Wednesday, January 22, 2014

EPILEPSY_ APASMARA



                       ಅಪವಾದ ತರಬಲ್ಲ ಅಪಸ್ಮಾರ 

ಅನಾದಿಕಾಲದಿಂದ ಭಾರತೀಯರಲ್ಲಿ ಅಪಸ್ಮಾರ ವ್ಯಾಧಿಯ ಬಗ್ಗೆ ಅನೇಕ ತಪ್ಪುಕಲ್ಪನೆಗಳಿವೆ. ಆದರೆ ವಿಶ್ವವಿಖ್ಯಾತ ವ್ಯಕ್ತಿಗಳಾಗಿದ್ದ ಸಾಕ್ರೆಟಿಸ್, ಅಲೆಕ್ಸಾಂಡರ್ ಚಕ್ರವರ್ತಿ, ಜೂಲಿಯಸ್ ಸೀಸರ್,ಪೈಥಾಗರಸ್, ಚಾರ್ಲ್ಸ್ ನ್ಯೂಟನ್, ಚಾರ್ಲ್ಸ್ ಡಿಕೆನ್ಸ್, ವಿನ್ಸೆಂಟ್ ವಾನ್ ಗಾಗ್ ಮತ್ತು ಗುತಮ ಬುದ್ಧರಂತಹ ಮಹಾ ಮೇಧಾವಿಗಳ ಮಹೋನ್ನತ ಸಾಧನೆಗಳಿಗೆ ಅಪಸ್ಮಾರವು ಎಂದೂ ತೊಡಕಾಗಿರಲಿಲ್ಲ ಎನ್ನುವ ಸತ್ಯವೂ ಭಾರತೀಯರಿಗೆ ತಿಳಿದಿಲ್ಲ!. ಇದರೊಂದಿಗೆ ಖ್ಯಾತ ಕ್ರಿಕೆಟಿಗರಾದ ಟೋನಿ ಗ್ರೆಗ್, ಜಾಂಟಿ ರೋಡ್ಸ್ ಇವರಿಬ್ಬರೂ ಅಪಸ್ಮಾರ ಪೀಡಿತರೆಂದಲ್ಲಿ ಪ್ರಾಯಶಃ ನೀವೂ ನಂಬಲಾರಿರಿ. ಅಪಸ್ಮಾರ ಪೀಡಿತರು ಸೂಕ್ತ ಚಿಕಿತ್ಸೆ ಮತ್ತು ಶಿಸ್ತುಬದ್ಧ ಜೀವನಶೈಲಿಯಿಂದ ಆರೋಗ್ಯಕರ ಮತ್ತು ಸ್ವಾಭಾವಿಕ ಜೀವನ ನಡೆಸಲು ಸಾಧ್ಯ ಎನ್ನುವುದನ್ನು ಮರೆಯದಿರಿ. 
----------              ----------------                   ---------------                 ---------------                  

 ಸಹಸ್ರಾರು ವರ್ಷಗಳ ಹಿಂದೆ ಆಯುರ್ವೇದ ಶಾಸ್ತ್ರದಲ್ಲಿ ವಿಸ್ತ್ರತವಾಗಿ ಉಲ್ಲೇಖಿಸಲ್ಪಟ್ಟಿರುವ "ಅಪಸ್ಮಾರ" ಎನ್ನುವ ಕಾಯಿಲೆಯನ್ನು ಜನಸಾಮಾನ್ಯರು ಆಡುಭಾಷೆಯಲ್ಲಿ ಮೂರ್ಛೆ ರೋಗ, ಮಲರೋಗ ಅಥವಾ ಫಿಟ್ಸ್ ಎಂದು ಕರೆಯುತ್ತಾರೆ. ಕೆಲವೇ ವರ್ಷಗಳ ಹಿಂದಿನ ತನಕ ಗ್ರಾಮೀಣ ಜನರು ಮಾಟ - ಮಂತ್ರ ಅಥವಾ ಭೂತ- ಪ್ರೇತಗಳ ಬಾಧೆಯಿಂದಾಗಿ ಬರುವುದೆಂದು ನಂಬಿದ್ದ ಈ ವ್ಯಾಧಿಯ ಬಗ್ಗೆ ಅನೇಕ ವಿದ್ಯಾವಂತರ ಮನಗಳಲ್ಲೂ ಸಾಕಷ್ಟು ತಪ್ಪುಕಲ್ಪನೆಗಳಿವೆ.

