Thursday, December 12, 2013

Cesarean Section



                                     
                ಸಿಸೇರಿಯನ್ ಹೆರಿಗೆಗಳು ಹೆಚ್ಚುತ್ತಿರುವುದೇಕೆ?

ಸುಮಾರು ಮೂರು ದಶಕಗಳ ಹಿಂದಿನ ತನಕ ನಮ್ಮ ದೇಶದಲ್ಲಿ ಸ್ವಾಭಾವಿಕ ಹೆರಿಗೆಗಳ ಸಂಖ್ಯೆಯೇ ಹೆಚ್ಚಾಗಿರುತಿತ್ತು. ಆದರೆ ಇಂದು ಸಿಸೇರಿಯನ್ ಸೆಕ್ಷನ್ ಶಸ್ತ್ರಚಿಕಿತ್ಸೆಯ ಮೂಲಕ ನಡೆಯುವ ಹೆರಿಗೆಗಳು ಗಣನೀಯವಾಗಿ ಹೆಚ್ಚುತ್ತಿವೆ. ಆದರೆ ಇದಕ್ಕೆ ಸೂಕ್ತ ಹಾಗೂ ಸಮರ್ಥನೀಯ ಕಾರಣಗಳೂ ಇವೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 
----------            ---------------             --------------                ----------------                ---------------            ---------------             --------------------

ಚೊಚ್ಚಲ ಹೆರಿಗೆಗಾಗಿ ತವರಿಗೆ ಬಂದಿದ್ದ ಸುಮತಿಯು ಮುತ್ತೂರಿನ ಖಾಸಗಿ ಆಸ್ಪತ್ರೆಯೊಂದನ್ನು ಆಯ್ಕೆ ಮಾಡಿ, ಅಲ್ಲಿನ ಪ್ರಸೂತಿ ತಜ್ಞರನ್ನು ಭೇಟಿಯಾಗಿದ್ದಳು. ಈ ಹಿಂದೆ ಆಕೆಯನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ವರದಿಯನ್ನು ಪರಿಶೀಲಿಸಿದ ಈ ವೈದ್ಯರು, ಸುಮತಿಯ ಶಾರೀರಿಕ ತಪಾಸಣೆಯನ್ನು ನಡೆಸಿದ್ದರು. ಬಳಿಕ ಆಕೆಯ ಹಾಗೂ ಗರ್ಭಸ್ಥ ಶಿಶುವಿನ ಆರೋಗ್ಯ ಉತ್ತಮವಾಗಿದ್ದು, ಯಾವುದೇ ಸಮಸ್ಯೆಗಳಿಲ್ಲದೇ ಸಾಮಾನ್ಯ ಹೆರಿಗೆಯಾಗುವ ಆಶ್ವಾಸನೆಯನ್ನು ನೀಡಿದ್ದರು. 

ನಿರಾಳವಾಗಿ ಮನೆಗೆ ಮರಳಿದ್ದ ಸುಮತಿಯು ಮೂರು ವಾರ ಕಳೆಯುವಷ್ಟರಲ್ಲಿ ಮಂಕಾಗಿ ಚಿಂತಾಕ್ರಾಂತಳಾಗಿದ್ದಳು. ಮಗಳ ಪರಿಸ್ಥಿತಿಯನ್ನು ಕಂಡ ಸೀತಮ್ಮನೂ ಚಿಂತಿತರಾಗಿದ್ದರು. ಇವರಿಬ್ಬರ ಚಿಂತೆಗೆ ನಿರ್ದಿಷ್ಟ ಕಾರಣಗಳೂ ಇದ್ದವು. 

