Thursday, January 16, 2014

RENAL CALCULUS

    ಅಚ್ಚರಿ ಮೂಡಿಸಬಲ್ಲ ಮೂತ್ರಾಶ್ಮರಿ!


ಸಂಸ್ಕೃತ ಭಾಷೆಯಲ್ಲಿ “ಅಶ್ಮರಿ” ಎಂದರೆ ಕಲ್ಲು ಎಂದರ್ಥ. ಮಾನವನ ಮೂತ್ರಾಂಗಗಳಲ್ಲಿ ಉದ್ಭವಿಸಬಲ್ಲ ಅಶ್ಮರಿಗಳನ್ನುಸಹಸ್ರಾರು ವರ್ಷಗಳ ಹಿಂದೆಯೇ ಆಯುರ್ವೇದ ಸಂಹಿತೆಗಳಲ್ಲಿ “ಮೂತ್ರಾಶ್ಮರಿ" ಎಂದು ವಿಶದವಾಗಿ ವರ್ಣಿಸಲಾಗಿದೆ. ಅಚ್ಚರಿ ಮೂಡಿಸಬಲ್ಲ ಈ ಮೂತ್ರಾಶ್ಮರಿಯ ಬಗ್ಗೆ ನೀವು ತಿಳಿದಿರಲೇ ಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ.


ಎಂದಿನಂತೆಯೇ ರಾತ್ರಿಯ ವಾಕಿಂಗ್ ಮುಗಿಸಿ ಮನೆಗೆ ಮರಳಿದ ಅನಂತನಿಗೆ ತುಸು ಹೊತ್ತಿನ ಬಳಿಕ ಹೊಟ್ಟೆಯ ಬಲಭಾಗದಲ್ಲಿ ಚೂರಿಯಿಂದ ತಿವಿದಂತೆ ತೀವ್ರ ನೋವು ಪ್ರಾರಂಭವಾಗಿತ್ತು. ಸ್ನೇಹಿತನ ಜನ್ಮ ದಿನಾಚರಣೆಯ ಔತಣಕೂಟದಲ್ಲಿ ತಾನು ಸೇವಿಸಿದ ಮಧು- ಮಾಮ್ಸಗಲೇ ಈ ಹೊಟ್ಟೆನೋವಿಗೆ ಕಾರಣವೆಂದು ಭಾವಿಸಿದ ಅನಂತನು, ಗಂಟಲಿಗೆ ಬೆರಳು ಹಾಕಿ ಪ್ರಯತ್ನಪೂರ್ವಕವಾಗಿ ತಿಂದದ್ದನ್ನೆಲ್ಲವನ್ನೂ ವಾಂತಿಮಾಡಿದ್ದನು. ಬಳಿಕ ಒಂದೆರಡು ಅಂಟಾಸಿಡ್ ಮಾತ್ರೆಗಳನ್ನು ಚಪ್ಪರಿಸಿ, ತನ್ನ ವೈದ್ಯಮಿತ್ರನೊಬ್ಬ ಹಿಂದೊಮ್ಮೆ ಹೇಳಿದಂತೆ ಫ್ರಿಜ್ ನಲ್ಲಿರಿಸಿದ ತಣ್ಣನೆಯ ಹಾಲನ್ನು ಗಟಗಟನೆ ಕುಡಿದಿದ್ದನು. ಆದರೆ ಅನಂತನ “ಗ್ಯಾಸ್ ಟ್ರಬಲ್’ ಮಾತ್ರ ಕಡಿಮೆಯಾಗಲೇ ಇಲ್ಲ.