ಈ ವ್ಯಾಧಿಪೀಡಿತವ್ಯಕ್ತಿಯ ಸ್ವಪ್ರತಿಷ್ಠೆ ಹಾಗೂ ಸಾಮಾಜಿಕ ಸ್ಥಾನಮಾನಗಳಿಗೆ ಚ್ಯುತಿ ಉಂಟಾಗಬಹುದೆಂಬ ಭಾವನೆಯಿಂದ, ಕೀಳರಿಮೆಗೆ ಕಾರಣವೆನಿಸಬಲ್ಲ ಈ ವಿಶಿಷ್ಟ ಕಾಯಿಲೆಯನ್ನು ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆಯಿಂದ ಹತೋಟಿಯಲ್ಲಿ ಇರಿಸುವುದು ಸುಲಭಸಾಧ್ಯ. 

ಅಪಸ್ಮಾರ ಎಂದರೇನು?

ಮನುಷ್ಯನ ಮೆದುಳಿನ ಕಾರ್ಯಕ್ಷಮತೆ ಹಾಗೂ ಪ್ರಜ್ಞಾವಸ್ಥೆಗಳಲ್ಲಿ ಆಕಸ್ಮಿಕವಾಗಿ ಸಂಭವಿಸಬಲ್ಲ ವ್ಯತ್ಯಯಗಳಿಂದಾಗಿ ಅಪಸ್ಮಾರ ಉದ್ಭವಿಸುತ್ತದೆ. ಈ ಸಂದರ್ಭದಲ್ಲಿ ಮೆದುಳಿನಿಂದ ಬಿಡುಗಡೆಯಾಗುವ ನ್ಯೂರಾನ್ ಗಳ ಪ್ರಮಾಣವು ಮಿತಿಮೀರುವುದರೊಂದಿಗೆ, ಕ್ಷಿಪ್ರಗತಿಯಿಂದ ಬಿಡುಗಡೆಯಾಗುವ ತೀವ್ರಗತಿಯ ವಿದ್ಯುತ್ ತರಂಗಗಳಿಂದಾಗಿ ಅಪಸ್ಮಾರದ "ಸೆಳೆತ" (Convulsions- fits) ಗಳು ಪ್ರತ್ಯಕ್ಷವಾಗುತ್ತವೆ. 

ಆರೋಗ್ಯವಂತ ವ್ಯಕ್ತಿಗಳ ಮೆದುಳಿನಲ್ಲೂ ಸಾಮಾನ್ಯವಾಗಿ ಸೂಕ್ಷ್ಮ ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುತ್ತದೆ. ನಿಯಮಿತ ಪ್ರಮಾಣದಲ್ಲಿ ಉತ್ಪನ್ನವಾಗುವ ಈ ವಿದ್ಯುತ್ ಪ್ರವಾಹದ ನೆರವಿನಿಂದ ಮೆದುಳಿನ ಕಣಗಳು ನಮ್ಮ ದೇಹದ ವಿವಿಧರೀತಿಯ ನಿಯಂತ್ರಣ ಕ್ರಿಯೆಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತವೆ. 

ಕಾರಣಾಂತರಗಳಿಂದ ಆಗಾಗ ಮರುಕಳಿಸುತ್ತಿರುವ ಅಪಸ್ಮಾರದಲ್ಲಿ ರೋಗಿಯ ಮೆದುಳಿನ ಕಾರ್ಯಕ್ಷಮತೆ ಹಾಗೂ ಪ್ರಜ್ಞಾವಸ್ಥೆಯಲ್ಲಿ ಕೆಲವಾರು ನಿಮಿಷಗಳ ವ್ಯತ್ಯಯ ಕಂಡುಬರಬಹುದು. ಬಹುತೇಕ ಅಪಸ್ಮಾರ ರೋಗಿಗಳಲ್ಲಿ ಈ ವ್ಯಾಧಿ ಉದ್ಭವಿಸಲು ನಿರ್ದಿಷ್ಟ ಕಾರಣಗಳನ್ನು ನಿಖರವಾಗಿ ಗುರುತಿಸುವುದು ಅಥವಾ ಪತ್ತೆಹಚ್ಚುವುದು ಅಸಾಧ್ಯವೂ ಹೌದು. ಅಪಸ್ಮಾರ ಪೀಡಿತ ಕುಟುಂಬಕ್ಕೆ ಸೇರಿದ ಮಕ್ಕಳಲ್ಲಿ ಮಾತ್ರವಲ್ಲ, ಕೆಲವೊಮ್ಮೆ ಅಪಸ್ಮಾರದ ಸಮಸ್ಯೆಯೇ ಇಲ್ಲದ ಕುಟುಂಬಗಳ ಮಕ್ಕಳಲ್ಲೂ ಇದು ಪ್ರತ್ಯಕ್ಷವಾಗುವ ಸಾಧ್ಯತೆಗಳಿವೆ. 