ಸುಮತಿಯನ್ನು ಕಾಣಲು ಬರುತ್ತಿದ್ದ ಬಂಧುಮಿತ್ರರು ಆಕೆಯ ಮನದಲ್ಲಿ ಸಂದೇಹ ಹಾಗೂ ಗೊಂದಲ ಮೂಡುವಂತಹ ವರ್ಣರಂಜಿತ "ಸುದ್ದಿ" ಗಳನ್ನು ಹೇಳುತ್ತಿದ್ದುದೆ ತಾಯಿ ಮಗಳ ಚಿಂತೆಗೆ ಮೂಲಕಾರಣವೆನಿಸಿತ್ತು. ಈ ಬಂಧುಮಿತ್ರರ ಅಭಿಪ್ರಾಯದಂತೆ ಮುತ್ತೂರಿನ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದ "ಸಾಮಾನ್ಯ ಹೆರಿಗೆ" ಗಳ ಸಂಖ್ಯೆ ಬೆರಳೆಣಿಕೆಯಷ್ಟೇ ಇದ್ದಿತು. ಆದರೆ "ಸಿಸೇರಿಯನ್ ಸೆಕ್ಷನ್" ಶಸ್ತ್ರಚಿಕಿತ್ಸೆಯ ಮೂಲಕ ನಡೆಯುವ ಹೆರಿಗೆಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿತ್ತು!. ಇದಕ್ಕೂ ಮಿಗಿಲಾಗಿ ಪ್ರಾರಂಭಿಕ ಹಂತದಲ್ಲಿ "ನಾರ್ಮಲ್ ಡೆಲಿವರಿ' ಆಗುವುದೆಂದು ವೈದ್ಯರು ಭರವಸೆ ನೀಡಿದ್ದ ಬಹುತೇಕ ಗರ್ಭಿಣಿಯರಿಗೆ ಅಂತಿಮವಾಗಿ ಇಲ್ಲಸಲ್ಲದ ನೆಪಗಳನ್ನು ಒಡ್ಡಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸುವುದು ವಾಡಿಕೆಯಾಗಿತ್ತು. ಜನಸಾಮಾನ್ಯರು ಆಡಿಕೊಳ್ಳುವಂತೆ ಈ ವಿಶಿಷ್ಟ ಸಮಸ್ಯೆಗೆ ಖಾಸಗಿ ಆಸ್ಪತ್ರೆಗಳ ಮತ್ತು ತಜ್ಞವೈದ್ಯರ "ಧನದಾಹ" ವೇ ಪ್ರಮುಖ ಕಾರಣವಾಗಿತ್ತು. ಬಂಧುಮಿತ್ರರಿಂದ ಪದೇಪದೇಇಂತಹ ವರದಿಗಳನ್ನು ಕೇಳಿದ ಚೊಚ್ಚಲ ಬಸುರಿಯ ತಲೆ ಚಿಟ್ಟು ಹಿಡಿದಿತ್ತು. ತುಂಬು ಗರ್ಭಿಣಿಗೆಧೈರ್ಯ ತುಂಬುವ ಬದಲಾಗಿ ಆಕೆಯ ಸ್ಥೈರ್ಯವನ್ನೇ ಉಡುಗಿಸುವಂತಹ ಸುದ್ದಿಗಳನ್ನು ಬಿತ್ತರಿಸುತ್ತಿದ್ದ ಬಂದುಮಿತ್ರರ ವರ್ತನೆಗಳಿಂದಾಗಿಯೇ ಸುಮತಿ ಮಂಕಾಗಿದ್ದಳು. 

ಮಗಳ ಸ್ಥಿತಿಯನ್ನು ಕಂಡು ಗಾಬರಿಯಾದ ಸೀತಮ್ಮನು ಆಕೆಯನ್ನು ತಮ್ಮ ಕುಟುಂಬ ವೈದ್ಯರ ಬಳಿಗೆ ಕರೆದೊಯ್ದರು. ಸುಮತಿಯ ಸಂದೇಹಗಳನ್ನು ಕೇಳಿ ತಿಳಿದುಕೊಂಡ ವೈದ್ಯರು ಮುಗುಳುನಗೆ ಬೀರಿದ್ದರು. ಬಳಿಕ ಸುಮತಿಗೆ ಸಿಸೇರಿಯನ್ ಸೆಕ್ಷನ್ ಹೆರಿಗೆಯ ಬಗ್ಗೆ ವಿಶದವಾಗಿ ವಿವರಿಸಿ, ತಮ್ಮ ಅಜ್ಞಾನದಿಂದಾಗಿ ಈ ಬಗ್ಗೆ ಜನಸಾಮಾನ್ಯರು ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ನಿರ್ಲಕ್ಷಿಸಲು ಹೇಳಿದ್ದರು. ಜೊತೆಗೆ ತಜ್ನವೈದ್ಯರು ತಿಳಿಸಿದಂತೆ ಆಕೆಗೆ ನಿಶ್ಚಿತವಾಗಿಯೂ ನಾರ್ಮಲ್ ಡೆಲಿವರಿ ಆಗುವುದೆಂದು ಭರವಸೆಯನ್ನು ನೀಡಿ ಸಾಂತ್ವನಿಸಿದ್ದರು. ತನ್ನ ಚಿರಪರಿಚಿತ ಕುಟುಂಬ ವೈದ್ಯರ ಮಾತುಗಳನ್ನು ಆಲಿಸಿದ ಸುಮತಿಯು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಳು. 

