Wednesday, January 1, 2014

NIMMALLI INTAHA VARTANEGALIVEYE?- PART-2



             ಇಂತಹ ವರ್ತನೆಗಳು ನಿಮ್ಮಲ್ಲಿವೆಯೇ? ಭಾಗ- ೨ 

 ಪಿತ್ತಜ್ವರ ಗುಣವಾಗಲಿಲ್ಲ 

ಬಡಕುಟುಂಬದಲ್ಲಿ ಜನಿಸಿ ಅರೆಹೊಟ್ಟೆಗೆ ಅನ್ನತಿಂದು ಬದುಕುತ್ತಿದ್ದ ನಂದಿನಿಗೆ, ಕುತ್ತಿಗೆಯ ಬಲಭಾಗದಲ್ಲಿ ಚಿಕ್ಕದೊಂದು ಬಾವು ಮತ್ತು ತುಸು ನೋವು ಪ್ರಾರಂಭವಾಗಿ ಹತ್ತಾರು ದಿನಗಳೇ ಕಳೆದಿದ್ದವು. ಅಕ್ಕಪಕ್ಕದ ಮನೆಯವರು ನೀಡಿದ್ದ ನೋವು ನಿವಾರಕ ಮುಲಾಮು ಹಾಗೂ ತೈಲಗಳನ್ನು ಬಳಸಿದರೂ, ಸಮಸ್ಯೆ ಮಾತ್ರ ಪರಿಹಾರಗೊಂಡಿರಲಿಲ್ಲ. ಒಂದೆರಡು ತಿಂಗಳು ಕಳೆಯುವಷ್ಟರಲ್ಲಿ ಪುಟ್ಟ ನಿಂಬೆ ಹಣ್ಣಿನ ಗಾತ್ರಕ್ಕೆ ಬೆಳೆದಿದ್ದ ಬಾವಿನಿಂದಾಗಿ ಆಕೆಗೆ ಆಗಾಗ ಚಳಿ ಮತ್ತು ಜ್ವರಗಳ ಅನುಭವವಾಗುತ್ತಿತ್ತು. 

ವಿವಿಧರೀತಿಯ ಸ್ವಯಂ ಚಿಲಿತ್ಸೆಗಳಿಗೆ ಬಗ್ಗದ ಬಾವು, ಇದೀಗ ಬಗೆಹರಿಯದ ಸಮಸ್ಯೆಯಾಗಿ ಪರಿಣಮಿಸಿತ್ತು. ಅಂತಿಮವಾಗಿ ನೆರೆಮನೆಯ ಮುತ್ತಮ್ಮನ ಸಲಹೆಯಂತೆ ನಂದಿನಿಯು ಪೇಟೆಯಲ್ಲಿರುವ ವೈದ್ಯನೋಬ್ಬನಲ್ಲಿ ಚಿಕಿತ್ಸೆಗಾಗಿ ತೆರಳಿದಳು. ಮುತ್ತಮ್ಮನೆ ಹೇಳುವಂತೆ ಈ ವೈದ್ಯ ನೀಡುವ ಗಿಡಮೂಲಿಕೆಗಳ ಔಷದಗಳು ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದ್ದು, ಯಾವುದೇ ರೀತಿಯ ಅಡ್ಡ ಪರಿಣಾಮಗಳಿಗೆ ಆಸ್ಪದ ನೀಡುತ್ತಿರಲಿಲ್ಲ. 

