Saturday, January 11, 2014

BOTTLED WATER






                 ಬಾಟಲಿ ನೀರು: ಹರಿಸೀತು ಕಣ್ಣೀರು!

ಒಂದೆರಡು ದಶಕಗಳ ಹಿಂದಿನ ತನಕ ದಕ್ಷಿಣ ಕನ್ನಡ ಜಿಲ್ಲೆಯ ಜನರು ತಮ್ಮ ಮನೆಗೆ ಬಂದ ಅಥಿತಿಗಳಿಗೆ, ಕುದಿಸಿ ತಣಿಸಿದ ನೀರಿನೊಂದಿಗೆ ಬೆಲ್ಲದ ತುಂಡನ್ನು ನೀಡುವ ಸಂಪ್ರದಾಯವಿತ್ತು. ಅಥಿತಿಗಳ ದಣಿವು ಮತ್ತು ಬಾಯಾರಿಕೆಗಳನ್ನು ನೀಗಿಸಲು ಇದು ಉಪಯುಕ್ತವೆನಿಸುತ್ತಿತ್ತು. 

ಆದರೆ ಇಂದು ಬೆಲ್ಲ ಮತ್ತು ಮತ್ತು ನೀರಿನ ಸ್ಥಾನವನ್ನು ಲಘುಪಾನೀಯಗಳು ಅಥವಾ ಬಾಟಲೀಕರಿಸಿದ ಕುಡಿಯುವ ನೀರು ಆಕ್ರಮಿಸಿಕೊಂಡಿರುವುದರಿಂದ, ಹಿಂದಿನ ಸಂಪ್ರದಾಯ ಕಣ್ಮರೆಯಾಗಿದೆ. ಇದರೊಂದಿಗೆ ಖಾಸಗಿ- ಸರಕಾರಿ ಸಮಾರಂಭಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ, ಗಣ್ಯ ವ್ಯಕ್ತಿಗಳ- ಅಥಿತಿಗಳ ಮುಂದೆ ಕುಡಿಯುವ ನೀರಿನ ಬಾಟಲಿಗಳು ರಾರಾಜಿಸುತ್ತವೆ. ಬಹುತೇಕ ಜನರು ಅತ್ಯಂತ ಪರಿಶುದ್ಧ ಮತ್ತು ಆರೋಗ್ಯಕರವೆಂದು ನಂಬಿರುವ ಈ ಬಾಟಲೀಕರಿಸಿದ ನೀರಿನ ಬಳಕೆ ವ್ಯಾಪಕವಾಗಿ ಹೆಚ್ಚಲು ನಿರ್ದಿಷ್ಟ ಕಾರಣಗಳೂ ಇವೆ.

ಆರೋಗ್ಯ ರಕ್ಷಣೆ
 ಮನುಷ್ಯನು ತನ್ನ ಆರೋಗ್ಯದ ರಕ್ಷಣೆಗಾಗಿ  ಅನೇಕ ಮಾರ್ಗೋಪಾಯಗಳನ್ನು ಕಂಡುಹಿಡಿದಿದ್ದಾನೆ. ಇವುಗಳಲ್ಲಿ ಪ್ರಾಣಾಪಾಯಕ್ಕೂ ಕಾರಣವೆನಿಸಬಲ್ಲ "ಜಲಜನ್ಯ ಕಾಯಿಲೆ" ಗಳಿಂದ ರಕ್ಷಿಸಿಕೊಳ್ಳಲು, ಕುಡಿಯುವ ನೀರನ್ನು ಶುದ್ಧೀಕರಿಸಿ ಸುರಕ್ಷಿತವನ್ನಾಗಿಸುವುದೂ ಒಂದಾಗಿದೆ. 

ನಾವು ಕುಡಿಯಲು ಬಳಸುವ ನೀರನ್ನು ಶುದ್ಧೀಕರಿಸಲು ವಿವಿಧ ತಂತ್ರಜ್ಞಾನಗಳು ಹಾಗೂ ಯಂತ್ರಗಳು ಲಭ್ಯವಿದೆ. ಆದರೆ ನೀರನ್ನು ತೆಳ್ಳಗಿನ ಬಟ್ಟೆಯಲ್ಲಿ ಸೋಸಿ, ಒಲೆಯ ಮೇಲಿರಿಸಿದ ಬಳಿಕ ಕುದಿಯಲು ಆರಂಭಿಸಿದ ನಂತರ ಸುಮಾರು ೨೦ ನಿಮಿಷಗಳ ಕಾಲ ಕುದಿಸಿ, ತಣಿಸಿದ ಬಳಿಕ ಬಳಸುವುದು ನಿಶ್ಚಿತವಾಗಿಯೂ ಆರೋಗ್ಯಕರವೆನಿಸುವುದು. 