ನಿಜ ಹೇಳಬೇಕಿದ್ದಲ್ಲಿ ಸುಮತಿಗೆ ಸಿಸೇರಿಯನ್ ಹೆರಿಗೆಯ ಬಗ್ಗೆ ಹೆದರಿಕೆಯೇನೂ ಇರಲಿಲ್ಲ. ಆದರೆ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ಪಿನ್ಚಿನಿ ಪಡೆಯುತ್ತಿದ್ದ ಆಕೆಯ ತಂದೆಗೆ ಹಾಗೂ ಪುಟ್ಟದೊಂದು ಗೂಡಂಗಡಿಯನ್ನು ನಡೆಸುತ್ತಿದ್ದ ಆಕೆಯ ಗಂಡನಿಗೆ ಸಿಸೇರಿಯನ್ ಹೆರಿಗೆಯ ಖರ್ಚು ವೆಚ್ಚಗಳನ್ನು ಭರಿಸುವಷ್ಟು ಆದಾಯವಿರಲಿಲ್ಲ. ತನ್ನ ಹೆರಿಗೆ, ಮಗುವಿನ ನಾಮಕರಣ ಮತ್ತು ಮುಂದಿನ ಮೂರು ತಿಂಗಳ ಕಾಲ ಬಾಣಂತಿ- ಮಗುವಿನ ಆರೈಕೆಗಳ ವೆಚ್ಚಗಲೇ ತನ್ನ ತಂದೆತಾಯಂದಿರಿಗೆ ಹೊರೆಯಾಗಬಹುದೆಂಬ ಭೀತಿಯೇ ಆಕೆಯ ಚಿಂತೆಗೆ ಕಾರಣವೆನಿಸಿತ್ತು. ಆದರೆ ಎರಡು ವಾರಗಳ ಬಳಿಕ ಸುಮತಿಯು ನಾರ್ಮಲ್ ಡೆಲಿವರಿಯ ಮೂಲಕ ಆರೋಗ್ಯವಂತ ಹೆಣ್ಣುಮಗುವನ್ನು ಹೆತ್ತು, ಮೂರು ದಿನಗಳ ಬಳಿಕ ಮನೆಗೆ ಮರಳಿದ್ದಳು. 

ಹೆರಿಗೆ: ಅಂದು- ಇಂದು 

ಹಲವಾರು ದಶಕಗಳ ಹಿಂದೆ ನಮ್ಮ ದೇಶದಲ್ಲಿ ಹೆಚ್ಚಿನ ಹೆರಿಗೆಗಳು ಮನೆಗಳಲ್ಲೇ ನಡೆಯುತ್ತಿದ್ದವು. ಅವಿಭಕ್ತ ಕುಟುಂಬಗಳಲ್ಲಿನ ಹಿರಿಯ ಹೆಂಗಸರು ಅಥವಾ ಸೂಲಗಿತ್ತಿಯರು ಮತ್ತು ಅಪರೂಪದಲ್ಲಿ ವೈದ್ಯರು ಕ್ಲಿಷ್ಟಕರ ಹೇರಿಗೆಗಳನ್ನೂ ಮನೆಯಲ್ಲೇ ಮಾಡಿಸುತ್ತಿದ್ದರು. ಸುಸಜ್ಜಿತ ಆಸ್ಪತ್ರೆಗಳು, ತಜ್ಞ ವೈದ್ಯರು ಹಾಗೂ ಅತ್ಯಾಧುನಿಕ ಉಪಕರಣಗಳೇಇಲ್ಲದಿದ್ದ ಆ ಕಾಲದಲ್ಲಿ, ಸುಸೂತ್ರವಾಗಿ ಹೆರಿಗೆಯಾಗಿ ಬಾಣಂತಿ ಬದುಕಿ ಉಳಿದಲ್ಲಿ ಪುನರ್ಜನ್ಮ ಪಡೆದಳೆಂದು ಮತ್ತು ಅಂಗು ಬದುಕಿದರೆ ಅದೃಷ್ಟ ಚೆನ್ನಾಗಿದೆ ಎಂದು ಪರಿಗಣಿಸಲಾಗುತ್ತಿತ್ತು!. 

