Thursday, June 5, 2014

SVACHA PUTTOORU JAAGRATI ABHIYAANA




 ಸ್ವಚ್ಚ ಪುತ್ತೂರು ಜಾಗೃತಿ ಅಭಿಯಾನ 

ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯಲ್ಲಿ ಸಹಕರಿಸಿ 

ಕಳೆದ ಒಂದೆರಡು ದಶಕಗಳಲ್ಲಿ ಪುತ್ತೂರಿನ ಜನಸಂಖ್ಯೆ ಸಾಕಷ್ಟು ಹೆಚ್ಚಿದೆ. ಜನಸಂಖ್ಯೆಯ ಆಧಾರದಲ್ಲಿ ಪುತ್ತೂರು ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೆ ಏರದೇ ಇದ್ದರೂ, ತ್ಯಾಜ್ಯಗಳ ಉತ್ಪಾದನೆಯಲ್ಲಿ ಮತ್ತು ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯುವ ವಿಚಾರದಲ್ಲಿ ಪುತ್ತೂರು ನಿಸ್ಸಂದೇಹವಾಗಿಯೂ ಮೇಲ್ದರ್ಜೆಗೆ ಏರಿದೆ!. 

ಕೇವಲ ಒಂದೆರಡು ದಶಕಗಳ ಹಿಂದೆ ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಉತ್ಪನ್ನವಾಗುತ್ತಿದ್ದ ತ್ಯಾಜ್ಯಗಳನ್ನು ನಗರದ ವಿವಿಧಭಾಗಗಳಲ್ಲಿ ಇರಿಸಲಾಗಿದ್ದ ಕಸದ ತೊಟ್ಟಿಗಳಲ್ಲಿ ಹಾಕಲಾಗುತ್ತಿತ್ತು. ಪೌರಕಾರ್ಮಿಕರು ದಿನನಿತ್ಯ ಇವುಗಳನ್ನು ಸಂಗ್ರಹಿಸಿ, ನೆಕ್ಕಿಲದಲ್ಲಿರುವ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಸುರಿದು ಬರುತ್ತಿದ್ದರು. ತದನಂತರ ಗತದಶಕದಲ್ಲಿ ಅನುಷ್ಠಾನಗೊಂಡಿದ್ದ ೫೬.೯೮ ಕೋಟಿ ರೂ. ವೆಚ್ಚದ ಕುಡ್ಸೆಂಪ್ ಯೋಜನೆಗಳಲ್ಲಿ ನೆಕ್ಕಿಲದಲ್ಲಿ ಸುಸಜ್ಜಿತ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲಾಗಿತ್ತು. ಇದರೊಂದಿಗೆ ನಗರದ ಆಯ್ದ ಭಾಗಗಳಲ್ಲಿ ಆಧುನಿಕ ಕಸದ ತೊಟ್ಟಿಗಳನ್ನು ಇರಿಸಿ, ಇವುಗಳಲ್ಲಿ ಸಂಗ್ರಹಿತವಾಗಿದ್ದ ತ್ಯಾಜ್ಯಗಳನ್ನು ಇದಕ್ಕಾಗಿಯೇ ಒದಗಿಸಿದ್ದ ವಾಹನಗಳಲ್ಲಿ ಸಾಗಿಸಿ ನೆಕ್ಕಿಲದ ನೂತನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ತಕ್ಕ ಮಟ್ಟಿಗೆ ವ್ಯವಸ್ಥಿತವಾಗಿ ನಡೆಯುತ್ತಿದ್ದ ಈ ಕಾರ್ಯಕ್ರಮವು, ಕೆಲವೇ ವರ್ಷಗಳಲ್ಲಿ ಹಳಿತಪ್ಪಿತ್ತು. ಆದರೆ ಇದಕ್ಕೊಂದು ನಿರ್ದಿಷ್ಟ ಕಾರಣವೂ ಇದ್ದಿತು. 

ಸರ್ವೋಚ್ಛ ನ್ಯಾಯಾಲಯದ ಆದೇಶ 

ದೇಶಾದ್ಯಂತ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆಯನ್ನು ವೈಜ್ಞಾನಿಕ ವಿಧಾನಗಳಿಂದ ನಡೆಸುವಂತೆ ಮತ್ತು ಬೀದಿಬದಿಗಳಲ್ಲಿ ಇರಿಸಿರುವ ಕಸದ ತೊಟ್ಟಿಗಳು ತುಂಬಿ ತುಳುಕುವ ಕಾರಣದಿಂದಾಗಿ, ಇವೆಲ್ಲಾ ಕಸದ ತೊಟ್ಟಿಗಳನ್ನು ತೆಗೆದು ತ್ಯಾಜ್ಯಗಳು ಉತ್ಪನ್ನವಾಗುವ ಸ್ಥಳಗಳಿಂದಲೇ ಸಂಗ್ರಹಿಸುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ದೇಶದ ಸರ್ವೋಚ್ಚ ನ್ಯಾಯಾಲಯ ಆದೇಶಿಸಿತ್ತು. ಆದರೆ ಈ ಆದೇಶವನ್ನು ಕಾರ್ಯರೂಪಕ್ಕೆ ತರುವುದು ಹೇಳಿದಷ್ಟು ಸುಲಭವಾಗಿರಲಿಲ್ಲ. ತ್ಯಾಜ್ಯ ಸಂಗ್ರಹ ಮತ್ತು ಸಾಗಾಟಕ್ಕೆ ಬೇಕಾಗುವ ಕಾರ್ಯಕರ್ತರು ಮತ್ತು ವಾಹನಗಳ ವ್ಯವಸ್ಥೆಯನ್ನು ಒದಗಿಸಲು ಆರ್ಥಿಕ ಮತ್ತು ಇತರ ಅಡಚಣೆಗಳಿದ್ದ ಸ್ಥಳೀಯ ಸಂಸ್ಥೆಗಳು, ನೂತನ ವ್ಯವಸ್ಥೆಯನ್ನು ಜಾರಿಗೊಳಿಸಲು ದಯನೀಯವಾಗಿ ವಿಫಲಗೊಂಡಿದ್ದವು. ಇದಿಷ್ಟು ಸಾಲದೆನ್ನುವಂತೆ ತ್ಯಾಜ್ಯ ಸಂಗ್ರಹಕ್ಕಾಗಿ ನಿಗದಿತ ಶುಲ್ಕವನ್ನು ಪಾವತಿಸಲು ನಿರಾಕರಿಸಿದ ಸ್ಥಳೀಯ ಜನರಿಂದಾಗಿ, ಸಮಗ್ರ ವ್ಯವಸ್ಥೆಯೇ ಕುಸಿದ ಪರಿಣಾಮವಾಗಿ ಬಹುತೇಕ ನಗರ- ಪಟ್ಟಣಗಳ ಬೀದಿಬೀದಿಗಳಲ್ಲಿ ಮತ್ತು ಚರಂಡಿಗಳಲ್ಲಿ ತ್ಯಾಜ್ಯಗಳು ರಾಶಿ ಬಿದ್ದು ಸುತ್ತ ಮುತ್ತಲ ಪರಿಸರವೇ ಅನಾರೋಗ್ಯಕರವಾಗಿ ಪರಿವರ್ತನೆಗೊಂಡಿತ್ತು. ಕಳೆದ ಹಲವಾರು ವರ್ಷಗಳಿಂದ ಈ ಸಮಸ್ಯೆಯನ್ನು ಸಮರ್ಪಕವಾಗಿ ಬಗೆಹರಿಸಲು ಸ್ಥಳೀಯ ಸಂಸ್ಥೆಗಳು ನಡೆಸಿದ್ದ ಪ್ರಯತ್ನಗಳು ಅಪೇಕ್ಷಿತ ಪರಿಣಾಮವನ್ನು ನೀಡಲು ವಿಫಲವಾಗಿದ್ದವು. ತತ್ಪರಿಣಾಮವಾಗಿ ಸರ್ವೋಚ್ಚ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದ ಸ್ಥಳೀಯ ಸಂಸ್ಥೆಗಳು, ಇದೀಗ ತಮ್ಮ ವ್ಯಾಪ್ತಿಯಲ್ಲಿ ಉತ್ಪನ್ನವಾಗುತ್ತಿರುವ ತ್ಯಾಜ್ಯಗಳನ್ನು ಸಂಗ್ರಹಿಸಿ, ಇವುಗಳನ್ನು ಪ್ರತ್ಯೇಕಿಸಿದ ಬಳಿಕ ನಿರುಪಯುಕ್ತ ತ್ಯಾಜ್ಯಗಳನ್ನು ಮಾತ್ರ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡಲು ಹರಸಾಹಸವನ್ನೇ ನಡೆಸುತ್ತಿವೆ. ಈ ವಿಚಾರದಲ್ಲಿ ಪುತ್ತೂರು ಪುರಸಭೆಯೂ ಅಪವಾದವೆನಿಸಿಲ್ಲ. 

ಜಾಗೃತಿ ಅಭಿಯಾನ 

ಪುತ್ತೂರು ಪುರಸಭೆಯ ವತಿಯಿಂದ ವಿಶ್ವ ಪರಿಸರ ದಿನದಂದು "ಸ್ವಚ್ಛ ಪುತ್ತೂರು ಜಾಗೃತಿ ಅಭಿಯಾನ" ಉದ್ಘಾಟನೆಗೊಂಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ವಸತಿ- ವಾಣಿಜ್ಯ ಕೇಂದ್ರಗಳಿಂದ ತ್ಯಾಜ್ಯಗಳನ್ನು ಸಂಗ್ರಹಿಸಲು ಏಳು ವಾಹನಗಳೊಂದಿಗೆ, ಸುಮಾರು ೨೫ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ಅಭಿಯಾನದಲ್ಲಿ ಸ್ಥಳೀಯ ಜನರು ಮನಸ್ಪೂರ್ವಕ ಸಹಕಾರವನ್ನು ನೀಡಿದಲ್ಲಿ, ಸ್ವಚ್ಚ ಪುತ್ತೂರು ಜಾಗೃತಿ ಅಭಿಯಾನವು ಯಶಸ್ವಿಯಾಗಲಿದೆ. ಇದರೊಂದಿಗೆ ಕಂಡಲ್ಲಿ ಕಸವನ್ನು ಎಸೆಯುವ ಕೆಟ್ಟ ಪ್ರವೃತ್ತಿಯನ್ನು ತ್ಯಜಿಸಿದಲ್ಲಿ ಪುತ್ತೂರು ನಗರವು " ನಿರ್ಮಲ ನಗರ" ವಾಗಿ ಪರಿವರ್ತನೆಗೊಳ್ಳುವುದರಲ್ಲಿ ಸಂದೇಹವಿಲ್ಲ. 

ಕೊನೆಯ ಮಾತು 

ಜಾಗತಿಕ ಮಟ್ಟದಲ್ಲಿ ವರ್ಷದಲ್ಲಿ ಅನೇಕ "ದಿನ" ಗಳನ್ನು ಆಚರಿಸಲಾಗುತ್ತಿದ್ದು, ಬಹುತೇಕ ದಿನಗಳು ಸರಕಾರೀ ಪ್ರಾಯೋಜಿತ ಕಾರ್ಯಕ್ರಮಗಳೇ ಆಗಿರುತ್ತವೆ. ಉದಾಹರಣೆಗೆ ವಿಶ್ವ ಪರಿಸರ ದಿನಾಚರಣೆಯಂದು ಪುತ್ತೂರಿನಲ್ಲೂ ಪೂರ್ವ ನಿಗದಿತ ಕಾರ್ಯಕ್ರಮಗಳು ಜರಗಿವೆ. ಇವುಗಳಲ್ಲಿ ಪರಿಸರ ಸಂರಕ್ಷಣೆಯ ಸಲುವಾಗಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನೂ ನಡೆಸಲಾಗಿತ್ತು. ಆದರೆ ಈ ಸಂದರ್ಭದಲ್ಲಿ ನೆಟ್ಟಿರುವ ಗಿಡಗಳನ್ನು ನೀರೆರೆದು ಸಂರಕ್ಷಿಸದೇ ಇದ್ದಲ್ಲಿ, ನಮ್ಮ ಸುತ್ತಮುತ್ತಲ ಪರಿಸರದಂತೆಯೇ ಈ ಗಿಡಗಳೂ ನಿರ್ಲಕ್ಷ್ಯಕ್ಕೆ ಒಳಗಾಗಿ ನಾಶವಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಸಂಬಂಧಿತರು ಗಮನ ಹರಿಸಿ, ಈ ಗಿಡಗಳನ್ನು ಮತ್ತು ನಮ್ಮ ಸುತ್ತಮುತ್ತಲ ಪರಿಸರವನ್ನು ಸಂರಕ್ಷಿಸಬೇಕಾದ ಅವಶ್ಯಕತೆಯಿದೆ.  


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

Wednesday, June 4, 2014

THE UGLY INDIAN






 " ಕುರೂಪಿ ಭಾರತೀಯ": ಕಾರ್ಯಕರ್ತರ ಸೇವೆ ಅನುಕರಣೀಯ 

ಭಾರತದ ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ನಗರ- ಪಟ್ಟಣಗಳ ಬಹುತೇಕ ರಸ್ತೆಗಳು ಹಾಗೂ ರಾಜ್ಯ ಹೆದ್ದಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳ ಬದಿಗಳಲ್ಲಿ ಅಗಾಧ ಪ್ರಮಾಣದ ವೈವಿಧ್ಯಮಯ ತ್ಯಾಜ್ಯಗಳ ರಾಶಿಗಳು ಸದಾ  ಕಾಣಸಿಗುತ್ತವೆ. ಈ ಸಮಸ್ಯೆಯು ಅನಿಯಂತ್ರಿತವಾಗಿ ವೃದ್ಧಿಸುತ್ತಲೇ ಇದ್ದು, ಇದನ್ನು ಪರಿಹರಿಸುವುದು ಬಿಡಿ, ನಿಯಂತ್ರಿಸಲೂ ಆಗದಂತಹ ಪರಿಸ್ಥಿತಿ ಉದ್ಭವಿಸಿದೆ. ಈ ಬಗ್ಗೆ ತತ್ಸಂಬಂಧಿತ ಅಧಿಕಾರಿಗಳು ಮತ್ತು ಸಿಬಂದಿಗಳನ್ನು ದೂರುವ ನಾಗರಿಕರು, ತಾವು ಅತಿಯಾಗಿ ಉತ್ಪಾದಿಸಿ ಕಂಡಲ್ಲಿ ಎಸೆಯುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆಮಾಡುವ ಅಥವಾ ಸ್ಥಳೀಯ ಸಂಸ್ಥೆಗಳ ಸಿಬಂದಿಗಳೊಂದಿಗೆ ಸಹಕರಿಸುವ ವಿಚಾರವನ್ನು ಅನುಕೂಲಕರವಾಗಿ ಮರೆತುಬಿಡುತ್ತಾರೆ!. 

