Thursday, January 2, 2014

Know your medicines




   ನೀವು ಸೇವಿಸುವ ಔಷದಗಳ ಬಗ್ಗೆ ನಿಮಗೆ ತಿಳುವಳಿಕೆ ಇರಲಿ 

  ತಮ್ಮ ರೋಗಿಗಳನ್ನು ಬಾಧಿಸುತ್ತಿರುವ ವ್ಯಾಧಿಯನ್ನು ನಿಖರವಾಗಿ ಪತ್ತೆ ಹಚ್ಚಿದ ಬಳಿಕ, ರೋಗಿಯ ವಯಸ್ಸು, ಕಾಯಿಲೆಯ ತೀವ್ರತೆ ಹಾಗೂ ಅವಧಿ, ಆತನಲ್ಲಿ ಇರಬಹುದಾದ ಇತರ ಕಾಯಿಲೆಗಳು, ಇದಕ್ಕೂ ಮುನ್ನ ಯಾವುದೇ ಔಷದ ಸೇವನೆಯಿಂದ ಉದ್ಭವಿಸಿರಬಹುದಾದ ಅಲರ್ಜಿ ಅಥವಾ ಪ್ರತಿಕೂಲ ಪರಿಣಾಮಗಳೇ ಮುಂತಾದ ಅಂಶಗಳನ್ನು ಗಮನದಲ್ಲಿರಿಸಿ, ವೈದ್ಯರು ಇದೀಗ ನೀಡಬೇಕಾದ ಔಷದಗಳು ಮತ್ತು ಅವುಗಳ ಪ್ರಮಾಣಗಳನ್ನು ನಿರ್ಧರಿಸುತ್ತಾರೆ. ಇದೇ ಕಾರಣದಿಂದಾಗಿ ನಿಮ್ಮ ವೈದ್ಯರು ನಿಮಗೆ ನೀಡಿರುವ ಔಷದಗಳನ್ನು ಯಾವುದೇ ಕಾರಣಕ್ಕೂ ಇತರರಿಗೆ ನೀಡುವುದು ಅಯಾಚಿತ ಹಾಗೂ ಅಪಾಯಕಾರಿ ಸಮಸ್ಯೆಗಳಿಗೆ ಮೂಲವೆನಿಸಬಹುದು. 

ಸಾಮಾನ್ಯವಾಗಿ ವೈದ್ಯರು ತಮ್ಮ ರೋಗಿಗಳ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ನೀಡುವ "ಚಿಕಿತ್ಸೆ' ಯಲ್ಲಿ ಔಷದಗಳು ನಿಸ್ಸಂದೇಹವಾಗಿಯೂ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಅಂತೆಯೇ ವಿವಿಧ ರೀತಿಯ ಔಷದಗಳು ಅತ್ಯಂತ ಪರಿಣಾಮಕಾರಿ ಎನಿಸುವುದರೊಂದಿಗೆ, ಕೆಲ ಸಂದರ್ಭಗಳಲ್ಲಿ ಮಾರಕ ಹಾಗೂ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳೂ ಇವೆ. ಇದೇ ಕಾರಣದಿಂದಾಗಿ ಯಾವುದೇ ಆರೋಗ್ಯದ ಸಮಸ್ಯೆಗಳಿಗಾಗಿ ವೈದ್ಯರು ನಿಮಗೆ ನೀಡುವ ಔಷದಗಳ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ವೈದ್ಯರಿಂದ ಪಡೆದುಕೊಳ್ಳುವುದು ಮತ್ತು "ಸ್ವಯಂ ವೈದ್ಯ"ರಾಗದಿರುವುದು ಹಿತಕರವೆನಿಸುವುದು. 

ಔಷದಗಳಿಂದ ಅಪಾಯ?