ಮೆದುಳಿಗೆ ಸಂಬಂಧಿಸಿದ ಕೆಲವ್ಯಾಧಿಗಳಲ್ಲಿ ಅಪಾಯದ ಸಂಕೇತವಾಗಿ ಹಾಗೂ ರೋಗ ಲಕ್ಷಣದ ರೂಪದಲ್ಲಿ ಅಪಸ್ಮಾರದಂತಹ "ಸೆಳೆತ"ಗಳು ಬಾಧಿಸಬಹುದು. ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಆಕಸ್ಮಿಕ ಹಾಗೂ ತೀವ್ರವಾಗಿ ಕುಸಿದಾಗ, ವಿಪರೀತ ಮದ್ಯಪಾನದ ಚಟವಿದ್ದವರು ತಮ್ಮ ಚಟವನ್ನು ಹಠಾತ್ ನಿಲ್ಲಿಸಿದಾಗ, ಮೂತ್ರಾಂಗಗಳಿಗೆ ಸಂಬಂಧಿಸಿದ ಗಂಭೀರ ವ್ಯಾಧಿಗಳ ಪರಿಣಾಮವಾಗಿ ಸಂಭವಿಸುವ "ಯುರೇಮಿಯ" ಎನ್ನುವ ಸ್ಥಿತಿಯಲ್ಲಿ ಹಾಗೂ "ಹೃದಯದ ತಡೆ"ಯಂತಹ ಸ್ಥಿತಿಯಲ್ಲೂ, ಅಪಸ್ಮಾರದಂತಹ ಸೆಳೆತಗಳು ಪ್ರತ್ಯಕ್ಷವಾಗುವ ಸಾಧ್ಯತೆಗಳಿವೆ.ಅಂತೆಯೇ ವಿವಿಧ ವ್ಯಾಧಿಗಳ ಪ್ರಮುಖ ಲಕ್ಷಣವಾಗಿ ಕಂಡುಬರುವ "ಜ್ವರ" ವು ಅನಿಯಂತ್ರಿತವಾಗಿ ಹೆಚ್ಚಿದಾಗ ಅನೇಕ ಮಕ್ಕಳಲ್ಲಿ ಸೆಳೆತಗಳು ಉದ್ಭವಿಸುವುದು ಅಪರೂಪವೇನಲ್ಲ. ಇವೆಲ್ಲಾ ಕಾರಣಗಳಿಂದಾಗಿ "ನೈಜ ಅಪಸ್ಮಾರ" ವನ್ನು ನಿಖರವಾಗಿ ಪತ್ತೆಹಚ್ಚಿ ಚಿಕಿತ್ಸೆ ಪಡೆಯಲು, ನಿಮ್ಮ ಕುಟುಂಬ ವೈದ್ಯರ ಬಳಿ ಚರ್ಚಿಸಿ ನರರೋಗ ತಜ್ಞರ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಹಿತಕರ. 

ಅಪಸ್ಮಾರ ವ್ಯಾಧಿಯಲ್ಲಿ ವಿವಿಧ ಪ್ರಭೇದಗಳಿದ್ದು, ಇವುಗಳ ಗುಣಲಕ್ಷಣಗಳು ವಿಭಿನ್ನವಾಗಿರುತ್ತವೆ. ಎಲೆಕ್ಟ್ರೋ ಏನ್ ಸೆಫೆಲೋಗ್ರಾಂ ಎನ್ನುವ ಉಪಕರಣದ ಮೂಲಕ ರೋಗಿಯೋರ್ವನಿಗೆ ಯಾವ ಪ್ರಭೇದದ ಅಪಸ್ಮಾರ ಇದೇ ಎನ್ನುವುದನ್ನು ನಿಖರವಾಗಿ ಗುರುತಿಸಬಹುದು. ಆದರೆ ಜನಸಾಮಾನ್ಯರಿಗೆ ಈ ಬಗ್ಗೆ ಪ್ರಾಥಮಿಕ ಮಾಹಿತಿಯ ಅವಶ್ಯಕತೆ ಇಲ್ಲದ ಕಾರಣದಿಂದಾಗಿ ಈ ಲೇಖನದಲ್ಲಿ ಇದರ ಬಗ್ಗೆ ವಿವರಿಸಿಲ್ಲ. 

