Wednesday, January 8, 2014

DISCOVERY OF MEDICINES



                 ಔಷದಗಳ ಸಂಶೋಧನೆ ಹೇಗೆ ನಡೆಯುತ್ತದೆ?

  ಮನುಷ್ಯನ ಆರೋಗ್ಯದ ಮಟ್ಟವನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳಲು, ಮಾರಕ ವ್ಯಾಧಿಗಳಿಂದ ರಕ್ಷಿಸಿಕೊಳ್ಳಲು ಮತ್ತು ವಿವಿಧ ವ್ಯಾಧಿಗಳು ಬಾಧಿಸಿದ ಸಂದರ್ಭದಲ್ಲಿ ರೋಗಮುಕ್ತರಾಗಳು ಔಷದಗಳ ಬಳಕೆ ಅನಿವಾರ್ಯ. ನಮ್ಮ ಆರೋಗ್ಯ ರಕ್ಷಣೆಯ ಸಲುವಾಗಿ ನಿರಂತರವಾಗಿ ನಡೆಯುತ್ತಿರುವ ಔಷದ ಸಂಶೋಧನೆಯ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ.

---------                ---------------                 ----------------                  -----------------               -------

 ಮನುಕುಲವನ್ನು ಬಾಧಿಸುತ್ತಿರುವ ಅನೇಕ ಗಂಭೀರ ಹಾಗೂ ಮಾರಕ ವ್ಯಾಧಿಗಳನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ  ಲಸಿಕೆಗಳು, ಬಹುತೇಕ ವ್ಯಾಧಿಗಳನ್ನು ಕ್ಷಿಪ್ರಗತಿಯಲ್ಲಿ ಗುಣಪಡಿಸಬಲ್ಲ ಅಥವಾ ಶಾಶ್ವತ ಪರಿಹಾರವಿಲ್ಲದ ಕಾಯಿಲೆಗಳನ್ನು ಸಮರ್ಪಕವಾಗಿ ಹತೋಟಿಯಲ್ಲಿ ಇರಿಸಬಲ್ಲ ಔಷದಗಳಿವೆ. ಇನ್ನು ಕೆಲವಿಧದ ವ್ಯಾಧಿಗಳನ್ನು ತದೆಗತ್ತಬಲ್ಲ, ನಿಯಂತ್ರಿಸಬಲ್ಲ ಅಥವಾ ಗುಣಪಡಿಸಬಲ್ಲ ಔಷದಗಳೇ ಲಭ್ಯವಿಲ್ಲ ಎಂದು ನಿಮಗೂ ತಿಳಿದಿರಲೇಬೇಕು. 

ಪ್ರಸ್ತುತ ಶಾಶ್ವತ ಪರಿಹಾರವಿಲ್ಲದ, ಲಭ್ಯ ಔಷದಗಳಿಗೆ ಮಣಿಯದ, ಸೂಕ್ತ ಚಿಕಿತ್ಸೆಯೇ ಲಭ್ಯವಿಲ್ಲದಿರುವ ಮತ್ತು ಚಿಕಿತ್ಸೆ ಲಭ್ಯವಿರುವ ಕಾಯಿಲೆಗಳನ್ನು ಇನ್ನಷ್ಟು ಕ್ಷಿಪ್ರಗತಿಯಲ್ಲಿ ಗುಣಪಡಿಸಬಲ್ಲ, ಇನ್ನಷ್ಟು ಸುರಕ್ಷಿತ ಮತ್ತು ಪರಿಣಾಮಕಾರಿ ಔಷದಗಳನ್ನು ಆವಿಷ್ಕರಿಸುವ ಸಂಶೋಧನೆಗಳು ಜಗತ್ತಿನಾದ್ಯಂತ ಅವಿರತವಾಗಿ ಸಾಗುತ್ತಿವೆ. ಸಹಸ್ರಾರು ವೈದ್ಯಕೀಯ ವಿಜ್ಞಾನಿಗಳು- ಸಂಶೋಧಕರ ನಿರಂತರ ಪ್ರಯತ್ನಗಳ ಫಲವಾಗಿ ನಮಗಿಂದು ವಿನೂತನ ಔಷದಗಳು ಲಭಿಸುತ್ತಿವೆ. 