ಚಿಕೂನ್ ಗುನ್ಯಾ ಕಾಯಿಲೆಯಿಂದ ಪೀದಿತನಾಗಿದ್ದ ಕೂಲಿ ಕಾರ್ಮಿಕ ಕೃಷ್ಣಪ್ಪನು ವೈದ್ಯರು ನೀಡಿದ್ದ ಔಷದಗಳನ್ನು ಕ್ರಮಬದ್ಧವಾಗಿ ಸೇವಿಸಿದ್ದರೂ, ವೈದ್ಯರ ಸಲಹೆಯಂತೆ ವಿಶ್ರಾಂತಿಯನ್ನು ಮಾತ್ರ ಪಡೆದಿರಲಿಲ್ಲ. ಜ್ವರಮುಕ್ತನಾದೊಡನೆ ಮತ್ತೆ ತೋಟದ ಕೆಲಸಕ್ಕೆ ಮರಳಿದ್ದ ಆತನಿಗೆ ಒಂದೆರಡು ದಿನಗಳ ಬಳಿಕ ಜ್ವರ ಹಾಗೂ ಗಂತುನೋವುಗಳು ಮತ್ತೆ ಮರುಕಲಿಸಿದ್ದವು. ತನ್ನ ಸಲಹೆಯನ್ನು ಪರಿಪಾಲಿಸದ ರೋಗಿಗಳ ಮೇಲೆ ಹರಿಹಾಯುವ ವೈದ್ಯರ ಉರಿನಾಲಗೆಗೆ ಹೆದರಿ ಚಿಕಿತ್ಸ್ಸಾಲಯಕ್ಕೆ ತೆರಳದ ಕೃಷ್ಣಪ್ಪನು, ವೈದ್ಯರು ತನಗೆ ಹಿಂದೆ ನೀಡಿದ್ದ ಮಾತ್ರೆಗಳನ್ನು ಔಷದ ಅಂಗಡಿಯಿಂದ ಖರೀದಿಸಿ ಸೇವಿಸಿದ್ದನು. ಒಂದೆರಡು ದಿನಗಳಲ್ಲೇ ಗುಣಮುಖನಾದ ಕೃಷ್ಣಪ್ಪನಿಗೆ, ಒಂದೆರಡು ತಾಸು ಕೆಲಸ ಮಾಡಿದೊಡನೆ ಗಂಟು- ಸೊಂಟ ನೋವು ಬಾಧಿಸಲಾರಂಭಿಸಿತ್ತು. ಇದೇ ಕಾರಣದಿಂದಾಗಿ ತನಗೆ ಬೇಕೆನಿಸಿದಾಗ ಔಷದ ಅಂಗಡಿಯಿಂದ ನೋವಿನ ಮಾತ್ರೆಗಳನ್ನು ಖರೀದಿಸಿ ಸೇವಿಸಲು ಆರಂಭಿಸಿದ್ದನು. 

ದಿನವಿಡೀ ಶಾರೀರಿಕಶ್ರಮದ ಕೆಲಸಗಳನ್ನು ಮಾಡುತ್ತಿದ್ದುದರಿಂದ ಸಂಜೆಯಾಗುತ್ತಲೇ ತೀವ್ರಗೊಳ್ಳುತ್ತಿದ್ದ ಗಂಟುನೋವು, ಮಾತ್ರೆ ನುಂಗಿದ ಬಳಿಕ ಕಡಿಮೆಯಾಗುತ್ತಿದ್ದರೂ, ಬೆಳಿಗ್ಗೆ ಎದ್ದೊಡನೆ ಮತ್ತೆ ಪ್ರತ್ಯಕ್ಷವಾಗುತ್ತಿತ್ತು. ಇದರಿಂದಾಗಿ ದಿನದಲ್ಲಿ ಎರಡುಬಾರಿ ವೇದನಾ ಶಾಮಕ ಗುಳಿಗೆಗಳನ್ನು ನುಂಗುವುದು ಕೃಷ್ಣಪ್ಪನಿಗೆ ರೂಢಿಯಾಯಿತು. 