ನಂದಿನಿಯನ್ನು ಪರೀಕ್ಷಿಸಿದ ವೈದ್ಯನಿಗೆ ಇಂತಹ ವಿಶಿಷ್ಟ ಆರೋಗ್ಯದ ಸಮಸ್ಯೆಗಳ ಅರಿವೇ ಇರಲಿಲ್ಲ. ಆದರೆ ರೋಗಿಗೆ ಜ್ವರವಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಆಕೆಯ ಕಾಯಿಲೆಗೆ "ಪಿತ್ತಜ್ವರ' ಎಂದು ನಾಮಕರಣ ಮಾಡಿದ ವೈದ್ಯನು, ಒಂದು ತಿಂಗಳ ಅವಧಿಗೆ ಸೇವಿಸಬೇಕಾದ ಔಷದಗಳನ್ನು ನೀಡಿ ಮತ್ತೆ ಬರುವಂತೆ ಸೂಚಿಸಿದ್ದನು. ತನ್ನ ಕಿವಿಯ ಬೆಂಡೋಲೆಯನ್ನು ಮಾರಿದ ಹಣವನ್ನು ವೈದ್ಯನ ಮಡಿಲಿಗೆ ಸುರಿದ ನಂದಿನಿಯು, ಶ್ರದ್ಧೆಯಿಂದ ಔಷದವನ್ನು ಸೇವಿಸುತ್ತಾ ಸೂಚಿತ ಪಥ್ಯಗಳನ್ನು ತಪ್ಪದೆ ಪರಿಪಾಲಿಸಿದ್ದಳು.ತಿಂಗಳು ಕಳೆಯುತ್ತಲೇ ವೈದ್ಯನ ಬಳಿಗೆ ಹೋಗಿದ್ದ ನಂದಿನಿಯು ಒಂದು ತಿಂಗಳ ಚಿಕಿತ್ಸೆಯಿಂದ ತಿಲಮಾತ್ರದಷ್ಟೂ ಪ್ರಯೋಜನ ಕಾಣದಿರಲು ಕಾರಣವೇನೆಂದು ವಿಚಾರಿಸಿದ್ದಳು. ಆದರೆ ವೈದ್ಯನ ಅಭಿಪ್ರಾಯದಂತೆ ಕನಿಷ್ಠ ಆರು ತಿಂಗಳ ಚಿಕಿತ್ಸೆ ಪಡೆಯದೇ ಸಮಸ್ಯೆ ಪರಿಹಾರವಾಗುವ ಸಾಧ್ಯತೆಗಳೇ ಇರಲಿಲ್ಲ. 

ಮತ್ತೆ ತಿಂಗಳು ಕಳೆಯುವಷ್ಟರಲ್ಲಿ ನಂದಿನಿಯ ಸಮಸ್ಯೆ ತುಸು ಉಲ್ಬಣಿಸಿತ್ತು. ಗಾಬರಿಯಾದ ಆಕೆಯು ಸಮೀಪದ ಕುಟುಂಬ ವೈದ್ಯರಲ್ಲಿಗೆ ತೆರಳಿ, ಅವರ ಸೂಚನೆಯಂತೆ ಕೆಲವೊಂದು ಪರೀಕ್ಷೆಗಳನ್ನು ನಡೆಸಿದಾಗ, ಆಕೆಯನ್ನು ಕಾಡುತ್ತಿದ್ದ ಸಮಸ್ಯೆ "ಟ್ಯೂಬರ್ ಕ್ಯುಲಾರ್ ಲಿಮ್ಪ್ಹೆಡಿನೈಟಿಸ್" ಎಂದು ಖಚಿತವಾಗಿ ತಿಳಿದುಬಂದಿತ್ತು. ಬಳಿಕ ತಜ್ಞವೈದ್ಯರ ಸಲಹೆಯಂತೆ ಒಂದು ವರ್ಷದ ಚಿಕಿತ್ಸೆಯನ್ನು ಪಡೆದ ನಂದಿನಿಯು ಸಂಪೂರ್ಣವಾಗಿ ಗುಣಮುಖಳಾಗಿದ್ದಳು.

ಅತ್ತ ಆಯುರ್ವೇದ, ಇತ್ತ ಅಲೋಪತಿ ಪದ್ದತಿಗಳ ಬಗ್ಗೆ ಕಿಂಚಿತ್ ಜ್ಞಾನವೂ ಇಲ್ಲದ ಪದವಿಹೀನ ವೈದ್ಯ ಶಿಖಾಮಣಿಗಳು, ಜನಸಾಮಾನ್ಯರ ಅಜ್ಞಾನದ ಲಾಭವನ್ನು ಪಡೆಯಲು ಹೆಚ್ಚಾಗಿ ಆಯುರ್ವೇದದ ಹೆಸರನ್ನು ಬಳಸುತ್ತಾರೆ. ಇಂತಹ ವೈದ್ಯರ "ವಿದ್ಯಾರ್ಹತೆ'ಗಳ ಬಗ್ಗೆ ತಲೆಕೆಡಿಸಿಕೊಳ್ಳದ ಜನರು, ಇವರ ಮಾತಿನ ಮೋಡಿಗೆ ಮರುಳಾಗಿ ಸಾಕಷ್ಟು ಹಣದೊಂದಿಗೆ ತಮ್ಮ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗಳನ್ನೂ ಕಳೆದುಕೊಳ್ಳುತ್ತಾರೆ!. 