ಔಷದಗಳ ಸಂಶೋಧನೆ 

ನೂತನ ಔಷದವೊಂದನ್ನು ಸಂಶೋಧಿಸಿದ ಬಳಿಕ, ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನ ಹಲವಾರು "ಅಗ್ನಿ ಪರೀಕ್ಷೆ" ಗಳನ್ನು ಎದುರಿಸಿ ತೇರ್ಗಡೆಯಾಗಬೇಕಾಗುತ್ತದೆ. ಇವೆಲ್ಲಾ ಪರೀಕ್ಷೆಗಳನ್ನು ಕ್ರಮಬದ್ಧವಾಗಿ ನಡೆಸಲು ಸುದೀರ್ಘ ಅವಧಿಯೂ ಬೇಕಾಗುತ್ತದೆ.ಹಾಗೂ ಇದಕ್ಕಾಗಿ ಕೋಟ್ಯಂತರ ರೂಪಾಯಿಗಳೂ ವೆಚ್ಚವಾಗುತ್ತವೆ. 

ಇತ್ತೀಚಿಗೆ ಸಾಮಾನ್ಯವಾಗಿ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ನೂತನ ಔಷದಗಳಲ್ಲಿ ಹೆಚ್ಚಿನವು ವಾಣಿಜ್ಯ ಔಷದ ತಯಾರಿಕಾ ಸಂಸ್ಥೆಗಳ ಸಂಶೋಧಕರು ಪತ್ತೆಹಚ್ಚಿದವೇ ಆಗಿವೆ. ಏಕೆಂದರೆ ಇಂತಹ ಸಂಶೋಧನೆಗಳಿಗಾಗಿ ಸಹಸ್ರಾರು ಕೋಟಿ ರೂಪಾಯಿಗಳನ್ನು ವಯಯಿಸುವ ಸಾಮರ್ಥ್ಯವು ಇಂತಹ ಔಷದ ತಯಾರಿಕಾ ಸಂಸ್ಥೆಗಲ್ಲಿಗೆ ಇದೆ. ಖಾಸಗಿ ಹಾಗೂ ಸರಕಾರಿ ಕೃಪಾಪೋಷಿತ ಸಂಶೋಧನಾ ಕೇಂದ್ರಗಳಿಗೆ ಈ ರೀತಿಯ ಆರ್ಥಿಕ ಸಾಮರ್ಥ್ಯ ಇಲ್ಲದಿರುವುದು ಅವುಗಳ ಹಿನ್ನಡೆಗೆ ಪ್ರಮುಖ ಕಾರಣವೆನಿಸಿದೆ. 

ನೂತನ ಔಷದಗಳ ಸಂಶೋಧನೆಯು ಸಂಕೀರ್ಣ ಹಾಗೂ ಸುದೀರ್ಘ ಕಾಲ ನಡೆಯುವ ಕಾರ್ಯವಾಗಿದ್ದು, ಇದಕ್ಕೆ ಐದರಿಂದ ಹತ್ತು ವರ್ಷಗಳ ಅವಧಿಯೊಂದಿಗೆ, ಕೋಟ್ಯಂತರ ರೂಪಾಯಿಗಳು ವೆಚ್ಚವಾಗುತ್ತವೆ. ಅಂತಿಮವಾಗಿ ಮಾರುಕಟ್ಟೆಯನ್ನು ಪ್ರವೇಶಿಸುವ ನಿರ್ದಿಷ್ಟ ಔಷದವನ್ನು ಸಂಶೋಧಿಸಿದ ಔಷದ ತಯಾರಿಕಾ ಸಂಸ್ಥೆಗಳು, ಅಲ್ಪಾವಧಿಯಲ್ಲೇ ತಾವು ವ್ಯಯಿಸಿದ ಮೊತ್ತಕ್ಕಿಂತಲೂ ಹಲವಾರು ಪಟ್ಟು ಅಧಿಕ ಲಾಭವನ್ನು ಗಳಿಸುತ್ತವೆ. 