ಆದರೆ ಇಂದು ಅಧಿಕತಮ ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಕ್ಯಾಂಡಲ್ ಫಿಲ್ಟರ್, ನಲ್ಲಿಗೆ ಜೋಡಿಸುವ ಫಿಲ್ಟರ್, ಅಲ್ಟ್ರಾ ವಯೊಲೆಟ್ ಕಿರಣಗಳು ಅಥವಾ ರಿವರ್ಸ್ ಓಸ್ಮೊಸಿಸ್ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿದ ಉಪಕರಣಗಳನ್ನು ಬಳಸಲಾರಂಭಿಸಿದ್ದಾರೆ. ಮತ್ತೆ ಕೆಲವರಂತೂ ಮಾರುಕಟ್ಟೆಯಲ್ಲಿ ದೊರೆಯುವ ಶುದ್ಧೀಕರಿಸಿದ ಕುಡಿಯುವ ನೀರಿನ ಬಾಟಲಿ- ಜಾಡಿಗಳನ್ನು ದುಬಾರಿ ಬೆಲೆಯನ್ನು ತೆತ್ತು ಖರೀದಿಸಿ ಕುಡಿಯುತ್ತಾರೆ. ಅಂತೆಯೇ ವಿಭಿನ್ನ ವಿಧಾನಗಳನ್ನು ಬಳಸುತ್ತಿರುವ ಪ್ರತಿಯೊಬ್ಬರೂ, ತಾವು ಪರಿಶುದ್ಧವಾದ ನೀರನ್ನೇ ಕುಡಿಯುತ್ತಿದ್ದೇವೆ ಎಂದು ನಂಬಿದ್ದಾರೆ. ಇವೆಲ್ಲಕ್ಕೂ ಮಿಗಿಲಾಗಿ ಪರಿಸರ ಪ್ರದೂಷಣೆಯಿಂದಾಗಿ ಕಲುಷಿತಗೊಂಡಿರುವ ನೀರನ್ನು ಕುಡಿದು, ಕಾಯಿಲೆಗಳನ್ನು ಆಹ್ವಾನಿಸುವ ಬದಲಾಗಿ 'ಬಾಟಲೀಕರಿಸಿದ' ನೀರನ್ನು ಬಳಸುವ ಮೂಲಕ ಇನ್ನಷ್ಟು ಪರಿಸರ ಪ್ರದೂಷಣೆಗೆ ಕಾರಣಕರ್ತರೆನಿಸುತ್ತಾರೆ!. 

ವಾಣಿಜ್ಯ ಸರಕು 

ಶ್ರೀಮಂತ ರಾಷ್ಟ್ರಗಳ ಶ್ರೀಮಂತ ಜನರು ತಮ್ಮ ಅಂತಸ್ತು, ಆರೋಗ್ಯ ಮತ್ತುಅ ಪ್ರತಿಷ್ಠೆಗಳ ದ್ಯೋತಕವಾಗಿ (ಆದರೆ ಅನಾವಶ್ಯಕವಾಗಿ) ಬಳಸಲು ಆರಂಭಿಸಿದ್ದ ಶುದ್ಧೀಕರಿಸಿದ ಕುಡಿಯುವ ನೀರಿನ ಬಾಟಲಿಗಳ ಉತ್ಪಾದನೆಯ ಉದ್ದಿಮೆಯು, ಇದೀಗ ರಕ್ತಬೀಜಾಸುರನೋಪಾದಿಯಲ್ಲಿ ಬೆಳೆಯುತ್ತಿದೆ. 