ಅಪಸ್ಮಾರದ ಲಕ್ಷಣಗಳು 

ಅಪಸ್ಮಾರದ ವಿವಿಧ ಪ್ರಭೇದಗಳಿಗೆ ಅನುಗುಣವಾಗಿ ವಿಭಿನ್ನ ಲಕ್ಷಣಗಳು ಕಂಡುಬರುತ್ತವೆ. ಆದರೆ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು ಇಂತಿವೆ. 

ಸಾಮಾನ್ಯ ಅಪಸ್ಮಾರದ ರೋಗಿಗಳಲ್ಲಿ ಕೈಕಾಲುಗಳು ನಡುಗುವುದು ಅಥವಾ ಝುಮ್ ಎನಿಸುವುದು, ಶರೀರದಲ್ಲಿ ವಿದ್ಯುತ್ ಪ್ರವಹಿಸಿದಂತಹ ಸಂವೇದನೆ, ಏನೆನ್ನೋ ಕಂಡಂತೆ- ಪ್ರಖರವಾದ ಬೆಳಕು ಝಗಝಗಿಸಿದಂತೆ - ಶಬ್ದ ಕೇಳಿಸಿದಂತೆ ಹಾಗೂ ಅಕಾರಣವಾಗಿ ತೀವ್ರ ಭಯಪೀಡಿತರಾದಂತೆ ಮತ್ತು ಕೆಲವರಿಗೆ ಹೊಟ್ಟೆಯಲ್ಲಿ ಚಿಟ್ಟೆಗಳು ಹಾರಾಡಿದಂತೆ ಅನಿಸುವುದೇ ಮುಂತಾದ ಅನುಭವ ಇತ್ಯಾದಿ ಲಕ್ಷಣಗಳು ಕಂಡುಬರುವುದುಂಟು. 

ಸಂಕೀರ್ಣ ಅಪಸ್ಮಾರದಲ್ಲಿ ರೋಗಿಯು ಗೊಂದಲಕ್ಕೆ ಒಳಗಾದಂತೆ ವರ್ತಿಸುವುದು, ತನ್ನಷ್ಟಕ್ಕೆ ತಾನೇ ಗೊಣಗುತ್ತುವುದು, ಮೈಮೇಲಿನ ಬಟ್ಟೆಗಳನ್ನು ಎಳೆದಾಡುವುದು- ಹರಿಯುವುದು ಹಾಗೂ ಬಾಯಿ ಚಪ್ಪರಿಸುವುದೇ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲರೋಗಿಗಳಂತೂ ಕ್ಷಣಮಾತ್ರದಲ್ಲಿ ನೆಲಕ್ಕುರುಳಿ, ಕೈಕಾಲುಗಳನ್ನು ಸೆಟೆದುಕೊಳ್ಳುತ್ತಾ, ಹಲ್ಲುಗಳನ್ನು ಕಡಿಯುತ್ತಾ , ಬಾಯಿಯಿಂದ ಜೊಲ್ಲು- ನೊರೆಯನ್ನು ಸುರಿಸಿ ಒಂದೆರಡು ಕ್ಷಣಗಳಲ್ಲೇ ಪ್ರಜ್ಞಾಹೀನರಾಗುತ್ತಾರೆ. ಈ ಸಂದರ್ಭದಲ್ಲಿ ರೋಗಿ ತನ್ನ ನಾಲಗೆಯನ್ನು ಕಚ್ಚಿದಲ್ಲಿ ತೀವ್ರ ರಕ್ತಸ್ರಾವ ಸಂಭವಿಸುವ ಸಾಧ್ಯತೆಗಳಿವೆ. ಇಂತಹ ಲಕ್ಷಣಗಳೊಂದಿಗೆ ಕೆಲರೋಗಿಗಳು ತಮಗರಿವಿಲ್ಲದೇ ಮಲಮೂತ್ರಗಳನ್ನು ವಿಸರ್ಜಿಸುವುದು ಅಪರೂಪವೇನಲ್ಲ. 