ಪ್ರಸ್ತುತ ಬಳಕೆಯಲ್ಲಿರುವ ಅಧಿಕತಮ ಆಧುನಿಕ ಔಷದಗಳನ್ನು ಪ್ರಯೋಗಾಲಯಗಳಲ್ಲಿ ಪ್ರಾನುಗಳ ಮೇಲೆ ಹಾಗೂ ತದನಂತರ ಮನುಷ್ಯರ ಮೇಲೆ ಪ್ರಯೋಗಿಸಿ ಪರೀಕ್ಷಿಸಲಾಗಿದೆ. ಇತ್ತೀಚಿನ ಕೆಲವರ್ಷಗಳಿಂದ ಇಂತಹ ಪ್ರಯೋಗಗಳ ವಿಧಿವಿಧಾನಗಳಲ್ಲಿ ಅವಶ್ಯಕ ಪರಿವರ್ತನೆಗಳನ್ನು ಜಾರಿಗೆ ತಂದಿದ್ದು, ಕಟ್ಟುನಿಟ್ಟಿನ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. 

ಸಂಶೋಧನೆಯ ಹಂತಗಳು 

ಅನೇಕ ಔಷದಗಳನ್ನು ಅಥವಾ ಮೂಲದ್ರವ್ಯಗಳನ್ನು ಹೆಚ್ಚಾಗಿ ಸಸ್ಯಮೂಲಗಳಿಂದಲೇ ಪಡೆಯಲಾಗುತ್ತಿದ್ದರೂ, ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಔಷದಗಳು ಸಂಯೋಜಿತ ರಾಸಾಯನಿಕಗಳ ಮಿಶ್ರಣಗಳಿಂದ ಸಿದ್ಧಪಡಿಸಿದವುಗಳೇ ಆಗಿವೆ. ಇತ್ತೀಚಿನ ಕೆಲವರ್ಷಗಳಲ್ಲಿ ಬಯೋ ಟೆಕ್ನಾಲಜಿ ಮತ್ತು ಜೆನೆಟಿಕ್ ಎಂಜಿನಿಯರಿಂಗ್ ತಂತ್ರಜ್ಞಾನಗಳಿಂದಾಗಿ, ನೂತನ ಔಷದಗಳ ಸಂಶೋಧನೆಯಲ್ಲಿ ಇನ್ನಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಸಾಮಾನ್ಯವಾಗಿ ನೂತನವಾಗಿ ಸಂಶೋಧಿಸಲ್ಪಟ್ಟ ಔಷದವೊಂದು ಉಪಯುಕ್ತವೆಂದು ಕಂಡುಬಂದಲ್ಲಿ, ಅದರ ಪರಿಣಾಮಗಳು ಮತ್ತು ಸುರಕ್ಷತೆಯನ್ನು ಮೊದಲು ಪರೀಕ್ಷಿಸಲಾಗುತ್ತದೆ. ಹಲವಾರು ಪ್ರಾಣಿಗಳ ಮೇಲೆ ಈ ಔಷದವನ್ನು ಪ್ರಯೋಗಿಸುವುದರ ಮೂಲಕ ಈ ಪ್ರಾಥಮಿಕ ಅಧ್ಯಯನವನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯನ್ನು ಪ್ರಿ ಕ್ಲಿನಿಕಲ್ ಟೆಸ್ಟಿಂಗ್ ಎಂದು ಕರೆಯುವರು. ಈ ಹಂತದಲ್ಲಿ ಪ್ರಯೋಗಿಸಿದ ಔಷದದ ಬಳಕೆಯಿಂದ ಸಂಭವಿಸಬಹುದಾದ ತೊಂದರೆ- ಅಪಾಯಗಳಿಗಿಂತ, ಇದರಿಂದ ದೊರೆಯುವ ಪ್ರಯೋಜನವೇ ಹೆಚ್ಚೆಂದು ಖಚಿತವಾದಲ್ಲಿ, ಮುಂದಿನ ಹಂತದಲ್ಲಿ ಈ ಔಷದವನ್ನು ಮನುಷ್ಯರ ಮೇಲೆ ಪ್ರಯೋಗಿಸಲಾಗುತ್ತದೆ. ಇದನ್ನು ಕ್ಲಿನಿಕಲ್ ಟ್ರಯಲ್ಸ್ ಎಂದು ಕರೆಯುತ್ತಾರೆ. ಆದರೆ ನೂತನವಾಗಿ ಸಂಶೋಧಿಸಿದ ಯಾವುದೇ ಔಷದವನ್ನು ಮನುಷ್ಯರ ಮೇಲೆ ಪ್ರಯೋಗಿಸುವ ಮುನ್ನ "ಡ್ರಗ್ ಕಂಟ್ರೋಲರ್ ಜನರಲ್' ಇವರ ಅನುಮತಿಯನ್ನು ಪಡೆದುಕೊಳ್ಳಲೇಬೇಕಾಗುತ್ತದೆ. ಈ ಅನುಮತಿಯನ್ನು ಪ್ರಾಣಿಗಳ ಮೇಲೆ ನಡೆಸಿದ್ದ ಅಧ್ಯಯನದ ವರದಿಯ ಆಧಾರದ ಮೇಲೆ ನೀಡಲಾಗುತ್ತದೆ. 

