Tuesday, December 31, 2013

NIMMALLI INTAHA VARTANEGALIVEYE? PART-1





                ನಿಮ್ಮಲ್ಲಿ ಇಂತಹ ವರ್ತನೆಗಳಿವೆಯೇ? - ಭಾಗ ೧ 

 ನಿಮ್ಮನ್ನು ಬಾಧಿಸಬಲ್ಲ ಅನೇಕ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ಚಿಕಿತ್ಸೆಯ ಅವಶ್ಯಕತೆಯೇ ಇರುವುದಿಲ್ಲ. ಔಷದ ಸೇವನೆಯ ಅನಿವಾರ್ಯತೆ ಇದ್ದರೂ, ವೈದ್ಯರು ನೀಡುವ ಸಲಹೆ- ಸೂಚನೆಗಳ ಪರಿಪಾಲನೆಯೂ ಚಿಕಿತ್ಸೆಯಷ್ಟೇ ಅವಶ್ಯಕ ಎಂದು ತಿಳಿದಿರಿ.
------------                 ------------                  ----------------                -----------------                           

ಮಲ್ಲಪ್ಪನ ಮಲಬದ್ಧತೆ 

ವಯೋವೃದ್ಧ ಮಲ್ಲಪ್ಪನನ್ನು ಕಳೆದ ೫೦ ವರ್ಷಗಳಿಂದ ಬಾಧಿಸುತ್ತಿದ್ದ ಮಲಬದ್ಧತೆಯನ್ನು ಗುಣಪಡಿಸಲು ಯಾವುದೇ ವೈದ್ಯರು ಸಫಲರಾಗಿರಲಿಲ್ಲ. ಇದೇ ಕಾರಣದಿಂದಾಗಿ ನಗರಕ್ಕೆ ಹೊಸದಾಗಿ ಬಂದಿದ್ದ ವೈದ್ಯರನ್ನು ಭೇಟಿಯಾದ ಮಲ್ಲಪ್ಪನು, ತನ್ನ ಸಮಸ್ಯೆಯನ್ನು ಬಗೆಹರಿಸುವಂತೆ ಅಂಗಲಾಚಿದ್ದನು. 

ಮಲ್ಲಪ್ಪನನ್ನು ಕೂಲಂಕುಶವಾಗಿ ಪರೀಕ್ಷಿಸಿದ್ದ ವೈದ್ಯರಿಗೆ ಶಾರೀರಿಕ ಕಾರಣಗಳಿಂದ ಮಲಬದ್ಧತೆ ಆರಂಭವಾಗಿಲ್ಲ ಎಂದು ತಿಳಿದುಬಂದಿತ್ತು. ಆತನ ಆಹಾರ ಸೇವನಾ ಕ್ರಮದ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ ವೈದ್ಯರಿಗೆ ದಿಗ್ಭ್ರಮೆಯಾಗುವಂತಹ ಮಾಹಿತಿ ಲಭ್ಯವಾಗಿತ್ತು. 

ದಿನದಲ್ಲಿ ಮೂರುಬಾರಿ ಅನ್ನ- ಗಂಜಿಯನ್ನು ಉಣ್ಣುವ ಹಾಗೂ ಎರಡುಬಾರಿ ಚಹಾ ಕುಡಿಯುವ ಹವ್ಯಾಸವಿದ್ದ ಮಲ್ಲಪ್ಪನು, ದಿನವಿಡೀ ಒಂದು ಲೋಟ ನೀರನ್ನೂ ಕುಡಿಯುತ್ತಿರಲಿಲ್ಲ. ಅರ್ಥಾತ್ ಇಂದಿಷ್ಟು ಗಂಜಿತಿಳಿ ಹಾಗೂ ಚಹಾ ಸೇರಿದಂತೆ  ದಿನದಲ್ಲಿ ಕೇವಲ ನಾಲ್ಕು ಲೋಟಗಳಷ್ಟು ದ್ರವಾಹಾರ ಆತನ ಉದರವನ್ನು ಸೇರುತ್ತೀತು. ಸಾಕಷ್ಟು ಶಾರೀರಿಕ ಶ್ರಮದ ಕೆಲಸವನ್ನು ಮಾಡುತ್ತಿದ್ದುದರಿಂದ ಧಾರಾಳ ಬೆವರು ಸುರಿಸುತ್ತಿದ್ದುದು ಸ್ವಾಭಾವಿಕವಾಗಿತ್ತು. ತತ್ಪರಿಣಾಮವಾಗಿ ಸೇವಿಸಿದ ಆಹಾರ ಜೀರ್ಣವಾದಂತೆಯೇ, ದ್ರವಾಂಶದ ಕೊರತೆಯಿಂದ ಸಂಪೂರ್ಣವಾಗಿ ಶುಷ್ಕವಾಗುತ್ತಿದ್ದ ಮಲವು,ಎಷ್ಟು ತಿಣುಕಿದರೂ ವಿಸರ್ಜನೆಯಾಗುತ್ತಿರಲಿಲ್ಲ. ಇದರಿಂದಾಗಿ ಮಲ್ಲಪ್ಪನು ತನ್ನ ಗುದದ್ವಾರದಲ್ಲಿ ಕೈಬೆರಳನ್ನು ತೂರಿಸಿ, ಆಡಿನ ಹಿಕ್ಕೆಯಂತಹ ಗಟ್ಟಿಯಾದ ಮಲದ ತುಣುಕುಗಳನ್ನು ಹೊರತೆಗೆಯುವುದು ಅಭ್ಯಾಸವಾಗಿತ್ತು!. 