ಜನಸಾಮಾನ್ಯರು ನಂಬಿರುವಂತೆ ಗಿಡಮೂಲಿಕೆಗಳಿಂದ ತಯಾರಿಸಿದ ಔಷದಗಳು ಸುರಕ್ಷಿತವೆನ್ನುವುದು ನಿಜವಾದರೂ,ಈ ಔಷದಗಳನ್ನು ನೀಡುವ ವೈದ್ಯರು ನಿಖರವಾಗಿ ರೋಗವನ್ನು ಪತ್ತೆ ಹಚ್ಚುವುದು ಮತ್ತು ನಿರ್ದಿಷ್ಟ ಕಾಯಿಲೆಯನ್ನು ಗಿಡಮೂಲಿಕೆಗಳ ಔಷದಗಳು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿರುವುದು ಅತ್ಯಗತ್ಯವೂ ಹೌದು. ರೋಗ ಯಾವುದೆಂದೇ ಅರಿಯದೇ ವೈದ್ಯರು ನೀಡುವ ಔಷದಗಳು (ಯಾವುದೇ ಪದ್ಧತಿಯ) ರೋಗಿಯ ಪಾಲಿಗೆ ಸುರಕ್ಷಿತವೆನಿಸುವುದು ಅಸಾಧ್ಯ. ಏಕೆಂದರೆ ಈ ಔಷದ ಸೇವನೆಯಿಂದ ರೋಗಿಯ ಸಮಸ್ಯೆ ಪರಿಹಾರವಾಗದೇ ಇನ್ನಷ್ಟು ಉಲ್ಬಣಿಸುವುದರಿಂದ ಪ್ರಾಣಾಪಾಯದ ಸಾಧ್ಯತೆಗಳು ಹೆಚ್ಚುತ್ತವೆ. ಆದುದರಿಂದ ಬಹುತೇಕ ಜನರು ನಂಬಿರುವಂತೆ ಇದೇ ರೀತಿಯ ಯಾವುದೇ ಪದ್ಧತಿಯ ಚಿಕಿತ್ಸೆಗಳು ನಿಶ್ಚಿತವಾಗಿಯೂ ಸುರಕ್ಷಿತವಲ್ಲ. 

ಶೀತಲನ ಶೀತ ಗುಣವಾಗದೇಕೆ?

ತನ್ನ ಮೊಮ್ಮಗನೊಂದಿಗೆ ವೈದ್ಯರಲ್ಲಿಗೆ ಬಂದಿದ್ದ ಅಂಬುಜಮ್ಮನಿಗೆ ಆತನನ್ನು ಸುದೀರ್ಘಕಾಲದಿಂದ ಕಾಡುತ್ತಿರುವ ಶೀತವು, ಹಲವಾರು ವೈದ್ಯರ ಚಿಕಿತ್ಸೆ ಪಡೆದರೂ ಗುಣವಾಗದಿರಲು ಕಾರಣವೇನೆಂದು ಅರಿಯುವ ಕುತೂಹಲವಿತ್ತು. 

ಉಲ್ಲನ್ ಟೋಪಿ, ಸ್ವೆಟರ್, ಕಾಲುಚೀಲಗಳನ್ನು ಧರಿಸಿದ್ದ ಪುಟ್ಟ ಶೀತಲನು "ಎಸ್ಕಿಮೊ"ಗಳಂತೆ ಕಾಣುತ್ತಿದ್ದನು. ಶಾರೀರಿಕ ತಪಾಸಣೆಯ ನೆಪದಲ್ಲಿ ಮಗುವಿಗೆ ತೊಡಿಸಿದ್ದ ಉಣ್ಣೆಯ ಬಟ್ಟೆಗಳನ್ನು ಕಳಚಿದಾಗ, ಮೈತುಂಬಾ ಸಿಮ್ಪದಿಸಿದ್ದ " ಬೇಬಿ ಪೌಡರ್"ನ ಪ್ರಮಾಣವನ್ನು ಕಂಡು ವೈದ್ಯರಿಗೂ ದಿಗಿಲಾಗಿತ್ತು. ಶೀತಲನನ್ನು ಅಮೂಲಾಗ್ರವಾಗಿ ತಪಾಸಣೆ ಮಾಡಿದ ವೈದ್ಯರಿಗೆ, ಆತನ ಸಮಸ್ಯೆಗೆ ಅಲರ್ಜಿ ಹೊರತು ಬೇರೇನೂ ಕಾರಣವಲ್ಲ ಎಂದು ಖಚಿತವಾಗಿತ್ತು. ಇದರೊಂದಿಗೆ ಅಂಬುಜಮ್ಮನವರನ್ನು ಬಾಲ್ಯದಿಂದಲೂ ಬಾಧಿಸುತ್ತಿದ್ದ ಆಸ್ತಮಾ ಕಾಯಿಲೆಯ ಅನುವಂಶಿಕ ಛಾಯೆಯಿಂದಾಗಿ, ಪುಟ್ಟ ಶೀತಳನಿಗೆ ಅಲರ್ಜಿಯ ಸಮಸ್ಯೆ ಉದ್ಭವಿಸಿತ್ತು. 