೨೦೦೬ ರಲ್ಲಿ ಅಮೆರಿಕದ ಪ್ರಜೆಗಳು ೩೧ ಬಿಲಿಯನ್ ಬಾಟಲೀಕರಿಸಿದ ನೀರನ್ನು ಖರೀದಿಸಲು ೧೧ ಬಿಲಿಯನ್ ಡಾಲರ್ ಗಳನ್ನುವ್ಯಯಿಸಿದ್ದರು. ಈ ವಿಚಾರದಲ್ಲಿ ಭಾರತೀಯರೂ ಹಿಂದಿಲ್ಲ. ಜಗತ್ತಿನಲ್ಲಿ ಅತ್ಯಧಿಕ ಬಾಟಲೀಕರಿಸಿದ ನೀರನ್ನು ಬಳಸುವ ದೇಶಗಳ ಪಟ್ಟಿಯಲ್ಲಿ ಭಾರತವು ೧೦ ನೆಯ ಸ್ಥಾನದಲ್ಲಿದೆ. ೧೯೯೦ ರಲ್ಲಿ ಭಾರತೀಯರು ೨ ಮಿಲಿಯನ್ ನೀರಿನ ಬಾಟಲಿಗಳ ಪೆಟ್ಟಿಗೆಗಳನ್ನು ಖರೀದಿಸಿದ್ದು, ೨೦೦೬ ರಲ್ಲಿ ಇದರ ಪ್ರಮಾಣವು ೬೮ ಮಿಲಿಯನ್ ಪೆಟ್ಟಿಗೆಗಳನ್ನು ತಲುಪಿತ್ತು!. 

ಲೀಟರ್ ಒಂದಕ್ಕೆ ನೀವು ೧೫ ರೂ. ಗಳನ್ನೂ ತೆತ್ತು ನೀವು ಖರೀದಿಸುವ ಬಾಟಲೀಕರಿಸಿದ ನೀರಿನ ಶುದ್ಧಾಶುದ್ಧತೆಯ ಬಗ್ಗೆ ಸಾಕಷ್ಟು ವಾದವಿವಾದಗಳಿವೆ. ಇದೇ ದಶಕದ ಆದಿಯಲ್ಲಿ ಭಾರತದ ಪ್ರತಿಷ್ಠಿತ ಸಂಸ್ಥೆಯಾಗಿರುವ "ಸೆಂಟರ್ ಫಾರ್ ಸಯನ್ಸ್ ಎಂಡ್ ಎನ್ವಯರಾನ್ಮೆಂಟ್" ನ ವಿಜ್ಞಾನಿಗಳು ಭಾರತದಲ್ಲಿ ತಯಾರಿಸಲ್ಪಟ್ಟು ಮಾರಾಟವಾಗುವ ವಿವಿಧ ತಯಾರಕರ (ಶುದ್ಧೀಕರಿಸಿದ ಬಾಟಲಿ ನೀರನ್ನು)ಉತ್ಪನ್ನಗಳನ್ನು ಪರೀಕ್ಷಿಸಿ, ಇವುಗಳು ಪರಿಶುದ್ಧವಾಗಿಲ್ಲ ಎಂದು ಘೋಷಿಸಿದ್ದರು. ಕಳೆದ ತಿಂಗಳಿನಲ್ಲಿ ವಿಶ್ವವಿಖ್ಯಾತ ಬಹುರಾಷ್ಟ್ರೀಯ ಸಂಸ್ಥೆಯೊಂದು (ಅಮೇರಿಕಾದಲ್ಲಿ) ತಾನು ಮಾರಾಟಮಾಡುತ್ತಿರುವ ಬಾಟಲೀಕರಿಸಿದ ನೀರು "ಕೇವಲ ನಳ್ಳಿ ನೀರಲ್ಲದೇ ಬೇರೇನೂ ಅಲ್ಲ" ಎಂದು ಅನಿವಾರ್ಯವಾಗಿ ಒಪ್ಪಿಕೊಂಡಿತ್ತು!. 

