Saturday, March 15, 2014

MLA's and MP's offices under RTI!.





   ಶಾಸಕ - ಸಂಸದರ ಕಚೇರಿಗಳು ಮಾಹಿತಿ ಹಕ್ಕಿನ ವ್ಯಾಪ್ತಿಗೆ 

 ರಾಜ್ಯದ- ದೇಶದ ಪ್ರಜೆಗಳು ಚುನಾಯಿಸಿದ ಶಾಸಕರು ಮತ್ತು ಸಂಸದರ ಕಛೇರಿಗಳು ಮಾಹಿತಿ ಹಕ್ಕು ಕಾಯಿದೆ ೨೦೦೫ ರ ಕಲಂ(೧) (ಎ ) ಮತ್ತು ೪ (೧) ( ಬಿ) ಗಳನ್ವಯ ಈ ಕಾಯಿದೆಯ ವ್ಯಾಪ್ತಿಗೆ ಒಳಪಡುತ್ತವೆಯೇ?, ಎನ್ನುವ ಪ್ರಶ್ನೆಗೆ ಉತ್ತರವನ್ನು ನೀಡಲು ರಾಜ್ಯ ಸರಕಾರದ ಇಲಾಖೆಯೊಂದು ೯ ತಿಂಗಳುಗಳ ಕಾಲಾವಧಿಯನ್ನು ಬಳಸಿದೆ. ಮಾಹಿತಿ ಹಕ್ಕು ಕಾಯಿದೆಯಂತೆ ಈ ಪ್ರಶ್ನೆಯನ್ನು ಕೇಳಿದ್ದ ಪುತ್ತೂರಿನ ಬಳಕೆದಾರರ ಹಿತರಕ್ಷಣಾ ವೇದಿಕೆಯ ದಿನೇಶ್ ಭಟ್.ಕೆ, ಇವರು ಅಪೇಕ್ಷಿತ ಮಾಹಿತಿಯು ನಿಗದಿತ ಅವಧಿಯಲ್ಲಿ ದೊರೆತಿರದ ಕಾರಣದಿಂದಾಗಿ, ಕರ್ನಾಟಕ ರಾಜ್ಯ ಮಾಹಿತಿ ಆಯೋಗಕ್ಕೆ ದೂರನ್ನು ಸಲ್ಲಿಸಬೇಕಾಗಿ ಬಂದಿತ್ತು.

ಸರಕಾರದ ಆಡಳಿತದಲ್ಲಿ ಪಾರದರ್ಶಕತೆಯನ್ನು ಜಾರಿಗೆ ತರುವ ಮೂಲಕ ಸರಕಾರಿ ಅಧಿಕಾರಿಗಳು ಮತ್ತು ಸಿಬಂದಿಗಳಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಗಳನ್ನು ಹೆಚ್ಚಿಸುವ ಸಲುವಾಗಿ ಅನುಷ್ಠಾನಗೊಂಡಿದ್ದ ಮಾಹಿತಿ ಪಡೆಯುವ ಹಕ್ಕು ಅಧಿನಿಯಮ ೨೦೦೫, ಅಪೇಕ್ಷಿತ ಪರಿಣಾಮವನ್ನು ತೋರಲು ವಿಫಲವಾಗಿರಲು, ಸರಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಔದಾಸೀನ್ಯತೆಗಳೇ ಕಾರಣವಾಗಿವೆ. ಅರ್ಜಿದಾರರು ಅಪೇಕ್ಷಿಸಿದ ಮಾಹಿತಿಯನ್ನು ನೀಡದಿರುವುದು, ನೀಡಲು ವಿಳಂಬಿಸುವುದು ಹಾಗೂ ಯಾವುದೇ ಪ್ರತಿಕ್ರಿಯೆಯನ್ನೇ ತೋರದಿರುವ ಮೂಲಕ, ವಿವಿಧ ಸಾರ್ವಜನಿಕ ಪ್ರಾಧಿಕಾರಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಈ ಕಾಯಿದೆಯ ಮೂಲ ಉದ್ದೇಶವನ್ನೇ ವಿಫಲಗೊಳಿಸಲು ಮಾಡುತ್ತಿರುವ ಪ್ರಯತ್ನಗಳು ಗುಟ್ಟಾಗಿ ಉಳಿದಿಲ್ಲ. ಆದರೆ ಅನೇಕ ಸ್ವಯಂಸೇವಾ ಸಂಘಟನೆಗಳು ಮಾ.ಹ. ಅಧಿನಿಯಮದ ಬಗ್ಗೆ ಜನಸಾಮಾನ್ಯರಿಗೆ ಅವಶ್ಯಕ ಮಾಹಿತಿ, ಮಾರ್ಗದರ್ಶನ ಮತ್ತು ಬೆಂಬಲಗಳನ್ನು ನೀಡುವ ಮೂಲಕ ಮತ್ತು ಅವಶ್ಯಕವೆನಿಸಿದಲ್ಲಿ ರಾಜ್ಯ ಮಾಹಿತಿ ಆಯೋಗಕ್ಕೆ ದೂರನ್ನು ಸಲ್ಲಿಸಲು ಸೂಚಿಸುವ ಮೂಲಕ, ಜನರು ಅಪೇಕ್ಷಿಸುವ ಮಾಹಿತಿಗಳನ್ನು ಪಡೆದುಕೊಳ್ಳಲು ಸಫಲರಾಗುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಇಂತಹ ಸಂಘಟನೆಗಳ ಕಾರ್ಯಕರ್ತರೂ ಅಪೇಕ್ಷಿತ ಮಾಹಿತಿಗಳನ್ನು ಪಡೆದುಕೊಳ್ಳಲು ಹರಸಾಹಸವನ್ನೇ ನಡೆಸಬೇಕಾಗುತ್ತದೆ!. ಇಂತಹ ಪ್ರಕರಣವೊಂದು ಇಂತಿದೆ. 

ನಮ್ಮನ್ನಾಳುವ ಶಾಸಕರು- ಸಂಸದರ ಕಛೇರಿಗಳು ಮಾ.ಹ.ಕಾಯಿದೆಯ ವ್ಯಾಪ್ತಿಗೆ ಒಳಪಡುತ್ತವೆಯೇ ಎಂದು ದಿನೇಶ್ ಭಟ್ ಇವರು ೨೦೦೮ ರ ಜುಲೈ ೨೮ ರಂದು ಸಾರ್ವಜನಿಕ ಮಾಹಿತಿ ಅಧಿಕಾರಿ, ಕರ್ನಾಟಕ ಸಿಬಂದಿ ಮತ್ತು ಸುಧಾರಣಾ ಇಲಾಖೆಗೆ ಮಾ. ಹ. ಕಾಯಿದೆಯನ್ವಯ ನಿಗದಿತ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಸಲ್ಲಿಸಿದ್ದರು. 

ಈ ಅರ್ಜಿಯಲ್ಲಿ ವಿಧಾನಸಭೆ ಮತ್ತು ಲೋಕಸಭೆಗಳ ಚುನಾಯಿತ ಜನಪ್ರತಿನಿಧಿಗಳಿಗೆ ರಾಜ್ಯ- ಕೇಂದ್ರ ಸರಕಾರಗಳ ವತಿಯಿಂದ ಕಚೇರಿ ಸೌಲಭ್ಯ, ಆಪ್ತ ಸಹಾಯಕರು, ದೂರವಾಣಿ, ವಾಹನಗಳು, ಕಚೇರಿಯ ನಿರ್ವಹಣಾ ವೆಚ್ಚ ಇತ್ಯಾದಿಗಳನ್ನು ಸರಕಾರವೇ ಒದಗಿಸುವುದರಿಂದ, ಈ ಕಚೇರಿಗಳಿಗೆ ಮಾ. ಹ. ಕಾಯಿದೆ ಅನ್ವಯವಾಗುವುದೇ ಹಾಗೂ ಅನ್ವಯವಾಗುವುದಿದ್ದಲ್ಲಿ ಮಾಹಿತಿಯನ್ನು ಪಡೆದುಕೊಳ್ಳಲು ಅರ್ಜಿಯನ್ನು ಯಾರಿಗೆ ಮತ್ತು ಯಾವ ರೀತಿಯಲ್ಲಿ ಸಲ್ಲಿಸಬೇಕು, ಮತ್ತು ನಿಗದಿತ ಶುಲ್ಕವನ್ನು ಯಾರ ಹೆಸರಿನಲ್ಲಿ ಪಾವತಿಸಬೇಕು ಎನ್ನುವ ಕುರಿತಾಗಿ ಮಾಹಿತಿಯನ್ನು ನೀಡಬೇಕಾಗಿ ಕೋರಿದ್ದರು. 

ಆದರೆ ನಿಗದಿತ ೩೦ ದಿನಗಳ ಅವಧಿಯಲ್ಲಿ ತತ್ಸಂಬಂಧಿತ ಸಾರ್ವಜನಿಕ ಮಾಹಿತಿ ಅಧಿಕಾರಿಯು ಅಪೇಕ್ಷಿತ ಮಾಹಿತಿಗಳನ್ನು ನೀಡದೆ ಇದ್ದುದರಿಂದ, ಸೆಪ್ಟೆಂಬರ್ ೬, ೨೦೦೮ ರಂದು ಕರ್ನಾಟಕ ಮಾಹಿತಿ ಆಯೋಗಕ್ಕೆ ಈ ಬಗ್ಗೆ ದೂರನ್ನು ಸಲ್ಲಿಸಿದ್ದರು. ೨೦೦೮ ರ ಸೆಪ್ಟೆಂಬರ್ ೧೮ ರಂದು ಈ ದೂರನ್ನು ವಿಚಾರಣೆಗೆ ಎತ್ತಿಕೊಂಡ ಆಯೋಗವು, ನಿಗದಿತ ಅವಧಿಯಲ್ಲಿ ಮಾಹಿತಿಯನ್ನು ನೀಡದ ಸಾ. ಮಾ. ಅಧಿಕಾರಿಗೆ ಏಕೆ ದಂಡವನ್ನು ವಿಧಿಸಬಾರದು ಎನ್ನುವ ಬಗ್ಗೆ ವಿವರಣೆಯನ್ನು ನೀಡಲು ಮತ್ತು ೨೦೦೯ ರ ಜನವರಿ ೩೦ ರಂದು ಆಯೋಗದ ಮುಂದೆ ಖುದ್ದು ಹಾಜರಾಗುವಂತೆ ಆದೇಶವನ್ನು ನೀಡಿತ್ತು. ಜೊತೆಗೆ ಈ ಮಾಹಿತಿಯನ್ನು ಬಹಿರಂಗಪಡಿಸಲು ಮಾ.ಹ.ಕಾಯಿದೆಯಲ್ಲಿ ವಿನಾಯಿತಿ ಹೊಂದಿಲ್ಲದೆ ಇದ್ದಲ್ಲಿ ಇದನ್ನು ತುರ್ತಾಗಿ ನೊಂದಾಯಿತ ಅಂಚೆಯ ಮೂಲಕ ದಿನೇಶ್ ಭಟ್ ಇವರಿಗೆ ಕಳುಹಿಸಿ, ಇದರ ಪ್ರತಿಯೊಂದನ್ನು ಆಯೋಗಕ್ಕೆ ಸಲ್ಲಿಸಲು ಆದೇಶಿಸಿತ್ತು. 

ಆಯೋಗದ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತನ್ನೂ ನೀಡದ ಹಾಗೂ ಅರ್ಜಿದಾರರಿಗೆ  ಈ ಮಾಹಿತಿಯನ್ನು ನೀಡದ ಸಾ.ಮಾ. ಅಧಿಕಾರಿಯು ಜನವರಿ ೩೦ ರಂದು ಆಯೋಗದ ಮುಂದೆಯೂ ಹಾಜರಾಗಿರಲೇ ಇಲ್ಲ. ಈ ಅಧಿಕಾರಿಯ ನಿರ್ಲಕ್ಷ್ಯಮತ್ತು ಉದಾಸೀನತೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಆಯೋಗವು, ಈ ಅಧಿಕಾರಿಗೆ ಸೆಕ್ಷನ್ ೩೦ ಸಿ.ಪಿ.ಸಿ ಯನ್ವಯ ಸಮನ್ಸ್ ಜಾರಿಗೊಳಿಸಿ, ೩೦ ದಿನಗಳ ಒಳಗಾಗಿ ಅರ್ಜಿದಾರರಿಗೆ ಅಪೇಕ್ಷಿತ ಮಾಹಿತಿಯನ್ನು ಉಚಿತವಾಗಿ ನೊಂದಾಯಿತ ಅಂಚೆಯ ಮೂಲಕ ರವಾನಿಸಿ, ಇದರ ಪ್ರತಿಯೊಂದನ್ನು ಕಡ್ಡಾಯವಾಗಿ ಆಯೋಗಕ್ಕೆ ಸಲ್ಲಿಸಲು ಸೂಚಿಸಿತ್ತು. ಜೊತೆಗೆ ಈ ಬಗ್ಗೆ ಸೂಕ್ತ ನಿರ್ದೇಶನವನ್ನು ನೀಡುವಂತೆ ಇವರ ಮೇಲಧಿಕಾರಿಗೆ ಮಾ.ಹ.ಕಲಂ ೧೯(೮)(ಎ) ಯಂತೆ ಆದೇಶಿಸಿತ್ತು. ಇದಲ್ಲದೇ ಮಾ.ಹ.ಕಾ. ಕಲಂ ೧೮(೩ ) (ಎ) ಅನ್ವಯ ಅರ್ಜಿದಾರರು ಕೋರಿರುವ ಮಾಹಿತಿಗೆ ಸಂಬಧಿಸಿದ ಕಡತಗಳೊಂದಿಗೆ ೨೦೦೯ ರ ಮೇ ೧೩ ರಂದು ಖುದ್ದಾಗಿ ಆಯೋಗದ ಮುಂದೆ ಹಾಜರಾಗುವಂತೆ ಸಾ.ಮಾ.ಅಧಿಕಾರಿಗೆ ಆದೇಶವನ್ನು ನೀಡಿತ್ತು. 

ಅಂತಿಮವಾಗಿ ತುಕ್ಕು ಹಿಡಿದಿದ್ದ ಸರಕಾರಿ ಯಂತ್ರವು ಮತ್ತೆ ಚಲಿಸಲು ಆರಂಭಿಸಿತ್ತು. ತತ್ಪರಿಣಾಮವಾಗಿ ಸರಕಾರದ ಪ್ರಧಾನ ಕಾರ್ಯದರ್ಶಿ, ಸಿಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಇವರು ೨೦೦೯ ರ ಏಪ್ರಿಲ್ ೧೩ ರಂದು ದಿನೇಶ್ ಭಟ್ ಕೋರಿದ್ದ ಮಾಹಿತಿಗಳನ್ನು ನೊಂದಾಯಿತ ಅಂಚೆಯ ಮೂಲಕ ಕಳುಹಿಸಿದ್ದರು. 

ಈ ಅಧಿಕಾರಿ ನೀಡಿರುವ ಮಾಹಿತಿಯಂತೆ ಮಾ.ಹ.ಕಾ. ೨೦೦೫ ರ ಕಲಂ ೪(೧) (ಎ) ಮತ್ತು ೪(೧) (ಬಿ) ಯನ್ವಯ ವಿಧಾನಸಭೆ ಮತ್ತು ಲೋಕಸಭೆಯ ಚುನಾಯಿತ ಸದಸ್ಯರ ಕಚೇರಿಗಳು ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಗೆ ಒಳಪಡುತ್ತವೆ. ಅಪೇಕ್ಷಿತ ಮಾಹಿತಿಗಳನ್ನು ಪಡೆದುಕೊಳ್ಳಲು, ಜಿಲ್ಲಾಧಿಕಾರಿಗಳು ಅವರ ಜಿಲ್ಲಾ ವ್ಯಾಪ್ತಿಗೆ ಒಳಪಡುವ ವಿಧಾನಸಭೆಯ ಮತ್ತು ಲೋಕಸಭೆಯ ಚುನಾಯಿತ ಜನಪ್ರತಿನಿಧಿಗಳಿಗೆ ಕಚೇರಿ ಸೌಲಭ್ಯ,ಆಪ್ತ ಸಹಾಯಕರ ಸೌಲಭ್ಯ ಮುಂತಾದವುಗಳನ್ನು ಒದಗಿಸುವುದರಿಂದ, ಸಂಬಂಧಿತ ಜಿಲ್ಲಾಧಿಕಾರಿಗಳ ಕಛೇರಿಗಳಲ್ಲಿ ನೇಮಿಸಿರುವ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿಯನ್ನು ಕೋರಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದಕ್ಕಾಗಿ ನಿಗದಿಸಿರುವ ಶುಲ್ಕವನ್ನು ಸಾ.ಮಾ.ಅಧಿಕಾರಿಯ ಹೆಸರಿನಲ್ಲಿ ಪಾವತಿಸಬೇಕಾಗುತ್ತದೆ. 