ನಮ್ಮದೇ ರಾಜ್ಯದ ಅನೇಕ ನಗರ- ಪಟ್ಟಣಗಳ ಪ್ರಧಾನ ರಸ್ತೆಯೂ ಸೇರಿದಂತೆ ಅಧಿಕತಮ ರಸ್ತೆಗಳ ಬದಿಗಳಲ್ಲಿ ಎಸೆದ ತ್ಯಾಜ್ಯಗಳು ಕೊಳೆತು ನಾರುತ್ತಿದ್ದರೂ, ಇನ್ನಷ್ಟು ತ್ಯಾಜ್ಯಗಳನ್ನು ಅದೇ ರಾಶಿಯ ಮೇಲೆ ತಂದು ಸುರಿಯುವ ಜನರು, ತಾವು ಮಾಡುತ್ತಿರುವ ತಪ್ಪನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತಾರೆ. ಜೊತೆಗೆ ಪೌರ ಕಾರ್ಮಿಕರು ಮತ್ತು ಸ್ಥಳೀಯ ಸಂಸ್ಥೆಯ ಅಧಿಕಾರಿಗಳನ್ನು ದೂಷಿಸುತ್ತಾರೆ. ಆದರೆ ಈ ರೀತಿಯಲ್ಲಿ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದು ಕಾನೂನುಬಾಹಿರ ಮತ್ತು ಅನಾರೋಗ್ಯಕರ ಎನ್ನುವುದನ್ನು ಮರೆತುಬಿಡುತ್ತಾರೆ!. 

ದ ಅಗ್ಲಿ ಇಂಡಿಯನ್ 

ದೇಶದ ಮೂಲೆಮೂಲೆಗಳಲ್ಲಿ ಕಂಡುಬರುತ್ತಿರುವ ಈ ಸಮಸ್ಯೆಯನ್ನು ಸದ್ದು ಗದ್ದಲವಿಲ್ಲದೇ ಪರಿಹರಿಸುವ ಪ್ರಾಮಾಣಿಕ ಪ್ರಯತ್ನವೊಂದು ಇದೀಗ ನಮ್ಮ ದೇಶದ ಅನೇಕ ರಾಜ್ಯಗಳಲ್ಲಿ ನಡೆಯುತ್ತಿದೆ. ವಿಶೇಷವೆಂದರೆ ಇದನ್ನು ಪರಿಹರಿಸಲು ಪ್ರಯತ್ನಿಸುತ್ತಿರುವ " ದ ಅಗ್ಲಿ ಇಂಡಿಯನ್ " ಎನ್ನುವ ಸ್ವಯಂ ಸೇವಾ ಸಂಘಟನೆಯ ಅನಾಮಧೇಯ ಸದಸ್ಯರು, ಈಗಾಗಲೇ ತಮ್ಮ ಕೈಚಳಕವನ್ನು ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ತೋರಿದ್ದಾರೆ. ದಾರಿಹೋಕರು ಮೂಗು ಮುಚ್ಚಿಕೊಂಡು ಓಡಾಡುವಂತಹ ಸ್ಥಳಗಳಲ್ಲಿ ರಾಶಿಬಿದ್ದಿರುವ ತ್ಯಾಜಗಳನ್ನು ತೆಗೆದು, ಈ ಪ್ರದೇಶವನ್ನು ಸ್ವಚ್ಚಗೊಳಿಸಿದ ಬಳಿಕ ಅವಶ್ಯಕತೆಯಿದ್ದಲ್ಲಿ ಕಾಲುದಾರಿಗಳನ್ನು ದುರಸ್ಥಿಪಡಿಸುವುದರೊಂದಿಗೆ ಅಕ್ಕಪಕ್ಕದಲ್ಲಿರಬಹುದಾದ ಗೋಡೆಗಳಿಗೆಮತ್ತು ಕಾಲುದಾರಿಯ ಅಂಚಿಗೆ ಸುಣ್ಣ ಬಣ್ಣಗಳನ್ನು ಬಳಿದು ಆಕರ್ಷಕವಾಗಿ ಕಾಣುವಂತೆ ಪರಿವರ್ತಿಸುತ್ತಾರೆ.ಸ್ಥಳಾವಕಾಶವಿದ್ದಲ್ಲಿ ಜನರು ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳನ್ನೂಅಳವಡಿಸುತ್ತಾರೆ. "ಸ್ಪಾಟ್ ಫಿಕ್ಸಿಂಗ್ " ಎಂದು ಕರೆಯಲ್ಪಡುವ ಈ ವಿಶಿಷ್ಟ ಕಾರ್ಯಾಚರಣೆಯು, ಅತ್ಯಂತ ಅಸಹ್ಯಕರ ಎನಿಸುವಂತಿದ್ದ ಸ್ಥಳಗಳನ್ನು ಅತ್ಯಂತ ನಿರ್ಮಲ ಹಾಗೂ ಆಕರ್ಷಕವಾಗಿ ಪರಿವರ್ತಿಸಲು ಯಶಸ್ವಿಯಾಗಿದೆ. ೨೫ ರಿಂದ ೪೦ ವರ್ಷ ವಯಸ್ಸಿನ ಈ " ಪ್ರಜ್ಞಾವಂತ ನಾಗರಿಕ "  ಸಂಘಟನೆಯ ಸದಸ್ಯರು ಉನ್ನತ ವಿದ್ಯಾಭ್ಯಾಸವನ್ನು ಪಡೆದು ಉತ್ತಮ ಉದ್ಯೋಗಗಳಲ್ಲಿದ್ದರೂ, ಇಂತಹ ಕೆಲಸಗಳಲ್ಲಿ ಭಾಗಿಯಾಗಲು ಹಿಂಜರಿಯುವುದೇ ಇಲ್ಲ!. 

ನಮ್ಮ ರಸ್ತೆಗಳ ಬದಿಗಳಲ್ಲಿ ರಾಶಿಬಿದ್ದಿರುವ ತ್ಯಾಜ್ಯಗಳ ಸಮಸ್ಯೆಯ ಬಗ್ಗೆ ಪ್ರಬಲವಾದ ಭಾವನೆಗಳನ್ನು ಹೊಂದಿರುವ ಈ ಸಂಘಟನೆಯ ಸದಸ್ಯರು " ಸ್ಟಾಪ್ ಟಾಕಿಂಗ್, ಸ್ಟಾರ್ಟ್ ವರ್ಕಿಂಗ್ " ಎನ್ನುವ ಮಾತನ್ನು ಅಕ್ಷರಶಃ ಪರಿಪಾಲಿಸುತ್ತಾರೆ. ಯಾವುದೇ ಸಮಸ್ಯೆಯ ಬಗ್ಗೆ ಯಾರನ್ನೂ ದೂರದೇ, ನೇರವಾಗಿ ಇದನ್ನು ಪರಿಹರಿಸಲು ಸರಳವಾದ ಕಾರ್ಯತಂತ್ರವನ್ನು ಜಾರಿಗೊಳಿಸುವ ಮೂಲಕ ಅಪೇಕ್ಷಿತ ಪರಿವರ್ತನೆಯನ್ನು ಅನುಷ್ಠಾನಿಸುವ ಈ ಸಂಘಟನೆಯ ಕೆಲಸಕಾರ್ಯಗಳು  ಅನುಕರಣೀಯವೂ ಹೌದು. ಇವರ ಅಭಿಪ್ರಾಯದಂತೆ ನಾಗರಿಕ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ಪರಿಹರಿಸಬಲ್ಲ ಮಂತ್ರದಂಡ ನಮಗಿಂದು ಲಭ್ಯವಿಲ್ಲ. ಆದರೆ ನಾವಿಂದು ಎದುರಿಸುತ್ತಿರುವ ಬಹುತೇಕ ನಾಗರಿಕ ಸಮಸ್ಯೆಗಳಲ್ಲಿ, ತ್ಯಾಜ್ಯಗಳ ಸಮಸ್ಯೆ ಪ್ರಮುಖವಾಗಿದ್ದು, ಇದಕ್ಕೆ ಜನರ ವರ್ತನೆ ಮತ್ತು ಧೋರಣೆಗಳೇ ಕಾರಣವೆನಿಸಿವೆ. ಈ ಸಮಸ್ಯೆಯನ್ನು ನಾವಿಂದು ಪರಿಹರಿಸಬಹುದಾಗಿದೆ. ಇದಕ್ಕಾಗಿ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಬದಲಾಯಿಸುವ, ಸಾಕಷ್ಟು ಹಣವನ್ನು ವ್ಯಯಿಸುವ ಮತ್ತು ವ್ಯವಸ್ಥೆಯನ್ನೇ ಬದಲಾಯಿಸುವ ಅವಶ್ಯಕತೆಯಿಲ್ಲ. ಕೇವಲ " ಕುಶಲ ಕಲ್ಪನೆ"( Smart ideas) ಗಳ ಮೂಲಕ ಜನರ ಸಾಂಸ್ಕೃತಿಕ ವರ್ತನೆಗಳು ಮತ್ತು ಧೋರಣೆಗಳನ್ನು ಬದಲಾಯಿಸಬೇಕಾಗುವುದು. ಇದಕ್ಕಾಗಿ ಈ ಕುಶಲ ಕಲ್ಪನೆಗಳನ್ನು ಯಶಸ್ವಿಗೊಳಿಸಲು ಒಂದಿಷ್ಟು ಶ್ರಮಿಸಬೇಕಾಗುತ್ತದೆ. 

ಅಗ್ಲಿ ಇಂಡಿಯನ್ ಸಂಘಟನೆಯು ಭಾಷಣಗಳನ್ನು ಬಿಗಿಯುವ, ಕರಪತ್ರಗಳನ್ನು ಹಂಚುವುದೇ ಮುಂತಾದ ವಿಧಾನಗಳನ್ನು ಅನುಸರಿಸದೇ, ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಬೆಂಬಲಿಸುವ ಮೂಲಕ ಹಾಗೂ ಇದರ ಪರಿಣಾಮವನ್ನು ವೃದ್ಧಿಸುವ ಮೂಲಕ ಒಳಿತನ್ನು ಮಾಡುತ್ತದೆ. ನಮ್ಮ ಸಂಘಟನೆಯ ಸದಸ್ಯರು ಅನಾಮಧೇಯರಾಗಿ ಉಳಿದುಕೊಳ್ಳಲು ಇವರ ಪರಿಚಯ ಅಥವಾ ನಿರ್ದಿಷ್ಟ ವ್ಯಕ್ತಿಯೊಬ್ಬನ ವಿಚಾರ ಮಹತ್ವಪೂರ್ಣವಲ್ಲ. ಏಕೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ಕಣ್ಣಿಗೆ ಕಾಣುವ ಪರಿಣಾಮ ದೊರೆಯಲು ನೂರರು ಜನರ ಬೆಂಬಲದ ಅವಶ್ಯಕತೆಯಿದೆ. ಪ್ರತಿಯೊಂದು ಸಮುದಾಯದಲ್ಲಿ ಒಬ್ಬ "ಕುರೂಪಿ ಭಾರತೀಯ"ನಿದ್ದು, ಈತನು ಮೊದಲ ಹೆಜ್ಜೆಯನ್ನಿರಿಸಬೇಕು. ಆದರೆ ಇದಕ್ಕೆ ಸಮಗ್ರ ಸಮುದಾಯವು ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದಲ್ಲಿ, ಈ ಹೆಜ್ಜೆಯೂ ಅಪೇಕ್ಷಿತ ಪರಿಣಾಮವನ್ನು ನೀಡಲು ಯಶಸ್ವಿಯಾಗದು ಎನ್ನುವುದು  ಸಂಘಟನೆಯ ಅಭಿಪ್ರಾಯವಾಗಿದೆ. 

ಪ್ರಸ್ತುತ ಭಾರತದ ಅನೇಕ ಮಹಾನಗರ ಮತ್ತು ಪ್ರಮುಖ ನಗರಗಳಾಗಿರುವ ಬೆಂಗಳೂರು, ಆಗ್ರಾ, ಕಾನ್ಪುರ, ವಿಶಾಖಪಟ್ಟಣ, ಹೈದರಾಬಾದ್, ಮುಂಬೈ, ಪುಣೆಗಳಲ್ಲಿ ದ ಅಗ್ಲಿ ಇಂಡಿಯನ್ ಸಂಘಟನೆಯು ಕಾರ್ಯಾಚರಿಸುತ್ತಿದ್ದು, ಸದ್ಯೋಭವಿಷ್ಯದಲ್ಲಿ ಚೆನ್ನೈ, ದೆಹಲಿ, ಗೋವಾ ಮತ್ತಿತರ ಪ್ರದೇಶಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಈ ಸಂಘಟನೆಯ ಕಾರ್ಯತಂತ್ರದ ಯಶಸ್ಸನ್ನು ಗಮನಿಸಿರುವ ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೇಶಿಯಾ ಮತ್ತು ಇತರ ಯುರೋಪಿಯನ್ ದೇಶಗಳು ಇವರು ನಡೆಸುವ "ಸ್ಪಾಟ್ ಫಿಕ್ಸಿಂಗ್ " ಬಗ್ಗೆ ಅರಿತುಕೊಳ್ಳಲು ಇವರನ್ನು ಸಂಪರ್ಕಿಸಿದ್ದಾರೆ.

ಈ ಸಂಘಟನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಅರಿತುಕೊಳ್ಳಲು ಅಂತರ್ಜಾಲ ತಾಣದ ಮೂಲಕ ಇದರ ವಿವರಗಳನ್ನು ಅರಿತುಕೊಳ್ಳಬಹುದು. ಅಂತೆಯೇ ಪ್ರತಿಯೊಂದು ಊರಿನಲ್ಲೂ ಇಂತಹ ಸಂಘಟನೆಯನ್ನು ಪ್ರಾರಂಭಿಸಿ, ಇದೇ ರೀತಿಯಲ್ಲಿ ಕಾರ್ಯಾಚರಿಸಿದಲ್ಲಿ  ನಮ್ಮ ದೇಶದ ಪ್ರತಿಯೊಂದು ನಗರ- ಪಟ್ಟಣಗಳು " ನಿರ್ಮಲ ನಗರ" ಗಳಾಗಿ ಪರಿವರ್ತನೆಗೊಳ್ಳುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಚಿತ್ರ- ಬೆಂಗಳೂರಿನ ತ್ಯಾಜ್ಯಭರಿತ ಪ್ರದೇಶವನ್ನು ಸ್ವಚ್ಚ ಹಾಗೂ ಆಕರ್ಷಕವಾಗಿ ಪರಿವರ್ತಿಸಿರುವ ದೃಶ್ಯ.  