ನೋವು ನಿವಾರಕ ಗುಳಿಗೆಗಳನ್ನು ದಿನನಿತ್ಯ ಸೇವಿಸಲು ಆರಂಭಿಸಿದ ಕೆಲದಿನಗಳ ಬಳಿಕ ಆತನಿಗೆ ಸಣ್ಣಗೆ ಹೊಟ್ಟೆನೋವು ಮತ್ತು ಎದೆಯುರಿಯಂತಹ ತೊಂದರೆಗಳು ಬಾಧಿಸಿದರೂ ಉಪೇಕ್ಷಿಸಿದ ಕೃಷ್ಣಪ್ಪನಿಗೆ, ವಾರ ಕಳೆಯುವಷ್ಟರಲ್ಲಿ ಹೊಟ್ಟೆನೋವು ಉಲ್ಬಣಿಸಿ ರಕ್ತಮಿಶ್ರಿತ ವಾಂತಿಯಾಗಿತ್ತು. ತತ್ ಕ್ಷಣ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಆತನನ್ನು ಪರೀಕ್ಷಿಸಿದ ವೈದ್ಯರಿಗೆ, ಆತನನ್ನು ಸುದೀರ್ಘ ಕಾಲದಿಂದ ಬಾಧಿಸುತ್ತಿದ್ದ ಜಠರದ ಹುಣ್ಣು ಉಳ್ಬನಿಸಿರಿವುದು ಪತ್ತೆಯಾಗಿತ್ತು. ಅಂತೆಯೇ ಈ ಸಮಸ್ಯೆಗೆ ಆತನು ಅತಿಯಾಗಿ ಸೇವಿಸಿದ್ದ ನೋವುನಿವಾರಕ ಗುಲಿಗೆಗಳೇ ಕಾರಣವೆಂದು ಖಚಿತವಾಗಿತ್ತು. 

ಕ್ರಿಷ್ಣಪ್ಪನಂತೆಯೇ ಅನೇಕ ಜನರು ವೈದ್ಯರು ಒಂದುಬಾರಿ ಸೂಚಿಸಿದ ಔಷದಗಳನ್ನು ಮತ್ತೆ ಅವರ ಸಲಹೆ ಪಡೆಯದೇ ಹಾಗೂ ವೈದ್ಯರ ಸಲಹೆಯನ್ನೇ ಪಡೆದುಕೊಳ್ಳದೆ ಅಥವಾ ಬಂಧುಮಿತ್ರರ ಸಲಹೆಯಂತೆ ಔಷದಗಳನ್ನು ಅಂಗಡಿಗಳಿಂದ ಖರೀದಿಸಿ ಸೇವಿಸುತ್ತಾರೆ. ಹಾಗೂ ಇದೇ ಕಾರಣದಿಂದಾಗಿ ಅನಾವಶ್ಯಕ ತೊಂದರೆಗಳಿಗೆ ಒಳಗಾಗುತ್ತಾರೆ. ಕೆಲಸಂದರ್ಭಗಳಲ್ಲಿ ಈ ರೀತಿಯ "ಸ್ವಯಂ ವೈದ್ಯ" ಪ್ರಯೋಗಗಳು ಪ್ರಾಣಾಪಾಯಕ್ಕೂ ಕಾರಣವೆನಿಸುದು ಅಪರೂಪವೇನಲ್ಲ. 