ಅರ್ಧ ತಾಸು ಕಳೆಯುವಷ್ಟರಲ್ಲೇ ನೋವಿನ ತೀವ್ರತೆ ಇನ್ನಷ್ಟು ಹೆಚ್ಚಾಗಿ, ಅನಂತನಿಗೆ ಕುಳಿತುಕೊಳ್ಳಲು ಅಥವಾ ಮಲಗಲೂ ಆಗದಂತಹ ಸ್ಥಿತಿ ಉಂಟಾಗಿತ್ತು. ಅತೀವ ನೋವಿನಿಂದ ಚಡಪಡಿಸುತ್ತಿದ್ದ ಪತಿಯ ಅವಸ್ಥೆಯನ್ನು ಕಂಡು ಗಾಬರಿಗೊಂಡ ಆರತಿಯು, ತಮ್ಮ ಕುಟುಂಬ ವೈದ್ಯರನ್ನು ಮನೆಗೆ ಕರೆಸಿದ್ದಳು. ಅನಂತನನ್ನು ಅಮೂಲಾಗ್ರವಾಗಿ ಪರೀಕ್ಷಿಸಿದ ವೈದ್ಯರಿಗೆ “ಮೂತ್ರಾಶ್ಮರಿ" ಯಾ ಬಗ್ಗೆ ಸಂದೇಹಮೂಡಿತ್ತು. ಆದರೆ ಅನಂತನ ಅಭಿಪ್ರಾಯದಂತೆ ಆತನನ್ನು ಕಾಡುತ್ತಿದ್ದ “ಗ್ಯಾಸ್ಟ್ರಿಕ್" ತೊಂದರೆಯೇ ಹೊಟ್ಟೆನೋವಿಗೆ ಕಾರಣವಾಗಿತ್ತು. ಹೊಟ್ಟೆನೋವಿನ ಶಮನಕ್ಕಾಗಿ ಚುಚ್ಚುಮದ್ದನ್ನು ನೀಡಿದ ವೈದ್ಯರು, ಮರುದಿನ ಮುಂಜಾನೆ ಆಹಾರ ಸೇವನೆಗೆ ಮುನ್ನ ಉದರದ “ಅಲ್ಟ್ರ ಸೌಂಡ್ ಸೋನೋಗ್ರಾಂ” ಮಾಡಿಸಲು ಆದೇಶಿಸಿದರು.


ಚುಚ್ಚು ಮದ್ದಿನ ಪ್ರಭಾವದಿಂದ ನೋವು ಕಡಿಮೆಯಾಗಿ ಚೇತರಿಸಿಕೊಂಡಿದ್ದ ಅನಂತನಿಗೆ ವೈದ್ಯರ “ರೋಗ ನಿದಾನ" (ಡಯಾಗ್ನೋಸಿಸ್) ಬಗ್ಗೆ ಸಂದೇಹ ಮೂಡಿತ್ತು. ಇದೇ ಕಾರಣದಿಂದಾಗಿ ಮರುದಿನ ಮುಂಜಾನೆ ಸೋನೋಗ್ರಾಂ ಮಾಡಿಸದೇ, ತುರ್ತು ಕೆಲಸದ ಮೇಲೆ ಮಂಗಳೂರಿಗೆ ಹೋಗಿದ್ದನು. ಅದೇ ರಾತ್ರಿ ಮತ್ತೆ ಮರುಕಳಿಸಿದ ನೋವಿನ ಬಾಧೆಯನ್ನು ತಡೆಯಲಾರದೇ, ನೆಲದ ಮೇಲೆ ಹೊರಳಾಡಲು ಆರಂಭಿಸಿದ ಅನಂತನ ಶರೀರವಿಡೀ ಬೆವರಿನಿಂದ ತೋಯ್ದು ತೊಪ್ಪೆಯಾಗಿತ್ತು. ನೋವನ್ನು ಸಹಿಸಲಾರದೇ ವೈದ್ಯರನ್ನು ಮನೆಗೆ ಕರೆಸಿದ ಅನಂತನು ಅರೆಜೀವವಾದಂತೆ ಕಾಣುತ್ತಿದ್ದನು.


ಅನಂತನ ಅವಾಂತರವನ್ನು ಕಂಡು ಮರುಕ ಹುಟ್ಟಿದರೂ, ಹಿಂದಿನ ರಾತ್ರಿ ತಾನು ನೀಡಿದ ಆದೇಶವನ್ನು ಪರಿಪಾಲಿಸದ ಬಗ್ಗೆ ವೈದ್ಯರಿಗೆ ಕೊಂಚ ಅಸಮಾಧಾನವೂ ಆಗಿತ್ತು. ಆದರೆ ಕ್ಷಣಮಾತ್ರದಲ್ಲಿ ತನ್ನ ತಪ್ಪಿಗಾಗಿ ಕ್ಷಮೆಯಾಚಿಸಿದ ಅನಂತನನ್ನು ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದರು.


ಮರುದಿನ ಮುಂಜಾನೆ ಅವಶ್ಯಕ ಪರೀಕ್ಷೆಗಳನ್ನು ನಡೆಸಿದ ಬಳಿಕ ಅನಂತನ ಎರಡೂ ಮೂತ್ರಪಿಂಡಗಳಲ್ಲಿ ಹಾಗೂ ಬಲಬದಿಯ ಮೂತ್ರನಾಳದಲ್ಲಿ ಹಲವಾರು ಕಲ್ಲುಗಳು ಪತ್ತೆಯಾಗಿದ್ದವು!.