Friday, May 30, 2014

E- Governance




  ನಾಗರಿಕರಿಗೆ ವರದಾನವೆನಿಸಲಿರುವ ಇ - ಆಡಳಿತ 

ತಮ್ಮ ಕೆಲಸಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಎಡತಾಕುವ ಜನಸಾಮಾನ್ಯರನ್ನು ಇಲ್ಲಸಲ್ಲದ ನೆಪವನ್ನು ಮುಂದೊಡ್ಡಿ ಸತಾಯಿಸುವ ಸರ್ಕಾರಿ ನೌಕರರ ವರ್ತನೆಗಳಿಗೆ ಸದ್ಯೋಭವಿಷ್ಯದಲ್ಲಿ ಕಡಿವಾಣ ಬೀಳಲಿದೆ. ಏಕೆಂದರೆ ಈ ವರ್ಷಾಂತ್ಯದಲ್ಲಿ ಬಹುತೇಕ ಸರ್ಕಾರಿ ಸೇವೆಗಳನ್ನು ಇ - ಆಡಳಿತದ ಮೂಲಕ ನೀಡುವ ಯೋಜನೆಯೊಂದು ಕಾರ್ಯಗತವಾಗಲಿದೆ. ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಬಂದ ಬಳಿಕ, ಸರ್ಕಾರಿ ನೌಕರರಿಂದ ರಾಜ್ಯದ ಪ್ರಜೆಗಳಿಗೆ ಸಂಭವಿಸುತ್ತಿದ್ದ ಕಿರುಕುಳ ಮತ್ತು ಭ್ರಷ್ಟಾಚಾರದ ಸಮಸ್ಯೆಗಳು ನಿಶ್ಚಿತವಾಗಿಯೂ ಕೊನೆಗೊಳ್ಳಲಿವೆ. 

ರಾಜ್ಯದ ಹಾಗೂ ದೇಶದ ಪ್ರಜೆಗಳಿಗೆ ಸರ್ಕಾರ ಒದಗಿಸುವ ಸೇವೆಗಳನ್ನು ತ್ವರಿತಗತಿಯಲ್ಲಿ ಒದಗಿಸಲು ಮತ್ತು ಆಡಳಿತದಲ್ಲಿ ಪಾರದರ್ಶಕತೆಯನ್ನು ಜಾರಿಗೊಳಿಸಲು ಉಪಯುಕ್ತವೆನಿಸಬಲ್ಲ ಇ - ಆಡಳಿತವನ್ನು ಜಾರಿಗೆ ತರುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದ ಸರ್ಕಾರೇತರ ಸಂಸ್ಥೆಗಳಲ್ಲಿ, ಪುತ್ತೂರಿನ ಬಳಕೆದಾರರ ಹಿತರಕ್ಷಣಾ ವೇದಿಕೆಯೂ ಸಕ್ರಿಯವಾಗಿ ಕಾರ್ಯನಿರ್ವಹಿಸಿತ್ತು. 

ಇ -ಆಡಳಿತ 

ರಾಷ್ಟ್ರೀಯ ಇ - ಆಡಳಿತ ಯೋಜನೆಯ ಅಂಗವಾಗಿ ಕರ್ನಾಟಕ ಇ - ಜಿಲ್ಲಾ ಯೋಜನೆಯನ್ನು ಅನುಷ್ಠಾನಗೊಳಿಸಲು, ೨೮ ಸರ್ಕಾರಿ ಇಲಾಖೆಗಳು ಜನರಿಗೆ ಒದಗಿಸುವ ೩೬೯ ಸೇವೆಗಳನ್ನು ಈಗಾಗಲೇ ಆಯ್ಕೆಮಾಡಲಾಗಿದೆ. ಸಂಬಂಧಿತ ಅಧಿಕಾರಿಗಳು ಹೇಳುವಂತೆ ಇವೆಲ್ಲಾ ಸೇವೆಗಳನ್ನು ಇ - ಆಡಳಿತದ ಮೂಲಕ ಒದಗಿಸುವ ಕಾರ್ಯವು ಇದೇ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಪ್ರಾರಂಭವಾಗಲಿದೆ. ಕೇಂದ್ರ ಸರ್ಕಾರದ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಮಂತ್ರಾಲಯದ ಅಧೀನದಲ್ಲಿರುವ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಒದಗಿಸುವ ಆರ್ಥಿಕ ನೆರವಿನಿಂದ ಅನುಷ್ಠಾನಗೊಳ್ಳಲಿರುವ ಇ - ಜಿಲ್ಲಾ ಯೋಜನೆಯು, ಸರ್ಕಾರದಿಂದ ಪ್ರಜೆಗಳಿಗೆ ವಿದ್ಯುನ್ಮಾನ ಮತ್ತು ಬೃಹತ್ ಪ್ರಮಾಣದ ಸೇವೆಗಳನ್ನು ಜಿಲ್ಲಾ ಮತ್ತು ಕೆಳಮಟ್ಟಗಳಲ್ಲಿ ನೀಡಲಿದೆ. ರಾಜ್ಯ ಇ -ಆಡಳಿತ ಇಲಾಖೆಯ ಅಧೀನದಲ್ಲಿರುವ ನಾಗರಿಕ ಸೇವೆಗಳನ್ನು ವಿದ್ಯುನ್ಮಾನ ವಿಧಾನದಿಂದ ನೀಡುವ ನಿರ್ದೇಶನಾಲಯದ ಮಾಹಿತಿಯಂತೆ, ಈ ಯೋಜನೆಯನ್ನು ಅನುಷ್ಠಾನಿಸಲು  ನಿಯೋಜಿತ ಸಂಸ್ಥೆಯು ಸರ್ಕಾರದ ವಿವಿಧ ಇಲಾಖೆಗಳ ೧೮೫೬ ಸೇವೆಗಳನ್ನು ಗುರುತಿಸಿದ್ದು, ೧೨೭೦ ಸೇವೆಗಳನ್ನು ಸಮ್ಮಿಶ್ರಗೊಳಿಸಲು ನಿರ್ಧರಿಸಿದೆ. ಇವುಗಳಲ್ಲಿ ೨೮ ಇಲಾಖೆಗಳ ೩೬೯ ಸೇವೆಗಳನ್ನು ಆಯ್ಕೆಮಾಡಲಾಗಿದೆ. 

ಇ - ಜಿಲ್ಲಾ ಯೋಜನೆಯ ಬಗ್ಗೆ ವಿಸ್ತ್ರತ ಯೋಜನಾ ವರದಿಯನ್ನು ಈಗಾಗಲೇ ಸರ್ಕಾರವು ಅನುಮೋದಿಸಿದ್ದು, ಇದರ ಅನುಷ್ಠಾನದ ಸಲುವಾಗಿ ಒಡಂಬಡಿಕೆಯೊಂದಕ್ಕೆ ಸಹಿಹಾಕಲಾಗಿದೆ. ಹಾಗೂ ಈ ಯೋಜನೆಯನ್ನು ಎರಡು ಹಂತಗಳಲ್ಲಿ ಅನುಷ್ಠಾನಿಸಲಾಗುತ್ತದೆ. ರಾಜ್ಯ ಸಚಿವ ಸಂಪುಟವು ಇದೇ ವರ್ಷದ ಆದಿಯಲ್ಲಿ ಈ ಯೋಜನೆಗೆ ಹಸಿರು ನಿಶಾನೆಯನ್ನು ತೋರಿದ್ದು, ಇದನ್ನು ಅನುಷ್ಠಾನಗೊಳಿಸಲು ಆದೇಶಿಸಿದೆ. ಪ್ರಸ್ತುತ ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಈ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದು, ಇವುಗಳ ಅನುಮತಿ ಪತ್ರವನ್ನು ನಿರೀಕ್ಷಿಸಲಾಗಿದೆ. ಎಲ್ಲವೂ ಸುಸೂತ್ರವಾಗಿ ಜರಗಿದಲ್ಲಿ ಇದೇ ವರ್ಷದ ಅಂತ್ಯದಲ್ಲಿ ರಾಜ್ಯದ ಪ್ರಜೆಗಳಿಗೆ ಇ - ಸೇವೆಗಳು ಲಭ್ಯವಾಗಲಿವೆ. 

ಉದಾಹರಣೆಗೆ ಮಾಹಿತಿ ಪಡೆಯುವ ಹಕ್ಕು ಕಾಯಿದೆಯನ್ವಯ ಅರ್ಜಿಯನ್ನು ಸಲ್ಲಿಸುದು ಹಾಗೂ ಇದರ ಸ್ಥಿತಿಗತಿಗಳನ್ನು ಗಮನಿಸುವುದು ಇ - ಜಿಲ್ಲಾ ಆಡಳಿತ ಯೋಜನೆಯಲ್ಲಿ ಸುಲಭವೆನಿಸಲಿದೆ. ಅದೇ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಅಯಾಚಿತ ಸಂಕಷ್ಟಗಳಿಗೆ ಕಾರಣವೆನಿಸುತ್ತಿರುವ ಪ್ರೌಢ ಶಿಕ್ಷಣ ಮಂಡಳಿಯ ಒಂಬತ್ತು ಸೇವೆಗಳು ಈ ಯೋಜನೆಯಲ್ಲಿ ಲಭ್ಯವಿದೆ. ಇದರಿಂದಾಗಿ ತಮ್ಮ ಉತ್ತರ ಪತ್ರಿಕೆಗಳ ಛಾಯಾಪ್ರತಿ, ಅಂಕಪಟ್ಟಿಯ ನಕಲು ಪ್ರತಿ, ಪುನರ್ ಮೌಲ್ಯಮಾಪನ ಮತ್ತಿತರ ಸೇವೆಗಳು ಇ - ಸೇವೆಯ ಮೂಲಕ ದೊರೆಯಲಿವೆ. ಇದಲ್ಲದೇ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ, ಹಿಂದುಳಿದ ವರ್ಗ ಮತ್ತು ಪಂಗಡಗಳ ಅಭಿವೃದ್ಧಿ, ಅಲ್ಪಸಂಖ್ಯಾತರ ಮತ್ತು ಸಮಾಜ ಕಲ್ಯಾಣ ಮತ್ತಿತರ ಇಲಾಖೆಗಳ ಹಲವಾರು ಸೇವೆಗಳು ನಿಮ್ಮ ಬೆರಳ ತುದಿಯಲ್ಲಿ ಲಭ್ಯವಾಗಲಿವೆ. 

ದೇಶದ ಇತರ ನಾಲ್ಕು ರಾಜ್ಯಗಳಲ್ಲಿ ಈಗಾಗಲೇ ಅನುಷ್ಠಾನಗೊಂಡಿರುವ ಈ ಯೋಜನೆಯು ನಮ್ಮ ರಾಜ್ಯದಲ್ಲಿ ಅನುಷ್ಠಾನಗೊಂಡ ಬಳಿಕ, ರಾಜ್ಯದ ಪ್ರಜೆಗಳಿಗೆ ಇದು ನಿಸ್ಸಂದೇಹವಾಗಿಯೂ ವರದಾನವಾಗಿ ಪರಿಣಮಿಸಲಿದೆ. ಆದರೆ ಇದರ ಅನುಷ್ಠಾನ ಅಸಮರ್ಪಕವಾದಲ್ಲಿ, ಇನ್ನಷ್ಟು ಸಮಸ್ಯೆಗಳಿಗೆ ಕಾರಣವೆನಿಸಲಿದೆ. ಇವೆಲ್ಲಕ್ಕೂ ಮಿಗಿಲಾಗಿ ರಾಜ್ಯದ ಪ್ರಜೆಗಳು ಸರ್ಕಾರ ಒದಗಿಸಲಿರುವ ಈ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ತನ್ಮೂಲಕ ಅನಾವಶ್ಯಕ ತೊಂದರೆಗಳನ್ನು ಸುಲಭವಾಗಿಯೇ ನಿವಾರಿಸಿಕೊಳ್ಳಬಹುದಾಗಿದೆ. 

ಕೊನೆಯ ಮಾತು 

ರಾಜ್ಯದ ಜನತೆಗೆ ನಿಗದಿತ ಕಾಲಮಿತಿಯಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸುವ ಸಲುವಾಗಿ ಜಾರಿಗೆ ಬಂದಿದ್ದ " ಸಕಾಲ " ಯೋಜನೆಯಿಂದಾಗಿ, ಜನಸಾಮಾನ್ಯರು ತಮ್ಮ ಕೆಲಸಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಹಲವಾರು ಬಾರಿ ಭೇಟಿ ನೀಡಬೇಕಾದ ಸಮಸ್ಯೆ ತಕ್ಕ ಮಟ್ಟಿಗೆ ಪರಿಹಾರಗೊಂಡಿತ್ತು. ಸಕಾಲ ಯೋಜನೆಯ ಯಶಸ್ಸನ್ನು ಗಮನಿಸಿದ ರಾಜ್ಯ ಸರ್ಕಾರವು, ಹಲವಾರು ಸರ್ಕಾರಿ ಇಲಾಖೆಗಳ ನೂರಾರು ಸೇವೆಗಳನ್ನು ಇದರ ವ್ಯಾಪ್ತಿಗೆ ಸೇರಿಸಿತ್ತು. ಆದರೆ ಇಂದಿಗೂ ರಾಜ್ಯದ ಅನೇಕ ಪ್ರಜೆಗಳಿಗೆ ಸಕಾಲ ಯೋಜನೆ ಏನೆಂದೇ ತಿಳಿದಿಲ್ಲ ಎಂದಲ್ಲಿ ನೀವೂ ನಂಬಲಾರಿರಿ. ಅದೇ ರೀತಿಯಲ್ಲಿ ಮುಂದೆ ಜಾರಿಗೊಳ್ಳಲಿರುವ ಇ - ಆಡಳಿತ ವ್ಯವಸ್ಥೆಯ ಪ್ರಯೋಜನವನ್ನು ಪಡೆದುಕೊಳ್ಳಲು, ಕಂಪ್ಯೂಟರ್ ಮತ್ತು ಅಂತರಜಾಲಗಳ ಬಳಕೆಯ ಬಗ್ಗೆ ಒಂದಿಷ್ಟು ಜ್ನಾನವಿರುವುದು ಅತ್ಯಗತ್ಯವೂ ಹೌದು. ಪ್ರಗತಿಪಥದಲ್ಲಿ ಮುನ್ನಡೆಯುತ್ತಿರುವ ನಮ್ಮ ದೇಶದ ಬಹುತೇಕ ನಗರ- ಪಟ್ಟಣಗಳಲ್ಲಿನ ಜನರಿಗೆ ಮೊಬೈಲ್ ದೂರವಾಣಿಯ ಮೂಲಕ ಈ ಸೇವೆಯನ್ನು ಬಳಸಿಕೊಳ್ಳುವ ವಿಧಾನವನ್ನು ಕಲಿಸಿದಲ್ಲಿ, ಇ - ಆಡಳಿತ ಯೋಜನೆಯು ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 



Thursday, May 29, 2014

CONSTRUCTION WASTE DUMPED NEAR HIGHWAYS !