ನಿಜ ಹೇಳಬೇಕಿದ್ದಲ್ಲಿ ಮಲ್ಲಪ್ಪನ ಸಮಸ್ಯೆಯ ಪರಿಹಾರಕ್ಕೆ ಯಾವುದೇ ಔಷದ ಸೇವನೆಯ ಅವಶ್ಯಕತೆಯೇ ಇರಲಿಲ್ಲ. ದಿನನಿತ್ಯ ೩ ರಿಂದ ೫ ಲೀಟರ್ ನೀರು, ಬಾಳೆಹಣ್ಣು, ಪಪ್ಪಾಯಿ ಮತ್ತಿತರ ಹಣ್ಣುಗಳು, ಹಸಿ ತರಕಾರಿಗಳು ಹಾಗೂ ಒಂದಿಷ್ಟು ಹಾಲು ಮತ್ತು ಮೊಸರುಗಳ ದೈನಂದಿನ ಸೇವನೆಯಿಂದ ಮಲಬದ್ಧತೆಯ ಸಮಸ್ಯೆ ಉದ್ಭವಿಸುವುದಿಲ್ಲ. 

ನಿಮ್ಮ ದೈನಂದಿನ ಕೆಲಸಕಾರ್ಯಗಳ ನಡುವೆ ನಿಮ್ಮ ಶರೀರಕ್ಕೆ ಅವಶ್ಯಕವಾದ ೨  ರಿಂದ ೫ ಲೀಟರ್ ನೀರಿನ ಸೇವನೆಯಿಂದ ಆಮ್ಲಪಿತ್ತ , ಎದೆಯುರಿ, ಹೊಟ್ಟೆಯುಬ್ಬರ, ಅಜೀರ್ಣ ಮತ್ತು ಮಲಬದ್ಧತೆಗಳು ಬಾಧಿಸಲಾರವು. ಜೊತೆಗೆ ನಿಮಗೆ ಉಷ್ಣವಾಗಿದೆಎನ್ನುವ ಭ್ರಮೆಯನ್ನು ಹುಟ್ಟಿಸಬಲ್ಲ ಹಳದಿ ಬಣ್ಣದ ಮೂತ್ರ ವಿಸರ್ಜನೆ, ಉರಿಮೂತ್ರ, ಮೂತ್ರ ಪಿಂಡ- ನಾಳಗಳಲ್ಲಿ ಕಂಡುಬರುವ ಕಲ್ಲುಗಳು ಮತ್ತು ಮೂಲವ್ಯಾಧಿಯಂತಹ ಸಮಸ್ಯೆಗಳು ಕಾಡುವ ಸಾಧ್ಯತೆಗಳೇ ಇರುವುದಿಲ್ಲ. ಪ್ರತಿಬಾರಿ ಆಹಾರವನ್ನು ಸೇವಿಸುವಾಗ ಸಾಕಷ್ಟು ನೀರನ್ನು ಕುಡಿಯಿರಿ. ನಿಮ್ಮ ಪುಟ್ಟ ಕಂದನಿಗೂ ಬಾಲ್ಯದಿಂದಲೇ ಈ ಪಾಠವನ್ನು ಕಳಿಸಿ. ಅನೇಕರು ನಂಬಿರುವಂತೆ ಆಹಾರಸೇವನೆಯೊಂದಿಗೆ ನೀರು ಕುಡಿಯುವುದು ಹಾನಿಕರವಲ್ಲ. ಅಂತೆಯೇ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿ, ಅವಶ್ಯಕ ಪ್ರಮಾಣದ ಆಹಾರವನ್ನು ಸೇವಿಸುವುದು ಅಸಾಧ್ಯವೆನ್ನುವುದು ಕೂಡಾ ನಿಜವಲ್ಲ. 

ಬಹುತೇಕ ಜನರು ಬಾಯಾರಿದಾಗ ಮಾತ್ರ ನೀರು ಕುಡಿಯಬೇಕೆಂದು ನಂಬಿ, ಮಳೆ ಮತ್ತು ಚಳಿಗಾಲಗಳಲ್ಲಿ ಸೇವಿಸುವ ನೀರಿನ ಪ್ರಮಾಣವು ಕಡಿಮೆಯಾಗುವುದು. ಆದರೆ ಯಾವುದೇ ಋತುವಿನಲ್ಲೂ ಕನಿಷ್ಠ  ಲೀಟರ್ ಮತ್ತು ಬೇಸಗೆಯ ದಿನಗಳಲ್ಲಿ ಕನಿಷ್ಠ ೫ ಲೀಟರ್ ನೀರನ್ನು ಸೇವಿಸುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಹಿತಕರ. 

ಕೆಲವೊಂದು ಕಾಯಿಲೆಗಳಲ್ಲಿ ,ಅದರಲ್ಲೂ ವಿಶೇಷವಾಗಿ ಜ್ವರ, ವಾಂತಿ ಹಾಗೂ ಭೇದಿ ಮತ್ತು ಬಿಸಿಲಿನ ಝಳದಿಂದಾಗಿ ಶರೀರದಲ್ಲಿನ ನೀರಿನ ಪ್ರಮಾಣವು ತೀವ್ರವಾಗಿ ಕಡಿಮೆಯಾಗುವುದರಿಂದ, ಪ್ರಾಣಾಪಾಯದ ಸಾಧ್ಯತೆಗಳು ಹೆಚ್ಚುತ್ತವೆ. ಇಂತಹ ಸಂದರ್ಭಗಳಲ್ಲಿ ನೀರು, ಸಕ್ಕರೆ ಮತ್ತು ಒಂದಿಷ್ಟು ಉಪ್ಪನ್ನು ಬೆರೆಸಿ ತಯಾರಿಸಿದ ದ್ರಾವಣವನ್ನು ಆಗಾಗ ಕುಡಿಯುತ್ತಿರುವುದು ಜೀವರಕ್ಷಕವೆನಿಸುವುದು. 

ಸೂಜಿಮದ್ದು ಸಂಜೀವಿನಿಯಲ್ಲ 

ದೂರದ ಬಿಜಾಪುರದಿಂದ ದಕ್ಷಿಣ ಕಾಣದ ಜಿಲ್ಲೆಗೆ ಬಂದಿದ್ದ ಯಲ್ಲಪ್ಪನು ಕೃಷಿ ಕಾರ್ಮಿಕನಾಗಿ ದುಡಿಯುತ್ತಿದ್ದನು. ಮಳೆಗಾಲ ಆರಂಭವಾದ ಕೆಲವೇ ದಿನಗಳಲ್ಲಿ ಆತನ ಪುಟ್ಟ ಕಂಡ ಮಲ್ಲೆಶನಿಗೆ ತೀವ್ರ ಜ್ವರ ಹಾಗೂ ಶೀತ ಪ್ರಾರಂಭವಾಗಿತ್ತು. ಸ್ಥಳೀಯ ವೈದ್ಯರಲ್ಲಿ ಮಗುವನ್ನು ಕೊಂಡೊಯ್ದ ಯಲ್ಲಪ್ಪನು, ಮಗನಿಗೆ ಒಂದು ಸೂಜಿ ಹಾಕುವಂತೆ ವೈದ್ಯರಲ್ಲಿ ಗೋಗರೆದಿದ್ದನು. 