ಭಾರತದಲ್ಲಿ ಮಾರಾಟವಾಗುತ್ತಿರುವ ಶುದ್ಧೀಕರಿಸಿದ ಬಾಟಲೀಕರಿಸಿದ ನೀರಿನ ಗುಣಮಟ್ಟ- ಶುದ್ಧತೆಗಳು ನಿಗದಿತ ಮಟ್ಟದಲ್ಲಿ ಇರುವುದಿಲ್ಲ. ಏಕೆಂದರೆ ನಮ್ಮ ದೇಶದಲ್ಲಿ "ISI" ಪ್ರಮಾಣಪತ್ರವನ್ನು ನೀಡುವ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ಸಂಸ್ಥೆಗೆ, ಭಾರತದ ಸಹಸ್ರಾರು ಬಾಟಲೀಕರಿಸಿದ ನೀರಿನ ಉತ್ಪಾದನಾ ಸಂಸ್ಥೆಗಳು ತಮ್ಮ ಉತ್ಪನ್ನಗಳಿಗೆ ಪ್ರಮಾಣಪತ್ರವನ್ನು ನೀಡಲು ಅರ್ಜಿಯನ್ನು ಸಲ್ಲಿಸಿವೆ. ಆದರೆ ಈ ಸಂಸ್ಥೆಯ ಬಳಿ ನೀರಿನ ಗುಣಮಟ್ಟ ಹಾಗೂ ಶುದ್ಧಾಶುದ್ಧತೆಗಳನ್ನು ಪರೀಕ್ಷಿಸಲು ಬೇಕಾದ ವ್ಯವಸ್ಥೆ- ಸೌಲಭ್ಯಗಳು ಇಲ್ಲದಿರುವುದರಿಂದ, ನಮಗೆ ದೊರೆಯುತ್ತಿರುವ ಬಾಟಲೀಕರಿಸಿದ ನೀರಿನ ಪರಿಶುದ್ಧತೆಗೆ ಯಾವುದೇ ಖಾತರಿ ಇಲ್ಲದಂತಾಗಿದೆ!.

  ಲಾಭದಾಯಕ ಉದ್ದಿಮೆ 

ಬಡ ಭಾರತದಲ್ಲಿ ೧೯೯೯-೨೦೦೪ ರ ಅವಧಿಯಲ್ಲಿ ಈ ನೀರಿನ ಬಾಟಲಿಗಳ ಮಾರಾಟವು ಐದು ಪಟ್ಟು ಹೆಚ್ಚಿತ್ತು. ವಾರ್ಷಿಕ ಶೇ.೪೦ ರಷ್ಟು ವೃದ್ಧಿಸುತ್ತಿರುವ ಹಾಗೂ ಸಹಸ್ರಾರು ಕೋಟಿ ರೂಪಾಯಿಗಳ ಈ ಉದ್ದಿಮೆಯು ಅತ್ಯಂತ ಲಾಭದಾಯಕವೆನಿಸಿದೆ. ಇದೇ ಕಾರಣದಿಂದಾಗಿ ಭಾರತದಾದ್ಯಂತ ಈಗಾಗಲೇ ೧೦೦೦ ಕ್ಕೂ ಅಧಿಕ ವಾಣಿಜ್ಯ ಸಂಸ್ಥೆಗಳು ಈ ವ್ಯವಹಾರವನ್ನು ಪ್ರಾರಂಭಿಸಿವೆ. 

ಭಾರತದಲ್ಲಿ ಭದ್ರವಾಗಿ ಬೇರೂರಿರುವ ಕೆಲ ಬಹುರಾಷ್ಟ್ರೀಯ ಸಂಸ್ಥೆಗಳು, ಅನೇಕ ರಾಜ್ಯಗಳಲ್ಲಿ ಈ ಉದ್ದಿಮೆಯನ್ನು ಆರಂಭಿಸಿ, ಅತ್ಯಲ್ಪ ವೆಚ್ಚದಲ್ಲಿ ಅಪಾರ ಲಾಭವನ್ನು ಗಳಿಸುತ್ತಿವೆ. ಬರಪೀಡಿತ ಜೈಪುರದಲ್ಲಿ ಇಂತಹ ಘಟಕವೊಂದನ್ನು ಆರಂಭಿಸಿರುವ ಸಂಸ್ಥೆಯೊಂದು, ಕೊಳವೆ ಬಾವಿಯೊಂದನ್ನು ಕೊರೆದು ಪ್ರತಿನಿತ್ಯ ಲಕ್ಷಾಂತರ ಲೀಟರ್ ನೀರನ್ನು ಬಳಸುತ್ತಿದೆ. ಅಗಾಧ ಪ್ರಮಾಣದ ನೀರನ್ನು ಬಳಸಿದರೂ, ಇದಕ್ಕಾಗಿ ಸ್ಥಳೀಯ ಸಂಸ್ಥೆಗೆ ಕೆಲ ವರ್ಷಗಳ ಹಿಂದಿನ ತನಕ ಕೇವಲ ೨೪,೦೦೦ ರೂ.ಗಳನ್ನೂ ವರ್ಷದಲ್ಲೊಮ್ಮೆ ಪಾವತಿಸುತ್ತಿತ್ತು!. ಅರ್ಥಾತ್ ೧೦೦೦ ಲೀಟರ್ ನೀರಿಗೆ ಕೇವಲ ೧೪ ಪೈಸೆ ಶುಲ್ಕವನ್ನು ನೀಡುತ್ತಿತ್ತು. ಅಂದರೆ ತಾನು ಸಿದ್ಧಪಡಿಸುತ್ತಿದ್ದ ಒಂದು ಲೀಟರ್ ಬಾಟಲೀಕರಿಸಿದ ನೀರಿಗೆ, ಈ ಸಂಸ್ಥೆಯು ೦.೦೨ ರಿಂದ ೦.೦೩ ಪೈಸೆಗಳನ್ನು ವ್ಯಯಿಸುತ್ತಿತ್ತು!. 