ಮೂತ್ರಾಶ್ಮರಿ ಎಂದರೇನು?


ಮನುಷ್ಯನ ಮೂತ್ರದಲ್ಲಿ ಸ್ವಾಭಾವಿಕವಾಗಿ ಇರುವಂತಹ ಲವಣಗಳು ವಿಶಿಷ್ಟ ಹಾಗೂ ಸಂಕೀರ್ಣ ಪ್ರಕ್ರಿಯೆಗಳ ಪರಿಣಾಮವಾಗಿ ಹರಳಿನಂತೆ ಪರಿವರ್ತನೆಗೊಳ್ಳುವುದರಿಂದ”ಮೂತ್ರಾಶ್ಮರಿ' ಉದ್ಭವಿಸುವುದು. ನಮ್ಮ ರಕ್ತದಲ್ಲಿ ನಿರಂತರವಾಗಿ ಸಂಗ್ರಹವಾಗುವ ತ್ಯಾಜ್ಯಗಳನ್ನು “ಸೋಸುವ" ಹಾಗೂ ಹೆಚ್ಚುವರಿ ನೀರನ್ನು ಶರೀರದಿಂದ ಹೊರಹಾಕುವ ಕಾರ್ಯವನ್ನು ನಿರ್ವಹಿಸುವ ಮೂತ್ರಪಿಂಡಗಳೇ ಮೂತ್ರಾಶ್ಮರಿಯ ಉಗಮಸ್ಥಾನಗಳಾಗಿವೆ.

 

ಅಶ್ಮರಿಯ ವೈವಿಧ್ಯಗಳು


ಸಾಮಾನ್ಯವಾಗಿ ಆಕ್ಸಲೇಟ್, ಫಾಸ್ಫೇಟ್, ಯೂರಿಕ್ ಎಸಿಡ್- ಯೂರೇಟ್ ಮತ್ತು ಸಿಸ್ಟೈನ್ ಎನ್ನುವ ಕಲ್ಲುಗಳು ಮನುಷ್ಯನ ಮೂತ್ರಾಂಗಗಳಲ್ಲಿ ಕಂಡುಬರುತ್ತವೆ. ಆದರೆ ಹೆಚ್ಚಿನ ರೋಗಿಗಳಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಹಾಗೂ ಕ್ಯಾಲ್ಸಿಯಂ ಫಾಸ್ಫೇಟ್ ಅಥವಾ ಇವೆರಡರ ಸಮ್ಮಿಶ್ರಣದ ಕಲ್ಲುಗಳು ಹೆಚ್ಚಾಗಿ ಪತ್ತೆಯಾಗುತ್ತವೆ. ಕೆಲ ವ್ಯಕ್ತಿಗಳಲ್ಲಿ ಅಮೋನಿಯಂ ಫಾಸ್ಫೇಟ್ ಹಾಗೂ ಮ್ಯಾಗ್ನೆಸಿಯಂ ಫಾಸ್ಫೇಟ್ ಅಥವಾ ಇವೆರಡರ ಸಮ್ಮಿಶ್ರಣದ ಕಲ್ಲುಗಳು ಉದ್ಭವಿಸಿವುದುಂಟು.


ಫಾಸ್ಫೇಟ್ ಕಲ್ಲುಗಳು ಕ್ಷಾರೀಯ ಮೂತ್ರದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆಯುವುದರಿಂದಾಗಿ, ಪ್ರಾರಂಭಿಕ ಹಂತದಲ್ಲಿ ಇವುಗಳ ಇರುವಿಕೆಯ ಬಗ್ಗೆ ರೋಗಿಗಳಿಗೆ ಯಾವುದೇ ರೀತಿಯ ಸುಳಿವು ಸಿಗುವುದಿಲ್ಲ.ಆಮ್ಲೀಯ ಮೂತ್ರದಲ್ಲಿ ಉದ್ಭವಿಸುವ ಸಿಸ್ಟೈನ್ ಕಲ್ಲುಗಳು, ಅಪರೂಪದಲ್ಲಿ ಎಳೆಯ ಹುಡುಗಿಯರಲ್ಲಿ ಕಂಡುಬರುವುದು. ಆದರೆ ಅಮೋನಿಯಂ ಮತ್ತು ಸೋಡಿಯಂ ಯೂರೇಟ್ ಕಲ್ಲುಗಳು, ಸಾಮಾನ್ಯವಾಗಿ ಮಕ್ಕಳಲ್ಲಿ ಮಾತ್ರ ಪತ್ತೆಯಾಗುತ್ತವೆ.


