Wednesday, April 22, 2015

ORGANISERS TO CLEAN THE VENUE !





ಸ್ವಚ್ಛತೆ - ತ್ಯಾಜ್ಯ ವಿಲೇವಾರಿ : ಸಂಘಟಕರ ಜವಾಬ್ದಾರಿ

ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಇದೀಗ ಹೊರಡಿಸಿರುವ ಆದೇಶದಂತೆ, ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳು ಜರಗಿದ  ಸ್ಥಳವನ್ನು ಸ್ವಚ್ಛಗೊಳಿಸುವ ಹಾಗೂ ಸಂಗ್ರಹಿತ ತ್ಯಾಜ್ಯಗಳನ್ನು ತ್ಯಾಜ್ಯವಿಲೇವಾರಿ ಘಟಕಗಳಿಗೆ ಸಾಗಿಸುವ ಜವಾಬ್ದಾರಿಯನ್ನು ಸಂಘಟಕರೇ ವಹಿಸಿಕೊಳ್ಳಬೇಕಾಗಿದೆ.ಸ್ವಚ್ಛ ಭಾರತ ಅಭಿಯಾನವನ್ನು ಇನ್ನಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಈ ಆದೇಶವನ್ನು ಹೊರಡಿಸಿದ್ದು, ಇದು ತತ್ ಕ್ಷಣದಿಂದಲೇ ಜಾರಿಗೆ ಬರಲಿದೆ.

ಸ್ಥಳೀಯ ಸಂಸ್ಥೆಗಳ ಹೊಣೆ

ಸ್ಥಳೀಯ ಸಂಸ್ಥೆಗಳು ಈ ಆದೇಶವನ್ನು ಅನುಷ್ಠಾನಗೊಳಿಸಬೇಕಾಗಿದ್ದು, ದೇಶದ ಪ್ರತಿಯೊಂದು ರಾಜ್ಯಗಳಿಗೂ ಈ ಬಗ್ಗೆ ಅವಶ್ಯಕ ಮಾಹಿತಿಯನ್ನು ಕಳುಹಿಸಲಾಗಿದೆ. ನೂತನ ನಿಯಮಗಳಂತೆ ಯಾವುದೇ ಕಾರ್ಯಕ್ರಮದ ಸಂಘಟಕರು ಸ್ವಚ್ಛತೆಯನ್ನು ಪರಿಪಾಲಿಸುವ ಬಗ್ಗೆ ಲಿಖಿತ ಒಪ್ಪಿಗೆಯನ್ನು ಮತ್ತು ನಿಗದಿತ ಭದ್ರತಾ ಮೊತ್ತವನ್ನು ಸ್ಥಳೀಯ ಸಂಸ್ಥೆಗಳಿಗೆ ಡಿಮಾಂಡ್ ಡ್ರಾಫ್ಟ್ ರೂಪದಲ್ಲಿ ನೀಡಲೇಬೇಕು. ಕಾರ್ಯಕ್ರಮದಲ್ಲಿ ೫೦೦ ಕ್ಕೂ ಕಡಿಮೆ ಜನರು ಸೇರುವುದಾದಲ್ಲಿ ೧೦,೦೦೦ ರೂ, ೫೦,೦೦೦ ಜನರು ಸೇರುವುದಾದಲ್ಲಿ ೫೦,೦೦೦ ಸಾವಿರ ರೂ, ಮತ್ತು ೫೦,೦೦೦ ಕ್ಕೂ ಅಧಿಕ ಜನರು ಸೇರುವುದಾದಲ್ಲಿ ೧,೦೦,೦೦೦ ರೂ, ಗಳನ್ನು ಭದ್ರತಾ ಮೊತ್ತದ ರೂಪದಲ್ಲಿ ನೀಡಬೇಕಾಗುವುದು.

ಸಂಘಟಕರ ಜವಾಬ್ದಾರಿ

 ಸಂಘಟಕರು  ಕಾರ್ಯಕ್ರಮ ಜರಗಿದ ಸ್ಥಳವನ್ನು ಸ್ವಚ್ಛಗೊಳಿಸಲು ವಿಫಲರಾದಲ್ಲಿ, ಸ್ಥಳೀಯ ಸಂಸ್ಥೆಗಳು ಭದ್ರತಾ ಮೊತ್ತವನ್ನು ಬಳಸಿ ಸ್ಥಳದಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಬೇಕಾಗುತ್ತದೆ. ಯಾವುದೇ ಕಾರ್ಯಕ್ರಮಗಳ ಸಂಘಟಕರು ಭದ್ರತಾ ಮೊತ್ತವನ್ನು ತೆರದಿದ್ದಲ್ಲಿ, ಕಾರ್ಯಕ್ರಮವನ್ನು ನಡೆಸಲು ಅನುಮತಿಯನ್ನು ನಿರಾಕರಿಸಲಾಗುತ್ತದೆ. ಅರ್ಥಾತ್, ಭದ್ರತಾ ಮೊತ್ತವನ್ನು ಪಾವತಿಸದೇ ಇದ್ದಲ್ಲಿ ಕಾರ್ಯಕ್ರಮಕ್ಕೆ ಅನುಮತಿಯನ್ನು ನೀಡುವಂತಿಲ್ಲ.

ಇಷ್ಟು ಮಾತ್ರವಲ್ಲ, ಕಾರ್ಯಕ್ರಮ ಜರಗುವ ಸ್ಥಳದಲ್ಲಿ ಅವಶ್ಯಕ ಸಂಖ್ಯೆಯ ಕಸದ ತೊಟ್ಟಿಗಳೊಂದಿಗೆ, ತ್ಯಾಜ್ಯ ಸಂಗ್ರಹಕ್ಕಾಗಿ ಅವಶ್ಯಕ ಸಂಖ್ಯೆಯ ಸಿಬಂದಿಗಳನ್ನೂ ಸಂಘಟಕರೇ ನಿಯೋಜಿಸಬೇಕಾಗುತ್ತದೆ. ಅಂತೆಯೇ ಕಾರ್ಯಕ್ರಮ ಮುಗಿದೊಡನೆ ಸಂಗ್ರಹಿತ ತ್ಯಾಜ್ಯಗಳನ್ನು ಸ್ಥಳೀಯ ಸಂಸ್ಥೆಗಳು ನಿಗದಿಸಿರುವ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸಾಗಿಸಬೇಕಾಗುವುದು.

ಇದರೊಂದಿಗೆ ಸಂಘಟಕರು ಕಾರ್ಯಕ್ರಮ ನಡೆದಿರುವ ಸ್ಥಳವನ್ನು ಮುಂದಿನ ೬ ಗಂಟೆಗಳಲ್ಲಿ ಸ್ವಚ್ಛಗೊಳಿಸಿ, ಜಾಗದ ಮಾಲೀಕರಿಗೆ ಒಪ್ಪಿಸಬೇಕಾಗುವುದು. ಕಾರ್ಯಕ್ರಮದ ಸಂಘಟಕರು ಈ ನಿಯಮಗಳನ್ನು ಕ್ರಮಬದ್ಧವಾಗಿ ಪರಿಪಾಲಿಸಿದಲ್ಲಿ, ಅವರು ನೀಡಿದ್ದ ಭದ್ರತಾ ಮೊತ್ತವನ್ನು ಸ್ಥಳೀಯ ಸಂಸ್ಥೆಗಳು ೩ ದಿನಗಳ ಒಳಗಾಗಿ ಮರಳಿಸಬೇಕಾಗುತ್ತದೆ. ಸಂಘಟಕರು ಸಮರ್ಪಕವಾಗಿ ಸ್ಥಳವನ್ನು ಸ್ವಚ್ಚಗೊಳಿಸದೆ ಇದ್ದಲ್ಲಿ, ಸ್ಥಳೀಯ ಸಂಸ್ಥೆಗಳು ಭದ್ರತಾ ಮೊತ್ತವನ್ನು ಬಳಸಿ ಸ್ಥಳವನ್ನು ಸಮರ್ಪಕವಾಗಿ ಸ್ವಚ್ಛಗೊಳಿಸಿದ ಬಳಿಕ ಉಳಿದ ಹಣವನ್ನು ಮರಳಿಸಬೇಕಾಗುತ್ತದೆ.  

ಅನುಷ್ಠಾನದಲ್ಲಿ ಪಾರದರ್ಶಕತೆಯಿರಲಿ

ಪ್ರಸ್ತುತ ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಹೊರಡಿಸಿರುವ ನೂತನ ಆದೇಶವನ್ನು ಕಟ್ಟುನಿಟ್ಟಾಗಿ ಮತ್ತು ಪಾರದರ್ಶಕವಾಗಿ ಅನುಷ್ಠಾನಗೊಳಿಸಬೇಕಾದ ಹೊಣೆಗಾರಿಕೆ ಸ್ಥಳೀಯ ಸಂಸ್ಥೆಗಳ ಮೇಲಿದೆ. ಅದರಲ್ಲೂ ನಮ್ಮ ದೇಶದ ಪ್ರತಿಯೊಂದು ರಾಜ್ಯದಲ್ಲಿ ಜರಗುವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಪಕ್ಷಗಳ ಮತ್ತು ಧಾರ್ಮಿಕ ಕಾರ್ಯಕ್ರಮಗಳೇ ಹೆಚ್ಚಾಗಿವೆ. ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಸಂಘಟನೆಗಳು ಇಂತಹ ನಿಯಮಗಳನ್ನು ಪರಿಪಾಲಿಸುವುದಿಲ್ಲ. ಜೊತೆಗೆ ತಮ್ಮ ಪ್ರಭಾವವನ್ನು ಬಳಸುವ ಮೂಲಕ ಅಸ್ತಿತ್ವದಲ್ಲಿರುವ ನಿಯಮಗಳನ್ನು ಉಲ್ಲಂಘಿಸಲು ಹಿಂಜರಿಯುವುದೇ ಇಲ್ಲ. ತತ್ಪರಿಣಾಮವಾಗಿ " ಯಥಾ ರಾಜಾ, ತಥಾ ಪ್ರಜಾ " ಎನ್ನುವ ಮಾತಿನಂತೆ, ದೇಶದ ಪ್ರಜೆಗಳೂ ಇಂತಹ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಆಶ್ಚರ್ಯವೇನಿಲ್ಲ. ಇದೇ ಕಾರಣದಿಂದಾಗಿ ನೂತನ ನಿಯಮವನ್ನು ನಿರ್ದಾಕ್ಷಿಣ್ಯವಾಗಿ ಅನುಷ್ಠಾನಗೊಳಿಸಲೇ ಬೇಕಾಗಿದೆ. ಇದಕ್ಕೆ ತಪ್ಪಿದಲ್ಲಿ ಸ್ವಚ್ಚ ಭಾರತ ಅಭಿಯಾನವು ನಿಸ್ಸಂದೇಹವಾಗಿ ವಿಫಲವಾಗಲಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು  



Friday, April 17, 2015





ಪುತ್ತೂರು:  ಜಾತ್ರೆಯ ಗದ್ದೆಯಲ್ಲಿ ತ್ಯಾಜ್ಯಗಳ ಸಾಮ್ರಾಜ್ಯ!

ಮುತ್ತು ಬೆಳೆಯುತ್ತಿದ್ದ ಊರೆಂದೇ ಖ್ಯಾತಿವೆತ್ತ ಪುತ್ತೂರಿನ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯು, ಈ ಬಾರಿ ಎಂದಿಗಿಂತಲೂ ವೈಭವೋಪೇತವಾಗಿ ಜರಗಿದೆ. ಅಂತೆಯೇ ಜಾತ್ರೆಯಂದು ಉಪಸ್ಥಿತರಿರುವ ಭಕ್ತಾದಿಗಳ ಸಂಖ್ಯೆಯೂ ವರ್ಷಂಪ್ರತಿ ಹೆಚ್ಚುತ್ತಿದೆ. ತಮ್ಮ ಆರಾಧ್ಯದೈವದ ಜಾತ್ರೆಯನ್ನು ಕಣ್ಣಾರೆ ಕಂಡು, ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾಗುವ ಭಕ್ತರು, ದೇವಳದ ರಥಬೀದಿ ಮತ್ತು ಇದರ ಇಕ್ಕೆಲಗಳಲ್ಲಿ ಎಸೆದಿರುವ ತ್ಯಾಜ್ಯಗಳ ರಾಶಿಯನ್ನು ಕಂಡಾಗ ಮಾತ್ರ ದಿಗ್ಭ್ರಮೆಯಾಗುತ್ತದೆ.