ಅದೇ ರೀತಿಯಲ್ಲಿ ಈ ನೀರನ್ನು ಶುದ್ಧೀಕರಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸಿದರೂ, ಒಂದು ಲೀಟರ್ ನೀರಿನ ಶುದ್ಧೀಕರಣದ ವೆಚ್ಚ ಕೇವಲ ೨೫ ಪೈಸೆಗಳಾಗುತ್ತವೆ. ವಿಶೇಷವೆಂದರೆ ಈ ಶುದ್ಧೀಕರಿಸಿದ ನೀರನ್ನು ತುಂಬಿಸಿ ಮಾರಾಟಮಾಡುವ ಪ್ಲಾಸ್ಟಿಕ್ ಬಾಟಲಿಯೊಂದಕ್ಕೆ ೩ ರಿಂದ ೪ ರೂ. ಹಾಗೂ ಇವುಗಳ ಸಾಗಾಟ ಮತ್ತು ತಮ್ಮ ಉತ್ಪನ್ನದ ಜಾಹೀರಾತುಗಳಿಗಾಗಿ ವ್ಯಯಿಸುವ ಮೊತ್ತವನ್ನು ಸೇರಿಸಿದ ಬಳಿಕವೂ, ತಯಾರಕರಿಗೆ ಇದು ಹೊರೆಯೆನಿಸುವುದಿಲ್ಲ. ಇದೇ ಕಾರಣದಿಂದ ಬಾಟಲಿಯೊಂದಕ್ಕೆ ೧೫ ರೂ. ಗಳಂತೆ ಮಾರಾಟವಾಗುವ ಈ ವಾಣಿಜ್ಯ ಸರಕು, ಇದರ ತಯಾರಕರಿಗೆ ಕೈತುಂಬಾ ಲಾಭವನ್ನು ತಂದುಕೊಡುವುದರಲ್ಲಿ ಸಂದೇಹವಿಲ್ಲ. 

ವಿಶೇಷವೆಂದರೆ ಸ್ಥಳೀಯ ಸಂಸ್ಥೆಗಳು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಜನಸಾಮಾನ್ಯರಿಗೆ ಪ್ರತಿನಿತ್ಯ ಪೂರೈಸುವ ಶುದ್ಧೀಕರಿಸಿದ ಕುಡಿಯುವ ನೀರಿನ ದರವನ್ನು ಹೆಚ್ಚಿಸಿದಾಗ ತೀವ್ರವಾಗಿ ಪ್ರತಿಭಟಿಸುವ ಜನಸಾಮಾನ್ಯರು, ದುಬಾರಿ ಬೆಲೆಯನ್ನು ತೆತ್ತು ನೀರಿನ ಬಾಟಲಿಗಳನ್ನು ಖರೀದಿಸಿ ಕುಡಿಯುವುದು ನಂಬಲಸಾಧ್ಯವೆನಿಸುತ್ತದೆ. 