ಈ ಸಮಸ್ಯೆಗೆ ಕಾರಣವೇನು?


ಮಾನವನ ಮೂತ್ರಾಂಗಗಳಲ್ಲಿ ಕಲ್ಲುಗಳು ಉದ್ಭವಿಸಲು ಕೆಲವೊಂದು ನಿರ್ದಿಷ್ಟ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ. ಹೈಪರ್ ಪಾರಾಥೈರಾಯ್ಡಿಸಂ, ಗೌಟ್, ಅತಿಯಾದ ಆಕ್ಸಲೇಟ್ ಯುಕ್ತ ಮೂತ್ರ, ಜನ್ಮದತ್ತ ಸಿಸ್ಟೈನ್ ಯುಕ್ತ ಮೂತ್ರ ಮತ್ತು ಮೂತ್ರಾಂಗಗಳ ಸೋಂಕುಗಳು ಇವುಗಳಲ್ಲಿ ಪ್ರಮುಖವಾಗಿವೆ. ಅಂತೆಯೇ ನಮ್ಮ ಶರೀರಕ್ಕೆ ಅತ್ಯವಶ್ಯಕವೆನಿಸುವ ಪೋಷಕಾಂಶಗಳ ಅಸಮತೋಲನದಿಂದ, ಮೂತ್ರದಲ್ಲಿ ವಿಸರ್ಜಿಸಲ್ಪಡುವ ಸಿಟ್ರೇಟ್ ನ ಪ್ರಮಾಣ ಕಡಿಮೆಯಾದಾಗ, ಮೂತ್ರ ವಿಸರ್ಜನೆಗೆ ಅಡಚಣೆ ಉಂಟುಮಾಡಬಲ್ಲ ವಿವಿಧ ವ್ಯಾಧಿಗಳಿಂದ ಹಾಗೂ ಸುದೀರ್ಘಕಾಲ ಹಾಸಿಗೆ ಹಿಡಿದಿರುವ ರೋಗಿಗಳನ್ನು ಮೂತ್ರಾಶ್ಮರಿ ಪೀಡಿಸುವ ಸಾಧ್ಯತೆಗಳಿವೆ.

ಆದರೆ ಬಹುತೇಕ ಜನರಲ್ಲಿ ಕಂಡುಬರುವ ಆಕ್ಸಲೇಟ್ ಮತ್ತು ಫಾಸ್ಫೇಟ್ ಸಮ್ಮಿಶ್ರಣದ ಕಲ್ಲುಗಳು ಉದ್ಭವಿಸಲು ಖಚಿತ ಹಾಗೂ ನಿರ್ದಿಷ್ಟ ಕಾರಣಗಳು ಸ್ಪಷ್ಟವಾಗಿಲ್ಲ. ಅತಿ ಉಷ್ಣ ಹವೆ ಇರುವ ಪ್ರದೇಶಗಳ ನಿವಾಸಿಗಳಲ್ಲಿ ಮೂತ್ರದ ಸಾಂದ್ರತೆ ಹೆಚ್ಚಿರುವುದರಿಂದ, ಅತಿಯಾದ ಕ್ಯಾಲ್ಸಿಯಂ ಭರಿತ ಆಹಾರ ಅಥವಾ ಔಷದಗಳ ಸೇವನೆಯಿಂದ ಮತ್ತು ನಿಷ್ಕ್ರಿಯತೆಯ ಪರಿಣಾಮವಾಗಿಯೂ ಮೂತ್ರಾಂಗಗಳ ಕಲ್ಲುಗಳು ಉದ್ಭವಿಸಬಲ್ಲವು.

ಇವೆಲ್ಲಕ್ಕೂ ಮಿಗಿಲಾಗಿ ನಮ್ಮ ಆರೋಗ್ಯ ರಕ್ಷಣೆಯಲ್ಲಿ ಮಹತ್ವಪೂರ್ಣ ಪಾತ್ರವಹಿಸುವ  ಶುದ್ಧವಾದ ನೀರನ್ನು ಅವಶ್ಯಕ ಪ್ರಮಾಣದಲ್ಲಿ ಕುಡಿಯದಿರುವುದು ಕೂಡಾ ಮೂತ್ರಾಷ್ಮರಿಗಳು ಉದ್ಭವಿಸಲು ಪ್ರಧಾನ ಅಂಶವೆನಿಸುತ್ತದೆ.