ಸ್ವಚ್ಛತೆಗೆ ಆದ್ಯತೆ

ಸಾಮಾನ್ಯವಾಗಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಸೂತಕ, ಸ್ವಚ್ಛತೆ ಮತ್ತು ಮಡಿಮೈಲಿಗೆಗಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಲಾಗುತ್ತದೆ. ಸಾಮಾನ್ಯವಾಗಿ ದೇವಳಕ್ಕೆ ಭೇಟಿ ನೀಡುವ ಜನರು ಸ್ನಾನವನ್ನು ಮಾಡಿ ಶುಚಿರ್ಭೂತರಾಗಿ ತೆರಳುವುದು ಸಂಪ್ರದಾಯ. ಅದೇ ರೀತಿಯಲ್ಲಿ ದೇವಳದ ಆವರಣದಲ್ಲಿ ಸದ್ದುಗದ್ದಲಗಳನ್ನು ಮಾಡದೇ, ಸ್ವಚ್ಛತೆಯನ್ನು ಕಾಪಾಡುವ ಹವ್ಯಾಸ ಭಕ್ತರಲ್ಲಿದೆ. ಆದರೆ ಸಹಸ್ರಾರು ಜನರು ಸೇರುವಂತಹ ಜಾತ್ರೆಯ ಸಂದರ್ಭದಲ್ಲಿ ಮಾತ್ರ ಇವೆಲ್ಲವನ್ನೂ ನಿರ್ಲಕ್ಷಿಸುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ.

ಗದ್ದೆಯಲ್ಲಿ ತ್ಯಾಜ್ಯಗಳು

ಪುತ್ತೂರು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವ ಬ್ರಹ್ಮರಥೋತ್ಸವದಂದು ಅತ್ಯಧಿಕ ಸಂಖ್ಯೆಯ ಭಕ್ತರು ಕುಟುಂಬ ಸಹಿತ ಹಾಜರಾಗುತ್ತಾರೆ. ಸಂಜೆ ದೇವಳದ ಗದ್ದೆಗೆ ಹೋಗುವ ಮುನ್ನ ತಮಗೆ ಬೇಕಾಗುವ ಕುಡಿಯುವ ನೀರು, ಒಂದಿಷ್ಟು ಖಾದ್ಯಪದಾರ್ಥಗಳು ಮತ್ತು ಹಣ್ಣುಹಂಪಲುಗಳೊಂದಿಗೆ, ಹಳೆಯ ವೃತ್ತ ಪತ್ರಿಕೆಗಳನ್ನು ಕೊಂಡೊಯ್ಯುತ್ತಾರೆ. ಜಾತ್ರೆಯ ಗದ್ದೆಯಲಲ್ಲಿ ಸುತ್ತಾಡಿದ ಬಳಿಕ, ಆಯಕಟ್ಟಿನ ಜಾಗದಲ್ಲಿ ವೃತ್ತಪತ್ರಿಕೆಯನ್ನು ಹರಡಿ ಕುಳಿತುಕೊಳ್ಳುತ್ತಾರೆ. ತಾವು ತಂದಿರುವ ಖಾದ್ಯಪೇಯಗಳಲ್ಲದೇ, ಸ್ಥಳದಲ್ಲಿ ದೊರೆಯುವ ಇತರ ಖಾದ್ಯಪೇಯಗಳನ್ನು ಖರೀದಿಸಿ ಸೇವಿಸುತ್ತಾರೆ. ಬಳಿಕ ಉಳಿಯುವ ಸಕಲವಿಧದತ್ಯಾಜ್ಯಗಳನ್ನು ಅಲ್ಲೇ ಎಸೆದುಬಿಡುತ್ತಾರೆ!.

ಈ ತ್ಯಾಜ್ಯಗಳಲ್ಲಿ ವೃತ್ತಪತ್ರಿಕೆಗಳು, ಖಾದ್ಯಗಳನ್ನು ತರಲು ಬಳಸಿದ ಪ್ಲಾಸ್ಟಿಕ್ ಕೈಚೀಲಗಳು, ಪೇಯ ಅಥವಾ ಕುಡಿಯುವ ನೀರನ್ನು ತರಲು ಬಳಸಿದ ಪ್ಲಾಸ್ಟಿಕ್ ಬಾಟಲಿಗಳು, ಖಾಲಿ ಐಸ್ ಕ್ರೀಮ್ ಕಪ್ - ಚಮಚಗಳು, ತಂಪುಪಾನೀಯಗಳ ಪ್ಲಾಸ್ಟಿಕ್ ಲೋಟಗಳು, ಅನ್ಯ ಖಾದ್ಯಗಳ ತಟ್ಟೆಗಳು, ಚುರುಮುರಿ ಮತ್ತಿತರ ಖಾದ್ಯಗಳ ಖಾಲಿ ಲಕೋಟೆ ಇತ್ಯಾದಿ ತ್ಯಾಜ್ಯಗಳು ಪ್ರಮುಖವಾಗಿವೆ. ಆದರೆ ಈ ಬಾರಿ ಜಾತ್ರೆಯ ಗದ್ದೆಯಲ್ಲಿ ಎಸೆದಿರುವ ತ್ಯಾಜ್ಯಗಳಲ್ಲಿ ಖಾಲಿ ಪ್ಲಾಸ್ಟಿಕ್ ಬಾಟಲಿಗಳಿಗೆ ಸಿಂಹಪಾಲು ಸಲ್ಲುತ್ತದೆ.( ಜಾತ್ರೆಯ ಮರುದಿನ ಬೆಳಗ್ಗೆ ಸ್ಥಳವೀಕ್ಷಣೆ ಮಾಡಿದಾಗ, ಸಹಸ್ರಾರು ಬಾಟಲಿಗಳನ್ನು ಕಂಡು ನಮಗೂ ಅಚ್ಚರಿಯಾಗಿತ್ತು.)ತದನಂತರದ ಸ್ಥಾನ ವೃತ್ತಪತ್ರಿಕೆಗಳಿಗೆ ಸಲ್ಲುತ್ತದೆ. ಸಹಸ್ರಾರು ಜನರು ಎಸೆದಿರುವ ವೈವಿಧ್ಯಮಯ  ತ್ಯಾಜ್ಯಗಳ ಪ್ರಮಾಣವೂ ಅತಿಯಾಗಿದ್ದು, ಇದನ್ನು ಸಂಗ್ರಹಿಸಿ, ವಾಹನಗಳಲ್ಲಿ ತುಂಬಿಸಿ, ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಿ ವಿಲೇವಾರಿ ಮಾಡಲು, ಪೌರಕಾರ್ಮಿಕರು ಹರಸಾಹಸವನ್ನೇ ನಡೆಸಬೇಕಾಗುತ್ತದೆ. ವಿಶೇಷವಾಗಿ ಎಪ್ರಿಲ್ ೧೮ ಮತ್ತು ೧೯ ರಂದು ಮುಂಜಾನೆ ಪೌರಕಾರ್ಮಿಕರ ದಂಡು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಅಂದು ಸಂಗ್ರಹವಾಗುವ ಬೃಹತ್ ಪ್ರಮಾಣದ ತ್ಯಾಜ್ಯಗಳ ರಾಶಿಗಳನ್ನು ಕಂಡಾಗ, ನಿಜಕ್ಕೂ ಗಾಬರಿಯಾಗುತ್ತದೆ.

ಕಡಿಮೆಮಾಡುವುದೆಂತು?

ನಿಜ ಹೇಳಬೇಕಿದ್ದಲ್ಲಿ ಈ ತ್ಯಾಜ್ಯಗಳ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಲ್ಲ ಸುಲಭೋಪಾಯವೊಂದು ಇಂತಿದೆ. ಜಾತ್ರೆಯ ಗದ್ದೆಗೆ ಬರುವಾಗ ತಾವು ತಂದಿದ್ದ ಪ್ರತಿಯೊಂದು ವಸ್ತುಗಳನ್ನು ಹಾಕಿದ್ದ ಕೈಚೀಲದಲ್ಲೇ, ತಾವು ಉತ್ಪಾದಿಸಿದ್ದ ತ್ಯಾಜ್ಯಗಳನ್ನು ತುಂಬಿಸಿ ಮನೆಗೆ ಕೊಂಡೊಯ್ಯುವುದೇ ಅತ್ಯಂತ ಸುಲಭದ ಮತ್ತು ಪರಿಣಾಮಕಾರಿ ವಿಧಾನವಾಗಿದೆ. ಆದರೆ ಇದನ್ನು ಮಾಡಬಲ್ಲ ಇಚ್ಛಾಶಕ್ತಿಯ ಕೊರತೆ ನಮ್ಮಲ್ಲಿರುವುದರಿಂದ, ಜಾತ್ರೆಯ ಗದ್ದೆಯು ಸಂಪೂರ್ಣವಾಗಿ ತ್ಯಾಜ್ಯಗಳಿಂದ ತುಂಬಿ, ತ್ಯಾಜ್ಯ ವಿಲೇವಾರಿ ಘಟಕದಂತೆ ಕಾಣುತ್ತದೆ. ಹಾಗೂ ಇದೇ ಕಾರಣದಿಂದಾಗಿ ದೇವಳದ ಸುತ್ತಮುತ್ತಲ ಪರಿಸರದ ನೈರ್ಮಲ್ಯಕ್ಕೆ ಧಕ್ಕೆಯಾಗುವುದರೊಂದಿಗೆ, ಅಯಾಚಿತ ಸಮಸ್ಯೆಗಳಿಗೂ ಕಾರಣವೆನಿಸುತ್ತಿದೆ. " ಮನಸ್ಸಿದ್ದಲ್ಲಿ ಮಾರ್ಗ " ಎನ್ನುವ ಮಾತಿನಂತೆ, ಮುಂದಿನ ವರ್ಷದ ಜಾತ್ರೆಯ ಸಂದರ್ಭದಲ್ಲಾದರೂ, ದೇವಳದ ಗದ್ದೆಯಲ್ಲಿ ತ್ಯಾಜ್ಯಗಳನ್ನು ಎಸೆಯುವ ಕೆಟ್ಟ ಹವ್ಯಾಸವನ್ನು ಭಕ್ತಾದಿಗಳು ತೊರೆದಲ್ಲಿ, ಶ್ರೀ ದೇವಳದ ಆವರಣವು ಸ್ವಚ್ಛ ಮತ್ತು ನಿರ್ಮಲವಾಗಿ ಕಂಗೊಳಿಸುವುದರಲ್ಲಿ  ಸಂದೇಹವಿಲ್ಲ.

ಕೊನೆಯ ಮಾತು

ಅದೇನೇ ಇರಲಿ, ದೇಶದ ಪ್ರಧಾನಿ ಮೋದಿಯವರು ಗತವರ್ಷದ ಅಕ್ಟೋಬರ್ ನಲ್ಲಿ ಉದ್ಘಾಟಿಸಿದ್ದ " ಸ್ವಚ್ಛ ಭಾರತ ಅಭಿಯಾನ " ದ ಅಂಗವಾಗಿ ಮತ್ತು ನಮ್ಮಸುತ್ತಮುತ್ತಲ ಪರಿಸರ ಹಾಗೂ ನಮ್ಮ ನಿಮ್ಮೆಲ್ಲರ  ಆರೋಗ್ಯದ ರಕ್ಷಣೆಯ ಸಲುವಾಗಿಯಾದರೂ, ನಾವಿಂದು ಅತಿಯಾಗಿ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆಮಾಡಬೇಕಾಗಿದೆ. ಅಂತೆಯೇ ಅಸ್ವಚ್ಛ ಭಾರತವು ನಿಸ್ಸಂದೇಹವಾಗಿಯೂ, ಅಸ್ವಸ್ಥ ಭಾರತವಾಗಿ ಬದಲಾಗುವುದು ಎನ್ನುವುದು ನೆನಪಿರಲಿ. ಅಂತಿಮವಾಗಿ ನಮ್ಮ ಮುಂದಿನ ಸಂತತಿಯ ಹಿತದೃಷ್ಟಿಯಿಂದ ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿರಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎನ್ನುವುದನ್ನು ಮರೆಯದಿರಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು.