ರೋಗಿಗಳ ಪ್ರಮಾದ

ಇತ್ತೀಚಿನ ಕೆಲವರ್ಷಗಳಲ್ಲಿ ಔಷದ ಸೇವನೆಯ ವಿಚಾರದಲ್ಲಿ ರೋಗಿಗಳ ಹಾಗೂ ಜನಸಾಮಾನ್ಯರ ನಿರ್ಲಕ್ಷ್ಯಗಳಿಂದಾಗಿ ಸಂಭವಿಸುತ್ತಿರುವ ಪ್ರಮಾದಗಳ ಪ್ರಮಾಣವು ಮಿತಿಮೀರಿದೆ ಎಂದು ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯ, ಸ್ಯಾಂಟಿಯಾಗೊದ ಸಂಶೋಧಕರು ಧೃಡೀಕರಿಸಿದ್ದಾರೆ. ಈ ಸಂಶೋಧನೆಯ ಅಂಗವಾಗಿ ೧೯೮೩ ರಿಂದ  ೨೦೦೪ ನೆ ಇಸವಿಯ ಅವಧಿಯಲ್ಲಿ ಅಮೇರಿಕಾದಲ್ಲಿ ಮೃತಪಟ್ಟಿದ್ದ ೫ ದಶಲಕ್ಷ  ವ್ಯಕ್ತಿಗಳ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದಾಗ, ಇವರಲ್ಲಿ ಸುಮಾರು ೨ ಲಕ್ಷ ಜನರು ಔಷದ ಸೇವನಾ ಕ್ರಮದಲ್ಲಿ ಸಂಭವಿಸಿದ್ದ ವ್ಯತ್ಯಯಗಳಿಂದಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು. ಆದರೆ ಭಾರತದಲ್ಲಿ ಇಂತಹ ಅಧ್ಯಯನಗಳು ನಡೆಯದೇ ಇರುವುದರಿಂದ, ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಿಲ್ಲ. 

ಔಷದಗಳು ಅಪಾಯಕಾರಿಯೇ?

ಮನುಷ್ಯನ ಆರೋಗ್ಯವನ್ನು ರಕ್ಷಿಸಲು, ಕೆಲವೊಂದು ವ್ಯಾಧಿಗಳು ಬಾಧಿಸದಂತೆ ತಡೆಗಟ್ಟಲು ಮತ್ತು ಅನಾರೋಗ್ಯಪೀಡಿತರನ್ನು ರೋಗಮುಕ್ತರನ್ನಾಗಿಸಲು ಔಷದಗಳು ಅತ್ಯಂತ ಉಪಯುಕ್ತ ಅಸ್ತ್ರಗಳೆನಿಸಿವೆ. ಅದೇ ರೀತಿಯಲ್ಲಿ ಔಷದಗಳನ್ನು ಎರಡು ಅಲಗಿನ ಅಸ್ತ್ರಗಳಿಗೂ ಹೋಲಿಸಬಹುದಾಗಿದೆ. ಏಕೆಂದರೆ ಆಧುನಿಕ ಔಷದಗಳು ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳನ್ನು ತೋರುವ ಮತ್ತು ಕೆಲ ಸಂದರ್ಭಗಳಲ್ಲಿ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳೂ ಇವೆ. 

ಜನಸಾಮಾನ್ಯರು ಅನಾರೋಗ್ಯಪೀಡಿತರಾದಾಗ ತಮ್ಮ ನಂಬಿಗಸ್ತ ವೈದ್ಯರನ್ನು ಸಂದರ್ಶಿಸಿ ಚಿಕಿತ್ಸೆಯನ್ನು ಪಡೆದುಕೊಂಡರೂ, ಅಧಿಕತಮ ಜನರು ತಮ್ಮನ್ನು ಬಾಧಿಸುತ್ತಿರುವ ವ್ಯಾಧಿ ಯಾವುದು ಹಾಗೂ ಇದನ್ನು ಗುಣಪಡಿಸುವ ಸಲುವಾಗಿ ನೀಡಿರುವ ಔಷದಗಳು ಮತ್ತು ಇವುಗಳ ಸಾಧಕ- ಬಾಧಕಗಳ ಬಗ್ಗೆ ವೈದ್ಯರಿಂದ ಅವಶ್ಯಕ ಮಾಹಿತಿಗಳನ್ನೇ ಪಡೆದುಕೊಳ್ಳುವುದಿಲ್ಲ. ಅದೇ ರೀತಿಯಲ್ಲಿ ವೈದ್ಯರು ನೀಡಿರುವ ಔಷದಗಳನ್ನು ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಮತ್ತು ನಿಗದಿತ ಅವಧಿಗೆ ಸೇವಿಸುವುದೇ ಇಲ್ಲ!. ಈ ರೀತಿಯ ನಿರ್ಲಕ್ಷ್ಯಗಳಿಂದಾಗಿ ಬಹುತೇಕ ಸಂದರ್ಭಗಳಲ್ಲಿ ರೋಗಿಯ ಕಾಯಿಲೆಯು ಸಂಪೂರ್ಣವಾಗಿ ಗುಣವಾಗದೇ ಉಳಿದುಕೊಳ್ಳುವುದರೊಂದಿಗೆ ಅನಪೇಕ್ಷಿತ ಸಮಸ್ಯೆಗಳಿಗೆ ಕಾರಣವೆನಿಸುತ್ತದೆ. 