 

ರೋಗ ಲಕ್ಷಣಗಳು


ಮೂತ್ರಾಶ್ಮರಿ ಪೀಡಿತ ವ್ಯಕ್ತಿಗಳಲ್ಲಿ ಆಕಸ್ಮಿಕವಾಗಿ ಪ್ರತ್ಯಕ್ಷವಾಗುವ ತೀವ್ರ ನೋವು ಮತ್ತು ರಕ್ತಮಿಶ್ರಿತ ಮೂತ್ರ ವಿಸರ್ಜನೆಗಳು ಈ ವ್ಯಾಧಿಯ ಪ್ರಮುಖ ಲಕ್ಷಣಗಳಾಗಿವೆ. ಶೇ. ೭೫ ರಷ್ಟು ರೋಗಿಗಳಲ್ಲಿ ಪಕ್ಕೆ, ಬೆನ್ನು ಮತ್ತು ಉದರಗಳ ಎರಡೂ ಭಾಗಗಳಲ್ಲಿ ಯಾವುದಾದರೂ ನಿರ್ದಿಷ್ಟ ಸ್ಥಾನದಲ್ಲಿ ಆಕಸ್ಮಿಕವಾಗಿ ತೀವ್ರ ನೋವು ಕಂಡುಬರುತ್ತದೆ.


ಮೂತ್ರಪಿಂಡಗಳಲ್ಲಿರುವ ಸಣ್ಣಪುಟ್ಟ ಅಥವಾ ಮಧ್ಯಮ ಗಾತ್ರದ ಕಲ್ಲುಗಳು ಸ್ವಾಭಾವಿಕವಾಗಿ ಮೂತ್ರದೊಂದಿಗೆ ವಿಸರ್ಜಿತವಾಗುವ ಸಂದರ್ಭದಲ್ಲಿ,  ಮೂತ್ರನಾಳಗಳು ಅಥವಾ ಮೂತ್ರನಾಳ ಮತ್ತು ಮೂತ್ರಾಶಯಗಳು ಸೇರುವಲ್ಲಿ ಸಿಲುಕಿಕೊಂಡಾಗ ಉದ್ಭವಿಸುವ ನೋವಿನ ತೀವ್ರತೆಯು, ಹೆರಿಗೆಯ ನೋವಿನ ಹತ್ತಾರು ಪಟ್ಟು ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಪಕ್ಕೆಗಳು, ಬೆನ್ನು ಮತ್ತು ಹೊಟ್ಟೆಯ ಒಂದು ಅಥವಾ ಎರಡೂ ಬದಿಗಳಲ್ಲಿ ತೀವ್ರ ನೋವು ಹಾಗೂ ಕೆಲವರಲ್ಲಿ ಪಕ್ಕೆಗಳಿಂದ ತೊಡೆಯ ಸಂದಿಯ ತನಕ ಛಳಕು ಹೊಡೆದಂತೆ ನೋವು ಬಾಧಿಸಬಹುದು.


ನೋವಿನ ತೀವ್ರತೆ ಅತಿಯಾದಂತೆ ರೋಗಿಯು ತೊಡೆ ಮತ್ತು ಕಾಲುಗಳನ್ನು ಹೊಟ್ಟೆಗೆ ಆನಿಸಿಕೊಂಡು ನರಳುವುದು, ವಾಕರಿಕೆ ಹಾಗೂ ವಾಂತಿ, ಅತಿಯಾಗಿ ಬೆವರುವುದು ಹಾಗೂ ನಾಡಿ ಬಡಿತ ತೀವ್ರಗೊಳ್ಳುವುದರೊಂದಿಗೆ, ಶರೀರದ ತಾಪಮಾನ ಕಡಿಮೆಯಾಗಿ ಶರೀರ ತಣ್ಣಗಾಗುವುದು. ಅಸಹನೀಯವಾದ ಈ ನೋವಿನಿಂದಾಗಿ ಮೂತ್ರಶಂಕೆ ಬಾಧಿಸಿದಂತೆ ಭಾಸವಾದಾಗ, ಮೂತ್ರ ವಿಸರ್ಜಿಸಲು ಪ್ರಯತ್ನಿಸಿದಲ್ಲಿ ನಾಲ್ಕಾರು ಹನಿ ಮೂತ್ರದೊಂದಿಗೆ ಒಂದೆರಡು ರಕ್ತದ ಹನಿಗಳು ಹೊರಬೀಳುವುದು ಅಪರೂಪವೇನಲ್ಲ.