ಮಲ್ಲೇಶನ ಕಾಯಿಲೆಯ ವಿವರಗಳನ್ನು ಕೇಳಿದ ಬಳಿಕ ಆತನನ್ನು ಪರೀಕ್ಷಿಸಿದ ವೈದ್ಯರಿಗೆ, ಇದು ವೈರಸ್ ಗಳಿಂದ ಬರುವ ಸಾಮಾನ್ಯ ಶೀತ- ಜ್ವರವೆಂದು ಖಚಿತವಾಗಿತ್ತು. ನಾಲ್ಕು ದಿನಗಳ ಔಷದವನ್ನು ನೀಡಿ, ಇವುಗಳನ್ನು ಕ್ರಮಬದ್ಧವಾಗಿ ನೀಡುವಂತೆ ಹೇಳಿದರೂ, ಯಲ್ಲಪ್ಪ ಮಾತ್ರ ಒಂದು ಸೂಜಿ ಹಾಕ್ರೀ ಎಂದು ಒತ್ತಾಯಿಸಿದ್ದನು. ಮುಂದಿನ ಹಾತ್ತರು ನಿಮಿಷಗಳ ಕಾಲ ಒಂದೂವರೆ ವರ್ಷದ ಕಂದನಿಗೆ ಸೂಜಿ ನೀಡುವ ಅವಶ್ಯಕತೆಯಿಲ್ಲವೆಂದು ಮನದಟ್ಟು ಮಾಡುವಷ್ಟರಲ್ಲಿ ಸೋತು ಸುಣ್ಣವಾಗಿದ್ದರು!. ಏಕೆಂದರೆ ಆತನ ಊರಿನಲ್ಲಿ ಆರು ತಿಂಗಳ ಹಸುಗೂಸಿಗೂ ಸೂಜಿ ನೀಡುವ ವೈದ್ಯರ ಬಗ್ಗೆ ಆತನಿಗೆ ಅಪಾರವಾದ ನಂಬುಗೆಯಿತ್ತು. 

ಮುಂದಿನ ಬಾರಿ ಯಲ್ಲಪ್ಪ ವೈದ್ಯರಲ್ಲಿಗೆ ಬಂದಾಗ ಆತನೊಂದಿಗೆ ಹಲವಾರು ಜನರ ತಂಡವೇ ಬಂದಿತ್ತು. ಮುಗ್ಧ- ಅವಿದ್ಯಾವಂತ ಕಾರ್ಮಿಕರಿಗೆ ಸೂಜಿ ಹಾಕದೆ ಕಾಯಿಲೆಯನ್ನು ಗುಣಪಡಿಸುವ ವೈದ್ಯರ ಬಗ್ಗೆ ಕುತೂಹಲ ಮೂಡಿತ್ತು. ಜೊತೆಗೆ ತಮ್ಮ ಕಾಯಿಲೆಗೆ ಇದೇ ವೈದ್ಯರ  ಚಿಕಿತ್ಸೆ ಪಡೆಯುವ ಇರಾದೆಯೂ ಇತ್ತು. ವಿಶೇಷವೆಂದರೆ ಅಂದು ಬಂದಿದ್ದ ಐದಾರು ಹೊಸರೋಗಿಗಳು ಅಭ್ಯಾಸ ಬಲದಿಂದ ಸೂಜಿ ಹಾಕೊದಿಲ್ವೇನ್ರೀ ಎಂದು ಕೇಳಲು ಮರೆತಿರಲಿಲ್ಲ. ಆದರೆ ವೈದ್ಯರು ಮಾತ್ರ ಯಾರೊಬ್ಬರಿಗೂ ಸೂಜಿಯನ್ನೇ ಹಾಕಿರಲಿಲ್ಲ. 

ನಿಮ್ಮನ್ನು ಕಾಡಬಲ್ಲ ಪ್ರತಿಯೊಂದು ಕಾಯಿಲೆಗಳನ್ನು ಗುಣಪಡಿಸಲು ನಿರ್ದಿಷ್ಟ ಇಂಜೆಕ್ಷನ್ ಇಲ್ಲವೆಂದು ತಿಳಿದಿರಿ. ಯಾವುದೇ ಸಂದರ್ಭದಲ್ಲಿ ನೀವಾಗಿ ಇಂಜೆಕ್ಷನ್ ನೀಡಲೇಬೇಕೆಂದು ವೈದ್ಯರನ್ನು ಒತ್ತಾಯಿಸದಿರಿ. ಅಂತೆಯೇ ಕೆಲವೊಂದು ಸಂದರ್ಭಗಳಲ್ಲಿ ವೈದ್ಯರು ಇಂಜೆಕ್ಷನ್ ನೀದಬೇಕೆನ್ದಾಗ ನಿರಾಕರಿಸದಿರಿ. ಉದಾಹರಣೆಗೆ ನಿಮಗೆ ಯಾವುದೇ ಗಾಯವಾದಾಗ ನೀಡುವ ಟಿ.ಟಿ ಇಂಜೆಕ್ಷನ್ ಗೆ ಬದಲಿಯಾಗಿ ಗುಳಿಗೆ - ಔಷದಗಳು ಲಭ್ಯವಿಲ್ಲ. ತೀವ್ರ ವಾಂತಿಯನ್ನು ನಿಲ್ಲಿಸಲು ಇಜೆಕ್ಶನ್ ನೀಡುವುದು ಅನಿವಾರ್ಯ. ಅದೇ ರೀತಿಯಲ್ಲಿ ತೀವ್ರ ಆಸ್ತಮಾ,ತೀವ್ರ ನೋವು ಇತ್ಯಾದಿ ಸಮಸ್ಯೆಗಳಲ್ಲಿ ಕ್ಷಿಪ್ರ ಪರಿಣಾಮಕ್ಕಾಗಿ ಇಂಜೆಕ್ಷನ್ ನೀಡಲೇಬೇಕಾಗುವುದು. ಆದರೆ ನಿಮ್ಮನ್ನು ಬಾಧಿಸುವ ಸಾಮಾನ್ಯ ಶೀತ  - ಜ್ವರಗಳಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ಇಂಜೆಕ್ಷನ್ ಪ್ರಯೋಗ ನಿಶ್ಚಿತವಾಗಿಯೂ ಅನಿವಾರ್ಯವಲ್ಲ. 