ಅಂದಿನ ದಿನಗಳಲ್ಲಿ ಜನಸಾಮಾನ್ಯರ ಅಜ್ಞಾನ, ಸಾರಿಗೆ ಸೌಲಭ್ಯಗಳ ಹಾಗೂ ಆಸ್ಪತ್ರೆಗಳ ಅಭಾವ ಮತ್ತು ವೈದ್ಯರ ಕೊರತೆಗಳಿಂದಾಗಿ, ಗರ್ಭವತಿ ಮಹಿಳೆಯರು ಈಗಿನಂತೆ ನಿಗದಿತ ಅವಧಿಯಲ್ಲಿ ಶಾರೀರಿಕ ತಪಾಸಣೆ ಮಾಡಿಸಿಕೊಳ್ಳಲು ಆಗುತ್ತಿರಲಿಲ್ಲ. ಹಾಗೂ ಇದೇ ಕಾರಣದಿಂದಾಗಿ ಕೆಲವೊಂದು ನಿರ್ದಿಷ್ಟ ಸಮಸ್ಯೆಗಳನ್ನು ಹೆರಿಗೆಗೆ ಮುನ್ನ ಪತ್ತೆಹಚ್ಚಲೂ ಆಗುತ್ತಿರಲಿಲ್ಲ. ತತ್ಪರಿಣಾಮವಾಗಿ ಪ್ರಸವ ವೇದನೆ ಆರಂಭವಾದ ಬಳಿಕ ಗಂಭೀರ ತೊಂದರೆಗಳು ತಲೆದೋರಿದಲ್ಲಿ, ಇವುಗಳನ್ನು ಪರಿಹರಿಸಬಲ್ಲ ವೈದ್ಯರು ಅಥವಾ ಆಸ್ಪತ್ರೆಗಳೇ ಇಲ್ಲದಿದ್ದುದರಿಂದ ಬಾಣಂತಿ- ಮಗು ಮರಣಿಸುತ್ತಿದ್ದುದು ಅಪರೂಪವಾಗಿರಲಿಲ್ಲ. 

ಆದರೆ ಇಂದು ಅತ್ಯಾಧುನಿಕ ಉಪಕರಣಗಳು- ಪರೀಕ್ಷೆಗಳು, ಸುಸಜ್ಜಿತ  ಆಸ್ಪತ್ರೆಗಳು ಮತ್ತು ತಜ್ಞವೈದ್ಯರ ಸೇವೆ ಭಾರತದ ಮೂಲೆಮೂಲೆಗಳಲ್ಲಿ ಲಭ್ಯವಿದೆ. ಹಾಗೂ ಇದರಿಂದಾಗಿ ಹೆರಿಗೆಯ ಸಂದರ್ಭದಲ್ಲಿ ಅಥವಾ ಅನಂತರ ಸಂಭವಿಸುತ್ತಿದ್ದ ತಾಯಿ- ಮಗುವಿನ ಮರಣದ ಪ್ರಮಾಣಗಳು ಗಣನೀಯವಾಗಿ ಕಡಿಮೆಯಾಗಿವೆ. ಅಂತೆಯೇ ಸಿಸೇರಿಯನ್ ಸೆಕ್ಷನ್ ಶಸ್ತ್ರ ಚಿಕಿತ್ಸೆಯೂ ಇದಕ್ಕೊಂದು ಪ್ರಧಾನ ಕಾರಣವೆನಿಸಿದೆ!. 

