Tuesday, January 28, 2014

Artificial colouring agents





              ಅನಾರೋಗ್ಯಕರ ವರ್ಣಕಾರಕಗಳು!

ವರ್ಣರಂಜಿತ ಉಡುಪುಗಳು,ಬಣ್ಣಬಣ್ಣದ ಹೂಗಳು,ಹಚ್ಚ ಹಸುರಿನ ಮರಗಿಡಗಳು ಮತ್ತು ಬಾಯಲ್ಲಿ ನೀರೂರಿಸುವ ರಂಗುರಂಗಿನ ಖಾದ್ಯಪೇಯಗಳು ಸಹಜವಾಗಿಯೇ ನಮ್ಮ ಕಣ್ಮನಗಳನ್ನು ಸೆಳೆಯುತ್ತವೆ. ನೀವು ಮಾರುಕಟ್ಟೆಯಲ್ಲಿ ಹಣ್ಣುಹಂಪಲು ಅಥವಾ ತರಕಾರಿಗಳನ್ನು ಖರೀದಿಸುವಾಗ ಚೆನ್ನಾಗಿ ಕಲಿತ ಚಿನ್ನದ ಬಣ್ಣದ ಮಾವು ಮತ್ತು ಕಡುಗೆಂಪು ಬಣ್ಣದ ಸೇಬು ಅಥವಾ ಟೊಮೇಟೊಗಳನ್ನು ಆಯ್ದುಕೊಳ್ಳಲು ಇವುಗಳ ಆಕರ್ಷಕ ಬಣ್ಣಗಳೇ ಕಾರಣವಾಗಿರುತ್ತವೆ. ಅದೇ ರೀತಿಯಲ್ಲಿ ಕೃಷ್ಣವರ್ಣದ ಕನ್ಯೆಯರಿಗಿಂತಲೂ ಗೋಧಿಯ ಬಣ್ಣದ ಚೆಲುವೆಯರಿಗೆ ಯುವಕರು ಮನಸೋಲಲು, ಇವರ ಚರ್ಮದ ಬಣ್ಣವೇ ಕಾರಣವೆನಿಸುವುದು!. 

ಆದರೆ ಚಿನ್ನದ ಬಣ್ಣದ ಜಿಲೇಬಿ, ಕಡು ಕೇಸರಿ ಬಣ್ಣದ ಜಹಾಂಗೀರ್, ಹಸಿರು- ಹಳದಿ- ಗುಲಾಬಿ ವರ್ಣಗಳ ಐಸ್ ಕ್ರೀಮ್ ಗಳು, ಕಡುಗೆಂಪು ಬಣ್ಣದ ಹಣ್ಣಿನ ಜಾಮ್ ಗಳು ಮತ್ತು ವಿವಿಧ ಬಣ್ಣಗಳ ಪೇಯಗಳು ನೋಡುಗರ ಮನಸೆಳೆಯಲು ಇವುಗಳ ತಯಾರಿಕೆಯಲ್ಲಿ ಬಳಸಿರುವ ಕೃತಕ ವರ್ಣಕಾರಕ ರಾಸಾಯನಿಕಗಳೇ ಕಾರಣವಾಗಿರುತ್ತವೆ!. 

ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವೆನಿಸಿರುವ ವೈವಿಧ್ಯಮಯ ಬಣ್ಣಗಳನ್ನು ಪ್ರಾಕೃತಿಕ ( ಸ್ವಾಭಾವಿಕ) ಮತ್ತು ಕೃತಕ ಎಂದು ಎರಡು ವಿಧಗಳನ್ನಾಗಿ ವಿಂಗಡಿಸಬಹುದು. ಜನಸಾಮಾನ್ಯರು ದಿನನಿತ್ಯ ಸೇವಿಸುವ ಖಾದ್ಯಪೆಯಗಳು, ಔಷದಗಳು ಮತ್ತು ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಬಳಸುವ ಕೃತಕ ವರ್ನಕಾರಕ ರಾಸಾಯನಿಕಗಳು ನಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಆದರೆ ಇದರ ಅರಿವಿಲ್ಲದ ಕಾರಣದಿಂದಾಗಿ ನಾವಿಂದು ಇಂತಹ ಖಾದ್ಯಪೇಯಗಳನ್ನು ಅತಿಯಾಗಿ ಸೇವಿಸುತ್ತಿರುವುದು ಸುಳ್ಳೇನಲ್ಲ. 