ಅಮೆರಿಕ- ಯುರೋಪ್ ಗಳಲ್ಲಿ ಸಾರ್ವಜನಿಕ ವ್ಯವಸ್ಥೆಯಲ್ಲಿ ಸರಬರಾಜು ಮಾಡುವ ನೀರಿನ ಗುಣಮಟ್ಟ- ಪರಿಶುದ್ಧತೆಗಳು, ಅಲ್ಲಿ ದೊರೆಯುವ ಬಾಟಲೀಕರಿಸಿದ ನೀರಿಗಿಂತಲೂ ಉತ್ತಮವಾಗಿರುತ್ತದೆ!. ಏಕೆಂದರೆ ಅಲ್ಲಿನ ಸರಕಾರಗಳು ಇದಕ್ಕೆ ನಿರ್ದಿಷ್ಟ ಮಾನದಂಡಗಳನ್ನು ನಿಗದಿಸಿದ್ದು, ಇದರ ಪರಿಪಾಲನೆ ಸಮರ್ಪಕವಾಗಿ ನಡೆಯುತ್ತಿದೆಯೇ ಎಂದು ಆಗಾಗ ಪರಿಶೀಲಿಸಲಾಗುತ್ತದೆ. ನಮ್ಮ ದೇಶದಲ್ಲಿನ ಸ್ಥಳೀಯಾಡಳಿತ  ಸಂಸ್ಥೆಗಳು ಸರಬರಾಜು ಮಾಡುವ ಕುಡಿಯುವ ನೀರಿಗೆ ಒಂದಿಷ್ಟು ಅಧಿಕ ಶುಲ್ಕವನ್ನು ತೆರಲು ಜನರು ಸಿದ್ಧರಿದ್ದಲ್ಲಿ, ಅದೇ ಗುಣಮಟ್ಟದ ನೀರನ್ನು ನಮಗೆ ಪೂರೈಸುವುದು ಅಸಾಧ್ಯವೇನಲ್ಲ.

ಪರಿಸರಕ್ಕೆ ಹಿತಕರವಲ್ಲ 

ಶುದ್ಧೀಕರಿಸಿದ ನೀರಿನ ಬಾಟಲಿಗಳ ಉದ್ದಿಮೆಯಿಂದಾಗಿ ಪೋಲಾಗುವ ಅಗಾಧ ಪ್ರಮಾಣದ ನೀರು, ವಿದ್ಯುತ್ ಶಕ್ತಿ ಹಾಗೂ ಬಾಟಲಿಗಳ  ತಯಾರಿಕೆ ಮತ್ತು ಸಾಗಾಟ ಗಳಿಗಾಗಿ ಬಳಸಲ್ಪಡುವ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಇವೆಲ್ಲಕ್ಕಿಂತ ಮಿಗಿಲಾಗಿ ಬಳಸಿ ಎಸೆದ ಖಾಲಿ ಬಾಟಲಿಗಳಿಂದ ಸಂಭವಿಸುವ ಪರಿಸರ ಪ್ರದೂಷಣೆ ಹಾಗೂ ಜಾಗತಿಕ  ತಾಪಮಾನದ ಏರಿಕೆಗಳು ಮನುಕುಲಕ್ಕೆ ಮಾರಕವೆನಿಸುತ್ತಿವೆ. ಮಾತ್ರವಲ್ಲ, ಶುದ್ಧೀಕರಿಸಿದ ನೀರನ್ನು ಸಿದ್ಧಪಡಿಸುವ ಘಟಕಗಳಿಂದ ಹೊರಬೀಳುವ ತ್ಯಾಜ್ಯಗಳಿಂದಾಗಿ, ಸುತ್ತಮುತ್ತಲಿನ ಜಲಮೂಲಗಳೂ ಕಲುಷಿತಗೊಳ್ಳುತ್ತಿವೆ. ಈ ಅಪಾಯಕಾರಿ ಬೆಳವಣಿಗೆಯನ್ನು ಅಧ್ಯಯನ ಮಾಡಿರುವ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು, ಈ ಸಮಸ್ಯೆಯ ನಿವಾರಣೆಯತ್ತ ಗಮನಹರಿಸುತ್ತಿವೆ. 