ಸ್ಟೇಟಸ್ ಎಪಿಲೆಪ್ತಿಕಸ್ ಎನ್ನುವ ಗಂಭೀರ ಸ್ಥಿತಿಯಲ್ಲಿ, ಅಪಸ್ಮಾರದ ಸೆಳೆತಗಳು ತಾವಾಗಿ ಶಮನಗೊಳ್ಳದೇ, ತುಸು ದೀರ್ಘಕಾಲ ಬಾಧಿಸುವುದರಿಂದ, ರೋಗಿಯ ಪ್ರಾಣಕ್ಕೆ ಸಂಚಕಾರ ಬರುವುದುಂಟು. ಇಂತಹ ರೋಗಿಗಳಲ್ಲಿ ಅನ್ಯಥಾ ಕಾಲಹರಣ ಮಾಡದೇ, ತತ್ ಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡುವುದು ಪ್ರಾಣರಕ್ಷಕ ಎನಿಸುವುದು.  

ಚಿಕಿತ್ಸೆ 

ಅಪಸ್ಮಾರ ಪೀಡಿತ ವ್ಯಕ್ತಿಗಳಿಗೆ ಅತ್ಯವಶ್ಯಕವಾದ ಔಷದಗಳೊಂದಿಗೆ, ಸಾಮಾಜಿಕ ಹಾಗೂ ಮಾನಸಿಕ ಆರೈಕೆಯನ್ನು ನೀಡಲು ಇವರ ಬಂಧುಮಿತ್ರರ ಸಹಕಾರ ಅನಿವಾರ್ಯವೆನಿಸುತ್ತದೆ.ದೈನಂದಿನ ಜೀವನದಲ್ಲಿ ಇಂತಹ ವ್ಯಕ್ತಿಗಳನ್ನು ಪ್ರತ್ಯೆಕವಾಗಿರಿಸಿದಲ್ಲಿ ಅಥವಾ ಸಂದೇಹದ ದೃಷ್ಟಿಯಿಂದ ನೋಡಿದಲ್ಲಿ ಚಿಕಿತ್ಸೆ ವಿಫಲವಾಗುವ ಸಾಧ್ಯತೆಗಳಿವೆ. 

ಅಪಸ್ಮಾರದ ಚಿಕಿತ್ಸೆಯ ಪ್ರಾಥಮಿಕ ಉದ್ದೇಶವು ಈ ವ್ಯಾಧಿಯನ್ನು ಮತ್ತೆ ಮರುಕಳಿಸದಂತೆ ತಡೆಗಟ್ಟುವ ವಿಧಾನವೇ ಹೊರತು ಇದನ್ನು ಶಾಶ್ವತವಾಗಿ ಗುಣಪಡಿಸುವ ಮಾರ್ಗವಲ್ಲ ಎನ್ನುವುದು ಬಹುತೇಕ ವಿದ್ಯಾವನ್ತರಿಗೂ ತಿಳಿದಿಲ್ಲ. 

ರೋಗಪೀಡಿತ ವ್ಯಕ್ತಿಗಳಿಗೆ ಚಿಕಿತ್ಸೆಯನ್ನು ನೀಡುವ ಮೊದಲು ನರರೋಗ ತಜ್ಞರು ಎಲೆಕ್ಟ್ರೋ ಎನ್  ಸೆಫಲೋ ಗ್ರಾಮ್, ಸಿ. ಟಿ ಸ್ಕಾನ್,ಎಂ. ಆರ್.ಐ ಮತ್ತಿತರ ಕೆಲ ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸುವರು. ತದನಂತರ ರೋಗಿಯ ವಯಸ್ಸು, ವ್ಯಾಧಿಯ ತೀವ್ರತೆ, ಆತನ ಸಾಮಾನ್ಯ ಆರೋಗ್ಯದ ಮಟ್ಟಗಳನ್ನು ಗಮನದಲ್ಲಿರಿಸಿ, ಅವಶ್ಯಕ ಔಷದಗಳನ್ನು ಸೂಚಿಸುವರು. ಈ ಸಂದರ್ಭದಲ್ಲಿ ರೋಗಿಯಲ್ಲಿ ಇರಬಹುದಾದ ಅನ್ಯ ಆರೋಗ್ಯದ ಸಮಸ್ಯೆಗಳಿಗೂ ಸೂಕ್ತ ಚಿಕಿತ್ಸೆಯನ್ನು ನೀಡಲೇಬೇಕಾಗುವುದು. 