ಅಡಿಟಿವ್ಸ್- Additives 

ಪೊಟ್ಟಣಗಳಲ್ಲಿ ಮಾರಾಟ ಮಾಡುವ ಸಿದ್ಧ ಅಥವಾ ಇತರ ರೂಪದ ಆಹಾರಪದಾರ್ಥಗಳ ತಯಾರಿಕೆಯಲ್ಲಿ, ಸಾಮಾನ್ಯವಾಗಿ ಅಡಿಟಿವ್ಸ್ ಎಂದು ಕರೆಯಲ್ಪಡುವ ರಾಸಾಯನಿಕ ದ್ರವ್ಯಗಳನ್ನು ಬಳಸಲಾಗುತ್ತದೆ. ಈ ರಾಸಾಯನಿಕಗಳನ್ನು ಬಳಸುವುದರಿಂದ ಇಂತಹ ಆಹಾರ ಪದಾರ್ಥಗಳ ಬಣ್ಣ ಮತ್ತು ರುಚಿಗಳು ಹೆಚ್ಚುವುದರೊಂದಿಗೆ, ಈ ಉತ್ಪನ್ನಗಳು ಸುದೀರ್ಘಕಾಲ ಕೆಡದೇ ಉಳಿಯುತ್ತವೆ. 

ದೊಡ್ಡ ಪ್ರಮಾಣದಲ್ಲಿ ಖಾದ್ಯಪೇಯಗಳನ್ನು ಶೇಖರಿಸಿಟ್ಟ ಸ್ಥಳಗಳಲ್ಲಿ ಗಾಳಿ, ಬೆಳಕು, ಅತಿಯಾದ ಉಷ್ಣತೆ ಅಥವಾ ತೇವಾಂಶಗಳಿಂದಾಗಿ ನಶಿಲ್ಪಡುವ ಬಣ್ಣಗಳನ್ನು ವರ್ಧಿಸಲು, ಸ್ವಾಭಾವಿಕ ಬಣ್ಣಗಳನ್ನು ಇನ್ನಷ್ಟು ವೃದ್ಧಿಸಲು, ಸ್ವಾಭಾವಿಕವಾಗಿ ವ್ಯತ್ಯಯವಾಗುವ ಬಣ್ಣಗಳನ್ನು ಸರಿಪಡಿಸಲು ಮತ್ತು ಬಣ್ಣಗಳಿಲ್ಲದ ಅಹಾರಪದಾರ್ಥಗಳಿಗೆ ಆಕರ್ಷಕ ಬಣ್ಣಗಳನ್ನು ನೀಡಲು, ಕೃತಕ ವರ್ಣಕಾರಕಗಳನ್ನು ಬಳಸಲಾಗುತ್ತದೆ. ಆದರೆ ನಾವು ಖರೀದಿಸುವ ಅನೇಕ ವಸ್ತುಗಳ ಬಣ್ಣಗಳು ಸ್ವಾಭಾವಿಕವೇ ಅಥವಾ ಕೃತಕವೇ ಎಂದು ಮೇಲ್ನೋಟಕ್ಕೆ ತಿಳಿಯುವುದಿಲ್ಲ. ಏಕೆಂದರೆ ಪ್ರಕೃತಿ ಸಹಜ ಬಣ್ಣಗಳಿರುವ ಹಣ್ಣುಹಂಪಲುಗಳಲ್ಲೂ ಇಂತಹ ಕೃತಕ ವರ್ಣಕಾರಕಗಳನ್ನು ಬಳಸುತ್ತಾರೆ. ಉದಾಹರಣೆಗೆ ಮರದಲ್ಲೇ ಕಲಿತ ಕಿತ್ತಳೆ ಹಣ್ಣುಗಳ ಹೊರಗಿನ ಸಿಪ್ಪೆಗೆ ಕೇಸರಿಮಿಶ್ರಿತ ಕಂಡು ಅಥವಾ ಕಡುಹಸಿರು ಬಣ್ಣವನ್ನು ನೀಡಲು "ಸಿಟ್ರಿಕ್ ರೆಡ್ ನಂ. ೨ " ಎನ್ನುವ ಕೃತಕ ವರ್ಣಕಾರಕವನ್ನು ಸಿಂಪಡಿಸುವುದು ನಿಮಗೂ ತಿಳಿದಿರಲಾರದು. 