Tuesday, April 7, 2015

SAFE FOOD IS ALWAYS GOOD

ಸುರಕ್ಷಿತ ಆಹಾರ ಸೇವನೆ : ವಿಶ್ವ ಆರೋಗ್ಯ ಸಂಸ್ಥೆಯ ಅಭಿಯಾನ

ವರ್ಷಂಪ್ರತಿ ಎಪ್ರಿಲ್ ತಿಂಗಳಿನ ಏಳನೇ ತಾರೀಕಿನಂದು ಪ್ರಪಂಚದ ಪ್ರತಿಯೊಂದು ರಾಷ್ಟ್ರಗಳಲ್ಲಿ “ ವಿಶ್ವ ಆರೋಗ್ಯ ದಿನ “ ವನ್ನು ಆಚರಿಸಲಾಗುತ್ತದೆ. ಈ ಬಾರಿ ವಿಶ್ವ ಆರೋಗ್ಯ ಸಂಸ್ಥೆಯು ಸ್ವಚ್ಛತೆ ಮತ್ತು ಆರೋಗ್ಯಗಳ ಬಗ್ಗೆ ಅರಿವನ್ನು ಮೂಡಿಸುವ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಇದರಲ್ಲಿ ನಾವು ಸೇವಿಸುವ ವೈವಿಧ್ಯಮಯ ಅಹಾರಪದಾರ್ಥಗಳು,ಮೊಟ್ಟೆ, ಮೀನು, ಮಾಂಸ, ಸೊಪ್ಪು ತರಕಾರಿ ಮತ್ತು ಹಣ್ಣು ಹಂಪಲುಗಳ ಸೇವನೆಯ ವಿಚಾರದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ನಾವಿಂದು ಉಸಿರಾಡುವ ಗಾಳಿ, ಕುಡಿಯುವ ನೀರು ಮತ್ತು ಸೇವಿಸುವ ವೈವಿಧ್ಯಮಯ ಆಹಾರಪದಾರ್ಥಗಳು ಕಲುಷಿತವಾಗಿರುವುದು ನಿಮಗೂ ತಿಳಿದಿರಬೇಕು. ತತ್ಪರಿಣಾಮವಾಗಿ ಅನೇಕ ವಿಧದ ಆರೋಗ್ಯದ ಸಮಸ್ಯೆಗಳು ಉದ್ಭವಿಸುತ್ತಿರುವುದರ ವಿಚಾರವೂ ತಿಳಿದಿರಲೇಬೇಕು. ಪ್ರಸ್ತುತ ಕಲುಷಿತ ಹಾಗೂ ಅಸುರಕ್ಷಿತ ಆಹಾರ ಸೇವನೆಯ ಅಪಾಯಗಳ ಬಗ್ಗೆ ಮತ್ತು ಸುರಕ್ಷಿತ ಆಹಾರಪದಾರ್ಥಗಳ ಸೇವನೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಅಭಿಯಾನವೊಂದನ್ನು ಆರಂಭಿಸಿದೆ. ತನ್ಮೂಲಕ ಇದರಿಂದ ಉದ್ಭವಿಸಬಲ್ಲ ಅನೇಕ ವಿಧದ “ ಆಹಾರ ಜನ್ಯ “ ಆರೋಗ್ಯದ ಸಮಸ್ಯೆಗಳನ್ನು ತಡೆಗಟ್ಟಲು ಉದ್ದೇಶಿಸಿದೆ. ಈ ಅಭಿಯಾನದಲ್ಲಿ ವಿಶೇಷವಾಗಿ ದೇಶದ ಕೃಷಿಕರು ಮತ್ತು ವಿದ್ಯಾವಂತರು ಕೈಜೋಡಿಸಿದಲ್ಲಿ, ಅಪೇಕ್ಷಿತ ಪರಿಣಾಮ ದೊರೆಯುವುದರಲ್ಲಿ ಸಂದೇಹವಿಲ್ಲ.

ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳು

ನಾವಿಂದು ಸೇವಿಸುತ್ತಿರುವ ಅಧಿಕತಮ ಆಹಾರಧಾನ್ಯಗಳು, ಹಣ್ಣುಹಂಪಲುಗಳು ಮತ್ತು ತರಕಾರಿಗಳನ್ನು ಬೆಳೆಯುವಾಗ ಗಣನೀಯ ಪ್ರಮಾಣದ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಬಳಸಲಾಗುತ್ತಿದೆ. ರೈತರು ತಾವು ಬೆಳೆಯುವ ಬೆಳೆಗಳ ಫಸಲು ಹೆಚ್ಚಲು ಮತ್ತು ಇವುಗಳನ್ನು ನಾಶಪಡಿಸಬಲ್ಲ ಕೀಟಗಳ ಹಾವಳಿಯನ್ನು ತಡೆಗಟ್ಟಲು ಹೇರಳವಾಗಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುತ್ತಾರೆ. ಇವುಗಳ ಅತಿಯಾದ ಹಾಗೂ ಅವೈಜ್ಞಾನಿಕ ಬಳಕೆಯಿಂದಾಗಿ, ಇಂತಹ ಆಹಾರಪದಾರ್ಥಗಳನ್ನು ಸೇವಿಸುವ ಜನರಲ್ಲಿ ಅನೇಕ ವಿಧದ ಆರೋಗ್ಯದ ಸಮಸ್ಯೆಗಳು ತಲೆದೋರುತ್ತವೆ. ಅದರಲ್ಲೂ ಅತ್ಯಂತ ಅಪಾಯಕಾರಿ ಎನಿಸಬಲ್ಲ ಕೆಲ ಕೀಟನಾಶಕಗಳ ಬಳಕೆಯಿಂದ ಮಾರಕ ಕ್ಯಾನ್ಸರ್ ನಂತಹ ಕಾಯಿಲೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗೇರು ಅಭಿವೃದ್ಧಿ ಮಂಡಳಿಗಳು ಕೆಲ ದಶಕಗಳ ಹಿಂದೆ ವೈಮಾನಿಕವಾಗಿ ಸಿಂಪಡಿಸಿದ್ದ ಎಂಡೋಸಲ್ಫಾನ್ ಕೀಟನಾಶಕದ ದೀರ್ಘಕಾಲೀನ ದುಷ್ಪರಿಣಾಮದಿಂದ ಬಳಲುತ್ತಿರುವ ಸಹಸ್ರಾರು ಜನರು, ಇಂದಿಗೂ ಇದಕ್ಕೆ ಜೀವಂತ ಸಾಕ್ಷಿಗಳಾಗಿದ್ದಾರೆ.

ಭಾರತದಲ್ಲಿ ಸುಮಾರು ೧೯೭ ವಿಧದ ಕೀಟನಾಶಕಗಳು ಲಭ್ಯವಿದ್ದು, ಇವುಗಳಲ್ಲಿ ಕನಿಷ್ಠ ೩೦ ವಿಧದ ಕೀಟನಾಶಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಆದರೆ ಇವುಗಳನ್ನು ಬಳಸುವ ಬಹುತೇಕ ರೈತಾಪಿ ಜನರಿಗೆ ಇವುಗಳ ವೈಜ್ಞಾನಿಕ ಬಳಕೆಯ ಬಗ್ಗೆ ಮಾಹಿತಿ ಇಲ್ಲದ ಕಾರಣದಿಂದಾಗಿ, ತಮಗೆ ತೋಚಿದಷ್ಟು ಪ್ರಮಾಣದಲ್ಲಿ ಬಳಸುತ್ತಾರೆ. ಇದಲ್ಲದೇ ಕೀಟನಾಶಕಗಳ ಜೊತೆಗೆ ನೀಡುವ ಸೂಚನಾ ಪತ್ರವನ್ನು ಓದದ ಮತ್ತು ಇವುಗಳನ್ನು ನೀರಿನಲ್ಲಿ ಬೆರೆಸಿ ಬೆಳೆಗಳಿಗೆ ಸಿಂಪಡಿಸುವ ವಿಧಾನದಲ್ಲಿ ತರಬೇತಿಯನ್ನೇ ಪಡೆದಿರದ ರೈತರು, ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ಕೊಂಡೊಯ್ಯುವ ೧೫ ದಿನಗಳಿಗೆ ಮುನ್ನ ಕೀಟನಾಶಕಗಳ ಸಿಂಪಡಣೆಯನ್ನು ನಿಲ್ಲಿಸಬೇಕೆನ್ನುವ ಸೂಚನೆಯನ್ನು ಪರಿಪಾಲಿಸುವುದೇ ಇಲ್ಲ.

ಪರಿಹಾರವೇನು ?

ಅಡುಗೆ ಕೆಲಸದಲ್ಲಿ ತೊಡಗುವ ಮುನ್ನ ನಿಮ್ಮ ಕೈಗಳು ಮತ್ತು  ಅಡುಗೆಮನೆಯ ಎಲ್ಲ ಪರಿಕರಗಳನ್ನು ಸ್ವಚ್ಛಗೊಳಿಸಿ. ಅಡುಗೆ ಮಾಡಿ ಮುಗಿಸಿದ ಬಳಿಕ ಇವೆಲ್ಲವನ್ನೂ ಮತ್ತೊಮ್ಮೆ ಸ್ವಚ್ಛಗೊಳಿಸಿರಿ.

ಸಾಧ್ಯವಿರುವಷ್ಟು ಸಾವಯವ ವಿಧಾನದಿಂದ ಬೆಳೆದ ತರಕಾರಿ, ಸೊಪ್ಪುಗಳು ಮತ್ತು ಹಣ್ಣು ಹಂಪಲುಗಳನ್ನೇ ಸೇವಿಸಿ. ನಿಮ್ಮ ಮನೆಯ ಸಮೀಪದಲ್ಲಿ ಅಥವಾ ತಾರಸಿಯಲ್ಲಿ ಪುಟ್ಟ ಕೈತೋಟವನ್ನು ನಿರ್ಮಿಸಿ, ನಿಮಗೆ ಬೇಕಾಗುವಷ್ಟು ತರಕಾರಿಗಳನ್ನು ಸಾವಯವ ಪದ್ದತಿಯಲ್ಲಿ ಬೆಳೆಯಿರಿ. ಇದರಿಂದಾಗಿ ನಿಮಗೆ ಸಾಕಷ್ಟು ವ್ಯಾಯಾಮದೊಂದಿಗೆ, ಉತ್ತಮ ಗುಣಮಟ್ಟದ ತರಕಾರಿಗಳು ಲಭ್ಯವಾಗುವುದರಿಂದ ಆರೋಗ್ಯದ ಮಟ್ಟವೂ ವೃದ್ಧಿಸುತ್ತದೆ. ಮನೆಯ ಸುತ್ತಮುತ್ತ ಖಾಲಿ ಜಾಗವಿದ್ದಲ್ಲಿ ಮಾವು, ಹಲಸು, ಚಿಕ್ಕು ಮತ್ತಿತರ ಹಣ್ಣಿನ ಮರಗಳನ್ನು ಬೆಳೆಸಿರಿ. ತಾಜಾ ಹಣ್ಣುಗಳೊಂದಿಗೆ ನಿಮಗೆ ಒಂದಿಷ್ಟು ನೆರಳನ್ನು ನೀಡಲು ಇಂತಹ ಮರಗಳು ಉಪಯುಕ್ತವೆನಿಸುತ್ತವೆ.

ನೀವು ದಿನನಿತ್ಯ ಬಳಸುವ ದವಸ – ಧಾನ್ಯಗಳು, ತರಕಾರಿಗಳು, ಹಸಿರುಸೊಪ್ಪುಗಳು ಮತ್ತು ಹಣ್ಣು ಹಂಪಲುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಿದಲ್ಲಿ, ಇವುಗಳನ್ನು  ಬಳಸುವ ಮುನ್ನ ಕನಿಷ್ಠ ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ತನ್ಮಧ್ಯೆ ಎರಡರಿಂದ ಮೂರುಬಾರಿ ಇವುಗಳನ್ನು ತೊಳೆದು, ನೀರನ್ನು ಬದಲಾಯಿಸಿ.

ಇದೇ ರೀತಿಯಲ್ಲಿ ಸ್ವಚ್ಛಗೊಳಿಸಿದ ದವಸ ಧಾನ್ಯಗಳನ್ನು ಬಿಸಿಲಿನಲ್ಲಿ ಒಣಗಿಸಿದ ಬಳಿಕವೇ ಗಿರಣಿಗಳಲ್ಲಿ ಹುಡಿಮಾಡಿ ಹಿಟ್ಟನ್ನು ಸಿದ್ಧಪಡಿಸಿ. ಬೇಯಿಸಬೇಕಾದ ದವಸ ಧಾನ್ಯಗಳನ್ನು ಮತ್ತು ತರಕಾರಿಗಳನ್ನು ಪ್ರೆಷರ್ ಕುಕರ್ ನಲ್ಲಿ ೧೫೦ ರಿಂದ ೧೯೦ ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಬೇಯಿಸಿರಿ. ಇದರಿಂದಾಗಿ ಇವುಗಳಲ್ಲಿರುವ ಪೌಷ್ಠಿಕಾಂಶಗಳು ಆಂಶಿಕವಾಗಿ ನಶಿಸಿದರೂ, ಇದರೊಂದಿಗೆ ಅಪಾಯಕಾರಿ ರಾಸಾಯನಿಕ ಕೀಟನಾಶಕಗಳು ನಾಶವಾಗುತ್ತವೆ.

ಅತ್ಯಧಿಕ ಪ್ರಮಾಣದ ಕೀಟನಾಶಕಗಳನ್ನು ಬಳಸಿ ಬೆಳೆಯುವ ದ್ರಾಕ್ಷಿ, ಸೇಬು, ಮಾವು ಇತ್ಯಾದಿ ಹಣ್ಣುಗಳನ್ನು ಹಾಗೂ ಸೊಪ್ಪು ತರಕಾರಿಗಳನ್ನು ಮೇಲಿನಂತೆಯೇ ನೀರಿನಲ್ಲಿ ಮುಳುಗಿಸಿಟ್ಟು, ಸ್ವಚ್ಛಗೊಳಿಸಿದ ಬಳಿಕ ಬಳಸಿ. ಸೊಪ್ಪುಗಳನ್ನು ಮತ್ತೊಮ್ಮೆ ಸ್ವಚ್ಛಗೊಳಿಸಿದ ಬಳಿಕ ಕೊಂಚ ಉಪ್ಪನ್ನು ಬೆರೆಸಿದ ನೀರಿನಲ್ಲಿ ಒಂದಿಷ್ಟು ಹೊತ್ತು ಮುಳುಗಿಸಿಟ್ಟ ನಂತರ ಬಳಸಿ.

