Wednesday, January 15, 2014

POLAAGUTTIRUVA SARAKAARADA HANAKKE YAARU HONE?




        ಪೋಲಾಗುತ್ತಿರುವ ಸರಕಾರದ ಹಣಕ್ಕೆ ಯಾರು ಹೊಣೆ?

 ಸರಕಾರೀ ಕಛೇರಿಗಳಲ್ಲಿ ದುಡಿಯುವ ತನ್ನ ಸಿಬಂದಿಗಳಿಗಾಗಿ ಸರಕಾರ ಒದಗಿಸುವ ಹಲವಾರು ಸೌಲಭ್ಯಗಳನ್ನು ಅನೇಕ ಅಧಿಕಾರಿಗಳು ಮತ್ತು ಸಿಬಂದಿಗಳು ದುರ್ಬಳಕೆ ಮಾಡುವ ವಿಚಾರವನ್ನು ನೀವು ಕಂಡು ಅಥವಾ ಕೇಳಿರಬಹುದು. ಇವುಗಳಲ್ಲಿ ಸ್ಥಿರ ದೂರವಾಣಿ ಮತ್ತು ಸರಕಾರೀ ವಾಹನಗಳು ಅತಿ ಹೆಚ್ಚು ದುರ್ಬಳಕೆಯಾಗುವ ಸೌಲಭ್ಯಗಳಾಗಿವೆ. ಸರಕಾರಿ ದೂರವಾಣಿಯನ್ನು ತತ್ಸಂಬಂಧಿತ ಕಛೇರಿಗಳ ಸಿಬಂದಿಗಳು ಮಾತ್ರ ದುರ್ಬಳಕೆ ಮಾಡುವುದಾದಲ್ಲಿ, ವಾಹನಗಳನ್ನು ಸಿಬಂದಿಗಳು, ಅಧಿಕಾರಿಗಳು ಮತ್ತು ಇವರ ಬಂಧು ಬಳಗಗಳು ದುರ್ಬಳಕೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಇದಲ್ಲದೆ ಸರಕಾರಿ ಕಛೇರಿಗಳಲ್ಲಿ ಲಭ್ಯವಿರುವ ಇನ್ನೂ ಹತ್ತುಹಲವು ಸೌಲಭ್ಯಗಳು ಇದೇ ರೀತಿಯಲ್ಲಿ ದುರ್ಬಳಕೆಯಾಗುತ್ತಿರುವುದು ಜನಸಾಮಾನ್ಯರಿಗೆ ತಿಳಿಯದ ವಿಚಾರವೇನಲ್ಲ. ಆದರೆ ಇಂತಹ ಸೌಲಭ್ಯಗಳನ್ನು ಹೊರತುಪಡಿಸಿ, ವಿನಾ ಕಾರಣ ಪೋಲಾಗುವ ಸರಕಾರದ ಹಣದ ಬಗ್ಗೆ ಪ್ರಾಯಶಃ ನಿಮಗೂ ತಿಳಿದಿರಲಾರದು.

ಅಂಚೆ ವೆಚ್ಚ 

ಸರಕಾರಿ ಕಛೇರಿಗಳ ದೈನಂದಿನ ವ್ಯವಹಾರಗಳಲ್ಲಿ ಪತ್ರ ವ್ಯವಹಾರವೂ ಒಂದಾಗಿದೆ. ಸರಕಾರಿ ಕಚೇರಿಗಳಿಗೆ ಬರುವ ಹಲವಾರು ಅರ್ಜಿಗಳು, ಪತ್ರಗಳು ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ, ದಿನನಿತ್ಯ ಅನೇಕ ಪತ್ರಗಳು- ಆದೇಶಗಳನ್ನು ಅಂಚೆಯ ಮೂಲಕ ಸಂಬಂಧಿಸಿದವರಿಗೆ ಕಳುಹಿಸಲಾಗುತ್ತದೆ. ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಸರಕಾರಿ ಕಚೇರಿಯಲ್ಲಿ ಪೋಲಾಗುತ್ತಿರುವ ಹಣಕ್ಕೆ ಸಂಬಂಧಿಸಿದ ನಿದರ್ಶನವೊಂದು ಇಲ್ಲಿದೆ.

ಪುತ್ತೂರಿನ ಬಳಕೆದಾರರ ಹಿತರಕ್ಷಣಾ ವೇದಿಕೆಯ ಸಂಚಾಲಕನಾಗಿರುವ ನಾನು, ಕೆಲವೇ ದಿನಗಳ ಹಿಂದೆ ವಿಧಾನ ಸೌಧದ ಸಚಿವಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಮಾಹಿತಿ ಹಕ್ಕು ಕಾಯಿದೆಯನ್ವಯ ಅರ್ಜಿಯೊಂದನ್ನು ಸಲ್ಲಿಸಿದ್ದೆನು.  ಈ ಅರ್ಜಿಯಲ್ಲಿ ಅಪೇಕ್ಷಿಸಿದ್ದ ಮಾಹಿತಿಗಳನ್ನು ೧೪ ವಿಭಿನ್ನ ಅಧಿಕಾರಿಗಳು ಒದಗಿಸಬೇಕಾದ ಪ್ರಯುಕ್ತ, ಈ ಅಧಿಕಾರಿಗಳಿಗೆ ಕರ್ನಾಟಕ ವಿಧಾನ ಸಭೆಯ ಅಧೀನ ಕಾರ್ಯದರ್ಶಿಯವರು ಪತ್ರವನ್ನು ಬರೆದು, ಈ ಮಾಹಿತಿಗಳನ್ನು ಅರ್ಜಿದಾರರಿಗೆ ಒದಗಿಸುವಂತೆ ಸೂಚಿಸಿದ್ದರು. 