ಅಮೆರಿಕದ ಸಾನ್ ಫ್ರಾನ್ಸಿಸ್ಕೋ ನಗರದ ಸರಕಾರಿ ಕಛೇರಿಗಳಲ್ಲಿ ಬಾಟಲೀಕರಿಸಿದ ನೀರಿನ ಬಳಕೆಯನ್ನು ಇತ್ತೀಚಿಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಏಕೆಂದರೆ ಅಮೆರಿಕದಲ್ಲಿ ದಿನನಿತ್ಯ ೬೦ ಮಿಲಿಯನ್ ನೀರಿನ ಬಾಟಲಿಗಳನ್ನು ಬಳಸಿ ಎಸೆಯಲಾಗುತ್ತಿದೆ. ತ್ಯಾಜ್ಯ ವಿಲೇವಾರಿಯ ಸಮಸ್ಯೆ ಹಾಗೂ ಇದರಿಂದಾಗಿ ಸಂಭವಿಸುವ ಪರಿಸರ ಪ್ರದೂಷಣೆಗಳು ಈ ಸರಕಾರಗಳಿಗೆ ತಲೆನೋವಾಗಿ ಪರಿಣಮಿಸಿವೆ. ಸಾಲ್ಟ್ ಲೇಕ್ ಸಿಟಿಯ ಸರಕಾರಿ ನೌಕರರು ಯಾವುದೇ ಸಭೆ ಸಮಾರಂಭಗಳಲ್ಲಿ ಕುಡಿಯುವ ನೀರಿನ ಬಾಟಲಿಗಳನ್ನು ಪೂರೈಸದಂತೆ ಅಲ್ಲಿನ ಮೇಯರ್ ಆದೇಶಿಸಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿನ ವಿಲಾಸಿ ಹೋಟೆಲ್ ಗಳು ತಮ್ಮ ಗ್ರಾಹಕರಿಗೆ ಬಾಟಲೀಕರಿಸಿದ ನೀರನ್ನು ಒದಗಿಸುವುದನ್ನೇ ನಿಲ್ಲಿಸಿದ್ದವು!.

ಬಾಟಲೀಕರಿಸಿದ ನೀರನ್ನು ದುಬಾರಿ ಬೆಲೆಯನ್ನು ತೆತ್ತು ಖರೀದಿಸಿ ಕುಡಿಯುವ ಹವ್ಯಾಸವನ್ನು ನಾವು ಪಾಶ್ಚಾತ್ಯರಿಂದ ಕಲಿತಿರುವುದು ಸತ್ಯ. ಆದರೆ ಇದೀಗ ಪಾಶ್ಚಾತ್ಯರು ಇದನ್ನು ವರ್ಜಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳನ್ನು ಅನುಕರಿಸಲು ನಾವು ಸಿದ್ದರಿದ್ದೇವೆಯೇ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಷ್ಟೇ. ಜೊತೆಗೆ ಬಾಟಲೀಕರಿಸಿದ ನೀರಿನಿಂದಾಗಿ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಹರಿಸಲು ಪಾಶ್ಚಾತ್ಯರು ಕೈಗೊಂಡಿರುವ ನಿರ್ದಾಕ್ಷಿಣ್ಯ ಕ್ರಮಗಳನ್ನು ಭಾರತೀಯರು ಅನುಸರಿಸುವುದು ಅಸಾಧ್ಯವೇನಲ್ಲ. 

ಒಂದು ಲೀಟರ್ ಬಾಟಲೀಕರಿಸಿದ ನೀರಿನ ಬೆಲೆಯಲ್ಲೇ, ಸ್ಥಳೀಯಾಡಳಿತ ಸಂಸ್ಥೆಗಳು ಪೂರೈಸುವ ಒಂದು ಸಾವಿರ ಲೀಟರ್ ಶುದ್ಧೀಕರಿಸಿದ ಕುಡಿಯುವ ನೀರಿನ ಒಂದು ಅಂಶವನ್ನು ೨೦ ನಿಮಿಷಗಳ ಕಾಲ ಕುದಿಸಿ, ತಣಿಸಿ ಕುಡಿಯುವುದು ಆರೋಗ್ಯಕರ ಎನಿಸೀತು. ಇದರಿಂದಾಗಿ ಈಗಾಗಲೇ ಮಿತಿಮೀರುತ್ತಿರುವ ಪರಿಸರ ಪ್ರದೂಷಣೆ ಹಾಗೂ ಜಲಮೂಲಗಳು ಕಳುಶಿತವಾಗುವ ಮತ್ತು ಜಾಗತಿಕ ತಾಪಮಾನದ ಹೆಚ್ಚಳವನ್ನು ತಡೆಗಟ್ಟುವುದು- ನಿಯಂತ್ರಿಸುವುದು ನಿಶ್ಚಿತವಾಗಿಯೂ ಸುಲಭಸಾಧ್ಯವೆನಿಸೀತು.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು
ಉದಯವಾಣಿ ಪತ್ರಿಕೆಯ ಡಿ. ೧೩-೦೯- ೨೦೦೭ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.

No comments:

Post a Comment