ಕೊನೆಯ ಮಾತು 

ಜನಪ್ರತಿನಿಧಿಗಳಲ್ಲಿ ಉತ್ತರದಾಯಿತ್ವವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಇವರ ಕಚೇರಿಗಳನ್ನು ಮಾಹಿತಿ ಹಕ್ಕಿನ ವ್ಯಾಪ್ತಿಗೆ ತಂದಿರುವುದು ಪ್ರಶಂಸನೀಯ. ಆದರೆ ಈ ಮಾಹಿತಿಯನ್ನು ಪಡೆದುಕೊಳ್ಳಲು ಸ್ವಯಂಸೇವಾ ಸಂಘಟನೆಯೊಂದರ ಕಾರ್ಯಕರ್ತರು ಹಲವಾರು ತಿಂಗಳುಗಳ ಕಾಲ ಹೋರಾಟವನ್ನು ನಡೆಸಬೇಕಾಗಿ ಬಂದದ್ದು ವಿಷಾದನೀಯ. ರಾಜ್ಯ ಮಾಹಿತಿ ಆಯೋಗದ ಆದೇಶವನ್ನೂ ನಿರ್ಲಕ್ಷಿಸುವ ಸರಕಾರಿ ಅಧಿಕಾರಿಗಳಿಗೆ ಸೂಕ್ತ ಶಿಕ್ಷೆಯನ್ನು ವಿಧಿಸುವುದರೊಂದಿಗೆ, ದಂಡವನ್ನೂ ವಿಧಿಸುವ ಬಗ್ಗೆ ರಾಜ್ಯ ಮಾಹಿತಿ ಆಯೋಗವು ಅವಶ್ಯಕ ಕಾನೂನುಗಳನ್ನು ರೂಪಿಸಬೇಕಾದ ಅವಶ್ಯಕತೆ ಇದೀಗ ಅನಿವಾರ್ಯವೆನಿಸುತ್ತಿದೆ. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ೦೭-೦೫-೨೦೦೯ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ.


Thursday, March 13, 2014

Sedentary lifestyle





  ನಿಷ್ಕ್ರಿಯ ಜೀವನಶೈಲಿ: ಅನಾರೋಗ್ಯದ ಥೈಲಿ!

ಪ್ರಾಥಮಿಕ ಶಾಲೆಯಲ್ಲಿ ಓದಿದ್ದ 'ಆರೋಗ್ಯವೇ ಭಾಗ್ಯ" ಎನ್ನುವ ಮುತ್ತಿನಂತಹ ಮಾತುಗಳನ್ನು ಬಹುತೇಕ ಜನರು ದುಡಿಯಲು ಆರಂಭಿಸಿದ ಬಳಿಕ ಮರೆತುಬಿಡುತ್ತಾರೆ. ಏಕೆಂದರೆ ಅಧಿಕತಮ ಭಾರತೀಯರು ಯೌವ್ವನಾವಸ್ಥೆಯಲ್ಲಿ ಕೈತುಂಬಾ ಹಣವನ್ನು ಸಂಪಾದಿಸುವ ಸಲುವಾಗಿ, ಹಗಲಿರುಳು ದುಡಿಯುವ ಮೂಲಕ ಅಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಾರೆ. ಬಳಿಕ ತಾವು ಕಳೆದುಕೊಂಡಿದ್ದ ಆರೋಗ್ಯವನ್ನು ಮರಳಿ ಗಳಿಸಿಕೊಳ್ಳಲು, ತಾವು ಕಷ್ಟಪಟ್ಟು ದುಡಿದಿದ್ದ ಹಣವನ್ನೆಲ್ಲಾ  ವ್ಯಯಿಸುತ್ತಾರೆ!. ಆದರೆ ಕಳೆದುಕೊಂಡ ಆರೋಗ್ಯವನ್ನು ಮತ್ತೆ ಗಳಿಸುವುದು ಅಷ್ಟೊಂದು ಸುಲಭವೇನಲ್ಲ. ಆದುದರಿಂದ ಬಾಲ್ಯದಿಂದಲೇ ನಿಮ್ಮ ಮಕ್ಕಳ ಶಾರೀರಿಕ, ಮಾನಸಿಕ ಮತ್ತು ಸಾಮಾಜಿಕ ಸ್ವಾಸ್ಥ್ಯಗಳನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳುವುದು ಹಿತಕರವೆಂದು ಹಿರಿಯ ವೈದ್ಯರೇ ಹೇಳುತ್ತಾರೆ. 

ವೃದ್ಧಿಸುತ್ತಿರುವ ಆರೋಗ್ಯದ ಸಮಸ್ಯೆಗಳು 

ಪ್ರಸ್ತುತ ಭಾರತೀಯರನ್ನು ಬಾಧಿಸುತ್ತಿರುವ ಗಂಭೀರ ಹಾಗೂ ಮಾರಕ ಕಾಯಿಲೆಗಳ ಪ್ರಮಾಣವು ನಿಧಾನವಾಗಿ ಆದರೆ ನಿಶ್ಚಿತವಾಗಿಯೂ ಹೆಚ್ಚಲಾರಂಭಿಸಿದೆ. ಕೆಲ ದಶಕಗಳ ಹಿಂದೆ ಮಧ್ಯವಯಸ್ಸು ದಾಟಿದ ಬಳಿಕ ಅಥವಾ ಇಳಿವಯಸ್ಸಿನಲ್ಲಿ ತಲೆದೋರುತ್ತಿದ್ದ ಅನೇಕ ವ್ಯಾಧಿಗಳು ಇದೀಗ ಯೌವ್ವನಸ್ಥರನ್ನು ಪೀಡಿಸಲು ಆರಂಭಿಸಿವೆ. ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯದಂತೆ ಹೆಚ್ಚುತ್ತಿರುವ ಆದಾಯ, ಬದಲಾದ ಆಹಾರ ಸೇವನಾ ಪದ್ಧತಿ ಮತ್ತು ನಿಷ್ಕ್ರಿಯ ಜೀವನ ಶೈಲಿಗಳು ಈ ಸಮಸ್ಯೆಗೆ ಪ್ರಮುಖ ಕಾರಣವೆನಿವೆ. 

ನಮ್ಮ ದೈನಂದಿನ ಜೀವನವನ್ನು ಒಂದಿಷ್ಟು ಆರಾಮದಾಯಕವಾಗಿಸಲು ನಾವೇ ಸಂಶೋಧಿಸಿ ಆವಿಷ್ಕರಿಸಿರುವ ವೈವಿಧ್ಯಮಯ ಉಪಕರಣಗಳಿಂದಾಗಿ, ಭಾರತೀಯರಲ್ಲಿ ನಿಷ್ಕ್ರಿಯತೆಯ ಸಮಸ್ಯೆಯು ಇನ್ನಷ್ಟು ಬಿಗಡಾಯಿಸಿದೆ. 


  ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ವೈದ್ಯಾಧಿಕಾರಿಯೊಬ್ಬರ ಅಭಿಪ್ರಾಯದಂತೆ, ಭಾರತೀಯರಲ್ಲಿ ಶಾರೀರಿಕ ನಿಷ್ಕ್ರಿಯತೆಯ ಪ್ರಮಾಣವು ಅತ್ಯಧಿಕವಾಗಿದೆ. ಈ ರೀತಿಯ ಸೋಮಾರಿತನವನ್ನು ತೊರೆದು, ಶಾರೀರಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಜನರನ್ನು ಪ್ರೇರೇಪಿಸಬೇಕಾದ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆಯು ಹಮ್ಮಿಕೊಳ್ಳಬೇಕಾಗಿದೆ. ಇದರೊಂದಿಗೆ ಜನರ ನಿಷ್ಕ್ರಿಯತೆಯನ್ನು ತೊಡೆದುಹಾಕಬಲ್ಲ ಕೆಲವೊಂದು ನಿರ್ದಿಷ್ಟ ನೀತಿನಿಯಮಗಳನ್ನು ಸರಕಾರ ರೂಪಿಸಬೇಕಿದೆ. ತನ್ಮೂಲಕ ಭಾರತೀಯರನ್ನು ಬಾಧಿಸುತ್ತಿರುವ ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕತೂಕ ಹಾಗೂ ಅತಿಬೊಜ್ಜು ಮತ್ತು ಕ್ಯಾನ್ಸರ್ ಗಳಂತಹ ಗಂಭೀರ ಹಾಗೂ ಮಾರಕ ವ್ಯಾಧಿಗಳ ಸಂಭಾವ್ಯತೆಯನ್ನು ತಡೆಗಟ್ಟಬಹುದಾಗಿದೆ. ಆದರೆ ಈ ಸಮಸ್ಯೆಯನ್ನು ನಿರ್ಲಕ್ಷಿಸಿದಲ್ಲಿ ಈಗಾಗಲೇ ವಿಶ್ವದ ಮಧುಮೇಹಿಗಳ ರಾಜಧಾನಿ ಎನಿಸಿರುವ ನಮ್ಮ ದೇಶವು, ಅನ್ಯ ಗಂಭೀರ ವ್ಯಾಧಿಗಳ ರಾಜಧಾನಿಯಾಗಿ ಕುಖ್ಯಾತವಾಗುವ ಸಾಧ್ಯತೆಗಳಿವೆ. 

ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನದ ಕೇಂದ್ರವೆಂದೇಪ್ರಖ್ಯಾತವಾಗಿರುವ ಭಾರತ ದೇಶದ ಮಧ್ಯಮ ವರ್ಗದ ಜನರು, ಶಾರೀರಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಿರಲು ಉದ್ಯೋಗ ಸಂಬಂಧಿತ ನಿಷ್ಕ್ರಿಯತೆಯೂ ಒಂದು ಪ್ರಮುಖ ಕಾರಣವೆನಿಸಿದೆ. ಇದರೊಂದಿಗೆ ಪಾಶ್ಚಾತ್ಯರ ಜೀವನಶೈಲಿಯ ಅಂಧಾನುಕರಣೆ, ಅತ್ಯಧಿಕ ಮತ್ತು ನಿಷ್ಪ್ರಯೋಜಕ ಕ್ಯಾಲರಿಗಳಿರುವ " ನಿರುಪಯುಕ್ತ ಆಹಾರ" (junk food) ಗಳ ಅತಿಸೇವನೆ ಮತ್ತು ಇನ್ನಿತರ ಕಾರಣಗಳಿಂದಾಗಿ, ಗಂಭೀರ ಹಾಗೂ ಮಾರಕ ಆರೋಗ್ಯದ ಸಮಸ್ಯೆಗಳಿಗೆ ಸುಲಭದಲ್ಲೇ ತುತ್ತಾಗುತ್ತಿದ್ದಾರೆ. 

ಉದಾಹರಣೆಗೆ ಭಾರದಲ್ಲಿ ಅತಿಯಾಗಿ ಪತ್ತೆಯಾಗುತ್ತಿರುವ ಕ್ಯಾನ್ಸರ್ ವ್ಯಾಧಿಗಳಲ್ಲಿ, ಗಂಡಸರಲ್ಲಿ ಹೊಗೆಸೊಪ್ಪಿನ ಸೇವನೆಯಿಂದ ಉದ್ಭವಿಸುವ ಮತ್ತು ಸ್ತ್ರೀಯರಲ್ಲಿ ಶಾರೀರಿಕ ಸಂಪರ್ಕದಿಂದ ಹರಡುವ ಗರ್ಭಕೋಶದ ಕೊರಳಿನ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ಆದರೆ ಸದ್ಯೋಭವಿಷ್ಯದಲ್ಲಿ ಭಾರತೀಯರಲ್ಲಿ ಅನ್ಯವಿಧದ ಕ್ಯಾನ್ಸರ್ ಗಳ ಬಾಧೆಯು ಹೆಚ್ಚಲಿದ್ದು, ಶಾರೀರಿಕ ನಿಷ್ಕ್ರಿಯತೆಯೂ ಇದಕ್ಕೆ ಕಾರಣವೆನಿಸಲಿದೆ ಎಂದು ವಿಶ್ವ ಸಂಸ್ಥೆಯು ಎಚ್ಚರಿಕೆಯನ್ನು ನೀಡಿದೆ. 

ಶಾರೀರಿಕ ನಿಷ್ಕ್ರಿಯತೆಯಿಂದಾಗಿ ಉದ್ಭವಿಸಬಲ್ಲ ಗಂಭೀರ ಹಾಗೂ ಮಾರಕ ವ್ಯಾಧಿಗಳಿಗೆ ವಿಶ್ವಾದ್ಯಂತ ಸುಮಾರು ೩.೨ ದಶಲಕ್ಷ ಜನರು ವರ್ಷಂಪ್ರತಿ ಬಲಿಯಾಗುತ್ತಿದ್ದಾರೆ. ಇವರಲ್ಲಿ ೨.೬ ದಶಲಕ್ಷ ಜನರು ಅಲ್ಪ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳ ಪ್ರಜೆಗಳಾಗಿದ್ದಾರೆ. ಇದಲ್ಲದೆ ಶೇ. ೩೦ ರಷ್ಟು ಜನರಲ್ಲಿ ಹೃದಯಕ್ಕೆ ರಕ್ತವನ್ನು ಪೂರೈಕೆಮಾಡುವ ರಕ್ತನಾಳಗಳಲ್ಲಿನ ಅಡಚಣೆ ಮತ್ತು ಶೇ. ೨೭ ರಷ್ಟು ಜನರಲ್ಲಿ ಮಧುಮೇಹ ಉದ್ಭವಿಸಲು ನಿಷ್ಕ್ರಿಯತೆಯೇ ಕಾರಣವೆನಿಸುತ್ತಿದೆ. 

ಇಷ್ಟು ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಜನಸಾಮಾನ್ಯರ ಮರಣಕ್ಕೆ ಕಾರಣವೆನಿಸುತ್ತಿರುವ ಅಪಾಯಕಾರಿ ಅಂಶಗಳಲ್ಲಿ ನಿಷ್ಕ್ರಿಯತೆಯು ನಾಲನೆ ಸ್ಥಾನದಲ್ಲಿದೆ. ಜೊತೆಗೆ ಜಗತ್ತಿನ ಶೇ. ೩೧ ರಷ್ಟು ಜನರು ನಿಷ್ಕ್ರಿಯ ಜೀವನಶೈಲಿಗೆ ಒಗ್ಗಿರುವುದು ಇದಕ್ಕೆ ಪೂರಕವಾಗಿ ಪರಿಣಮಿಸುತ್ತಿದೆ. 

ಪರಿಹಾರವೇನು?

ಪ್ರತಿನಿತ್ಯ ನಡಿಗೆ, ಓಟ, ವ್ಯಾಯಾಮ, ಯೋಗ, ಪ್ರಾಣಾಯಾಮ ಅಥವಾ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಕೊರೋನರಿ ಹೃದ್ರೋಗ, ಅಧಿಕರಕ್ತದೊತ್ತದ, ಪಕ್ಷಾಘಾತ, ಮಧುಮೇಹ, ಕರುಳು- ಸ್ತನ ಕ್ಯಾನ್ಸರ್, ಮೂಳೆಗಳ ಪೊಳ್ಳುತನ ಮತ್ತು ಮಾನಸಿಕ ಖಿನ್ನತೆಗಳ ಸಂಭಾವ್ಯತೆಗಳನ್ನು ತಡೆಗಟ್ಟಬಹುದಾಗಿದೆ. ಇದಲ್ಲದೆ ಅಧಿಕತೂಕ ಮತ್ತು ಅತಿಬೋಜ್ಜುಗಳಂತಹ  ಸಮಸ್ಯೆಯನ್ನು ಸುಲಭದಲ್ಲೇ ನಿಯಂತ್ರಿಸಬಹುದಾಗಿದೆ. ಇದರೊಂದಿಗೆ ನಿಮ್ಮ ಶಾರೀರಿಕ ಕ್ಷಮತೆಯ ಮಟ್ಟವನ್ನು ಹೆಚ್ಚಿಸಿಕೊಳ್ಳುವುದರಿಂದಾಗಿ, ನಿಮ್ಮ ಶರೀರದ ರೋಗನಿರೋಧಕ ಶಕ್ತಿಯು ಸ್ವಾಭಾವಿಕವಾಗಿಯೇ ಹೆಚ್ಚುತ್ತದೆ. 