ಹೊಟ್ಟೆ ಮತ್ತು ಬೆನ್ನುಗಳಲ್ಲಿ ನೋವು ಕಂಡುಬಂದಾಗ ಜನಸಾಮಾನ್ಯರ ಮನಸ್ಸಿನಲ್ಲಿ “ಗ್ಯಾಸ್ ಟ್ರಬಲ್' ಬಾಧಿಸುತ್ತಿದೆ ಎನ್ನುವ ಭ್ರಮೆಗೆ ಕಾರಣವೆನಿಸುವ ಮೂತ್ರಾಶ್ಮರಿಯು, ಜೀರಿಗೆಯ ಕಷಾಯವನ್ನು ಸೇವಿಸುವುದರಿಂದ ಶಮನಗೊಳ್ಳದು.


ತಡೆಯಲು ಅಸಾಧ್ಯವೆನಿಸುವ ನೋವಿನಿಂದ ಬಳಲುತ್ತಿರುವ ರೋಗಿಗಳನ್ನು ತಕ್ಷಣ ಸಮೀಪದ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ, ತಜ್ನವೈದ್ಯರಿಂದ ಚಿಕಿತ್ಸೆ ಕೊಡಿಸುವುದು ಹಿತಕರ.


ಪತ್ತೆ ಹಚ್ಚುವುದೆಂತು?


ಕ್ಷ- ಕಿರಣ ಅಥವಾ ಅಲ್ಟ್ರಾ ಸೌಂಡ್ ಸೋನೋಗ್ರಾಂ ಪರೀಕ್ಷೆಯ ಮೂಲಕ ರೋಗಿಯ ಮೂತ್ರಾಂಗಗಳಲ್ಲಿನ ಕಲ್ಲುಗಳ ಸಂಖ್ಯೆ, ಗಾತ್ರ ಹಾಗೂ ಇವುಗಳು ಠಿಕಾಣಿ ಹೂಡಿರುವ ಸ್ಥಳಗಳನ್ನು ನಿಖರವಾಗಿ ಅರಿತುಕೊಳ್ಳಬಹುದು. ಕೆಲ ರೋಗಿಗಳಲ್ಲಿ ಇದರೊಂದಿಗೆ ರಕ್ತಮಿಶ್ರಿತ ಮೂತ್ರ ವಿಸರ್ಜನೆ ಹಾಗೂ ಅನ್ಯ ಕ್ಲಿಷ್ಟಕರ ಸಮಸ್ಯೆಗಳು ತಲೆದೋರಿದಾಗ ಇನ್ನಿತರ ಪರೀಕ್ಷೆಗಳನ್ನು ನಡೆಸಬೇಕಾಗುವುದು.


ಚಿಕಿತ್ಸೆ


ಮರಳಿನ ಕಣಗಳಂತಹ ಹಾಗೂ ಇದಕ್ಕೂ ಸ್ವಲ್ಪ ದೊಡ್ಡ ಗಾತ್ರದ ಕಲ್ಲುಗಳು ಯಾವುದೇ ಔಷ್ದವನ್ನು ಸೇವಿಸದೆ ಇದ್ದರೂ, ಮೂತ್ರದೊಂದಿಗೆ ವಿಸರ್ಜಿಸಲ್ಪಡುತ್ತವೆ. ಆದರೂ ಬಹುತೇಕ ಜನರು ವಿಭಿನ್ನ ವೈದ್ಯ ಪದ್ದತಿಗಳಲ್ಲಿ ಲಭ್ಯವಿರುವ “ ಕಲ್ಲನ್ನು ಕರಗಿಸಬಲ್ಲ" ಔಷದಗಳು ಹಾಗೂ ಬಾಲೆಯ ದಿಂಡಿನ ರಸವನ್ನು ಕುಡಿಯುವ “ಮನೆ ಮದ್ದು" ಪ್ರಯೋಗಿಸುವುದು ಅಪರೂಪವೇನಲ್ಲ. ಅದೇ ರೀತಿಯಲ್ಲಿ ಆಧುನಿಕ ಜೀವನ ಶೈಲಿಯನ್ನು ರೂಢಿಸಿಕೊಂಡಿರುವ ರೋಗಿಗಳು ಮೂತ್ರಾಶ್ಮರಿಯ ಸಮಸ್ಯೆಯಿಂದ ಮುಕ್ತರಾಗಲು, ಧಾರಾಳವಾಗಿ ಬಿಯರ್ ಸೇವಿಸುವ ಚಿಕಿತ್ಸೆಯನ್ನು ಪ್ರಯೋಗಿಸುವುದು ಸುಳ್ಳೇನಲ್ಲ!. ಆದರೆ ಮೂತ್ರಾಂಗಗಳಲ್ಲಿನ ಕಲ್ಲುಗಳ ಸಂಖ್ಯೆ ಮತ್ತು ಇವುಗಳ ಗಾತ್ರ ಹೆಚ್ಚಾಗಿದ್ದಲ್ಲಿ ಅಥವಾ ಮೂತ್ರಾಂಗಗಳಲ್ಲಿ ಇವು ಸಿಲುಕಿಕೊಂಡ ಸಂದರ್ಭಗಳಲ್ಲಿ, ಇವುಗಳಿಂದ ಮುಕ್ತಿಪಡೆಯಲು ತುರ್ತು ಚಿಕಿತ್ಸೆ ಪಡೆಯಬೇಕಾಗುವುದು ಅನಿವಾರ್ಯವೂ ಹೌದು.