ಅನೇಕ ವಿಧದ ಆಹಾರಪದಾರ್ಥಗಳ ತಯಾರಿಕೆಯಲ್ಲಿ ನೈಸರ್ಗಿಕ ಮೂಲಗಳಿಂದ ಲಭಿಸುವ ಬೀಟಾ ಕರೋಟಿನ್, ಪಪಾರಿಕಾ, ಓಲಿಯೋರೆಸಿನ್, ಅರಶಿನ, ಕುಂಕುಮ, ಕುಂಕುಮಕೇಶರ, ಪಾಪ್ರಿಕಾ, ದ್ರಾಕ್ಷೆ ಹಣ್ಣಿನ ಸಿಪ್ಪೆಯ ಸಾರ ಇತ್ಯಾದಿಗಳನ್ನು ವರ್ಣಕಾರಕಗಳನ್ನಾಗಿಬಳಸುತ್ತಾರೆ. ಆದರೆ ಕೃತಕ ರಾಸಾಯನಿಕ ವರ್ಣಕಾರಕಗಳನ್ನು ಅತ್ಯಲ್ಪ ವೆಚ್ಚದಲ್ಲಿ, ಅತ್ಯಂತ ಸುಲಭವಾಗಿ ತಯಾರಿಸಬಹುದಾಗಿದೆ. ಹೀಗಾಗಿ ಇವುಗಳಿಗೆ ಸಾಕಷ್ಟು ಬೇಡಿಕೆಯೂ ಇದೆ. ಕೆಲವು ಬಣ್ಣಗಳನ್ನು ವಿಷಕಾರಿ ಖನಿಜ ಮತ್ತು ಲೋಹಮೂಲದ ದ್ರವ್ಯಗಳಿಂದ ಸಿದ್ಧಪಡಿಸುವುದರಿಂದ, ಇವುಗಳು ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಎನಿಸುತ್ತವೆ. 

ರಾಸಾಯನಿಕವಾಗಿ ಸಂಯೋಜಿಸಲ್ಪಡುವ ಹೆಚ್ಚಿನ ಎಲ್ಲ ವರ್ಣಕಾರಕಗಳನ್ನು "ಅನಿಲೈನ್" ಎನ್ನುವ ಪೆಟ್ರೋಲಿಯಂ ಉತ್ಪನ್ನದಿಂದ ತಯಾರಿಸುತ್ತಾರೆ. ಆದರೆ ಶುದ್ಧ ರೂಪದ ಅನಿಲೈನ್, ವಿಷಕಾರಕವೂ ಹೌದು. ಇನ್ನು ಕೆಲವಿಧದ ವರ್ಣಕಾರಕಗಳನ್ನು ಇತರ ಉದ್ದೇಶಗಳಿಗಾಗಿ ( ಉದಾ-  ಬಟ್ಟೆಗಳಿಗೆ ಬಣ್ಣ ನೀಡಲು) ತಯಾರಿಸುವರಾದರೂ, ಇಂತಹ ಪಾಯಕಾರಿ ದ್ರವ್ಯಗಳನ್ನು ಖಾದ್ಯಪೆಯಗಳ ತಯಾರಿಕೆಯಲ್ಲಿ ಬಳಸುವ ಕೆಟ್ಟ ಹವ್ಯಾಸ ಭಾರತೀಯರಲ್ಲೂ ಇದೆ. 