ಶಾರೀರಿಕ ಚಟುವಟಿಕೆಗಳ ಪ್ರಾಮುಖ್ಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಪ್ರಕಟಿಸಿರುವ " ಜಾಗತಿಕ ಶಿಫಾರಸು" ಗಳಲ್ಲಿ ೧೮ ವರ್ಷ ಮೀರಿದವರೆಲ್ಲರೂ ಒಂದು ವಾರದಲ್ಲಿ ಕನಿಷ್ಠ ೧೫೦ ನಿಮಿಷಗಳಷ್ಟು ಸಮಯ ಮಧ್ಯಮ ಮಟ್ಟದ ವ್ಯಾಯಾಮ, ಕ್ರೀಡೆ ಅಥವಾ ಅನ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅನೇಕ ವಿಧದ ಗಂಭೀರ ಮತ್ತು ಮಾರಕ ಕಾಯಿಲೆಗಳನ್ನು ದೂರವಿರಿಸುವಲ್ಲಿ ಇದು ಅತ್ಯಂತ ಉಪಯುಕ್ತವೆನಿಸುತ್ತದೆ. 

ಸಕ್ರಿಯ ಜೀವನಶೈಲಿ, ಉತ್ತಮ ಗುನಮಟ್ಟದ ಹಾಗೂ ಸಮತೋಲಿತ ಆಹಾರ ಸೇವನೆ, ಪ್ರತಿನಿತ್ಯ ವ್ಯಾಯಾಮ- ಕ್ರೀಡೆಗಳಲ್ಲಿ ಭಾಗವಹಿಸುವುದು, ದುಶ್ಚಟಗಳು ಮತ್ತು ಮಾನಸಿಕ ಒತ್ತಡಗಳನ್ನು ದೂರವಿರಿಸುವುದೇ ಮುಂತಾದ ಉಪಕ್ರಮಗಳನ್ನು ಕ್ರಮಬದ್ಧವಾಗಿ ಅನುಸರಿಸಿದಲ್ಲಿ ನಿಮ್ಮ ಶಾರೀರಿಕ, ಮಾನಸಿಕ ಮತ್ತು ಸಾಮಾಜಿಕ ಸ್ವಾಸ್ಥ್ಗಳನ್ನು ಉನ್ನತ ಸ್ತರದಲ್ಲಿ  ಕಾಪಾಡಿಕೊಳ್ಳುವುದು ಸುಲಭ ಸಾಧ್ಯ ಎನ್ನುವುದು ನೆನಪಿರಲಿ. 

ನಿಷ್ಕ್ರಿಯತೆಯ ಮೊದಲ ಪಾಠ 

ನಿಮ್ಮ ಮಗುವನ್ನು ಎಲ್.ಕೆ.ಜಿ ಗೆ ಸೇರಿಸಿದೊಡನೆ ಶಾಲೆಗೆ ಹೋಗಿಬರಲು ವಾಹನದ ವ್ಯವಸ್ಥೆ ಮಾಡುವುದರೊಂದಿಗೆ, ನಿಷ್ಕ್ರಿಯತೆಯ ಮೊದಲ ಪಾಠ ಆರಂಭವಾಗುತ್ತದೆ. ತದನಂತರ ತರಗತಿಯಲ್ಲಿ ಮೊದಲ ಸ್ಥಾನವನ್ನು ಗಿಟ್ಟಿಸಲು ಮತ್ತು ಬಳಿಕ ಇದನ್ನು ಉಳಿಸಿಕೊಳ್ಳಲು ಸದಾ ಓದು ಬರಹಗಳಲ್ಲಿ ಮಗ್ನರಾಗುವಂತೆ ಒತ್ತಾಯಿಸುವುದು, ಒಂದಿಷ್ಟು ಬಿಡುವು ದೊರೆತೊಡನೆ ಟಿವಿ ಅಥವಾ ಕಂಪ್ಯೂಟರ್ ನ ಮುಂದೆ ಕುಳಿತುಕೊಳ್ಳುವಂತೆ ಆದೇಶಿಸುವುದರ ಮೂಲಕ ನಮ್ಮ ಮಕ್ಕಳಲ್ಲಿ ನಿಷ್ಕ್ರಿಯತೆಯು ಇನ್ನಷ್ಟು ಹೆಚ್ಚಲು ನಾವೇ ಕಾರಣಕರ್ತರೆನಿಸುತ್ತಿದ್ದೇವೆ. ಇಷ್ಟೆಲ್ಲಾ ಸಾಲದೆನ್ನುವಂತೆ ಸಮತೋಲಿತ ಆಹಾರವನ್ನು ನಿರಾಕರಿಸಿ, ನಿರುಪಯುಕ್ತ ಆಹಾರಗಳನ್ನೇ ಸೇವಿಸುವುದು, ನಡುರಾತ್ರಿ ಕಳೆದ ಬಳಿಕ ಮಲಗಿ ಬೆಳಿಗ್ಗೆ ತಡವಾಗಿ ಏಳುವುದೇ ಮುಂತಾದ ಅನಾರೋಗ್ಯಕರ ಹವ್ಯಾಸಗಳು ಮಕ್ಕಳಲ್ಲಿ ನಿಷ್ಕ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಲು ನೆರವಾಗುತ್ತವೆ. ತತ್ಪರಿಣಾಮವಾಗಿ ಮಕ್ಕಳ ಶಾರೀರಿಕ ಕ್ಷಮತೆಯ ಮಟ್ಟ ಕಡಿಮೆಯಾಗುವುದರೊಂದಿಗೆ, ಮಕ್ಕಳ ರೋಗನಿರೋಧಕ ಶಕ್ತಿಯೂ ನಿಧಾನವಾಗಿ ಕ್ಷಯಿಸುತ್ತದೆ. 

ಇವೆಲ್ಲವುಗಳ ಸಂಯುಕ್ತ ಪರಿಣಾಮಗಳಿಂದಾಗಿ ಇಂತಹ ಮಕ್ಕಳು ಪದೇಪದೇ ಕಾಯಿಲೆಗಳಿಗೆ ಈಡಾಗುವುದರಿಂದ, ಸ್ವಾಭಾವಿಕವಾಗಿಯೇ ಇವರು ವಿದ್ಯಾಭ್ಯಾಸದಲ್ಲೂ ಹಿಂದೆ ಬೀಳುತ್ತಾರೆ. ಈ ವಿಲಕ್ಷಣ ಸಮಸ್ಯೆಗೆ ಇಂತಹ ಮಕ್ಕಳ ತಂದೆ ತಾಯಿಯರೇ ನೇರವಾಗಿ ಹೊಣೆಗಾರರಾಗುತ್ತಾರೆ!. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ೧-೦೫-೨೦೧೧ ರ ಸಂಚಿಕೆಯ ಪುರುಷ ಸಂಪದದಲ್ಲಿ ಪ್ರಕಟಿತ ಲೇಖನ.






 

Wednesday, March 12, 2014

SIDDHA HANNINA RASA........


 ಸಿದ್ಧ ಹಣ್ಣಿನ ರಸ : ನಿಜಕ್ಕೂ ಪರಿಶುದ್ಧವೇ?

ಅತಿಯಾಗಿ ಬಳಲಿ ಬಾಯಾರಿದಾಗ ನಾವೆಲ್ಲರೂ ತಂಪಾದ ಪಾನೀಯವನ್ನು ಗುಟುಕರಿಸಲು ಹಾತೊರೆಯುವುದು ಸ್ವಾಭಾವಿಕ. ಆದರೆ ಈ ಸಂದರ್ಭದಲ್ಲಿ ಕೆಲವರ್ಷಗಳ ಹಿಂದೆ ಲಘು ಪಾನೀಯಗಳಲ್ಲಿ ಪತ್ತೆಯಾಗಿದ್ದ ಹಾಲಾಹಲಗಳ ನೆನಪಾಗುವುದು ಕೂಡಾ ಅಷ್ಟೇ ಸ್ವಾಭಾವಿಕ. ಪ್ರಾಯಶಃ ಇದೇ ಕಾರಣದಿಂದಾಗಿ ತಂಪಾದ ಕೋಲಾಗಳನ್ನು ಕುಡಿಯಲು ಹಿಂಜರಿವ ಅನೇಕರು, ಸಿದ್ಧ ಹಣ್ಣಿನ ರಸಗಳನ್ನು ಖರೀದಿಸಿ ಕುಡಿಯುತ್ತಾರೆ. ಆದರೆ ಇಂತಹ ಹಣ್ಣಿನ ರಸಗಳಲ್ಲಿ ಅಡಗಿರುವ ಅಹಿತಕರ ಅಂಶಗಳ ಬಗ್ಗೆ ಬಹುತೇಕ ಜನರಿಗೆ ಅವಶ್ಯಕ ಮಾಹಿತಿಗಳೇ ತಿಳಿದಿರುವುದಿಲ್ಲ. 

ಅನಾರೋಗ್ಯಕರ ಪಾನೀಯಗಳು 

ಬಹುರಾಷ್ಟ್ರೀಯ ಸಂಸ್ಥೆಗಳು ನಮ್ಮ ದೇಶದಲ್ಲಿ ಉತ್ಪಾದಿಸಿ ಮಾರುತ್ತಿರುವ ಕೋಲಾಗಳನ್ನು ಕುಡಿಯಲು ಅನೇಕರು ಹಿಂದೇಟು ಹಾಕಲು ನಿರ್ದಿಷ್ಟ ಕಾರಣಗಳಿವೆ. ಈ ಉತ್ಪನ್ನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿರುವ ವಿಷಕಾರಕ ರಾಸಾಯನಿಕಗಳು ಹಾಗೂ ವಿದೇಶಿ ಉತ್ಪನ್ನಗಳನ್ನು ತಿರಸ್ಕರಿಸಿ, ಸ್ವದೇಶೀ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ದೇಶಪ್ರೇಮಿಗಳ ನಿರ್ದಾಕ್ಷಿಣ್ಯ ನಿರ್ಧಾರಗಳು ಇವುಗಳಲ್ಲಿ ಪ್ರಮುಖವಾಗಿವೆ. ಆದರೆ ಸ್ವದೇಶೀ ಚಳವಳಿಯ ನೇತಾರರು ಸೂಚಿಸುವಂತೆ ಕೋಲಾಗಳಿಗೆ ಬದಲಾಗಿ ಎಳನೀರು, ಕಬ್ಬಿನ ಹಾಲು, ನಿಂಬೆ ಶರಬತ್ತು ಅಥವಾ ಮಜ್ಜಿಗೆಯನ್ನು ಕುಡಿಯಲು ಇಚ್ಚಿಸದ ಜನರು, ಸಿದ್ಧ ಹಣ್ಣಿನ ರಸವನ್ನು ಸವಿಯಲು ಬಯಸುವುದರಲ್ಲಿ ವಿಶೇಷವೇನಿಲ್ಲ. 

ಪೋಷಕಾಂಶರಹಿತ ಪೇಯಗಳು 

ಕಡು ಬೇಸಗೆಯ ದಿನಗಳಲ್ಲಿ ಬಾಯಾರಿದ ಜನರು ಸಿದ್ಧ ಹಣ್ಣಿನ ರಸಗಳನ್ನು ಕೋಲಾಗಳಿಗಿಂತ ಆರೋಗ್ಯಕರ ಹಾಗೂ ರುಚಿಕರವೆಂದು ನಂಬಿ ಕುಡಿಯುತ್ತಾರೆ. ಬಹುತೇಕ ವಿದ್ಯಾವಂತರೂ "..............ಫ್ರೆಶ್ ಎಂಡ್ ಜ್ಯೂಸಿ" ಇತ್ಯಾದಿ  ಜಾಹೀರಾತುಗಳಿಗೆ ಮರುಳಾಗಿ, ಇಂತಹ ವಾಣಿಜ್ಯ ಉತ್ಪನ್ನಗಳನ್ನು ದುಬಾರಿ ಬೆಲೆಯನ್ನು ತೆತ್ತು ಖರೀದಿಸುತ್ತಾರೆ. ಈ ಸಂದರ್ಭದಲ್ಲಿ ವರ್ಷದ ೩೬೫ ದಿನಗಳಲ್ಲೂ ಭಾರತದಲ್ಲಿ ವಿವಿಧ ಜಾತಿಗಳ ಮಾವಿನ ಹಣ್ಣುಗಳು ದೊರೆಯದೇ ಇರುವುದರಿಂದ, ಈ ಉತ್ಪನ್ನವು "ಫ್ರೆಶ್" ಆಗಿರುವುದು ಅಸಾಧ್ಯ ಎನ್ನುವುದನ್ನೇ ಮರೆತುಬಿಡುತ್ತಾರೆ!. ಪೆಟ್ ಬಾಟಲಿಗಳು ಅಥವಾ ಟೆಟ್ರಾ ಪ್ಯಾಕ್ ಗಳಲ್ಲಿ ತುಂಬಿಸಿ ಮಾರಲ್ಪಡುವ ವೈವಿಧ್ಯಮಯ ಹಣ್ಣಿನ ರಸಗಳನ್ನು ಆಸ್ವಾದಿಸುವ ಜನರು, ಇಂತಹ ಪೇಯಗಳು ನಿಜಕ್ಕೂ ಆರೋಗ್ಯಕರವೆಂದು ನಂಬಿದ್ದಾರೆ. ಆದರೆ ನಿಜಹೇಳಬೇಕಿದ್ದಲ್ಲಿ, ಇಂತಹ ಬಹುತೇಕ ವಾಣಿಜ್ಯ ಉತ್ಪನ್ನಗಳಲ್ಲಿ, ತಾಜಾ ಹಣ್ಣುಗಳಲ್ಲಿರುವ ಪೋಷಕ ಅಂಶಗಳೇ ಇರುವುದಿಲ್ಲ. ಇದಕ್ಕೂ ಮಿಗಿಲಾಗಿ ಈ ರೀತಿಯ ಅನೇಕ ವಾಣಿಜ್ಯ ಉತ್ಪನ್ನಗಳಲ್ಲಿ ರುಚಿವರ್ಧಕ ದ್ರವ್ಯಗಳು, ಸಕ್ಕರೆ ಅಥವಾ ಕೃತಕ ಮಾಧುರ್ಯಕಾರಕಗಳು, ನೀರು ಮತ್ತು ಅಲ್ಪ ಪ್ರಮಾಣದ ಹಣ್ಣಿನ ರಸಗಳು ಇರುವುದೆಂದು ನಿಮಗೂ ತಿಳಿದಿರಲಾರದು. 