 ಹೆದ್ದಾರಿಯ ಬದಿಯಲ್ಲಿ ರಾಶಿ ಬಿದ್ದಿರುವ ನಿರ್ಮಾಣ ತ್ಯಾಜ್ಯಗಳು 

ನಮ್ಮ ದೇಶದ ಪ್ರತಿಯೊಂದು ರಾಜ್ಯದ ಪ್ರತಿಯೊಂದು ಮಹಾನಗರ, ನಗರ ಮತ್ತು ಪಟ್ಟಣಗಳಲ್ಲಿ, ವರ್ಷದ ೩೬೫ ದಿನಗಳಲ್ಲೂ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಜಮೀನು ಮತ್ತು ಕಟ್ಟಡಗಳ ಬೇಡಿಕೆಯ ಪ್ರಮಾಣಗಳು ದಿನೇದಿನೇ ಹೆಚ್ಚುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವೆನಿಸಿದೆ. ಇದರೊಂದಿಗೆ ಗಗನಕ್ಕೇರುತ್ತಿರುವ ಜಮೀನಿನ ಬೆಲೆಯಿಂದಾಗಿ ಹಾಗೂ ಖಾಲಿ ಜಮೀನಿನ ಕೊರತೆಯಿಂದಾಗಿ, ಬಹುತೇಕ ಜನರು ಹಳೆಯ ವಸತಿ ಮತ್ತು ವಾಣಿಜ್ಯ ಕಟ್ಟಡಗಳನ್ನು ಖರೀದಿಸಿದ ಬಳಿಕ ಇವುಗಳನ್ನು ಕೆಡವಿ ನೂತನ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುತ್ತಾರೆ. ಈ ಸಂದರ್ಭದಲ್ಲಿ ಉತ್ಪನ್ನವಾಗುವ ನಿರ್ಮಾಣ ತ್ಯಾಜ್ಯಗಳನ್ನು, ಕತ್ತಲಾದ ಬಳಿಕ ನಗರದ ಹೊರವಲಯದಲ್ಲಿನ ಖಾಲಿ ಜಾಗಗಳು, ನಿರ್ಜನ ಪ್ರದೇಶಗಳು ಅಥವಾ ಹೆದ್ದಾರಿಗಳ ಬದಿಗಳಲ್ಲಿ ಸುರಿದು ಪಲಾಯನ ಮಾಡುತ್ತಾರೆ. 

ಪ್ರತಿಯೊಂದು ಮಹಾನಗರ, ನಗರ ಮತ್ತು ಪಟ್ಟಣಗಳಲ್ಲಿ ಕಾಣಸಿಗುವ ಇಂತಹ ನಿರ್ಮಾಣ ತ್ಯಾಜ್ಯಗಳೊಂದಿಗೆ, ಇತರ ಅನೇಕ ವಿಧದ ತ್ಯಾಜ್ಯಗಳನ್ನೂ ಇದೇ ರೀತಿಯಲ್ಲಿ ಕದ್ದುಮುಚ್ಚಿ ವಿಲೇವಾರಿ ಮಾಡುವುದರಿಂದಾಗಿ, ಇಂತಹ ರಸ್ತೆಗಳು ಮತ್ತು ಪ್ರದೇಶಗಳು ತ್ಯಾಜ್ಯ ವಿಲೇವಾರಿ ಘಟಕಗಳಂತೆ ಗೋಚರಿಸುತ್ತವೆ. ಇದನ್ನು ಕಂಡ ಜನಸಾಮಾನ್ಯರು ಸ್ಥಳೀಯ ಸಂಸ್ಥೆಯ ಅಥವಾ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ದೂಷಿಸುತ್ತಾರೆ. ಆದರೆ ಇರುಳಿನಲ್ಲಿ ನಡೆಯುವ ಈ ಅನೈತಿಕ ತ್ಯಾಜ್ಯ ವಿಲೇವಾರಿಯನ್ನು ತಡೆಗಟ್ಟುವುದು ಹೇಳಿದಷ್ಟು ಸುಲಭವೇನಲ್ಲ. ಏಕೆಂದರೆ ರಾತ್ರಿ ಪಾಳಿಯ ಪೊಲೀಸರಂತೆ ನಗರದ ನಿರ್ಜನ ಪ್ರದೇಶಗಳು ಮತ್ತು ಹೆದ್ದಾರಿಗಳಲ್ಲಿ ಈ ಅಧಿಕಾರಿಗಳು ಗಸ್ತು ತಿರುಗುವುದು ಅಸಾಧ್ಯವೂ ಹೌದು. ಹಗಲಿನಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾದ ಈ ಅಧಿಕಾರಿಗಳು, ಇರುಳಿನಲ್ಲಿ ನಿದ್ದೆಗೆಟ್ಟು ಇಂತಹ ಹೊಣೆಗಾರಿಕೆಯನ್ನು ನಿಭಾಯಿಸುವುದು ನಿಶ್ಚಿತವಾಗಿಯೂ ಉಚಿತವಲ್ಲ. 

ರಸ್ತೆಗಳ ಬದಿಗಳಲ್ಲಿ ಇಂತಹ ತ್ಯಾಜ್ಯಗಳನ್ನು ಸುರಿಯುವುದರಿಂದ, ರಸ್ತೆಯ ಮೇಲೆ ಬಿದ್ದ ಮಳೆಯ ನೀರು ಸರಾಗವಾಗಿ ಹರಿದು ಚರಂಡಿಗಳನ್ನು ಸೇರಲು ಅಡಚಣೆ ಸಂಭವಿಸುತ್ತದೆ. ಇದರಿಂದಾಗಿ ಮಳೆನೀರು ರಸ್ತೆಯ ಬದಿಯಲ್ಲೇ ಸಂಗ್ರಹವಾಗುವುದರಿಂದ, ಪುಟ್ಟಕೆರೆಗಳಂತೆ ತೋರುತ್ತವೆ. ಜೊತೆಗೆ ಈ ರೀತಿಯಲ್ಲಿ ನೀರು ನಿಂತ ರಸ್ತೆಯ ಭಾಗವು ಘನ ವಾಹನಗಳ ಸಂಚಾರದ ಸಂದರ್ಭದಲ್ಲಿ ಕುಸಿಯುವುದರಿಂದ, ರಸ್ತೆಗಳು ತೀವ್ರವಾಗಿ ಹಾನಿಗೆ ಒಳಗಾಗುತ್ತವೆ. ಇಂತಹ ಸಮಸ್ಯೆಗಳು ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿದಲ್ಲಿ, ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಗಳು ಬಾಧಿಸುವುದರೊಂದಿಗೆ, ರಸ್ತೆ ಅಪಘಾತಗಳಿಗೂ ಕಾರಣವೆನಿಸುತ್ತವೆ. ಅನೇಕ ಸಂದರ್ಭಗಳಲ್ಲಿ ಅಮಾಯಕರ ಪ್ರಾಣಹಾನಿಗೂ ಕಾರಣವೆನಿಸಬಲ್ಲ ಈ ಸಮಸ್ಯೆಗೆ, ಇಂತಹ ನಿರ್ಮಾಣ ತ್ಯಾಜ್ಯಗಳನ್ನು ರಸ್ತೆಗಳ ಬದಿಗಳಲ್ಲಿ ಸುರಿದವರೇ ಕಾರಣಕರ್ತರೆನಿಸುತ್ತಾರೆ. ಆದರೆ ಕದ್ದುಮುಚ್ಚಿ ರಾತ್ರಿಯ ವೇಳೆಯಲ್ಲಿ ತ್ಯಾಜ್ಯಗಳನ್ನು ಸುರಿಯುವ ಮಂದಿ, ತಮ್ಮ ನಿರ್ಲಕ್ಷ್ಯದಿಂದ ಉದ್ಭವಿಸಬಲ್ಲ ಸಮಸ್ಯೆಗಳ ಬಗ್ಗೆ ಯಾವತ್ತೂ ಚಿಂತಿಸುವುದೇ ಇಲ್ಲ. 

ವಿಶೇಷವೆಂದರೆ ಕೆಲ ಸಂದರ್ಭಗಳಲ್ಲಿ ನಿರ್ಮಾಣ ಅಥವಾ ಇತರ ತ್ಯಾಜ್ಯಗಳನ್ನು ತಂದು ಸುರಿಯುವುದನ್ನು ಕಣ್ಣಾರೆ ಕಂಡರೂ ಸಂಬಂಧಿತ ಅಧಿಕಾರಿಗಳಿಗೆ ಅಥವಾ ಇಲಾಖೆಗಳಿಗೆ ದೂರನ್ನು ನೀಡಲು ಹಿಂಜರಿವ ಜನರು, ಅಧಿಕಾರಿಗಳನ್ನು ದೂಷಿಸಲು ಎಂದಿಗೂ ಹಿಂಜರಿಯುವುದೇ ಇಲ್ಲ!. ಕನಿಷ್ಠಪಕ್ಷ ಈ ರೀತಿಯಲ್ಲಿ ತ್ಯಾಜ್ಯಗಳನ್ನು ತಂದು ಸುರಿಯುವ ವಾಹನಗಳ ನೋಂದಣಿ ಸಂಖ್ಯೆಯನ್ನು ದಾಖಲಿಸಿಕೊಂಡು, ಸಂಬಂಧಿತ ಇಲಾಖೆಗಳಿಗೆ ದೂರವಾಣಿಯ ಮೂಲಕ ಈ ಮಾಹಿತಿಯನ್ನು ನೀಡುವ ಮೂಲಕ  ತಪ್ಪಿತಸ್ತರನ್ನು ಶಿಕ್ಷಿಸಲು ನೆರವಾಗುವುದು " ನಾಗರಿಕ ಪ್ರಜ್ಞೆ" ಯ ಅವಿಭಾಜ್ಯ ಅಂಗವಾಗಿದ್ದು, ಈ ಸಮಸ್ಯೆಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸುವಲ್ಲಿ ಇದು ಉಪಯುಕ್ತವೆನಿಸಬಲ್ಲದು.  

ತಡೆಗಟ್ಟುವುದೆಂತು ?

ದೇಶದಲ್ಲಿ ದಿನನಿತ್ಯ ಉತ್ಪನ್ನವಾಗುವ ಅಗಾಧ ಪ್ರಮಾಣದ ನಿರ್ಮಾಣ ತ್ಯಾಜ್ಯಗಳನ್ನು ಸಮರ್ಪಕವಾಗಿ ಮರುಬಳಕೆ ಮಾಡಲು, ಪುನರ್ ಆವರ್ತನಗೊಳಿಸಲು ಅಥವಾ ಸುರಕ್ಷಿತವಾಗಿ ವಿಲೇವಾರಿ ಮಾಡಲು ಹಲವಾರು ವಿಧಾನಗಳಿವೆ. ಇವುಗಳನ್ನು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಸಂದರ್ಭೋಚಿತವಾಗಿ ಅಳವಡಿಸಿಕೊಳ್ಳ ಬೇಕಿದೆ. ಈ ವಿಧಾನಗಳಲ್ಲಿ ತಗ್ಗು ಪ್ರದೇಶವನ್ನು ಮಣ್ಣು ತುಂಬಿಸಿ ಎತ್ತರಿಸುವ ಸ್ಥಳಗಳ ತಳಭಾಗದಲ್ಲಿ ಈ ನಿರ್ಮಾಣ ತ್ಯಾಜ್ಯಗಳನ್ನು ಹರಡಿದ ಬಳಿಕ, ಮೇಲಿನ ಭಾಗಕ್ಕೆ ಮಣ್ಣು ತುಂಬಿಸಿದಲ್ಲಿ ಗಣನೀಯ ಪ್ರಮಾಣದ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಿದಂತಾಗುವುದು. ಅಂತೆಯೇ ಕಲ್ಲು, ಸಿಮೆಂಟ್, ಕಾಂಕ್ರೀಟ್ ಮತ್ತಿತರ ತ್ಯಾಜ್ಯಗಳನ್ನು ರಸ್ತೆಗಳ ನಿರ್ಮಾಣದ ಸಂದರ್ಭದಲ್ಲಿ ಬಳಸುವ ವಿಧಾನವು ಈಗಾಗಲೇ ಅನೇಕ ದೇಶಗಳಲ್ಲಿ ಬಳಸಲ್ಪಡುತ್ತಿದೆ. ಅದೇ ರೀತಿಯಲ್ಲಿ ಸಿಮೆಂಟ್ ಹಾಗೂ ಕಾಂಕ್ರೀಟ್ ತ್ಯಾಜ್ಯಗಳನ್ನು ಹುಡಿಮಾಡಿ, ಸಿಮೆಂಟ್ ಬ್ಲಾಕ್ ಗಳನ್ನು ತಯಾರಿಸುವ ಘಟಕಗಳಲ್ಲಿ ಮರುಬಳಕೆ ಮಾಡಬಹುದಾಗಿದೆ. ಇಂತಹ ವಿಧಾನಗಳನ್ನು ನಾವು ಅಳವಡಿಸಿಕೊಳ್ಳದೇ ಇದ್ದಲ್ಲಿ, ನಮ್ಮ ದೇಶದ ಪ್ರತಿಯೊಂದು ಮಹಾನಗರ, ನಗರ ಮತ್ತು ಪಟ್ಟಣಗಳ ಮೂಲೆಮೂಲೆಗಳಲ್ಲಿ ನಿರ್ಮಾಣ ತ್ಯಾಜ್ಯಗಳ ರಾಶಿಗಳು ರಾರಾಜಿಸಲಿವೆ!. 

ಕೊನೆಯ ಮಾತು 

ಅಧಿಕಾರ ಸ್ವೀಕಾರದ ಬಳಿಕ ದೇಶದ ನೂತನ ಪ್ರಧಾನಿಯಾದ ನರೇಂದ್ರ ಮೋದಿಯವರು " ಸ್ವಚ್ಚ ಭಾರತ " ಎನ್ನುವ ಆಂದೋಲನವನ್ನು ಆರಂಭಿಸುವ ಬಗ್ಗೆ ಸೂಚನೆಯನ್ನು ನೀಡಿದ್ದಾರೆ. ಪ್ರಧಾನ ಮಂತ್ರಿ ಹುದ್ದೆಗೆ ಮೋದಿಯವರನ್ನು ಬೆಂಬಲಿಸಿದಂತೆಯೇ, ಈ ವಿಶಿಷ್ಟ ಯೋಜನೆಯನ್ನು ನಾವುನೀವೆಲ್ಲರೂ ಬೆಂಬಲಿಸಿದಲ್ಲಿ, ಈ ಯೋಜನೆಯು ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ಅದೇ ರೀತಿಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಸಹಕಾರ ದೊರೆಯದೆ ಇದ್ದಲ್ಲಿ, ಇದು ದಯನೀಯವಾಗಿ ವಿಫಲವಾಗುವುದರಲ್ಲೂ ಸಂದೇಹವಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು   



Monday, May 26, 2014

MOBILE TOWERS- ARE THEY DANGEROUS ?