  ಜ್ವರ ಒಂದು ಕಾಯಿಲೆಯಲ್ಲ 

ಜನ್ನುಮಾಮರಿಗೆ ಅಂದು ಮುಂಜಾನೆ ಎಚ್ಚರವಾಗುವಾಗಲೇ ತೀವ್ರ ಜ್ವರ ಮತ್ತು ಮೈಕೈನೋವು ಬಾಧಿಸುತ್ತಿದ್ದು, ಪರಿಚಯದ ವೈದ್ಯರಲ್ಲಿ ಚಿಕಿತ್ಸೆಗಾಗಿ ತೆರಳಿದರು. ಅದೇ ದಿನ ಎರಡು ಕಟ್ಟಡಗಳ ಕಾಂಕ್ರೀಟ್ ಕಾಮಗಾರಿ ಇರುವುದರಿಂದ, ತನ್ನ ಜ್ವರವನ್ನು ಕ್ಷಣಮಾತ್ರದಲ್ಲಿ ಗುಣಪಡಿಸಬಲ್ಲ ಇಜೆಕ್ಶನ್ ನೀಡುವಂತೆ ವೈದ್ಯರನ್ನು ಒತ್ತಾಯಿಸಿದ್ದರು. ರೋಗಿಯ ಗಡಿಬಿಡಿ ಸ್ವಭಾವದ ಅರಿವಿದ್ದ ವೈದ್ಯರು ಅವರ ಶಾರೀರಿಕ ತಪಾಸಣೆಯನ್ನು ನಡೆಸಿದ ಬಳಿಕ, "ವೈರಸ್" ಮೂಲದ ಜ್ವರವೆಂದು ಸಂದೇಹಿಸಿ, ಪ್ರತಿ ಆರು ಗಂಟೆಗೊಂದಾವರ್ತಿ ಪಾರಾಸಿಟಮಾಲ್ ಮಾತ್ರೆಯನ್ನು ನುಂಗಿ ವಿಶ್ರಾಂತಿ ಪಡೆಯಲು ಸೂಚಿಸಿದರು. ಎರಡು ದಿನಗಳ ನಂತರ ಏನಾದರೂ ತೊಂದರೆಗಳು ಕಾನಿಸಿಕೊಂದಲ್ಲಿ ಮತ್ತೆ ತನ್ನಲ್ಲಿ ಬರುವಂತೆ ಹೇಳಿದ ವೈದ್ಯರ ಬಗ್ಗೆ ಜನ್ನುಮಾಮರಿಗೆ ತುಸು ಅಸಮಾಧಾನವಾಗಿತ್ತು. 

ವೈದ್ಯರ ಸಲಹೆಯನ್ನು ನಿರ್ಲಕ್ಷಿಸಿ ತನ್ನ ಕಾಮಗಾರಿಗಳ ಮೇಲ್ವಿಚಾರಣೆ ಮುಗಿಸಿ ಮನೆಗೆ ಮರಳಿದಂತೆಯೇ ಜ್ವರ ತೀವ್ರವಾಗಿ ಉಲ್ಬಣಿಸಿತ್ತು. ಮರುದಿನ ಮಾತೊಬ್ಬ ವೈದ್ಯರನ್ನು ಮನೆಗೆ ಕರೆಸಿ, ಒತ್ತಾಯಪೂರ್ವಕವಾಗಿ ಇಂಜೆಕ್ಷನ್ ಪಡೆದುಕೊಂಡ ಜನ್ನುಮಾಮರು ತಮ್ಮ ಕಚೇರಿಗೆ ತೆರಳಿದ್ದರು. ಸಂಜೆಯ ತನಕ ಪ್ರಯಾಸದಿಂದ ತಮ್ಮ ಕೆಲಸಗಳನ್ನು ಮುಗಿಸಿ ಮನೆಗೆ ಮರಳಿದರು. ನಡುರಾತ್ರಿ ಕೆಂಡಾಮಂಡಲ ಜ್ವರದಿಂದ ಏನೇನೋ ಬಡಬಡಿಸುತ್ತಿದ್ದ ಪತಿಯ ಸ್ಥಿತಿಯನ್ನು ಕಂಡು ಹೌಹಾರಿದ ಜಾನಕಿಯವರು, ಮರುದಿನ ಬೆಳಿಗ್ಗೆ ಮತ್ತೆ ಅದೇ ವೈದ್ಯರನ್ನು ಕರೆಸಿ ಇನ್ನೊಂದು ಇಂಜೆಕ್ಷನ್ ಕೊಡಿಸಲು ಮರೆಯಲಿಲ್ಲ. 