ಇವೆಲ್ಲಾ ಮಾಹಿತಿಗಳನ್ನು ರೋಗಿಗಳು ಅರಿತುಕೊಂಡಲ್ಲಿ ವೈದ್ಯರು ನೀಡುವ ಚಿಕಿತ್ಸೆಯು ಇನ್ನಷ್ಟು ಪರಿಣಾಮಕಾರಿ ಎನಿಸುವುದರೊಂದಿಗೆ, ಅನಾವಶ್ಯಕ ತೊಂದರೆಗಳು ಉದ್ಭವಿಸುವುದನ್ನು ತಡೆಗಟ್ಟಬಹುದಾಗಿದೆ. 

ನಿಮ್ಮ ವೈದ್ಯರು ನೀಡುವ ಔಷದಗಳನ್ನು ಜಾಣ್ಮೆಯಿಂದ, ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿ ಬಳಸಲು, ಔಷದಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀವು ತಿಳಿದಿರಲೇ ಬೇಕು. ಇವುಗಳಲ್ಲಿ ಔಷದಗಳ ಹೆಸರು, ಇವುಗಳನ್ನು ಸೇವಿಸುವ ಇದ್ದೇಶ ಹಾಗೂ ಪ್ರಮಾಣ, ಇವುಗಳ ಅಡ್ಡ - ದುಷ್ಪರಿಣಾಮಗಳು ಮತ್ತು ಇಂತಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಅಥವಾ ಚಿಕಿತ್ಸೆ, ಇವುಗಳೊಂದಿಗೆ ಸೇವಿಸಬಾರದ ಇತರ ಔಷದಗಳ ವಿವರ,ಸೇವಿಸಬೇಕಾದ ಸಮಯ, ಪ್ರಮಾಣ ಮತ್ತು ಅವಧಿ, ಇವುಗಳನ್ನು ಸೇವಿಸುವಾಗ ವರ್ಜಿಸಬೇಕಾದ ಖಾದ್ಯಪೆಯಗಳು, ಇವುಗಳನ್ನು ಸಂಗ್ರಹಿಸಿ ಇರಿಸಬೇಕಾದ ವಿಧಾನಗಳನ್ನು ವೈದ್ಯರು ಅಥವಾ ಫಾರ್ಮಸಿಸ್ಟ್ ಬಳಿಯಲ್ಲಿ ಕೇಳಿ ತಿಳಿದುಕೊಳ್ಳುವುದು ಸುರಕ್ಷಿತವೂ ಹೌದು. 