ಮನುಷ್ಯರ ಮೇಲೆ ನಡೆಸುವ ಕ್ಲಿನಿಕಲ್ ಟ್ರಯಲ್ಸ್ ಗಳನ್ನುಮೂರು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ ನಿಯಮಿತ ಸಂಖ್ಯೆಯ ಆರೋಗ್ಯವಂತ ಸ್ವಯಂಸೇವಕರಿಗೆ ಈ ಔಷದವನ್ನು ನೀಡಿ, ಇದರ ಸುರಕ್ಷತೆ ಮತ್ತು ಪ್ರಮಾಣಗಳನ್ನು ನಿರ್ಧರಿಸುವ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸಾಮಾನ್ಯವಾಗಿ ಈ ಹಂತದಲ್ಲಿ ಪರೀಕ್ಷೆಗೆ ಒಳಗಾಗುವ ೨೫೦ ಔಷದಗಳಲ್ಲಿ ಕೇವಲ ೫ ಔಷದಗಳು ಮಾತ್ರ ಮುಂದಿನ ಹಂತಕ್ಕೆ ತೇರ್ಗಡೆಯಾಗುತ್ತವೆ. 

ಮೇಲಿನ ವಿಧಾನದಿಂದ ಔಷದದ ಪ್ರಮಾಣ ಮತ್ತು ಸುರಕ್ಷತೆಗಳನ್ನು ನಿರ್ಧರಿಸಿದ ಬಳಿಕ, ದ್ವಿತೀಯ ಹಂತದಲ್ಲಿ ಇದರ ಪರಿನಾಮಹಾಗೂ ಕಾರ್ಯಕ್ಷಮತೆಗಳೊಂದಿಗೆ ಇದರ ಅಡ್ಡ ಪರಿಣಾಮ- ದುಷ್ಪರಿಣಾಮಗಳ ಬಗ್ಗೆ ಅಧ್ಯಯನವನ್ನೂ ನಡೆಸುತ್ತಾರೆ. ಈ ಹಂತದಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗುವ ಔಷದವು ಅಂತಿಮ ಹಂತಕ್ಕೆ ಆಯ್ಕೆಯಾಗುವುದು. 