ಔಷದ ಸೇವನೆಯನ್ನು ಹೊರತುಪಡಿಸಿದಂತೆ ಲಿತೊಟ್ರಿಪ್ಸಿ, ಯುರಿಟರೋಸ್ಕೋಪಿ, ಲಾಪರೋಸ್ಕೊಪಿಕ್ ಸರ್ಜರಿ, ಕೀ ಹೋಲ್ ಸರ್ಜರಿ, ಓಪನ್ ಸರ್ಜರಿಗಳಂತಹ ಚಿಕಿತ್ಸೆಗಳು ಪ್ರಮುಖವಾಗಿವೆ. ಆದರೆ ಇವೆಲ್ಲಾ ಚಿಕಿತ್ಸಾ ವಿಧಾನಗಳಲ್ಲಿ ಸಾಧಕ- ಬಾಧಕಗಳೆರಡೂ ಇರುವ ಸಾಧ್ಯತೆಗಳು ಇವೆ.


ಸಾಮಾನ್ಯವಾಗಿ ಮೂತ್ರಾಂಗಗಳ ಕಲ್ಲುಗಳ ಗಾತ್ರ, ಉದ್ಭವಿಸಿರುವ ಅಥವಾ ಸಿಲುಕಿರುವ ಸ್ಥಾನ, ಪ್ರಭೇದ ಹಾಗೂ ಕಾಠಿಣ್ಯಗಳೊಂದಿಗೆ, ರೋಗಿಯ ಹಿಂದಿನ ವೈದ್ಯಕೀಯ ಚರಿತ್ರೆ, ಆತನ ಸಾಮಾನ್ಯ ಆರೋಗ್ಯದ ಮಟ್ಟ ಹಾಗೂ ಆರ್ಥಿಕ ಸಾಮರ್ಥ್ಯಗಳು ಚಿಕಿತ್ಸೆಯ ಆಯ್ಕೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ.


ಅವಿದ್ಯಾವಂತ ಹಾಗೂ ಅಮಾಯಕರಲ್ಲಿ ಪ್ರಾಣಾಪಾಯಕ್ಕೂ ಕಾರಣವೆನಿಸಬಲ್ಲ ಈ ಗಂಭೀರ ಸಮಸ್ಯೆಯನ್ನು ಸಮರ್ಪಕವಾಗಿ ಸಮರ್ಪಕವಾಗಿ ಪರಿಹರಿಸಬಲ್ಲ ಯುರಾಲಜಿಸ್ಟ್ ಗಳು, ತಮ್ಮ ರೋಗಿಗಳ ಬಾಲಿ ಚಿಕಿತ್ಸೆಯ ಒಳಿತು- ಕೆಡುಕುಗಳನ್ನು ಚರ್ಚಿಸಿದ ಬಳಿಕವೇ ಚಿಕಿತ್ಸೆಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವರು.


ನಿಮಗಿದು ತಿಳಿದಿರಲಿ

ಮೂತ್ರಾಶ್ಮರಿಯ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಪಡೆದು ಪರಿಹಾರಗೊಂಡರೂ, ಇದು ಮತ್ತೆ ಮರುಕಳಿಸುವ ಸಾಧ್ಯತೆಗಳಿವೆ. ಮಾತ್ರವಲ್ಲ, ಇದನ್ನು ಉತ್ತೇಜಿಸಬಲ್ಲ ಅನೇಕ ಅಪಾಯಕಾರಿ ಅಂಶಗಳೂ ಇವೆ. ಇವುಗಳಲ್ಲಿ ಕೆಲವೊಂದು ಅಂಶಗಳನ್ನು ಬದಲಾಯಿಸುವುದು ಅಸಾಧ್ಯವೆನಿಸುವುದು.