ಮುಂದಿನ ೨೪ ತಾಸುಗಳಲ್ಲಿ ಉಲ್ಬಣಿಸಿದ್ದ ಜ್ವರದಿಂದಾಗಿ ಹಾಸಿಗೆಯಿಂದ ಏಳಲಾರದಷ್ಟು ನಿಶ್ಶಕ್ತಿಯೊಂದಿಗೆ ಮತ್ತೆ ಜ್ವರ ಮರುಕಳಿಸಿತ್ತು. ಈ ಬಾರಿ ತಮ್ಮ ಪರಿಚಯದ ವೈದ್ಯರನ್ನೇ ಮನೆಗೆ ಕರೆಸಿ ಪತಿಯ ಪರವಾಗಿ ಜಾನಕಿಯವರು ಕ್ಷಮೆ ಕೋರಿದ್ದರು. ಜನ್ನುಮಾಮರನ್ನು ಸಾವಕಾಶವಾಗಿ ಪರೀಕ್ಷಿಸಿದ ವೈದ್ಯರಿಗೆ "ಹೆಪಟೈಟಿಸ್" ಆರಂಭವಾಗಿರುವ ಬಗ್ಗೆ ಸಂದೇಹ ಮೂಡಿತ್ತು. ರೋಗಿಯನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿ ಹತ್ತುದಿನಗಳ ಚಿಕಿತ್ಸೆಯನ್ನು ನೀಡಿದ ಬಳಿಕ ಜನ್ನುಮಾಮರ ಜ್ವರ ಗುಣವಾಗುವುದರೊಂದಿಗೆ, ಜ್ವರ ಬಾಧಿಸಿದಾಗ ಇಂಜೆಕ್ಷನ್ ಪಡೆಯುವ ಚಟವೂ ಗುಣವಾಗಿತ್ತು!. 

ಯಾವುದೇ ಸಂದರ್ಭದಲ್ಲಿ ಜ್ವರ ಬಂದಾಗ ನಿರ್ಲಕ್ಷಿಸದೆ ವೈದ್ಯರ ಸಲಹೆ ಪಡೆಯಿರಿ. ಸಾಮಾನ್ಯ ಶೀತದಿಂದ ಆರಂಭಿಸಿ ಮಾರಕ ಕ್ಯಾನ್ಸರ್ ನಂತಹ ಕಾಯಿಲೆಗಳಲ್ಲೂ "ಜ್ವರ' ಒಂದು ಲಕ್ಷಣದ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಟಾನ್ಸಿಲೈಟಿಸ್, ಬ್ರಾಂಕೈಟಿಸ್, ಮಲೇರಿಯಾ, ಡೆಂಗೆ, ಟೈಫಾಯಿಡ್ಇತ್ಯಾದಿ ನೂರಾರು ವ್ಯಾಧಿಗಳಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣವಾದ ಜ್ವರದಲ್ಲೂ ಸಾಕಷ್ಟು ವೈವಿಧ್ಯಗಳಿವೆ. ರೋಗಿ ನೀಡುವ ಮಾಹಿತಿಯಿಂದ, ಆತನ ಶಾರೀರಿಕ ತಪಾಸಣೆಯಿಂದ ಹಾಗೂ ಅವಶ್ಯಕವೆನಿಸಿದಲ್ಲಿ ರಕ್ತ, ಮಲ, ಮೂತ್ರ ಹಾಗೂ ಕಫ ಇತ್ಯಾದಿಗಳ ಪರೀಕ್ಷೆಗಳಿಂದ ವೈದ್ಯರು ಜ್ವರಕ್ಕೆ ಕಾರಣವಾಗಿರುವ ವ್ಯಾಧಿಯನ್ನು ಪತ್ತೆಹಚ್ಚುವರು. 

ಬೆಳಿಗ್ಗೆ ಮೆಟಾಸಿನ್ ಮಾತ್ರೆ ನುಂಗಿ ಜ್ವರ ಕಡಿಮೆಯಾಗದೇ, ಮಧ್ಯಾಹ್ನ ಕ್ರೋಸಿನ್ ಮಾತ್ರೆಯನ್ನು ತಿನ್ನುವ "ಅತಿ ಬುದ್ಧಿವಂತ'ರಿಗೆ, ಇವೆರಡೂ ಮಾತ್ರೆಗಳಲ್ಲಿರುವ ಒಂದೇ ಎನ್ನುವದರ ಅರಿವೇ ಇರುವುದಿಲ್ಲ.ಸಾಮಾನ್ಯವಾಗಿ ಜ್ವರ ಬಾಧಿಸಿದಾಗ ಇತರ ಲಕ್ಷಣಗಳು ಇಲ್ಲದಿದ್ದಲ್ಲಿ ೨೪ ರಿಂದ ೪೮ ಗಂಟೆಗಳ ಕಾಲ ಪ್ರತಿ ೬ ಗಂಟೆಗೆ ಒಂದುಬಾರಿ ಪಾರಾಸಿಟಮಾಲ್ ಮಾತ್ರೆಯನ್ನು ಸೇವಿಸಬಹುದು. ಆದರೆ ಜ್ವರದೊಂದಿಗೆ ವಾಂತಿ, ಭೇದಿ, ಕೆಮ್ಮು, ಗಂಟಲು ನೋವು ಮತ್ತಿತರ ಸಮಸ್ಯೆಗಳು ಇದ್ದಲ್ಲಿ ವೈದ್ಯರ ಸಲಹೆ- ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಹಿತಕರ. ಅಂತೆಯೇ ಪುಟ್ಟ ಮಕ್ಕಳಿಗೆ ಜ್ವರ ಬಂದಾಗ 'ಫಿಟ್ಸ್" ( ಅಪಸ್ಮಾರದಂತಹ ಸಳೆತಗಳು) ಬಾಧಿಸುವುದು ತಿಳಿದಲ್ಲಿ, ವೈದ್ಯರ ಸಲಹೆ ಪಡೆದೇ ಔಷದಗಳನ್ನು ನೀಡಿ. ಯಾವುದೇ ಸಂದರ್ಭದಲ್ಲೂ ಜ್ವರ ಕಡಿಮೆಯಾಗಲಿಲ್ಲ ಎನ್ನುವ ಕಾರಣದಿಂದ ಚಿಕಿತ್ಸೆಯನ್ನು ಬದಲಾಯಿಸಲು ಅಥವಾ ಇಂಜೆಕ್ಷನ್ ನೀಡುವಂತೆ ವೈದ್ಯರನ್ನು ಒತ್ತಾಯಿಸದಿರಿ. 
ಅಂತಿಮವಾಗಿ ಜ್ವರ ಒಂದು ನಿರ್ದಿಷ್ಟ ವ್ಯಾಧಿಯಾಗಿರದೇ, ಅನೇಕ ರೋಗಗಳಲ್ಲಿ ಕಂಡುಬರುವ ಒಂದು ಲಕ್ಷಣ ಎನ್ನುವುದನ್ನು ಮರೆಯದಿರಿ.   


