Monday, January 27, 2014

Construction Waste




            ಕಟ್ಟಡಗಳ ಭಗ್ನಾವಶೇಷ: ಪುನರ್ಬಳಕೆಗೆ ಅವಕಾಶ!

ಭವ್ಯ ಭಾರತದ ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ಹಳ್ಳಿ, ಪಟ್ಟಣ, ನಗರ ಮತ್ತು ಮಹಾನಗರಗಳಲ್ಲಿ ಅವಿರತವಾಗಿ ವೈವಿಧ್ಯಮಯ ಕಟ್ಟಡಗಳ ನಿರ್ಮಾಣ ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಇಂತಹ ನಿರ್ಮಾಣ ಕಾಮಗಾರಿಗಳಲ್ಲಿ ಗಣನೀಯ ಪ್ರಮಾಣದ ನೂತನ ಕಟ್ಟಡಗಳನ್ನು ನಿರ್ಮಿಸುವ ಸಂದರ್ಭಗಳಲ್ಲಿ ಹಳೆಯ ಕಟ್ಟಡಗಳನ್ನು ಕೆಡವಲಾಗುತ್ತದೆ. ಅಂತೆಯೇ ಅನೇಕ ಕಟ್ಟಡಗಳನ್ನು ಪುನರ್ ನವೀಕರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅಗಾಧ ಪ್ರಮಾಣದ ತ್ಯಾಜ್ಯಗಳು ಉತ್ಪನ್ನವಾಗುತ್ತವೆ. ಸಾಮಾನ್ಯವಾಗಿ ಇಂತಹ ತ್ಯಾಜ್ಯಗಳನ್ನು ನಿರುಪಯುಕ್ತ ಎಂದು ಪರಿಗಣಿಸಲಾಗುವುದರಿಂದ, ಇವುಗಳನ್ನು ಕಟ್ಟಲಾದ ಬಳಿಕ ನಗರಗಳ, ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗಳ ಬದಿಗಳಲ್ಲಿ ತಂದು ಸುರಿಯಲಾಗುತ್ತದೆ. ಕತ್ತಲಾದ ಬಳಿಕವೇ ನಡೆಯುವ ಇಂತಹ "ತ್ಯಾಜ್ಯ ವಿಲೇವಾರಿ" ಯಿಂದಾಗಿ, ರಸ್ತೆಯ ಇಕ್ಕೆಲಗಳಲ್ಲಿನ ಚರಂಡಿಗಳು ಮುಚ್ಚಲ್ಪಡುವುದರಿಂದ, ಮಳೆಗಾಲದ ದಿನಗಳಲ್ಲಿ ಈ ರಸ್ತೆಗಳು ನಿರ್ನಾಮಗೊಳ್ಳುತ್ತವೆ. ಮುನಿಸಿಪಲ್ ಕಾಯಿದೆಯಂತೆ ಇಂತಹ ತ್ಯಾಜ್ಯಗಳನ್ನು ಕೇವಲ "ಲ್ಯಾಂಡ್ ಫಿಲ್ ಸೈಟ್" ಗಳಲ್ಲಿ ವಿಲೇವಾರಿ ಮಾಡಬೇಕಾಗುವುದಾದರೂ, ಇಂತಹ ನಿಯಮಗಳ ಅರಿವಿದ್ದೂ ಉಲ್ಲಂಘಿಸುವ ಜನರಿಂದಾಗಿ, ರಸ್ತೆಯ ಬದಿಗಳಲ್ಲೇ ಸುರಿಯಲಾಗುತ್ತಿದೆ. ನಿಶಾಚರರು ನಡೆಸುವ ಈ ಕಾರ್ಯಾಚರಣೆಯನ್ನು ತಡೆಗಟ್ಟಲು ಆಗದ ಸ್ಥಳೀಯ ಸಂಸ್ಥೆಗಳ ಸಿಬಂದಿಗಳು, ಅನಿವಾರ್ಯವಾಗಿ ಸುಮ್ಮನಿರಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.