ಅಪಾಯಕಾರೀ ಅಂಶಗಳು 

ಆಯ್ದ ಹಣ್ಣುಗಳಿಂದ ಅಧಿಕ ಪ್ರಮಾಣದ ರಸವನ್ನು ಪಡೆಯುವ ಸಲುವಾಗಿ, ಇವುಗಳ ತಯಾರಕರು ಕೆಲವಿಧದ ರಾಸಾಯನಿಕಗಳು ಮತ್ತು ಆಮ್ಲಗಳನ್ನು ಬಳಸುತಾರೆ.ಇದರಿಂದಾಗಿ ಇವುಗಳನ್ನು ಸೇವಿಸಿದವರಿಗೆ ಹೊಟ್ಟೆಯಲ್ಲಿ  ಉರಿ, ಗಂಟಲಿನಲ್ಲಿ ಕಿರಿಕಿರಿ, ಅಸ್ತಮಾ ರೋಗಿಗಳಲ್ಲಿ ಎದೆಯನ್ನು ಬಿಗಿದಂತಹ ತೊಂದರೆಗಳು ಕಾಣಿಸಿಕೊಳ್ಳಬಹುದು. ಕೃತಕ ಮಾಧುರ್ಯಕಾರಕ ಆಸ್ಪಾರ್ಟೆಮ್  ಬಳಸಿ ತಯಾರಿಸಿದ ರಸಗಳನ್ನು ಸೇವಿಸಿದ ಅಲ್ಜೀಮರ್ಸ್, ಅಪಸ್ಮಾರ ಹಾಗೂ ಮಧುಮೇಹ ರೋಗಿಗಳ ವ್ಯಾಧಿಗಳು ಉಲ್ಬಣಿಸುತ್ತವೆ. ಅಂತೆಯೇ ಹಣ್ಣಿನ ರಸದ ಬಣ್ಣವನ್ನು ಇನ್ನಷ್ಟು ಆಕರ್ಷಕವಾಗಿಸಲು ಬಳಸುವ ಕೃತಕ ಬಣ್ಣಗಳಿಂದ ಆಸ್ತಮಾ ವ್ಯಾಧಿಯ ಬಾಧೆ ಇನ್ನಷ್ಟು ಹೆಚ್ಚಬಹುದು. ಸಿದ್ಧ ಹಣ್ಣಿನ ರಸಗಳನ್ನು ತಯಾರಿಸಿದ ದಿನದಿಂದ ಮಾರಾಟವಾಗುವ ತನಕ ಕೆಡದಂತೆ ಹಾಗೂ ಇವುಗಳಲ್ಲಿ ಇರಬಹುದಾದ ಸೂಕ್ಷ್ಮಾಣುಜೀವಿಗಳನ್ನು ನಾಶಪಡಿಸಲು ಪಾಶ್ಚರೈಸೇಶನ್ ಮಾಡಲಾಗುತ್ತದೆ. ತತ್ಪರಿಣಾಮವಾಗಿ ಈ ರಸಗಳಲ್ಲಿರುವ ಜೀವಸತ್ವಗಳು ಮತ್ತು ಖನಿಜಾಂಶಗಳೂ ನಾಶಗೊಳ್ಳುತ್ತವೆ. ಹಣ್ಣು ಹಂಪಲುಗಳ ಫಸಲನ್ನು ಹಾಳುಗೆಡಹುವ ರೋಗಗಳು- ಕೀಟಗಳ ಬಾಧೆಯಿಂದ ರಕ್ಷಿಸಲು ಕೃಷಿಕರು ಬಳಸುವ ಕೀಟನಾಶಕಗಳ ಶೇಷಾಂಶಗಳು ಇವುಗಳ ರಸದಲ್ಲೂ ಇರುವ ಸಾಧ್ಯತೆಗಳಿವೆ. ಜೊತೆಗೆ ಈ ರಾಸಾಯನಿಕ ಕೀಟನಾಶಕಗಳು ಅನೇಕ ವಿಧದ ಆರೋಗ್ಯದ ಸಮಸ್ಯೆಗಳಿಗೂ ಕಾರಣವೆನಿಸಬಲ್ಲವು.ಸಾಮಾನ್ಯವಾಗಿ ಹಣ್ಣು ಹಂಪಲುಗಳಲ್ಲಿ ಇರುವ ನಾರಿನ ಅಂಶಗಳು ಕೆಲವಿಧದ ಕ್ಯಾನ್ಸರ್ ಮತ್ತಿತರ ವ್ಯಾಧಿಗಳನ್ನು ತಡೆಗಟ್ಟಬಲ್ಲ, ಹೃದಯದ ಕಾಯಿಲೆಗಳ ಸಂಭಾವ್ಯತೆಗಳನ್ನು ಕಡಿಮೆ ಮಾಡಬಲ್ಲ, ಮಧುಮೇಹ ವ್ಯಾಧಿ ಆರಂಭವಾಗುವುದನ್ನು ತುಸು ದೂರೀಕರಿಸಬಲ್ಲ ಗುಣಗಳನ್ನು ಹೊಂದಿರುತ್ತದೆ ಆದರೆ ಸಿದ್ಧ ಹಣ್ಣಿನ ರಸಗಳನ್ನು ತಯಾರಿಸುವಾಗ ನಾರಿನ ಅಂಶಗಳನ್ನು ಪ್ರತ್ಯೇಕಿಸಲಾಗುತ್ತದೆ. 

ಅಂತೆಯೇ ಸಿದ್ಧ ಹಣ್ಣಿನ ರಸಗಳನ್ನು ತುಂಬಿಸಿ ಮಾರಾಟ ಮಾಡಲು ಬಳಸುವ ಪ್ಲಾಸ್ಟಿಕ್ ಬಾಟಲಿಗಳು ಅಥವಾ ಟೆಟ್ರಾ ಪ್ಯಾಕ್ ಗಳು ಪರಿಸರ ಮಾಲಿನ್ಯಕ್ಕೆ ಮತ್ತು ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸುತ್ತವೆ. ಇವೆಲ್ಲಾ ವಿಚಾರಗಳನ್ನು ಅರಿತುಕೊಂಡ ಬಳಿಕ ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಎಳನೀರು, ನಿಂಬೆ ಶರಬತ್ತು, ಕಬ್ಬಿನ ಹಾಲು,ಮಜ್ಜಿಗೆ ಅಥವಾ ಕುದಿಸಿ ತಣಿಸಿದ ಶುದ್ಧ ನೀರನ್ನು ಕುಡಿಯುವುದೇ ಲೇಸೆಂದು ನಿಮಗೂ ಅನಿಸಿರಬಹುದಲ್ಲವೇ?.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ೦೪- ೦೧- ೨೦೦೭ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ. 





Tuesday, March 11, 2014

NIMMA MANEYNGALADALLI.........




       ನಿಮ್ಮ ಮನೆಯಂಗಳದಲ್ಲಿ ಹಣ್ಣು ತರಕಾರಿಗಳನ್ನು ಬೆಳೆಸಿ 

ಕಳೆದ ಒಂದೆರಡು ದಶಕಗಳಿಂದ ಮನುಷ್ಯನನ್ನು ಬಾಧಿಸಬಲ್ಲ ವೈವಿಧ್ಯಮಯ, ಗಂಭೀರ ಹಾಗೂ ಮಾರಕ ವ್ಯಾಧಿಗಳ ಸಂಭಾವ್ಯತೆಗಳು ಮತ್ತು ಅಕಾಲಿಕ ಮರಣಗಳ ಪ್ರಮಾಣ ಹೆಚ್ಚುತ್ತಿರುವುದನ್ನು ನೀವೂ ಗಮನಿಸಿರಲೇಬೇಕು. ಈ ಸಮಸ್ಯೆಗೆ ಅನೇಕ ಕಾರಣಗಳಿದ್ದು, ನಾವು ದಿನನಿತ್ಯ ಸೇವಿಸುವ ಆಹಾರಪದಾರ್ಥಗಳಲ್ಲಿರುವ ವಿಷಕಾರಕ ಕೀಟನಾಶಕಗಳ ಶೇಷಾಂಶಗಳೂ ಇದಕ್ಕೊಂದು ಪ್ರಮುಖ ಕಾರಣವೆನಿಸಿವೆ. 
---------------               --------------             ----------------               --------------------             --------

ಭಾರತೀಯರು ಪ್ರತಿನಿತ್ಯ ಸೇವಿಸುತ್ತಿರುವ ತರಕಾರಿಗಳು, ಹಣ್ಣುಹಂಪಲುಗಳು, ದವಸಧಾನ್ಯಗಳು, ಹಾಲು, ಮೊಟ್ಟೆ, ಮೀನು ಮತ್ತು ಮಾಂಸಗಳಲ್ಲಿ ಪತ್ತೆಯಾಗುತ್ತಿರುವ ಕೀಟನಾಶಕಗಳ ಶೇಷಾಂಶಗಳ ಪ್ರಮಾಣವು ದಿನೇದಿನೇ ಹೆಚ್ಚುತ್ತಿದೆ. ಇದು ಭಾರತೀಯ ಆಹಾರ ಕಲಬೆರಕೆ ನಿಯಂತ್ರಣ ಕಾಯಿದೆ (೧೯೫೪) ಯಲ್ಲಿ ನಿಗದಿಸಿರುವ ಗರಿಷ್ಠ ಶೇಷಾಂಶಗಳ ಪ್ರಮಾಣಕ್ಕಿಂತಲೂ ಸಾಕಷ್ಟು ಅಧಿಕವಾಗಿದೆ. ವಿಶೇಷವೆಂದರೆ ಆಹಾರಪದಾರ್ಥಗಳಲ್ಲಿ ಕೀಟನಾಶಕಗಳ ಇರುವಿಕೆಯನ್ನು ನಿಯಂತ್ರಿಸಲು ಸರ್ಕಾರ ವಿಫಲವಾಗಿದೆ ಎಂದು, ಈ ಬಗ್ಗೆ ಅಧ್ಯಯನವನ್ನು ನಡೆಸಿದ್ದ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

೨೦೦೮ -೦೯ ರ ಅವಧಿಯಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ದೇಶದ ೧೩ ರಾಜ್ಯಗಳಿಂದ ಸಂಗ್ರಹಿಸಿದ್ದ, ಭಾರತೀಯರು ಪ್ರತಿನಿತ್ಯ ಬಳಸುವ ಆಹಾರಪದಾರ್ಥಗಳನ್ನು ೨೦ ವಿಭಿನ್ನ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಈ ಪರೀಕ್ಷೆಗಳ ಪರಿಣಾಮವಾಗಿ ದೊರೆತಿದ್ದ ಫಲಿತಾಂಶಗಳು ನಿಜಕ್ಕೂ ದಿಗ್ಭ್ರಮೆ ಹುಟ್ಟಿಸುವಂತಿದ್ದವು. 

ಭಾರತದ ಕೃಷಿಕರು ಒಂದು ವರ್ಷದಲ್ಲಿ ಬಳಸುವ ಕೀಟನಾಶಕಗಳ ಪ್ರಮಾಣವು ೭೦ ಸಹಸ್ರ ಟನ್ ಗಳೆಂದು ಅಂದಾಜಿಸಲಾಗಿದೆ. ತಾವು ಬೆಳೆಯುವ ಆಹಾರ ಧಾನ್ಯಗಳು, ತರಕಾರಿ ಮತ್ತು ಹಣ್ಣುಹಂಪಲುಗಳ ಬೆಳೆಗಳನ್ನು ಕೀಟಗಳ ಬಾಧೆಯಿಂದ ಸಂರಕ್ಷಿಸಲು, ರೈತಾಪಿ ಜನರು ವಿವಿಧ ರೀತಿಯ ಕೀಟನಾಶಕಗಳನ್ನು ಬಳಸುತ್ತಾರೆ. ಈ ಅಪಾಯಕಾರಿ ಕೀಟನಾಶಕಗಳನ್ನು ಯಾವ ಹಂತದಲ್ಲಿ, ಯಾವ ರೀತಿಯಲ್ಲಿ ಮತ್ತು ಯಾವ ಪ್ರಮಾಣದಲ್ಲಿ ಬಳಸಿರುತ್ತಾರೋ, ಅದಕ್ಕೆ ಅನುಗುಣವಾಗಿ ಈ ಆಹಾರಪದಾರ್ಥಗಳಲ್ಲಿ ಉಳಿದುಕೊಳ್ಳುವ ಕೀಟನಾಶಕಗಳ ಪ್ರಮಾಣದಲ್ಲಿ ವ್ಯತ್ಯಯವಾಗುವುದು. ವಿಶೇಷವೆಂದರೆ ಇಂತಹ ರಾಸಾಯನಿಕ ಕೀಟನಾಶಕಗಳ ಆಯ್ಕೆ ಹಾಗೂ ಸಿಂಪಡಿಕೆಗಳನ್ನು ಗಮನಿಸುವ ಮತ್ತು ನಿಯಂತ್ರಿಸುವ ವ್ಯವಸ್ಥೆಗಳು ಯಾವುದೇ ರಾಜ್ಯಗಳ ಕೃಷಿ ಇಲಾಖೆಗಳಲ್ಲಿ ಅಸ್ತಿತ್ವದಲ್ಲಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಅಧಿಕತಮ ರೈತರು ತಾವು ಬೆಳೆಯುವ ಬೆಳೆಗಳಿಗೆ ತಮ್ಮದೇ ಆಯ್ಕೆಯ ಕೀಟನಾಶಕಗಳನ್ನು, ತಮಗೆ ತೋಚಿದಷ್ಟು ಪ್ರಮಾಣದಲ್ಲಿ ಸಿಂಪಡಿಸುತ್ತಾರೆ. ತತ್ಪರಿಣಾಮವಾಗಿ ಇಂತಹ "ವಿಷಪೂರಿತ" ಆಹಾರಪದಾರ್ಥಗಳನ್ನು ಸೇವಿಸುವ ಅಮಾಯಕ ಜನರು, ಗಂಭೀರ ಹಾಗೂ ಮಾರಕ ಕಾಯಿಲೆಗಳಿಗೆ ಸುಲಭದಲ್ಲೇ ಈಡಾಗುತ್ತಾರೆ. 

ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ನಡೆಸಿದ್ದ ಅಧ್ಯಯನದಿಂದ ತಿಳಿದುಬಂದಂತೆ ನಾವು ಸೇವಿಸುವ ವಿವಿಧ ಆಹಾರಪದಾರ್ಥಗಳಲ್ಲಿ, ಭಾರತದಲ್ಲಿ ಈಗಾಗಲೇ ನಿಷೇಧಿಸಿರುವ ಮತ್ತು ನಿಯಂತ್ರಿತ ವಿಧಾನಗಳಿಂದ ಮಾತ್ರ ಬಳಸಬಹುದಾದಂತಹ ಕೀಟನಾಶಕಗಳ ಶೇಷಾಂಶಗಳು ಅತಿಯಾದ ಪ್ರಮಾಣದಲ್ಲಿ ಪತ್ತೆಯಾಗಿದ್ದವು. ಉದಾಹರಣೆಗೆ ತರಕಾರಿಗಳ ಬೆಳೆಗಳಲ್ಲಿ ಬಳಸಲೇಬಾರದಂತಹ ಡಿಡಿಟಿ ಕೀಟನಾಶಕದ ಶೇಷಾಂಶಗಳು, ಪ್ರಯೋಗಾಲಯದಲ್ಲಿ ಪರೀಕ್ಷಿಸಿದ್ದ ಟೊಮೇಟೊ ಹಣ್ಣುಗಳಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ೧೦೮ ಪಟ್ಟು ಅಧಿಕವಾಗಿತ್ತು!. ಉತ್ತರ ಪ್ರದೇಶದಿಂದ ಸಂಗ್ರಹಿಸಿದ್ದ ಅನ್ಯವಿಧದ ತರಕಾರಿಗಳು, ಸೇಬು,ಅಕ್ಕಿ, ಗೋಧಿ, ಹಾಲು ಮತ್ತು ಬೆಣ್ಣೆಗಳ ಮಾದರಿಗಳಲ್ಲಿ ಆಲ್ಡ್ರಿನ್, ಕ್ಲೋರ್ ಡೇಸ್, ಕ್ಲೋರ್ ಫೆನ್ಯಿನ್ ಫಾಸ್ ಮತ್ತು ಹೆಪ್ತಾಕ್ಲೋರ್ ಗಳಂತಹ ನಿಷೇಧಿತ ಕೀಟನಾಶಕಗಳು ವ್ಯಾಪಕವಾಗಿ ಪತ್ತೆಯಾಗಲು, ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ವ್ಯವಸ್ಥೆಗಳ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. 

ಅದೇ ರೀತಿಯಲ್ಲಿ ಕೇವಲ ಹತ್ತಿಯ ಬೆಳೆಯನ್ನು ಸಂರಕ್ಷಿಸುವ ಸಲುವಾಗಿ ಬಳಸಬಹುದಾದ ಮೊನೋಕ್ರೋಟೋಫೋಸ್ ರಾಸಾಯನಿಕವನ್ನು ಪಂಜಾಬಿನ ರೈತರು ತಾವು ಬೆಳೆಯುವ ತರಕಾರಿಗಳನ್ನು ಕೀಟಗಳ ಬಾಧೆಯಿಂದ ಸಂರಕ್ಷಿಸಲು ಬಳಸುತ್ತಿರುವುದು ತಿಳಿದುಬಂದಿತ್ತು. ನಿಜ ಹೇಳಬೇಕಿದ್ದರೆ ಇಂತಹ ಅಪಾಯಕಾರಿ ಕೀಟನಾಶಕಗಳನ್ನು ನಿಯಂತ್ರಿಸಬೇಕಾದ ಹೊಣೆಗಾರಿಕೆಯು ಕೇಂದ್ರ ಕೀಟನಾಶಕ ಮಂಡಳಿಯ ಮೇಲಿದೆ. ಆದರೆ ಮಂಡಳಿಯು ದೇಶಾದ್ಯಂತ ವಿವಿಧ ಆಹಾರಪದಾರ್ಥಗಳಲ್ಲಿ ಅತಿಯಾಗಿ ಪತ್ತೆಯಾಗುತ್ತಿರುವ ಕೀಟನಾಶಕಗಳ ಶೇಷಾಂಶಗಳ ಕುರಿತು ವಿವಿಧ ರಾಜ್ಯಗಳ ಕೃಷಿ ಇಲಾಖೆಗಳಿಗೆ ಮಾಹಿತಿಯನ್ನು ನೀಡಿದ್ದರೂ, ನಿಷೇಧಿತ ಕೀಟನಾಶಕಗಳ ಬಗ್ಗೆ ಕೂಲಂಕುಶ ಮಾಹಿತಿಯನ್ನೇ ನೀಡಿರಲಿಲ್ಲ!. 