ಇವುಗಳಲ್ಲಿ ನಾಲ್ಕು ಪತ್ರಗಳ ಯಥಾಪ್ರತಿಗಳನ್ನು ಮಾಹಿತಿ ಹಕ್ಕು ಕಾಯಿದೆಯ ನಿಯಮದಂತೆ ಅರ್ಜಿದಾರರಿಗೆ ಕಳುಹಿಸಿದ್ದರು. ವಿಶೇಷವೆಂದರೆ ಈ ನಾಲ್ಕೂ ಪತ್ರಗಳನ್ನು ಕಳುಹಿಸಿದ್ದ ಅಧಿಕಾರಿಯ ಕಚೇರಿಯ ಸಿಬಂದಿಗಳ ನಿರ್ಲಕ್ಷ್ಯದಿಂದಾಗಿ, ನಾಲ್ಕು ಪತ್ರಗಳನ್ನು ಪ್ರತ್ಯೇಕವಾಗಿ ನೊಂದಾಯಿತ ಅಂಚೆಯ ಮೂಲಕ ನನಗೆ  ಕಳುಹಿಸಿದ್ದರು. ಈ ನಾಲ್ಕೂ ಪತ್ರಗಳಲ್ಲಿ ವಿಧಾನ ಸಭೆಯ ಅಧೀನ ಕಾರ್ಯದರ್ಶಿಯವರ ಸಹಿ ಇದ್ದು, ಈ ನಾಲ್ಕು ಪತ್ರಗಳನ್ನು ಒಂದೇ ಲಕೋಟೆಯಲ್ಲಿ ಹಾಕಿ ಕಳುಹಿಸಿದ್ದಲ್ಲಿ, ಇವುಗಳ ಅಂಚೆ ವೆಚ್ಚವು ಕೇವಲ ೨೫ ರಿಂದ ೩೦ ರೂಪಾಯಿಗಳಷ್ಟೇ ಆಗುತ್ತಿತ್ತು. ಆದರೆ ಈ ನಾಲ್ಕು ಪತ್ರಗಳನ್ನು ಪ್ರತ್ಯೇಕವಾಗಿ ನೊಂದಾಯಿತ ಅಂಚೆಯ ಮೂಲಕ ಕಳುಹಿಸಿದ್ದುದರಿಂದ, ಇವುಗಳ ಅಂಚೆ ವೆಚ್ಚವು ೧೦೦ ರೂಪಾಯಿಗಳಾಗಿತ್ತು!. ಜನಸಾಮಾನ್ಯರು ತೆರುವ ತೆರಿಗೆಯ ಹಣವನ್ನು ಈ ರೀತಿಯಲ್ಲಿ ಪೋಲು ಮಾಡುವುದು ಸರ್ವಥಾ ಸಮರ್ಥನೀಯವಲ್ಲ ಎನ್ನುವ ವಿಚಾರವನ್ನು ಇದೀಗ ಅಧೀನ ಕಾರ್ಯದರ್ಶಿಯವರ ಗಮನಕ್ಕೆ ತರುವ ಸಲುವಾಗಿ ಪತ್ರವೊಂದನ್ನು ಅರ್ಜಿದಾರರು ಬರೆಯಲಿದ್ದಾರೆ. ಆದರೆ ಸರಕಾರದ ನೂರಾರು ಕಛೇರಿಗಳ ಅಧಿಕಾರಿಗಳಿಗೆ ಸರಕಾರದ ಬೊಕ್ಕಸದ ಹಣ ಈ ರೀತಿಯಲ್ಲಿ ಪೋ ಲಾಗುವುದರ ಮಾಹಿತಿಯನ್ನು ನೀಡುವುದು ಅರ್ಜಿದಾರರಿಗೆ ಅಸಾಧ್ಯವೆನಿಸುವುದು. ಇದೇ ಕಾರಣದಿಂದಾಗಿ ಪತ್ರಿಕೆಯಲ್ಲಿ ಈ ಮಹತ್ವಪೂರ್ಣ ವಿಚಾರವನ್ನು ಪ್ರಕಟಿಸುವ ಮೂಲಕ ಎಲ್ಲ ಸರಕಾರಿ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡುವ ಪ್ರಯತ್ನವಿದು.