ಮಳೆಗಾಲ ಮತ್ತು ಚಳಿಗಾಲ ಪ್ರಾರಂಭವಾದೊಡನೆ ಮಗುವಿಗೆ ಥಂಡಿಯಾಗದಂತೆ ಉಣ್ಣೆಯ ಬಟ್ಟೆಗಳು, ಲೋಭಾನದ ಹೋಗೆ, ಶೀತ ಜಾಸ್ತಿಯಾದಾಗ ಹಾಗೂ ವಿಪರೀತ ಮಳೆ ಅಥವಾ ಚಳಿ ಇದ್ದ ದಿನಗಳಲ್ಲಿ ಮಗುವಿಗೆ ಸ್ನಾನವನ್ನೇ ಮಾಡಿಸದೇ ಧಾರಾಳವಾಗಿ ಬೇಬಿ ಪೌಡರ್ ಚಿಮುಕಿಸುತ್ತಿದ್ದುದರಿಂದ ಶೀತಲನ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತಿತ್ತು. ಹಲವಾರು ವಿಧದ ಔಷದಗಳೊಂದಿಗೆ ಸಾಂಬ್ರಾಣಿ ಸೊಪ್ಪಿನ ರಸ ಮತ್ತು ಜೆನುತುಪ್ಪಗಳನ್ನು ಬೆರೆಸಿ ನೀಡುವುದು ಕೂಡಾ ಅವ್ಯಾಹತವಾಗಿ ಸಾಗುತ್ತಿತ್ತು. ಇಂತಹ "ರಾಜೋಪಚಾರ'ಗಳ ಹೊರತಾಗಿಯೂ ತನ್ನ ಮೊಮ್ಮಗನ ಶೀತ ಗುಣವಾಗದಿರಲು ಕಾರಣವೇನೆಂದು ಅಂಬುಜಮ್ಮ ವೈದ್ಯರಲ್ಲಿ ಕೇಳಿದ್ದರು. 

ನಸುನಕ್ಕ ವೈದ್ಯರು ಶೀತಲನ ಶೀತ ಗುಣವಾಗದಿರಲು ನೀವೇ ಕಾರಣರೆಂದು ಉತ್ತರಿಸಿದಾಗ ಆಕೆಗೆ ವಿಪರೀತ ಸಿಟ್ಟು ಬಂದಿತ್ತು. ಏಕೆಂದರೆ ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗಿಂತ ಹೆಚ್ಚು ಆರೈಕೆ ಮಾಡಿದ್ದ ಮೊಮ್ಮಗನ ಶೀತ ಗುಣವಾಗದಿರಲು ತಾನೇ ಕಾರಣವಾಗುವುದು ಅಂಬುಜಮ್ಮನ ತರ್ಕದಂತೆ ಅಸ್ಸಾಧ್ಯವಾಗಿತ್ತು. 