ಏನಿದು ಸಿಸೇರಿಯನ್ ಸೆಕ್ಷನ್ 

ಗರ್ಭಿಣಿಯರ ಉದರ ಹಾಗೂ ಗರ್ಭಕೋಶವನ್ನು ಸೀಳಿ, ಗರ್ಭಸ್ಥ ಶಿಶುವನ್ನು ಸುರಕ್ಷಿತವಾಗಿ ಹೊರತೆಗೆಯುವ ಶಸ್ತ್ರಚಿಕಿತ್ಸೆಯನ್ನು ಸಿಸೇರಿಯನ್ ಸೆಕ್ಷನ್ ಎಂದು ಕರೆಯುತ್ತಾರೆ. ಸ್ವಾಭಾವಿಕ ರೀತಿಯಲ್ಲಿ ಹಾಗೂ ಸ್ವಾಭಾವಿಕ ಮಾರ್ಗದ ಮೂಲಕ ಹೆರಿಗೆಯಾಗಲು ಅಥವಾ ಗರ್ಭಸ್ಥ ಶಿಶುವಿಗೆ ಕಾರಣಾಂತರಗಳಿಂದ ಪ್ರಾಣಾ ಪಾಯದಂತಹ ತೊಂದರೆಗಳು ಬಾಧಿಸಿದಲ್ಲಿ, ಗರ್ಭಿಣಿಯ ಪ್ರಾಣಕ್ಕೆ ಅಪಾಯಗಳಿರುವ ಸ್ಥಿತಿಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆಯುಸುರಕ್ಷಿತ ಹಾಗೂ ಪ್ರಾನರಕ್ಷಕ ಎನಿಸುವುದು. ಆದರೆ ತಾಯಿ- ಮಗುವಿನ ಆಸ್ಪತ್ರೆ ವಾಸದ ಅವಧಿ ಮತ್ತು ಖರ್ಚು ವೆಚ್ಚಗಳನ್ನು ಹೆಚ್ಚಿಸುವ ಏಕಮಾತ್ರ ಕಾರಣದಿಂದಾಗಿ ಸಿಸೇರಿಯನ್ ಸೆಕ್ಷನ್ ಶಸ್ತ್ರಚಿಕಿತ್ಸೆಗೆ ಇಲ್ಲಸಲ್ಲದ ಅಪವಾದಗಳೂ ತಟ್ಟಿವೆ!. 

ಅಸಾಮಾನ್ಯ ಪರಿಸ್ಥಿತಿಯಿಂದಾಗಿ ಸ್ವಾಭಾವಿಕ ಹೆರಿಗೆಯಲ್ಲಿ ಗಂಭೀರ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿದ್ದಲ್ಲಿ, ಸ್ವಾಭಾವಿಕ ಜನನ ಮಾರ್ಗದ ಮೂಲಕ ಹೆರಿಗೆಗೆ ತೊಂದರೆಗಳು ಸಂಭವಿಸುವ ಸಾಧ್ಯತೆಗಳು ಇದ್ದಲ್ಲಿ, ತಾಯಿ- ಮಗುವಿನ ಪ್ರಾಣಕ್ಕೆ ಅಪಾಯ ಸಂಭವಿಸಬಲ್ಲದು. ಅದೇ ರೀತಿಯಲ್ಲಿ ಗರ್ಭಸ್ಥ ಶಿಶುವಿನ ಶಾರೀರಿಕ ಬೆಳವಣಿಗೆ ಅಧಿಕವಿದ್ದಲ್ಲಿ ಹಾಗೂ ಅವಳಿ- ತ್ರಿವಳಿ ಶಿಶುಗಲಿದ್ದ ಸಂದರ್ಭದಲ್ಲಿ, ಪ್ರಸವ ವೇದನೆ ಪ್ರಾರಂಭವಾಗಿ ಸಾಕಷ್ಟು ಸಮಯ ಕಳೆದ ಬಳಿಕವೂ ಸ್ವಾಭಾವಿಕ ಹೆರಿಗೆ ಆಗದಿದ್ದಲ್ಲಿ, ಮಧ್ಯ ವಯಸ್ಸಿನ ಹಾಗೂ ವಿವಾಹವಾಗಿ ಹಲವಾರು ವರ್ಷಗಳ ಬಳಿಕ ಗರ್ಭ ಧರಿಸಿದ ಮಹಿಳೆಯರಿಗೆ, ಇದಕ್ಕೂ ಮುನ್ನ ಸಿಸೇರಿಯನ್ ಹೆರಿಗೆ ಆಗಿದ್ದವರಲ್ಲಿ, ಕೆಲವೊಂದು ಸಂದರ್ಭಗಳಲ್ಲಿ ಸಿಸೇರಿಯನ್ ಹೆರಿಗೆ ನಡೆಸುವುದು ಅನಿವಾರ್ಯವೆನಿಸುವುದು. ಇದಲ್ಲದೆ ಕಷ್ಟಕರ ಅಥವಾ ತ್ರಾಸದಾಯಕ ಹೆರಿಗೆಯನ್ನು ಸಂದೆಹಿಸಿದಲ್ಲಿ, ಗರ್ಭಕೋಶದ ಆಕುಂಚನಗಳು ಕಡಿಮೆಯಾಗಿದ್ದಲ್ಲಿ, ಗರ್ಭಕೊಶದಲ್ಲಿನ ಮಗುವಿನ ಸ್ಥಾನದ ಅಸಾಮಾನ್ಯತೆಗಳು ಮತ್ತು ತಾಯಿ- ಮಗುವಿನ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಸಿಸೇರಿಯನ್ ಶಸ್ತ್ರ ಚಿಕಿತ್ಸೆಯನ್ನು ನಡೆಸಬೇಕಾಗುವುದು. ಇದಲ್ಲದೆ ಗರ್ಭಸ್ಥ ಶಿಶುವಿಗೆ ಅವಶ್ಯಕ ಪ್ರಮಾಣದ ಆಮ್ಲಜನಕ ದೊರೆಯದೇ ಉದ್ಭವಿಸುವ Foetal distresss ಎನ್ನುವ ಸ್ಥಿತಿಯಲ್ಲಿ, ಶಿಶುವಿನ ಮೆದುಳಿಗೆ ಸಂಭವಿಸಬಲ್ಲ ಹಾನಿಯನ್ನು ತಡೆಗಟ್ಟುವ ಸಲುವಾಗಿ ಕ್ಷಿಪ್ರಗತಿಯಲ್ಲಿ ಸಿಸೇರಿಯನ್ ಸೆಕ್ಷನ್ ನಡೆಸಬೇಕಾಗುತ್ತದೆ. ಅಂತೆಯೇ ಶಿಶುವಿಗೆ ಅಪಾಯಕಾರಿ ಎನಿಸಬಲ್ಲ "ಹೊಕ್ಕುಳ ಬಳ್ಳಿ" ಗೆ ಸಂಬಂಧಿಸಿದ ತೊಂದರೆಗಳು ಹಾಗೂ ಮಧುಮೇಹ- ಅಧಿಕ ರಕ್ತದೊತ್ತಡಗಳಂತಹ ಗಂಭೀರ ಕಾಯಿಲೆಗಳಿಂದ ಪೀಡಿತರಾಗಿರುವ ಗರ್ಭಿಣಿಯರಿಗೂ ಸಿ- ಸೆಕ್ಷನ್ ನಡೆಸಲೇ ಬೇಕಾಗುತ್ತದೆ. 