ಹಸಿ ಆಹಾರ್ಪದರ್ಥಗಳನ್ನು ಮತ್ತು ಸೇವನೆಗೆ ಸಿದ್ಧವಾಗಿರುವ ( ರೆಡಿ ಟು ಈಟ್ ) ಆಹಾರಗಳನ್ನು ಬೆರೆಸಬೇಡಿ. ಅದರಲ್ಲೂ ಹಸಿ ತರಕಾರಿಗಳು, ಹಸಿ ಮಾಂಸ ಮತ್ತು ಮೀನುಗಳನ್ನು ಯಾವುದೇ ಸಂದರ್ಭದಲ್ಲೂ ಬೆರೆಸಬೇಡಿ.

ಮೊಟ್ಟೆ, ಮೀನು ಹಾಗೂ ಕೋಳಿ ಮತ್ತಿತರ ಮಾಂಸಗಳನ್ನು ಸಮರ್ಪಕವಾಗಿ ಬೇಯಿಸಿದ ಬಳಿಕವೇ ಸೇವಿಸಿರಿ. ಸೇವನೆಯ ಬಳಿಕ ಉಳಿದ ಆಹಾರಗಳನ್ನು ಮತ್ತೊಮ್ಮೆ ಕುದಿಸಿಡಿ.

ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿದ ಎರಡು ಗಂಟೆಗಳಲ್ಲಿ ಇವುಗಳನ್ನು ಫ್ರಿಜ್ ನಲ್ಲಿರಿಸುವುದು ಸುರಕ್ಷಿತವೆನಿಸುವುದು. ಆದರೆ ಫ್ರೀಜರ್ ನಲ್ಲಿ ಇರಿಸಿದ ಆಹಾರಗಳನ್ನು ಹೊರಗಿರಿಸಿ ಬಳಸುವುದಕ್ಕಿಂತಲೂ, ಈ ಪಾತ್ರೆಯನ್ನು ನೀರಿನಲ್ಲಿರಿಸಿ ಅಥವಾ ಮೈಕ್ರೋವೇವ್ ಬಳಸಿ ಡಿ ಫ್ರಾಸ್ಟ್ ಮಾಡುವುದು ಹಿತಕರವೆನಿಸುವುದು.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು



Sunday, March 29, 2015

ARTICLE NO.250 - FLEX CALENDARS



ಹಾದಿ ಬೀದಿಗಳಲ್ಲಿ ನೇತಾಡುತ್ತಿರುವ ಫ್ಲೆಕ್ಸ್ ಕ್ಯಾಲೆಂಡರುಗಳು !

ಒಂದೆರಡು ದಶಕಗಳ ಹಿಂದಿನ ತನಕ ವಸತಿ - ವಾಣಿಜ್ಯ ಕಟ್ಟಡಗಳ ಗೋಡೆಗಳ ಮೇಲೆ ರಾರಾಜಿಸುತ್ತಿದ್ದ ವರ್ಣರಂಜಿತ ಕ್ಯಾಲೆಂಡರುಗಳು ಇದೀಗ ಕಣ್ಮರೆಯಾಗಿ ವರುಷಗಳೇ ಸಂದಿವೆ. ಅನೇಕ ಗ್ರಾಹಕ ಉತ್ಪನ್ನಗಳ ತಯಾರಕ ಸಂಸ್ಥೆಗಳು ತಮ್ಮ ಉತ್ಪನ್ನಗಳ ಅಥವಾ ಸಂಸ್ಥೆಯ ಪ್ರಚಾರಕ್ಕಾಗಿ ಮುದ್ರಿಸಿ, ಉಚಿತವಾಗಿ ವಿತರಿಸುತ್ತಿದ್ದ ಇಂತಹ ಕ್ಯಾಲೆಂಡರುಗಳನ್ನು ಜನಸಾಮಾನ್ಯರು ಮುಗಿಬಿದ್ದು ಪಡೆದುಕೊಳ್ಳುತ್ತಿದ್ದರು. ಇವುಗಳಲ್ಲಿ ಚಲನಚಿತ್ರ ತಾರೆಯರು ಮತ್ತು ದೇವರ ಚಿತ್ರಗಳಿರುವ  ಕ್ಯಾಲೆಂಡರುಗಳಿಗೆ ಅತ್ಯಧಿಕ ಬೇಡಿಕೆಯಿತ್ತು. ಆದರೆ ಕಾಲಕ್ರಮೇಣ ಅತ್ಯಾಧುನಿಕ ವಸತಿ – ವಾಣಿಜ್ಯ ಕಟ್ಟಡಗಳ ಮಾಲೀಕರು – ಬಾಡಿಗೆದಾರರು, ಗೋಡೆಗಳಿಗೆ ಮೊಳೆಗಳನ್ನು ಹೊಡೆದು ಕ್ಯಾಲೆಂಡರುಗಳನ್ನು ತೂಗುಹಾಕುವ ಪದ್ದತಿಯನ್ನೇ ಕೈಬಿಟ್ಟಿದ್ದರು. ಇದೀಗ ಇವುಗಳ ಬದಲಾಗಿ ಹಾದಿಬೀದಿಗಳಲ್ಲಿರುವ ಕಂಬಗಳಿಗೆ ನೇತುಹಾಕಿರುವ ಫ್ಲೆಕ್ಸ್ ಕ್ಯಾಲೆಂಡರುಗಳನ್ನು ಕಾಣಬಹುದಾಗಿದೆ.

ಕಾನೂನುಬಾಹಿರ

ಅಂದು ಕಣ್ಮರೆಯಾಗಿದ್ದ ಕ್ಯಾಲೆಂಡರುಗಳು ಹೊಸ ಅವತಾರದಲ್ಲಿ  ಮತ್ತೆ ಪ್ರತ್ಯಕ್ಷವಾಗುವಾಗ ಹಲವಾರು ವರ್ಷಗಳೇ ಕಳೆದಿದ್ದು, ಇವುಗಳು ಕೇವಲ ಪ್ರಚಾರದ ಸಲುವಾಗಿ ಹಾಗೂ ತಾತ್ಕಾಲಿಕವಾಗಿ ಬಳಸುವಂತಹದ್ದೇ ಆಗಿದ್ದವು. ವಿಶೇಷವೆಂದರೆ ಇವುಗಳನ್ನು ರಸ್ತೆಗಳ ಬದಿಗಳಲ್ಲಿರುವ ವಿದ್ಯುತ್, ದೂರವಾಣಿ ಮತ್ತಿತರ ಕಂಬಗಳಿಗೆ ನೇತುಹಾಕಲಾಗುತ್ತಿದ್ದು, ಪಾದಚಾರಿಗಳು ನಿರಾತಂಕವಾಗಿ ನಡೆದಾಡಲು ಅಡ್ಡಿಯಾಗುತ್ತಿವೆ. ಕೆಲ ಸಂದರ್ಭಗಳಲ್ಲಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಚಾಲಕರಿಗೆ  ಸಣ್ಣಪುಟ್ಟ ಗಾಯಗಳು ಸಂಭವಿಸಲೂ ಇವುಗಳು ಕಾರಣವೆನಿಸಿವೆ. ಆದರೂ ಇವುಗಳನ್ನು ಕಾನೂನುಬಾಹಿರವಾಗಿ ಅಳವಡಿಸುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಸ್ಥಳೀಯ ಸಂಸ್ಥೆಗಳು ಇವರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದಾಗಿಯೇ, ಇವುಗಳ ಹಾವಳಿಯೂ ಇತ್ತೀಚಿನ ದಿನಗಳಲ್ಲಿ ಮಿತಿಮೀರಿದೆ.

ಬಳಸುವವರು ಯಾರು?

ಯಾವುದೇ ಸಭೆ – ಸಮಾರಂಭಗಳಿರಲಿ, ಇವುಗಳ ಪ್ರಚಾರಕ್ಕೆ ಫ್ಲೆಕ್ಸ್ ಕ್ಯಾಲೆಂಡರ್ ಮತ್ತು ಬ್ಯಾನರ್ ಗಳ ಬಳಕೆ ವ್ಯಾಪಕವಾಗಿದೆ. ಅದರಲ್ಲೂ ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳ ಪ್ರಾಯೋಜಕರು, ಇವುಗಳಿಗಾಗಿಯೇ ಗಣನೀಯ ಪ್ರಮಾಣದ ಹಣವನ್ನು ವ್ಯಯಿಸುತ್ತಾರೆ.

ಸಾಮಾನ್ಯವಾಗಿ ರಾಜಕೀಯ ಪಕ್ಷಗಳು, ಧಾರ್ಮಿಕ ಕಾರ್ಯಕ್ರಮಗಳು, ಸಭೆ – ಸಮಾರಂಭಗಳೇ ಮುಂತಾದವುಗಳ ಪ್ರಚಾರದ ಸಲುವಾಗಿ ಬೀದಿಬೀದಿಗಳಲ್ಲಿ ಅಳವಡಿಸುವ ಫ್ಲೆಕ್ಸ್ ಕ್ಯಾಲೆಂಡರುಗಳನ್ನು, ಕೆಲ ಪ್ರಾಯೋಜಕರು ತಮ್ಮ ಕಾರ್ಯಕ್ರಮ ಮುಗಿದಂತೆಯೇ ತೆಗೆಸುವರಾದರೂ, ಅಧಿಕತಮ ಪ್ರಾಯೋಜಕರು ಇದರ ಗೋಜಿಗೆ ಹೋಗುವುದೇ ಇಲ್ಲ. ಅಪರೂಪದಲ್ಲಿ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರು ಇವುಗಳನ್ನು ತೆರವುಗೊಳಿಸುವ ಅಥವಾ ಬೇರೊಂದು ಕಾರ್ಯಕ್ರಮದ ಪ್ರಾಯೋಜಕರು ತಮ್ಮ ಕ್ಯಾಲೆಂಡರುಗಳನ್ನೂ ನೇತುಹಾಕುವ ಸಲುವಾಗಿ ಹಳೆಯ ಕ್ಯಾಲೆಂಡರುಗಳನ್ನು ತೆರವುಗೊಳಿಸುವುದುಂಟು. ಅಂತೆಯೇ ತೆರವುಗೊಳಿಸಿದ ಕ್ಯಾಲೆಂಡರುಗಳನ್ನು ಸಮೀಪದಲ್ಲಿರುವ ಚರಂಡಿಯಲ್ಲಿ ಎಸೆಯುವುದು ಕೂಡಾ ಅಪರೂಪವೇನಲ್ಲ. ಮತ್ತೆ ಕೆಲವರು ಹಳೆಯ ಕ್ಯಾಲೆಂಡರುಗಳ ಮೇಲೆ ತಮ್ಮ ಹೊಸ ಕ್ಯಾಲೆಂಡರುಗಳನ್ನು ನೇತುಹಾಕಿ ಅದೃಶ್ಯರಾಗುವುದು ವಿಶೇಷವೇನಲ್ಲ.

ಹೆಚ್ಚುತ್ತಿರುವ ತ್ಯಾಜ್ಯಗಳು

ಸಾಕಷ್ಟು ಸಮಸ್ಯೆಗಳಿಗೆ ಕಾರಣವೆನಿಸುತ್ತಿರುವ ಈ ಫ್ಲೆಕ್ಸ್ ಕ್ಯಾಲೆಂಡರುಗಳು, ನಾವಿಂದು ಅನಾವಶ್ಯಕವಾಗಿ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣ ಇನ್ನಷ್ಟು ಹೆಚ್ಚಲು ಕಾರಣವೆನಿಸುತ್ತಿರುವುದು ಮಾತ್ರ ಸುಳ್ಳೇನಲ್ಲ. ಈ ವಿಚಾರದ ಅರಿವಿದ್ದರೂ, ಇವುಗಳ ಬಳಕೆಯನ್ನು ನಿಯಂತ್ರಿಸಲು ಸ್ಥಳೀಯ ಸಂಸ್ಥೆಗಳು ಮತ್ತು ನಾಗರಿಕರು ಪ್ರಯತ್ನಿಸುತ್ತಿಲ್ಲ. ಕೆಲವೇ ವರ್ಷಗಳ ಹಿಂದೆ ಬಳಸಲ್ಪಡುತ್ತಿದ್ದ ಪರಿಸರ ಸ್ನೇಹಿ ಬಟ್ಟೆಯ ಬ್ಯಾನರ್ ಮತ್ತು ಬಂಟಿಂಗ್ಸ್ ಗಳ ಜಾಗವನ್ನು ಇಂದು ಫ್ಲೆಕ್ಸ್ ಬ್ಯಾನರ್ ಮತ್ತು ಕ್ಯಾಲೆಂಡರುಗಳು ಆಕ್ರಮಿಸಿವೆ. ಜನಸಾಮಾನ್ಯರಿಗೆ ಬಣ್ಣಬಣ್ಣದ ಆಕರ್ಷಕ ಫ್ಲೆಕ್ಸ್ ಗಳ ವ್ಯಾಮೋಹ ವೃದ್ಧಿಸುತ್ತಿರುವುದರಿಂದ, ಮತ್ತೆ ಬಳಸಲಾಗದ ಫ್ಲೆಕ್ಸ್ ಗಳು ತ್ಯಾಜ್ಯಗಳ ಪ್ರಮಾಣ ಹೆಚ್ಚಲು ಕಾರಣವೆನಿಸಿರುವುದು ಸತ್ಯ. ಆದರೆ ಇವುಗಳ ಬಳಕೆಯನ್ನು ನಿಷೇಧಿಸಲು ಸರ್ಕಾರ ಹಿಂಜರಿಯುತ್ತಿರುವುದು ಕೂಡಾ ಅಷ್ಟೇ ಸತ್ಯ!.