ಪುನರ್ ಆವರ್ತನ- ಮರುಬಳಕೆ 

ಭಾರತದಲ್ಲಿ ಪ್ರತಿವರ್ಷ ೧೦ ರಿಂದ ೧೨ ಮಿಲಿಯನ್ ಟನ್ ಗಳಷ್ಟು "ನಿರ್ಮಾಣ ಕಾಮಗಾರಿಗಳ ತ್ಯಾಜ್ಯ" ಉತ್ಪನ್ನವಾಗುತ್ತದೆ. ಆದರೆ ಇದರ ಅತಿಸಣ್ಣ ಪಾಲು ಮಾತ್ರ ಮರುಬಳಕೆಯಾಗುತ್ತಿದೆ. ಮುನಿಸಿಪಲ್ ಘನತ್ಯಾಜ್ಯ ನಿರ್ವಹಣೆಯ ಕಾಯಿದೆ ೨೦೦೦ ದಂತೆ, ಇಂತಹ ತ್ಯಾಜ್ಯಗಳನ್ನು ಪ್ರತ್ಯೇಕಿಸಬೇಕಾಗಿದ್ದರೂ, ಇವುಗಳನ್ನು ಅನ್ಯ ತ್ಯಾಜ್ಯಗಳೊಂದಿಗೆ ಬೆರೆಸಿ ವಿಲೇವಾರಿ ಮಾಡಲಾಗುತ್ತಿದೆ. ಇತ್ತೀಚಿಗೆ ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ದುರಂತಕ್ಕೆ, ಅನಿಯಂತ್ರಿತ, ಕಾನೂನುಬಾಹಿರ ಮತ್ತು ಅತಿಯಾದ ನಿರ್ಮಾಣ ಕಾಮಗಾರಿಗಳು ಮತ್ತು ಇವುಗಳಿಂದ ಉತ್ಪನ್ನವಾಗಿದ್ದ ಹಾಗೂ ಕಂಡಲ್ಲಿ ಸುರಿದಿದ್ದ ತ್ಯಾಜ್ಯಗಳೇ ಕಾರಣವೆನಿಸಿದ್ದವು. 

ಅನೇಕ ದೇಶಗಳಲ್ಲಿ ಕಟ್ಟಡಗಳನ್ನು ಧ್ವಂಸಗೊಳಿಸಿದ ಸಂದರ್ಭಗಳಲ್ಲಿ ಲಭಿಸುವ ಇಟ್ಟಿಗೆ, ಕಲ್ಲು ಮತ್ತು ಕಾಂಕ್ರೀಟ್ ಗಳನ್ನು ಹುದಿಮಾಡಿದ ಬಳಿಕ ನೂತನ ರಸ್ತೆಗಳ ನಿರ್ಮಾಣದಲ್ಲಿ ಇವುಗಳನ್ನು ಬಳಸಲಾಗುತ್ತಿದೆ. ಇತರ ದೇಶಗಳು ತ್ಯಾಜ್ಯಗಳನ್ನು ಬಳಸಿ ನೂತನ ರಸ್ತೆಗಳನ್ನು ನಿರ್ಮಿಸುವುದಾದಲ್ಲಿ, ಈ ವಿನೂತನ ವಿಧಾನವನ್ನು ಭಾರತದಲ್ಲಿ ಅನುಷ್ಠಾನಗೊಳಿಸುವುದು ಅಸಾಧ್ಯವೇನಲ್ಲ. ಇಂತಹ ಕ್ರಮಗಳಿಂದ ನಿರ್ಮಾಣ ಕಾಮಗಾರಿಗಳ ವೆಚ್ಚ ಕಡಿಮೆಯಾಗುವುದರೊಂದಿಗೆ, ನಿರುಪಯುಕ್ತ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು ಮತ್ತು ರಸ್ತೆಗಳ ಬದಿಗಳಲ್ಲಿ ಇಂತಹ ತ್ಯಾಜ್ಯಗಳನ್ನು ಸುರಿಯುವ ಮೂಲಕ ರಸ್ತೆಗಳನ್ನೇ ಹಾಳುಗೆಡಹುವ ಕೆಟ್ಟ ಪದ್ದತಿಗೆ ವಿದಾಯ ಹೇಳುವುದು ಸುಲಭಸಾಧ್ಯವೆನಿಸುವುದು. 

ದೆಹಲಿಯ ಮುನಿಸಿಪಲ್ ಕಾರ್ಪೋರೇಶನ್ ಹೇಳುವಂತೆ, ಅಲ್ಲಿ ಪ್ರತಿನಿತ್ಯ ೪೦೦೦ ಟನ್ ಗಳಷ್ಟು ನಿರ್ಮಾಣ ಕಾಮಗಾರಿಗಳ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ಅರ್ಥಾತ್, ವರ್ಷದಲ್ಲಿ ೧.೫ ದಶಲಕ್ಷ ಟನ್ ತ್ಯಾಜ್ಯಗಳು ದೇಶದ ರಾಜಧಾನಿಯೊಂದರಲ್ಲೇ ಉತ್ಪನ್ನವಾಗುತ್ತಿವೆ!. ಈ ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸಿ ಮರುಬಳಕೆ ಮಾಡಿದಲ್ಲಿ, ಅಲ್ಲಿನ ಲ್ಯಾಂಡ್ ಫಿಲ್ ಸೈಟ್ ಗಳ ಆಯುಷ್ಯ ಇನ್ನಷ್ಟು ಹೆಚ್ಚುತ್ತದೆ. ಇದರೊಂದಿಗೆ ಸ್ಥಳೀಯ ರಸ್ತೆಗಳ ನವೀಕರಣ- ಪುನರ್ ನಿರ್ಮಾಣದ ಕಾಮಗಾರಿಗಳ ವೆಚ್ಚ ಸಾಕಷ್ಟು ಕಡಿಮೆಯಾಗುವುದರಿಂದ, ಇನ್ನಷ್ಟು ರಸ್ತೆಗಳನ್ನು ನಿರ್ಮಿಸಬಹುದಾಗಿದೆ. 