 ವಿದ್ಯಾನಂದನ ಉಚಿತ ಚಿಕಿತ್ಸೆ!

ವಿದ್ಯಾನಂದನ ವಿದ್ಯಾಭ್ಯಾಸವು ಹೈಸ್ಕೂಲಿನಲ್ಲೇ ಸಮಾಪ್ತಿಯಾಗಿದ್ದರೂ, ಆತನ ಬುದ್ಧಿಮತ್ತೆಗೆ ಯಾವುದೇ ಕೊರತೆ ಇರಲಿಲ್ಲ. ಹೊತ್ತೆಬಟ್ಟೆಗೆ ಸಾಕಾಗುವಷ್ಟು ಸಂಪಾದಿಸುತ್ತಿದ್ದ ಈ ಒಂಟಿಜೀವಿ, ಪರೋಪಕಾರಿ ಪಾಪಣ್ಣನಂತೆ ಪರಿಚಯದ ಜನರ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ಒಂದೆರಡು ಗುಳಿಗೆಗಳನ್ನು ಉಚಿತವಾಗಿ ಕೊಡುತ್ತಿದ್ದನು. ಪುಕ್ಕಟೆ ಔಷದಿ ದೊರೆಯುವುದರಿಂದ ಅನೇಕ ಬಂಧುಮಿತ್ರರು ಆತನ ಸಲಹೆ ಮತ್ತು ಚಿಕಿತ್ಸೆಗಳಿಗೆ ಹಾತೊರೆಯುತ್ತಿದ್ದರು. 

ಅನೇಕ ವರ್ಷಗಳಿಂದ ಸಂಜೆಯ ಸಮಯದಲ್ಲಿ ತನ್ನ ಸ್ನೇಹಿತನ ಔಷದ ಅಂಗಡಿಯೊಂದಕ್ಕೆ ಭೇಟಿನೀಡುತ್ತಿದ್ದ ವಿದ್ಯನಂದನಿಗೆ, ಕ್ರಮೇಣ ಹಲವಾರು ಔಷದಗಳ ಹೆಸರು, ಇವುಗಳ ಉಪಯೋಗ ಇತ್ಯಾದಿ ವಿವರಗಳನ್ನು ಕೇಳಿ ಅರಿತುಕೊಳ್ಳುವ ಹವ್ಯಾಸ ಆರಂಭವಾಗಿತ್ತು. ಇದರೊಂದಿಗೆ ಸಣ್ಣಪುಟ್ಟ  ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಲು ಉಪಯುಕ್ತವೆನಿಸುವ ಕೆಲವು ಔಷದಗಳನ್ನು ಖರೀದಿಸಿ, ಬಂಧುಮಿತ್ರರಿಗೆ ಉಚಿತವಾಗಿ ನೀದಳು ಆರಂಭಿಸಿದ್ದನು. 

ಅದೊಂದು ಭಾನುವಾರ ಸಂಜೆ ನೆರೆಮನೆಯ ಸಂಕಪ್ಪನಿಗೆ ವಿಪರೀತ ಶೀತ ಮತ್ತು ತಲೆನೋವಿನೊಂದಿಗೆ ಜ್ವರ ಕಾಣಿಸಿಕೊಂಡಾಗ, ವಿದ್ಯಾನನದನ ಬಾಲಿ ಚಿಕಿತ್ಸೆಗಾಗಿ ಬಂದಿದ್ದನು. ಶೀತದ ಮಾತ್ರೆಗಳಲ್ಲೇ ದುಬಾರಿಯಾದ ಎರಡು ಮಾತ್ರೆಗಳನ್ನು ನೀಡಿದ ವಿದ್ಯಾನಂದನು, ಮರುದಿನ ಬೆಳಿಗ್ಗೆ ಶೀತ ಜ್ವರ ಮಾಯವಾಗುವುದೆಂದು ಭರವಸೆ ನೀಡಿದ್ದನು. ಆದರೆ ಅಧಿಕ ಪ್ರಸಂಗಿ ಸಂಕಪ್ಪನು ಎರಡೂ ಮಾತ್ರೆಗಳನ್ನು ಒಟ್ಟಿಗೆ ನುಂಗಿ ನೀರು ಕುಡಿದು ಮಲಗಿದ್ದನು. ಸುಮಾರು ಒಂದುಗಂತೆಯ ಬಳಿಕ ನಿಧಾನವಾಗಿ ಆರಂಭವಾದ ಹೊಟ್ಟೆ ಉರಿ ಮತ್ತು ನೋವುಗಳು ಕ್ರಮೇಣ ಹೆಚ್ಚುತ್ತಾ ಹೋಗಿ, ನಡುರಾತ್ರಿಯಲ್ಲಿ ಸಂಕಪ್ಪನಿಗೆ ರಕ್ತವಾಂತಿಯಾಗಿತ್ತು. ಗಾಬರಿಗೊಂಡ ಸಂಕಪ್ಪನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದನು. ತಜ್ಞವೈದ್ಯರ ಪರೀಕ್ಷೆಯ ಬಳಿಕ ಸಂಕಪ್ಪನ ಹಳೆಯ 'ಜಠರದ ಹುಣ್ಣು' ಆತನು ಸೇವಿಸಿದ್ದ ಶೀತದ ಮಾತ್ರೆಯಲ್ಲಿನ ಆಸ್ಪಿರಿನ್ ಎನ್ನುವ ಔಷದದ ಪರಿಣಾಮವಾಗಿ ತೀವ್ರವಾಗಿ ಉಲ್ಬಣಿಸಿದ ಕಾರಣದಿಂದ ರಕ್ತವಾಂತಿಯಾಗಿರುವುದು ಖಾತರಿಯಾಗಿತ್ತು. ತುರ್ತು ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದ ಸಂಕಪ್ಪನಿಗೆ ವಾರ ಕಳೆದ ಬಳಿಕ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ವಿಷಯವನ್ನರಿತು ಗಾಬರಿಯಾದ ವಿದ್ಯಾನಂದನು ಇದೀಗ ತನ್ನ ಆರೋಗ್ಯದ ಸಮಸ್ಯೆಗಳಿಗೂ ವೈದ್ಯರ ಸಲಹೆಯನ್ನು ಪಡೆಯುತ್ತಿರುವುದು ಸತ್ಯ!. 