ಕೊನೆಯ ಮಾತು

ಸ್ವಚ್ಚ ಭಾರತ ಅಭಿಯಾನವನ್ನು ಉದ್ಘಾಟಿಸುವ  ಸಂದರ್ಭದಲ್ಲಿ, ಇದರಲ್ಲಿ ಭಾಗಿಯಾಗಿದ್ದ ಪ್ರತಿಯೊಂದು ಸಂಘಸಂಸ್ಥೆಗಳು ಇದರ ಪ್ರಚಾರಕ್ಕಾಗಿ ಫ್ಲೆಕ್ಸ್ ಬ್ಯಾನರ್ ಗಳನ್ನು ಬಳಸಿದ್ದುದು ವಿಪರ್ಯಾಸವೇ ಸರಿ!.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 


Monday, March 9, 2015

POISON IN YOUR KITCHEN



ನಿಮ್ಮ ಅಡುಗೆಮನೆ ಸುರಕ್ಷಿತವಾಗಿಹುದೇ ?

ಸಾಮಾನ್ಯವಾಗಿ ಭಾರತೀಯ ಮಹಿಳೆಯರು ಅತಿಹೆಚ್ಚು ಸಮಯವನ್ನು ವ್ಯಯಿಸುವ ಅಡುಗೆಮನೆಯು ಆರೋಗ್ಯದ ದೃಷ್ಟಿಯಿಂದ ಸಂಪೂರ್ಣ ಸುರಕ್ಷಿತವಲ್ಲ. ವಿಶೇಷವೆಂದರೆ ಇದು ಸಾಂಪ್ರದಾಯಿಕ ಉರುವಲುಗಳನ್ನು ಬಳಸುವ ಅಪ್ಪಟ ಭಾರತೀಯ ಶೈಲಿಯ ಅಡುಗೆಮನೆಗಳಿಗೆ ಮಾತ್ರ ಸೀಮಿತವಾಗಿರದೇ, ಅತ್ಯಾಧುನಿಕ ಶೈಲಿಯ ಶ್ರೀಮಂತರ ಅಡುಗೆಮನೆಗಳಿಗೂ ಅನ್ವಯಿಸುತ್ತದೆ ಎಂದಲ್ಲಿ ನೀವೂ ನಂಬಲಾರಿರಿ. ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಅಡುಗೆಮನೆಗಳು ಇವುಗಳನ್ನು ಬಳಸುವವರ ಆರೋಗ್ಯದ ದೃಷ್ಠಿಯಿಂದ ತುಸು ಅಪಾಯಕಾರಿ ಎನ್ನುವುದು ಮಾತ್ರ ಸತ್ಯ.ಆದರೆ ಸೂಕ್ತ ವಾತಾಯನ ವ್ಯವಸ್ಥೆ ಮತ್ತು ಅಡುಗೆಮನೆಯಲ್ಲಿನ ಕಲುಷಿತ ಗಾಳಿಯನ್ನು ಹೊರಹಾಕಬಲ್ಲ ಎಗ್ಸಾಸ್ಟ್ ಫ್ಯಾನ್ ಬಳಸುವ ಮೂಲಕ ಇದನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದಾಗಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಅಡುಗೆಮನೆಯಲ್ಲಿ ವಿಷಾನಿಲ ?
ನಿಮ್ಮ ಅಡುಗೆಮನೆಯಲ್ಲಿ ಸೌದೆ,ಇದ್ದಿಲು,ಸೀಮೆಯೆಣ್ಣೆ ಅಥವಾ ನೈಸರ್ಗಿಕ, ಬಯೋ ಹಾಗೂ ಎಲ್ ಪಿ ಜಿ ಅನಿಲಗಳನ್ನು ಉರಿಸುವಾಗ  ಅಪಾಯಕಾರಿ ಅನಿಲಗಳು ಮತ್ತು ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಇವುಗಳಲ್ಲಿ ನೈಟ್ರೋಜೆನ್ ಡೈಆಕ್ಸೈಡ್, ಕಾರ್ಬನ್ ಮೊನೊಕ್ಸೈಡ್, ಫಾರ್ಮಲ್ ಡಿಹೈಡ್ ಮತ್ತು ಸೂಕ್ಷ್ಮ ಕಣಗಳು ಪ್ರಮುಖವಾಗಿವೆ. ೨೦೧೪ ರಲ್ಲಿ ಪ್ರಕಟವಾಗಿದ್ದ ಅಧ್ಯಯನವೊಂದರ ವರದಿಯಂತೆ, ಜಗತ್ತಿನಲ್ಲಿ ಸುಮಾರು ೩ ಬಿಲಿಯನ್ ಜನರು ಮನೆಯೊಳಗಿನ ವಾಯುಮಾಲಿನ್ಯದಿಂದ ಪೀಡಿತರಾಗುತ್ತಾರೆ. ಇವರಲ್ಲಿ ಅಧಿಕತಮ ಜನರು ಬಡ ರಾಷ್ಟ್ರಗಳ ಪ್ರಜೆಗಳೇ ಆಗಿದ್ದರೂ, ಸುಮಾರು ೫ ರಿಂದ ೬ ಲಕ್ಷ ಆಮೆರಿಕನ್ ಜನರು ಇದೇ ಸಮಸ್ಯೆಗೆ ಈಡಾಗುತ್ತಿರಲು ಘನ ಇಂಧನಗಳ ಬಳಕೆಯೇ ಕಾರಣವೆನಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು ಅಂದಾಜಿಸಿರುವಂತೆ ಜಾಗತಿಕ ಮಟ್ಟದಲ್ಲಿ ಸುಮಾರು ೪.೩ ಮಿಲಿಯನ್ ಜನರು ಮನೆಯೊಳಗಿನ ವಾಯುಮಾಲಿನ್ಯದಿಂದ ಉದ್ಭವಿಸುವ ಆರೋಗ್ಯದ ಸಮಸ್ಯೆಗಳಿಗೆ  ಬಲಿಯಾಗುತ್ತಿದ್ದು, ಇದಕ್ಕೆ ಹೋಲಿಸಿದಾಗ ಹೊರಾಂಗಣ ವಾಯುಮಾಲಿನ್ಯದಿಂದ ಮೃತಪಡುತ್ತಿರುವ ಜನರ ಸಂಖ್ಯೆಯು ಒಂದಿಷ್ಟು ಕಡಿಮೆ (೩.೭ ಮಿಲಿಯನ್ ) ಎನಿಸುತ್ತದೆ.
ಕೆಲಿಫೋರ್ನಿಯಾದ ಲಾರೆನ್ಸ್ ಬರ್ಕ್ಲಿ ರಾಷ್ಟ್ರೀಯ ಪ್ರಯೋಗಾಲಯದ ಸಂಶೋಧಕರು, ನೈಸರ್ಗಿಕ ಅನಿಲವನ್ನು ಉರಿಸುವಾಗ ಉತ್ಪನ್ನವಾಗುವ ಪ್ರದೂಷಕಗಳ ಪ್ರಮಾಣವು ಅಮೇರಿಕಾದ ಎನ್ವಿರಾನ್ಮೆಂಟಲ್ ಪ್ರೋಟೆಕ್ಷನ್ ಏಜೆನ್ಸಿ ನಿಗದಿಸಿರುವ ಸುರಕ್ಷತಾ ಮಟ್ಟಕ್ಕಿಂತಲೂ ತುಸು ಅಧಿಕವಾಗಿದೆ ಎನ್ನುವುದನ್ನು ಪತ್ತೆಹಚ್ಚಿದ್ದರು. ಈ ವರದಿಯು ೨೦೧೩ ರಲ್ಲಿ ಪ್ರಕಟವಾಗಿತ್ತು. ಇದಕ್ಕೂ ಮುನ್ನ ೧೯೯೬ ರಲ್ಲಿ ಪ್ರಕಟವಾಗಿದ್ದ ಮತ್ತೊಂದು ವರದಿಯಂತೆ ಅನಿಲ ಒಲೆಗಳನ್ನು ಉರಿಸುವುದರಿಂದ ಶ್ವಾಸಾಂಗಗಳ ಸಮಸ್ಯೆಗಳಾದ ಏದುಬ್ಬಸ, ಉಸಿರಾಡಲು ಕಷ್ಟವಾಗುವುದು ಮತ್ತು ಆಸ್ತಮಾಗಳಂತಹ ತೊಂದರೆಗಳು ಉದ್ಭವಿಸುತ್ತವೆ ಎನ್ನುವುದು ತಿಳಿದುಬಂದಿತ್ತು. ಕೆನಡಾ ದೇಶದ ಸರ್ಕಾರವು ಸೂಚಿಸಿದ್ದ ಮಾರ್ಗದರ್ಶಿ ನಿಯಮಗಳಂತೆ, ಗ್ಯಾಸ್ ವಾಟರ್ ಹೀಟರ್, ಕುಲುಮೆಗಳು, ಅಡುಗೆ ಸ್ಟವ್ ಗಳು,ಮನೆಯೊಳಗೆ ರಾಸಾಯನಿಕ ಪ್ರದೂಷಣೆಯನ್ನು ಹೆಚ್ಚಿಸಲು ಮೂಲ ಕಾರಣವೆನಿಸುತ್ತವೆ.
ಈ ರೀತಿಯಲ್ಲಿ ಅಡುಗೆಗಾಗಿ ಬಳಸುವ ಅನಿಲಗಳು ಅಲ್ಪ ಪ್ರಮಾಣದ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸಿದರೂ, ಭಾರತದಲ್ಲಿ ಬಳಸಲ್ಪಡುವ ಘನ ಇಂಧನಗಳು ವ್ಯಾಪಕವಾಗಿ ಉತ್ಪಾದಿಸುವ ಸೂಕ್ಷ್ಮ ಕಣಗಳೊಂದಿಗೆ ತುಲನೆ ಮಾಡಿದಾಗ, ಸಾಕಷ್ಟು ಸುರಕ್ಷಿತವೆನಿಸುವುದು. ಅಂತೆಯೇ ಕೆಲ ಸಂದರ್ಭಗಳಲ್ಲಿ ಅಡುಗೆ ಅನಿಲವನ್ನು ಉರಿಸಿದಾಗ ಪುಟ್ಟ ಮಕ್ಕಳಲ್ಲಿ ಶ್ವಾಸೋಚ್ಚ್ವಾಸದ ಸಮಸ್ಯೆ ಉಲ್ಬಣಿಸುವುದಾದರೂ, ಇದಕ್ಕೆ ಅನಿಲವನ್ನು ಉರಿಸುವುದು ಕಾರಣವೇ ಅಥವಾ ಬೇಯುತ್ತಿರುವ ಆಹಾರ ಕಾರಣವೇ ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ನಿಜ ಹೇಳಬೇಕಿದ್ದಲ್ಲಿ “ಸಂಪೂರ್ಣ ಸುರಕ್ಷಿತ “ ಎನ್ನುವುದು ಯಾವುದಕ್ಕೂ ಅನ್ವಯಿಸುವ ಸಾಧ್ಯತೆಗಳೇ ಇಲ್ಲ. ಆದುದರಿಂದ ಘನ ಇಂಧನಗಳನ್ನು ಬಳಸುವವರು ಇದರ ಬದಲಾಗಿ  ಅಡುಗೆ ಅನಿಲವನ್ನು ಬಳಸುವುದು ಉತ್ತಮ. ಪ್ರಾಯಶಃ ಇತ್ತೆಚಿನ ಕೆಲವರ್ಷಗಳಿಂದ ಜನಪ್ರಿಯವೆನಿಸಿರುವ ಇಂಡಕ್ಶನ್ ಒಲೆಗಳು ಮಾತ್ರ  ಯಾವುದೇ ರೀತಿಯ ಪ್ರದೂಶಕಗಳನ್ನು ಉತ್ಪಾದಿಸುವುದಿಲ್ಲ. ಆದರೆ ಇದರಲ್ಲಿ ಆಹಾರವನ್ನು ಬೇಯಿಸುವಾಗ ಉತ್ಪನ್ನವಾಗುವ ಹಬೆಯು ಕೆಲ ಸಮಸ್ಯೆಗಳಿಗೆ ಕಾರಣವೆನಿಸುವಸಾಧ್ಯತೆಗಳಿವೆ.
ಇದಲ್ಲದೆ ನೀವು ಸೇವಿಸುವ ಆಹಾರವನ್ನು ಎಣ್ಣೆಯಲ್ಲಿ ಕರಿಯುವಾಗ ಹಾಗೂ ಕಾವಲಿ ಅಥವಾ ಗ್ರಿಲ್ ಗಳನ್ನು  ಬಳಸಿ ಖಾದ್ಯಗಳನ್ನು  ತಯಾರಿಸುವಾಗ, ಎಕ್ರೋಲಿನ್ ಬಿಡುಗಡೆಯಾಗುವುದು. ಕೆಲ ಅಧ್ಯಯನಗಳ ವರದಿಯಂತೆ ಇದು ಕ್ಯಾನ್ಸರ್ ಕಾರಕ ಎಂದು ಪರಿಗಣಿಸಲ್ಪಟ್ಟಿದೆ. ಕೆಲ ಆಹಾರಗಳಲ್ಲೂ ಎಕ್ರೋಲಿನ್ ಅತ್ಯಲ್ಪ ಪ್ರಮಾಣದಲ್ಲಿ ಇರುತ್ತದೆ.  ಹಾಗೂ ಇದು ಅಡುಗೆಯ ಸಂದರ್ಭದಲ್ಲಿ ಕಾರ್ಬೋಹೈಡ್ರೇಟ್, ಸಸ್ಯಜನ್ಯ ತೈಲ, ಪ್ರಾಣಿಗಳ ಕೊಬ್ಬು ಮತ್ತು ಅಮೈನೋ ಆಸಿಡ್ ಗಳಿಂದ ಉತ್ಪನ್ನವಾಗುತ್ತದೆ. ಅಂತೆಯೇ ಭಾರತೀಯರು ಮೆಚ್ಚಿ ಸವಿಯುವ ಕರಿದ ತಿಂಡಿಗಳನ್ನು ತಯಾರಿಸುವಾಗ ಕುದಿಸುವ ಎಣ್ಣೆಯ ಬಾಣಲೆಯಿಂದ ಹೊರಸೂಸುವ ಧೂಮವನ್ನು ಸೇವಿಸುವುದರಿಂದ ಮನುಷ್ಯನ ವಂಶವಾಹಿನಿಗಳಿಗೆ ಹಾನಿಯಾಗುವ ಮತ್ತು ಕ್ಯಾನ್ಸರ್ ಉದ್ಭವಿಸುವ ಸಾಧ್ಯತೆಗಳಿವೆ.ಆದರೆ ಎಕ್ರೋಲಿನ್ ಅನ್ನು ನಿಶ್ಚಿತವಾಗಿಯೂ ಕ್ಯಾನ್ಸರ್ ಕಾರಕವೆಂದು ಪರಿಗಣಿಸಬಲ್ಲ ಸಾಕ್ಷ್ಯಾಧಾರಗಳು ಲಭಿಸಿಲ್ಲ.
ವಾತಾಯನ ವ್ಯವಸ್ಥೆಯೇ ಪರಿಹಾರ
ನಿಮ್ಮ ಅಡುಗೆಮನೆಯಲ್ಲಿ ಇರಿಸಿರುವ ಅನಿಲ ಒಲೆಯ ಮೇಲ್ಭಾಗದಲ್ಲಿ ಅಳವಡಿಸುವ ವಿದ್ಯುತ್ ಚಿಮಣಿ ಮತ್ತು ಒಳಗಿನ ಕಲುಷಿತ ಗಾಳಿಯನ್ನು ಹೊರಕ್ಕೆ ವಿಸರ್ಜಿಸಬಲ್ಲ ಎಕ್ಸಾಸ್ಟ್ ಫ್ಯಾನ್ ಗಳು, ಅಡುಗೆಮನೆಯಲ್ಲಿನ ವಾತಾವರಣವನ್ನು ತಕ್ಕಮಟ್ಟಿಗೆ ಸ್ವಚ್ಚವಾಗಿರಿಸಲು ಉಪಯುಕ್ತವೆನಿಸುತ್ತವೆ. ಇದರೊಂದಿಗೆ ಸಮರ್ಪಕವಾದ ಜಾಗದಲ್ಲಿ ಕಿಟಿಕಿಗಳು ಮತ್ತು ವೆಂಟಿಲೇಟರ್  ಗಳನ್ನು ಇರಿಸಿದಲ್ಲಿ, ನಿಮ್ಮ ಅಡುಗೆಮನೆಯಲ್ಲಿನ ವಾಯುಮಾಲಿನ್ಯದ ಸಮಸ್ಯೆಯನ್ನು ನಿಯಂತ್ರಿಸುವುದು ಸುಲಭಸಾಧ್ಯವೆನಿಸುವುದು.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು


Tuesday, February 24, 2015

SWINE FLU - IS BACK WITH A BANG


ಮರಳಿ ಬಂದಿಹುದು : ಮಾರಕ ಹಂದಿ ಜ್ವರ

೨೦೦೯ ರ ಮಾರ್ಚ್ ತಿಂಗಳಿನಲ್ಲಿ ಮೆಕ್ಸಿಕೋ ದೇಶದ ಪುಟ್ಟ ಬಾಲಕನೊಬ್ಬನನ್ನು ಬಲಿಪಡೆಯುವುದರೊಂದಿಗೆ ತನ್ನ ನೂತನ ಅವತಾರವನ್ನು ತೋರಿದ್ದ ಹಾಗೂ ಹಂದಿಜ್ವರ ಎಂದು ಹೆಸರಿದ್ದ ಈ ವಿನೂತನ ಇನ್ಫ್ಲುಯೆಂಜಾ ಜ್ವರವು, ಕೇವಲ ಎರಡು ತಿಂಗಳುಗಳಲ್ಲಿ ವಿಶ್ವದ ೭೪ ರಾಷ್ಟ್ರಗಳಿಗೆ ಹರಡಿತ್ತು !.

ಫ್ಲೂ ಜ್ವರದ ಪ್ರಭೇದ

ನಮ್ಮ ದೇಶದಲ್ಲಿ ಮಳೆಗಾಲ ಆರಂಭವಾದೊಡನೆ  ಪ್ರತ್ಯಕ್ಷವಾಗುವ ಸಾಮಾನ್ಯ ಫ್ಲೂ ( ಇನ್ಫ್ಲುಯೆಂಜಾ ) ಜ್ವರದ ಲಕ್ಷಣಗಳನ್ನೇ ತೋರುವ ಎಚ್ ೧ ಎನ್ ೧ ಎನ್ನುವ ವೈರಸ್ ಗಳಿಂದ ಉದ್ಭವಿಸುವ ಹಾಗೂ " ಹಂದಿಜ್ವರ " ಎಂದು ಕರೆಯಲ್ಪಡುವ ಸಾಂಕ್ರಾಮಿಕ ವ್ಯಾಧಿಗೆ, ಈ ಬಾರಿ ನೂರಾರು ಅಮಾಯಕರು ಬಲಿಯಾಗಿದ್ದಾರೆ. ಇತ್ತೀಚಿನ ವರದಿಗಳಂತೆ ಸುಮಾರು ೧೩,೦೦೦ ಕ್ಕೂ ಅಧಿಕ ಜನರು ಈ ಸೋಂಕಿನಿಂದ ಬಳಲುತ್ತಿದ್ದು, ೮೦೦ ಕ್ಕೂ ಅಧಿಕಜನರು ಮೃತಪಟ್ಟಿದ್ದಾರೆ.

೨೦೦೯ ರಲ್ಲಿ ಮೊದಲ ಬಾರಿಗೆ ಬಾರತದಲ್ಲಿ ಪತ್ತೆಯಾಗಿದ್ದ ಹಂದಿಜ್ವರವು ೬೯೫ ಜನರಿಗೆ ಹರಡಿದ್ದು, ಇದರಲ್ಲಿ ೧೨೫ ರೋಗಿಗಳು ಮೃತಪಟ್ಟಿದ್ದರು. ಬಳಿಕ ೨೦೧೦ ನೆ ಇಸವಿಯಲ್ಲಿ  ೧೦,೦೦೦ ಕ್ಕೂ ಅಧಿಕ ಮಂದಿಗೆ ಈ  ಸೋಂಕು ಹಬ್ಬಿದ್ದು, ಇದಕ್ಕೆ ೧೦೩೫ ಜನರು ಬಲಿಯಾಗಿದ್ದರು.  ಈ ವ್ಯಾಧಿಗೆ ಕಾರನವೆನಿಸಿರುವ ವೈರಸ್ ಗಳು ಇದೀಗ ಮತ್ತಷ್ಟು ಪ್ರಬಲಗೊಂಡಿದ್ದು, ಕಾಡ್ಗಿಚ್ಚಿನಂತೆ ಹರಡುತ್ತಿವೆ. ವೈದ್ಯಕೀಯ ವಿಜ್ಞಾನಿಗಳ ಅನಿಸಿಕೆಯಂತೆ ಹಂದಿ ಜ್ವರದ ವೈರಸ್ ಗಳು ಕ್ರಮೇಣ " ಪರಿವರ್ತನೆ " ಗೊಳ್ಳುತ್ತಾ, ತಮ್ಮ ತೀವ್ರತೆ ಮತ್ತು ಮಾರಕತೆಗಳನ್ನು ಇನ್ನಷ್ಟು ಹೆಚ್ಚಿಸಿಕೊಂಡಿವೆ.

೨೦೦೯ ರ ಎಪ್ರಿಲ್ ನಲ್ಲಿ ಈ "ನೂತನ ಎಚ್ ೧ ಎನ್ ೧ ವೈರಸ್ " ನ್ನು ಗುರುತಿಸಲಾಗಿದ್ದು, ಇದು ಇನ್ಫ್ಲುಯೆಂಜಾ ಎ ವೈರಸ್ ಗುಂಪಿಗೆ ಸೇರಿದ ವೈರಸ್ ಗಳ ನಾಲ್ಕು ತಳಿಗಳು ಪರಿವರ್ತನೆಗೊಂಡು ಉದ್ಭವಿಸಿರಬೇಕೆಂದು ಊಹಿಸಲಾಗಿದೆ.

ರೋಗ ಲಕ್ಷಣಗಳು

ತಲೆ,ಕೈಕಾಲುಗಳು, ಬೆನ್ನು ಮತ್ತು ಸೊಂಟಗಳಲ್ಲಿ ವಿಪರೀತ ನೋವು, ಶೀನು, ಕೆಮ್ಮು, ಗಂಟಲಿನ ಕೆರೆತ ಹಾಗೂ ನೋವು, ಕೆಲವರಲ್ಲಿ ಅಲ್ಪ ಪ್ರಮಾಣದ ಜ್ವರ  ಹಾಗೂ ಮತ್ತೆ  ಕೆಲವರಲ್ಲಿ ಚಳಿಜ್ವರದೊಂದಿಗೆ ನಡುಕ, ವಾಂತಿಭೇದಿ ಮತ್ತು ವ್ಯಾಧಿ ತೀವ್ರವಾಗಿ ಉಲ್ಬಣಿಸಿದಲ್ಲಿ ನ್ಯುಮೋನಿಯಾ ಅಥವಾ ಶ್ವಾಸಾಂಗಗಳಿಗೆ ಸಂಬಂಧಿಸಿದ ಸಮಸ್ಯೆಗಳು ಬಾಧಿಸುವ ಸಾಧ್ಯತೆಗಳಿವೆ. ಇದಲ್ಲದೇ ಕೆಲರೋಗಿಗಳಲ್ಲಿ ಶರೀರವನ್ನು ಹಿಂಡಿ ಹಿಪ್ಪೆಮಾಡುವಂತಹ ಕೆಮ್ಮು ತಲೆದೋರುವುದು ಅಪರೂಪವೇನಲ್ಲ.

ಪತ್ತೆಹಚ್ಚುವುದೆಂತು?

ಎಚ್ ೧ ಎನ್ ೧ ವೈರಸ್ ಗಳನ್ನೂ ನಿಖರವಾಗಿ ಪತ್ತೆಹಚ್ಚಬಲ್ಲ ಪರೀಕ್ಷಾ ವಿಧಾನಗಳು ಲಭ್ಯವಿದ್ದರೂ, ಇವುಗಳ ವೆಚ್ಚ ತುಸು ದುಬಾರಿಯಾಗಿದೆ. ಇದರ ಪರೀಕ್ಷಾ ಕಿಟ್ ಗಳನ್ನು ಭಾರತೀಯ ವಿಜ್ಞಾನಿಗಳು ಸಂಶೋಧಿಸಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿದೆ. ಒಬ್ಬ ರೋಗಿಯ ಪರೀಕ್ಷೆಗೆ ಇದೀಗ ರಾಜ್ಯ ಸರ್ಕಾರವು ೨೫೦೦ ರೂ. ನಿಗದಿಸಿದ್ದು, ಇದಕ್ಕೂ ಅಧಿಕ ಶುಲ್ಕವನ್ನು ವಿಧಿಸದಂತೆ ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಿಗೆ ಸೂಚನೆಯನ್ನು ನೀಡಿದೆ.