ಆದರೆ ವೈದ್ಯರ ಹೇಳಿಕೆಯಂತೆ ಆಕೆ ಕಪಾಟಿನಲ್ಲಿ ಜೋಪಾನವಾಗಿ ಇರಿಸಿದ್ದ ಉಲ್ಲನ್ ಬಟ್ಟೆಗಳಲ್ಲಿ ವಾಸ್ತವ್ಯ ಹೂಡಿದ್ದ ಸೂಕ್ಷ್ಮಾಣು ಜೀವಿಗಳು ಮತ್ತು ಧೂಳಿನ ಕಣಗಳೊಂದಿಗೆ, "ಟಾಲ್ಕಂ' ಎನ್ನುವ ಸುಣ್ಣದ ಕಲ್ಲಿನಂತಹ ಖನಿಜದ ನಯವಾದ ಹುದಿಗೆ ಸುಗಂಧ ದ್ರವ್ಯಗಳನ್ನು ಬೆರೆಸಿ ತಯಾರಿಸಿದ ಬೇಬಿ ಪೌಡರ್ ಮತ್ತು ಲೋಭಾನದ ಹೊಗೆಗಳಿಂದಾಗಿ ಮಗುವಿನ ಶೀತ ಗುಣವಾಗಿರಲಿಲ್ಲ. ಇದೇ ಕಾರಣದಿಂದಾಗಿ ನೀವು ರಾಜೋಪಚಾರಗಳನ್ನು ನಿಲ್ಲಿಸುವ ತನಕ ಮಗುವಿನ ಶೀತವೂ ಗುಣವಾಗದೆಂದು ವೈದ್ಯರು ಎಚ್ಚರಿಕೆಯನ್ನು ನೀಡಿದ್ದರು. ಇದರೊಂದಿಗೆ ಇನ್ನು ಮುಂದೆ ಉಣ್ಣೆಯ ದಿರಿಸುಗಳನ್ನು ತೊಡಿಸದಂತೆ ಹಾಗೂ ಟಾಲ್ಕಂ ಪೌಡರ್ ಮತ್ತು ಲೋಭಾನದ ಹೊಗೆಗಳನ್ನು ಹಾಕದಂತೆ ಸೂಚಿಸಿದ್ದರು. ಜೊತೆಗೆ ಮಗುವಿಗೆ ಉಗುರು ಬಿಸಿ ನೀರಿನಲ್ಲಿ ದಿನದಲ್ಲಿ ಎರಡುಬಾರಿ ಸ್ನಾನವನ್ನು ಮಾಡಿಸುವಂತೆ ಆದೇಶಿಸಿದರು. ಬಳಿಕ ಶೀತಲನ ಅಲರ್ಜಿ ಸಮಸ್ಯೆಯ ಪರಿಹಾರಕ್ಕಾಗಿ ಔಷದವೊಂದನ್ನು ನೀಡಿದ ವೈದ್ಯರು, ಆಶ್ಚರ್ಯಚಕಿತರಾಗಿ ತನ್ನನ್ನೇ ದಿಟ್ಟಿಸುತ್ತಿದ್ದ ಅಂಬುಜಮ್ಮನ ಅವಸ್ಥೆಯನ್ನು ಕಂಡು ಮೀಸೆಯಡಿಯಲ್ಲೇ ನಕ್ಕರು!. 

ವೈದ್ಯರ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೆ ಪರಿಪಾಲಿಸಿದ ಪರಿಣಾಮವಾಗಿ ಒಂದುವಾರ ಕಳೆಯುವಷ್ಟರಲ್ಲಿ ಶೀತಲನ ಶೀತ ಕಾಣದಂತೆ ಮಾಯವಾಗಿತ್ತು. ತನ್ನ ತಪ್ಪಿನ ಅರಿವಾಗಿದ್ದ ಅಂಬುಜಮ್ಮ, ಇದೀಗ ತನ್ನ ಬಂಧುಮಿತ್ರರಿಗೆ ತಮ್ಮ ವೈದ್ಯರು ಸೂಚಿಸಿದ್ದ ಸಲಹೆಗಳನ್ನು ಉಚಿತವಾಗಿ ನೀಡುತ್ತಿದ್ದಾರೆ!. 