ತಮ್ಮ ರೋಗಿಗಳಿಗೆ ಅನೇಕ ವಿಧದ ಔಷದಗಳನ್ನು ಸೂಚಿಸುವ ಮುನ್ನ ವೈದ್ಯರು ತಮ್ಮ ರೋಗಿಯಲ್ಲಿ ಇರಬಹುದಾದ ಇತರ ಕಾಯಿಲೆಗಳು, ತೊಂದರೆಗಳು ಮತ್ತು ಅಲರ್ಜಿ ಮತ್ತಿತರ ಸಮಸ್ಯೆಗಳ ಬಗ್ಗೆ ಪರಾಮರ್ಶಿಸಿದ ಬಳಿಕವೇ ಚಿಕಿತ್ಸೆಯನ್ನು ನೀಡುವರು. ಇದರೊಂದಿಗೆ ಕೆಲ ಔಷದಿಗಳ ಅಡ್ಡ- ದುಷ್ಪರಿಣಾಮಗಳು ಹಾಗೂ ರೋಗಿ ಸೇವಿಸುವ ವಿಭಿನ್ನ ಔಷದಗಳ ನಡುವಿನ ಪರಸ್ಪರ ಪ್ರತಿಕ್ರಿಯೆಗಳ ಬಗ್ಗೆ ಅವಶ್ಯಕ ಮುನ್ನೆಚ್ಚರಿಕೆಯನ್ನು ವಹಿಸಬೇಕಾಗುವುದು. ಔಷದಗಳ ಪರಿಪೂರ್ಣ ಮಾಹಿತಿಯನ್ನು ಅರಿಯದ ಹಾಗೂ ವೈದ್ಯರೇ ಅಲ್ಲದ ವಿದ್ಯಾನಂದನಂತಹ ವ್ಯಕ್ತಿಗಳಿಂದ ಚಿಕಿತ್ಸೆ ಪಡೆಯುವುದು ಅಪಾಯಕ್ಕೆ ಆಹ್ವಾನವನ್ನು ನೀಡಿದಂತೆ ಎನ್ನುವುದನ್ನು ಮರೆಯದಿರಿ. 

ದೇವರ ಅಪ್ಪಣೆಯಂತೆ ಚಿಕಿತ್ಸೆ ನೀಡಬೇಕೆ?

ಚಿನ್ನಮ್ಮನ ಮಗಳು ಲಕ್ಷ್ಮಿಗೆ ಇತ್ತೀಚಿನ ಕೆಲದಿನಗಳಿಂದ ವಿಪರೀತ ಆಯಾಸ ಮತ್ತು ತಲೆತಿರುಗುವಿಕೆ ಬಾಧಿಸಲು ಆರಂಭಿಸಿತ್ತು. ಪರಿಚಯದ ವೈದ್ಯರ ಬಳಿ ಮಗಳನ್ನು ಕರೆದೊಯ್ದ ಚಿನ್ನಮ್ಮನು, ಮಗಳ ರಜೋಸ್ರಾವದ ತೊಂದರೆ ಮತ್ತು ಅಲ್ಪಾಹಾರ ಸೇವನೆಗಳ ವಿಚಾರವನ್ನು ತಿಳಿಸಲು ಮರೆತಿರಲಿಲ್ಲ. 

ಲಕ್ಷ್ಮಿಯ ಬಳಿ  ಅವಶ್ಯಕ ಪ್ರಶ್ನೆಗಳನ್ನು ಕೇಳಿದ ಬಳಿಕ ಶಾರೀರಿಕ ಪರೀಕ್ಷೆ ನಡೆಸಿದ ವೈದ್ಯರಿಗೆ, ಆಕೆಯ ಸಮಸ್ಯೆಗೆ ಪೋಷಕಾಂಶಗಳ ಕೊರತೆಯಿಂದ ಉದ್ಭವಿಸಿರುವ ರಕ್ತಹೀನತೆಯೇ ಕಾರಣವೆಂದು ತಿಳಿಯಿತು. ಚಿಕಿತ್ಸೆಯ ಮೊದಲ ಹಂತದಲ್ಲಿ ಆಕೆಗೆ ಜಂತು ಹುಳಗಳ ನಿವಾರಣೆಗಾಗಿ ಔಷದವನ್ನು ನೀಡಿ, ತದನಂತರ ನಿಶ್ಶಕ್ತಿಯನ್ನು ಕಡಿಮೆಮಾಡಲು ನಾಲ್ಕಾರು ಇಂಜೆಕ್ಷನ್ ನೀಡಲಾಯಿತು.ಬಳಿಕ ದಿನನಿತ್ಯ ಸೇವಿಸಬೇಕಾದ ಕಬ್ಬಿಣದ ಸತ್ವಗಳ ಮಾತ್ರೆಗಳನ್ನು ನೀಡಿದ ವೈದ್ಯರು, ಅಹಾರಸೇ ವನೆಯಲ್ಲಿ ಪರಿಪಾಲಿಸಬೇಕಾದ ನಿಯಮಗಳನ್ನು ವಿವರಿಸಿ ತಿಂಗಳು ಕಳೆದ ನಂತರ ಬರುವಂತೆ ಆದೇಶಿಸಿದ್ದರು. 