ಅಂತಿಮ ಹಂತದಲ್ಲಿ ವಿಭಿನ್ನ ಕೇಂದ್ರಗಳಲ್ಲಿ ಸಾಕಷ್ಟು ಸಂಖ್ಯೆಯ ಸ್ವಯಂಸೇವಕ ರೋಗಿಗಳ ಮೇಲೆ ಈ ಔಷದವನ್ನು ಪ್ರಯೋಗಿಸಿ, ಇದರ ಕಾರ್ಯಕ್ಷಮತೆ- ಒಳ್ಳೆಯ ಪರಿಣಾಮಗಳೊಂದಿಗೆ,ಇದರ ಪ್ರತಿಕೂಲ ಪರಿಣಾಮಗಳು ಮತ್ತು ದೀರ್ಘಕಾಲೀನ ಬಳಕೆಯಿಂದ ಉದ್ಭವಿಸಬಹುದಾದ ದುಷ್ಪರಿಣಾಮಗಳನ್ನು ಅಧ್ಯಯನ ಮಾಡಲಾಗುತ್ತದೆ. ಈ ಹಂತದಲ್ಲಿ ಪರೀಕ್ಷಿಸಲ್ಪಡುವ ಐದು ಔಷದಗಳಲ್ಲಿ ಕೇವಲ ಒಂದು ಔಷದವಷ್ಟೇ ತೇರ್ಗಡೆಯಾಗಿ, ಮಾರುಕಟ್ಟೆಯನ್ನು ಪ್ರವೇಶಿಸಲು ಯಶಸ್ವಿಯಾಗುವುದು ಸಾಮಾನ್ಯ. 

ಈ ರೀತಿಯಲ್ಲಿ ಮೂರು ಹಂತಗಳ ಕ್ಲಿನಿಕಲ್ ಟ್ರಯಲ್ಸ್ ಗಳ ವರದಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿದ ಬಳಿಕ, ನೂತನವಾಗಿ ಸಂಶೋಧಿಸಿದ ಔಷದವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಅನುಮತಿಯನ್ನು ನೀಡಲಾಗುತ್ತದೆ. ವಿವಿಧ ಹಂತಗಳಲ್ಲಿ ಸುದೀರ್ಘಕಾಲ ನಡೆಯುವ ಹಲವು ಅಧ್ಯಯನಗಳ ಬಳಿಕ ನೂತನ ಔಷದವು ಮಾರುಕಟ್ಟೆಯನ್ನು ಪ್ರವೇಶಿಸಿದರೂ, ಮುಂದೆ ಎಂದಾದರೂ ಸಂಭವಿಸಬಹುದಾದ ಆಡ್- ಪ್ರತಿಕೂಲ ಪರಿಣಾಮಗಳ ಬಗ್ಗೆ ವೈದ್ಯರು ಮತ್ತು ಔಷದ ತಯಾರಿಕಾ ಸಂಸ್ಥೆಗಳು ಗಮನವಿರಿಸಬೇಕಾಗುವುದು. ಇದೇ ಕಾರಣದಿಂದಾಗಿ ನಿಮ್ಮ ವೈದ್ಯರು ಸೂಚಿಸುವ ಯಾವುದೇ (  ಹಳೆಯ ಅಥವಾ ನೂತನ) ಔಷದಗಳನ್ನು ಸೇವಿಸಲು ಆರಂಭಿಸಿದ ಬಳಿಕ ಉದ್ಭವಿಸಬಹುದಾದ ಆಡ್- ಅನಪೇಕ್ಷಿತ ಹಾಗೂ ಪ್ರತಿಕೂಲ ಪರಿಣಾಮಗಳನ್ನು ನಿಮ್ಮ ವೈದ್ಯರಿಗೆ ತಿಳಿಸಿರಿ. ಏಕೆಂದರೆ ಕ್ಲಿನಿಕಲ್ ಟ್ರಯಲ್ಸ್ ನ ಸಂದರ್ಭದಲ್ಲಿ ಕಂಡುಬರದಿದ್ದ ಕೆಲವೊಂದು ಪರಿಣಾಮಗಳು, ಮುಂದೆ ಎಂದಾದರೂ ಕಂಡುಬರುವ ಸಾಧ್ಯತೆಗಳಿವೆ. ಜೊತೆಗೆ ಇಂತಹ ಪರಿಣಾಮಗಳನ್ನು ತಿಳಿದುಕೊಳ್ಳುವುದರಿಂದ ವೈದ್ಯರಿಗೆ ಮತ್ತು ಫಾರ್ಮಕೋ ವಿಜಿಲೆನ್ಸ್ ಕೇಂದ್ರಗಳಿಗೆ ನಿರ್ದಿಷ್ಟ ಔಷದವೊಂದರ ಅಪರೂಪದ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಹಾಗೂ ಇದೇ ಔಷದದ ಬಗ್ಗೆ ಇದೇ ರೀತಿಯ ಮಾಹಿತಿಗಳು ಅನ್ಯ ವೈದ್ಯರಿಗೂ ದೊರೆತಿದ್ದಲ್ಲಿ, ಡ್ರಗ್ಸ್ ಕಂಟ್ರೋಲರ್ ಜನರಲ್ ಇವರ ಮೂಲಕ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ಸಹಾಯವಾಗುತ್ತದೆ. 