  ಮೊಬೈಲ್ ಟವರ್ ಗಳ ನಿರ್ಮಾಣ - ಸಮಸ್ಯೆಗಳು 

ಮೊಬೈಲ್ ದೂರವಾಣಿಗಳನ್ನು ಅತಿಯಾಗಿ ಬಳಸುವುದರಿಂದ ಕ್ಯಾನ್ಸರ್ ನಂತಹ ಮಾರಕ ವ್ಯಾಧಿಗಳು ಉದ್ಭವಿಸುವ ಸಾಧ್ಯತೆಗಳಿವೆ ಎನ್ನುವುದು ನಿಮಗೂ ತಿಳಿದಿರಲೇಬೇಕು. ಸೆಲ್ ಫೋನ್ ಗಳನ್ನು ಬಳಸದ ವ್ಯಕ್ತಿಗಳು ಈ ವಿಚಾರವನ್ನು ಅರಿತು ನೆಮ್ಮದಿಯ ನಿಟ್ಟುಸಿರು ಬಿಟ್ಟಿರಬಹುದು. ಆದರೆ ಇದೀಗ ಕಣ್ಣು ಹಾಯಿಸಿದಲ್ಲೆಲ್ಲಾ ಕಾಣಸಿಗುವ ಮೊಬೈಲ್ ಟವರ್ ಗಳು ಅವಿರತವಾಗಿ ಹೊರಸೂಸುವ ವಿದ್ಯುತ್ ಆಯಾಸ್ಕಾಂತೀಯ ಅಲೆಗಳು ಮನುಕುಲಕ್ಕೆ ಮಾರಕವೆನಿಸುತ್ತಿವೆ ಎನ್ನುವುದು ಪ್ರಾಯಶಃ ನಿಮಗೂ ತಿಳಿದಿರಲಾರದು. ಈ ಬಗ್ಗೆ ನೀವು ಅರಿತುಕೊಳ್ಳಲೇಬೇಕಾದ ಕಿಂಚಿತ್ ಮಾಹಿತಿ ಇಲ್ಲಿದೆ. 
----------------                 ------------------                   ---------------            ---------------------            ------------

ಶತಕೋಟಿ ಸಂಖ್ಯೆಯನ್ನು ದಾಟಿ ವಿಶ್ವದಾಖಲೆಯತ್ತ ದಾಪುಗಾಲು ಹಾಕುತ್ತಿರುವ ಭಾರತದ ಜನಸಂಖ್ಯೆಗೆ ಅನುಗುಣವಾಗಿ ಮೊಬೈಲ್ ದೂರವಾಣಿಗಳ ಸಂಖ್ಯೆಯೂ ನಿರಂತರವಾಗಿ ಹೆಚ್ಚುತ್ತಿದೆ. ಎಲ್ಲರ  ಕೈಗೆಟಕುವ ಬೆಲೆಗೆ ಲಭಿಸುತ್ತಿರುವ ಈ ಪುಟ್ಟ ದೂರವಾಣಿಗಳು ನಮ್ಮ ಆಧುನಿಕ ಜೀವನಶೈಲಿಯ ಅವಿಭಾಜ್ಯ ಅಂಗವೆನಿಸಿವೆ. 

ಕೆಲವೇ ವರ್ಷಗಳ ಹಿಂದೆ ಶ್ರೀಮಂತ ವ್ಯಕ್ತಿಗಳಿಗೂ ಪ್ರತಿಷ್ಠೆಯ ಸಂಕೇತವೆನಿಸಿದ್ದ ಮೊಬೈಲ್ ದೂರವಾಣಿಗಳು, ಇದೀಗ ಕಡುಬಡವರ ಕೈಯಲ್ಲೂ ರಾರಾಜಿಸುತ್ತಿವೆ. ಅಬಾಲವೃದ್ಧರೂ ಉಪಯೋಗಿಸುತ್ತಿರುವ ಸೆಲ್ ಫೋನ್ ಗಳ ರಿಂಗಣಗಳು ಎಲ್ಲೆಂದರಲ್ಲಿ ಮೊಳಗುತ್ತಿವೆ. ಆದರೆ ಮೊಬೈಲ್ ದೂರವಾಣಿಗಳು ಮತ್ತು ಇವುಗಳ ಸಂಪರ್ಕ ಗೋಪುರಗಳು, ಜನಸಾಮಾನ್ಯರ ಆರೋಗ್ಯಕ್ಕೆ ಮಾರಕವೆನಿಸುತ್ತಿವೆ. 

ದೂರಸಂಪರ್ಕ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳು ಭಾಗವಹಿಸಲು ಅವಕಾಶವನ್ನು ಕಲ್ಪಿಸಿದ ಬಳಿಕ, ಸರ್ಕಾರಿ ಸ್ವಾಮ್ಯದ ಸಂಸ್ಥೆ ಮತ್ತು ಹಲವಾರು ಖಾಸಗಿ ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ತತ್ಪರಿಣಾಮವಾಗಿ ಸೆಲ್ಯುಲರ್ ಸೇವಾ ಸಂಸ್ಥೆಗಳು ಗ್ರಾಹಕರಿಗೆ ವಿಧಿಸುತ್ತಿದ್ದ ದರಗಳನ್ನು ಗಣನೀಯ ಪ್ರಮಾಣದಲ್ಲಿ ಇಳಿಸಿವೆ. ಇದರಿಂದಾಗಿ ಇವುಗಳ ಗ್ರಾಹಕರ ಸಂಖ್ಯೆಯೂ ನಿರಂತರವಾಗಿ ಹೆಚ್ಚುತ್ತಿದೆ. ಸೆಲ್ಯುಲರ್ ಸೇವೆಯನ್ನು ಒದಗಿಸುತ್ತಿರುವ ಸಂಸ್ಥೆಗಳು ತಮ್ಮ ಸಂಪರ್ಕ ಜಾಲವನ್ನು ವಿಸ್ತರಿಸುವ ಸಲುವಾಗಿ ನಿರ್ಮಿಸುತ್ತಿರುವ ಟವರ್ ಗಳ ಸಂಖ್ಯೆಯೂ ಇದೇ ಕಾರಣದಿಂದಾಗಿ ತ್ವರಿತಗತಿಯಲ್ಲಿ ಹೆಚ್ಚುತ್ತಿದೆ. 

ಬಹುತೇಕ ಸ್ಥಳೀಯ ಸಂಸ್ಥೆಗಳು ಮೊಬೈಲ್ ದೂರವಾಣಿ ಟವರ್ ಗಳ ನಿರ್ಮಾಣಕ್ಕೆ ಅನುಮತಿಯನ್ನು ನೀಡುವ ಮುನ್ನ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬೆಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಇದೇ ಕಾರಣದಿಂದಾಗಿ ದೇಶದ ಮೂಲೆ ಮೂಲೆಗಳಲ್ಲಿ ಅಸಂಕ್ಯ ಮೊಬೈಲ್ ಟವರ್ ಗಳು ನಾಯಿಕೊಡೆಗಳಂತೆ ತಲೆಯೆತ್ತುತ್ತಿವೆ. 

ಸುರಕ್ಷತೆಯತ್ತ ನಿರ್ಲಕ್ಷ್ಯ 

ಸಾಮಾನ್ಯವಾಗಿ ಭೂಮಿಯ ಅಥವಾ ಬಹುಮಹಡಿ ಕಟ್ಟಡಗಳ ಮೇಲೆ ಮೊಬೈಲ್ ಟವರ್ ಗಳನ್ನು ನಿರ್ಮಿಸಲು ಅನುಮತಿಯನ್ನು ನೀಡುವ ಮುನ್ನ, ಅನುಭವೀ ಕಟ್ಟಡ ವಿನ್ಯಾಸ ಮತ್ತು ನಿರ್ಮಾಣ ತಜ್ಞರು ಈ ಕಟ್ಟಡದ ನಕ್ಷೆ ಮತ್ತು ರಚನೆಗಳನ್ನು ಪರಿಶೀಲಿಸಿ, ಹಲವಾರು ಟನ್ ಭಾರದ ಟವರ್ ಗಳನ್ನು ಹೊರಬಲ್ಲ ಧಾರಣಾ ಸಾಮರ್ಥ್ಯವು ಈ ಕಟ್ಟಡಕ್ಕೆ ಇದೆಯೇ ಎಂದು ನಿರ್ಧರಿಸಬೇಕಾಗುವುದು. ಇದಲ್ಲದೇ ಈ ಗೋಪುರದಿಂದ ಸ್ಥಳೀಯ ನಿವಾಸಿಗಳಿಗೆ ಯಾವುದೇ ರೀತಿಯ ಹಾನಿ ಸಂಭವಿಸುವ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿದ ಬಳಿಕವೇ ಸುರಕ್ಷತಾ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ. ಯಾವುದೇ ಕಟ್ಟಡದ ನಿರ್ಮಾಣದ ಸಂದರ್ಭದಲ್ಲಿ ಇದರ ಮೇಲೊಂದು ಟವರ್ ನಿರ್ಮಿಸುವ ಸಲುವಾಗಿ ವಿನ್ಯಾಸಗೊಳಿಸದೇ ಇದ್ದಲ್ಲಿ, ಇಂತಹ ಕಟ್ಟಡಗಳ ಮೇಲೆ ಟವರ್ ಗಳನ್ನು ನಿರ್ಮಿಸುವುದು ಅಸುರಕ್ಷಿತ ಮತ್ತು ಅಪಾಯಕಾರಿ ಎನಿಸುವುದು. ಆದರೆ ಅಧಿಕತಮ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಈ ಪ್ರಮುಖ ವಿಚಾರವನ್ನು ನಿರ್ಲಕ್ಷಿಸಿ, ಟವರ್ ಗಳ ನಿರ್ಮಾಣಕ್ಕೆ ಅನುಮತಿಯನ್ನು ನೀಡುತ್ತಿದ್ದಾರೆ. ಆಕಸ್ಮಿಕವಾಗಿ ಟವರ್ ಗಳ ಭಾರವನ್ನು ತಾಳಲಾರದೇ ಅಥವಾ ಬಿರುಗಾಳಿ ಮಳೆಗಳ ಸಂದರ್ಭದಲ್ಲಿ ಇವುಗಳು ಕುಸಿದಲ್ಲಿ ಅಮಾಯಕರ ಪ್ರಾಣಕ್ಕೆ ಎರವಾಗುವ ಸಾಧ್ಯತೆಗಳಿವೆ. 

ನಿಜ ಹೇಳಬೇಕಿದ್ದಲ್ಲಿ ಮೊಬೈಲ್ ಗೋಪುರಗಳ ಸುತ್ತಮುತ್ತಲ ೩೬ ಮೀಟರ್ ಪ್ರದೇಶದಲ್ಲಿ ಜನರು ವಾಸಿಸುವಂತಿಲ್ಲ. ಅರ್ಥಾತ್, ಜನವಸತಿ ಪ್ರದೇಶಗಳಲ್ಲಿ ಗೋಪುರಗಳನ್ನು ನಿರ್ಮಿಸುವಂತಿಲ್ಲ. ಇದಲ್ಲದೇ ಯಾವುದೇ ಪ್ರದೇಶದಲ್ಲಿ ಗೋಪುರವನ್ನು ನಿರ್ಮಿಸುವ ಮುನ್ನ, ಆಸುಪಾಸಿನ ನಿವಾಸಿಗಳ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರಾಪೇಕ್ಷಣಾ ಪತ್ರವನ್ನು ಪಡೆದುಕೊಳ್ಳಲೇಬೇಕೆನ್ನುವ ವಿಚಾರ ಜನಸಾಮಾನ್ಯರಿಗೆ ತಿಳಿದಿಲ್ಲ. ವಿಶೇಷವೆಂದರೆ ಈ ನಿಯಮವನ್ನು ಅನುಷ್ಠಾನಗೊಳಿಸಲು ಸರ್ಕಾರವೇ ಆಸ್ಪದವನ್ನು ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಆದೇಶದಂತೆ ಜನಸಾಮಾನ್ಯರ ಆರೋಗ್ಯಕ್ಕೆ ಅಪಾಯಕಾರಿ ಈನುವ ನೆಪವನ್ನೊಡ್ಡಿ, ಮೊಬೈಲ್ ಗೋಪುರಗಳ ನಿರ್ಮಾಣಕ್ಕೆ ಯಾರೂ ಅಡ್ಡಿಪಡಿಸುವಂತಿಲ್ಲ!. ಪ್ರಾಯಶಃ ಇದೇ ಕಾರಣದಿಂದಾಗಿ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಸೆಲ್ಯುಲರ್ ಸೇವಾ ಸಂಸ್ಥೆಗಳು ತಮಗೆ ಬೇಕೆನಿಸಿದಾಗ ಹಾಗೂ ತಮಗೆ ಬೇಕೆನಿಸಿದಲ್ಲಿ ಸಂಪರ್ಕ ಗೋಪುರಗಳನ್ನು ನಿರಾತಂಕವಾಗಿ ನಿರ್ಮಿಸುತ್ತಿವೆ. 

ಇವೆಲ್ಲಕ್ಕೂ ಮಿಗಿಲಾಗಿ ಮೊಬೈಲ್ ಗೋಪುರಗಳನ್ನು ನಿರ್ಮಿಸುವ ಮುನ್ನ ಸ್ಥಳೀಯ ಸಂಸ್ಥೆಗಳಿಗೆ ಅರ್ಜಿಯನ್ನು ಸಲ್ಲಿಸಿ ಅನುಮತಿಯನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ನಿಗದಿತ ಮೊತ್ತವನ್ನು ಒಂದುಬಾರಿ ಪಾವತಿಸಬೇಕಾಗಿವುದು. ಸೆಲ್ಯುಲರ್ ಸೇವಾ ಸಂಸ್ಥೆಗಳು ನಿರಂತರವಾಗಿ ಆದಾಯವನ್ನು ಗಳಿಸುತ್ತಿದ್ದರೂ, ತಾವು ನಿರ್ಮಿಸಿರುವ ಟವರ್ ಗಳಿಗೆ ವರ್ಷಂಪ್ರತಿ ತೆರಿಗೆಯನ್ನೇ ಪಾವತಿಸುತ್ತಿಲ್ಲ!. ಆದರೆ ಕಡುಬಡವರ ಪುಟ್ಟ ವಾಸ್ತವ್ಯದ ಮನೆಯಿಂದ ಅವರಿಗೆ ಯಾವುದೇ ಆದಾಯ ದೊರೆಯದಿದ್ದರೂ, ವರ್ಷಂಪ್ರತಿ ಆಸ್ತಿತೆರಿಗೆಯನ್ನು ಮಾತ್ರ ತಪ್ಪದೆ ತೆರಬೇಕಾಗುತ್ತದೆ. ಸರ್ಕಾರದ ಈ ಧೋರಣೆಗೆ ಕಾರಣವೇನೆಂದು ನಮಗೂ ತಿಳಿದಿಲ್ಲ. ವಿಶೇಷವೆಂದರೆ ಮೊಬೈಲ್ ಟವರ್ ನಿರ್ಮಿಸಿರುವ ಜಾಗ ಅಥವಾ ಕಟ್ಟಡಗಳ ಮಾಲಿಕರಿಗೆ ಸೆಲ್ಯುಲರ್ ಸೇವಾ ಸಂಸ್ಥೆಗಳು ಪ್ರತಿ ತಿಂಗಳಿನಲ್ಲೂ ನಿಗದಿತ ಶುಲ್ಕ ಅಥವಾ ಬಾಡಿಗೆಯನ್ನು ನೀಡುತ್ತಿದ್ದರೂ, ಸ್ಥಳೀಯ ಸಂಸ್ಥೆಗಳಿಗೆ ವರ್ಷದಲ್ಲೊಂದು ಬಾರಿ ತೆರಿಗೆಯನ್ನು ಪಾವತಿಸುವ ಬಗ್ಗೆ ಚಕಾರವೆತ್ತುವುದಿಲ್ಲ. 