ಇವೆಲ್ಲಕ್ಕೂ ಮಿಗಿಲಾಗಿ ದೇಶದ ಬಹುತೇಕ ರಾಜ್ಯಗಳ ಕೃಷಿ ಇಲಾಖೆಗಳ ಅಧಿಕಾರಿಗಳು ನಿರ್ದಿಷ್ಟ ಬೆಳೆ ಹಾಗೂ ಇದನ್ನು ಬಾಧಿಸಬಲ್ಲ ನಿರ್ದಿಷ್ಟ ಕೀಟಗಳಿಗೆ, ಯಾವ ಕೀಟನಾಶಕವನ್ನು ಯಾವ ಪ್ರಮಾಣದಲ್ಲಿ ಬಳಸಬೇಕೆನ್ನುವ ಮಾಹಿತಿಯನ್ನು ರೈತರಿಗೆ ನೀಡುವುದಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಅಸ್ಸಾಂ ನಿಂದ ಸಂಗ್ರಹಿಸಿದ್ದ ಚಹಾದ ಮಾದರಿಗಳಲ್ಲಿ ಪತ್ತೆಯಾಗಿದ್ದ  ಫೆನ್ ಪ್ರೋಪಾಥ್ರಿನ್ ಕೀಟನಾಶಕದ ಶೇಷಾಂಶದ ಪ್ರಮಾಣವು ೪೨೮೦ ಪಿ.ಪಿ.ಎಂ ಗಳಾಗಿದ್ದು, ಸಂಯುಕ್ತ ರಾಷ್ಟ್ರ ಸಂಸ್ಥೆ ನಿಗದಿಸಿರುವ ಮಾನದಂಡದಂತೆ ಇದರ ಪ್ರಮಾಣವು ಕೇವಲ ೨ ಪಿ.ಪಿ.ಎಂ ಇರಬಹುದಾಗಿದೆ. ಇದಲ್ಲದೆ ಕೇಂದ್ರ ಕೀಟನಾಶಕ ಮಂಡಳಿಯು ಚಹಾ ಗಿಡಗಳಿಗೆ ಫೆನ್ ಪ್ರೋಪಾಥ್ರಿನ್ ಬಳಸಲು ಶಿಫಾರಸು ಮಾಡದೇ ಇರುವುದರಿಂದಾಗಿ, ಇದರ ಗರಿಷ್ಠ ಶೇಷಾಂಶದ ಪ್ರಮಾಣವನ್ನೂ ನಿಗದಿಸಿರಲಿಲ್ಲ. ಆದರೂ ಭಾರತದ ಚಹಾ ಮಂಡಳಿಯು ಡೈಕೊಫೋಲ್ ರಾಸಾಯನಿಕಕ್ಕೆ ಪರ್ಯಾಯವಾಗಿ ಫೆನ್ ಪ್ರೋಪಾಥ್ರಿನ್ ರಾಸಾಯನಿಕವನ್ನು ಬಳಸಲು ಶಿಫಾರಸು ಮಾಡಿದ್ದುದು ನಂಬಲು ಅಸಾಧ್ಯವೆನಿಸುತ್ತದೆ. ವಿಶೇಷವೆಂದರೆ ಚಹಾ ಮಂಡಳಿಯ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿದ್ದ ಕೃಷಿ ಮಂತ್ರಾಲಯವೇ ಫೆನ್ ಪ್ರೋಪಾಥ್ರಿನ್ ಕೀಟ ನಾಶಕವನ್ನು ಇತರ ಬೆಳೆಗಳಿಗೂ ವಿಸ್ತರಿಸುವಂತೆ ಸೂಚಿಸಲು ಚಿಂತನೆಯನ್ನು ನಡೆಸಿತ್ತು!. 

ಭಾರತದಿಂದ ವಿದೇಶಗಳಿಗೆ ರಫ್ತಾಗುತ್ತಿರುವ ಆಹಾರಪದಾರ್ಥಗಳಲ್ಲಿನ ಕೀಟನಾಶಕಗಳ ಶೇಷಾಂಶಗಳನ್ನು ಪತ್ತೆಹಚ್ಚುವ ಸಲುವಾಗಿ ಕಟ್ಟುನಿಟ್ಟಿನ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಆದರೆ ವಿದೇಶಗಳಿಂದ ಆಮದು ಮಾಡುತ್ತಿರುವ ಮತ್ತು ನಮ್ಮ ದೇಶದಲ್ಲೇ ಬೆಳೆದ ಹಾಗೂ ಭಾರತೀಯರು ಸೇವಿಸುತ್ತಿರುವ ಆಹಾರಪದಾರ್ಥಗಳ ವಿಚಾರದಲ್ಲಿ ಸರ್ಕಾರವು ಇದೇ ನೀತಿಯನ್ನು ಅನುಸರಿಸುತ್ತಿಲ್ಲ. 



ಭಾರತದಲ್ಲಿ ಬಳಸಲ್ಪಡುತ್ತಿರುವ ಆಹಾರಪದಾರ್ಥಗಳ ಸುರಕ್ಷತೆಯನ್ನು ಕಾಪಾಡಬೇಕಾದ ಹೊಣೆಗಾರಿಕೆ ಇರುವ ಆಹಾರ ಸಂರಕ್ಷಣೆ ಮತ್ತು ಗುಣಮಟ್ಟಗಳ ಪ್ರಾಧಿಕಾರವು, ದೇಶದ ವಿವಿಧ ರಾಜ್ಯಗಳ ಕೃಷಿ ಇಲಾಖೆಗಳಿಗೆ ಆಹಾರಪದಾರ್ಥಗಳ ಕಲಬೆರಕೆ ಅಧಿನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿ ಕೈತೊಳೆದುಕೊಂಡಿದೆ. ಹಾಗೂ ಇದೇ ಕಾರಣದಿಂದಾಗಿ ಭಾರತದ ಉದ್ದಗಲಕ್ಕೂ ವ್ಯಾಪಕ ಹಾಗೂ ಅನಿಯಂತ್ರಿತವಾಗಿ ಬಳಸಲ್ಪಡುತ್ತಿರುವ ಕೀಟನಾಶಕಗಳ ಅತಿಯಾದ ಬಳಕೆಯನ್ನು ನಿಯಂತ್ರಿಸುವುದು "ಬೆಕ್ಕಿನ ಕೊರಳಿಗೆ ಗಂಟೆಯನ್ನು ಕಟ್ಟುವವರು ಯಾರು?" ಎನ್ನುವಂತಾಗಿದೆ. 

ಈ ರೀತಿಯಲ್ಲಿ ಕಲುಷಿತ ನೀರು- ಗಾಳಿಗಳನ್ನು ಸೇವಿಸುತ್ತಾ, ಪ್ರದೂಷಿತ ಪರಿಸರದಲ್ಲಿ ಜೀವಿಸುತ್ತಿರುವ ದೇಶದ ಪ್ರಜೆಗಳು, ಇದೀಗ ವಿಷಯುಕ್ತ ಆಹಾರವನ್ನು ಸೇವಿಸುತ್ತಿರುವುದು ಸತ್ಯ. ಆದರೆ ಇವೆಲ್ಲದರ ಅರಿವಿದ್ದರೂ ಈ ಸಮಸ್ಯೆಯನ್ನು ತಡೆಗಟ್ಟಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದಾಗಿ, ಇದು ಇನ್ನಷ್ಟು ಉಲ್ಬಣಿಸುತ್ತಿರುವುದು ಕೂಡಾ ಅಷ್ಟೇ ಸತ್ಯ!. 

ಕೊನೆಯ ಮಾತು 

ವಾಣಿಜ್ಯ ಉದ್ದೇಶದಿಂದ ಆಹಾರ ಧಾನ್ಯಗಳು, ತರಕಾರಿ ಮತ್ತು ಹಣ್ಣುಹಂಪಲುಗಳನ್ನು ಬೆಳೆಯುವ ಕೃಷಿಕರು, ವಿವಿಧ ಹಂತಗಳಲ್ಲಿ ವಿವಿಧರೀತಿಯ ಕೀಟನಾಶಕಗಳನ್ನು ಬಳಸುತ್ತಾರೆ. ಈ ಆಹಾರಪದಾರ್ಥಗಳನ್ನು ಹಾಗೂ ತರಕಾರಿಗಳನ್ನು ಸಾಕಷ್ಟು ಸಮಯ ನೀರಿನಲ್ಲಿ ನೆನೆಸಿಟ್ಟ ಬಳಿಕ ತೊಳೆಯುವ ಮೂಲಕ ಮತ್ತು ಪ್ರೆಷರ್ ಕುಕ್ಕರ್ ನಲ್ಲಿ ಬೇಯಿಸುವುದರಿಂದ, ಇವುಗಳಲ್ಲಿ ಉಳಿದುಕೊಂಡಿರುವ ಕೀಟನಾಶಕಗಳ ಶೇಷಾಂಶಗಳ ವಿಷಕಾರಕ ಪರಿಣಾಮಗಳ ತೀವ್ರತೆಯು ಕಡಿಮೆಯಾಗುವುದರೊಂದಿಗೆ, ಇವುಗಳ ಬಹುದೊಡ್ಡ ಅಂಶವು ನಾಶವಾಗುತ್ತದೆ. ಅದೇ ರೀತಿಯಲ್ಲಿ ಹಣ್ಣುಹಂಪಲುಗಳನ್ನು ತುಸು ಉಪ್ಪು ಬೆರೆಸಿದ ನೀರಿನಲ್ಲಿ ಮುಳುಗಿಸಿಟ್ಟು, ಸ್ವಲ್ಪ ಸಮಯದ ಬಳಿಕ ಚೆನ್ನಾಗಿ ತೊಳೆಯುವ ಮೂಲಕ ಮತ್ತು ತರಕಾರಿಗಳನ್ನೂ ಇದೇ ರೀತಿಯಲ್ಲಿ ತೊಳೆದು, ಕತ್ತರಿಸಿದ ಬಳಿಕ ಮತ್ತೊಮ್ಮೆ ಇದೇ ವಿಧಾನವನ್ನು ಅನುಸರಿಸಿದ ಬಳಿಕ ಅಡುಗೆಗೆ ಬಳಸುವುದು ಹಿತಕರವೆನಿಸುವುದು. ನಿಮ್ಮ ಪರಿಚಿತ ವೈದ್ಯರು ಸೂಚಿಸಿದಂತೆ ಹಸಿ ತರಕಾರಿಗಳ ಸಲಾಡ್ ಸೇವಿಸುವುದಾದಲ್ಲಿ, ನಿಮ್ಮ ಮನೆಯಂಗಳದಲ್ಲಿ ನೀವೇ ಬೆಳೆದ ಅಥವಾ ಸಾವಯವ ವಿಧಾನದಿಂದ ಬೆಳೆಸಿರುವ ತರಕಾರಿಗಳನ್ನು ಮಾತ್ರ ಸೇವಿಸಿ. ಅಂತಿಮವಾಗಿ ಹೇಳುವುದಾದಲ್ಲಿ " ನಿಮ್ಮ ಆರೋಗ್ಯದ ರಕ್ಷಣೆ ನಿಮ್ಮ ಕೈಯಲ್ಲಿದೆ" ಎನ್ನುವುದನ್ನು ಮಾತ್ರ ಮರೆಯದಿರಿ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ೧೫-೦೪- ೨೦೧೧ ರ ಸಂಚಿಕೆಯ ಮಹಿಳಾ ಸಂಪದದಲ್ಲಿ ಪ್ರಕಟಿತ ಲೇಖನ. 


Monday, March 10, 2014

Discarded Plastic bottles



  ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ಕಸದೊಂದಿಗೆ ಎಸೆಯದಿರಿ 

ಮನುಷ್ಯನು ಆರೋಗ್ಯದಿಂದ ಬದುಕಲು ನಿರ್ಮಲವಾದ ಗಾಳಿ ಮತ್ತು ಶುದ್ಧವಾದ ನೀರು ಅವಶ್ಯಕವೆಂದು ನಿಮಗೂ ತಿಳಿದಿರಬೇಕು. ಅದೇ ರೀತಿಯಲ್ಲಿ ಅಶುದ್ಧ ನೀರನ್ನು ಕುಡಿಯುವುದರಿಂದ ಉದ್ಭವಿಸಬಲ್ಲ ಗಂಭೀರ- ಮಾರಕ ಕಾಯಿಲೆಗಳ ಬಗ್ಗೆಯೂ ನೀವು ಅರಿತಿರಲೇಬೇಕು. ಪ್ರಾಯಶಃ ಇದೇ ಕಾರಣದಿಂದಾಗಿ ಕೆಲವೊಂದು ಸಂದರ್ಭಗಳಲ್ಲಿ, ಅದರಲ್ಲೂ ವಿಶೇಷವಾಗಿ ಪ್ರಯಾಣ - ಪ್ರವಾಸಗಳ ಸಂದರ್ಭಗಳಲ್ಲಿ ದುಬಾರಿ ಬೆಲೆಯನ್ನು ತೆತ್ತು ಶುದ್ಧೀಕರಿಸಿದ ನೀರಿನ ಅಥವಾ ತಂಪು ಪಾನೀಯಗಳ ಪ್ಲಾಸ್ಟಿಕ್ ಬಾಟಲಿಗಳನ್ನು ಖರೀದಿಸಿ, ಕುಡಿದ ಬಳಿಕ ಖಾಲಿ ಬಾಟಲಿಗಳನ್ನು ಎಲ್ಲಾದರೂ ಎಸೆದಿರಬಹುದು. ಆದರೆ ಈ ಪೆಟ್ ಬಾಟಲಿಗಳ ತಯಾರಿಕೆ, ಇವುಗಳಲ್ಲಿ ತುಂಬಿಸಿ ಮಾರಲ್ಪಡುವ ನೀರು ಅಥವಾ ತಂಪು ಪಾನೀಯಗಳ ಶುದ್ಧಾಶುದ್ಧತೆಗಳ ಬಗ್ಗೆ ಮತ್ತು ಬಳಸಿ ಎಸೆದಂತಹ ಕೋಟ್ಯಂತರ ಬಾಟಲಿಗಳ ವಿಲೆವಾರಿಗಳ ಬಗ್ಗೆ ಜನಸಾಮಾನ್ಯರು ಎಂದಿಗೂ ತಲೆಕೆಡಿಸಿಕೊಳ್ಳುವುದೇ ಇಲ್ಲ!. 

ನಿಜಹೆಳಬೇಕಿದ್ದಲ್ಲಿ " ಜಲಜನ್ಯ ಕಾಯಿಲೆ" ಗಳಿಂದ ರಕ್ಷಿಸಿಕೊಳ್ಳಲು ಜನಸಾಮಾನ್ಯರು ಬಳಸುವ ಬಾಟಲಿಗಳಲ್ಲಿ ತುಂಬಿ ಮಾರಲ್ಪಡುವ ನೀರು, ಬಹುತೇಕ ಸಂದರ್ಭಗಳಲ್ಲಿ  ನಳ್ಳಿನೀರಿಗಿಂತ ಹೆಚ್ಚು ಪರಿಶುದ್ಧವಾಗಿ ಇರುವುದಿಲ್ಲ. ಆದರೂ ಈ ನೀರು ನಳ್ಳಿನೀರಿಗಿಂತಲೂ ೧೦,೦೦೦ ಪಟ್ಟು ದುಬಾರಿಯಾಗಿರುವುದು ಮಾತ್ರ ಸುಳ್ಳೇನಲ್ಲ. 