ರಾಸಾಯನಿಕ ಔಷದಗಳನ್ನು ಮಾತ್ರೆ, ಕ್ಯಾಪ್ಸೂಲ್, ಇಂಜೆಕ್ಷನ್, ಸಿರಪ್, ಮುಲಾಮು ಇವೆ ಮುಂತಾದ ಹಲವಾರು ರೂಪಗಳಲ್ಲಿ ಸಿದ್ಧಪಡಿಸುತ್ತಾರೆ. ತನ್ಮೂಲಕ ರೋಗಿಗಳ ಬಳಕೆಗೆ ಇವು ಅನುಕೂಲಕರವೆನಿಸುತ್ತವೆ. ಉದಾಹರಣೆಗೆ ವಾನ್ತಿಯಾಗುತ್ತಿರುವ ರೋಗಿಗೆ ಅಥವಾ ಸ್ಮೃತಿ ತಪ್ಪಿದ ರೋಗಿಗಳಿಗೆ ಮಾತ್ರೆ-ಸಿರಪ್ ಇತ್ಯಾದಿಗಳನ್ನು ನೀಡುವುದು ಅಸಾಧ್ಯವೆನಿಸುವುದರಿಂದ, ಇಂತಹ ರೋಗಿಗಳಿಗೆ ಅವಶ್ಯಕ ಔಷದಗಳನ್ನು ಇಂಜೆಕ್ಷನ್ ರೂಪದಲ್ಲಿ ನೀಡಬೇಕಾಗುವುದು. ಆದರೆ ಒಂದು ಔಷದವು ಅನೇಕ ರೂಪಗಳಲ್ಲಿ ಲಭ್ಯವಿದ್ದರೂ, ಇವುಗಳಲ್ಲಿನ ರಾಸಾಯನಿಕ ಔಷದಗಳ ಪ್ರಮಾಣವು ಏಕರೀತಿಯಲ್ಲಿ ಇರುವುದಿಲ್ಲ. ಇದೇ ಕಾರಣದಿಂದಾಗಿ ಇಂತಹ "ಬಹುರೂಪಿ" ಔಷದಗಳ ಬಗ್ಗೆ ಸಮರ್ಪಕ ಮಾಹಿತಿಯಿಲ್ಲದೆ ಇವುಗಳನ್ನು ಸೇವಿಸುವುದು ಸರಿಯಲ್ಲ. 

ಅವಧಿ ಮೀರಿದ ಔಷದಗಳು 

ಔಷದಗಳನ್ನು ಖರೀದಿಸುವಾಗ ಮತ್ತು ಸೇವಿಸುವ ಮುನ್ನ, ಇವುಗಳ ಹೊರಕವಚಗಳ ಮೇಲೆ ಮುದ್ರಿಸಿರುವ "ಅಂತಿಮ ಅವಧಿ"ಯನ್ನು ಗಮನಿಸಿ.  ತಯಾರಕರು ನಿಗದಿಸಿದ ದಿನಾಂಕದ ಬಳಿಕ ಈ ಔಷದವು ಸೇವನೆಗೆ ಯೋಗ್ಯವಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ. 

ನಾವು ಸೇವಿಸುವ ಖಾದ್ಯಪೇಯಗಳಂತೆಯೇ ಔಷದಗಳನ್ನು ತಯಾರಿಸಿದ ಬಳಿಕ ನಿಧಾನವಾಗಿ ಇವುಗಳಲ್ಲಿನ ಸತ್ವಗಳು ನಶಿಸಲು ಆರಂಭಿಸುತ್ತವೆ. ವಾತಾವರಣದಲ್ಲಿನ ಬೆಳಕು, ಉಷ್ಣತೆ ಮತ್ತು ತೆವಾಮ್ಶಗಳೂ ಇದಕ್ಕೆ ಕಾರಣವೆನಿಸುತ್ತವೆ. ಇದೇ ಕಾರಣದಿಂದಾಗಿ ತಯಾರಕರ ಸೂಚನೆಯಂತೆ ಔಷದಗಳನ್ನು ಸಂಗ್ರಹಿಸಿ ಇಡಬೇಕಾಗುತ್ತದೆ. ಆದರೆ ನಿಗದಿತ ಅವಧಿಯಲ್ಲಿ ಸಿದ್ಧ ಔಷದಗಳು ಕಳೆದುಕೊಳ್ಳಬಹುದಾದ ಸತ್ವಗಳನ್ನು ಸರಿದೂಗಿಸಲು, ಇವುಗಳನ್ನು ತಯಾರಿಸುವಾಗ ಒಂದಿಷ್ಟು ಹೆಚ್ಚುವರಿ ಔಷದೀಯ ಅಂಶಗಳನ್ನು ಸೇರಿಸಲಾಗುತ್ತದೆ. ಇದರಿಂದಾಗಿ ನಿಗದಿತ ಅವಧಿಯಲ್ಲಿ ಈ ಔಷದಗಳಲ್ಲಿನ ಸತ್ವಗಳು ಕೊಂಚ ನಶಿಸಿದರೂ, ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾಗುವುದಿಲ್ಲ. 