ಸಾಮಾನ್ಯವಾಗಿ ಆಹಾರಪದಾರ್ಥಗಳ ತಯಾರಿಕೆಯಲ್ಲಿ ಬಳಸುವ "ಅಡಿಟಿವ್" ಗಳ ವಿಷಕಾರಕ ಚಹರೆಯನ್ನು ಐರೋಪ್ಯ ಒಕ್ಕೂಟದಲ್ಲಿ ವಾಡಿಕೆಯಲ್ಲಿರುವ "ಸಂಕೇತ ಸಂಖ್ಯೆ" ಗಳನ್ನೂ ಬಳಸಿ ಮರೆಮಾಚಲಾಗುತ್ತದೆ. ಇ- ನಂಬರ್ ಎಂದು ಕರೆಯಲ್ಪಡುವ ಈ ಸಂಖ್ಯೆಯಿಂದ ಅಡಿಟಿವ್ ಗಳನ್ನೂ ಗುರುತಿಸುವುದು ಜನಸಾಮಾನ್ಯರಿಗೆ ಅಸಾಧ್ಯವೆನಿಸುತ್ತದೆ. ಉದಾಹರಣೆಗೆ ಟಾರ್ಟಾಜೈನ್ ಎನ್ನುವ ಕೃತಕ ವರ್ಣಕಾರಕಕ್ಕೆ ಇ- ೧೦೨ ಸಂಖ್ಯೆಯನ್ನು ನೀಡಿದ್ದು, ಇದನ್ನು ಸಿಹಿತಿಂಡಿಗಳು, ಹಣ್ಣುಗಳ ಜಾಮ್, ಕುರುಕಲು ತಿಂಡಿಗಳು ಹಾಗೂ ಪೇಯಗಳಿಗೆ ಆಕರ್ಷಕ ಬಣ್ಣವನ್ನು ನೀಡಲು ಬಳಸಲಾಗುತ್ತಿದೆ. ಈ ರಾಸಾಯನಿಕವು ಪುಟ್ಟ ಮಕ್ಕಳಲ್ಲಿ ಆಸ್ತಮಾ ಮತ್ತು ಶರೀರದಾದ್ಯಂತ ತುರಿಕೆ- ದಡಿಕೆಗಳು ಮೂಡಲು ಕಾರಣವೆನಿಸಬಲ್ಲದು!. 

ಎರಿತ್ರೋಸೈನ್ ಅರ್ಥಾತ್ ಇ- ೧೨೭ ಸಂಖ್ಯೆಯ ರಾಸಾಯನಿಕವನ್ನು ಚೆರ್ರಿ ಹಣ್ಣುಗಳು, ಇತರ ಕೆಲವಿಧದ ಸಂಸ್ಕರಿತ ಹಣ್ಣುಗಳು, ಸಿಹಿ ತಿಂಡಿಗಳು, ಬೇಕರಿ ಉತ್ಪನ್ನಗಳು ಮತ್ತು ಕುರುಕಲು ತಿಂಡಿಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಈ ದ್ರವ್ಯವು ಮನುಷ್ಯನ ಶರೀರದಲ್ಲಿ ಥೈರಾಯ್ಡ್ ಹಾರ್ಮೋನ್ ಗಳ ಪ್ರಮಾಣವನ್ನು ಹೆಚ್ಚಿಸುವುದರಿಂದ, ಹೈಪರ್ ಥೈರಾಯ್ಡಿಸಂ ಎನ್ನುವ ಗಂಭೀರ ಸಮಸ್ಯೆಗೆ ಕಾರಣವೆನಿಸುವುದು. 

ಅಮರಾಂತ್ ಯಾನೆ ಇ- ೧೨ ಎನ್ನುವ ರಾಸಾಯನಿಕವನ್ನು ಕೇಕ್ ಗಳ ಮಿಶ್ರಣ, ಜೆಲ್ಲಿ ಕ್ರಿಸ್ಟಲ್ಸ್ ಇತ್ಯಾದಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಪ್ರಾಣಿಗಳ ಮೇಲೆ ಪ್ರಯೋಗಿಸಿ ನಡೆಸಿದ್ದ ಪರೀಕ್ಷೆಗಳಿಂದ ತಿಳಿದುಬಂದಂತೆ, ಈ ದ್ರವ್ಯವು ಕ್ಯಾನ್ಸರ್, ಜನ್ಮದತ್ತ ವೈಕಲ್ಯಗಳು ಮತ್ತು ಗರ್ಭಸ್ಥ ಶಿಶುಗಳ ಮರಣಕ್ಕೂ ಕಾರಣವೆನಿಸಬಲ್ಲದು ಎಂದು ತಿಳಿದುಬಂದಿದೆ. 