ಯುರೋಪ್ ಮತ್ತು ಅಮೆರಿಕಗಳಲ್ಲಿ ಜಾರಿಯಿರುವ ಕಟ್ಟುನಿಟ್ಟಿನ ಕಾನೂನುಗಳಿಂದಾಗಿ, ಅಲ್ಲಿನ ಪ್ರಜೆಗಳಿಗೆ ಸರಬರಾಜಾಗುವ ನಳ್ಳಿನೀರು, ಬಾಟಲಿಗಳಲ್ಲಿ ತುಂಬಿ ಮಾರುವ ನೀರಿನಷ್ಟೇ ಶುದ್ಧವಾಗಿರುತ್ತದೆ.ಹಾಗೂ ಇದೇ ಕಾರಣದಿಂದಾಗಿ ಮತ್ತು ತ್ಯಾಜ್ಯ ಬಾಟಲಿಗಳ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಅನೇಕ ಪಾಶ್ಚಾತ್ಯ ದೇಶಗಳಲ್ಲಿ ಬಾಟಲಿಗಳಲ್ಲಿ ನೀರನ್ನು ತುಂಬಿಸಿ ಮಾರಾಟ ಮಾಡುವುದನ್ನೇ ನಿಷೇಧಿಸಲಾಗಿದೆ.  ಆದರೆ ನಮ್ಮ ದೇಶದ ಮಟ್ಟಿಗೆ ಇಂತಹ ಮಾನದಂಡಗಳು ಕೇವಲ ಕಾಗದಗಳ ಮೇಲೆ ಮಾತ್ರ ಮುದ್ರಿತವಾಗಿರುತ್ತವೆ. ಅದೇನೇ ಇರಲಿ, ಇದೀಗ ಶುದ್ಧೀಕರಿಸಿದ ನೀರು, ತಂಪು ಪಾನೀಯಗಳು, ಖಾದ್ಯ ತೈಲಗಳು, ಸೌಂದರ್ಯವರ್ಧಕ ಉತ್ಪನ್ನಗಳು, ಔಷಧಗಳೇ ಮುಂತಾದ ಉತ್ಪನ್ನಗಳ ಖಾಲಿ ಪ್ಲಾಸ್ಟಿಕ್ ಬಾಟಲಿಗಳು, ಇದೀಗ ಜಲಜನ್ಯ ಕಾಯಿಲೆಗಳಿಗಿಂತ ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸುತ್ತಿವೆ. ಜಗತ್ತಿನಾದ್ಯಂತ ಕೋಟ್ಯಂತರ ಜನರು ಬಳಸಿ ಎಸೆಯುತ್ತಿರುವ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಅನ್ಯ ವಸ್ತುಗಳು, ನಿಸ್ಸಂದೇಹವಾಗಿ ನಮ್ಮ ಮುಂದಿನ ಸಂತತಿಯನ್ನು ಶಾಪದೋಪಾದಿಯಲ್ಲಿ ಪೀಡಿಸಲಿವೆ. 

ಕುಡಿಯುವ ನೀರು ಮತ್ತು ಇತರ ಅನೇಕ ವಾಣಿಜ್ಯ ಉತ್ಪನ್ನಗಳನ್ನು ತುಂಬಿಸಿ ಮಾರಾಟಮಾಡಲು ಬಳಸಲ್ಪಡುವ ಈ ಬಾಟಲಿಗಳನ್ನು ತಯಾರಿಸಲು ಹಾಗೂ ಬಳಸಿ ಎಸೆದ ಖಾಲಿ ಬಾಟಲಿಗಳನ್ನು ಸಂಗ್ರಹಿಸಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ವರ್ಷಂಪ್ರತಿ ಕೋಟ್ಯಂತರ ಡಾಲರ್ ಗಳನ್ನು ವ್ಯಯಿಸುತ್ತಿವೆ. ಅಮೆರಿಕದಲ್ಲಿನ ಅರ್ತ್ ಪಾಲಿಸಿ ಇನ್ಸ್ಟಿಟ್ಯೂಟ್ ಸಂಸ್ಥೆಯು ನಡೆಸಿದ್ದ ಅಧ್ಯಯನದ ವರದಿಯಂತೆ, ೧೯೯೯ ರಿಂದ ೨೦೦೪ ನೆ ಇಸವಿಯ ಅವಧಿಯಲ್ಲಿ ಜಗತ್ತಿನಾದ್ಯಂತ ಇಂತಹ ಕುಡಿಯುವ ನೀರಿನ ಬಾಟಲಿಗಳ ಬಳಕೆಯ ಪ್ರಮಾಣವು ದುಪ್ಪಟ್ಟಾಗಿತ್ತು!. ಅಂದರೆ ೧೯೯೯ ರಲ್ಲಿ ವಿಶ್ವಾದ್ಯಂತ ೯೮೦೦ ಕೋಟಿ ಲೀಟರ್ ನೀರಿನ ಬಾಟಲಿಗಳು ಮಾರಾಟವಾಗಿದ್ದಲ್ಲಿ, ೨೦೦೪ ರಲ್ಲಿ ಈ ಸಂಖ್ಯೆಯು ೧೫, ೪೦೦ ಕೋಟಿಯನ್ನು ತಲುಪಿತ್ತು. ಇದರಲ್ಲಿ ಸಿಂಹಪಾಲು ಅಮೆರಿಕದ ಜನತೆಗೆ ಸಲ್ಲುವುದಾದರೂ, ಇದೇ ಅವಧಿಯಲ್ಲಿ ಬಡ ಭಾರತದ ಜನರು ಖರೀದಿಸಿದ್ದ ನೀರಿನ ಬಾಟಲಿಗಳ ಪ್ರಮಾಣವು ಮೂರುಪಟ್ಟು ಹೆಚ್ಚಾಗಿತ್ತು!. 

೨೦೦೪ ರಲ್ಲಿ ವಿಶ್ವದಲ್ಲೇ ಅತಿಹೆಚ್ಚು ನೀರಿನ ಬಾಟಲಿಗಳನ್ನು ಖರೀದಿಸಿ ಕುಡಿದವರಲ್ಲಿ ಇಟಲಿ ದೇಶದ ಪ್ರಜೆಗಳು ಆಗ್ರ ಸ್ಥಾನವನ್ನು ಗಳಿಸಿದ್ದಲ್ಲಿ, ದ್ವಿತೀಯ ಸ್ಥಾನವು ಮೆಕ್ಸಿಕೋ ದೇಶದ ಪ್ರಜೆಗಳಿಗೆ ಸಲ್ಲುತ್ತದೆ. ಇಟಲಿಯ ಪ್ರಜೆಗಳು ೨೦೦೪ ರಲ್ಲಿ ತಲಾ ೧೮೪ ಲೀಟರ್ ಹಾಗೂ ಮೆಕ್ಸಿಕನ್ ಜನರು ತಲಾ ೧೬೯ ಲೀಟರ್ ಗಳಷ್ಟು ಬಾಟಲೀಕರಿಸಿದ ನೀರನ್ನು ಗುಟುಕರಿಸಿದ್ದರು!. 

 ಬಾಟಲಿಗಳ ಬಾಧಕಗಳು 

ಶುದ್ಧೀಕರಿಸಿದ ನೀರು ಮತ್ತು ಅನ್ಯ ವಾಣಿಜ್ಯ ಉತ್ಪನ್ನಗಳನ್ನು ತುಂಬಿಸಿ ಮಾರಾಟಮಾಡಲು ಬೇಕಾಗುವ ಪ್ಲಾಸ್ಟಿಕ್ ಬಾಟಲಿಗಳ ತಯಾರಿಕೆಗೆ ಕಚ್ಚಾ ತೈಲದ ಅವಶ್ಯಕತೆಯಿದೆ. ಈ ಪೆಟ್ರೋಲಿಯಂ ಉತ್ಪನ್ನಕ್ಕಾಗಿ ನಾವು ಕೋಟ್ಯಂತರ ರೂಪಾಯಿಗಳ ವಿದೇಶಿ ವಿನಿಮಯವನ್ನು ವ್ಯಯಿಸಬೇಕಾಗುತ್ತದೆ. ಅಂತೆಯೇ ಈ ಬಾಟಲಿಗಳನ್ನು ತಯಾರಿಸಿದ ಘಟಕಗಳಿಂದ ಇವುಗಳನ್ನು ಖರೀದಿಸಿದ ಘಟಕಗಳಿಗೆ ತಲುಪಿಸಲು ಸಾಕಷ್ಟು ಇಂಧನ ಬೇಕಾಗುತ್ತದೆ. ಬಳಿಕ ವಾಣಿಜ್ಯ ಉತ್ಪನ್ನಗಳನ್ನು ಈ ಬಾಟಲಿಗಳಲ್ಲಿ ತುಂಬಿಸಿ, ಮಾರಾಟಗಾರರಿಗೆ ತಲುಪಿಸಲು ಮತ್ತೆ ಗಣನೀಯ ಪ್ರಮಾಣದ ಇಂಧನ ವ್ಯಯಿಸಲ್ಪಡುತ್ತದೆ. 

ಅಮೆರಿಕ ದೇಶವೊಂದರ ಬೇಡಿಕೆಯನ್ನು ಪೂರೈಸುವಷ್ಟು ಬಾಟಲಿಗಳನ್ನು ತಯಾರಿಸಲು ( ಈ ಲೇಖನವನ್ನು ಪ್ರಕಟಿಸಿದ್ದ ಸಂದರ್ಭದಲ್ಲಿ, ಅರ್ಥಾತ್ ಸುಮಾರು ಎಂಟು ವರ್ಷಗಳ ಹಿಂದೆ) ೧೫ ಲಕ್ಷ ಬ್ಯಾರಲ್ ಗಳಷ್ಟು ಕಚ್ಚಾ ತೈಲ ಬೇಕಾಗುತ್ತದೆ. ವಿಶೇಷವೆಂದರೆ ಇಷ್ಟೇ ಪ್ರಮಾಣದ ಕಚ್ಚಾ ತೈಲದಿಂದ ತಯಾರಿಸಿದ ಪೆಟ್ರೋಲ್ ಅಥವಾ ಡೀಸೆಲ್, ೧ ಲಕ್ಷ ಕಾರುಗಳಿಗೆ ಒಂದು ವರ್ಷಕ್ಕೆ ಸಾಕಾಗುತ್ತದೆ!. 

ಇವೆಲ್ಲಕ್ಕೂ ಮಿಗಿಲಾಗಿ ಬಳಸಿ ಎಸೆದ ಬಾಟಲಿಗಳ ಸಂಗ್ರಹ ಮತ್ತು ವಿಲೆವಾರಿಗಳು ಸ್ಥಳೀಯ ಸಂಸ್ಥೆಗಳ ಪಾಲಿಗೆ ಕಗ್ಗಂಟಾಗಿ ಪರಿಣಮಿಸುತ್ತಿವೆ. ಈ ತ್ಯಾಜ್ಯ ಬಾಟಲಿಗಳು ಪರಿಸರಕ್ಕೆ ಹಾನಿಕರವೆನಿಸುವುದರೊಂದಿಗೆ, ಆರೋಗ್ಯದ ದೃಷ್ಟಿಯಿಂದಲೂ ಅತ್ಯಂತ ಅಪಾಯಕಾರಿ ಎನಿಸುತ್ತವೆ. ಈ ತ್ಯಾಜ್ಯ ಬಾಟಲಿಗಳ ಸಣ್ಣದೊಂದು ಪಾಲು ' ಪುನರ್ ಆವರ್ತನ" ಗೊಳ್ಳಲು ಬಳಕೆಯಾದರೂ, ಬಹುದೊಡ್ಡ ಪಾಲು ರಸ್ತೆಯ ಬದಿಗಳು ಮತ್ತು ಚರಂಡಿಗಳಲ್ಲಿ ರಾರಾಜಿಸುತ್ತಿವೆ. ಇವುಗಳು ಮಣ್ಣಿನಲ್ಲಿ ಕರಗಿ ಬೆರೆಯಲು ೧೦೦೦ ವರ್ಷಗಳೇ ಬೇಕಾಗುತ್ತದೆ. ಇಷ್ಟು ಮಾತ್ರವಲ್ಲ, ಇವುಗಳನ್ನು ಬೆಂಕಿ ಹಚ್ಚಿ ಸುಟ್ಟುಹಾಕಿದಲ್ಲಿ ಉತ್ಪನ್ನವಾಗುವ ಕ್ಲೋರಿನ್, ಡಯಾಕ್ಸಿನ್ ಮತ್ತಿತರ ವಿಷಕಾರಕ ಅನಿಲಗಳು ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೂ ಕಾರಣವೆನಿಸುತ್ತವೆ. ಇದೇ ಕಾರಣದಿಂದಾಗಿ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ಕಸದೊಂದಿಗೆ ಎಸೆಯದೇ, ಇವುಗಳನ್ನು ಸಂಗ್ರಹಿಸಿಟ್ಟು ಗುಜರಿ ವರ್ತಕರಿಗೆ ನೀಡಬಹುದಾಗಿದೆ. ಕಿಲೋ ಒಂದಕ್ಕೆ ಕನಿಷ್ಠ ೧೫ ರಿಂದ ೨೦ ರೂ. ಗಳನ್ನೂ ಪಾವತಿಸುವ ಗುಜರಿ ವರ್ತಕರು, ಈ ತ್ಯಾಜ್ಯ ಬಾಟಲಿಗಳನ್ನು "ಪುನರ್ ಆವರ್ತನ' ಗೊಳಿಸಿ ಬಳಸುವ ಘಟಕಗಳಿಗೆ ಪೂರೈಸುತ್ತಾರೆ. ತತ್ಪರಿಣಾಮವಾಗಿ ತ್ಯಾಜ್ಯ ಬಾಟಲಿಗಳ ಸುರಕ್ಷಿತ ವಿಲೇವಾರಿಯಲ್ಲಿ ಸಹಕರಿಸುತ್ತಿದ್ದಾರೆ. ಇವರೊಂದಿಗೆ ನಾವುನೀವೆಲ್ಲರೂ ಕೈಜೋಡಿಸಿದಲ್ಲಿ, ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಅಲ್ಲಲ್ಲಿ ಬಿದ್ದಿರುವ ತ್ಯಾಜ್ಯ ಬಾಟಲಿಗಳ ಸಮಸ್ಯೆಯನ್ನು ಪರಿಹರಿಸುವುದು ಸುಲಭಸಾಧ್ಯವೂ ಹೌದು. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯಲ್ಲಿ ಕೆಲ ವರ್ಷಗಳ ಹಿಂದೆ ಪ್ರಕಟಿತ ಲೇಖನ.



Thursday, March 6, 2014

Pesticides in fruits and vegetables!





  ಹಣ್ಣುಹಂಪಲುಗಳಲ್ಲೂ ತುಂಬಿಹುದು ಹಾಲಾಹಲ!

" an apple a day, keeps the doctor away" ಎನ್ನುವ ಆಡುಮಾತನ್ನು ನೀವೂ ಕೇಳಿರಲೇಬೇಕು. ಅದೇ ರೀತಿಯಲ್ಲಿ ದಿನನಿತ್ಯ ಹಣ್ಣುಹಂಪಲು ಮತ್ತು ತರಕಾರಿಗಳನ್ನು ಸೇವಿಸುವುದು ಆರೋಗ್ಯಕರ ಎನ್ನುವ ಕಿವಿಮಾತನ್ನು ನಿಮ್ಮ ವೈದ್ಯರು ನಿಮಗೆ ಹೇಳಿರಲೇಬೇಕು. ಆದರೆ ಇಂದಿನ ಬದಲಾದ ಪರಿಸ್ಥಿತಿಯಲ್ಲಿ, ಇವುಗಳಲ್ಲಿ ಪತ್ತೆಯಾಗುತ್ತಿರುವ ರಾಸಾಯನಿಕ ಕೀಟನಾಶಕಗಳಿಂದಾಗಿ ಇವುಗಳ ಸೇವನೆ ಮನುಷ್ಯರ ಆರೋಗ್ಯಕ್ಕೆ ಮಾರಕವೆನಿಸುತ್ತಿರುವುದು ಸುಳ್ಳೇನಲ್ಲ!. 

ನಮ್ಮ ದೇಶದ ಸರ್ವೋತ್ಕೃಷ್ಟ ಉತ್ಪನ್ನಗಳನ್ನು ಅವಗಣಿಸಿ ವಿದೇಶಿ ವಸ್ತುಗಳನ್ನು ಖರೀದಿಸುವುದು ಬಹುತೇಕ ಭಾರತೀಯರ ದೌರ್ಬಲ್ಯಗಳಲ್ಲಿ ಪ್ರಮುಖವಾಗಿದೆ. ಸಾಮಾನ್ಯವಾಗಿ ಶ್ರೀಮಂತರಲ್ಲಿ ಹೆಚ್ಚಾಗಿ ಕಾಣಸಿಗುವ ಈ ಪಿಡುಗು, ಇದೀಗ ಮಧ್ಯಮವರ್ಗದ ಜನರಿಗೂ ಹಬ್ಬಿದೆ. ಇದರಲ್ಲಿ ಉದಾರೀಕರಣ- ಜಾಗತೀಕರಣಗಳ ಪ್ರಭಾವವೂ ಸಾಕಷ್ಟಿದೆ. 