ಮುಂದಿನ ತಿಂಗಳು ಮರಳಿದ ಲಕ್ಷ್ಮಿಯ ನಿಶ್ಶಕ್ತಿ ಮತ್ತು ತಲೆತಿರುಗುವಿಕೆಯ ಸಮಸ್ಯೆಗಳು ಸಂಪೂರ್ಣವಾಗಿ ಮಾಯವಾಗಿದ್ದವು. ಮತ್ತೆ ಒಂದು ತಿಂಗಳ ಕಬ್ಬಿಣದ ಸತ್ವದ ಮಾತ್ರೆಗಳನ್ನು ನೀಡಿದ ವೈದ್ಯರ ಬಾಲಿ ಚಿನ್ನಮ್ಮನು ಇನ್ನೂ ಒಂದು ಬಗೆಯ ಔಷದವನ್ನು ನೀಡುವಂತೆ ಒತ್ತಾಯಿಸಿದ್ದಳು. ಅವಶ್ಯಕತೆಗಿಂತ ಹೆಚ್ಚು ನೀಡಲು ಸಮ್ಮತಿಸದ ವೈದ್ಯರು ಆಕೆಯ ಕೋರಿಕೆಯನ್ನು ನಿರಾಕರಿಸಿದ್ದರು. ಇದನ್ನು ಕೇಳಿ ಹೌಹಾರಿದಂತೆ ಕಂಡುಬಂದ ಚಿನ್ನಮ್ಮನ ಕಣ್ಣಲ್ಲಿ ನೀರು ತುಂಬಿತ್ತು. ಇದರ ಕಾರಣವರಿಯುವ ಕುತೂಹಲದಿಂದ ವೈದ್ಯರು ಆಕೆಯನ್ನು ಪ್ರಶ್ನಿಸಿದಾಗ ದೊರೆತ ಉತ್ತರವನ್ನು ಕೇಳಿ ವೈದ್ಯರಿಗೆ ದಿಗ್ಭ್ರಮೆಯಾಗಿತ್ತು. ಏಕೆಂದರೆ ಮಗಳ ಚಿಕಿತ್ಸೆಯ ಬಗ್ಗೆ ದೇವರಲ್ಲಿ ಪ್ರಶ್ನಿಸಿದಾಗ "ಪ್ರಸ್ತುತ ವೈದ್ಯರು ನೀಡಿರುವ ಚಿಕಿತ್ಸೆ ಸಮರ್ಪಕವಾಗಿದ್ದರೂ, ಮೂರು ವಿಧದ ಔಷದಗಳನ್ನು ನೀಡಿರುವುದರಿಂದ ಪರಿಣಾಮಕಾರಿಯಾಗದು. ಆದುದರಿಂದ ಚಿಕಿತ್ಸೆ ಇನ್ನಷ್ಟು ಫಲಪ್ರದವೆನಿಸಲು ಇನ್ನೂ ಒಂದು ವಿಧದ ಔಷದವನ್ನು ವೈದ್ಯರಿಂದ ಕೇಳಿ ಪಡೆಯಿರಿ' ಎಂದು ದೇವರ ಅಪ್ಪನೆಯಾಗಿತ್ತು!. ಆಶ್ಚರ್ಯಚಕಿತರಾದ ವೈದ್ಯರು ಈ ದೇವರ ದರ್ಶನ ಎಲ್ಲಿ ನಡೆಯುವುದೆಂದು ಕೇಳಿದಾಗ, ಸ್ವತಃ ಲಕ್ಷ್ಮಿಯ ಮೈಮೇಲೆ ದೇವರು ಬರುವ ವಿಚಾರ ತಿಳಿದುಬಂದಿತ್ತು.

ಚಿನ್ನಮ್ಮನಂತೆ ಮೂಢನಂಬಿಕೆ ಮತ್ತು ಕಂದಾಚಾರಗಳಿಗೆ ತಲೆಬಾಗುವ ಕೋಟ್ಯಂತರ ಜನರು ಭಾರತದಲ್ಲಿದ್ದಾರೆ. ಲಕ್ಷ್ಮಿಗೆ ಚಿಕಿತ್ಸೆಯನ್ನು ನೀಡಿದ ವೈದ್ಯರು ಇತರ ಯಾವುದೇ ವೈದ್ಯರು ನೀಡುವಂತಹ ಔಷದಗಳನ್ನು ನೀಡಿ, ನಿರೀಕ್ಷಿತ ಪರಿಣಾಮ ಕಂಡುಬಂದರೂ, ಚಿನ್ನಮ್ಮನಂತೆ ದೇವರ ಅಪ್ಪಣೆ ಪಡೆಯ ಬಯಸುವುದು ನಂಬಲಸಾಧ್ಯವೆನಿಸುತ್ತದೆ. ಜೊತೆಗೆ ಅವಿದ್ಯಾವಂತೆ ಚಿನ್ನಮ್ಮನು ತನ್ನ ಮಗಳ ಶರೀರದಲ್ಲಿ ಪ್ರತ್ಯಕ್ಷವಾಗುವ ದೇವತೆಯು ಆಕೆಯ ಆರೋಗ್ಯವನ್ನು ರಕ್ಷಿಸದಿರಲು ಕಾರಣವೇನೆಂದು ಚಿಂತನೆ ಮಾಡುವಷ್ಟು ಬುದ್ಧಿವಂತಳೂ ಆಗಿರಲಿಲ್ಲ. 

ಅಂತಿಮವಾಗಿ ಲಕ್ಷ್ಮಿಗೆ ಇನ್ನೊಂದು ವಿಧದ ಔಷದವನ್ನು ನೀಡಲು ವೈದ್ಯರು ನಿರಾಕರಿಸಿದ ಕಾರಣದಿಂದಾಗಿ, ಚಿನ್ನಮ್ಮನು ಪೇಟೆಯ ಔಷದ ಅಂಗಡಿಯಿಂದ ಒಂದು ಬಾಟಲಿ ಟಾನಿಕ್ ಖರೀದಿಸಿ ಮಗಳಿಗೆ ಕುಡಿಸಿದ್ದು ನಿಮ್ಮಾಣೆಗೂ ಸತ್ಯ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೨-೦೨-೨೦೦೪ ರ ಸಂಚಿಕೆಯ ಬಳಕೆದಾರ; ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ (ಸತ್ಯ ಘಟನೆಗಳ ಆಧಾರದಲ್ಲಿ ಬರೆದಿರುವ) ಲೇಖನ . 



No comments:

Post a Comment