ಆಧಾರ್ ಕಾರ್ಡ್ ನಲ್ಲೂ ಇದೇ ಸಮಸ್ಯೆ 

ದೇಶದ ಪ್ರಜೆಗಳೆಲ್ಲರೂ ಕಡ್ಡಾಯವಾಗಿ ಆಧಾರ್ ಕಾರ್ಡ್ ಪಡೆದುಕೊಳ್ಳಲೇಬೇಕೆಂದು ಕೇಂದ್ರ ಸರಕಾರ ಪ್ರಕಟಿಸಿದಂತೆಯೇ, ಪುತ್ತೂರಿನ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿದ ನಾನು ಮತ್ತು ನನ್ನ ಪತ್ನಿ,  ನಮ್ಮ ವಿವರಗಳು - ಭಾವಚಿತ್ರಗಳನ್ನು ನೀಡಿ ನೋಂದಣಿ ಮಾಡಿಸಿಕೊಂಡಿವು.  ಕೆಲವೇ ತಿಂಗಳುಗಳ ಬಳಿಕ ನನ್ನ ಆಧಾರ್ ಕಾರ್ಡ್ ಸಾಮಾನ್ಯ ಅಂಚೆಯ ಮೂಲಕ ಬಂದಿತ್ತು. ಇದಾದ ಒಂದು ತಿಂಗಳ ಬಳಿಕ ಪತ್ನಿಯ ಕಾರ್ಡ್ ಅಂಚೆಯ ಮೂಲಕ ಬಂದು ತಲುಪಿತ್ತು. ಇವೆರಡೂ ಆಧಾರ್ ಕಾರ್ಡ್ ಗಳನ್ನೂ ಸಾಮಾನ್ಯ ಅಂಚೆಯ ಮೂಲಕ ಕಳುಹಿಸಿದ್ದು, ಇವುಗಳಿಗೆ ತಲಾ ಐದು ರೂಪಾಯಿ ಅಂಚೆ ವೆಚ್ಚ ತಗಲಿತ್ತು. ಒಂದೇ ದಿನ ನೋಂದಣಿ ಮಾಡಿಸಿಕೊಂಡಿದ್ದ ನಮ್ಮಿಬ್ಬರ  ಎರಡೂ ಕಾರ್ಡ್ ಗಳನ್ನು ಒಂದು ಲಕೋಟೆಯಲ್ಲಿ ಕಳುಹಿಸಿದ್ದಲ್ಲಿ, ಅಂಚೆ ವೆಚ್ಚವು ಕೇವಲ ಐದು ರೂಪಾಯಿಯಾಗುತ್ತೀತ್ತು. ಆದರೆ ಪ್ರತ್ಯೇಕವಾಗಿ ಕಾರ್ಡ್ ಗಳನ್ನೂ ಕಳುಹಿಸಿದ್ದುದರಿಂದ ಈ ವೆಚ್ಚವು ದುಪ್ಪಟ್ಟಾಗಿತ್ತು!. ಇದೇ ರೀತಿಯಲ್ಲಿ ಕೋಟ್ಯಂತರ ದಂಪತಿಗಳ ಹಾಗೂ ಒಂದೇ ಕುಟುಂಬದ ಹಲವು ಸದಸ್ಯರ ಆಧಾರ್ ಕಾರ್ಡ್ ಗಳನ್ನು ಪ್ರತ್ಯೇಕವಾಗಿ ಅಂಚೆಯ ಮೂಲಕ ಕಳುಹಿಸುವುದರಿಂದ, ಸ್ವಾಭಾವಿಕವಾಗಿಯೇ ಇವುಗಳ ಅಂಚೆ ವೆಚ್ಚವು ಹಲವಾರು ಪಟ್ಟು ಹೆಚ್ಚುತ್ತದೆ. ಅರ್ಥಾತ್, ಆಧಾರ ಕಾರ್ಡ್ ಗಳನ್ನು ಪ್ರತ್ಯೇಕವಾಗಿ ಕಳುಹಿಸಲು ಕೋಟ್ಯಂತರ ರೂಪಾಯಿಗಳನ್ನು ಅನಾವಶ್ಯಕವಾಗಿ ಪೋಲು ಮಾಡಲಾಗುತ್ತಿದೆ. 

ಸರಕಾರದ ಹಣವನ್ನು ಈ ರೀತಿಯಲ್ಲಿ ಅನಾವಶ್ಯಕವಾಗಿ ಪೋಲು ಮಾಡುವುದನ್ನು ಇನ್ನು ಮುಂದಾದರೂ ನಿಲ್ಲಿಸಿದಲ್ಲಿ, ಪ್ರಜೆಗಳು ನೀಡುವ ತೆರಿಗೆಯ ಹಣವನ್ನು ಇತರ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬಹುದಾಗಿದೆ.

ಚಿತ್ರದಲ್ಲಿ ನಾಲ್ಕು ಅಂಚೆ ಲಕೋಟೆ ಮತ್ತು ನಾಲ್ಕು ಪತ್ರಗಳನ್ನು ಕಾಣಬಹುದು. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

No comments:

Post a Comment