ನಿಮಗೆ ಚಳಿಯೆನಿಸಿದಾಗ ಮಗುವಿಗೆ ಸ್ವೆಟರ್ ತೊಡಿಸುವುದು, ಶೀತವಾದಾಗ ಸ್ನಾನವನ್ನು ಮಾಡಿಸದೆ ಪೌಡರ್ ಹಾಕುವುದು, ಮಗುವಿಗೆ ಥಂಡಿಯಾಗದಂತೆ ಲೋಭಾನದ ಹೋಗೆ ಹಾಕುವುದೇ ಮುಂತಾದ ಉಪಕ್ರಮಗಳು, ನೀವು ಸತ್ಯವೆಂದು ನಂಬಿರುವ ಅಪ್ಪಟ ಸುಳ್ಳುಗಳು!. ನಿಮ್ಮ ಪುಟ್ಟ ಕಂದನನ್ನು ಕಾಯಿಲೆ- ಕಸಾಲೆಗಳಿಂದ ರಕ್ಷಿಸಲು ನೀವು ಪ್ರಯೋಗಿಸುವ ಇಂತಹ ಉಪಕ್ರಮಗಳು, ಕಂದನ ಸಮಸ್ಯೆಗಳು ಉಲ್ಬಣಿಸಲು ಕಾರಣವೆನಿಸುವುದೆಂದು ತಜ್ನವೈದ್ಯರೆ ಹೇಳುತ್ತಾರೆ. ಆದರೆ ಇದನ್ನು ನಂಬಲು ಸಿದ್ಧರಿಲ್ಲದ ಹಿಂದಿನ ತಲೆಮಾರಿನ ಹಿರಿಯರೊಂದಿಗೆ, ಇಂದಿನ ತಲೆಮಾರಿನವರೂ ಸಾಕಷ್ಟು ಜನರಿದ್ದಾರೆ ಎನ್ನುವುದು ಎಲ್ಲರೂ ತಿಳಿದಿರುವ ಸತ್ಯ. 


  ವಿದ್ಯೆಯೊಂದೇ ಸಾಲದು, ಬುದ್ಧಿಯೂ.....

ಪ್ರತಿಷ್ಠಿತ ಕಾಲೇಜಿನಲ್ಲಿ ಅಧ್ಯಾಪಕರಾಗಿರುವ ಶಶಾಂಕ ಮತ್ತು ಶಾಲಿನಿ ವಿದ್ಯಾರ್ಥಿಗಳಿಂದ ಅನುರೂಪ ದಂಪತಿಗಳು ಎನ್ನುವ ಬಿರುದನ್ನೂ ಗಳಿಸಿದ್ದರು. ಸೌಂದರ್ಯ, ಸಜ್ಜನಿಕೆ, ನಯವಿನಯಗಳೊಂದಿಗೆ, ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದ ಈ ದಂಪತಿಗಳು ಕುಟುಂಬದ ಹಿರಿಯರ ಆದೇಶದಂತೆ ವಿವಾಹವಾಗಿದ್ದರು. 

ವಿವಾಹವಾಗಿ ಮೂರು ವರ್ಷಗಳು ಕಳೆದರೂ ಸಂತಾನಪ್ರಾಪ್ತಿಯಾಗದ ಕಾರಣದಿಂದಾಗಿ ಹಲವಾರು ದೇವರುಗಳಿಗೆ ಹರಕೆಯನ್ನು ಹೇಳಿಕೊಂಡಿದ್ದರು. ಇದರೊಂದಿಗೆ ಕುಟುಂಬದ ಹಿರಿಯರ ಒತ್ತಾಯಕ್ಕೆ ಮಣಿದು ಸ್ವಯಂ ಘೋಷಿತ ವೈದ್ಯರುಗಳ ಚಿಕಿತ್ಸೆಯನ್ನು ಪಡೆದುಕೊಂಡರೂ, ಸಂತಾನ ಭಾಗ್ಯ ಮಾತ್ರ ಲಭಿಸಿರಲೇ ಇಲ್ಲ. ಅಂತಿಮವಾಗಿ ಕಾಲೇಜಿನ ಪ್ರಾಚಾರ್ಯರ ಸಲಹೆಯಂತೆ ಸಂತತಿ ತಜ್ಞರ ಸಲಹೆ ಪಡೆಯಲು ಈ ದಂಪತಿಗಳು ನಿರ್ಧರಿಸಿದ್ದರು. 

ಖ್ಯಾತ ಸಂತತಿ ತಜ್ಞ ವೈದ್ಯರು ಶಶಾಂಕ ಮತ್ತು ಶಾಲಿನಿಯರ ಬಳಿ ಅವಶ್ಯಕ ಪ್ರಶ್ನೆಗಳನ್ನು ಕೇಳಿದ ಬಳಿಕ ಕೆಲವಾರು ಪರೀಕ್ಷೆಗಳನ್ನು ನಡೆಸಿದ್ದರು. ಆಶ್ಚರ್ಯವೆಂದರೆ ಇವರಿಬ್ಬರಲ್ಲೂ ಸಂತಾನ ಪ್ರಾಪ್ತಿಯಾಗಳು ಅದ್ದಿಯಾಗಬಲ್ಲ ಯಾವುದೇ ಲೋಪದೋಷಗಳು ಪತ್ತೆಯಾಗಿರಲಿಲ್ಲ. ತಜ್ನವೈದ್ಯರು ತಮ್ಮ ಸಂದೇಹವನ್ನು ನಿವಾರಿಸಿಕೊಳ್ಳುವ ಸಲುವಾಗಿ ಇವರಿಬ್ಬರ ಶಾರೀರಿಕ ಪರೀಕ್ಷೆಯನ್ನು ನಡೆಸಿದಾಗ, ಸಂತಾನಹೀನತೆಗೆ ನಿರ್ದಿಷ್ಟ ಕಾರಣ ತಿಳಿದುಬಂದಿತ್ತು. ವಿವಾಹವಾಗಿ ಮೂರು ವರುಷಗಳು ಕಳೆದಿದ್ದರೂ ಶಾಲಿನಿ 'ಕನ್ಯೆ' ಯಾಗಿಯೇ ಉಳಿದಿದ್ದುದು ವೈದ್ಯರಿಗೂ ನಂಬಲಸಾಧ್ಯವೆನಿಸಿತ್ತು!. ಎಕೆಕ್ನ್ದರೆ ವೈದ್ಯರು ಈ ದಂಪತಿಗಳೊಂದಿಗೆ ಸಮಾಲೋಚನೆ ನಡೆಸುವಾಗ 'ಸುರತ ಕ್ರಿಯೆ'ಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿಚಾರಿಸಿದಾಗ, ಈ ವಿಚಾರದಲ್ಲಿ ಯಾವುದೇ ಸಮಸ್ಯೆಯಿಲ್ಲ ಹಾಗೂ ತೃಪ್ತಿಕರವಾಗಿದೆ ಎನ್ನುವ ಉತ್ತರ ಶಾಲಿನಿಯಿಂದ ದೊರೆತಿತ್ತು. ಇದರೊಂದಿಗೆ ಶಶಾಂಕನಿಗೆ ನಪುಂಸಕತ್ವ ಹಾಗೂ ನಿಮಿರುದೌರ್ಬಲ್ಯದಂತಹ ಸಮಸ್ಯೆ ಇಲ್ಲದಿರುವುದನ್ನು ವೈದ್ಯರು ಖಚಿತಪದಿಸಿಕೊಂಡಿದ್ದರು. ಈ ವಿಲಕ್ಷಣ ಸಮಸ್ಯೆಗೆ ಸೂಕ್ತ ಪರಿಹಾರವನ್ನು ನೀಡಲು ನಿರ್ಧರಿಸಿದ ವೈದ್ಯರು, ದಂಪತಿಗಳೊಂದಿಗೆ "ಆಪ್ತ ಸಂವಾದ" ನಡಸುವ ಮೂಲಕ ಸ್ತ್ರೀ ಪುರುಷ ಸಂಬಂಧ ಮತ್ತು ಸುರತ ಕ್ರಿಯೆಗಳ ಬಗ್ಗೆ ವೈಜ್ಞಾನಿಕ ಮಾಹಿತಿಗಳನ್ನು ನೀಡಿದ್ದರು. ಇದರೊಂದಿಗೆ ಲೈಂಗಿಕ ವಿಜ್ಞಾನದ ಬಗ್ಗೆ ತಜ್ಞ ವೈದ್ಯರೇ ಬರೆದಿದ್ದ ಪುಸ್ತಕವನ್ನು ನೀಡಿ, ಸಂತಾನ ಪ್ರಾಪ್ತಿಗಾಗಿ ಯಾವ ದಿನಗಳಲ್ಲಿ ಸಂಭೋಗ ನಡೆಸಬೇಕು ಇತ್ಯಾದಿ ಸಲಹೆ ಸೂಚನೆಗಳನ್ನು ನೀಡಿದರು. 