ಅಂತೆಯೇ ನಿಗದಿತ ಅವಧಿಯ ಮರುದಿನವೇ ಯಾವುದೇ ಔಷದಗಳು ಅಯೋಗ್ಯವೆನಿಸುವುದಿಲ್ಲ.ಏಕೆಂದರೆ ಈ ಔಷದಗಳಲ್ಲಿನ ಸತ್ವಗಳು ನಿಗದಿತ ದಿನಾಂಕದ ಬಳಿಕ ಇನ್ನಷ್ಟು ನಶಿಸುವ ಸಾಧ್ಯತೆಗಳಿರುವುದರಿಂದ, ನಿಮ್ಮ ಆರೋಗ್ಯದ ಸಮಸ್ಯೆ ಇವುಗಳ ಸೇವನೆಯಿಂದ ಪರಿಹಾರಗೊಳ್ಳದೆ ಇರುವುದರೊಂದಿಗೆ, ಇನ್ನಷ್ಟು ಉಲ್ಬಣಿ ಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆದರೆ ನಿರ್ದಿಷ್ಟ ಅವಧಿಯ ಬಳಿಕ ಇವುಗಳನ್ನು ಸೇವಿಸಿದಲ್ಲಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳು ಇರುವುದರಿಂದ, ನಿರ್ದಿಷ್ಟ ದಿನಾಂಕವನ್ನು ಹೊರಕವಚದ ಮೇಲೆ ಮುದ್ರಿಸಲಾಗುತ್ತದೆ. ವಿಶೇಷವೆಂದರೆ ಕೆಲವೊಂದು ಸಂದರ್ಭಗಳಲ್ಲಿ ಕೆಲ ಔಷದಗಳು ನಿಗದಿತ ದಿನಾಂಕಕ್ಕಿಂತ ಮೊದಲೇ ಕೆಟ್ಟುಹೋಗುವುದುಂಟು. ಇವುಗಳ ಬಣ್ಣ, ವಾಸನೆ ಮತ್ತು ಭೌತಿಕ ಬದಲಾವಣೆಗಳಿಂದ ಇದನ್ನು ಸುಲಭದಲ್ಲೇ ಪತ್ತೆ ಹಚ್ಚಬಹುದು. 

ಅಂತಿಮವಾಗಿ ಔಷದಗಳ ಬಗ್ಗೆ ಅವಶ್ಯಕ ಮಾಹಿತಿಗಳನ್ನು ಅರಿತುಕೊಳ್ಳುವುದರಿಂದ, ಇವುಗಳ ಸೇವನೆಯಿಂದ ಆರೋಗ್ಯ ಬಿಗಡಾಯಿಸುವ ಅಥವಾ ಅನಾರೋಗ್ಯ ಪೀಡಿತರ ಕಾಯಿಲೆಗಳು ಇನ್ನಷ್ಟು ಉಲ್ಬಣಿಸುವ ಮತ್ತು ಶಾರೀರಿಕ ಹಾಗೂ ಮಾನಸಿಕ ತೊಂದರೆಗಳಿಗೆ ಗುರಿಯಾಗುವುದನ್ನು ಸುಲಭದಲ್ಲೇ ನಿವಾರಿಸಿಕೊಳ್ಳಬಹುದು ಈನುವುದನ್ನು ನೆನೆಪಿಡಿ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೭-೦೮-೨೦೦೮ ರ ಸಂಚಿಕೆಯ ಬಳಕೆದಾರ; ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 



No comments:

Post a Comment