ನಾವಿಂದು ಅತ್ಯಾಧುನಿಕ ಹಾಗೂ ಅತ್ಯವಶ್ಯಕ ವಿದೇಶಿ ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳುತ್ತಿದ್ದರೂ, ವಿದೇಶಗಳಲ್ಲಿ ಅನುಸರಿಸುತ್ತಿರುವ ಸುರಕ್ಷತಾ ಕ್ರಮಗಳನ್ನು ಮಾತ್ರ ಅನುಸರಿಸುತ್ತಿಲ್ಲ. ಇದೇ ಕಾರಣದಿಂದಾಗಿ ಜನಸಾಮಾನ್ಯರ ಆರೋಗ್ಯಕ್ಕೆ ಮಾರಕವೆನಿಸುತ್ತಿರುವ ಮೊಬೈಲ್ ಗೋಪುರಗಳನ್ನು ನಮ್ಮ ದೇಶದಲ್ಲಿ ವಸತಿ ಪ್ರದೇಶಗಳು ಮತ್ತು ಅಸುರಕ್ಷಿತ ಕಟ್ಟಡಗಳ ಮೇಲೂ ನಿರ್ಮಿಸಲಾಗುತ್ತಿದೆ.ಇದಕ್ಕೂ ಮಿಗಿಲಾಗಿ ಈಗ ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ಕಾನೂನುಗಳನ್ನು ಉಲ್ಲಂಘಿಸಿ ಗೋಪುರಗಳನ್ನು ನಿರ್ಮಿಸಿದ ಸಂಸ್ಥೆಗಳಿಗೆ ಇದು "ಅಕ್ರಮ " ಎಂದು ಸ್ಥಳೀಯ ಸಂಸ್ಥೆಗಳು ನೋಟಿಸ್ ಜಾರಿಮಾಡಿದಲ್ಲಿ, ನಿಗದಿತ ದಂಡವನ್ನು ಪಾವತಿಸಿ ಇವುಗಳನ್ನು " ಸಕ್ರಮ " ಗೊಳಿಸಲಾಗುತ್ತಿದೆ!. 

ಅಪಾಯಕಾರಿ ಅಲೆಗಳು 

ಮೊಬೈಲ್ ಗೋಪುರಗಳು ಹೊರಸೂಸುವ ವಿದ್ಯುತ್ ಆಯಸ್ಕಾಂತೀಯ ಅಲೆಗಳು ಮನುಷ್ಯನ ಮೆದುಳು, ನರಮಂಡಲ, ಹೃದಯ, ಶ್ವಾಸಕೋಶಗಳು ಮತ್ತು ಕಣ್ಣುಗಳಿಗೆ ಸಂಬಂಧಿಸಿದ ಗಂಭೀರ ಆರೋಗ್ಯದ ಸಮಸ್ಯೆಗಳೊಂದಿಗೆ, ಕೆಲವಿಧದ ಕ್ಯಾನ್ಸರ್ ಗಳಿಗೂ ಕಾರಣವೆನಿಸಬಲ್ಲದು ಎಂದು ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಿದೆ. 

ಜರ್ಮನಿಯಲ್ಲಿ ಸುಮಾರು ೧೦ ವರ್ಷಗಳ ಕಾಲ ನಡೆಸಿದ್ದ ಅಧ್ಯಯನದ ವರದಿಯಂತೆ, ಮೊಬೈಲ್ ಗೋಪುರಗಳ ವಿದ್ಯುತ್ ಆಯಸ್ಕಾಂತೀಯ ಅಲೆಗಳಿಗೆ ಸುದೀರ್ಘಕಾಲ ಗುರಿಯಾಗಿದ್ದ ವ್ಯಕ್ತಿಗಳಿಗೆ, ವಿವಿಧ ರೀತಿಯ ಕ್ಯಾನ್ಸರ್ ಗಳು ಬಾಧಿಸುವ ಸಾಧ್ಯತೆಗಳು ಮೂರುಪಟ್ಟು ಹೆಚ್ಚಾಗುವುದು ಎಂದು ತಿಳಿದುಬಂದಿದೆ. ೧೦೦೦ ರೋಗಿಗಳ ದಾಖಲೆಗಳನ್ನು ಪರಿಶೀಲಿಸಿದ ಸಂಶೋಧಕರ ಅಭಿಪ್ರಾಯದಂತೆ, ಮೊಬೈಲ್ ಗೋಪುರಗಳ ೪೦೦ ಮೀಟರ್ ಸುತ್ತಳತೆಯ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಗಳಲ್ಲಿ ಅನೇಕ ವಿಧದ ಕ್ಯಾನ್ಸರ್ ಗಳು ಉದ್ಭವಿಸುವ ಸಾಧ್ಯತೆಗಳು ೧೦೦ ಪಟ್ಟು ಹೆಚ್ಚುತ್ತದೆ. 

ಈ ಗೋಪುರಗಳ ವ್ಯಾಪ್ತಿಯಲ್ಲಿ ಹರಡುವ ವಿದ್ಯುತ್ ಆಯಸ್ಕಾಂತೀಯ ಅಲೆಗಳ ವಿಕಿರಣದ ಶಕ್ತಿಯ ಮಟ್ಟವು, ಪ್ರತಿ ಚದರ ಮೀಟರ್ ಗೆ ೭೨೬೦ ಮೈಕ್ರೋವ್ಯಾಟ್ಸ್ ಆಗಿರುತ್ತದೆ. ಇದರಿಂದಾಗಿ ಉದ್ಭವಿಸಬಲ್ಲ ಕ್ಯಾನ್ಸರ್ ಗಳಲ್ಲಿ ಸ್ತನಗಳ ಕ್ಯಾನ್ಸರ್ ಅಗ್ರಸ್ಥಾನದಲ್ಲಿದೆ. ತದನಂತರದ ಸ್ಥಾನಗಳು ಅನುಕ್ರಮವಾಗಿ ಶುಕ್ಲ ಗ್ರಂಥಿ, ಮೇದೋಜೀರಕ ಗ್ರಂಥಿ, ಕರುಳು, ಚರ್ಮ, ಶ್ವಾಸಕೋಶಗಳು ಮತ್ತು ರಕ್ತದ ಕ್ಯಾನ್ಸರ್ ಗಳಿಗೆ ಸಲ್ಲುತ್ತವೆ. 

ಅದೃಶ್ಯ ವಿದ್ಯುತ್ ಆಯಸ್ಕಾಂತೀಯ ವಿಕಿರಣಗಳ ಮಾರಕ ಪರಿಣಾಮಗಳ ವಿರುದ್ಧ ಅಮೆರಿಕದ ಜನರು ಪ್ರತಿಭಟಿಸಲು ಆರಂಭಿಸಿದ್ದಾರೆ. ವಸತಿ ಪ್ರದೇಶಗಳಲ್ಲಿ ಗೋಪುರಗಳ ನಿರ್ಮಾಣವನ್ನು ವಿರೋಧಿಸುತ್ತಿರುವ ಅಲ್ಲಿನ ಪ್ರಜೆಗಳು, ನ್ಯಾಯಾಲಯಗಳಲ್ಲಿ ಹೂಡಿರುವ ದಾವೆಗಳ ಸಂಖ್ಯೆಯು ೫೦೦ ರ ಗಾಡಿಯನ್ನು ದಾಟಿದೆ. 

ಈ ಗಂಭೀರ ಸಮಸ್ಯೆಯ ಬಿಸಿ ಇದೀಗ ಕೇಂದ್ರ ಸರ್ಕಾರಕ್ಕೂ ತಟ್ಟಿದ್ದು, ಸರ್ಕಾರವು ಶಾಲೆ ಮತ್ತಿತರ ವಿದ್ಯಾಸಂಸ್ಥೆಗಳು ಮತ್ತು ಆಸ್ಪತ್ರೆಗಳ ಸಮೀಪದಲ್ಲಿ ಮೊಬೈಲ್ ಗೋಪುರಗಳನ್ನು ನಿರ್ಮಿಸದಂತೆ ನಿಷೇಧಿಸಿದೆ. ಆದರೆ ಆರೋಗ್ಯಕ್ಕೆ ಹಾನಿಕರ ಎನ್ನುವ ನೆಪವನ್ನೊಡ್ಡಿ ಗೋಪುರಗಳ ನಿರ್ಮಾಣಕ್ಕೆ ಅಡ್ಡಿಪಡಿಸಬಾರದು ಎನ್ನುವ ಸರ್ಕಾರದ ಆದೇಶವನ್ನು ಅಕ್ಷರಶಃ ಪರಿಪಾಲಿಸುತ್ತಿರುವ ಸ್ಥಳೀಯ ಸಂಸ್ಥೆಗಳು, ಇಂತಹ ಕಟ್ಟಡಗಳ ಮೇಲೂ ಗೋಪುರಗಳ ನಿರ್ಮಾಣಕ್ಕೆ ಕಣ್ಣುಮುಚ್ಚಿ ಅನುಮತಿಯನ್ನು ನೀಡುತ್ತಿವೆ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 



Saturday, May 24, 2014

HERBAL TOOTHPASTE- IS IT REALLY NATURAL ?





  "ಹರ್ಬಲ್ " ಟೂತ್ ಪೇಸ್ಟ್ : ನಿಜಕ್ಕೂ ನೈಸರ್ಗಿಕವೇ ?

ಇತ್ತೀಚಿನ ಕೆಲವರ್ಷಗಳಿಂದ ಭಾರತೀಯ ಗ್ರಾಹಕರಲ್ಲಿ  ನೈಸರ್ಗಿಕ ಉತ್ಪನ್ನಗಳನ್ನು ಬಳಸುವ ಹವ್ಯಾಸ ಹೆಚ್ಚುತ್ತಿದೆ. ಇದರೊಂದಿಗೆ ಆಯುರ್ವೇದೀಯ ಪದ್ದತಿಯಲ್ಲಿ ತಯಾರಿಸಿದ ವೈವಿಧ್ಯಮಯ ಉತ್ಪನ್ನಗಳನ್ನು ಬಳಸುವ ಬಹುತೇಕ ಗ್ರಾಹಕರು, ತಾವು ದಿನನಿತ್ಯ ಬಳಸುವ ಟೂತ್ ಪೇಸ್ಟ್, ಸೋಪ್, ಶಾಂಪೂ, ಕೇಶ ತೈಲ, ತಲೆಗೂದಲಿಗೆ ಬಳಿಯುವ ಬಣ್ಣಗಳೇ ಮುಂತಾದವುಗಳನ್ನು ಬಳಸಲು, ಇವು ನೈಸರ್ಗಿಕ ಹಾಗೂ ಗಿಡಮೂಲಿಕೆಗಳಿಂದ ತಯಾರಿಸಿರುವುದೆನ್ನುವ ಧೃಢ ವಿಶ್ವಾಸವೇ ಕಾರಣವೆನಿಸಿದೆ. ಆದರೆ ಇಂತಹ " ಹರ್ಬಲ್ " ಅಥವಾ ಆಯುರ್ವೇದ ಉತ್ಪನ್ನಗಳಲ್ಲಿ ಇರುವ ನೈಸರ್ಗಿಕ ದ್ರವ್ಯಗಳು ಅಥವಾ ಗಿಡಮೂಲಿಕೆಗಳ ಪ್ರಮಾಣ ಎಷ್ಟೆನ್ನುವುದು ಯಾವುದೇ ಗ್ರಾಹಕರಿಗೆ ತಿಳಿದಿಲ್ಲ. ಉದಾಹರಣೆಗೆ ನೀವು ಬಳಸುತ್ತಿರುವ ಹರ್ಬಲ್ ಟೂತ್ ಪೇಸ್ಟ್ ಮತ್ತು ಇತರ ಯಾವುದೇ ಸಾಮಾನ್ಯ ಟೂತ್ ಪೇಸ್ಟ್ ಗಳ ನಡುವೆ ವಿಶೇಷ ವ್ಯತ್ಯಾಸಗಳೇ ಇಲ್ಲ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಉತ್ಪಾದಕರ ಮಾರಾಟ ತಂತ್ರ 

ಬೆಳಗಿನ ಜಾವ ಸವಿನಿದ್ದೆಯಿಂದ ಎದ್ದ ಬಳಿಕ ಹಾಗೂ ರಾತ್ರಿ ನಿದ್ದೆಗೆ ಶರಣಾಗುವ ಮುನ್ನ ನಿಮ್ಮ ಹಲ್ಲು ಮತ್ತು ಒಸಡುಗಳನ್ನು ಸ್ವಚ್ಚಗೊಳಿಸಲು ಬಳಸುವ ಟೂತ್ ಪೇಸ್ಟ್ ನಲ್ಲಿರುವ ದ್ರವ್ಯಗಳ ಬಗ್ಗೆ ನಿಮಗೂ ಅರಿವಿರಲಾರದು. ಅಧಿಕತಮ ಜನರು ಇಂತಹ ಉತ್ಪನ್ನಗಳ ಉತ್ಪ್ರೇಕ್ಷಿತ ಜಾಹೀರಾತುಗಳಿಗೆ ಮರುಳಾಗಿ, ಇವುಗಳನ್ನು ಖರೀದಿಸಿ ಬಳಸುತ್ತಿರುವುದು ಸತ್ಯ. 