ಕೃತಕ ರಾಸಾಯನಿಕಗಳೊಂದಿಗೆ ಅಲ್ಯುಮಿನಿಯಂ, ಬೆಳ್ಳಿ, ಚಿನ್ನಗಳಂತಹ ಲೋಹಗಳನ್ನು ಕೂಡಾ ಇ- ಸಂಖ್ಯೆಯ ಮೂಲಕ ಮರೆಮಾಚಿ, ವರ್ಣಕಾರಕಗಳನ್ನಾಗಿ ಬಳಸುತ್ತಾರೆ ಎಂದಲ್ಲಿ ನೀವೂ ನಂಬಲಾರಿರಿ. ಆದರೆ ಇ- ೧೭೩, ಇ- ೧೭೪ ಮತ್ತು ಇ- ೧೭೫ ಸಂಕೇತ ಸಂಖ್ಯೆಗಳು ಅನುಕ್ರಮವಾಗಿ ಮೇಲೆ ನಮೂದಿಸಿರುವ ಲೋಹಗಳದ್ದೇ ಆಗಿವೆ!. 

ಕೃತಕ ವರ್ಣಕಾರಕಗಳು ಅಸ್ಥಿರವಾಗಿರುವುದರಿಂದ, ಇವುಗಳು ಖಾದ್ಯ ವಸ್ತುಗಳಿಗೆ ಶಾಶ್ವತವಾಗಿ "ಅಂಟಿಕೊಳ್ಳಲು " ಇತರ ರಾಸಾಯನಿಕ ಅಂಟುದ್ರವ್ಯಗಳನ್ನು ಬಳಸುತ್ತಾರೆ. ಇವುಗಳಲ್ಲಿ ಸೋಡಿಯಂ ಸಲ್ಫೈಟ್ , ಸೋಡಿಯಂ ನೈಟ್ರೇಟ್ ಮತ್ತು ಸಲ್ಫರ್ ಡೈ ಆಕ್ಸೈಡ್ ಸೇರಿವೆ. ಸಾಮಾನ್ಯವಾಗಿ ಸೋಡಿಯಂ ನೈಟ್ರೈಟ್ ನ್ನು, ಸಂಸ್ಕರಿಸಿ ಪ್ಯಾಕ್ ಮಾಡಿದ ಮಾಂಸ ಮತ್ತು ಮೀನುಗಳಲ್ಲಿ ಅಂಟುಕಾರಕಗಳನ್ನಾಗಿ ಬಳಸಲಾಗುತ್ತಿದ್ದು, ಇದೇ ದ್ರವ್ಯವನ್ನು ಬಟ್ಟೆಗಳಿಗೆ ಬಣ್ಣವನ್ನು ನೀಡಲೂ ಬಳಸುತ್ತಾರೆ. ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಂತೆ, ಈ ಲವಣವು ಮನುಷ್ಯನ ಉದರದಲ್ಲಿರುವ ರಾಸಾಯನಿಕಗಳೊಂದಿಗೆ ಸೇರಿ ಉತ್ಪನ್ನವಾಗುವ ನೈಟ್ರೋಸೈನ್, ಕ್ಯಾನ್ಸರ್ ವ್ಯಾಧಿಗೆ ಕಾರಣವೆನಿಸುತ್ತದೆ. 