ತಜ್ಞ ವೈದ್ಯರು ಸೂಚಿಸಿದ ಔಷದಗಳನ್ನು ಪ್ರತಿನಿತ್ಯ ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಮತ್ತು ನಿಗದಿತ ಅವಧಿಗೆ ಸೇವಿಸಲೇಬೇಕು. ನಿಗದಿತ ಅವಧಿಗೆ ಮುನ್ನ ಔಷದಗಳ ಪ್ರಭಾವದಿಂದಾಗಿ ತನ್ನ ಅಪಸ್ಮಾರ ಗುಣವಾಗಿದೆ ಎನ್ನುವ ಭ್ರಮೆಯಿಂದ ಔಷದ ಸೇವನೆಯನ್ನು ನಿಲ್ಲಿಸಿದಲ್ಲಿ, ವ್ಯಾಧಿಯು ಮತ್ತೆ ಮರುಕಳಿಸುವುದು. ಮಾತ್ರವಲ್ಲ, ಇದರಿಂದಾಗಿ ಚಿಕಿತ್ಸೆಯ ಅವಧಿಯೂ ಇನ್ನಷ್ಟು ದೀರ್ಘವಾಗುವುದು. 

ಸಾಮಾನ್ಯವಾಗಿ ಎರಡರಿಂದ ಐದು ವರ್ಷಗಳ ಕಾಲ ವೈದ್ಯರು ಸೂಚಿಸಿದಂತೆ ಸೇವಿಸಲೆಬೇಕಾಗಿರುವ ಔಷದಗಳನ್ನು ಮತ್ತೆ ವೈದ್ಯರ ಸಲಹೆಯಂತೆ ಕ್ರಮೇಣ ಕಡಿಮೆ ಮಾಡುತ್ತಾ ಬಂದು, ಅಂತಿಮವಾಗಿ ನಿಲ್ಲಿಸುವುದು ನಿಶ್ಚಿತವಾಗಿಯೂ ಹಿತಕರವೆನಿಸುವುದು. ಆದರೆ ಕೆಲ ರೋಗಿಗಳಲ್ಲಿ ಜೀವನ ಪರ್ಯಂತ ಔಷದ ಸೇವನೆ ಅನಿವಾರ್ಯವೆನಿಸಬಲ್ಲದು. 

ಕಂಬಿ ಎಣಿಸುತ್ತಿರುವ ಅಪಸ್ಮಾರ ತಜ್ಞ!

ಭಾರತದ ಸುಪ್ರಸಿದ್ದ ಪತ್ರಿಕೆಗಳು- ಸಾಪ್ತಾಹಿಕಗಳಲ್ಲಿ "ನೀರಜ್ ಕ್ಲಿನಿಕ್" ಎನ್ನುವ ಹೆಸರಿನಲ್ಲಿ ನಿಯಮಿತವಾಗಿ ಪ್ರಕಟವಾಗುತ್ತಿದ್ದ ಜಾಹೀರಾತುಗಳನ್ನು ೨೦೦೪ ನೆ ಇಸವಿಯ ತನಕ ನೀವೂ ಕಂಡಿರಬಹುದು. ಕೇವಲ ಅಪಸ್ಮಾರ ವ್ಯಾಧಿಯನ್ನು ಮಾತ್ರ ಸಂಪೂರ್ಣವಾಗಿ ಗುಣಪಡಿಸುವ ಭರವಸೆ ನೀಡುತ್ತಿದ್ದ " ನಕಲಿ ವೈದ್ಯ" ನೋಬ್ಬನು, ಇತರ ಯಾವುದೇ ವ್ಯಾಧಿಗಳಿಗೆ ಚಿಕಿತ್ಸೆ ನೀಡುವುದಿಲ್ಲ ಅಂದು ತನ್ನ ಜಾಹೀರಾತಿನಲ್ಲಿ ನಮೂದಿಸುತ್ತಿದ್ದನು. ಈತ ನೀಡುತ್ತಿದ್ದ ಜಾಹೀರಾತುಗಳಲ್ಲಿ ಪ್ರಕಟಿಸಿದಂತೆ, ಹಿಮಾಲಯದ ತಪ್ಪಲಿನಿಂದ ಆಯ್ದು ತಂದ ಅಪರೂಪದ ಮೂಲಿಕೆಗಳಿಂದ ಸಿದ್ಧಪಡಿಸಿದ, ಈತನೇ ಸಂಶೋಧಿಸಿದ್ದ ಔಷದಗಳನ್ನು ಹಲವಾರು ವರ್ಷಗಳ ಕಾಲ ನಿರಂತರವಾಗಿ ಸೇವಿಸಿದಲ್ಲಿ, ಅಪಸ್ಮಾರವು ಸಂಪೂರ್ಣವಾಗಿ ಗುಣವಾಗುವುದೆಂದು ಭರವಸೆ ನೀಡಲಾಗುತ್ತಿತ್ತು. ಚಿಕಿತ್ಸೆಯ ಅಂಗವಾಗಿ ಈತನು ನೀಡುತ್ತಿದ್ದ ಮೂರು ತಿಂಗಳುಗಳ ಔಷದಿಗೆ ಈತನು ವಿಧಿಸುತ್ತಿದ್ದ ಶುಲ್ಕವು ಕೇವಲ ೬೦೦೦ ರೂಪಾಯಿಗಳು ಮಾತ್ರ!.  