ಚಿಕಿತ್ಸೆ

ಹಂದಿಜ್ವರ ಪೀಡಿತ ರೋಗಿಗಳಲ್ಲಿ ಕಂಡುಬರುವ ಲಕ್ಷಣಗಳಿಗೆ ಅನುಗುಣವಾಗಿ ಅವಶ್ಯಕ ಔಷದಗಳನ್ನು ನೀಡಲಾಗುವುದಾದರೂ, ಈ ವ್ಯಾಧಿಯನ್ನು ನಿಯಂತ್ರಿಸಲು ತಾಮಿಫ್ಲೂ ಎನ್ನುವ ಔಷದವನ್ನು ನೀಡಲೇಬೇಕಾಗುವುದು. ಇದನ್ನು ವಿದೇಶದಿಂದ ಆಮದು ಮಾಡಬೇಕಾಗಿತ್ತಾದರೂ, ೨೦೧೦ ರಲ್ಲೇ ಇದರ ಜೆನೆರಿಕ್ ರೂಪದ ಔಷದವು ನಮ್ಮ ದೇಶದ ಔಷದ ತಯಾರಿಕಾ ಸಂಸ್ಥೆಗಳು ಸಿದ್ಧಪಡಿಸಿದ್ದವು.ಈ ಔಷದದೊಂದಿಗೆ ರೋಗಿಗೆ ಸಂಪೂರ್ಣ ವಿಶ್ರಾಂತಿ ಮತ್ತು ಸಮೃದ್ಧ ಪೋಷಕಾಂಶಗಳಿರುವ ಆಹಾರವನ್ನು ನೀಡಬೇಕಾಗುವುದು. ಅಲ್ಪಪ್ರಮಾಣದ ರೋಗಿಗಳಲ್ಲಿ ಗಂಭೀರ ಸಮಸ್ಯೆಗಳು ಕಂಡುಬಂದಲ್ಲಿ, ಸಂದರ್ಭೋಚಿತವಾಗಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಹಂದಿಜ್ವರಕ್ಕೆ ಬಲಿಯಾಗುವವರಲ್ಲಿ ವಯೋವೃದ್ಧರು, ದೀರ್ಘಕಾಲೀನ ವ್ಯಾಧಿಗಳಿಂದ ಬಳಲುತ್ತಿದ್ದವರು, ಪ್ರಮುಖ ಅಂಗಾಂಗಗಳಿಗೆ ಸಂಬಂಧಿಸಿದ ವ್ಯಾಧಿಪೀಡಿತರು, ರೋಗನಿರೋಧಕ ಶಕ್ತಿಯ ಕೊರತೆಗೆ ಸಂಬಂಧಿಸಿದ ಆರೋಗ್ಯದ ಸಮಸ್ಯೆಗಳಿಂದ ಪೀಡಿತರು ಮತ್ತು ಮಕ್ಕಳ ಸಂಖ್ಯೆ ಗಣನೀಯವಾಗಿದೆ. ಆದರೆ ಈ ಬಾರಿ ಇದಕ್ಕೆ ಬಲಿಯಾದವರ ಪ್ರಮಾಣವು ತುಸು ಹೆಚ್ಚಾಗಿದೆ.

ತಡೆಗಟ್ಟುವುದೆಂತು?

ಶಂಕಿತ ಹಂದಿಜ್ವರ ಪೀಡಿತರನ್ನು ಪ್ರತ್ಯೇಕವಾಗಿ ಇರಿಸಿ ಅವಶ್ಯಕ ಪರೀಕ್ಷೆಯನ್ನು ನಡೆಸಿ, ಸಂದೇಹ ಧೃಢ ಪಟ್ಟಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡವುದು ಅತ್ಯವಶ್ಯಕವೆನಿಸುವುದು.ಸಾರ್ವಜನಿಕ ಸ್ಥಳಗಳಲ್ಲಿ, ಸಭೆ ಸಮಾರಂಭಗಳಲ್ಲಿ, ಜನಜಂಗುಳಿ ಸೇರುವಲ್ಲಿ ನಿಗದಿತ ಗುಣಮಟ್ಟದ “ ಮಾಸ್ಕ್ “ ಗಳನ್ನು ಧರಿಸುವುದು, ಯಾರನ್ನೇ ಭೇಟಿಯಾದಾಗ ಅಥವಾ ಬೀಳ್ಕೊಡುವಾಗ ಹಸ್ತಲಾಘವ ನೀಡದಿರುವುದು, ತಮ್ಮ ಕಣ್ಣು, ಮೂಗು ಮತ್ತು ಬಾಯಿಗಳನ್ನು ಪದೇ ಪದೇ ಸ್ಪರ್ಶಿಸದಿರುವುದು, ಮತ್ತೊಬ್ಬರು ಬಳಸಿರುವ ವಸ್ತುಗಳನ್ನು ಕೈಯ್ಯಿಂದ ಮುಟ್ಟದಿರುವುದು, ಫ್ಲೂ ಜ್ವರದ ಲಕ್ಷಣಗಳಿರುವ ವ್ಯಕ್ತಿಗಳಿಂದ ದೂರವಿರುವುದು, ಕೆಮ್ಮುವಾಗ ಹಾಗೂ ಶೀನುವಾಗ ಕರವಸ್ತ್ರದಿಂದ ಬಾಯಿ – ಮೂಗುಗಳನ್ನು ಮುಚ್ಚಿಕೊಳ್ಳುವುದು,ಆಗಾಗ ತಮ್ಮ ಕೈಗಳನ್ನು ಸೋಪು ಹಚ್ಚಿ ತೊಳೆಯುವುದು ಹಾಗೂ ಮತ್ತೊಬ್ಬರು ಬಳಸಿದ ಕರವಸ್ತ್ರ ಮತ್ತಿತರ ವಸ್ತುಗಳನ್ನು ಬಳಸದಿರುವುದೇ ಮುಂತಾದ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕ ಈ ವ್ಯಾಧಿಯನ್ನು ತಕ್ಕ ಮಟ್ಟಿಗೆ ತಡೆಗಟ್ಟಬಹುದು.

ಲಸಿಕೆಗಳು ಲಭ್ಯವಿದೆಯೇ?

೨೦೧೦ ರಲ್ಲಿ ನಮ್ಮ ದೇಶದ ಕೆಲ ಭಾಗಗಳಲ್ಲಿ ಹಂದಿಜ್ವರ ಪ್ರತ್ಯಕ್ಷವಾದಾಗ, ಶಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಉಪಚರಿಸುವ ಅರೆವೈದ್ಯಕೀಯ ಸಿಬಂದಿಗಳಿಗೆ ಲಸಿಕೆಯೊಂದನ್ನು ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಸೂಚಿಸಲಾಗಿತ್ತು. ಆದರೆ ಈ ಲಸಿಕೆಯು ಇದೀಗ ಪರಿವರ್ತನೆಗೊಂಡಿರುವ ವೈರಸ್ ಗಳ ವಿರುದ್ಧ ಅಪೇಕ್ಷಿತ ರಕ್ಷಣೆಯನ್ನು ನೀಡುವ ಸಾಧ್ಯತೆಗಳಿಲ್ಲ. ಇದೀಗ ಪರಿವರ್ತನೆಗೊಂಡು ಪ್ರಬಲವಾಗಿರುವ ತಳಿಗಳ ವಿರುದ್ಧ ರಕ್ಷಣೆಯನ್ನು ನೀಡಬಲ್ಲ ಲಸಿಕೆಗಳನ್ನು, ವೈದ್ಯಕೀಯ ವಿಜ್ಞಾನಿಗಳು ಇನ್ನಷ್ಟೇ ಸಂಶೋಧಿಸಬೇಕಿದೆ.

ಅದೇನೇ ಇರಲಿ, ಪ್ರಸ್ತುತ ಫ್ಲೂ ಜ್ವರದ ಲಕ್ಷಣಗಳನ್ನು ಹೋಲುವ ಆರೋಗ್ಯದ ಸಮಸ್ಯೆಗಳು ನಿಮ್ಮನ್ನು ಪೀಡಿಸಲು ಆರಂಭಿಸಿದಲ್ಲಿ, ನಿಮ್ಮ ನಂಬಿಗಸ್ತ ವೈದ್ಯರನ್ನು ಸಂದರ್ಶಿಸಿ ಅವರ ಸಲಹೆಯನ್ನು ಪಡೆಯಿರಿ. ಅವರು ಸೂಚಿಸಿದಲ್ಲಿ ಮಾತ್ರ ಎಚ್ ೧ ಎನ್ ೧ ವೈರಸ್ ಗಳ ಇರುವಿಕೆಯನ್ನು ಪತ್ತೆಹಚ್ಚಬಲ್ಲ ಪರೀಕ್ಷೆಯನ್ನು ಮಾಡಿಸಿಕೊಳ್ಳಿ. ಅನಪೇಕ್ಷಿತ ಹಾಗೂ ಪುಕ್ಕಟೆ ಸಲಹೆಗಳನ್ನು ನೀಡುವ ಬಂಧುಮಿತ್ರರ ಮಾತುಗಳಿಗೆ ಮರುಳಾಗದಿರಿ !.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು



Saturday, February 21, 2015

ROAD SAFETY - TODAYS NECESSITY




      ರಸ್ತೆ ಸುರಕ್ಷತೆ : ಇಂದಿನ ಅವಶ್ಯಕತೆ


    ನಿರಂತರವಾಗಿ ಹೆಚ್ಚುತ್ತಿರುವ ಭಾರತದ ಜನಸಂಖ್ಯೆಗೆ ಅನುಗುಣವಾಗಿ, ಭಾರತೀಯರು ಖರೀದಿಸಿ ಬಳಸುತ್ತಿರುವ ವಾಹನಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ.ಇದರೊಂದಿಗೆ ನಮ್ಮ ದೇಶದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳುಮತ್ತು ಇವುಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಸ್ವಾಭಾವಿಕವಾಗಿಯೇ ಹೆಚ್ಚುತ್ತಿದೆ.

ಈ ಜಗತ್ತಿನಲ್ಲೇ ಅತ್ಯಧಿಕ ಜನರನ್ನು ಬಲಿಪಡೆಯುತ್ತಿರುವ ರಸ್ತೆ ಅಪಘಾತಗಳಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಹಾಗೂ ಇದೇ ಕಾರಣದಿಂದಾಗಿ “ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿರುವವರ ರಾಜಧಾನಿ “ ಎಂದೇ ಕುಖ್ಯಾತವಾಗಿದೆ. ೨೦೦೭ ರ ತನಕ ಈ ಸ್ಥಾನದಲ್ಲಿದ್ದ ಚೀನಾ ದೇಶವನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಗಳಿಸಿದ್ದ ಭಾರತವು, ಇಂದಿನ ತನಕ ಈ ಸ್ಥಾನವನ್ನು ತೆರವುಗೊಳಿಸಿಲ್ಲ !. 

ಕಳೆದ ೧೦ ವರ್ಷಗಳಲ್ಲಿ ೧೦ ಲಕ್ಷಕ್ಕೂ ಅಧಿಕ ಭಾರತೀಯರು ರಸ್ತೆ ಅಪಘಾತಗಳಿಂದ ಮೃತಪಟ್ಟಿದ್ದಾರೆ. ವಿಶೇಷವೆಂದರೆ ಇದು ಜಾಗತಿಕ ಮಟ್ಟದಲ್ಲಿ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿರುವ ಜನರ ಶೇ. ೧೦ ರಷ್ಟಾಗಿದೆ !.

ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ, ಕಳೆದ ೨೭ ವರ್ಷಗಳಿಂದ ಭಾರತದ ಪ್ರತಿಯೊಂದು ರಾಜ್ಯಗಳಲ್ಲೂ ರಸ್ತೆ ಸುರಕ್ಷತಾ ಸಪ್ತಾಹವನ್ನು ವರ್ಷಂಪ್ರತಿ ಜನವರಿ ತಿಂಗಳಿನಲ್ಲಿ ಆಚರಿಸಲಾಗುತ್ತಿದೆ. ಆದರೆ ಕೇವಲ ಕಾಟಾಚಾರಕ್ಕಾಗಿ ಹಮ್ಮಿಕೊಳ್ಳುವ ಈ ಕಾರ್ಯಕ್ರಮವು, ನಿಗದಿತ ಉದ್ದೇಶವನ್ನು ಈಡೇರಿಸಲು ವಿಫಲವಾಗಿದೆ.