ಇತ್ತೀಚಿನ ಕೆಲ ವರ್ಷಗಳಿಂದ ಜನಪ್ರಿಯವೆನಿಸಿರುವ " ಹರ್ಬಲ್ " ( ಸಸ್ಯಗಳಿಂದ ತಯಾರಿಸಿದ ) ಉತ್ಪನ್ನಗಳನ್ನು ಬಳಸುತ್ತಿರುವ ಅಸಂಖ್ಯ ಜನರು, ಇವುಗಳನ್ನು ವಿವಿಧ ರೀತಿಯ ಗಿಡಮೂಲಿಕೆಗಳನ್ನು ಬಳಸಿ ತಯಾರಿಸಲಾಗಿದೆ ಎಂದೇ ನಂಬಿದ್ದಾರೆ. ಹಾಗೂ ಇದೇ ಕಾರಣದಿಂದಾಗಿ ಇವುಗಳು " ನೈಸರ್ಗಿಕ ಮತ್ತು ರಾಸಾಯನಿಕ ರಹಿತ " ಎಂದು ಭಾವಿಸಿದ್ದಾರೆ. ಆದರೆ ಹರ್ಬಲ್ ಟೂತ್ ಪೇಸ್ಟ್ ಗಳಲ್ಲಿರುವ ಗಿಡಮೂಲಿಕೆಗಳ ಪ್ರಮಾಣವು, ಇವುಗಲ್ಲಿರುವ ದ್ರವ್ಯಗಳ ಶೇ. ೫ ರಷ್ಟು ಮಾತ್ರ ಎಂದಲ್ಲಿ ನೀವೂ ನಂಬಲಾರಿರಿ. ಈ ಕ್ಷುಲ್ಲಕ ಪ್ರಮಾಣದ ಗಿಡಮೂಲಿಕೆಗಳ ಅಂಶವನ್ನು ಹೊರತುಪಡಿಸಿದಲ್ಲಿ, ಈ ಉತ್ಪನ್ನ ಹಾಗೂ ಇತರ ಯಾವುದೇ ಸಾಮಾನ್ಯ ಟೂತ್ ಪೇಸ್ಟ್ ಗಳಿಗೂ ಯಾವುದೇ ವ್ಯತ್ಯಾಸವೇ ಇಲ್ಲವೆಂದಲ್ಲಿ ನಿಮಗೂ ಆಶ್ಚರ್ಯವೆನಿಸೀತು. ಅರ್ಥಾತ್, ಹರ್ಬಲ್ ಟೂತ್ ಪೇಸ್ಟ್ ಗಳಲ್ಲಿರುವ ಶೇ. ೯೫ ರಷ್ಟು ಅಂಶಗಳು, ಇತರ ಟೂತ್ ಪೇಸ್ಟ್ ಗಳಲ್ಲಿರುವಂತಹ ರಾಸಾಯನಿಕಗಳೇ ಆಗಿವೆ!. 

ಭಾರತದ ಸುಪ್ರಸಿದ್ಧ ಗ್ರಾಹಕ ಸಂಸ್ಥೆಯೊಂದು ಗತವರ್ಷದಲ್ಲಿ ನಡೆಸಿದ್ದ ಅಧ್ಯಯನದ ಪರಿಣಾಮವಾಗಿ ಈ ಸತ್ಯಸಂಗತಿ ಬಯಲಿಗೆ ಬಂದಿದೆ. ಈ ವರದಿಯಂತೆ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಹರ್ಬಲ್ ಟೂತ್ ಪೇಸ್ಟ್ ಗಳು " ನೈಸರ್ಗಿಕ, ಗಿಡಮೂಲಿಕೆಗಳಿಂದ ತಯಾರಿಸಿದ ಮತ್ತು ರಾಸಾಯನಿಕ ರಹಿತ " ಎಂದು ಘೋಷಿಸುವ ಅರ್ಹತೆಯನ್ನೇ ಹೊಂದಿಲ್ಲ. 

ವ್ಯತ್ಯಾಸವೇನು ? 

ಹರ್ಬಲ್ ಟೂತ್ ಪೇಸ್ಟ್ ಗಳ ಬಣ್ಣ ಮತ್ತು ಸ್ವಾದಗಳನ್ನು ಹೊರತುಪಡಿಸಿ, ಅನ್ಯ ವಿಚಾರಗಳಲ್ಲಿ ಇವುಗಳ ಮತ್ತು ಇತರ ಸಾಮಾನ್ಯ ಟೂತ್ ಪೇಸ್ಟ್ ಗಳ ನಡುವೆ ಯಾವುದೇ ವ್ಯತ್ಯಾಸವೇ ಇಲ್ಲ. ಹರ್ಬಲ್ ಟೂತ್ ಪೇಸ್ಟ್ ಗಳನ್ನು ಶತ ಪ್ರತಿಶತ ನೈಸರ್ಗಿಕ ಎನ್ನಬೇಕಿದ್ದಲ್ಲಿ, ಇವುಗಳಲ್ಲಿ ಯಾವುದೇ ರೀತಿಯ ಕೃತಕ ಹಾಗೂ ಅಸ್ವಾಭಾವಿಕ ರಾಸಾಯನಿಕಗಳು, ವರ್ಣಕಾರಕಗಳು, ರುಚಿವರ್ಧಕಗಳು, ಮತ್ತು ಸಂರಕ್ಷಕ ದ್ರವ್ಯಗಳನ್ನು ಬಳಸದೇ, ಕೇವಲ ನೈಸರ್ಗಿಕ ದ್ರವ್ಯಗಳನ್ನಷ್ಟೇ ಬಳಸಬೇಕಾಗುವುದು. ಇದಲ್ಲದೇ ಬೆಳವಣಿಗೆಯ ಚೋದನಿಗಳು, ರಾಸಾಯನಿಕಗಳು ಮತ್ತು ಕೀಟನಾಶಕಗಳನ್ನು ಬಳಸಿ ಇವುಗಳನ್ನು ಸಂಸ್ಕರಿಸಬಾರದು. ಆದರೆ ನಮ್ಮ ದೇಶದಲ್ಲಿ ಲಭ್ಯವಿರುವ ಹತ್ತು ವಿಧದ ಹರ್ಬಲ್ ಟೂತ್ ಪೇಸ್ಟ್ ಮತ್ತು ಎರಡು ವಿಧದ ಟೂತ್ ಪೌಡರ್ ಗಳನ್ನು ಅಂತರ ರಾಷ್ಟ್ರೀಯ ಗುಣಮಟ್ಟದ ಪ್ರಯೋಗಾಲಯಗಳಲ್ಲಿ ಪರೀಕ್ಷೆಗಳಿಗೆ ಒಳಪಡಿಸಿದಾಗ, ಇವುಗಳಲ್ಲಿ ಯಾವುದೇ ಉತ್ಪನ್ನವು " ಹರ್ಬಲ್ " ಎಂದು ಪ್ರಮಾಣೀಕರಿಸಬಹುದಾದ ಅರ್ಹತೆಯನ್ನೇ ಹೊಂದಿರಲಿಲ್ಲ ಎಂದು ಗ್ರಾಹಕ ಸಂಸ್ಥೆಯು ಬಹಿರಂಗಪಡಿಸಿದೆ. ಇಷ್ಟು ಮಾತ್ರವಲ್ಲ, ಇದೇ ರೀತಿಯ ಪರೀಕ್ಷೆಗಳಿಗೆ ಒಳಪಡಿಸಿದ್ದ ಟೂತ್ ಪೌಡರ್ ಗಳು " ಸೂಕ್ಷ್ಮಾಣುಜೀವಿ" ಗಳ ಪರೀಕ್ಷೆಯಲ್ಲಿ ವಿಫಲವಾಗಿದ್ದುದರಿಂದ, ಇವುಗಳ ಬಳಕೆಯೂ ನಿಮ್ಮ ಬಾಯಿಯ ಆರೋಗ್ಯ ರಕ್ಷಣೆಯ ವಿಚಾರದಲ್ಲಿ ಸುರಕ್ಷಿತವಲ್ಲ ಎಂದು ತಿಳಿದುಬಂದಿದೆ. ಇಂತಹ ಟೂತ್ ಪೌಡರ್ ಗಳನ್ನು ಬಳಸುವುದಕ್ಕಿಂತಲೂ, ಸಾಮಾನ್ಯ ಟೂತ್ ಪೇಸ್ಟ್ ಗಳನ್ನು ಮತ್ತು ಟೂತ್ ಬ್ರಶ್ ಗಳನ್ನು ಬಳಸುವುದು ನಿಮ್ಮ ಹಲ್ಲು ಮತ್ತು ಒಸಡುಗಳನ್ನು ಸಂರಕ್ಷಿಸಲು ಉಪಯುಕ್ತವೆನಿಸುವುದು. 

ಜನಸಾಮಾನ್ಯರು ಬಳಸುವ ಸಾಮಾನ್ಯ ಟೂತ್ ಪೇಸ್ಟ್ ಗಳಲ್ಲಿ ಹಲ್ಲುಗಳನ್ನು ತಿಕ್ಕಿ ಸ್ವಚ್ಚಗೊಳಿಸುವ, ನೊರೆಯನ್ನು ಉಂಟುಮಾಡುವ, ದಂತಕುಳಿಗಳನ್ನು ತಡೆಗಟ್ಟಬಲ್ಲ, ರುಚಿಕಾರಕ ಮತ್ತು ಸಿಹಿಯಾದ ಸ್ವಾದವನ್ನು ನೀಡುವ ಕೃತಕ ರಾಸಾಯನಿಕಗಳ ಪ್ರಮಾಣವು ಶೇ. ೯೦ ರಷ್ಟು ಇರುವುದು. ಇನ್ನುಳಿದಂತೆ ಶೇ. ೧೦ ರಷ್ಟು ರುಚಿವರ್ಧಕ ಸ್ವಾದಗಳೇ ಮುಂತಾದ ಅನ್ಯದ್ರವ್ಯಗಳನ್ನು ಬಳಸುವ ಮೂಲಕ ಇಂತಹ ಉತ್ಪನ್ನಗಳ ವೈಶಿಷ್ಟ್ಯತೆಯನ್ನು ಕಾಪಾಡಲಾಗುತ್ತದೆ. ಈ ಶೇ. ೧೦ ರಷ್ಟು ಅಂಶಗಳಲ್ಲಿ ಕೇವಲ ಶೇ. ೨.೫ ರಷ್ಟು ಸಸ್ಯಗಳ ಸಾರಗಳು ಅಥವಾ ಆಯುರ್ವೇದ ದ್ರವ್ಯಗಳನ್ನು ಬಳಸಿದೊಡನೆ, ಈ ಉತ್ಪನ್ನಗಳು ಹರ್ಬಲ್ ಟೂತ್ ಪೇಸ್ಟ್ ಗಳಾಗಿ ಪರಿವರ್ತನೆಗೊಳ್ಳುತ್ತವೆ!. 

ಅದೇನೇ ಇರಲಿ, ಬಹುತೇಕ ಗ್ರಾಹಕರಂತೂ ಇಂತಹ ಉತ್ಪನ್ನಗಳು ಹರ್ಬಲ್ ಅಥವಾ ಆಯುರ್ವೇದ ಪದ್ದತಿಯಿಂದ ತಯಾರಿಸಿದ ಉತ್ಪನ್ನಗಳೇ ಎಂದು ನಂಬಿರುವುದು ಮಾತ್ರ ಸುಳ್ಳೇನಲ್ಲ!. 

ಕೊನೆಯ ಮಾತು 

ಕೃತಕ ರಾಸಾಯನಿಕಗಳ ಬಳಕೆ ಅಪಾಯಕಾರಿ ಎನ್ನುವ ಕಾರಣದಿಂದಾಗಿಯೇ ಸಸ್ಯಜನ್ಯ ದ್ರವ್ಯಗಳಿಂದ ಸಿದ್ಧಪಡಿಸಿದ ಉತ್ಪನ್ನಗಳನ್ನು ಬಳಸುವ ಅನೇಕ ಗ್ರಾಹಕರು, ಅಪರೂಪದಲ್ಲಿ ಇವುಗಳ ಸತ್ಯಾಸತ್ಯತೆಯನ್ನು ಅರಿತುಕೊಳ್ಳುವ ಸಂದರ್ಭ ಅಯಾಚಿತವಾಗಿ ಲಭಿಸುವುದುಂಟು. ಇಂತಹ ಘಟನೆಯೊಂದು ಇಂತಿದೆ. ಬಿಳಿಯಾದ್ದ ತನ್ನ ತಲೆಗೂದಲುಗಳಿಗೆ ಕಪ್ಪು ಬಣ್ಣವನ್ನು ಬಳಿದ ಪರಿಣಾಮವಾಗಿ ತೀವ್ರಸ್ವರೂಪದ "ಅಲರ್ಜಿ" ಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬರಿಗೆ, ಇನ್ನು ಮುಂದೆ ಇಂತಹ ಯಾವುದೇ ಉತ್ಪನ್ನವನ್ನು ಬಳಸದಂತೆ ವೈದ್ಯರು ಎಚ್ಚರಿಕೆಯನ್ನು ನೀಡಿದ್ದರು. ಆದರೆ ತನ್ನ ಪತ್ನಿ ಬಳಸುತ್ತಿದ್ದ " ಹರ್ಬಲ್ " ಉತ್ಪನ್ನವೊಂದು ನಿರಪಾಯಕಾರಿ ಎಂದು ನಂಬಿ ತನ್ನ ಮೀಸೆಗೆ ಬಳಿದುಕೊಂಡ ಈತನಿಗೆ, ಮತ್ತೊಮ್ಮೆ ತೀವ್ರಸ್ವರೂಪದ ಅಲರ್ಜಿ ತಲೆದೋರಿದ ಪರಿಣಾಮವಾಗಿ ಒಂದುವಾರ ಮನೆಯಲ್ಲೇ ಕುಳಿತುಕೊಳ್ಳುವ ಪ್ರಸಂಗ ಸಂಭವಿಸಿತ್ತು. ಏಕೆಂದರೆ ಮೀಸೆಗೆ ಬಣ್ಣವನ್ನು ಬಳಿದುಕೊಂಡ ಪರಿಣಾಮವಾಗಿ ಈತನ ಮುಖವು, ಹನುಮಂತನ ಮೂತಿಯಂತಾಗಿತ್ತು !. 

ಈ ಹರ್ಬಲ್ ಉತ್ಪನ್ನವು ನಿಜಕ್ಕೂ ಸಸ್ಯಗಳಿಂದ ತಯಾರಿಸಿದ್ದಲ್ಲಿ, ಇದನ್ನು ಬಳಸಿದ ವ್ಯಕ್ತಿಗೆ ಯಾವುದೇ ರೀತಿಯ ದುಷ್ಪರಿಣಾಮ ಅಥವಾ ಅಡ್ಡ ಪರಿಣಾಮ ಮತ್ತು ಅಲರ್ಜಿ ಗಳಂತಹ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳೇ ಇರುತ್ತಿರಲಿಲ್ಲ. ಆದರೆ ಈ ಉತ್ಪನ್ನದಲ್ಲಿ ಸಾಕಷ್ಟು ಕೃತಕ ರಾಸಾಯನಿಕಗಳು ಇದ್ದುದರಿಂದಾಗಿಯೇ ಆತನಿಗೆ ತೀವ್ರಸ್ವರೂಪದ ಅಲರ್ಜಿ ಉದ್ಭವಿಸಿತ್ತು. ಇಂತಹ ಅನೇಕ ಘಟನೆಗಳನ್ನು ಚರ್ಮರೋಗ ತಜ್ಞರು ತಮ್ಮ ರೋಗಿಗಳಿಗೆ ಉದಾಹರಣೆಯನ್ನಾಗಿ ನೀಡುತ್ತಾರೆ. ಆದರೂ ಇದನ್ನು ಗಂಭೀರವಾಗಿ ಪರಿಗಣಿಸದ ವ್ಯಕ್ತಿಗಳು, ಮತ್ತೆ ತಮ್ಮ ತಪ್ಪುಗಳನ್ನು ಪುನರಾವರ್ತಿಸುತ್ತಾರೆ!. 