ಸುಮಾರು ೧೪ ವರ್ಷಗಳ ಹಿಂದೆ ಅಂದರೆ ೨೦೦೧  ರಲ್ಲಿ ಈತನ ಖ್ಯಾತಿಯ ಬಗ್ಗೆ ಕೇಳಿ, ಚಿಕಿತ್ಸೆ ಪಡೆಯಲು ಬರುತ್ತಿದ್ದ ಸಹಸ್ರಾರು ರೋಗಿಗಳ ಸಾಲನ್ನು ಕಂಡು ನಿಬ್ಬೆರಗಾಗಿದ್ದ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು, ಈತನು ನೀಡುತ್ತಿದ್ದ ಔಷದಗಳನ್ನು ಸಂಗ್ರಹಿಸಲು ಯಶಸ್ವಿಯಾಗಿದ್ದರು, ಈ ಔಷದಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ, ಈ ನಕಲಿ ವೈದ್ಯನ ಗುಟ್ಟು ರಟ್ಟಾಗಿತ್ತು. 

ಕೆಲವಾರು ದಶಕಗಳಿಂದ ಆಧುನಿಕ ವೈದ್ಯಪದ್ದತಿಯ ವೈದ್ಯರು ತಮ್ಮ ಅಪಸ್ಮಾರ ರೋಗಿಗಳಿಗೆ ನೀಡುತ್ತಿದ್ದ ಹಾಗೂ ಕೇವಲ ೫೦ ಪೈಸೆ ಬೆಲೆಯಿದ್ದ "ಫಿನೋ ಬಾರ್ಬಿಟೋನ್" ಎನ್ನುವ ಔಷದವನ್ನು ಈತನ "ಮೂಲಿಕೆಗಳಿಂದ ಸಿದ್ಧಪಡಿಸಿದ ಔಷದ" ಗಳಲ್ಲಿ ಧಾರಾಳವಾಗಿ ಬೆರೆಸಲಾಗಿತ್ತು. ವಿಶೇಷವೆಂದರೆ ನಿಮ್ಮ ಕುಟುಂಬ ವೈದ್ಯರೂ ನೀಡಬಹುದಾದ ಈ ಮಾತ್ರೆಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ದಿನನಿತ್ಯ ಸೇವಿಸಿದಲ್ಲಿ, ಸುಮಾರು ಐದಾರು ವರ್ಷಗಳಲ್ಲಿ ಅಧಿಕತಮ ಅಪಸ್ಮಾರ ರೋಗಿಗಳು ಈ ಪೀಡೆಯಿಂದ ಮುಕ್ತರಾಗಿ ಸಾಮಾನ್ಯ ಜೀವನ ನಡೆಸಬಹುದು. 

ಹಲವಾರು ವರ್ಷಗಳ ಹಿಂದೆ ನಡೆಸಿದ್ದ ಈ ಕಾರ್ಯಾಚರಣೆಯ ವಿವರಗಳನ್ನು ಭಾರತದ ಪ್ರಮುಖ ಪತ್ರಿಕೆಗಳಿಗೆ ಕಳುಹಿಸಿ ಪ್ರಕಟಿಸುವಂತೆ ಕೋರಿದ್ದ ಬಂಟ್ವಾಳದ ಡಾ. ಬಿ. ಏನ್.ಬಾಳಿಗ ಇವರ ಪ್ರಯತ್ನ ಸಫಲವಾಗಿರಲಿಲ್ಲ. ಯಾವುದೇ ಪತ್ರಿಕೆಗಳಾಗಲೀ ಅಥವಾ ಈ ಬಗ್ಗೆ ದ್ದೊರು ಸ್ವೀಕರಿಸಿದ್ದ ಔಷದ ನಿಯಂತ್ರಣ ಅಧಿಕಾರಿಯವರಾಗಲೀ , ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇದ್ದುದರಿಂದ, ಈ ನಕಲಿ ವೈದ್ಯನ ಧಂಧೆ ನಿರಾತಂಕವಾಗಿ ಸಾಗಿತ್ತು. 