ತಜ್ಞ ವೈದ್ಯರು ಸೂಚಿಸದೇ ಸಿಸೇರಿಯನ್ ಹೆರಿಗೆಗಳು ನಡೆಯಲು ಜನಸಾಮಾನ್ಯರೇ ಕಾರಣವೆಂದಲ್ಲಿ ನೀವೂ ನಂಬಲಾರಿರಿ. ಜ್ಯೋತಿಷ್ಯದಲ್ಲಿ ಅಪರಿಮಿತ ವಿಶ್ವಾಸವಿರುವ ಅನೇಕ ಹಿಂದೂ ಹಾಗೂ ಅನ್ಯಧರ್ಮೀಯರು ಅಶುಭ ದಿನಗಳಲ್ಲಿ ಹೆರಿಗೆಯಾಗುವುದನ್ನು ತಪ್ಪಿಸಲು ಅಥವಾ ಶುಭ ಮುಹೂರ್ತದಲ್ಲೇ ತಮ್ಮ ವಂಶೋದ್ಧಾರಕರ ಜನನವಾಗಲು, ಜ್ಯೋತಿಷ್ಯರು ನಿರ್ಧರಿಸಿದ ದಿನ- ಸಮಯಗಳಲ್ಲಿ ಸಿಸೇರಿಯನ್ ನಡೆಸಲು ವೈದ್ಯರಲ್ಲಿ ವಿನಂತಿಸುವುದು ಅಪರೂಪವೇನಲ್ಲ!. ಸಾಮಾನ್ಯವಾಗಿ ಸ್ವಾಭಾವಿಕ ಹೆರಿಗೆಗಳ ಬಳಿಕ ಮಹಿಳೆಯರ ಯೋನಿಯು ಸಡಿಲಗೊಳ್ಳುವುದು. ಇದರಿಂದಾಗಿ ಸುರತ ಸುಖದಲ್ಲಿ ಕೊರತೆಯಾಗುವುದನ್ನು ತಡೆಗಟ್ಟಲು ಅನೇಕ ಶ್ರೀಮಂತ ಕುಟುಂಬಗಳ ಮಹಿಳೆಯರು ತಾವಾಗಿ ಸಿ- ಸೆಕ್ಷನ್ ಮಾಡಿಸಿಕೊಳ್ಳುತ್ತಾರೆ!. 