ಅಂಕಿ ಅಂಶಗಳು 

೨೦೧೩ ರಲ್ಲಿ ದೇಶಾದ್ಯಂತ ೪,೪೩,೦೦೧ ರಸ್ತೆ ಅಪಘಾತಗಳು ಸಂಭವಿಸಿದ್ದು, ೧,೩೭,೪೨೩ ಜನರು ಬಲಿಯಾಗಿದ್ದರು. ಜೊತೆಗೆ ೪,೬೯,೮೮೨ ಜನರು ಗಾಯಗೊಂಡಿದ್ದರು. ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿರುವವರಲ್ಲಿ ಶೇ. ೫೦ ರಷ್ಟು ಜನರು ಪಾದಚಾರಿಗಳು, ಸೈಕಲ್ ಸವಾರರು ಮತ್ತು ದ್ವಿಚಕ್ರ ವಾಹನ ಸವಾರರಾಗಿರುವುದಲ್ಲದೇ, ೧೫ ರಿಂದ ೨೯ ವರ್ಷ ವಯಸ್ಸಿನವರೇ ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ರಸ್ತೆ ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಂಡ ಶೇ. ೫೦ ರಷ್ಟು ಜನರು ಸೂಕ್ತ ಸಮಯದಲ್ಲಿ ತುರ್ತು ಚಿಕಿತ್ಸೆ ಲಭಿಸದ ಕಾರಣದಿಂದಾಗಿಯೇ ಮೃತಪಡುತ್ತಾರೆ. ಏಕೆಂದರೆ ಸ್ಥಳದಲ್ಲಿ ಹಾಜರಿರುವ ಶೇ.೭೪ ಜನರು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಕೊಂಡೊಯ್ದು ದಾಖಲಿಸಲು ಹಿಂಜರಿಯುತ್ತಾರೆ !.

ನಮ್ಮ ದೇಶದಲ್ಲಿ ಪ್ರತಿ ೪ ನಿಮಿಷಗಳಿಗೆ ಒಬ್ಬ ವ್ಯಕ್ತಿ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದು, ವರ್ಷಂಪ್ರತಿ ಈ ಸಂಖ್ಯೆಯಲ್ಲಿ ಶೇ.೮ ರಷ್ಟು ಹೆಚ್ಚಳವಾಗುತ್ತಿದೆ. ಈ ಪ್ರಮಾಣವು  ಇದೇ ರೀತಿಯಲ್ಲಿ  ಮುಂದುವರೆದಲ್ಲಿ, ೨೦೩೦ ರಲ್ಲಿ ಈ ಸಂಖ್ಯೆಯು ೨.೬೦ ಲಕ್ಷವನ್ನು ತಲುಪಲಿದೆ.

ಕಾರಣಗಳೇನು ?

ಉತ್ತಮ ರಸ್ತೆಗಳ ಹಾಗೂ  ಸುರಕ್ಷಿತ ಕಾಲುದಾರಿಗಳ ಅಭಾವ, ಸಂಚಾರಿ ಪೋಲೀಸರ ಅನುಪಸ್ಥಿತಿ ಅಥವಾ ನಿಷ್ಕ್ರಿಯತೆ, ಸುಗಮ ಸಂಚಾರಕ್ಕಾಗಿ ರೂಪಿಸಿರುವ ಕಾನೂನುಗಳನ್ನು ಅನುಷ್ಠಾನಗೊಳಿಸದಿರುವುದು – ಅನುಸರಿಸದಿರುವುದು, ಕಾನೂನುಗಳನ್ನು ಉಲ್ಲಂಘಿಸಿದವರ ವಿರುದ್ಧ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು  ಕೈಗೊಳ್ಳದಿರುವುದು, ಸಾರಿಗೆ ಮತ್ತು  ಪೋಲೀಸ್ ಇಲಾಖೆಗಳಲ್ಲಿನ ಅನಿಯಂತ್ರಿತ ಭ್ರಷ್ಟಾಚಾರವೇ ಮುಂತಾದ ಕಾರಣಗಳಿಂದಾಗಿ ನಮ್ಮ ದೇಶದಲ್ಲಿ ರಸ್ತೆ ಅಪಘಾತಗಳು ಮತ್ತು ಇವುಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆಗಳು ದಿನೇದಿನೇ ಹೆಚ್ಚುತ್ತಿವೆ.

ಇದಲ್ಲದೇ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ರಸ್ತೆಗಳ ದುಸ್ಥಿತಿ, ಮೋಟಾರು ವಾಹನಗಳ ಮತ್ತು ಸಾರಿಗೆ ನಿಯಮಗಳ ಉಲ್ಲಂಘನೆ, ಹೆಲ್ಮೆಟ್ – ಸೀಟ್ ಬೆಲ್ಟ್ ಧರಿಸದಿರುವುದು, ಮದ್ಯ – ಅಮಲು ಪದಾರ್ಥ ಸೇವಿಸಿ ವಾಹನ ಚಲಾಯಿಸುವುದು, ಅತಿವೇಗ – ನಿರ್ಲಕ್ಷ್ಯದ ಚಾಲನೆ, ವಾಹನಗಳ ನಡುವೆ ಪೈಪೋಟಿ, ಬೀದಿಬದಿ ವ್ಯಾಪಾರಿಗಳ ಕಾಟ, ರಸ್ತೆ – ರಸ್ತೆಬದಿಗಳ ಅಗೆತ, ಅವೈಜ್ಞಾನಿಕ ರಸ್ತೆ ಉಬ್ಬುಗಳು, ಬೀದಿನಾಯಿ – ಜಾನುವಾರುಗಳ ಕಾಟ, ಅನಿರೀಕ್ಷಿತವಾಗಿ ರಸ್ತೆಯನ್ನು ದಾಟುವ ಪಾದಚಾರಿಗಳು, ಪ್ರಖರವಾದ – ಕಣ್ಣುಕುಕ್ಕುವ ಹೆಡ್ ಲೈಟ್ ,ವಾಹನ ಚಾಲನಾ ನೈಪುಣ್ಯವಿಲ್ಲದವರು – ಅಪ್ರಾಪ್ತರು ಹಾಗೂ ಪರವಾನಿಗೆ ಇಲ್ಲದವರು ಅತಿವೇಗದಲ್ಲಿ ಹಾಗೂ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುವುದು, ಅತಿಯಾದ ವೇಗದಲ್ಲಿ ಚಲಿಸಬಲ್ಲ ಆಧುನಿಕ ವಾಹನಗಳೇ ಮುಂತಾದ ಕಾರಣಗಳಿಂದಾಗಿ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಈ ಸಮಸ್ಯೆಯನ್ನು ನಿಯಂತ್ರಿಸಬಲ್ಲ ಕಾನೂನುಗಳನ್ನು ರೂಪಿಸಿದ್ದರೂ, ಇವುಗಳನ್ನು ರಾಜಾರೋಷವಾಗಿ ಉಲ್ಲಂಘಿಸಲಾಗುತ್ತಿದೆ.

ಬಲಿಯಾಗುತ್ತಿರುವ ಮಕ್ಕಳು  

ವಿಶ್ವಾದ್ಯಂತ ಎಳೆಯ ವಯಸ್ಸಿನ ಮಕ್ಕಳ ಅಕಾಲಿಕ ಮರಣಕ್ಕೆ ರಸ್ತೆ ಅಪಘಾತಗಳೇ ಪ್ರಮುಖ ಕಾರಣವೆನಿಸಿದೆ. ಪ್ರತಿನಿತ್ಯ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಸುಮಾರು ೯೦೦ ಮಕ್ಕಳು ರಸ್ತೆ ಅಪಘಾತಗಳಿಂದ ಮೃತಪಡುತ್ತಿದ್ದಾರೆ. ಇದಲ್ಲದೆ ಸುಮಾರು ೧೦ ಲಕ್ಷ ಮಕ್ಕಳು ಗಂಭೀರ ಗಾಯಗಳಿಗೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುತ್ತಿದ್ದಾರೆ.
ಜಾಗತಿಕ ಮಟ್ಟದಲ್ಲಿ ೨೦೧೦ ರಲ್ಲಿ ಅಪ್ರಾಪ್ತ ಮಕ್ಕಳ ಮರಣಕ್ಕೆ ಮೂಲವೆನಿಸುತ್ತಿದ್ದ ಕಾರಣಗಳಲ್ಲಿ ರಸ್ತೆ ಅಪಘಾತವು ೧೧ ನೆಯ ಸ್ಥಾನದಲ್ಲಿತ್ತು. ಆದರೆ ಮುಂದಿನ ೨೦ ವರ್ಷಗಳಲ್ಲಿ, ಅರ್ಥಾತ್ ೨೦೩೦ ರಲ್ಲಿ ಇದು ೫ ನೆಯ ಸ್ಥಾನಕ್ಕೆ ಏರಲಿದೆ ಎಂದು ಅಂದಾಜಿಸಲಾಗಿದೆ. ೨೦೨೦ ರಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳಿಗೆ ಬಲಿಯಾಗಲಿರುವ ಮಕ್ಕಳ ಪ್ರಮಾಣವು ಶೇ. ೧೪೯ ರಷ್ಟು ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ. ನಮ್ಮ ದೇಶದ ಜನಸಂಖ್ಯೆ ಅನಿಯಂತ್ರಿತವಾಗಿ ವೃದ್ಧಿಸುತ್ತಿರುವುದೇ ಇದಕ್ಕೆ ಕಾರಣವೆನಿಸಲಿದೆ.

ಪರಿಹಾರವೇನು ?
ವಾಹನ ಚಾಲನಾ ಪರವಾನಿಗೆಯನ್ನು ನೀಡುವ ಮುನ್ನ ಚಾಲಕರ ನೈಪುಣ್ಯವನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು,ಸಾರಿಗೆ - ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸುವುದು, ನಿಯಮಗಳು - ಕಾನೂನುಗಳನ್ನು ಉಲ್ಲಂಘಿಸಿದ ಚಾಲಕರಿಗೆ ದೊಡ್ಡ ಮೊತ್ತದ ದಂಡವನ್ನು ವಿಧಿಸುವುದು, ಮತ್ತೆ ಇದೇ ತಪ್ಪಿನ ಪುನರಾವರ್ತನೆ ಮಾಡಿದಲ್ಲಿ, ಇನ್ನಷ್ಟು ದಂಡದೊಂದಿಗೆ ನಿಗದಿತ ಅವಧಿಗೆ  ಚಾಲನಾ ಪರವಾನಿಗೆಯನ್ನು ಅಮಾನತು ಮಾಡುವುದು, ಪ್ರತಿಯೊಂದು ನಗರ - ಪಟ್ಟಣಗಳಲ್ಲಿ ಸಂಚಾರ ವಿಭಾಗದ ಪೊಲೀಸರು ನಿಯಮಿತವಾಗಿ ವಾಹನಗಳ - ಚಾಲಕರ ದಾಖಲೆಗಳನ್ನು ಪರಿಶೀಲಿಸುವುದು,ಗಂಭೀರ – ಮಾರಕ  ಅಪಘಾತ ಎಸಗಿದ ಚಾಲಕರ ಪರವಾನಿಗೆಯನ್ನು ರದ್ದುಪಡಿಸುವುದೇ ಮುಂತಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಸ್ತೆ ಅಪಘಾತಗಳನ್ನು ನಿಯಂತ್ರಿಸಬಹುದಾಗಿದೆ.

ಇದರೊಂದಿಗೆ ಉತ್ತಮ ಗುಣಮಟ್ಟದ ರಸ್ತೆಗಳು, ಸುರಕ್ಷಿತವಾದ ಕಾಲುದಾರಿಗಳು, ಸಂಚಾರಿ ಪೋಲೀಸರ ಕಣ್ಗಾವಲು, ಅವಶ್ಯಕತೆಯಿರುವಲ್ಲಿ ಸಂಚಾರ ಸೂಚನಾ ಫಲಕಗಳ ಅಳವಡಿಕೆ, ಪಾದಚಾರಿಗಳು ರಸ್ತೆಯನ್ನು ದಾಟುವಲ್ಲಿ ಜೀಬ್ರಾ ಕ್ರಾಸಿಂಗ್ ಗುರುತಿನ ಅಳವಡಿಕೆ ಇತ್ಯಾದಿ ವ್ಯವಸ್ಥೆಗಳನ್ನು ಕಲ್ಪಿಸುವ ಮೂಲಕ ಮತ್ತಷ್ಟು ಅಪಘಾತಗಳನ್ನು ತಡೆಗಟ್ಟಬಹುದಾಗಿದೆ. ಅಂತಿಮವಾಗಿ ರಸ್ತೆಗಳನ್ನು ಬಳಸುವ ಪ್ರತಿಯೊಬ್ಬರೂ ಸಾರಿಗೆ - ಸಂಚಾರ ನಿಯಮಗಳನ್ನು ಪರಿಪಾಲಿಸಿದಲ್ಲಿ, ರಸ್ತೆ ಅಪಘಾತಗಳ ಮತ್ತು ಇವುಗಳಿಗೆ ಬಲಿಯಾಗುವರ ಸಂಖ್ಯೆಯನ್ನು ನಿಯಂತ್ರಿಸುವುದು ಅಸಾಧ್ಯವೇನಲ್ಲ.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು