Thursday, January 23, 2014

Road safety week-11th to 17th jan.2014.


                           ರಸ್ತೆ ಸುರಕ್ಷತಾ ಸಪ್ತಾಹದ ಬೆಳ್ಳಿ ಹಬ್ಬ 
ಕಳೆದ ೨೫ ವರ್ಷಗಳಿಂದ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯವು ವರ್ಷಂಪ್ರತಿ ಜನವರಿ ತಿಂಗಳಿನಲ್ಲಿ  ರಸ್ತೆ ಸುರಕ್ಷಾ ಸಪ್ತಾಹವನ್ನು ಆಚರಿಸುತ್ತಾ ಬಂದಿದೆ. ಆದರೆ ನಮ್ಮದೇಶದಲ್ಲಿ  ಸಂಭವಿಸುತ್ತಿರುವ  ಅಪಘಾತಗಳ ಸಂಖ್ಯೆ ಮಾತ್ರ ದಿನೇದಿನೇ ಹೆಚ್ಚುತ್ತಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 
-------------                  -----------------                  -------------------                     ------------                ------------

ಅನೇಕ ವರ್ಷಗಳಿಂದ ಭಾರತದಾದ್ಯಂತ ರಸ್ತೆ ಸುರಕ್ಷತಾ ಸಪ್ತಾಹವನ್ನು ವರ್ಷಂಪ್ರತಿ ಆಚರಿಸಲಾಗುತ್ತಿದೆ. ದೇಶದ ಪ್ರತಿಯೊಂದು ರಾಜ್ಯಗಳಲ್ಲಿನ ಸಂಚಾರ ವಿಭಾಗದ ಆರಕ್ಷಕರು, ಸಾರಿಗೆ ಇಲಾಖೆ ಮತ್ತು ಅನೇಕ ಸ್ವಯಂಸೇವಾ ಸಂಘಟನೆಗಳು ಒಂದಾಗಿ ಆಚರಿಸುವ ಈ ಕಾರ್ಯಕ್ರಮದಲ್ಲಿ ಸಂಚಾರ ವಿಭಾಗದ ಆರಕ್ಷಕರೊಂದಿಗೆ,  ಹೆಚ್ಚಾಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಾ ಮತ್ತು ಇತರ ಕೆಲ ಸಂಘಟನೆಗಳ ಕಾರ್ಯಕರ್ತರು ಮಾತ್ರ ಭಾಗವಹಿಸುತ್ತಾರೆ. ಕಳೆದ ೨೫ ವರ್ಷಗಳಿಂದ ಈ ಕಾರ್ಯಕ್ರಮವನ್ನು ನಾವು ನಡೆಸುತ್ತಿದ್ದರೂ,ರಸ್ತೆ ಅಪಘಾತಗಳ ಪ್ರಮಾಣ ಇನ್ನಷ್ಟು ಹೆಚ್ಚುತ್ತಿರುವುದು ರಸ್ತೆ ಅಪಘಾತಗಳನ್ನು ತಡೆಗಟ್ಟುವಲ್ಲಿ  ನಮ್ಮ ಇಚ್ಛಾಶಕ್ತಿಯ ಕೊರತೆಯನ್ನು ತೋರುತ್ತದೆ. 

ಈ ಸಪ್ತಾಹದ ಸಂದರ್ಭದಲ್ಲಿ ಪ್ರತಿಯೊಂದು ನಗರ- ಪಟ್ಟಣಗಳ ಬೀದಿಬೀದಿಗಳಲ್ಲಿ ಬ್ಯಾನರ್ ಗಳನ್ನು ಅಳವಡಿಸುವ ಅಥವಾ ಕರಪತ್ರಗಳನ್ನು ಮುದ್ರಿಸಿ ಹಂಚುವ ಪರಿಪಾಠವನ್ನು ತಪ್ಪದೇ ಪರಿಪಾಲಿಸಲಾಗುತ್ತದೆ. ಆದರೆ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನುಷ್ಠಾನಿಸಬೇಕಾದ ಅನೇಕ ವಿಚಾರಗಳನ್ನು ಮಾತ್ರ ಅನುಕೂಲಕರವಾಗಿ ಮರೆತುಬಿಡಲಾಗುತ್ತಿದೆ!. 

ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಆಹ್ವಾನಿತ ಗಣ್ಯರು, ಸಾಮಾನ್ಯವಾಗಿ ಸಾರಿಗೆ ನಿಯಮಗಳನ್ನು ಪರಿಪಾಲಿಸಬೇಕಾದ ಮತ್ತು ಈ ಬಗ್ಗೆ ಜನಸಮಾನ್ಯರಲ್ಲಿ ಅರಿವು ಮೂಡಿಸಬಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಮತ್ತು ತತ್ಪರಿಣಾಮವಾಗಿ ಸಂಭವಿಸುವ ಮರಣಗಳ ಪ್ರಮಾಣವನ್ನು ನಿಯಂತ್ರಿಸುವ ಬಗ್ಗೆ ಭಾಷಣ ಬಿಗಿಯುತ್ತಾರೆ. ಆದರೆ ಇಂತಹ ಭಾಷಣಗಳು ಅಪೇಕ್ಷಿತ ಪರಿಣಾಮವನ್ನು ನೀಡಲು ಯಶಸ್ವಿಯಾಗುತ್ತಿದ್ದಲ್ಲಿ, ನಮ್ಮ ದೇಶದ ಜನತೆಯನ್ನು ಕಾಡುತ್ತಿರುವ ನೂರಾರು ಸಮಸ್ಯೆಗಳು ಕ್ಷಣಮಾತ್ರದಲ್ಲಿ ಪರಿಹಾರಗೊಲ್ಲುತ್ತಿದ್ದುದರಲ್ಲಿ ಸಂದೇಹವಿಲ್ಲ!

ರಸ್ತೆ ಅಪಘಾತಗಳ ರಾಜಧಾನಿ 

ಭಾರತವು ವಿಶ್ವದ ರಸ್ತೆ ಅಪಘಾತಗಳ ರಾಜಧಾನಿ ಎಂದು ಕರೆಸಿಕೊಳ್ಳಲು ಸಮರ್ಥನೀಯ ಕಾರಣಗಳೂ ಇವೆ. ಇವುಗಳಲ್ಲಿ ನಮ್ಮ ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳ ಸಂಖ್ಯೆ ಅತ್ಯಧಿಕವಾಗಿರುವುದರೊಂದಿಗೆ, ಇದರಿಂದಾಗಿ ಘಟಿಸುವ ಮರಣಗಳ ಪ್ರಮಾಣವೂ ಅತ್ಯಧಿಕವಾಗಿರುವುದು ಪ್ರಮುಖ ಕಾರಣವೆನಿಸಿದೆ. ಭಾರತದಲ್ಲಿ ಪ್ರತಿ ಗಂಟೆಗೆ ಸುಮಾರು ೧೫ ರಿಂದ ೨೦ ಜನರು ರಸ್ತೆ ಅಪಘಾತಗಳಲ್ಲಿ ಮೃತಪಡುತ್ತಾರೆ. ಅರ್ಥಾತ್, ಒಂದು ವರ್ಷದಲ್ಲಿ ಸರಿ ಸುಮಾರು ೧,೪೦,೦೦೦ ಜನರು ಅಪಘಾತಗಳಲ್ಲಿ ಮೃತಪಡುವುದರೊಂದಿಗೆ, ಇದಕ್ಕೂ ಅಧಿಕ ಸಂಖ್ಯೆಯ ಜನರು ಶಾಶ್ವತ ಅಂಗವೈಕಲ್ಯಗಳಿಗೆ ಈಡಾಗುತ್ತಿದ್ದಾರೆ. 

ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನವೊಂದರ ವರದಿಯಂತೆ ಭಾರತದಲ್ಲಿ ಸಂಭವಿಸುವ ದ್ವಿಚಕ್ರ ವಾಹನಗಳ ಅಪಘಾತಗಳಲ್ಲಿ ಮರಣದ ಪ್ರಮಾಣವು ಶೇ. ೩೨ ರಷ್ಟಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕವೆನಿಸಿದೆ. ಇದೇ ವರದಿಯಲ್ಲಿ ಉಲ್ಲೇಖಿಸಿರುವಂತೆ ನಮ್ಮ ದೇಶದಲ್ಲಿ ಶೇ. ೫೦ ರಷ್ಟು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿದಲ್ಲಿ, ಶೇ. ೧೦ ರಷ್ಟು ಚತುಷ್ಚಕ್ರ ವಾಹನ ಸವಾರರು ಸೀಟ್ ಬೆಲ್ಟ್ ಧರಿಸುತ್ತಾರೆ!. ರಸ್ತೆ ಅಪಘಾತಗಳಲ್ಲಿ ಮರಣದ ಪ್ರಮಾಣ ಹೆಚ್ಚಲು ಇದೊಂದು ಪ್ರಮುಖ ಕಾರಣವೂ ಹೌದು. 

ಅಂತೆಯೇ ಅತಿವೇಗದ ವಾಹನ ಚಾಲನೆ, ಮದ್ಯ ಅಥವಾ ಅಮಲು ಪದಾರ್ಥಗಳನ್ನು ಸೇವಿಸಿ ವಾಹನ ಚಲಾಯಿಸುವುದು, ವಾಹನ ಚಾಲನೆಯಲ್ಲಿ ಪರಿಣತಿ ಇಲ್ಲದಿದ್ದರೂ ವಾಹನ ಚಲಾಯಿಸುವುದು, ಸಾರಿಗೆ ನಿಯಮಗಳನ್ನು ನಿರ್ಲಕ್ಷಿಸುವುದು, ದ್ವಿಚಕ್ರ ವಾಹನದಲ್ಲಿ ಮೂರು ಅಥವಾ ನಾಲ್ಕು ಮಂದಿ ಪ್ರಯಾಣಿಸುವುದು, ಇತರ ವರ್ಗದ ವಾಹನಗಳಲ್ಲೂ ನಿಗದಿತ ಸಂಖ್ಯೆಗಿಂತ ಅಧಿಕ ಸವಾರರನ್ನು ತುಂಬಿಸುವುದು, ಲಾರಿಗಳಲ್ಲಿ ಜನರನ್ನು ಸಾಗಿಸುವುದು, ಖಾಸಗಿ ಮತ್ತು ಸರಕಾರಿ ಸಾರಿಗೆ ವಾಹನಗಳ ನಡುವೆ ಪೈಪೋಟಿ, ಕಣ್ಣು ಕೋರೈಸುವ ವಾಹನಗಳ ದೀಪಗಳ ಹಾವಳಿ, ದುಸ್ಥಿತಿಯಲ್ಲಿರುವ ರಸ್ತೆಗಳು, ಅಲೆಮಾರಿ ಜಾನುವಾರುಗಳ ಬಾಧೆ, ವೃತ್ತಿಪರ ಚಾಲಕರು ಸಾಕಷ್ಟು ವಿರಾಮವಿಲ್ಲದೇ ವಾಹನಗಳನ್ನು ಚಲಾಯಿಸುವುದು, ಯಾವುದೇ ಸೂಚನೆಯನ್ನು ನೀಡದೇ ಹಠಾತ್ ವಾಹನಗಳನ್ನು ನಿಲ್ಲಿಸುವುದು ಅಥವಾ ತಿರುಗಿಸುವುದು, ದೃಷ್ಟಿ ದೋಷವಿರುವ ಹಾಗೂ ಇದನ್ನು ಸರಿಪಡಿಸಿಕೊಳ್ಳದೇ ವಾಹನ ಚಲಾಯಿಸುವುದು, ಅನಿಯಂತ್ರಿತವಾಗಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಇತ್ಯಾದಿ ಕಾರಣಗಳಿಂದಾಗಿ ರಸ್ತೆ ಅಪಘಾತಗಳ ಪ್ರಮಾಣವು ದಿನೇದಿನೇ ಹೆಚ್ಚುತ್ತಿದೆ.

ನಿಯಂತ್ರಿಸುವುದು ಹೇಗೆ?

ವಾಹನ ಚಾಲನಾ ಪರವಾನಿಗೆಯನ್ನು ನೀಡುವ ಮುನ್ನ ಚಾಲಕರನ್ನು ಕಟ್ಟುನಿಟ್ಟಿನ ಪರೀಕ್ಷೆಗೆ ಒಳಪಡಿಸುವುದು, ಪ್ರತಿಯೊಂದು ನಗರ- ಪಟ್ಟಣಗಳಲ್ಲಿ ಸಂಚಾರ ವಿಭಾಗದ ಆರಕ್ಷಕರಿಂದ ನಿಯಮಿತವಾಗಿ ವಾಹನಗಳ ತಪಾಸಣೆಯನ್ನು ಮಾಡಿಸುವ ಮೂಲಕ ಪರವಾನಿಗೆಯಿಲ್ಲದೇ ಅಥವಾ ಮದ್ಯ- ಮಾದಕ ದ್ರವ್ಯ ಸೇವಿಸಿ ಚಾಲನೆ ಮಾಡುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮಗಳನ್ನು ಜರಗಿಸುವುದು, ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಚಾಲಕರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವುದು ಮತ್ತು ಇವರ ಪರವಾನಿಗೆಯನ್ನು ಅಮಾನತುಗೊಳಿಸುವುದು, ರಸ್ತೆ ಅಪಘಾತಗಳು ಸಂಭವಿಸಿದಾಗ ಇದರ ಕಾರಣವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವುದೇ ಮುಂತಾದ ಕ್ರಮಗಳನ್ನು ಸಂಬಂಧಿತ ಇಲಾಖೆಗಳು ಅನುಷ್ಠಾನಿಸಿದಲ್ಲಿ, ನಮ್ಮ ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳ ಸಂಖ್ಯೆ, ಇವುಗಳಿಂದ ಸಂಭವಿಸುವ ಮರಣಗಳ ಮತ್ತು ಶಾಶ್ವತ ಅಂಗವೈಕಲ್ಯಗಳ ಪ್ರಮಾಣಗಳನ್ನು ಕಡಿಮೆಮಾಡುವುದು ಸಾಧ್ಯ. ಆದರೆ ಇವೆಲ್ಲಕ್ಕೂ ಮಿಗಿಲಾಗಿ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸುವ ಪ್ರತಿಯೊಬ್ಬ ಚಾಲಕರೂ ಸಂಚಾರ ನಿಯಮಗಳನ್ನು ಪರಿಪಾಲಿಸಿದಲ್ಲಿ, ಭಾರತವನ್ನು " ವಿಶ್ವದ ರಸ್ತೆ ಅಪಘಾತಗಳ ರಾಜಧಾನಿ " ಪಟ್ಟದಿಂದ ಕೆಳಗಿಳಿಸುವುದು ಅಸಾಧ್ಯವೇನಲ್ಲ!.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು  

No comments:

Post a Comment