ಕೊನೆಯ ಮಾತು 

ವಿಶ್ವಾದ್ಯಂತ ವೈದ್ಯಕೀಯ ಸಂಶೋಧಕರು ಆವಿಷ್ಕರಿಸುತ್ತಿರುವ ಔಷದಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಇದೇ ಸಂದರ್ಭದಲ್ಲಿ ವಿಶ್ವದ ಶೇ.೩೦ ರಷ್ಟು ಜನತೆಗೆ ಅತ್ಯವಶ್ಯಕ ಹಾಗೂ ಜೀವರಕ್ಷಕ ಔಷದಗಳು ದುರ್ಲಭವೆನಿಸುತ್ತಿವೆ. ಕೆಲವೊಂದು ರಾಷ್ಟ್ರಗಳಲ್ಲಂತೂ ಈ ಪ್ರಮಾಣವು ಶೇ. ೫೦ ರಷ್ಟಿದೆ. 

ಇಷ್ಟು ಮಾತ್ರವಲ್ಲ, ಲಭ್ಯ ಔಷದಗಳಿಗೆ ಮಣಿಯದ ಅಥವಾ ಪ್ರತಿರೋಧವನ್ನು ಗಳಿಸಿಕೊಂಡಿರುವ ರೋಗಾಣುಗಳ ಸಂಖ್ಯೆಯೂ ವೃದ್ಧಿಸುತ್ತಲೇ ಇದೆ. ಜೊತೆಗೆ ಅನೇಕ ರೋಗಾಣುಗಳು ಕಾಲಕ್ರಮೇಣ ಪರಿವರ್ತನೆಗೊಂಡು, ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವುದರಿಂದಾಗಿ, ತಮ್ಮ ಸಾಂಕ್ರಾಮಿಕತೆ ಮತ್ತು ಮಾರಕತೆಗಳನ್ನು ಮೆರೆಯುತ್ತಿವೆ. ಆದರೂ ವೈದ್ಯಕೀಯ ವಿಜ್ಞಾನಿಗಳು "ಹಠ ಬಿಡದ ತ್ರಿವಿಕ್ರಮ' ನಂತೆಯೇ, ವಿನೂತನ ಔಷದಗಳ ಸಂಶೋಧನೆಯಲ್ಲಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೪- ೧೨- ೨೦೦೮ ರ ಸಂಚಿಕೆಯ ಬಳಕೆದಾರ; ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.


No comments:

Post a Comment