Tuesday, January 7, 2014

Dangerous dust



                         ಎಲ್ಲೆಲ್ಲೂ ಧೂಳು- ಸ್ಥಳೀಯರ ಗೋಳು 

ತನ್ನ ಪ್ರಜೆಗಳ ಆರೋಗ್ಯ ರಕ್ಷಣೆ ಮತ್ತು ವ್ಯಾಧಿಪೀಡಿತರ ಚಿಕಿತ್ಸೆಗಳಿಗಾಗಿ ಸರಕಾರವು ವಿನೂತನ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಜನಸಾಮಾನ್ಯರನ್ನು ಪೀಡಿಸುವ ವ್ಯಾಧಿಕಾರಕ ಸಮಸ್ಯೆಗಳು ಅನಿಯಂತ್ರಿತವಾಗಿ ಹೆಚ್ಚುತ್ತಿವೆ. ಇಂತಹ ಒಂದು ಸಮಸ್ಯೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಹಿಂಗಾರು ಮಳೆ ಹಿಂದಕ್ಕೆ ಸರಿದು ಇದೀಗ ಎರಡು ತಿಂಗಳುಗಳೇ ಸಂದಿವೆ. ಇದರೊಂದಿಗೆ ಅನೇಕ ಅಭಿವೃದ್ಧಿ ಕಾಮಗಾರಿಗಳು ಮತ್ತೆ ಆರಂಭವಾಗಿವೆ. ಹಳೆಯ ಕಟ್ಟಡಗಳನ್ನು ಕೆಡಹುವ- ಹೊಸ ಕಟ್ಟಡಗಳನ್ನು ನಿರ್ಮಿಸುವ, ಹಳೆಯ ರಸ್ತೆಗಳನ್ನು ವಿಸ್ತರಿಸುವ- ಹೊಸ ರಸ್ತೆಗಳನ್ನು ನಿರ್ಮಿಸುವ ಮತ್ತು ರಸ್ತೆ ಹೊಂಡಗಳನ್ನು ಮಣ್ಣು ತುಂಬಿಸಿ ತಾತ್ಕಾಲಿಕವಾಗಿ ದುರಸ್ತಿಪಡಿಸುವ ಕಾಮಗಾರಿಗಳ ಭರಾಟೆ ಜೋರಾಗಿಯೇ ನಡೆಯುತ್ತಿದೆ. ತತ್ಪರಿಣಾಮವಾಗಿ ನಗರದಾದ್ಯಂತ 'ಧೂಳಿನ ಸಮಸ್ಯೆ" ವ್ಯಾಪಕವಾಗಿ ಕಂಡುಬರುತ್ತಿದೆ. ಇದರೊಂದಿಗೆ ಮಾಗಿಯ ಛಳಿಯ ತೀವ್ರತೆ ಈ ಬಾರಿ ತುಸು ಅಧಿಕವಾಗಿದ್ದು, ಬೆಳಗಿನಜಾವ ಮಂಜು ಮುಸುಕಿದ ವಾತಾವರಣ ಇರುತ್ತದೆ. ಇಷ್ಟೆಲ್ಲಾ ಸಾಲದೆನ್ನುವಂತೆ ಅತಿಯಾದ ವಾಹನಗಳ ಸಂಚಾರದಿಂದಾಗಿ ಇವುಗಳು ಉಗುಳುವ ಹೊಗೆಯಲ್ಲಿನ ಅಪಾಯಕಾರಿ ಅಂಶಗಳು ವಾತಾವರಣದಲ್ಲಿ ಹೇರಳವಾಗಿದ್ದು, ನಾವು ಉಸಿರಾಡುವ ಗಾಳಿಯೊಂದಿಗೆ ನಮ್ಮ ಶ್ವಾಸಕೋಶಗಳನ್ನು  ಪ್ರವೇಶಿಸುವ ಮೂಲಕ ನಮ್ಮ ಆರೋಗ್ಯವನ್ನು ಹಾಳುಗೆಡವುತ್ತಿವೆ. ಇವೆಲ್ಲವುಗಳ ಸಂಯುಕ್ತ ಪರಿಣಾಮಗಳಿಂದಾಗಿ,  ವೈವಿಧ್ಯಮಯ ಆರೋಗ್ಯದ  ಸಮಸ್ಯೆಗಳು ಸ್ಥಳೀಯರನ್ನು ಕಾಡುತ್ತಿವೆ. 