 ಪ್ರಸ್ತುತ ಭಾರತದಲ್ಲಿ ಯಥೇಚ್ಚವಾಗಿ ಲಭಿಸುವ, ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ, ದುಬಾರಿ ಬೆಲೆಯ ಹಣ್ಣು ಹಂಪಲು ಹಾಗೂ ತರಕಾರಿಗಳಿಗೆ ಅನೇಕ ಭಾರತೀಯರು ಮಾರುಹೋಗಿದ್ದಾರೆ. ನಿಜ ಹೇಳಬೇಕಿದ್ದಲ್ಲಿ ಕಾಶ್ಮೀರದ ಕುಲು ಕಣಿವೆಯಲ್ಲಿ ಬೆಳೆಯುವ ಉತ್ಕೃಷ್ಟ ಗುಣಮಟ್ಟದ ಹಾಗೂ ಅತ್ಯಂತ ಸ್ವಾದಿಷ್ಟ ಸೇಬುಹಣ್ಣುಗಳನ್ನು ಜಗತ್ತಿನ ಅನೇಕ ರಾಷ್ಟ್ರಗಳು ಇಂದಿಗೂ ಆಮದು ಮಾಡಿಕೊಳ್ಳುತ್ತಿವೆ. ಆದರೆ " ಹಿತ್ತಲ ಗಿಡ ಮದ್ದಲ್ಲ " ಎನ್ನುವಂತೆ, ಭಾರತೀಯರು ಆಸ್ಟ್ರೇಲಿಯಾ ಮತ್ತಿತರ ದೇಶಗಳಿಂದ ಆಮದು ಮಾಡಿದ ದುಬಾರಿ ಬೆಲೆಯ ಸೇಬುಗಳನ್ನು ಖರೀದಿಸಿ ಆಸ್ವಾದಿಸುತ್ತಾರೆ!. ಅಮೆರಿಕ, ಥಾಯ್ಲೆಂಡ್, ಆಸ್ಟ್ರೇಲಿಯಾ ಮುಂತಾದ ದೇಶಗಳಿಂದ ನಾವು ಆಮದು ಮಾಡಿಕೊಳ್ಳುತ್ತಿರುವ ಹಣ್ಣುಹಂಪಲು ಮತ್ತು ತರಕಾರಿಗಳಲ್ಲಿ ವೈವಿಧ್ಯಮಯ ಕೀಟನಾಶಕಗಳು ಇರುತ್ತವೆ. ಇದರರ್ಥ ಭಾರತದಲ್ಲಿ ಬೆಳೆಯುವ ಹಣ್ಣು- ತರಕಾರಿಗಳಲ್ಲಿ ಕೀಟನಾಶಕಗಳೇ ಇಲ್ಲವೆಂದಲ್ಲ. ಆದರೆ ನಮ್ಮ ಮಾತೃಭೂಮಿಯಲ್ಲಿ ಬೆಳೆಯುವ ಇಂತಹ ಉತ್ಪನ್ನಗಳಲ್ಲಿ ನಿಶ್ಚಿತವಾಗಿಯೂ ನಾವಿಂದು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಉತ್ಪನ್ನಗಳಲ್ಲಿ ಇರುವಷ್ಟು ವೈವಿಧ್ಯಮಯ, ಹಾನಿಕಾರಕ ರಾಸಾಯನಿಕ ಕೀಟನಾಶಕಗಳು ಇರುವ ಸಾಧ್ಯತೆಗಳೇ ಇಲ್ಲ. ಏಕೆಂದರೆ ಭಾರತದ ಮಾರುಕಟ್ಟೆಯಲ್ಲಿ ಇಷ್ಟೊಂದು ವಿಧದ ಕೀಟನಾಶಕಗಳೇ ಲಭ್ಯವಿಲ್ಲ!. ಆದರೂ ಈ ಸತ್ಯ ಸಂಗತಿ ಬಹುತೇಕ ಭಾರತೀಯರಿಗೆ ತಿಳಿದಿಲ್ಲ. 

ಇತ್ತೀಚಿನ ಮಾಹಿತಿಯಂತೆ ಅಮೆರಿಕದಲ್ಲಿ ೭೭೫, ಯುರೋಪಿಯನ್ ಯುನಿಯನ್ ನಲ್ಲಿ ೬೦೦ ಹಾಗೂ ಥಾಯ್ಲೆಂಡ್ ನಲ್ಲಿ ೨೮೦ ವಿಧದ ಕೀಟನಾಶಕ ರಾಸಾಯನಿಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಭಾರತದಲ್ಲಿ ಕೇವಲ ೧೭೯ ವಿಧದ ಕೀಟನಾಶಕಗಳು ಮಾತ್ರ ಲಭ್ಯವಿದೆ!.ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿರುವ ಆಹಾರ ಕಲಬೆರಕೆ ಕಾಯಿದೆ (prevention of food adulteration act) ೧೯೫೪ ನಿಯಮಗಳು ಆಮದು ಮಾಡಿರುವ ಖಾದ್ಯವಸ್ತುಗಳಿಗೂ ಅನ್ವಯಿಸುತ್ತದೆ. ಆದರೆ ಇಂದು ವಿದೇಶಗಳಲ್ಲಿ ಬಳಸಲ್ಪಡುತ್ತಿರುವ ವೈವಿಧ್ಯಮಯ ಕೀಟನಾಶಕಗಳನ್ನೂ ಪತ್ತೆ ಹಚ್ಚಲು ಬೇಕಾದ ಅವಶ್ಯಕ ವ್ಯವಸ್ಥೆ ಮತ್ತು ಉಪಕರಣಗಳು ನಮ್ಮ ದೇಶದಲ್ಲಿ ಇಲ್ಲದ ಕಾರಣದಿಂದಾಗಿ, ಈ ನಿಯಮವು ನಿಜಕ್ಕೂ ನಿರುಪಯುಕ್ತವೆನಿಸುತ್ತದೆ. ಇದೇ ಕಾರಣದಿಂದಾಗಿ ಆಮದಿತ ಖಾದ್ಯಗಳನ್ನು ಪರೀಕ್ಷಿಸಲು ನಿಯೋಜಿತ ಸಂಸ್ಥೆಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಿಫಲವಾಗುತ್ತಿವೆ. ಹಾಗೂ ವಿದೇಶೀ ಸಂಸ್ಥೆಗಳು ತಮ್ಮ ಉತ್ಪನ್ನಗಳಲ್ಲಿ ಕೀಟನಾಶಕಗಳೇ ಇಲ್ಲವೆಂದು ನೀಡುವ ಭರವಸೆಯನ್ನು ಅನಿವಾರ್ಯವಾಗಿ ಒಪ್ಪಿಕೊಂಡು, ಇವುಗಳ ಮೇಲೆ "Zero  pesticide " ಎನ್ನುವ ಮುದ್ರೆಯನ್ನು ಒತ್ತಿಬಿಡುತ್ತವೆ!. 

ವಿಶ್ವ ವ್ಯಾಪಾರ ಸಂಸ್ಥೆಯು ೨೦೦೧ ರಲ್ಲಿ ಸಡಿಲಿಸಿದ ನಿಯಮಗಳಿಂದಾಗಿ ಅಮೆರಿಕ, ಆಸ್ಟ್ರೇಲಿಯ,ಥಾಯ್ಲೆಂಡ್, ನ್ಯೂಜಿಲೆಂಡ್ ಮುಂತಾದ ದೇಶಗಳು ಭಾರತದ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಿರುವ ವಿವಿಧ ಹಣ್ಣು ಹಂಪಲು- ತರಕಾರಿಗಳ ಪ್ರಮಾಣವು ವರ್ಷಂಪ್ರತಿ ಹೆಚ್ಚುತ್ತಲೇ ಇದೆ. ಇದರಿಂದಾಗಿ ಇವುಗಲ್ಲಿರುವ ಕೀಟನಾಶಕಗಳಲ್ಲದೇ, ಭಾರದಲ್ಲಿ ಕಾಣಸಿಗದಂತಹ " ಕೀಟ ಸಂಕುಲ " ಗಳು ಈ ಉತ್ಪನ್ನಗಳಲ್ಲಿ ಪತ್ತೆಯಾಗಿವೆ!. ಸೆಂಟರ್ ಫಾರ್ ಇಂಟರ್ ನ್ಯಾಷನಲ್ ಟ್ರೇಡ್ ಇನ್ ಅಗ್ರಿಕಲ್ಚರ್ ಎಂಡ್ ಆಗ್ರೋ ಬೇಸ್ಡ್ ಇಂಡಸ್ಟ್ರೀಸ್ ಎನ್ನುವ ಸಂಸ್ಥೆಯು ನಡೆಸಿದ್ದ ಅಧ್ಯಯನದಿಂದಾಗಿ, ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿರುವ ಸೇಬುಹಣ್ಣುಗಳಲ್ಲಿ ೮೭ ವಿಧದ ಕೀಟಗಳು ಪತ್ತೆಯಾಗಿದ್ದವು!. ಕೇವಲ ಒಂದು ಉತ್ಪನ್ನದಲ್ಲಿ ಇಷ್ಟೊಂದು ವಿಧದ ಕೀಟಗಳು ಇರುವುದಾದಲ್ಲಿ, ನಾವಿಂದು ಆಮದು ಮಾಡಿಕೊಳ್ಳುತ್ತಿರುವ ಹಲವಾರು ವಿಧದ ಹಣ್ಣು ಹಂಪಲು- ತರಕಾರಿಗಳಲ್ಲಿ ಇರಬಹುದಾದ ಕೀಟಗಳ ವೈವಿಧ್ಯಗಳನ್ನು ಊಹಿಸುವುದೂ ಅಸಾಧ್ಯವೆನಿಸುತ್ತದೆ. 

 ಈ ರೀತಿಯಲ್ಲಿ ವೈವಿಧ್ಯಮಯ ಕೀಟ ಸಂಕುಲ - ಕೀಟನಾಶಕಗಳಿಂದ ಸಮೃದ್ಧವಾಗಿರುವ ವಿದೇಶೀ ಉತ್ಪನ್ನಗಳನ್ನು ನಾವಿಂದು ಕಣ್ಣುಮುಚ್ಚಿ ಆಮದು ಮಾಡಿಕೊಳ್ಳು ತ್ತಿದ್ದಲ್ಲಿ, ಇದೇ ಸಂದರ್ಭದಲ್ಲಿ ಭಾರತದಿಂದ ವಿದೇಶಗಳಿಗೆ ರಫ್ತಾಗುತ್ತಿರುವ ಇಂತಹ ಉತ್ಪನ್ನಗಳ ಪ್ರಮಾಣ ಸೊರಗುತ್ತಿದೆ. ವಿಶೇಷವೆಂದರೆ ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಗಳು ಕಳೆದ ವರ್ಷದಲ್ಲಿ ಭಾರತದಿಂದ ರಫ್ತಾಗಿದ್ದ ೨೦೦ ಕ್ಕೂ ಅಧಿಕ ವಿಧದ ಆಹಾರೋತ್ಪನ್ನಗಳನ್ನು ತಿರಸ್ಕರಿಸಲು ಇವುಗಳಲ್ಲಿದ್ದ ಕೀಟ - ಕೀಟನಾಶಕಗಳೇ ಕಾರಣವೆನಿಸಿದ್ದವು!. 

ಈ ದೇಶಗಳು ನಮ್ಮ ಉತ್ಪನ್ನಗಳನ್ನು ತಿರಸ್ಕರಿಸಲು, ಆ ದೇಶಗಳಲ್ಲಿ ಇವುಗಳನ್ನು ಪರೀಕ್ಷಿಸಲು ಇರುವಂತಹ ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಕಟ್ಟುನಿಟ್ಟಿನ ನಿಯಮಗಳೂ ಕಾರಣವೆನಿಸಿವೆ. ತತ್ಪರಿಣಾಮವಾಗಿ ಭಾರತವು ವಿದೇಶಗಳಿಗೆ ರಫ್ತು ಮಾಡುತ್ತಿದ್ದ ಹಣ್ಣು- ತರಕಾರಿಗಳ ಪ್ರಮಾಣವು ೨೦೦೩-೦೪ ರಲ್ಲಿದ್ದ ೧.೨೯ ಮಿಲಿಯನ್ ಟನ್ ಗಳಿಂದ, ೨೦೦೪-೦೫ ರಲ್ಲಿ ೧.೨೪ ಟನ್ ಗಳಿಗೆ ಕುಸಿದಿತ್ತು. ಇದಕ್ಕೆ ಅನುಗುಣವಾಗಿ ಭಾರತವು ಗಳಿಸುತ್ತಿದ್ದ ಆದಾಯವೂ ೧೪೫೭ ಕೋಟಿ ರೂ .ಗಳಿಂದ ೧೨೯೯ ಕೋಟಿ ರೂ. ಗಳಿಗೆ ಇಳಿದಿತ್ತು!.

ಈ ರೀತಿಯಲ್ಲಿ ಹಣ್ಣು ಹಂಪಲುಗಳು ಮತ್ತು ತರಕಾರಿಗಳಲ್ಲಿನ " ಹಾಲಾಹಾಲ" ವು ಭಾರತದ ಪಾಲಿಗೆ ನಿಶ್ಚಿತವಾಗಿಯೂ ಸಾಕಷ್ಟು ಕಷ್ಟನಷ್ಟಗಳಿಗೆ ಮತ್ತು ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸಲಿದೆ. ಇದರೊಂದಿಗೆ ಇವುಗಳನ್ನು ಸೇವಿಸುವ ಜನರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಲಿವೆ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ೧೪-೧೦-೨೦೦೬ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ.


Monday, March 3, 2014

Mobile Towers- Are they dangerous?



  ಮೊಬೈಲ್ ಸಂಪರ್ಕ ಗೋಪುರ: ಆರೋಗ್ಯಕ್ಕೆ ಅಪಾಯಕರ 

ಬಹುತೇಕ ಭಾರತೀಯರ ದೈನಂದಿನ ಜೀವನದ ಅವಿಭಾಜ್ಯ ಅಂಗವೆನಿಸಿರುವ ಮೊಬೈಲ್ ದೂರವಾಣಿಗಳು ಮತ್ತು ಇವುಗಳ ಸಂಪರ್ಕ ಜಾಲದ ಗೋಪುರಗಳು ಮನುಕುಲಕ್ಕೆ ಮಾತ್ರವಲ್ಲ, ಪಕ್ಷಿ ಮತ್ತು ಕೀಟ ಸಂಕುಲಗಳಿಗೂ ಮಾರಕವೆನಿಸುತ್ತಿವೆ. ಆದರೆ ಇವುಗಳ ಸಂಖ್ಯೆ ಮಾತ್ರ ಅನಿಯಂತ್ರಿತವಾಗಿ ವೃದ್ಧಿಸುತ್ತಿದೆ!. 

ಬಡವ ಬಲ್ಲಿದರೆನ್ನುವ ಭೇದವಿಲ್ಲದೆ ಬಹುತೇಕ ಭಾರತೀಯರು ಪ್ರತಿನಿತ್ಯ ಬಳಸುವ ಪುಟ್ಟ ಸೆಲ್ಯುಲರ್ ದೂರವಾಣಿಗಳು ಮತ್ತು ಇವುಗಳ ಸಂಪರ್ಕಜಾಲದ ಪ್ರಮುಖ ಅಂಗವಾಗಿರುವ ಗೋಪುರಗಳು ನಿರಂತರವಾಗಿ ಹೊರಸೂಸುವ ವಿದ್ಯುತ್ ಆಯಸ್ಕಾಂತೀಯ ಅಲೆಗಳ ವಿಕಿರಣವು ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಆದರೆ ಈ ವಿಕಿರಣದ ದುಷ್ಪರಿಣಾಮಗಳು ಸೆಲ್ ಫೋನ್ ಗಳನ್ನು ಬಳಸುವ ವ್ಯಕ್ತಿಗಳಿಗೆ ಮತ್ತು ಮೊಬೈಲ್ ಗೋಪುರಗಳು ಹೊರಸೂಸುವ ವಿಕಿರಣಗಳ ದುಷ್ಪರಿಣಾಮಗಳು ಇವುಗಳ ಸುತ್ತಮುತ್ತಲೂ ವಾಸಿಸುತ್ತಿರುವ ಮನುಷ್ಯರು, ಪಶುಪಕ್ಷಿಗಳು ಮತ್ತು ಕ್ರಿಮಿಕೀಟಗಳ ಪಾಲಿಗೆ ಮಾರಕವೆನಿಸುತ್ತಿವೆ. ಈ ಬಗ್ಗೆ ಈಗಾಗಲೇ ನಡೆಸಿರುವ ಸಂಶೋಧನೆ- ಅಧ್ಯಯನಗಳ ವರದಿಗಳು ಈ ವಿಚಾರವನ್ನು ಸಾಬೀತುಪಡಿಸಿದ್ದರೂ, ಸೆಲ್ ಫೋನ್ ದೂರವಾಣಿ ಸೇವೆಯನ್ನು ನೀಡುತ್ತಿರುವ ಸಂಸ್ಥೆಗಳು ಮಾತ್ರ ಈ ಬಗ್ಗೆ ಚಿಂತಿರಾಗಿಲ್ಲ. ಏಕೆಂದರೆ ಈ ಸಂಸ್ಥೆಗಳಿಂದ ಸಹಸ್ರಾರು ಕೋಟಿ ರೂಪಾಯಿಗಳ ಆದಾಯವನ್ನು ಗಳಿಸುತ್ತಿರುವ ಕೇಂದ್ರ ಸರಕಾರವು, ವೈದ್ಯಕೀಯ ಸಂಶೋಧನೆಗಳ ವರದಿಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪ್ರಾಯಶಃ ತನ್ನ ಪ್ರಜೆಗಳ ಆರೋಗ್ಯಕ್ಕೆ ಸಂಭವಿಸಬಲ್ಲ ಅಪಾಯಕ್ಕಿಂತಲೂ, ತನ್ನ ಖಜಾನೆಗೆ ದೊರೆಯುವ ಆದಾಯವೇ ಮುಖ್ಯ ಎನ್ನುವುದು ಸರಕಾರದ ನಿಲುವಾಗಿರಬಹುದು. 