ಕೃತಕ ವರ್ನಕಾರಕಗಳ ಬಗ್ಗೆ ಅಧ್ಯಯನಗಳನ್ನು ನಡೆಸಿರುವ ಸಂಶೋಧಕರ ಅಭಿಪ್ರಾಯದಂತೆ, ನಾವೆಲ್ಲರೂ ವರ್ಷಂಪ್ರತಿ ಸುಮಾರು ಐದರಿಂದ ಆರು ಕಿಲೋಗ್ರಾಂ ಗಳಷ್ಟು ಪ್ರಮಾಣದ ಸಂರಕ್ಷಕ, ವರ್ಣಕಾರಕ, ರುಚಿವರ್ಧಕ, ಖಾದ್ಯಗಳನ್ನು ಘನೀಕರಿಸುವ ಮತ್ತು ಸ್ಥಿರವಾಗಿಸಬಲ್ಲ ರಾಸಾಯನಿಕಗಳನ್ನು ಸೇವಿಸುತ್ತೇವೆ. ಈ ಅಪಾಯಕಾರಿ ರಾಸಾಯನಿಕಗಳನ್ನು ಶರೀರದಿಂದ ಹೊರಹಾಕಲು ನಮ್ಮ ಶರೀರವು ಸಾಕಷ್ಟು ಹೆಣಗಾಡಬೇಕಾಗುತ್ತದೆ. ಜೊತೆಗೆ ಇವುಗಳ ವಿಷಕಾರಕ ಮತ್ತು ಅನಪೇಕ್ಷಿತ ಅಡ್ಡ ಪರಿಣಾಮಗಳಿಂದಾಗಿ, ನಾವು ಅನೇಕ ವಿಧದ ಆರೋಗ್ಯದ ಸಮಸ್ಯೆಗಳಿಗೆ ಈಡಾಗಬೇಕಾಗುತ್ತದೆ. 

ಭಾರತದಲ್ಲಿ ಆಹಾರ ಉತ್ಪನ್ನಗಳ ತಯಾರಿಕೆಗೆ ಪರವಾನಿಗೆಯನ್ನು ನೀಡುವ ಸಂದರ್ಭದಲ್ಲಿ, ಸರಕಾರ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸದೆ ಇರುವುದರಿಂದ ಇವುಗಳ ತಯಾರಕರು ಯಾವುದೇ ನಿಯಮಗಳನ್ನು ಪರಿಪಾಲಿಸದೇ ಸ್ವೇಚ್ಚೆಯಿಂದ ವರ್ತಿಸುತ್ತಿರುವುದು ಸತ್ಯ. ಈ ಸಮಸ್ಯೆಯಿಂದ ಪಾರಾಗಲು ಸಂಸ್ಕರಿತ ಮತ್ತು ಸಿದ್ಧ ಆಹಾರ ಪದಾರ್ಥಗಳು ಮತ್ತು ಪೇಯಗಳನ್ನು ಸೇವಿಸದಿರುವುದೇ ಏಕಮಾತ್ರ ಪರಿಹಾರವಾಗಿದೆ.

ಕರ್ನಾಟಕದಲ್ಲೂ.......!

ಸುಮಾರು ಏಳು ವರ್ಷಗಳ ಹಿಂದೆ(೨೦೦೭ ರಲ್ಲಿ) ಮೈಸೂರಿನಲ್ಲಿ ನಡೆಸಿದ್ದ ಸಮೀಕ್ಷೆಯೊಂದರಿಂದ ತಿಳಿದುಬಂದಂತೆ, ಜನಸಾಮಾನ್ಯರು ದಿನನಿತ್ಯ ಬಳಸುವ- ಸೇವಿಸುವ ಬೇಳೆಕಾಳುಗಳೇ ಮುಂತಾದ ಆಹಾರ ಪದಾರ್ಥಗಳಲ್ಲೂ ಕೃತಕ ವರ್ಣಕಾರಕಗಳನ್ನು ಬಳಸುತ್ತಿರುವುದು ಪತ್ತೆಯಾಗಿತ್ತು. ಮೈಸೂರಿನ ೮ ದಿನಸಿ ಅಂಗಡಿಗಳಿಂದ ಸಂಗ್ರಹಿಸಿದ ಕಡಲೆ ಬೇಳೆಯ ಸ್ಯಾಂಪಲ್ ಗಳಲ್ಲಿನ ಶೇ. ೫೦ ರಷ್ಟು ಸ್ಯಾಂಪಲ್ ಗಳಲ್ಲಿ ಮೆಟಾನಿಲ್ ಯೆಲ್ಲೋ ಮತ್ತು ಶೇ. ೬ ರಷ್ಟು ಸ್ಯಾಂಪಲ್ ಗಳಲ್ಲಿ ಅರಾಮೈನ್ ಎನ್ನುವ ವರ್ಣಕಾರಕಗಳನ್ನು ಹಾಗೂ ಶೇ. ೯ ರಷ್ಟು ಹೆಸರುಕಾಳಿನ ಸ್ಯಾಂಪಲ್ ಗಳಲ್ಲಿ ಮೆಟಾನಿಲ್ ಯೆಲ್ಲೋ ಇರುವುದು ಪತ್ತೆಯಾಗಿತ್ತು. 

