Monday, January 13, 2014

NAVAJAATA SHISHUGALA SAMRAKSHANE- YAARA HONE?


           ನವಜಾತ ಶಿಶುಗಳ ಸಂರಕ್ಷಣೆ- ಯಾರ ಹೊಣೆ?

ಕಿತ್ತು ತಿನ್ನುವ ಬಡತನದಿಂದ ಬಳಲುತ್ತಿರುವ ತಾಯಂದಿರೂ, ತಾವು ಉಪವಾಸ ಬಿದ್ದಾದರೂ ತಮ್ಮ ಕಂದನಿಗೆ ಕೈತುತ್ತು ನೀಡದೆ ಇರಲಾರರು. ಆದರೆ ಕೆಲ ಸಂದರ್ಭಗಳಲ್ಲಿ ಕಾರಣಾಂತರಗಳಿಂದ ಸಂಭವಿಸಬಲ್ಲ ನವಜಾತ ಶಿಶುಗಳ ಮರಣವನ್ನು ತಡೆಗಟ್ಟಲಾರದೇ, ಅನೇಕ ಮಾತೆಯರು ಅಸಹಾಯಕರಾಗಿ ಸೋಲುತ್ತಾರೆ. ಭಾರತದ ಅಭುತೆಕ ಬಡ ಕುಟುಂಬಗಳಲ್ಲಿ ವ್ಯಾಪಕವಾಗಿ ಕಾಣಸಿಗುವ ಇಂತಹ ಮರಣಗಳ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ.
---------             ---------------                --------------               --------------            ------------                  ------------             ------------------

ಪ್ರಸ್ತುತ ಭಾರತದಲ್ಲಿ ಜನಿಸುತ್ತಿರುವ ಪ್ರತಿ ೧೦೦೦ ನವಜಾತ ಶಿಶುಗಳ ಜೀವಂತ ಜನನಗಳಲ್ಲಿ, ಸುಮಾರು ೫೦ ಶಿಶುಗಳು ಅಕಾಲಿಕ ಮರಣಕ್ಕೆ ತುತ್ತಾಗುತ್ತಿವೆ ಎಂದು ಇತ್ತೀಚಿಗೆ ಸರಕಾರ ಪ್ರಕಟಿಸಿದ್ದ ವರದಿಯೊಂದು ಬಹಿರಂಗಪಡಿಸಿದೆ. ಯುನೈಟೆಡ್ ನೇಶನ್ಸ್ ಕೆಲವರ್ಷಗಳ ಹಿಂದೆ ನಿಗದಿಸಿದ್ದ "ಸಹಸ್ರಮಾನದ ಅಭಿವೃದ್ಧಿ ಗುರಿ"ಯಂತೆ, ಇದೀಗ ಈ ಪ್ರಮಾಣವು ಪ್ರತಿ ೧೦೦೦ ಜನನಗಳಲ್ಲಿ ೨೮ ಕ್ಕೆ ಇಳಿಯಲೇಬೇಕಾಗಿತ್ತು. ಆದರೆ ಭಾರತದ ನಾಲ್ಕು ನಾಲ್ಕು ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ, ಅನ್ಯರಾಜ್ಯಗಳು ಈ ಗುರಿಯನ್ನು ಸಾಧಿಸಲು ವಿಫಲವಾಗಿವೆ. ಅದರಲ್ಲೂ ಒಂಬತ್ತು ರಾಜ್ಯಗಲಂತೂ ದಯನೀಯವಾಗಿ ವಿಫಲವಾಗಿವೆ!. 

ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿರುವ ಭಾರತವು ವಿವಿಧ ಕ್ಷೇತ್ರಗಳಲ್ಲಿ ಮಹೋನ್ನತ ಸಾಧನೆಗೈಯ್ಯುವ ಮೂಲಕ, ವಿಶ್ವದ ಅನ್ಯ ರಾಷ್ಟ್ರಗಳ ಗಮನವನ್ನು ಸೆಳೆಯಲು ಯಶಸ್ವಿಯಾಗಿದೆ. ಅದೇ ರೀತಿಯಲ್ಲಿ ಅರೋಗ್ಯ ಕ್ಷೇತ್ರದಲ್ಲಿ ನಾವಿಂದು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದರೂ, ಶಿಶುಸಂರಕ್ಷಣೆಯ ವಿಚಾರದಲ್ಲಿ ಮಾತ್ರ ನಮ್ಮ ಸಾಧನೆ ತೃಪ್ತಿಕರ ಮಟ್ಟವನ್ನು ತಲುಪಿಲ್ಲ. 

ಜಾಗತಿಕ ಮಟ್ಟದಲ್ಲಿ ಶಿಶುಸಂರಕ್ಷಣೆಯ ವಿಚಾರದಲ್ಲಿ ಕಾವಲು ಪಡೆಯಂತೆ ಕಾರ್ಯ ನಿರ್ವಹಿಸುತ್ತಿರುವ "ಯೂನಿಸೆಫ್' ಸಂಸ್ಥೆಯು ಒಂದೆರಡು ವರ್ಷಗಳ ಹಿಂದೆ ಪ್ರಕಟಿಸಿದ್ದ ವರದಿಯಲ್ಲಿ, ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ, ಅದರಲ್ಲೂ ನವಜಾತ ಶಿಶುಗಳ ಮರಣದ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಭಾರತವು ದಯನೀಯವಾಗಿ ವಿಫಲಗೊಂಡಿದೆ ಎಂದು ಉಲ್ಲೇಖಿಸಿತ್ತು. 

ಅಕಾಲಿಕ ಮರಣ- ಅನಾರೋಗ್ಯ 

ಯುನೈಟೆಡ್ ನೇಶನ್ಸ್ ಮತ್ತು ಯೂನಿಸೆಫ್ ಸಂಸ್ಥೆಗಳು ೨೦೦೮ ರ ಆದಿಯಲ್ಲಿ ಪ್ರಕಟಿಸಿದ್ದ "ಜಾಗತಿಕ ಮಟ್ಟದಲ್ಲಿ ಶಿಶುಗಳ ಸ್ಥಿತಿಗತಿಗಳು' ಎನ್ನುವ ವರದಿಯಂತೆ, ತನ್ನ ಪ್ರಜೆಗಳ ಹಿತರಕ್ಷಣೆಯ ದೃಷ್ಟಿಯಿಂದ ಕೈಗೊಂಡಿರುವ ನಿರ್ದಿಷ್ಟ ಕ್ರಮಗಳಿಂದ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಮರಣದ ಪ್ರಮಾಣವನ್ನು ಭಾರತವು ತಕ್ಕ ಮಟ್ಟಿಗೆ ನಿಯಂತ್ರಿಸಿದ್ದರೂ, ಈ ನಿಟ್ಟಿನಲ್ಲಿ ಇನ್ನಷ್ಟು ಶ್ರಮಿಸಬೇಕಾಗಿದೆ ಎಂದು ಉಲ್ಲೇಖಿಸಲಾಗಿತ್ತು. 

೧೯೭೦ ರ ದಶಕದಲ್ಲಿ ಭಾರತದಲ್ಲಿ ಜನಿಸಿದ ಪ್ರತಿ ೧೦೦೦ ಜೀವಂತ ಜನನಗಳಲ್ಲಿ, ಸುಮಾರು ೨೦೨ ಶಿಶುಗಳು ತಮ್ಮ ಮೊದಲ ಹುಟ್ಟು ಹಬ್ಬವನ್ನು ಆಚರಿಸುವ ಮುನ್ನ ಮೃತಪಡುತ್ತಿದ್ದವು. ಆದರೆ ೨೦೦೦ ನೆ ಇಸವಿಯಲ್ಲಿ ಈ ಪ್ರಮಾಣವು ಪ್ರತಿ ೧೦೦೦ ಕ್ಕೆ ೬೮ ಮತ್ತು ೨೦೦೯ ರಲ್ಲಿ ೫೦ ಕ್ಕೆ ಇಳಿದಿತ್ತು. ಆದರೆ ಸಹಸ್ರಮಾನದ ಗುರಿಯಂತೆ ಇದು ೨೮ ಕ್ಕೆ ಇಳಿಯಬೇಕಾಗಿತ್ತು. 

ಶಿಶು ಸಂರಕ್ಷಣೆಯಲ್ಲಿ ಭಾರತವು ವಿಫಲವಾಗಿರುವುದನ್ನು ಯೂನಿಸೆಫ್ ಹಾಗೂ ಯುನೈಟೆಡ್ ನೇಶನ್ಸ್ ಸಂಸ್ಥೆಗಳ ವರದಿಯಲ್ಲಿನ ಅಂಕಿ ಅಂಶಗಳು ಧೃಡೀಕರಿಸುತ್ತವೆ.ಈ ವರದಿಯಂತೆ ಭಾರತದಲ್ಲಿ ಜನಿಸಿದ ಒಂದು ದಶಲಕ್ಷ ಶಿಶುಗಳು, ಮುಂದಿನ ೨೮ ದಿನಗಳಿಗೆ ಮುನ್ನ ಮೃತಪಡುತ್ತವೆ. ಜಗತ್ತಿನ ಶೇ. ೨೫ ರಷ್ಟು ನವಜಾತ ಶಿಶುಗಳ ಮರಣವು ಭಾರತದಲ್ಲೇ ಸಂಭವಿಸುತ್ತಿವೆ. ವಿಶ್ವಾದ್ಯಂತ ವಿವಿಧ ಕಾರಣಗಳಿಂದ ಮೃತಪಡುವ ೫ ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಶೇ. ೨೧ ರಷ್ಟು ಮಕ್ಕಳು ಭಾರತೀಯರದ್ದೇ ಆಗಿವೆ. 

ಇಷ್ಟು ಮಾತ್ರವಲ್ಲ, ಜಗತ್ತಿನಾದ್ಯಂತ ಜನಿಸುತ್ತಿರುವ ಕಡಿಮೆ ತೂಕದ ಶಿಶುಗಳಲ್ಲಿ ಶೇ. ೪೩ ರಷ್ಟು ಶಿಶುಗಳು ಭಾರತದಲ್ಲೇ ಜನಿಸುತ್ತಿವೆ. ನಮ್ಮ ದೇಶದಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಪೋಷಕಾಂಶಗಳ ಕೊರತೆಯಿಂದ ಬಳತ್ತಿರುವ ಮಕ್ಕಳ ಪ್ರಮಾಣವನ್ನು ಕಡಿಮೆ ಮಾಡಲು, ಈ ಸಮಸ್ಯೆಯ ನಿವಾರಣೆಗಾಗಿ ಹಮ್ಮಿಕೊಂಡಿರುವ ವಿವಿಧ ಯೋಜನೆಗಳ ಅನುಷ್ಠಾನದ ವೇಗವನ್ನು ಇನ್ನಷ್ಟು ಹೆಚ್ಚಿಸಬೇಕಾಗುತ್ತದೆ. ವಿಶೇಷವೆಂದರೆ ಈ ಯೋಜನೆಗಾಗಿ ಸರಕಾರವು ಪ್ರತಿವರ್ಷ ಸಹಸ್ರಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದ್ದರೂ, ಇದರ ಮೂಲ ಉದ್ದೇಶವಾಗಿರುವ ಪೌಷ್ಟಿಕ ಆಹಾರದ ಪೂರೈಕೆಗಾಗಿ ಅತ್ಯಲ್ಪ ಪ್ರಮಾಣದ ಹಣ ವಿನಿಯೋಗವಾಗುತ್ತಿದೆ. ಏಕೆಂದರೆ ಈ ಮೊತ್ತದ ಸಿಂಹಪಾಲು, ಯೋಜನೆಯ ಅನುಷ್ಠಾನಕ್ಕೆ ಸಂಬಧಿಸಿದ ಅನ್ಯ ಉದ್ದೇಶಗಳಿಗಾಗಿ ಖರ್ಚಾಗುತ್ತಿದೆ!. 

ಅದೇನೇ ಇರಲಿ, ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ನವಜಾತ ಶಿಶುಗಳ ಮರಣದ ಪ್ರಮಾಣವು ಪ್ರತಿ ಸಾವಿರಕ್ಕೆ ೪೧ ರಷ್ಟಿದ್ದು, ದೇಶದ ೩೫ ರಾಜ್ಯಗಳಲ್ಲಿ ೨೦ ನೆಯ ಸ್ಥಾನದಲ್ಲಿದೆ. ಇದೇ ಸಂದರ್ಭದಲ್ಲಿ ಕೇರಳ, ಗೋವಾ, ಮಣಿಪುರ ಹಾಗೂ ನಾಗಾಲ್ಯಾಂಡ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೆಶಗಳಾಗಿರುವ ಅಂಡಮಾನ್- ನಿಕೊಬಾರ್ ದ್ವೀಪಗಳು, ಚಂಡೀಘಡ, ಡಾಮನ್ ಹಾಗೂ ದಿಯು,ಲಕ್ಷದ್ವೀಪ ಮತ್ತು ಪುದುಚೇರಿಗಳು ಮಾತ್ರ ಸಹಸ್ರಮಾನದ ಅಭಿವೃದ್ಧಿ ಗುರಿಯನ್ನು ಸಾಧಿಸಲು ಸಫಲವಾಗಿವೆ. ಈ ಪ್ರದೇಶಗಳಲ್ಲಿ ನವಜಾತ ಶಿಶುಗಳ ಮರಣದ ಪ್ರಮಾಣವು ಪ್ರತಿ ೧೦೦೦ ಕೀ ಕೇವಲ ೨೮ ಅಥವಾ ಇದಕ್ಕೂ ಕಡಿಮೆಯಾಗಿದೆ. 

ಆದರೆ ಬಿಹಾರ, ಜಾರ್ಖಂಡ್, ಒರಿಸ್ಸಾ,ಉತ್ತರ ಪ್ರದೇಶ, ಛತ್ತೀಸ್ ಘಡ, ಉತ್ತರಾಖಂಡ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಪ್ರತಿ ೧೦೦೦ ಜೀವಂತ ಜನನಗಳಲ್ಲಿ ೫೦ ಕ್ಕೂ ಅಧಿಕ ಶಿಶುಗಳು ಮೃತಪಡುತ್ತಿವೆ. ಸರಕಾರದ ಅಂಕಿ ಅಂಶಗಳಂತೆ ಭಾರತದಲ್ಲಿ ಶಿಶುಗಳ ಮರಣದ ಪ್ರಮಾಣವು ಸರಾಸರಿ ೧೦೦೦ ಕ್ಕೆ ೫೦ ರಷ್ಟಿದೆ!. 

ಕಳೆದ ಕೆಲ ದಶಕಗಳಿಂದ ಇಳಿಮುಖವಾಗುತ್ತಿರುವ ಈ ಪ್ರಮಾಣವು ಕೇವಲ ಶೇ. ೨ ರಷ್ಟೇ ಆಗಿದ್ದು, ಇದು ೨೦೧೫ ರಲ್ಲಿ ಪ್ರತಿ ೧೦೦೦ ಕ್ಕೆ ೪೨ ರಿಂದ ೪೭ ಕ್ಕೆ ಇಳಿಸಬಹುದು ಎಂದು ನಿರೀಕ್ಷಿಸಲಾಗಿದೆ. ಆದರೂ ಈ ಪ್ರಮಾಣವು ಸಹಸ್ರಮಾನದ ಗುರಿಯಾಗಿರುವ ೨೮ ಕ್ಕಿಂತ ಸಾಕಷ್ಟು ಅಧಿಕವಾಗಿದೆ. ಈ ಉದ್ದೇಶವನ್ನು ಈಡೇರಿಸಲು ಅತ್ಯಧಿಕ ಪ್ರಮಾಣದ ನವಜಾತ ಶಿಶುಗಳು ಮೃತಪಡುತ್ತಿರುವ ೯ ರಾಜ್ಯಗಳತ್ತ ಸರಕಾರವು ತನ್ನ ಗಮನವನ್ನು ಕೇಂದ್ರೀಕರಿಸಲಿದೆ. 

ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಸಮಸ್ಯೆಯ ನಿಯಂತ್ರಣಕ್ಕಾಗಿ ಬಡತನದ ರೇಖೆಗಿಂತ ಕೆಳಗಿರುವವರಿಗೆ ಅಲ್ಪಬೆಲೆಗೆ ಪಡಿತರ ಧಾನ್ಯಗಳನ್ನು ಒದಗಿಸುತ್ತಿದೆ. ಜೊತೆಗೆ ಕಿಶೋರಿಯರು, ಗರ್ಭಿಣಿಯರು ಮತ್ತು ಅಂಗನವಾಡಿಗಳಿಗೆ ಹಾಜರಾಗುವ ಶಿಶುಗಳಿಗೆ ಪೌಷ್ಟಿಕ ಆಹಾರವನ್ನು ಪೂರೈಸುತ್ತಿವೆ. ಇದರೊಂದಿಗೆ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ವ್ಯವಸ್ತೆಯನ್ನೂ ಜಾರಿಗೊಳಿಸಿವೆ. ಇವೆಲ್ಲವುಗಳ ಹೊರತಾಗಿಯೂ ನವಜಾತ ಶಿಶುಗಳ ಮರಣ ಮತ್ತು ಪೌಷ್ಠಿಕಾಂಶಗಳ ನ್ಯೂನತೆಯಿಂದ ಉದ್ಭವಿಸುತ್ತಿರುವ ಸಮಸ್ಯೆಗಳ ನಿಯಂತ್ರಣವು ನಿರೀಕ್ಷಿತ ಮಟ್ಟದಲ್ಲಿ ಫಲಪ್ರದವೆನಿಸಿಲ್ಲ. 

ಅಂತಿಮವಾಗಿ ಹೇಳುವುದಾದಲ್ಲಿ, ಭಾರತ ಸರಕಾರವು ನವಜಾತ ಶಿಶುಗಳ ಮರಣದ ಪ್ರಮಾಣವನ್ನು ನಿಯಂತ್ರಿಸಲು ಯಶಸ್ವಿಯಾಗಬೇಕಿದ್ದಲ್ಲಿ ಜನಸಾಮಾನ್ಯರಿಗೆ ಅತ್ಯವಶ್ಯಕ ಎನಿಸುವ ವೈದ್ಯಕೀಯ ಸೌಲಭ್ಯಗಳು, ಜನಸಂಖ್ಯಾ ನಿಯಂತ್ರಣ, ಹಳ್ಳಿಹಳ್ಳಿಗಳಲ್ಲಿ ಶುದ್ಧವಾದ ಕುಡಿಯುವ ನೀರು ಮತ್ತು ಶೌಚಾಲಯಗಳನ್ನು ಒದಗಿಸುವುದು, ಅನಕ್ಷರಸ್ಥರು ಮತ್ತು ಗ್ರಾಮೀಣ ಜನರ ಮನದಲ್ಲಿ ಭದ್ರವಾಗಿ ಬೇರೂರಿರುವ ಮೂಢನಂಬಿಕೆ ಮತ್ತು ಸಾಂಕ್ರಾಮಿಕ ವ್ಯಾಧಿಗಳನ್ನು ನಿವಾರ್ಸುವ ಉಪಕ್ರಮಗಳನ್ನು ಅನುಷ್ಠಾನಗೊಳಿಸಬೇಕಾಗುವುದು. ಇದರೊಂದಿಗೆ ಈ ಉಪಕ್ರಮಗಳು ಯಶಸ್ವಿಯಾಗಲು ದೇಶದ ಪ್ರಜೆಗಳ ಮನಸ್ಪೂರ್ವಕ ಸಹಕಾರವೂ ಅತ್ಯವಶ್ಯಕ ಎನಿಸುವುದು. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ಡಿ. ೦೬- ೦೫- ೨೦೧೧ ರ ಸಂಪದದಲ್ಲಿ ಪ್ರಕಟಿತ ಲೇಖನ. 


No comments:

Post a Comment