ಸುಮಾರು ೫೦ ವರ್ಷಗಳ ಹಿಂದೆ ಗರ್ಭಸ್ಥ ಶಿಶುವಿನ ಅಸಾಮಾನ್ಯ ಸ್ಥಿತಿ (Abnormal position of the baby) ಹಾಗೂ ಗರ್ಭಿಣಿಯರ ಸೊಂಟದ ಎಲುಬಿನ ನ್ಯೂನತೆ ( Bony passage defect) ಎನ್ನುವ ಸಮಸ್ಯೆಗಳಲ್ಲಿ ನಡೆಸಲಾಗುತ್ತಿದ್ದ ಸಿ- ಸೆಕ್ಷನ್ ಶಸ್ತ್ರ ಚಿಕಿತ್ಸೆಯನ್ನು ಇಂದು ಇತರ ಅನೇಕ ಸಮಸ್ಯೆಗಳ ಪರಿಹಾರದಲ್ಲೂ ಬಳಸಲಾಗುತ್ತಿದೆ. ಏಕೆಂದರೆ ಗರ್ಭಸ್ಥ ಶಿಶುವಿಗೆ ಪ್ರಾಣಾಪಾಯಕ್ಕೆ ಕಾರಣವೆನಿಸಬಲ್ಲ ತೊಂದರೆಗಳನ್ನು ನಿಖರವಾಗಿ ಪತ್ತೆಹಚ್ಚಬಲ್ಲ ಉಪಕರಣಗಳು ಇಂದು ಲಭ್ಯವಿದೆ. 

ಕೆಲವೇ ದಶಕಗಳ ಹಿಂದೆ ವೈದ್ಯರು ಸಾಮಾನ್ಯವಾಗಿ ಬಳಸುತ್ತಿದ್ದ ಸ್ಟೆಥೋಸ್ಕೋಪ್ ನ ಬದಲಾಗಿ ಅಲ್ಟ್ರಾ ಸೌಂಡ್ ಸೋನೋಗ್ರಾಂ, ಡಾಪ್ಲರ್ ಮತ್ತು ಎಲೆಕ್ಟ್ರೋ ಫೀಟಲ್ ಮಾನಿಟರಿಂಗ್ ಮೂಲಕ ಗರ್ಭಸ್ಥ ಶಿಶುವಿನ ಸ್ಥಿತಿಗತಿಗಳನ್ನು ಅರಿತುಕೊಳ್ಳಬಹುದಾಗಿದೆ. ಈ ರೀತಿಯ ಅತ್ಯಾಧುನಿಕ ಉಪಕರಣಗಳಿಂದಾಗಿ ಗರ್ಭಸ್ಥ ಶಿಶುವನ್ನು ಬಾಧಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಪತ್ತೆಹಚ್ಚುವ ಪ್ರಮಾಣ ಅಧಿಕವಾಗುತ್ತಿರುವುದರಿಂದ, ಇದಕ್ಕೆ ಅನುಗುಣವಾಗಿ ಸಿ- ಸೆಕ್ಷನ್ ಹೆರಿಗೆಗಳ ಪ್ರಮಾಣವೂ ಸ್ವಾಭಾವಿಕವಾಗಿಯೇ ಹೆಚ್ಚುತ್ತಿದೆ. 

ಅದೇ ರೀತಿಯಲ್ಲಿ ಕಷ್ಟಕರ ಸ್ವಾಭಾವಿಕ ಹೆರಿಗೆಗಳಲ್ಲಿ ಪ್ರಸೂತಿ ತಜ್ಞರು "ಫೋರ್ಸೆಪ್ಸ್" ಬಳಸುವಾಗ ಅಪರೂಪದಲ್ಲಿ ಶಿಶುವಿಗೆ ಕೆಲವೊಂದು ತೊಂದರೆಗಳು ಬಾಧಿಸುವ ಸಾಧ್ಯತೆಗಳಿವೆ. ಇದೀಗ ಇಂತಹ ಸಂದರ್ಭಗಳಲ್ಲಿ ಸಿ- ಸೆಕ್ಷನ್ ನಡೆಸುವುದರಿಂದ ಇಂತಹ ತೊಂದರೆಗಳನ್ನು ಸುಲಭದಲ್ಲೇ ನಿವಾರಿಸಬಹುದಾಗಿದೆ. ಇದೇ ಕಾರಣದಿಂದಾಗಿ ಬಹುತೇಕ ಪ್ರಸೂತಿ ತಜ್ಞರು ಕಷ್ಟಕರ ಸ್ವಾಭಾವಿಕ ಹೇರಿಗೆಗಳಿಗೆ ಬದಲಾಗಿ ಸಿ- ಸೆಕ್ಷನ್ ನಡೆಸುತ್ತಾರೆ. 