ಬಾಲ್ಯದಿಂದಲೇ ಓದಿನಲ್ಲಿ ಅತೀವ ಆಸಕ್ತಿಯೊಂದಿಗೆ ತನ್ನ ಸುತ್ತಲಿನ ಇತರ ವಿಚಾರಗಳ ಬಗ್ಗೆ ಅನಾಸಕ್ತಿಯಿದ್ದ ಶಶಾಂಕ- ಶಾಲಿನಿಯರು ಅಕ್ಷರಶಃ "ಕೂಪ ಮಂಡೂಕ' ದಂತಾಗಿದ್ದರು.ಬಿದಿವು ದೊರೆತಾಗಲೆಲ್ಲಾ ಯಾವುದಾದರೊಂದು ಪುಸ್ತಕವನ್ನು ಓದುವ ಹವ್ಯಾಸವಿದ್ದ ಈ ದಂಪತಿಗಳಿಗೆ ವಯೋಸಹಜ ಆಸೆ ಆಕಾಂಕ್ಷೆಗಳು ವಿದ್ಯಾಭ್ಯಾಸಕ್ಕೆ ಸೀಮಿತವಾಗಿತ್ತೇ ಹೊರತು, ಪ್ರೇಮ- ಕಾಮ ಮುಂತಾದ ಶಬ್ದಗಳು ಇವರಿಬ್ಬರ ನಿಘಂಟಿನಲ್ಲೇ ಇರಲಿಲ್ಲ!. ತತ್ಪರಿಣಾಮವಾಗಿ ವಿವಾಹದ ನಂತರ ಲೈಂಗಿಕ ವಿಚಾರಗಳ ಬಗೆಗಿನ ಅಜ್ಞಾನದಿಂದಾಗಿ, ಸಮರ್ಪಕ ಹಾಗೂ ಕ್ರಮಬದ್ಧ ಸುರತಕ್ರಿಯೆಯ ಬಗ್ಗೆ ತಿಳಿದಿರದ ಇವರಿಗೆ "ತಾವು ಮಾಡುತ್ತಿರುವುದೇ ಸರಿ' ಎನ್ನುವ ತಪ್ಪುಕಲ್ಪನೆಯೂ ಸಂತಾನ ಪ್ರಾಪ್ತಿಯಾಗದಿರಲು ಕಾರಣವೆನಿಸಿತ್ತು. 

ತಜ್ಞವೈದ್ಯರ ಸಲಹೆ ಸೂಚನೆಗಳನ್ನು ಯಥಾವತ್ತಾಗಿ ಪರಿಪಾಲಿಸಿದ ಶಶಾಂಕ - ಶಾಲಿನಿಯರಿಗೆ ಒಂದು ವರ್ಷ ಕಳೆಯುವಷ್ಟರಲ್ಲಿ ಮುದ್ದಾದ ಹೆಣ್ಣುಮಗು ಜನಿಸಿತ್ತು. ಸಾಕಷ್ಟು ವಿದ್ಯಾವಂತರಾಗಿದ್ದರೂ, ಲೈಂಗಿಕ ವಿಜ್ಞಾನದ ಬಗ್ಗೆ ಏನೇನೂ ಮಾಹಿತಿಯನ್ನು ಅರಿತಿರದ ಇಂತಹ ದಂಪತಿಗಳು, ಈ ಆಧುನಿಕ ಯುಗದಲ್ಲಿ ಕಾಣಸಿಗುತ್ತಾರೆ ಎಂದಲ್ಲಿ ನೀವೂ ನಂಬಲಾರಿರಿ. 

ನಿಮ್ಮ ಪ್ರತಿಬಿಂಬವನ್ನು ಕಂಡಿರಾ?

ಸುದೀರ್ಘವಾದ ಈ ಲೇಖನವನ್ನು ಓದುತ್ತಿರುವಾಗ, ಕೆಲವೊಂದು ಘಟನೆ- ಸನ್ನಿವೇಶಗಳಲ್ಲಿ ನಿಮ್ಮ ವರ್ತನೆಗಳನ್ನೇ ಹೋಲುವ ನಿದರ್ಶನಗಳು ಓದುಗರ ಗಮನಕ್ಕೆ ಬಂದಿರಲೇ ಬೇಕು. ಅಂತೆಯೇ ಕನ್ನಡಿಯ ಮುಂದೆ ನಿತಲ್ಲಿ ಮಾತ್ರ ನಿಮ್ಮ ಪ್ರತಿಬಿಂಬ ಕಾಣುವುದೆಂದು ನಿಮಗೂ ತಿಳಿದಿರಬೇಕು. ಪ್ರಸ್ತುತ ನಿಮ್ಮ ಮುಂದೆ ಕನ್ನಡಿಯನ್ನು ಹಿಡಿಯುವ ಪ್ರಯತ್ನದ ಫಲವೇ ಈ ಲೇಖನ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೬-೦೨-೨೦೦೪ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 


No comments:

Post a Comment