ ನಿಂದ ಉದ್ಭವಿಸಬಲ್ಲ ಸೀತಾಳೆ ಸಿಡುಬು ಒಬ್ಬರಿಂದ ಮತ್ತೊಬ್ಬರಿಗೆ ಸುಲಭದಲ್ಲೇ ಹರಡಬಲ್ಲದು. ಆದರೆ ಇದೇ ವೈರಸ್ ನಿಂದ ಮುಂದೆ ಎಂದಾದರೂ ಉದ್ಭವಿಸಬಲ್ಲ ಸರ್ಪಸುತ್ತು ಮಾತ್ರ ನಿಶ್ಚಿತವಾಗಿಯೂ ರೋಗಿಯ ಸಮರ್ಕವಿದ್ದರೂ ಮತ್ತೊಬ್ಬರಿಗೆ ಹರಡದು. 

ಇವೆಲ್ಲಕ್ಕೂ ಮಿಗಿಲಾಗಿ ಈ ವ್ಯಾಧಿ ಪೀಡಿತರಿಗೆ ಮುಂದಿನ ಹಲವಾರು ವಾರಗಳ ಕಾಲ ಆಹಾರ ಸೇವನೆಯಲ್ಲಿ ಕಟ್ಟುನಿಟ್ಟಿನ ಪಥ್ಯವನ್ನು ಪರಿಪಾಲಿಸುವ ಅವಶ್ಯಕತೆಯೇ ಇರುವುದಿಲ್ಲ. ಸಾಮಾನ್ಯವಾಗಿ ಮನೆಮಂದಿ ಸೇವಿಸುವ ಅನ್ನಾಹಾರಗಳೊಂದಿಗೆ ಪೋಷಕಾಂಶಗಳು ಸಮೃದ್ಧವಾಗಿರುವ ಹಸಿ ತರಕಾರಿಗಳ ಸಲಾಡ್, ಹಣ್ಣು ಹಂಪಲುಗಳು, ಹಾಲು- ಮೊಸರು ಮತ್ತು ಶುದ್ಧವಾದ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಈ ರೋಗಿಗಳು ಪ್ರತಿನಿತ್ಯ ಸೇವಿಸಬೇಕು. 

ಪುಟ್ಟ ಕಂದನಿಂದ ವಯೋವೃದ್ಧರ ತನಕ ಎಲ್ಲರನ್ನೂ ಬಾಧಿಸಬಲ್ಲ ಸೀತಾಳೆ ಸಿಡುಬು ಮತ್ತು ಸರ್ಪಸುತ್ತು, ಇವೆರಡೂ ವ್ಯಾಧಿಗಳಿಗೆ ನೀಡುವ ಚಿಕಿತ್ಸೆ ಒಂದೇ ಆಗಿದ್ದರೂ, ಔಷದಗಳ ಪ್ರಮಾಣದಲ್ಲಿ ಮಾತ್ರ ಒಂದಿಷ್ಟು ವ್ಯತ್ಯಯವಾಗುವುದು. 

ವಯಸ್ಕರಲ್ಲಿ ತೀವ್ರ ಉಲ್ಬಣಿಸಿ ಸಂಕೀರ್ಣ ಸಮಸ್ಯೆಗಳಿಗೆ ಕಾರಣವೆನಿಸಬಲ್ಲ ಇವೆರಡೂ ವ್ಯಾಧಿಗಳು ಪ್ರತ್ಯಕ್ಷವಾದೊಡನೆ ಮಂತ್ರ- ತಂತ್ರಗಳನ್ನು ಪ್ರಯೋಗಿಸದೇ. ಸಮರ್ಪಕ ಚಿಕಿತ್ಸೆ ಪಡೆಯುವುದು ನಿಶ್ಚಿತವಾಗಿಯೂ ಹಿತಕರವೆನಿಸುವುದು. 

ಅಂತಿಮವಾಗಿ ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ ಎನ್ನುವ ಉಕ್ತಿಯಂತೆ, ವೆರಿಸೆಲ್ಲಾ ವೈರಸ್ ಗಳಿಂದ ಉದ್ಭವಿಸಬಹುದಾದ ವ್ಯಾಧಿಗಳನ್ನು ತಡೆಗಟ್ಟಬಲ್ಲ ಲಸಿಕೆಯನ್ನು ಪಡೆದುಕೊಳ್ಳುವುದು ಅತ್ಯಂತ ಉಪಯುಕ್ತವೆನಿಸುವುದು. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೦-೦೪-೨೦೦೬ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 


No comments:

Post a Comment