ಇವೆಲ್ಲಕ್ಕೂ ಮಿಗಿಲಾಗಿ ಅಲ್ಪತೂಕದ ಶಿಶುಗಳು ಸ್ವಾಭಾವಿಕ ಹೆರಿಗೆಯ ಸಂದರ್ಭದಲ್ಲಿ (ಯೋನಿ ಮಾರ್ಗದಲ್ಲಿ) ಸಂಭವಿಸಬಲ್ಲ ಆಘಾತಗಳಿಂದಾಗಿಬದುಕಿ ಉಳಿಯುವ ಸಾಧ್ಯತೆಗಳು ಕೆಲ ದಶಕಗಳ ಹಿಂದೆ ಕಡಿಮೆಯಾಗಿದ್ದವು. ಆದರೆ ಇಂದು ಸಿ- ಸೆಕ್ಷನ್ ನಡೆಸುವುದರಿಂದ ಒಂದು ಕಿ. ಗ್ರಾಂ ಗಿಂತಲೂ ಕಡಿಮೆ ತೂಕದ ಶಿಶುಗಳೂ ಬದುಕಿ ಉಳಿಯುತ್ತಿವೆ. ಈ ರೀತಿಯಲ್ಲಿ ಸಿ- ಸೆಕ್ಷನ್ ನಡೆಸಲೇ ಬೇಕಾಗುವಂತಹ ಹಲವಾರು ವೈದ್ಯಕೀಯ ಕಾರಣಗಳ ಬಗ್ಗೆ ಜನಸಾಮಾನ್ಯರಿಗೆ ಸೂಕ್ತ ಮಾಹಿತಿಗಳೇ ತಿಳಿದಿರುವುದಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ವೈದ್ಯರು ಸಾಕಷ್ಟು ಲಾಭಗಳಿಸುವ ಸಲುವಾಗಿಯೇ ಅನಾವಶ್ಯಕವಾಗಿ ಸಿ- ಸೆಕ್ಷನ್ ನಡೆಸುತ್ತಾರೆ ಎಂದು ಜನಸಾಮಾನ್ಯರು ದೂರುತ್ತಾರೆ. ಇದರರ್ಥ ವೈದ್ಯಕೀಯ ಕ್ಷೇತ್ರದಲ್ಲಿ "ಕಪ್ಪು ಕುರಿ" ಗಳು ಇಲ್ಲವೆಂದಲ್ಲ. ಇತರ ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ವೈದ್ಯಕೀಯ ಕ್ಷೇತ್ರದಲ್ಲೂ ಅಲ್ಲೊಂದು, ಇಲ್ಲೊಂದು ಕಪ್ಪು ಕುರಿಗಳು ನಿಶ್ಚಿತವಾಗಿಯೂ ಇವೆ. ಆದರೆ ಇದಕ್ಕಾಗಿ ಸಮಗ್ರ ವೈದ್ಯ ಸಮುದಾಯವನ್ನೇ ದೂರುವುದು ನಿಶ್ಚಿತವಾಗಿಯೂ ಸಮರ್ಥನೀಯವಲ್ಲ. 

ಅಂತಿಮವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಶೋಧನೆ- ಅಧ್ಯಯನಗಳು ಮತ್ತು ಅತ್ಯಾಧುನಿಕ ಉಪಕರಣಗಳು- ಚಿಕಿತ್ಸಾ ವಿಧಾನಗಳಿಂದಾಗಿ, ಇಂದು ಗರ್ಭಿಣಿಯರ- ಬಾಣಂತಿಯರ ಮತ್ತು ಗರ್ಭಸ್ಥ- ನವಜಾತ ಶಿಶುಗಳ ಮರಣಗಳ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ. ಅಂತೆಯೇ ಇದರಲ್ಲಿ ಸಿಸೇರಿಯನ್ ಶಸ್ತ್ರ ಚಿಕಿತ್ಸೆಯೂ ಮಹತ್ವಪೂರ್ಣ ಪಾತ್ರವನ್ನು ನಿರ್ವಹಿಸುತ್ತಿದೆ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ಡಿ. ೧೯-೦೭-೨೦೦೭ ರ ಸಂಚಿಕೆಯ ಬಳಕೆದಾರ :ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.


No comments:

Post a Comment