ಡಾ. ಸಿ . ನಿತ್ಯಾನಂದ ಪೈ, ಪುತ್ತೂರು 



Thursday, May 22, 2014

Solidwaste management



 ತ್ಯಾಜ್ಯ ಸಂಗ್ರಹದ ಬಗ್ಗೆ ಅನಾವಶ್ಯಕ ವ್ಯಾಜ್ಯವೇಕೆ ?

ರಾಜ್ಯದ ಅಧಿಕತಮ ನಗರ- ಪಟ್ಟಣಗಳಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗಳು ಸಮರ್ಪಕವಾಗಿ ಜರಗದೇ ಇರುವ ಕಾರಣದಿಂದಾಗಿ, ಕಣ್ಣು ಹಾಯಿಸಿದಲ್ಲೆಲ್ಲಾ ವೈವಿಧ್ಯಮಯ ತ್ಯಾಜ್ಯಗಳ ರಾಶಿಗಳೇ ಕಾಣಸಿಗುತ್ತಿವೆ. ಸ್ಥಳೀಯ ಜನರು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ನಡುವೆ ಸಮನ್ವಯದ ಕೊರತೆ, ಜನರ ಅಸಹಕಾರ, ತ್ಯಾಜ್ಯ ಸಂಗ್ರಹಕ್ಕೆ ಬೇಕಾಗುವ ಸಿಬಂದಿಗಳ ಕೊರತೆ, ಸಂಗ್ರಹಿತ ತ್ಯಾಜ್ಯಗಳನ್ನು ಸಾಗಿಸುವ, ಪ್ರತ್ಯೇಕಿಸುವ, ಪುನರ್ ಆವರ್ತನ ಮಾಡುವ, ಮತ್ತು ವೈಜ್ಞಾನಿಕ ವಿಧಾನದಿಂದ ವಿಲೇವಾರಿ ಮಾಡುವ ವ್ಯವಸ್ಥೆಯ ಅಭಾವ ಮತ್ತಿತರ ಕಾರಣಗಳಿಂದಾಗಿ, ತ್ಯಾಜ್ಯ ವಿಲೇವಾರಿಯ ಸಮಗ್ರ ವ್ಯವಸ್ಥೆಯೇ ವಿಫಲವೆನಿಸುತ್ತಿದೆ. ದೇಶದ ಸರ್ವೋಚ್ಚ ನ್ಯಾಯಾಲಯವು ದೇಶದ ಪ್ರತಿಯೊಂದು ರಾಜ್ಯಗಳಲ್ಲೂ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ನಿಗದಿಸಿದ್ದ ಗಡುವು ಮುಗಿದಿದ್ದರೂ, ಇಂದಿನ ತನಕ ಇದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಪ್ರಯತ್ನಗಳು ವಿಫಲವಾಗುತ್ತಿವೆ. ಇದರಲ್ಲಿ ಸ್ಥಳೀಯರ ಅಸಹಕಾರವೇ ಇದಕ್ಕೆ ಪ್ರಮುಖ ಕಾರಣವೆನಿಸಿದೆ. 

ಸ್ವಚ್ಛತೆಗೆ ಆದ್ಯತೆ 

ಬಹುತೇಕ ಭಾರತೀಯರು ಮುಂಜಾನೆ ಎದ್ದೊಡನೆ ತಮ್ಮ ಮನೆಗಳ ಮೂಲೆಮೂಲೆಗಳನ್ನು ಗುಡಿಸಿದ ಬಳಿಕ ನೆಲವನ್ನು ಒರೆಸಿ ಸ್ವಚ್ಚಗೊಳಿಸುವ ಸಂಪ್ರದಾಯವನ್ನು  ಇಂದಿಗೂ  ತಪ್ಪದೇ ಪರಿಪಾಲಿಸುತ್ತಾರೆ. ಅಂತೆಯೇ ತಮ್ಮ ಮನೆಯ ಸುತ್ತಮುತ್ತಲ ಆವರಣವನ್ನು ಗುಡಿಸಿ ಚೊಕ್ಕಟವಾಗಿ ಇರಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಸಂಗ್ರಹಿತ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಬಗ್ಗೆ ಕಿಂಚಿತ್ ಕೂಡಾ ಚಿಂತಿಸುವುದಿಲ್ಲ. 

ಸಾಮಾನ್ಯವಾಗಿ ಪ್ರತಿಯೊಂದು ಮನೆಗಳಲ್ಲೂ ದಿನನಿತ್ಯ ಉತ್ಪನ್ನವಾಗುವ ಹಸಿ ಮತ್ತು ಇತರ ಒಣ ತ್ಯಾಜ್ಯಗಳನ್ನು ವಿಭಿನ್ನ ವಿಧಾನಗಳಿಂದ ವಿಲೇವಾರಿ ಮಾಡಬೇಕಾಗುತ್ತದೆ. ಹಸಿ ತ್ಯಾಜ್ಯಗಳನ್ನು ತಮ್ಮ ಆವರಣದಲ್ಲಿರುವ ಮರಗಳ ಬುಡಗಳಲ್ಲಿ ಅಥವಾ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸುವ ಗುಂಡಿಗಳಲ್ಲಿ ವಿಲೇವಾರಿ ಮಾಡಬಹುದಾಗಿದೆ. ಆದರೆ ಒಣ ತ್ಯಾಜ್ಯಗಳನ್ನು ಮೊದಲು ಪುನರ್ ಆವರ್ತನಗೊಳಿಸಬಲ್ಲ ಮತ್ತು ಪುನರ್ ಆವರ್ತನಗೊಳಿಸಲಾಗದ ತ್ಯಾಜ್ಯಗಳನ್ನಾಗಿ ಪ್ರತ್ಯೇಕಿಸಬೇಕಾಗುತ್ತದೆ. ಪುನರ್ ಬಳಸಬಹುದಾದ ಅಥವಾ ಪುನರ್ ಆವರ್ತನಗೊಳಿಸಬಹುದಾದ ಕಾಗದ, ರಟ್ಟು, ಪ್ಲಾಸ್ಟಿಕ್- ಗಾಜಿನ ಬಾಟಲಿ ಮತ್ತಿತರ ತ್ಯಾಜ್ಯಗಳನ್ನು, ಇವುಗಳನ್ನು ಖರೀದಿಸುವ ಕೇಂದ್ರಗಳಿಗೆ ಮಾರಾಟ ಮಾಡಬಹುದಾಗಿದೆ. ಆದರೆ ಪುನರ್ ಆವರ್ತನಗೊಳಿಸಲಾಗದ ತ್ಯಾಜ್ಯಗಳನ್ನು ಮಾತ್ರ " ಲ್ಯಾಂಡ್ ಫಿಲ್ ಸೈಟ್" ಗಳಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ. 

ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕಸದ ತೊಟ್ಟಿರಹಿತ ನಿರ್ಮಲ ನಗರಗಳನ್ನು ರೂಪಿಸಬೇಕಾದ ಹೊಣೆಗಾರಿಕೆಯನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗಿದೆ. ಅಂತೆಯೇ ತ್ಯಾಜ್ಯಗಳು ಉತ್ಪನ್ನವಾಗುವ ವಸತಿ- ವಾಣಿಜ್ಯ ಕಟ್ಟಡಗಳಿಂದ ಇವುಗಳನ್ನು ಸಂಗ್ರಹಿಸಿ, ಸುರಕ್ಷಿತವಾಗಿ ಸಾಗಿಸಿ, ಪ್ರತ್ಯೇಕಿಸಿದ ಬಳಿಕ ಪುನರ್ ಬಳಕೆ ಮಾಡಲಾಗದ ತ್ಯಾಜ್ಯಗಳನ್ನು ಮಾತ್ರ ಲ್ಯಾಂಡ್ ಫಿಲ್ ಸೈಟ್ ಗಳಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ. ಆದರೆ ಅನೇಕ ನಗರ- ಪಟ್ಟಣಗಳಲ್ಲಿ ಈ ವ್ಯವಸ್ಥೆಯು ಸಮರ್ಪಕವಾಗಿ ನಡೆಯುತ್ತಿಲ್ಲ. ಅಂತೆಯೇ ನಾವಿಂದು ಅನಾವಶ್ಯಕವಾಗಿ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವೂ ಕಡಿಮೆಯಾಗುತ್ತಿಲ್ಲ. ಏಕೆಂದರೆ ಒಂದು ಬಾರಿ ಬಳಸಿ ಎಸೆಯುವ ವಸ್ತುಗಳನ್ನು ಉಪಯೋಗಿಸುವ ಹವ್ಯಾಸ ಭಾರತೀಯರಲ್ಲಿ ಹೆಚ್ಚುತ್ತಿರುವುದು ಇದಕ್ಕೊಂದು ಪ್ರಮುಖ ಕಾರಣವೆನಿಸಿದೆ. 

ಇವೆಲ್ಲಕ್ಕೂ ಮಿಗಿಲಾಗಿ ತಮ್ಮ ವಸತಿ- ವಾಣಿಜ್ಯ ಕಟ್ಟಡಗಳಲ್ಲಿ  ಉತ್ಪನ್ನವಾಗುವ ವೈವಿಧ್ಯಮಯ ತ್ಯಾಜ್ಯಗಳನ್ನು ಮಳೆನೀರು ಹರಿವ ಚರಂಡಿಗಳು ಅಥವಾ ಯಾವುದೇ ಖಾಲಿ ಜಾಗಗಳಲ್ಲಿ ಎಸೆಯುವ ಕೆಟ್ಟ ಹವ್ಯಾಸವು ದಿನೇದಿನೇ ಹೆಚ್ಚುತ್ತಿರುವುದು, ಸ್ಥಳೀಯ ಸಂಸ್ಥೆಗಳಿಗೆ ಇನ್ನಷ್ಟು ಸಮಸ್ಯೆಗಳಿಗೆ ಕಾರಣವೆನಿಸುತ್ತಿದೆ. ಮನೆಮನೆಗಳಿಂದ ತ್ಯಾಜ್ಯಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಲು ಬೇಕಾದಷ್ಟು ಸಿಬಂದಿ ಅಥವಾ ಸ್ವಸಹಾಯ ಗುಂಪುಗಳ ಕಾರ್ಯಕರ್ತರು ಸಿಗದೇ ಇರುವಾಗ, ಚರಂಡಿಗಳಲ್ಲಿ ಎಸೆದ ತ್ಯಾಜ್ಯಗಳನ್ನು ತೆಗೆಯುವುದಾದರೂ ಹೇಗೆಂದು ಜನಸಾಮಾನ್ಯರು ಚಿಂತಿಸುವುದಿಲ್ಲ. ಕೇವಲ ತ್ಯಾಜ್ಯ ಸಂಗ್ರಹಕ್ಕಾಗಿ ವಿಧಿಸುವ ಶುಲ್ಕವನ್ನು ಉಳಿಸುವ ಸಲುವಾಗಿ ಇಂತಹ ಸಮಸ್ಯೆಗಳನ್ನು ಹುಟ್ಟುಹಾಕುವ ಜನರು, ಇದರಿಂದ ಮುಂದೆ ಸಂಭವಿಸಬಲ್ಲ ಗಂಭೀರ ದುಷ್ಪರಿಣಾಮಗಳ ಬಗ್ಗೆ ಚಿಂತಿಸುವ ಸಾಧ್ಯತೆಗಳೇ ಇಲ್ಲ. 

ನಿಜ ಹೇಳಬೇಕಿದ್ದಲ್ಲಿ ಈಗಾಗಲೇ ನಾವು ಅನುಭವಿಸುತ್ತಿರುವ ಜಾಗತಿಕ ತಾಪಮಾನದ ಹೆಚ್ಚಳ, ಹವಾಮಾನದ ವ್ಯತ್ಯಯದ ಪರಿಣಾಮವಾಗಿ ತಲೆದೋರುತ್ತಿರುವ ಅತಿವೃಷ್ಟಿ- ಅನಾವೃಷ್ಟಿ, ಸಾಂಕ್ರಾಮಿಕ ವ್ಯಾಧಿಗಳ ಬಾಧೆ ಮತ್ತು ಮಾರಕತೆಗಳೇ ಮುಂತಾದ ಸಮಸ್ಯೆಗಳಿಗೆ, ನಾವಿಂದು ಉತ್ಪಾದಿಸುತ್ತಿರುವ ಅತಿಯಾದ ತ್ಯಾಜ್ಯಗಳು ಮತ್ತು ಇವುಗಳ ಅವೈಜ್ಞಾನಿಕ ವಿಲೇವಾರಿಗಳೂ ಕಾರಣವಾಗಿವೆ. ಈ ಸಮಸ್ಯೆಯು ನಮ್ಮ ಮುಂದಿನ ಸಂತತಿಯನ್ನು ಶಾಪದೋಪಾದಿಯಲ್ಲಿ ಕಾಡಲಿದೆ. ಈ ಸತ್ಯವನ್ನು ಅರ್ಥೈಸಿಕೊಂಡು, ಸ್ಥಳೀಯ ಸಂಸ್ಥೆಗಳೊಂದಿಗೆ ಸಹಕರಿಸುವ ಮೂಲಕ ತ್ಯಾಜ್ಯಗಳ ಉತ್ಪಾದನೆಯನ್ನು ಕಡಿಮೆ ಮಾಡುವುದರೊಂದಿಗೆ, ಇವುಗಳ ವೈಜ್ಞಾನಿಕ ವಿಲೇವಾರಿಯಲ್ಲಿ ಸ ಭಾಗಿಯಾಗುವುದು ನಮ್ಮನಿಮ್ಮೆಲ್ಲರ  ಹಿತದೃಷ್ಟಿಯಿಂದ ಆರೋಗ್ಯಕರ ಎನ್ನುವುದನ್ನು ಮರೆಯದಿರಿ. 

ಕೊನೆಯ ಮಾತು 

ಘನತ್ಯಾಜ್ಯ ನಿರ್ವಹಣೆಯ ಯಶಸ್ಸಿಗಾಗಿ ಶ್ರಮಿಸುತ್ತಿರುವ ಸ್ಥಳೀಯ ಸಂಸ್ಥೆಗಳ ಸಿಬಂದಿಗಳೊಂದಿಗೆ ಸಹಕರಿಸುವ ಮೂಲಕ ಮತ್ತು ನಮ್ಮಲ್ಲಿ ಉತ್ಪನ್ನವಾಗುತ್ತಿರುವ ತ್ಯಾಜ್ಯಗಳ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆಮಾಡುವ ಮೂಲಕ, ನಿಮ್ಮ ಊರನ್ನು ನಿಶ್ಚಿತವಾಗಿಯೂ "ನಿರ್ಮಲ ನಗರ" ವನ್ನಾಗಿಸುವುದು ಸುಲಭಸಾಧ್ಯ ಎನ್ನುವುದನ್ನು ಮರೆಯದಿರಿ. ಜೊತೆಗೆ ನಮ್ಮ ನಿಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಇದು ಅನಿವಾರ್ಯವೂ ಹೌದು. 

ಡಾ. ಸಿ. ನಿತ್ಯಾನಂದ ಪೈ,ಪುತ್ತೂರು