ಸುಲಭ ದರ- ಅನುಕೂಲಕರ!

ಕಳೆದ ಒಂದೆರಡು ದಶಕಗಳಲ್ಲಿ ಸೆಲ್ಯುಲರ್ ದೂರವಾಣಿಗಳು ಅತ್ಯಂತ ಜನಪ್ರಿಯವೆನಿಸಿದ್ದು, ಇವುಗಳಿಂದ ಮಾಡುವ ಕರೆಗಳು ತುಸು ಅಗ್ಗವಾದಂತೆಯೇ, ಇವುಗಳ ಬೇಡಿಕೆಯೂ ಸ್ವಾಭಾವಿಕವಾಗಿ ಹೆಚ್ಚಾಗಿತ್ತು. ಈ ಬೇಡಿಕೆಯ ಪ್ರಮಾಣಕ್ಕೆ ಅನುಗುಣವಾಗಿ ಇವುಗಳ ಸಂಪರ್ಕ ಜಾಲದ ವಿಸ್ತರಣೆಗಾಗಿ ಗೋಪುರಗಳ ನಿರ್ಮಾಣದ ಪ್ರಮಾಣವೂ ಹೆಚ್ಚಿತ್ತು. ಆದರೆ ಗೋಪುರಗಳ ನಿರ್ಮಾಣದ ಸಂದರ್ಭಗಳಲ್ಲಿ ಯಾವುದೇ ರೀತಿಯ ನೀತಿನಿಯಮಗಳನ್ನು ಪರಿಪಾಲಿಸದ ಸೇವಾ ಸಂಸ್ಥೆಗಳಿಂದಾಗಿ, ಪ್ರತಿಯೊಂದು ಊರಿನ ಪ್ರತಿಯೊಂದು ಕೇರಿಗಳಲ್ಲೂ ನಾಯಿಕೊಡೆಗಳಂತೆ ಸಹಸ್ರಾರು ಗೋಪುರಗಳು ತಲೆಎತ್ತಿದ್ದವು!. 

ಸ್ಥಳೀಯ ಸಂಸ್ಥೆಗಳಿಂದ ಗೋಪುರಗಳ ನಿರ್ಮಾಣಕ್ಕೆ ಅನುಮತಿಯನ್ನೇ ಪಡೆದುಕೊಳ್ಳದ ಸೇವಾ ಸಂಸ್ಥೆಗಳು, ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಿಂಚಿತ್ ಕೂಡಾ ಚಿಂತಿತರಾಗಿರಲಿಲ್ಲ. ಅದೇ ರೀತಿಯಲ್ಲಿ ಈ ಸೇವಾ ಸಂಸ್ಥೆಗಳು ನೀಡುವ ಸಹಸ್ರಾರು ರೂಪಾಯಿಗಳ ಮಾಸಿಕ ಬಾಡಿಗೆಯ ಆಮಿಷಕ್ಕೆ ಒಳಗಾದ ಜನರು, ತಮ್ಮ ವಸತಿ - ವಾಣಿಜ್ಯ ಕಟ್ಟಡಗಳ ಮೇಲೆ ಈ ಗೋಪುರಗಳನ್ನು ಸ್ಥಾಪಿಸಲು ಹಾತೊರೆದಿದ್ದರು. ಪ್ರಾಯಶಃ ಇದೇ ಕಾರಣದಿಂದಾಗಿ ಶಾಲಾಕಾಲೇಜುಗಳು, ಜನವಸತಿ ಪ್ರದೇಶಗಳು ಮತ್ತು ಆಸ್ಪತ್ರೆಗಳ ಆಸುಪಾಸಿನಲ್ಲಿ ಗೋಪುರಗಳನ್ನು ಸ್ಥಾಪಿಸಬಾರದೆನ್ನುವ ನಿಯಮವನ್ನು ನಿರ್ದಾಕ್ಷಿಣ್ಯವಾಗಿ ಉಲ್ಲಂಘಿಸಲಾಗಿತ್ತು. ಅಂತೆಯೇ ಎರಡು ಮೊಬೈಲ್ ಗೋಪುರಗಳ ನಡುವೆ ಕನಿಷ್ಠ ಮೂರು ಕಿ. ಮೀ ಅಂತರವಿರಬೇಕು ಎನ್ನುವ ನಿಯಮವನ್ನು ರಾಜಾರೋಷವಾಗಿ ಉಲ್ಲಂಘಿಸಲಾಗಿತ್ತು!. ಅರ್ಥಾತ್, ತಮ್ಮ ಮತ್ತು ತಮ್ಮ  ಸುತ್ತಮುತ್ತಲ ನಿವಾಸಿಗಳ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಎನಿಸುವ ಗೋಪುರಗಳನ್ನು ಸ್ಥಾಪಿಸಲು ಸಮ್ಮತಿಸಿದ ಜನರಿಗೂ, ತಮ್ಮೆಲರ ಆರೋಗ್ಯಕ್ಕಿಂತಲೂ ತಮಗೆ ಅನಾಯಾಸವಾಗಿ ದೊರೆಯಲಿರುವ ಸಹಸ್ರಾರು ರೂಪಾಯಿಗಳ ಮಾಸಿಕ ಬಾಡಿಗೆಯೇ ಆಕರ್ಷಕವಾಗಿ ಕಂಡಿತ್ತು. 

ಪ್ರಸ್ತುತ ಕೇಂದ್ರ ಸರಕಾರದ ದೂರಸಂಪರ್ಕ ಇಲಾಖೆಯು ಇಂಟರ್ ನ್ಯಾಶನಲ್ ಕಮಿಷನ್ ಆಫ್ ನಾನ್ ಅಯಾನೈಸಿಂಗ್ ರೇಡಿಯೇಶನ್ ಪ್ರೊಟೆಕ್ಷನ್ ಸಂಸ್ಥೆಯು ರೂಪಿಸಿರುವ ನಿಯಮಗಳನ್ನು ಅನುಸರಿಸುತ್ತಿದೆ. ಆದರೆ ಸೆಲ್ಯುಲರ್ ಸೇವಾ ಸಂಸ್ಥೆಗಳು ಮಾತ್ರ ತಮ್ಮ ಗೋಪುರಗಳು ಹೊರಸೂಸುವ ಸಂಕೇತಗಳ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಈ ನಿಯಮಗಳನ್ನು ಉಲ್ಲಂಘಿಸುತ್ತಿವೆ. 

ಸೆಲ್ಯುಲರ್ ಗೋಪುರಗಳಿಗೆ ರಷ್ಯಾ ದೇಶದಲ್ಲಿ ನಿಗದಿಸಿರುವ ಸುರಕ್ಷಿತ ವಿಕಿರಣದ ಮಿತಿಯು ಚದರ ಕಿ.ಮೀ. ಗೆ ೦.೦೨ ವ್ಯಾಟ್ ಮತ್ತು ಜರ್ಮನಿಯಲ್ಲಿ ೦.೦೦೧ ವ್ಯಾಟ್ ಗಳಾಗಿವೆ. ಆದರೆ ಭಾರತದಲ್ಲಿ ಮಾತ್ರ ಈ ಮಿತಿಯು ಚದರ ಕಿ.ಮೀ. ಗೆ ೪.೫ ವ್ಯಾಟ್ ಗಳಾಗಿದ್ದು, ಇದು ಜೀವಂತ ಮನುಷ್ಯನೊಬ್ಬನನ್ನು ಸುಮಾರು ೧೯ ನಿಮಿಷಗಳ ಕಾಲ "ಮೈಕ್ರೋವೇವ್ ಓವೆನ್" ನಲ್ಲಿ ಇರಿಸಿದಷ್ಟೇ ದುಷ್ಪರಿಣಾಮವನ್ನು ಬೀರುತ್ತದೆ!. 

ಆರೋಗ್ಯದ ಸಮಸ್ಯೆಗಳು 

ಮೊಬೈಲ್ ದೂರವಾಣಿ ಸಂಪರ್ಕ ಗೋಪುರಗಳು ಮತ್ತು ಪುಟ್ಟ ಸೆಲ್ಯುಲರ್ ದೂರವಾಣಿಗಳು ಹೊರಸೂಸುವ ವಿದ್ಯುತ್ ಆಯಸ್ಕಾಂತೀಯ ಅಲೆಗಳ ವಿಕಿರಣದ ಪರಿಣಾಮವು ಮನುಷ್ಯನ ಮೆದುಳು, ನರಮಂಡಲ, ಹೃದಯ,ಶ್ವಾಸಕೋಶಗಳು,ಕಿವಿ ಮತ್ತು ಕಣ್ಣುಗಳಿಗೆ ಸಂಬಂಧಿಸಿದ ಗಂಭೀರವಾದ ಆರೋಗ್ಯದ ಸಮಸ್ಯೆಗಳೊಂದಿಗೆ, ಕೆಲವಿಧದ ಮಾರಕ ಕ್ಯಾನ್ಸರ್ ವ್ಯಾಧಿಗಳಿಗೂ ಕಾರಣವೆನಿಸಬಲ್ಲದೆಂದು ಜರ್ಮನಿಯಲ್ಲಿ ಸುಮಾರು ಹತ್ತಾರು ವರ್ಷಗಳ ಹಿಂದೆ ನಡೆಸಿದ್ದ ಅಧ್ಯಯನದಿಂದ ತಿಳಿದುಬಂದಿದೆ. ಸುಮಾರು ೧೦೦೦ ಕ್ಕೂ ಅಧಿಕ ಕ್ಯಾನ್ಸರ್ ಪೀಡಿತ ರೋಗಿಗಳ ದಾಖಲೆಗಳನ್ನು ಅಧ್ಯಯನ ಮಾಡಿದ್ದ ಸಂಶೋಧಕರ ಅಭಿಪ್ರಾಯದಂತೆ, ಮೊಬೈಲ್ ಗೋಪುರಗ ೪೦೦ ಮೀಟರ್ ಸುತ್ತಳತೆಯಲ್ಲಿ ವಾಸಿಸುವ ವ್ಯಕ್ತಿಗಳಲ್ಲಿ ಹಲವಾರು ವಿಧದ ಕ್ಯಾನ್ಸರ್ ಗಳು ಉದ್ಭವಿಸುವ ಸಾಧ್ಯತೆಗಳು ೧೦೦ ಪಟ್ಟು ಹೆಚ್ಚುತ್ತವೆ!. 

ಮೊಬೈಲ್ ಗೋಪುರಗಳ ಸುತ್ತಮುತ್ತಲೂ ಹರಡುವ ವಿಕಿರಣಗಳ ಪ್ರಮಾಣವು ಪ್ರತಿ ಚದರ ಮೀಟರ್ ಗೆ ೭೨೬೦ ಮೈಕ್ರೋವ್ಯಾಟ್ಸ್ ಆಗಿರುತ್ತದೆ. ಇದರಿಂದಾಗಿ ಉದ್ಭವಿಸುವ ಕ್ಯಾನ್ಸರ್ ಗಳಲ್ಲಿ ಸ್ತನಗಳ ಕ್ಯಾನ್ಸರ್ ಅಗ್ರಸ್ಥಾನದಲ್ಲಿದೆ. ತದನಂತರದ ಸ್ಥಾನಗಳು ಅನುಕ್ರಮವಾಗಿ ಶುಕ್ಲ ಗ್ರಂಥಿ, ಮೇದೋಜೀರಕ ಗ್ರಂಥಿ, ಕರುಳು, ಚರ್ಮ, ಶ್ವಾಸಕೋಶಗಳು ಮತ್ತು ರಕ್ತದ ಕ್ಯಾನ್ಸರ್ ಗಳಿಗೆ ಸಲ್ಲುತ್ತದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಆರೋಗ್ಯ ಸಂಸ್ಥೆಯು ಜಗತ್ತಿನ ಪ್ರತಿಯೊಂದು ರಾಷ್ಟ್ರಗಳಿಗೂ ಮೊಬೈಲ್ ದೂರವಾಣಿಗಳು ಮತ್ತು ಗೋಪುರಗಳ ವಿಕಿರಣದ ಹಾನಿಕಾರಕ ಪರಿಣಾಮಗಳ ಬಗ್ಗೆ ಈಗಾಗಲೇ ಎಚ್ಚರಿಕೆಯನ್ನು ನೀಡಿದೆ. 

ವಿಶೇಷವೆಂದರೆ ಸೆಲ್ಯುಲರ್ ಸೇವಾ ಸಂಸ್ಥೆಗಳು ಮಾತ್ರ ಇಂತಹ ವರದಿಗಳನ್ನು ಒಪ್ಪುವುದೇ ಇಲ್ಲ. ಪ್ರಸ್ತುತ ಭಾರತದಲ್ಲಿ ಮೂರು ಲಕ್ಷಕ್ಕೂ ಅಧಿಕ  (ಈ ಲೇಖನವನ್ನು ಬರೆದಿದ್ದ ಸಂದರ್ಭದಲ್ಲಿ) ಗೋಪುರಗಳು ನಿರ್ಮಾಣಗೊಂಡಿದ್ದು, ಪ್ರತಿ ತಿಂಗಳಿನಲ್ಲೂ ಹೊಸದಾಗಿ ಒಂದೆರೆಡು ಸಾವಿರ ಗೋಪುರಗಳು ತಲೆ ಎತ್ತುತ್ತಿವೆ!. 

ಇತ್ತೀಚಿಗೆ ಸರಕಾರವು ಮೊಬೈಲ್ ಗೋಪುರಗಳ ವಿಕಿರಣದ ಹಾನಿಕಾರಕ ಪರಿಣಾಮಗಳನ್ನು ಅಧ್ಯಯನ ಮಾಡಲು ೧೦ ಸದಸ್ಯರಿರುವ ತಜ್ಞರ ಸಮಿತಿಯನ್ನು ನೇಮಿಸಿದೆ. ಈ ಸಮಿತಿಯು ೬ ತಿಂಗಳುಗಳಲ್ಲಿ ತನ್ನ ವರದಿಯನ್ನು ಸಲ್ಲಿಸಬೇಕಾಗಿದೆ. ಈ ಸಮಿತಿಯು ಮೊಬೈಲ್ ಗೋಪುರಗಳು ವಿಕಿರಣವು ಮನುಷ್ಯನ ಆರೋಗ್ಯಕ್ಕೆ ನಿಶ್ಚಿತವಾಗಿಯೂ ಹಾನಿಕಾರಕ ಎನ್ನುವ ವರದಿಯನ್ನು ನೀಡಿದರೂ, ಸರಕಾರವು ಇಂತಹ ಗೋಪುರಗಳ ನಿರ್ಮಾಣವನ್ನು ನಿಷೇಧಿಸುವ ಸಾಧ್ಯತೆಗಳೇ ಇಲ್ಲ. ಏಕೆಂದರೆ ಮೊಬೈಲ್ ದೂರವಾಣಿಗಳ ಅತಿಬಳಕೆ ಅಪಾಯಕಾರಿ ಎನ್ನುವ ಅರಿವಿದ್ದರೂ, ಇವುಗಳನ್ನು ಖರೀದಿಸಿ ಬಳಸುವ ಗ್ರಾಹಕರ ಸಂಖ್ಯೆಯು ದಿನೇದಿನೇ ಹೆಚ್ಚುತ್ತಿರುವುದರಿಂದಾಗಿ, ಇದಕ್ಕೆ ಅನುಗುಣವಾಗಿ ಮೊಬೈಲ್ ಗೋಪುರಗಳ ಸಂಖ್ಯೆಯೂ ಸ್ವಾಭಾವಿಕವಾಗಿಯೇ ಇನ್ನಷ್ಟು ಹೆಚ್ಚಲಿದೆ!. 

ಡಾ. ಸಿ . ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯಲ್ಲಿ ಸುಮಾರು ಏಳೆಂಟು ವರ್ಷಗಳ ಹಿಂದೆ ಪ್ರಕಟಿತ ಲೇಖನ.