ಅಂತಿಮವಾಗಿ ಅನಿವಾಸಿ ಭಾರತೀಯರೊಬ್ಬರು ನೀಡಿದ್ದ ದೂರಿನಂತೆ ಈತನನ್ನು ೨೦೦೪ ರ ಮಧ್ಯಭಾಗದಲ್ಲಿ ಬಂಧಿಸಲಾಗಿತ್ತು. ಲಕ್ಷಾಂತರ ರೂಪಾಯಿ ಆದಾಯ ತೆರಿಗೆಯನ್ನು ಪಾವತಿಸುತ್ತಿದ್ದ ಈ ಕೊಟ್ಯಾಧೀಶ್ವರನು, ತದನಂತರ ಜೈಲಿನ ಕಂಬಿಗಳನ್ನು ಎನಿಸುತ್ತಿದ್ದುದು ಮಾತ್ರ ಸತ್ಯ!. 

ಅಂತೆಯೇ ಅಪಸ್ಮಾರಕ್ಕೊಂದು ಆಯುರ್ವೇದ ಔಷದವೆಂದು "ಆಸ್ಬೆಸ್ಟೊಸ್ ಭಸ್ಮ" ಎನ್ನುವ ಔಷದವನ್ನು ಮಾರುತ್ತಿದ್ದ ಬೆಂಗಳೂರಿನ ವೈದ್ಯನೊಬ್ಬನಿಂದ ಚಿಕಿತ್ಸೆಯನ್ನು ಪಡೆದಿದ್ದ ನೂರಾರು ರೋಗಿಗಳು ಅಯಾಚಿತ ತೊಂದರೆಗಳಿಗೆ ಈಡಾಗಿದ್ದರು. ಈತನ ಮಾತನ್ನು ನಂಬಿ, ತಾವು ಸೇವಿಸುತ್ತಿದ್ದ ಅಪಸ್ಮಾರ ವ್ಯಾಧಿಯನ್ನು ನಿಯಂತ್ರಿಸುವ ಮಾತ್ರೆಗಳ ಸೇವನೆಯನ್ನು ನಿಲ್ಲಿಸಿದ್ದ ರೋಗಿಗಳು ತೀವ್ರ ಅಪಸ್ಮಾರದಿಂದ ಬಳಲಬೇಕಾಗಿ ಬಂದಿತ್ತು. 

ಅದೇನೇ ಇರಲಿ, ಯಾವುದೇ ಕಾರಣಕ್ಕೂ ನಿಮ್ಮ ನಂಬಿಗಸ್ತ ಕುಟುಂಬ ವೈದ್ಯರು ಮತ್ತು ಅವರ ಸೂಚನೆಯಂತೆ ನೀವು ಸಂದರ್ಶಿಸಿರುವ ತಜ್ಞವೈದ್ಯರ ಸಲಹೆ- ಚಿಕಿತ್ಸೆಗಳನ್ನು ನಿಲ್ಲಿಸದಿರಿ. ನಕಲಿ ವೈದ್ಯರ ಪೊಳ್ಳು ಭರವಸೆಗಳಿಗೆ ಮರುಳಾಗಿ ನಿಮ್ಮ ಆರೋಗ್ಯ ಮತ್ತು ಹಣವನ್ನು ಕಳೆದುಕೊಂಡು ಪರಿತಪಿಸದಿರಿ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೦- ೦೨- ೨೦೦೫ ರ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.  





1 comment:

  1. ಮೂರ್ಛೆ ರೋಗದ ಭಾದೆಯುಳ್ಳ ವ್ಯಕ್ತಿ ಹೆಚ್ಚು ಮಾನಸಿಕ ಒತ್ತಡಕ್ಕೆ ಒಳಗಾಗದಿದ್ದರೆ ಮಹಾನ್ ಸಾಧಕನಾಗಬಲ್ಲರು

    ReplyDelete