ಅನಾರೋಗ್ಯಕ್ಕೆ ಮೂಲ 

ಧೂಳು, ಮಂಜು ಮತ್ತು ಚಳಿಗಾಲ ಹಾವಳಿಯಿಂದಾಗಿ ಬಹುತೇಕ ಜನರಲ್ಲಿ ಮೂಗು, ಗಂಟಲು, ಶ್ವಾಸಕೋಶಗಳು, ಕಣ್ಣು, ಕಿವಿ ಮತ್ತು ಚರ್ಮಗಳಿಗೆ ಸಂಬಂಧಿಸಿದ ಹಲವಾರು ವ್ಯಾಧಿಗಳು ಬಾಧಿಸುತ್ತಿವೆ. ಇವುಗಳಲ್ಲಿ ಧೂಳಿನ ಅಲರ್ಜಿಯಿಂದಾಗಿ ಉದ್ಭವಿಸುವ ಶೀನು, ನೆಗಡಿ, ಕೆಮ್ಮು, ಆಸ್ತಮಾ, ಗಂಟಲು ಹಾಗೂ ಧ್ವನಿಪೆಟ್ಟಿಗೆಗಳ ಸೋಂಕು, ಶ್ವಾಸಕೋಶಗಳ ಉರಿಯೂತ ಮತ್ತು ಜ್ವರ, ಕಣ್ಣುಗಳ ಉರಿಯೂತ ಹಾಗೂ ಸೋಂಕು, ಕಿವಿಯ ಸೋಂಕು, ಅಲರ್ಜಿ ಮತ್ತು ತುರಿಕೆಗಲಂತಹ ಚರ್ಮವ್ಯಾಧಯಾಗಳು ಹಲವಾರು ವಾರಗಳಿಂದ ಸ್ಥಳೀಯರನ್ನು, ಅದರಲ್ಲೂ ವಿಶೇಷವಾಗಿ ಮಕ್ಕಳನ್ನು ಪೀಡಿಸುತ್ತಿವೆ. ವಿಶೇಷವೆಂದರೆ ಸೋಂಕಿನಿಂದ ಉದ್ಭವಿಸಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಮರ್ಥ್ಯವುಳ್ಳ ವ್ಯಾಧಿಗಳು ಶಾಲಾಕಾಲೇಜುಗಳು, ಸಭೆ ಸಮಾರಂಭಗಳು, ಹೋಟೆಲ್- ಸಭಾಂಗಣಗಳು, ಜನಜಂಗುಳಿ ಇರುವ ಸ್ಥಳಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಸುಲಭವಾಗಿ ಹರಡುತ್ತವೆ. ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಅವಶ್ಯಕ ಚಿಕಿತ್ಸೆಯನ್ನು ಪಡೆದುಕೊಂಡರೂ, ವ್ಯಾಧಿಪೀದಿತ ಅವಧಿಯಲ್ಲಿ ತಮ್ಮ ಕಾಯಿಲೆಯನ್ನು ತಮ್ಮೊಂದಿಗೆ ಸಂಪರ್ಕವಿರುವ ವ್ಯಕ್ತಿಗಳಿಗೆ ಅನಾಯಾಸವಾಗಿ ಹರಡುತ್ತಾರೆ. ಇನ್ನು ಚಿಕಿತ್ಸೆಯನ್ನೇ ಪಡೆಯದ ವ್ಯಕ್ತಿಗಳು ಸುದೀರ್ಘಕಾಲ ಈ ಸಮಸ್ಯೆಯಿಂದ ಬಳಲುವುದರಿಂದ, ಚಿಕಿತ್ಸೆಯನ್ನು ಪಡೆದುಕೊಂಡ ವ್ಯಕ್ತಿಗಳಿಗಿಂತಲೂ ಅಧಿಕ ಜನರಿಗೆ ತಮ್ಮ ಕಾಯಿಲೆಯನ್ನು ಹರಡಬಲ್ಲರು. ಈ ರೀತಿಯಲ್ಲಿ ಅಸಾಮಾನ್ಯ ಸಮಸ್ಯೆಗಳಿಗೆ ಕಾರನವೆನಿಸುತ್ತಿರುವ "ಧೂಳು", ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ. 

ಸ್ತಳೀಯ ಸಂಸ್ಥೆಗಳು, ಚುನಾಯಿತ ಜನ ಪ್ರತಿನಿಧಿಗಳು, ಆರೋಗ್ಯ ಇಲಾಖೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯೊಂದಿಗೆ ಜನಸಾಮಾನ್ಯರೂ ಕೈಜೋಡಿಸಿದಲ್ಲಿ, ಈ ಸಮಸ್ಯೆಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸುವುದು ಅಸಾಧ್ಯವೇನಲ್ಲ. ಆದರೆ ಇದಕ್ಕೆ ಬೇಕಾದ "ಇಚ್ಛಾ ಶಕ್ತಿ" ಯ ಕೊರತೆಯಿಂದಾಗಿ ಇಂತಹ ಅನೇಕ ಸಮಸ್ಯೆಗಳು ಪರಿಹಾರಗೊಲ್ಲದೆ ಉಳಿದುಕೊಂಡಿರುವುದು ಮಾತ್ರ ಸುಳ್ಳೇನಲ್ಲ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 


No comments:

Post a Comment