ಹೆಚ್ಚುತ್ತಿರುವ ನಿರ್ಮಾಣ ಕಾಮಗಾರಿಗಳು 

ನಿರಂತರ ಹಾಗೂ ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಭಾರತದ ಜನಸಂಖ್ಯೆಗೆ ಅನುಗುಣವಾಗಿ, ನಾವು ನಿರ್ಮಿಸುತ್ತಿರುವ ವಸತಿ- ವಾಣಿಜ್ಯ ಕಟ್ಟಡಗಳ, ರಸ್ತೆ, ಸೇತುವೆ, ಫ್ಲೈ ಓವರ್, ಸಬ್ ವೇ ಇತ್ಯಾದಿಗಳ ನಿರ್ಮಾಣಗಳೂ ಶರವೇಗದಲ್ಲಿ ಸಾಗುತ್ತಿವೆ. ಜನಸಂಖ್ಯೆ ಇನ್ನಷ್ಟು ಹೆಚ್ಚಿದಂತೆ ಇವುಗಳ ಬೇಡಿಕೆಯೂ ಇನ್ನಷ್ಟು ಹೆಚ್ಚಲಿದೆ. ತತ್ಪರಿಣಾಮವಾಗಿ ಇವುಗಳಿಂದ ಉತ್ಪನ್ನವಾಗುವ ತ್ಯಾಜ್ಯಗಳ ಪ್ರಮಾಣವೂ ಸ್ವಾಭಾವಿಕವಾಗಿ ಹೆಚ್ಚಲಿದೆ. ಈ ತ್ಯಾಜ್ಯಗಳನ್ನು ನಾವು ಮರುಬಳಕೆ ಮಾಡದೇ ಇದ್ದಲ್ಲಿ, ಇವುಗಳನ್ನು ತುಂಬಿಸಲು ನಿರ್ಮಿಸಬೇಕಾದ ಲ್ಯಾಂಡ್ ಫಿಲ್ ಸೈಟ್ ಗಳ ಸಂಖ್ಯೆ ಅತಿಯಾಗಲಿದೆ. ಲಭ್ಯ ಮಾಹಿತಿಯಂತೆ ಪುರಸಭಾ ತ್ಯಾಜ್ಯಗಳಲ್ಲಿ ಶೇ. ೧೦ ರಿಂದ ೨೦ ರಷ್ಟಿರುವ ಇಂತಹ ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸಿ ಮರುಬಳಕೆ ಮಾಡದೇ ಇದ್ದಲ್ಲಿ, ಇದರಿಂದ ಉದ್ಭವಿಸಲಿರುವ ಗಂಭೀರ- ಅಪಾಯಕಾರಿ ಸಮಸ್ಯೆಗಳು ದೇಶದ ಪ್ರಗತಿಗೆ ಕಂಟಕವಾಗಿ ಪರಿಣಮಿಸಲಿವೆ. 

ಕೊನೆಯ ಮಾತು 

ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಯಾದಿಯಲ್ಲಿರುವ ಅಮೆರಿಕ, ಇಂಗ್ಲೆಂಡ್, ಜಪಾನ್, ಜರ್ಮನಿ, ಡೆನ್ಮಾರ್ಕ್ ಮತ್ತಿತರ ದೇಶಗಳು ಈಗಾಗಲೇ ಇಂತಹ ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸಿ ಮರುಬಳಕೆ ಮಾಡುವ ಬಗ್ಗೆ ಅವಶ್ಯಕ ನಿಯಮಗಳನ್ನು ರೂಪಿಸಿವೆ. ಮಾತ್ರವಲ್ಲ, ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುತ್ತಿವೆ. ಆದರೆ ನಮ್ಮ ದೇಶದಲ್ಲಿ ಇಂದಿನ ತನಕ ಈ ರೀತಿಯ ನಿಯಮಗಳನ್ನು ರೂಪಿಸಿಲ್ಲ. ಏಕೆಂದರೆ ನಮ್ಮನ್ನಾಳುವವರಿಗೆ ಇಂತಹ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬಲ್ಲ ಮತ್ತು ನೂತನ ನಿರ್ಮಾಣ ಕಾಮಗಾರಿಗಳ ವೆಚ್ಚವನ್ನು ಸಾಕಷ್ಟು ಕಡಿಮೆಮಾದಬಲ್ಲ ವಿಧಾನಗಳ ಬಗ್ಗೆ ಚಿಂತಿಸಲು ಸಮಯವೇ ಇಲ್ಲ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 


No comments:

Post a Comment