ಸಮೀಕ್ಷೆಗಾಗಿ ಸಂಗ್ರಹಿಸಿದ್ದ ಕಾಳಮೆಣಸಿನ ಮಾದರಿಗಳನ್ನು ಪರೀಕ್ಷಿಸಿದಾಗ, ಇವುಗಳು ಆಕರ್ಷಕವಾಗಿ ಮಿರುಗುವಂತೆ ಕಾಣಿಸಲು ಖನಿಜ ತೈಲಗಳನ್ನು ಬಳಸಿರುವುದು ತಿಳಿದುಬಂದಿತ್ತು. ಇಂತಹ ಖನಿಜ ತೈಲಗಳ ಸೇವನೆಯಿಂದ ವಾಕರಿಕೆ, ವಾಂತಿ ಹಾಗೂ ಭೇದಿಗಳಂತಹ ಸಮಸ್ಯೆಗಳು ಬಾಧಿಸುವ ಸಾಧ್ಯತೆಗಳಿವೆ. 

ಏಲಕ್ಕಿಯ ಶೇ.೫೦ ಕ್ಕೂ ಅಧಿಕ ಮಾದರಿಗಳಲ್ಲಿನ ತೈಲಾಂಶವನ್ನೇ ತೆಗೆದಿದ್ದು, ಕೃತಕ ಬಣ್ಣವನ್ನು ಬೆರೆಸುವುದರ ಮೂಲಕ ಇದನ್ನು ಮರೆಮಾಚಲು ಯತ್ನಿಸಿರುವುದು ಬಯಲಾಗಿತ್ತು. ಅಂತೆಯೇ ಶೇ. ೮ ರಷ್ಟು ಲವಂಗದ ಮಾದರಿಗಳಲ್ಲಿ ಕಿಂಚಿತ್ ಕೂಡಾ ಎಣ್ಣೆಯ ಅಂಶವೇ ಇರದಿರುವುದು ತಿಳಿದುಬಂದಿತ್ತು. ಅದೇ ರೀತಿಯಲ್ಲಿ ಅರಶಿನದ ಹುಡಿ, ಮೆಣಸಿನ ಹುಡಿ ಹಾಗೂ ಕೊತ್ತಂಬರಿಗಳಲ್ಲೂ ಕೃತಕ ವರ್ಣಕಾರಕಗಳನ್ನು ಧಾರಾಳವಾಗಿ ಬಳಸಿರುವುದು ಪತ್ತೆಯಾಗಿತ್ತು. 

ಪ್ರಾಯಶಃ ಇಂತಹ ಪರೀಕ್ಷೆಗಳಿಗೆ ಒಳಗಾಗದ ಸಹಸ್ರಾರು ಅನ್ಯ ಆಹಾರ ಪದಾರ್ಥಗಳಲ್ಲಿ ಯಾವ ರೀತಿಯ ರಾಸಾಯನಿಕಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸಲಾಗಿದೆ ಎನ್ನುವುದು, ಆ ಸೃಷ್ಟಿಕರ್ತನಿಗೂ ತಿಳಿದಿರಲಾರದು ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೪- ಒ೭- ೨೦೦೮ ರ ಸಂಚಿಕೆಯ ಬಳಕೆದಾರ; ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 




No comments:

Post a Comment