ಮೂತ್ರಾಶ್ಮರಿಯಿಂದ ಮುಕ್ತರಾಗಲು ದುಬಾರಿ ಬೆಲೆಯ ಔಷದಗಳನ್ನು ಖರೀದಿಸಿ ಸೇವಿಸುವ ಬದಲಾಗಿ ಹಾಗೂ ಈ ಸಮಸ್ಯೆಯನ್ನು ದೂರವಿರಿಸಲು, ದಿನನಿತ್ಯ ಕನಿಷ್ಠ ಮೂರರಿಂದ ಐದು ಲೀಟರ್ ನೀರನ್ನು ಕುಡಿಯುವುದು ಉಪಯುಕ್ತವೆನಿಸುವುದು. ಅನೇಕ ರೋಗಿಗಳಲ್ಲಿ ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಇದು ಅತ್ಯಂತ ಪರಿಣಾಮಕಾರಿ ಎನಿಸುವುದು. ಈ ‘ಜಲ ಚಿಕಿತ್ಸೆ"ಗಾಗಿ ಹಣವನ್ನು ವ್ಯಯಿಸುವ ಅವಶ್ಯಕತೆಯೇ ಇರುವುದಿಲ್ಲ!. ಹಾಗೂ ಇದರಿಂದಾಗಿ ಮೂತ್ರದಲ್ಲಿನ ಲವಣಗಳ ಸಾಂದ್ರತೆ ಕಡಿಮೆಯಾಗುವುದರಿಂದಾಗಿ, ಈ ಲವಣಗಳು ಘನೀಕೃತಗೊಂಡು ಕಲ್ಲುಗಳಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಜೊತೆಗೆ ಧಾರಾಳ ನೀರನ್ನು ಕುಡಿಯುವುದರಿಂದ ಸುಸೂತ್ರವಾಗಿ ಮೂತ್ರ ವಿಸರ್ಜನೆಯಾಗುವುದರಿಂದ,  ಸಣ್ಣಪುಟ್ಟ ಹರಳುಗಳು ಬೆಳೆದು ಕಲ್ಲಾಗುವ ಮುನ್ನವೇ ಸುಲಭದಲ್ಲಿ ವಿಸರ್ಜಿಸಲ್ಪಡುತ್ತವೆ.


ಅಂತೆಯೇ ಚಿಕಿತ್ಸೆಯಿಂದ ಗುಣಪಡಿಸಬಹುದಾದ ಹಾಗೂ ಮುಂಜಾಗರೂಕತೆಯಿಂದ ತಡೆಗಟ್ಟಬಹುದಾದ ಮೂತ್ರಾಂಗಗಳ ವೈಫಲ್ಯಕ್ಕೆ ಮೂತ್ರಾಶ್ಮರಿ ಕಾರಣವೆನಿಸಬಲ್ಲದು. ಆದರೆ ಮೂತ್ರಾಶ್ಮರಿ ಪೀಡಿತರೆಲ್ಲರೂ ಈ ಗಂಭೀರ- ಮಾರಕ ಸಮಸ್ಯೆಗೆ ಈಡಾಗುವ ಸಾಧ್ಯತೆಗಳಿಲ್ಲದಿರಲು ನಮ್ಮ ಶರೀರದಲ್ಲಿ ಎರಡು ಮೂತ್ರಪಿಂಡಗಳು ಇರುವುದೇ ಕಾರಣವಾಗಿದೆ.


ಆದರೆ ಎರಡೂ ಮೂತ್ರಪಿಂಡಗಳಲ್ಲಿ ಉದ್ಭವಿಸಿರುವ ಒಂದಕ್ಕೂ ಅಧಿಕ ಸಂಖ್ಯೆಯ ದೊಡ್ಡ ಗಾತ್ರದ ಕಲ್ಲುಗಳಿರುವ ಮತ್ತು ಇದರೊಂದಿಗೆ ಮಧುಮೇಹ ಹಾಗೂ ಮೂತ್ರಾಂಗಗಳ ಸೋಂಕುಪೀಡಿತ ವ್ಯಕ್ತಿಗಳಿಗೆ ಇಂತಹ ಅಪಾಯದ ಸಾಧ್ಯತೆಗಳು ಹೆಚ್ಚಿವೆ.


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು


ಉದಯವಾಣಿ ಪತ್ರಿಕೆಯ ದಿ. ೨೬-೦೫-೨೦೦೫ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.



No comments:

Post a Comment